Home / ವಾರ್ತೆಗಳು / ಮಸಾಲೆ ಬೆರೆಸಿದ ಸ್ಟೋರಿ ಅಲ್ಲ, ಕಟ್ಟು ಕಥೆಯೂ ಅಲ್ಲ; ಇದು ನೈಜ ಕೇರಳ ಸ್ಟೋರಿ

ಮಸಾಲೆ ಬೆರೆಸಿದ ಸ್ಟೋರಿ ಅಲ್ಲ, ಕಟ್ಟು ಕಥೆಯೂ ಅಲ್ಲ; ಇದು ನೈಜ ಕೇರಳ ಸ್ಟೋರಿ

ಕೇರಳದಲ್ಲಿ ಅದೊಂದು ಪ್ರಖ್ಯಾತ ಮನೆತನವಿದೆ. ಕೇರಳ ಬಿಡಿ, ರಾಷ್ಟ್ರ ರಾಜಕಾರಣಿಗಳೂ ಸಹ ಗೌರವ ಕೊಡುವ ಮನೆತನವದು. ಪ್ರಮುಖವಾಗಿ ಕೇರಳದಲ್ಲಿ ಜನರು ವಿಪರೀತ ಸಂಕಷ್ಟಕ್ಕೊಳಗಾದಾಗ ತಮ್ಮ ಜಾತಿ ಧರ್ಮವನ್ನು ಬದಿಗಿಟ್ಟು ಸಹಾಯ ಕೇಳಿಕೊಂಡು ಕದ ತಟ್ಟುವ ಮನೆತನವದು.

ಅದುವೇ ಪಾಣಕ್ಕಾಡ್ ತಂಗಳ್ ಮನೆತನ. ಕೇರಳ ಮುಸ್ಲಿಮ್ ಲೀಗ್ ಪಕ್ಷದ ಪ್ರಮುಖ ನೇತಾರರ ಮನೆತನವೂ ಹೌದು.

ಕಳೆದ ಜನವರಿ ತಿಂಗಳಿನಲ್ಲಿ ಕತಾರ್ ನಲ್ಲಿ ಕೇರಳದ ದಿವೇಶ ಲಾಲ್ ಎಂಬ ಯುವಕ ದೀರ್ಘ ಜೈಲು ಶಿಕ್ಷೆಗೆ ಒಳಗಾಗಿ ಆತನನ್ನು ನಂಬಿದ್ದ ಆತನ ಕುಟುಂಬ ದಿಕ್ಕಿಲ್ಲದಂತಾಗುತ್ತದೆ. ಆತನ ಕುಟುಂಬ ಕಣ್ಣೀರಲ್ಲಿ ಮುಳುಗಿ ಸಿಕ್ಕ ಸಿಕ್ಕವರಲ್ಲಿ ದಿವೇಶ ಲಾಲ್ ಬಿಡುಗಡೆಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತದೆ.

ಮಲಪ್ಪುರಮ್ ಜಿಲ್ಲೆಯ ಪೆರಂದಲ್ ಮಣ್ಣ ಎಂಬಲ್ಲಿನ ಬಡವ ಯುವಕನಾದ 28 ವರ್ಷ ಪ್ರಾಯದ ದಿವೇಶ್ ಲಾಲ್ ಊರಿನಲ್ಲಿ ತನ್ನ ಮನೆ ಕಟ್ಟಲು ಪಡೆದ ಸಾಲ ರೂ 10 ಲಕ್ಷವನ್ನು ಪಾವತಿಸಲು ಸಾಧ್ಯವಾಗದೆ ಯಾರದೋ ನೆರವಿನಿಂದ ದೂರದ ಕತಾರ್ ದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದರು.

ಅಲ್ಲಿ ನೀರಿನ ಟ್ಯಾಂಕರೊಂದರಲ್ಲಿ ಡ್ರೈವರ್ ಆಗಿ ಸೇರಿ ಕೊಳ್ಳುತ್ತಾರೆ. ಅದೊಂದು ದಿನ ಆತ ಟ್ಯಾಂಕರನ್ನು ಅಂಗಡಿಯೊಂದರ ಮುಂದೆ ಪಾರ್ಕ್ ಮಾಡಿದ್ದಾರೆ. ಟ್ಯಾoಕರ್ ತನ್ನಷ್ಟಕ್ಕೆ ಹಿಮ್ಮುಖವಾಗಿ ಚಲಿಸಿ ಈಜಿಪ್ಟ್ ದೇಶದ ಹಿರಿಯ ನಾಗರಿಕರೊಬ್ಬರಿಗೆ ಗುದ್ದಿ ತದನಂತರ ಅವರು ಅಸುನೀಗಿದರು.

ದಿವೇಶ್ ಲಾಲ್ ಬಂದನವಾಗಿ ಕೋರ್ಟ್ ನಲ್ಲಿ ದೀರ್ಘ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಸುದ್ದಿ ತಿಳಿದ ಕುಟುಂಬ ಕಣ್ಣೀರಲ್ಲಿ ಮುಳುಗುತ್ತದೆ. ಮೊದಲೇ ಕಿತ್ತು ತಿನ್ನುವ ಬಡತನ ಬೇರೆ. ಇದ್ದ ಒಂದೇ ಆಶ್ರಯ ಅದು ದಿವೇಶ್ ಲಾಲ್.

ಕೊನೆಗೆ ದಿವೇಶ್ ಲಾಲ್ ಕುಟುಂಬ ಅಸಹಾಯಕರ ಪ್ರಖ್ಯಾತ ಆಶ್ರಯ ತಾಣ “ಪಾಣಕ್ಕಾಡ್ ತಂಙಳ್” ಮನೆಯ ಕದ ತಟ್ಟುತ್ತದೆ. ಈಗ ಆ ಮನೆಯ ಸಯ್ಯದ್ ಮುನವ್ವರಲಿ ಶಿಹಾಬ್ ತಂಙಳ್ ಅವರನ್ನು ಬರಮಾಡಿಕೊಂಡು ವಿಷಯ ಕೇಳುತ್ತಾರೆ. ಆ ಕುಟುಂಬದ ಸ್ಥಿತಿ ನೋಡಿ ನೊಂದುಕೊಂಡು ತಕ್ಷಣವೇ ತನ್ನ ಮುಸ್ಲಿಮ್ ಲೀಗ್ ಪಕ್ಷದ ಮೂಲಕ ಸಹಾಯಕ್ಕಾಗಿ ಅಪೇಕ್ಷಿಸುತ್ತಾರೆ.

ಕತಾರ್ ನಲ್ಲಿ 72 ದಿನಗಳಿಂದ ಜೈಲಿನಲ್ಲಿ ಕಳೆಯುತ್ತಿರುವ ದಿವೇಶ್ ಲಾಲ್ ಗೆ ಅಲ್ಲಿನ ರಮಳಾನ್ ತಿಂಗಳಲ್ಲಿ ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಗುವ ವಾಡಿಕೆಯಲ್ಲಿ ರಿಲೀಫ್ ಸುದ್ದಿಯೊಂದು ಸಿಗತ್ತದೆ. ಮೃತ ಈಜಿಪ್ಟ್ ವ್ಯಕ್ತಿಯ ಮನೆಯವರಿಗೆ ರಕ್ತ ಹಣ ನೀಡಿದರೆ ಜೈಲಿನಿಂದ ಬಿಡುಗಡೆಗೊಳ್ಳಬಹುದು ಎಂದು.

ಕೋರ್ಟ್ ರೂ 46 ಲಕ್ಷ ಇಂಡಿಯನ್ ರುಪೀಸನ್ನು ಮೃತನ ಕುಟುಂಬಕ್ಕೆ ಪಾವತಿಸಿ ಬಿಡುಗಡೆಗೊಳ್ಳಬಹುದೆಂದು ಸೂಚಿಸುತ್ತದೆ.

ಆದರೆ ಒಂದು ರೂಪಾಯಿಗೂ ಗತಿಯಿಲ್ಲದ ದಿವೇಶ್ ಲಾಲ್ ಕುಟುಂಬ ಈ ಊಹಿಸಲೂ ಸಾಧ್ಯವೇ ಇಲ್ಲದ ಮೊತ್ತವನ್ನು ಹೊಂದಿಸುವುದು ಎಲ್ಲಿಂದ. ಕುಟುಂಬ ಜನರಲ್ಲಿ ಅಂಗಲಾಚತೊಡಗಿತು. ಯಾರಿಂದಲೂ ನೆರವು ಸಿಗದಾದಾಗ ಕೊನೆಗೆ ಪಾಣಕ್ಕಾಡ್ ತಂಙಳ್ ಮನೆಗೆ ಭರವಸೆಯ ಹೆಜ್ಜೆಯೊಂದಿಗೆ ತೆರಳಿ ಕದ ತಟ್ಟಿದ್ದರು.

ಕೇರಳ ಮುಸ್ಲಿಮ್ ಲೀಗ್ ನೇತಾರರಾದರೂ , ಹಿಂದೆ ಮುಸ್ಲಿಮರು ಸೇರಿದಂತೆ ಹಿಂದೂ ಸಹೋದರರ ಅದೆಷ್ಟೋ ಕಠಿಣ ವ್ಯಾಜ್ಯಗಳನ್ನು ಕ್ಷಿಪ್ರವಾಗಿ ಪರಿಹರಿಸಿಕೊಟ್ಟ, ಅದೆಷ್ಟೋ ನಿಸ್ಸಹಾಯಕರಿಗೆ, ಆಶಕ್ತರಿಗೆ ನಂಬಲಸಾಧ್ಯ ನೆರವು ನೀಡಿದ್ದ ತಂಙಳ್ ಮನೆ ದಿವೇಶ ಲಾಲ್ ಕುಟುಂಬಕ್ಕೆ ನೆರವಾಗಲು ಕರೆ ಕೊಟ್ಟ ತಕ್ಷಣ ಮುಸ್ಲಿಮ್ ಲೀಗ್ ಜೊತೆ ನಂಟಿರುವ ಅರಬ್ ದೇಶದ ಮಲಯಾಳಿ ಉದ್ಯಮಿಯೊಬ್ಬರು ರೂ 16 ಲಕ್ಷ ಕಳುಹಿಸಿ ಕೊಟ್ಟರು.

ಮುಸ್ಲಿಮ್ ಲೀಗ್ ಜೊತೆ ಕಾರ್ಯ ನಿರ್ವಹಿಸುವ ಗಲ್ಫ್ ನಲ್ಲಿ ಸಕ್ರಿಯವಾಗಿರುವ ಕೇರಳ ಮುಸ್ಲಿಮ್ ಕಲ್ಚರಲ್ ಸೆಂಟರ್ ರೂ 4 ಲಕ್ಷ ಕಳುಹಿಸಿಕೊಟ್ಟಿತು. ಮಲಪ್ಪುರಮ್ ನಿವಾಸಿ ಪ್ರಸ್ತುತ ಕತಾರ್ ನಲ್ಲಿ ಉದ್ಯಮಿ ಆಗಿರುವ ವ್ಯಕ್ತಿಯೊಬ್ಬ ರೂ 6 ಲಕ್ಷ ನೀಡಿದರು. ಉಳಿದ 20 ಲಕ್ಷ ರೂಪಾಯಿ ಮೊತ್ತವನ್ನು ಕೇರಳ ಲೀಗ್ ಕಾರ್ಯಕರ್ತರು ದೇಣಿಗೆ ನೀಡಲಾಗಿ ಒಟ್ಟು 46 ಲಕ್ಷವನ್ನು ಸಂಗ್ರಹಿಸಿ ಕಳುಹಿಸಿ ಕೊಟ್ಟು ಅವರನ್ನು ಬಿಡುಗಡೆ ಮಾಡಲಾಯಿತು.

ಸಂತೋಷಕ್ಕೆ ಪಾರವೇ ಇಲ್ಲದ ಆ ದಿವೇಶ್ ಕುಟುಂಬ ವಿಮಾನ ನಿಲ್ದಾಣದಿಂದ ಮನೆಗೆ ತೆರಳದೆ ಸೀದಾ ಪಾಣಕ್ಕಾಡ್ ಮನೆಗೆ ಬಂದು ತಂಙಳ್ ರನ್ನು ಭೇಟಿಯಾಗಿ ಕೃತಜ್ಞತೆಯನ್ನು ಅರ್ಪಿಸಿದೆ.

Zak Punacha Facebook Wall ನಿಂದ 

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …