Home / ಲೇಖನಗಳು / ಬಹುದೇವಾರಾಧಕರನ್ನು ಕೊಲ್ಲಿರಿ ಎಂಬ ವಚನ, ವಿವಾದ ಮತ್ತು ವಾಸ್ತವ

ಬಹುದೇವಾರಾಧಕರನ್ನು ಕೊಲ್ಲಿರಿ ಎಂಬ ವಚನ, ವಿವಾದ ಮತ್ತು ವಾಸ್ತವ

@ ಸಬೀಹಾ ಫಾತಿಮಾ

ನಿಮಗೆ ನೆನಪಿರಬಹುದು, 2018ರಲ್ಲಿ ಸೈಯದ್ ವಸೀಮ್ ರಿಝ್ವಿ ಎಂಬ ವ್ಯಕ್ತಿ (ಆ ಬಳಿಕ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಎಂದು ತನ್ನ ಹೆಸರನ್ನು ಬದಲಿಸಿಕೊಂಡರು) ಸುಪ್ರೀಂ ಕೋರ್ಟಿನಲ್ಲಿ ಒಂದು ಅರ್ಜಿಯನ್ನು ಸಲ್ಲಿಸಿ ಕುರ್‌ಆನಿನಲ್ಲಿರುವ 26 ನಿರ್ದಿಷ್ಟ ವಾಕ್ಯಗಳನ್ನು ಕಿತ್ತು ಹಾಕಬೇಕೆಂದು ಮನವಿ ಮಾಡಿ ಕೊಂಡರು. ಜಸ್ಟೀಸ್ ನಾರಿಮನ್ ನೇತೃತ್ವದ ಪೀಠವು ಆತನ ಅರ್ಜಿಯನ್ನು ತಿರಸ್ಕರಿಸಿದ್ದು ಮಾತ್ರವಲ್ಲ ಅದನ್ನು ತೀರಾ ಅವಿವೇಕದ ಅರ್ಜಿ ಎಂದು ಕರೆದು ಆ ವ್ಯಕ್ತಿಯ ಮೇಲೆ 50,000 ರೂಪಾಯಿ ದಂಡವನ್ನು ವಿಧಿಸಿತು.

“ಬಹುದೇವ ವಿಶ್ವಾಸಿಗಳನ್ನು ಸಿಕ್ಕಲ್ಲಿ ವಧಿಸಿರಿ” ಎಂಬ ಪವಿತ್ರ ಕುರ್‌ಆನಿನ ಅಧ್ಯಾಯ 9ರ 5ನೇ ವಚನದ ಒಂದು ತುಣುಕು ಕೂಡ ಇದರಲ್ಲಿ ಸೇರಿದೆ. ಸಾಮಾನ್ಯವಾಗಿ ಚಾನೆಲ್ ಚರ್ಚೆಗಳಲ್ಲಿ ಪದೇ ಪದೇ ಕೇಳಿ ಬರುತ್ತಿರುವ ವಚನವಿದು. ಇಸ್ಲಾಮ್ ಮತ್ತು ಮುಸ್ಲಿಮರನ್ನು ಅವಮಾನಿಸಲು ಕುರ್‌ಆನ್‌ನ ವಚನಗಳನ್ನು ಮನಬಂದಂತೆ ವ್ಯಾಖ್ಯಾನಿಸಲಾಗುತ್ತದೆ. ಶಬ್ದಗಳ ಅರ್ಥವನ್ನು ತಪ್ಪಾಗಿ ನೀಡಲಾಗುತ್ತದೆ. ವಚನಗಳನ್ನು ಅವುಗಳ ಹಿನ್ನೆಲೆ ಪರಿಸ್ಥಿತಿ ಮತ್ತು ಸಂದರ್ಭಗಳಿಂದ ಬೇರ್ಪಡಿಸಿ ಪ್ರಸ್ತುತ ಪಡಿಸಲಾಗುತ್ತದೆ.

ಈ ರೀತಿ ಒಂದು ಧರ್ಮದ ಪವಿತ್ರ ಗ್ರಂಥದಿಂದ ಯಾವುದಾದರೂ ವಾಕ್ಯವನ್ನು ಎತ್ತಿಕೊಂಡು ಅದರ ಬಾಹ್ಯ ಶಬ್ದಾರ್ಥವನ್ನು ಆಧಾರವಾಗಿಸಿ ಆಕ್ಷೇಪವೆತ್ತುವುದು ನ್ಯಾಯ ಸಮ್ಮತವಲ್ಲ. ಇದರ ಉದಾಹರಣೆ ಹೀಗಿದೆ, ಪವಿತ್ರ ಕುರ್‌ಆನ್‌ನಲ್ಲಿ, `ವಿನಾಶ ಕಾದಿದೆ ಆ ನಮಾಝ್ ಮಾಡುವವರಿಗೆ’ ಎಂಬ ವಚನವಿದೆ. ಈ ವಚನದ ಒಂದು ತುಣುಕನ್ನು ಹಿಡಿದುಕೊಂಡು ನಮಾಝ್ ನಿರ್ವಹಿಸಬೇಡಿ, ಅದನ್ನು ನಿರ್ವಹಿಸುವವರಿಗೆ ನಾಶವಿದೆ ಎಂದು ಪವಿತ್ರ ಕುರ್‌ಆನ್‌ನಲ್ಲಿದೆ ಎಂದು ಹೇಳಿದರೆ ಹೇಗಾಗಬಹುದು? `ವಿನಾಶ ಕಾದಿದೆ ಆ ನಮಾಝ್ ನಿರ್ವಹಿಸುವವರಿಗೆ. ಅವರು ತಮ್ಮ ನಮಾಝಿನ ಬಗ್ಗೆ ಅನಾಸ್ತೆಯನ್ನು ತೋರುತ್ತಾರೆ ಮತ್ತು ಅವರು ತೋರಿಕೆಯ ಕೆಲಸ ಮಾಡುತ್ತಾರೆ’… ಎಂದು ಸಂಪೂರ್ಣವಾಗಿ ಓದಿದರೆ ವಚನದ ಸರಿಯಾದ ಅರ್ಥವನ್ನು ಗ್ರಹಿಸಬಹುದು.

ಪವಿತ್ರ ಕುರ್‌ಆನಿನ 9ನೇ ಅಧ್ಯಾಯವು ಮದೀನಾದಲ್ಲಿ ಅವತೀರ್ಣವಾಗಿದೆ. ಹಿಜರಿ ಶಕೆ 9ನೇ ವರ್ಷದಲ್ಲಿ ಇದು ಅವತೀರ್ಣವಾಯಿತು. ದುಲ್ಹಜ್ಜ್, ಮುಹರಂ, ರಬೀಉಲ್ ಅವ್ವಲ್, ರಬೀಉಲ್ ಆಖಿರ್ ತಿಂಗಳುಗಳು ಯುದ್ಧ ನಿಷಿದ್ಧ ತಿಂಗಳುಗಳಾಗಿದ್ದವು. ಪ್ರವಾದಿಯವರು(ಸ) ವಿವಿಧ ಗೋತ್ರಗಳೊಂದಿಗೆ ಕರಾರುಗಳನ್ನು ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ಒಂದು ಸಂಪೂರ್ಣ ಇಸ್ಲಾಮೀ ಸಾಮ್ರಾಜ್ಯವು ಮದೀನಾದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಒಂದು ಸ್ವತಂತ್ರ ರಾಷ್ಟ್ರವಾಗಿ ಮದೀನಾ ಮಾರ್ಪಟ್ಟಿತ್ತು.

ಪ್ರವಾದಿಯವರು(ಸ) ಹಿಜರಿ ಶಕೆ 6ರ ದುಲ್ಕಅದ್ ತಿಂಗಳಲ್ಲಿ ಸುಮಾರು 400 ಅನುಯಾಯಿಗಳು ಮತ್ತು 70 ಬಲಿ ನೀಡುವ ಒಂಟೆಗಳು ಜೊತೆ ಮದೀನಾದಿಂದ ಮಕ್ಕಾಕ್ಕೆ ಉಮ್ರ ನಿರ್ವಹಿಸಲು ತೆರಳುತ್ತಾರೆ. ಆದರೆ ಮಕ್ಕಾದ ಕುರೈಶರು ಅವಕಾಶ ನೀಡುವುದಿಲ್ಲ. ಸುದೀರ್ಘ ಮಾತುಕತೆಯ ಬಳಿಕ ಹುದೈಬಿಯ ಎಂಬಲ್ಲಿ ಸಂಧಿ ಉಂಟಾಗುತ್ತದೆ. ಮಾತುಕತೆಯ ಬಳಿಕ ಸಂಧಾನದ ಈ ಕೆಳಗಿನ ನಿಬಂಧನೆಗಳು ನಿಶ್ಚಯಿಸಲ್ಪಡುತ್ತವೆ.

1. ಹತ್ತು ವರ್ಷಗಳವರೆಗೆ ಎರಡೂ ಕಡೆಯವರೊಳಗೆ ಯುದ್ಧ ವಿರಾಮವಿರುವುದು. ಈ ಅವಧಿಯಲ್ಲಿ ಅವರು ಪರಸ್ಪರ ವಿರುದ್ಧ ಯಾವುದೇ ರಹಸ್ಯ ಅಥವಾ ಬಹಿರಂಗ ಕಾರ್ಯಾಚರಣೆಯನ್ನು ನಡೆಸಲಾರರು.

2. ಈ ಕಾಲಾವಧಿಯಲ್ಲಿ ಕುರೈಶರ ಪೈಕಿ ಯಾರಾದರೂ ತನ್ನ ಸಂರಕ್ಷಕನ ಅನುಮತಿ ಇಲ್ಲದೆ ಓಡಿ ಬಂದು ಮುಹಮ್ಮದ್(ಸ)ರ ಜತೆ ಸೇರಿಕೊಂಡರೆ ಮುಹಮ್ಮದರು(ಸ) ಆತನನ್ನು ಮರಳಿ ಕುರೈಶರಿಗೆ ಒಪ್ಪಿಸುವರು. ಆದರೆ ಮುಹಮ್ಮದರ(ಸ) ಸಂಗಾತಿಗಳ ಪೈಕಿ ಯಾರಾದರೂ ಕುರೈಶರ ಬಳಿಗೆ ಬಂದರೆ ಆತನನ್ನು ಅವರು ಮರಳಿಸಲಾರರು.

3. ಅರಬ್ ಗೋತ್ರಗಳ ಪೈಕಿ ಪ್ರತಿಯೊಂದು ಗೋತ್ರವೂ ಇತ್ತಂಡಗಳ ಪೈಕಿ ಯಾವ ತಂಡದೊಡನೆ ಬೇಕಾದರೂ ಒಪ್ಪಂದ ಬದ್ಧವಾಗಿ ಸೇರಿಕೊಳ್ಳಲು ಸ್ವತಂತ್ರವಾಗಿರುವುದು.

4. ಈ ತಂಡಗಳವರು ಪರಸ್ಪರ ಕರಾರು ಉಲ್ಲಂಘನೆ ಅಥವಾ ವಂಚನೆ ಮಾಡಲಾರರು. ಮನಸ್ಸಿನಲ್ಲಿ ದ್ವೇಷವಿದ್ದರೂ ಅದನ್ನು ಬಹಿರಂಗಗೊಳಿಸಲಾಗದು.

5. ಮುಹಮ್ಮದ್‌ರು(ಸ) ಈ ವರ್ಷ ಮರಳಿ ಹೋಗಬೇಕು. ಮುಂದಿನ ವರ್ಷ ಅವರು ಉಮ್ರಾ ಮಾಡಲಿಕ್ಕಾಗಿ ಬಂದು ಕೇವಲ ಮೂರು ದಿನಗಳ ಕಾಲ ಮಕ್ಕಾದಲ್ಲಿ ತಂಗುವರು. ಅವರು ತಮ್ಮ ಆತ್ಮ ರಕ್ಷಣೆಯ ಖಡ್ಗವನ್ನು ಕವಚದೊಳಗೆ ಇರಿಸಬೇಕು. ಈ ಮೂರು ದಿನಗಳಲ್ಲಿ ಯಾವುದೇ ಘರ್ಷಣೆ ಉಂಟಾಗದಂತೆ ಮಕ್ಕಾ ವಾಸಿಗಳು ಮುಹಮ್ಮದ್(ಸ) ಮತ್ತು ಅನುಯಾಯಿಗಳಿಗಾಗಿ ಮಕ್ಕಾ ಪಟ್ಟಣವನ್ನು ಬಿಟ್ಟು ಕೊಡುವರು. ಆದರೆ ಅವರು ಮರಳಿ ಹೋಗುವಾಗ ಅಲ್ಲಿನ ಯಾವುದೇ ನಿವಾಸಿಯನ್ನು ತಮ್ಮ ಜೊತೆಗೆ ಕರೆದು ಕೊಂಡು ಹೋಗಬಾರದು.

ಆದರೆ ಕುರೈಶರು ಸಂಧಾನಕ್ಕೆ ಬದ್ಧರಾಗಿ ಇರಲಿಲ್ಲ. ಅದನ್ನು ಉಲ್ಲಂ ಘಿಸಿ ಅನೇಕ ಕುತಂತ್ರಗಳನ್ನು ನಡೆಸಿದರು. ಒಪ್ಪಂದವನ್ನು ಉಲ್ಲಂಘಿಸುವವರೊಂದಿಗೆ ಯಾವ ರೀತಿಯಲ್ಲಿ ವರ್ತಿಸಬೇಕೆಂದು ಅನ್ಫಾಲ್ ಅಧ್ಯಾಯದ 58ನೇ ವಚನದಲ್ಲಿ ಹೇಳಲಾಗಿದೆ, “ನಿಮಗೆ ಯಾವುದಾದರೂ ಜನಾಂಗದ ವಿಶ್ವಾಸ ಘಾತುಕತನ ಒಪ್ಪಂದ ಉಲ್ಲಂಘನೆಯ ಆಶಂಕೆ ಇದ್ದರೆ ಆ ಒಪ್ಪಂದವನ್ನು ಅವರ ಮುಂದೆ ಎಸೆದುಬಿಡಿರಿ ಮತ್ತು ಈಗ ನಮ್ಮ ಮಧ್ಯೆ ಒಪ್ಪಂದವಿಲ್ಲವೆಂದು ಎಚ್ಚರಿಕೆ ನೀಡಿರಿ. ಈ ಘೋಷಣೆಯನ್ನು ಮಾಡದೆ ಒಪ್ಪಂದ ಬದ್ಧ ಜನಾಂಗದ ವಿರುದ್ಧ ಸೇನಾ ಕಾರ್ಯಾಚರಣೆ ಆರಂಭಿಸುವುದು, ಸ್ವತಃ ದ್ರೋಹವಾಗಿದೆ.”

ಈ ನೈತಿಕ ನಿಯಮದಂತೆ ಒಪ್ಪಂದದ ಹೊರತಾಗಿಯೂ ಇಸ್ಲಾಮಿನ ವಿರುದ್ಧ ಪಿತೂರಿ ನಡೆಸಿ ಸಂದರ್ಭ ಸಿಕ್ಕಿದಾಗ ಒಪ್ಪಂದವನ್ನು ಲೆಕ್ಕಿಸದೆ ಹಗೆ ಸಾಧಿಸುತ್ತಿದ್ದ ಎಲ್ಲ ಗೋತ್ರಗಳಿಗೂ ಒಪ್ಪಂದ ರದ್ಧತಿಯ ಸಾರ್ವಜನಿಕ ಘೋಷಣೆಯು ಅನ್ವಯವಾಗುತ್ತಿತ್ತು.

ಪ್ರವಾದಿಯವರು(ಸ) ಹಿಜರಿ ಶಕೆ 9ರಲ್ಲಿ ಅಬೂಬಕರ್‌ರನ್ನು(ರ) ಹಜ್ಜ್ ಯಾತ್ರೆಗೆ ಕಳುಹಿಸಿದ ಸಂದರ್ಭದಲ್ಲಿ ಅತ್ತೌಬ (9ನೇ) ಅಧ್ಯಾಯದ ಈ ಕೆಳಗಿನ ವಚನಗಳು ಅವತೀರ್ಣವಾದವು. “ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ, ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಪ್ರತಿಯೊಂದು ಆಯಕಟ್ಟಿನ ಸ್ಥಳದಲ್ಲಿ ಅವರಿಗಾಗಿ ಹೊಂಚಿನಲ್ಲಿರಿ.” (9:5)

ಇದು ಕುರ್‌ಆನ್ ವಿರುದ್ಧ ಅಪಪ್ರಚಾರದಲ್ಲಿ ನಿರತರಾಗಿರುವವರು ಅತ್ಯಧಿಕವಾಗಿ ದುರುಪಯೋಗ ಪಡಿಸುವ ವಚನಗಳಲ್ಲೊಂದು. ಇದು ಒಂದು ಸಂಪೂರ್ಣ ವಚನವೂ ಅಲ್ಲ. ಕುರ್‌ಆನ್‌ನ 9ನೇ ಅಧ್ಯಾಯದ 5ನೇ ವಚನದ ಒಂದು ಭಾಗ ಮಾತ್ರ. ಇದರ ಇಂಗಿತ ಮತ್ತು ತಾತ್ಪರ್ಯವನ್ನು ಪೂರ್ಣವಾಗಿ ಗ್ರಹಿಸಲು ಈ ವಚನಗಳ ಐತಿಹಾಸಿಕ ಹಿನ್ನೆಲೆಯನ್ನು ಮತ್ತು ಸ್ವತಃ ಕುರ್‌ಆನ್ ನಲ್ಲಿರುವ ಸಾಂಧರ್ಭಿಕ ಹಿನ್ನೆಲೆಯನ್ನು ಅರಿತಿರಬೇಕಾಗುತ್ತದೆ.

9ನೇ ಅಧ್ಯಾಯದ 1 ರಿಂದ 14ರ ವರೆಗಿನ ವಚನಗಳು ಆ ನಿಟ್ಟಿನಲ್ಲಿ ತುಂಬಾ ನಿರ್ಣಾಯಕವಾಗಿವೆ. ನಾವೀಗ ಈ ಒಂದು ವಚನವನ್ನೇ ಪೂರ್ಣವಾಗಿ, ಮಾತ್ರವಲ್ಲ, ಅದರ ಹಿಂದಿನ ಮತ್ತು ಮುಂದಿನ ಒಂದೊಂದು ವಚನದ ಜೊತೆ ಸೇರಿಸಿ ಓದೋಣ:
“ಬಹುದೇವಾರಾಧಕರ ಪೈಕಿ ನೀವು ಕರಾರು ಮಾಡಿಕೊಂಡಿರುವ ಮತ್ತು ಆ ಬಳಿಕ ನಿಮಗೆ ಯಾವುದೇ ಹಕ್ಕು ಚ್ಯುತಿ ಮಾಡಿಲ್ಲದ ಹಾಗೂ ನಿಮ್ಮ ವಿರುದ್ಧ ಯಾರಿಗೂ ನೆರವು ನೀಡಿಲ್ಲದ ಜನಾಂಗಗಳ ಕರಾರುಗಳನ್ನು ಅವುಗಳ ಅವಧಿಯ ತನಕ ಪೂರ್ತಿಗೊಳಿಸಿರಿ. ಖಂಡಿತವಾಗಿಯೂ ಅಲ್ಲಾಹನು ಧರ್ಮನಿಷ್ಠರನ್ನು ಪ್ರೀತಿಸುತ್ತಾನೆ.” (ಪವಿತ್ರ ಕುರ್‌ಆನ್- 9:4)

“(ನಾಲ್ಕು) ಪವಿತ್ರ ತಿಂಗಳುಗಳು ಮುಗಿದಾಗ, ಆ ಬಹುದೇವಾರಾಧಕರನ್ನು ಕಂಡಲ್ಲಿ ಕೊಲ್ಲಿರಿ, ಅವರನ್ನು ಹಿಡಿಯಿರಿ, ಸುತ್ತುವರಿಯಿರಿ ಮತ್ತು ಪ್ರತಿಯೊಂದು ಆಯಕಟ್ಟಿನ ಸ್ಥಳದಲ್ಲಿ ಅವರಿಗಾಗಿ ಹೊಂಚಿನಲ್ಲಿರಿ.* ತರುವಾಯ, ಅವರು ಪಶ್ಚಾತ್ತಾಪ ಪಟ್ಟರೆ, ನಮಾಝ್‌ಅನ್ನು ಪಾಲಿಸುವವರಾದರೆ ಮತ್ತು ಝಕಾತ್ ಅನ್ನು ಪಾವತಿಸಿದರೆ, ಅವರಿಗೆ ಅವರ ದಾರಿಯನ್ನು ಬಿಟ್ಟು ಕೊಡಿರಿ. ಖಂಡಿತವಾಗಿಯೂ ಅಲ್ಲಾಹನು ಕ್ಷಮಿಸುವವನು ಮತ್ತು ಕರುಣಾಮಯಿಯಾಗಿದ್ದಾನೆ.”
(ಪವಿತ್ರ ಕುರ್‌ಆನ್- 9:5)

“ಇನ್ನು ಬಹುದೇವಾರಾಧಕರ ಪೈಕಿ ಯಾರಾದರೂ ನಿಮ್ಮ ಆಶ್ರಯ ಬಯಸಿದರೆ, ಅವನು ಅಲ್ಲಾಹನ ವಾಣಿಯನ್ನು ಕೇಳುವ ತನಕ ಅವನಿಗೆ ಆಶ್ರಯ ನೀಡಿರಿ. ಆ ಬಳಿಕ ಅವನನ್ನು ಅವನ ಸುರಕ್ಷಿತ ಸ್ಥಳಕ್ಕೆ ತಲುಪಿಸಿರಿ. ಇದೇಕೆಂದರೆ, ಅವರು ಅರಿವಿಲ್ಲದವರು.” (ಪವಿತ್ರ ಕುರ್‌ಆನ್- 9:6)

ಇದರ ಐತಿಹಾಸಿಕ ಹಿನ್ನೆಲೆಯನ್ನು ನೋಡುವುದಾದರೆ, ಇದು ನಿಜವಾಗಿ, ಪ್ರವಾದಿ ಮುಹಮ್ಮದ್(ಸ)ರ ಬದುಕಿನ ಕೊನೆಯ ವರ್ಷದಲ್ಲಿ, ಅವರಿಗೆ ಅಲ್ಲಾಹನ ಕಡೆಯಿಂದ ಇಳಿಸಿಕೊಡಲಾದ ಕೊನೆಯ ಕೆಲವು ದಿವ್ಯ ವಚನಗಳ ಭಾಗವಾಗಿದೆ ಮತ್ತು ಇದು ಒಂದು ನಿರ್ದಿಷ್ಟವಾದ ವಿಷಮ ಹಾಗೂ ಪ್ರತಿ ಕೂಲ ಸನ್ನಿವೇಶಕ್ಕೆ ಮಾತ್ರ ಸಂಬಂಧಿಸಿದ ಸೀಮಿತ ಆದೇಶವಾಗಿದೆ. ಆದ್ದರಿಂದಲೇ, ಇದು ಯಾರಿಗೆಲ್ಲ ಅನ್ವಯವಾಗುವುದಿಲ್ಲ ಎಂಬುದನ್ನು 4ನೇ ವಚನದಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಲಾಗಿದೆ:
“ಬಹುದೇವಾರಾಧಕರ ಪೈಕಿ ನೀವು ಕರಾರು ಮಾಡಿಕೊಂಡಿರುವ ಮತ್ತು ಆ ಬಳಿಕ ನಿಮಗೆ ಯಾವುದೇ ಹಕ್ಕು ಚ್ಯುತಿ ಮಾಡಿಲ್ಲದ ಹಾಗೂ ನಿಮ್ಮ ವಿರುದ್ಧ ಯಾರಿಗೂ ನೆರವು ನೀಡಿಲ್ಲದ ಜನಾಂಗಗಳ ಕರಾರುಗಳನ್ನು ಅವುಗಳ ಅವಧಿಯ ತನಕ ಪೂರ್ತಿಗೊಳಿಸಿರಿ..” (ಪವಿತ್ರ ಕುರ್‌ಆನ್- 9:4)

“ನೀವು ಕರಾರು ಮಾಡಿಕೊಂಡಿರುವ ಮತ್ತು ಆ ಬಳಿಕ ನಿಮಗೆ ಯಾವುದೇ ಹಕ್ಕುಚ್ಯುತಿ ಮಾಡಿಲ್ಲದ ಹಾಗೂ ನಿಮ್ಮ ವಿರುದ್ಧ ಯಾರಿಗೂ ನೆರವು ನೀಡಿಲ್ಲದ ಜನಾಂಗಗಳ ಕರಾರುಗಳನ್ನು.” ಎಂಬ ಪದಗಳು, ಇದು ಒಂದು ನಿರ್ದಿಷ್ಟ ಕಾಲಕ್ಕೆ ಅಥವಾ ಆ ನಿರ್ದಿಷ್ಟ ವರ್ಷಕ್ಕೆ ಮತ್ತು ನಿರ್ದಿಷ್ಟವಾದ ಪಕ್ಷಗಳಿಗೆ ಮಾತ್ರ ಸಂಬಂಧಿಸಿದ ಆದೇಶವೆಂಬುದನ್ನು ಸ್ಪಷ್ಟಪಡಿಸುತ್ತವೆ.

ನಿಜವಾಗಿ, ಈ ಆದೇಶದ ಹಿಂದೆ ಬಹಳ ಮಹತ್ವದ ಒಂದು ಐತಿಹಾಸಿಕ ಹಿನ್ನೆಲೆ ಇದೆ. ಆ ಹಿನ್ನೆಲೆಯನ್ನು ಅರಿಯದೆ ಅಥವಾ ಅದನ್ನು ಕಡೆಗಣಿಸಿ ಈ ವಚನಗಳನ್ನು ಓದುವವರು ಹಲವು ಎಡವಟ್ಟುಗಳಿಗೆ ತುತ್ತಾಗುವುದು ಖಚಿತ. ಈ ಅಧ್ಯಾಯದ ಪ್ರಸ್ತುತ 5ನೇ ವಚನ ಮಾತ್ರವಲ್ಲ, 28, 29, 80 ಮತ್ತು 113ನೇ ವಚನಗಳ ತಾತ್ಪರ್ಯ ನಿರ್ಧರಿಸು ವುದಕ್ಕೂ ಅವುಗಳ ಐತಿಹಾಸಿಕ ಮತ್ತು ಸಾಂದರ್ಭಿಕ ಹಿನ್ನೆಲೆಯನ್ನು ಅರಿಯಬೇಕಾದುದು ಅನಿವಾರ್ಯವಾಗಿದೆ.

ಮುಂದೆ ಜಾತಿ, ಜನಾಂಗ, ದೇಶ, ವರ್ಣ ಇತ್ಯಾದಿ ಯಾವ ಭೇದವೂ ಇಲ್ಲದೆ ಪ್ರತಿಯೊಂದು ಮಾನವ ಜೀವದ ಮಹತ್ವವನ್ನು ಸಾರುತ್ತಾ, “ಒಂದು ಮಾನವ ಜೀವಕ್ಕೆ ಪ್ರತಿಯಾಗಿ (ಒಂದು ಕೊಲೆಗೆ ಶಿಕ್ಷೆಯಾಗಿ) ಅಥವಾ ಭೂಮಿ ಯಲ್ಲಿ ಅಶಾಂತಿ ಹರಡಿದ್ದಕ್ಕೆ (ಶಿಕ್ಷೆಯಾಗಿ) ಹೊರತು – ಒಂದು ಮಾನವ ಜೀವವನ್ನು ಕೊಂದವನು ಎಲ್ಲ ಮಾನವರನ್ನು ಕೊಂದಂತೆ. ಹಾಗೆಯೇ ಅದನ್ನು (ಒಂದು ಮಾನವ ಜೀವವನ್ನು) ರಕ್ಷಿಸಿದವನು ಎಲ್ಲ ಮಾನವರನ್ನು ರಕ್ಷಿಸಿದಂತೆ. ಮುಂದೆ ಅವರ ಬಳಿಗೆ ಸ್ಪಷ್ಟ ಪುರಾವೆಗಳೊಂದಿಗೆ ನಮ್ಮ ಅನೇಕ ದೂತರು ಬಂದರು. ಇಷ್ಟಾಗಿಯೂ ಅವರಲ್ಲಿ ಹೆಚ್ಚಿನವರು ಭೂಮಿಯಲ್ಲಿ ಅತಿರೇಕ ಎಸಗುವವರಾಗಿದ್ದಾರೆ” ಎಂದು ಘೋಷಿಸಲಾಗಿದೆ (ಪವಿತ್ರ ಕುರ್‌ಆನ್- 5:32).

ಯಾವ ತಾರತಮ್ಯವೂ ಇಲ್ಲದೆ ಪ್ರತಿಯೊಬ್ಬ ಮಾನವ ಜೀವವನ್ನು ಮತ್ತು ಜೀವ ರಕ್ಷಣೆಯನ್ನು ಈ ಮಟ್ಟದಲ್ಲಿ ವೈಭವೀಕರಿಸುವ ಮತ್ತು ಒಬ್ಬ ಮಾನವ ಜೀವಿಯ ಹತ್ಯೆ ಯನ್ನು ಇಷ್ಟೊಂದು ಉಗ್ರವಾಗಿ ಖಂಡಿಸುವ ವಚನವೊಂದು ಬಹುಶಃ ಜಗತ್ತಿನ ಬೇರಾವ ಗ್ರಂಥದಲ್ಲೂ ಕಾಣಸಿಗದು.

ಪವಿತ್ರ ಕುರ್‌ಆನ್ ಮುಸ್ಲಿಮರ ಆಸ್ತಿಯಲ್ಲ. ಬದಲಾಗಿ ಇದು ಸ್ವತಃ ಪರಿಚಯಪಡಿಸುವಂತೆ ಜಗತ್ತಿನ ಜನರಿಗೆ ಮಾರ್ಗದರ್ಶಿಯಾಗಿ ಬಂದಂತಹ ಗ್ರಂಥ. ಇನ್ನೂ ಪ್ರಳಯ ಕಾಲದವರೆಗೆ ಬರಲಿರುವ ಎಲ್ಲ ಜನರಿಗೂ ಸನ್ಮಾರ್ಗವನ್ನು ತೋರಿಸುವ ಗ್ರಂಥ. ಈ ಗ್ರಂಥದ ಆದೇಶಗಳನ್ನು ಪಾಲಿಸಿ ಸಜ್ಜನರಾದ ಸಮುದಾಯವು ಇತಿಹಾಸದಲ್ಲಿ ಗತಿಸಿ ಹೋಗಿದೆ. ಇಂದು ಕೂಡ ಪವಿತ್ರ ಕುರ್‌ಆನಿನ ನಿಜವಾದ ಶಿಕ್ಷಣವನ್ನು ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವಿಸುವ ವ್ಯಕ್ತಿಗಳು ಸಮಾಜದಲ್ಲಿ ಜನರ ಮಧ್ಯೆ ಎಲ್ಲರ ಪ್ರೀತಿಗೆ ಪಾತ್ರರಾಗಿ ಬದುಕುತ್ತಿದ್ದಾರೆ. ಇಂತಹ ಗ್ರಂಥದಲ್ಲಿ ಬಹುದೇವ ಆರಾಧಕರನ್ನು ಕೊಲ್ಲಬೇಕು ಎಂಬ ಆದೇಶವಿದೆ ಎಂದು ನಂಬುವುದು ಒಂದು ದೊಡ್ಡ ಕ್ಲೀಶೆಯ ಮಾತು.

ದೇವನು ಈ ಭೂಮಿಯ ಮೇಲೆ ಮನುಷ್ಯನನ್ನು ಸೃಷ್ಟಿಸಿದ ರೀತಿಯೇ ಅದ್ಬುತ. ಅವನ ದೇಹದಲ್ಲಿ ಯಾವೆಲ್ಲ ವಸ್ತುಗಳು ಸೇರಿವೆಯೋ ಆ ಎಲ್ಲ ವಸ್ತುಗಳು ಮಣ್ಣಿನಲ್ಲಿಯೂ ಲಭ್ಯವಿದೆ. ಉದಾಹರಣೆಗೆ ಕ್ಯಾಲ್ಸಿಯಂ ಮೆಗ್ನೀಷಿಯಂ. ಇವೆಲ್ಲವೂ ಈ ಮಣ್ಣಿನಲ್ಲಿ ಬೆಳೆಯುವ ಆಹಾರದ ಮೂಲಕ ಮನುಷ್ಯನ ದೇಹಕ್ಕೆ ಪೋಷಣೆಯನ್ನು ಒದಗಿಸುತ್ತದೆ. ಅದೇ ವೇಳೆ ಈ ದೇಹದಲ್ಲಿ ಒಂದು ಆತ್ಮವಿದೆ. ಅದು ದೇವನಿಂದ ನೀಡಲ್ಪಟ್ಟದ್ದು. ಆ ಆತ್ಮವು ದೇವನೆಡೆಗೆ ಮರಳಿ ಹೋಗಲಿಕ್ಕಿದೆ. ಆ ಆತ್ಮಕ್ಕೆ ಬೇಕಾದ ಆಹಾರವನ್ನು ದೇವನು ದಿವ್ಯವಾಣಿಯ ಮೂಲಕ ನಮಗೆ ಒದಗಿಸಿಕೊಡುತ್ತಾನೆ. ಈ ಮೂಲಕ ದಿವ್ಯದರ್ಶನ ಲಭ್ಯವಾಗಿ ದಿವ್ಯವಾಣಿಯ ಮೂಲಕ ಅವತೀರ್ಣಗೊಂಡ ಪವಿತ್ರ ಕುರ್‌ಆನ್ ಮನುಷ್ಯನ ಆತ್ಮಕ್ಕೆ ಬೇಕಾದ ಮಾರ್ಗದರ್ಶನವನ್ನು ನೀಡುತ್ತದೆ. ಕಾಲಾತೀತವಾದ ಸರ್ವಕಾಲಕ್ಕೂ ಅನ್ವಯವಾಗುವ ಮತ್ತು ಇನ್ನು ಪ್ರಳಯ ಕಾಲದವರೆಗೂ ಬರಲಿರುವ ಮನುಷ್ಯರಿಗೆ ಅಗತ್ಯವಾದ ಮಾರ್ಗದರ್ಶನವನ್ನು ಹೊಂದಿರುವುದು ಇದರ ವಿಶೇಷತೆಯಾಗಿದೆ. ನಿಷ್ಪಕ್ಷಪಾತವಾಗಿ ಅಧ್ಯಯನ ಮಾಡಿದರೆ ಖಂಡಿತವಾಗಿಯೂ ಇದು ಯಾಕಾಗಿ ಬಂದಂತಹ ಗ್ರಂಥ ಎಂಬುದನ್ನು ಸ್ಪಷ್ಟವಾಗಿ ಅರಿಯದೆ ಇರಲು ಸಾಧ್ಯವಿಲ್ಲ.

(ಲೇಖಕರು, ಅನುಪಮ ಮಹಿಳಾ ಮಾಸಿಕದ ಸಹ ಸಂಪಾದಕರುಮತ್ತು ಕುರ್‌ಆನ್ ಪ್ರವಚನಕಾರರು)

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …