✍️ ಸಮೀನಾ ಅಫ್ಶಾನ್
ಪವಿತ್ರ ಕುರ್ಆನಿನ ಪಾರಿಭಾಷಿಕ ಪದಗಳ ಪೈಕಿ ‘ಕಾಫಿರ್’ ಎಂಬ ಪದವು ಇಂದಿನ ಕಾಲದಲ್ಲಿ ಅತ್ಯಂತ ತಪ್ಪಾಗಿ ಅರ್ಥಮಾಡಿ ಕೊಳ್ಳಲ್ಪಡುವ ಪದಗಳಲ್ಲಿ ಒಂದಾಗಿದೆ. ಇಂದಿನ ಜನಪ್ರಿಯ ಬಳಕೆಯಲ್ಲಿ, ಇದನ್ನು ಮುಸ್ಲಿಮೇತರರನ್ನು ಅವಮಾನಿಸುವ ಪದವಾಗಿ ಅಥವಾ ನಿಂದನಾರ್ಥಕ ಪದವಾಗಿ ಕಾಣಲಾಗುತ್ತಿದೆ.
ಆದರೆ ಪವಿತ್ರ ಕುರ್ಆನಿನಲ್ಲಿ ಕಾಣಸಿಗುವ ಈ ಕಾಫಿರ್ ಎಂಬ ಪದವು ಅವಮಾನಕಾರಿಯಲ್ಲ, ಬದಲಾಗಿ ಅದು ವಿವರಣಾತ್ಮಕ (descriptive), ನೈತಿಕ ಹಾಗೂ ಧಾರ್ಮಿಕ ಅರ್ಥ ಹೊಂದಿದ ಪದವಾಗಿದ್ದು, ಇಂದಿನ ಸಾಮಾನ್ಯ ಅನುವಾದಗಳು ಸೂಚಿಸುವಷ್ಟು ಸರಳ ಅಥವಾ ಕಠೋರ ಅರ್ಥವನ್ನು ಹೊಂದಿಲ್ಲ. ಕುರ್ಆನಿನ ಭಾಷಾ ಶೈಲಿ, ಅರಬಿ ಭಾಷೆಯ ಪದಗಳ ಮೂಲಾರ್ಥ ಮತ್ತು ಪಾರಂಪರಿಕ ಇಸ್ಲಾಮೀ ಪಾಂಡಿತ್ಯದ ದೃಷ್ಟಿಯಿಂದ ನೋಡಿದರೆ ಇದರ ನೈಜ ಅರ್ಥ ಬೆಳಕಿಗೆ ಬರುತ್ತದೆ.
ಕಾಫಿರ್ ಪದದ ಭಾಷಾತ್ಮಕ ಮೂಲ
ಕಾಫಿರ್ ಎಂಬ ಪದವು ಅರಬಿ ಮೂಲಾಕ್ಷರಗಳಾದ ಕ-ಫ-ರ ದಿಂದ ಬಂದಿದೆ. ಇದರ ಶಾಬ್ದಿಕ ಅರ್ಥ ನಿರಾಕರಿಸುವುದು, ಮುಚ್ಚುವುದು, ಮರೆ ಮಾಡುವುದು ಅಥವಾ ಆವರಿಸುವುದು ಎಂದಾಗಿದೆ.
ಪವಿತ್ರ ಕುರ್ಆನಿನ ಅವತೀರ್ಣಕ್ಕೂ ಮುನ್ನ ಅರಬಿ ಭಾಷಿಗರು, ಬೀಜವನ್ನು ಮಣ್ಣಿನಿಂದ ಮುಚ್ಚುವ ಕೃಷಿಕನನ್ನೂ ಕಾಫಿರ್ ಎಂದು ಕರೆಯುತ್ತಿದ್ದರು. ಪವಿತ್ರ ಕುರ್ಆನಿನಲ್ಲೂ ಕೃಷಿಕನಿಗೆ ಈ ಪದದ ಬಳಕೆಯಾಗಿದೆ.
ಒಂದು ಕಡೆ ಲೌಕಿಕ ಜೀವನದ ನಶ್ವರತೆಯ ಉಪಮೆ ನೀಡುತ್ತಾ ಕುರ್ಆನ್ ಹೀಗೆನ್ನುತ್ತದೆ: “ಒಂದು ಮಳೆ ಬಂದೊಡನೆ ಅದರಿಂದಾಗಿ ಹುಟ್ಟುವ ಸಸ್ಯಗಳನ್ನು ಕಂಡು ಕೃಷಿಕರು ಸಂತೋಷಗೊಂಡರು…” (ಕುರ್ಆನ್- 57: 20)
ಇಲ್ಲಿ ಕೃಷಿಕರು ಎಂಬುದಕ್ಕೆ ಉಪಯೋಗವಾದ ಪದ ಕುಫ್ಫಾರ್ (ಕಾಫಿರ್ ಪದದ ಬಹುವಚನ) ಎಂದಾಗಿದೆ.
ಇಲ್ಲಿ ಈ ಮೂಲಾರ್ಥವನ್ನು ತಿಳಿಯುವುದು ಬಹಳ ಮುಖ್ಯ. ಏಕೆಂದರೆ ಕುರ್ಆನ್ನ ಪ್ರಕಾರ ‘ಕುಫ್ರ್’ ಎಂದರೆ ಕೇವಲ ನಂಬಿಕೆಯ ಕೊರತೆ ಅಲ್ಲ, ಅದು ಅವಮಾನವನ್ನು ಸೂಚಿಸುವ ಪದವೂ ಅಲ್ಲ, ಬದಲಾಗಿ ತಿಳಿದಿರುವ ನಿಚ್ಚಳವಾದ ಸತ್ಯವನ್ನು ಅಥವಾ ಸ್ಪಷ್ಟಪಡಿಸಲಾದ ಯಾವುದೇ ವಿಷಯವನ್ನು ಅಹಂಕಾರದಿಂದ ಮರೆಮಾಡುವುದು ಅಥವಾ ನಿರಾಕರಿಸುವುದು ಎಂಬ ಅರ್ಥವನ್ನು ಹೊಂದಿದೆ.
ಕುರ್ಆನಿನಲ್ಲಿ ಕಾಫಿರ್ ಪದದ ವಿವಿಧ ಬಳಕೆಗಳು
ಕುರ್ಆನಿನಲ್ಲಿ ಈ ಪದ ಎಲ್ಲಾ ಸಂದರ್ಭಗಳಲ್ಲಿ ಒಂದೇ ರೀತಿಯಲ್ಲಿ ಬಳಕೆಯಾಗಿಲ್ಲ. ವಿವಿಧ ಕಡೆಗಳಲ್ಲಿ ಅದು ನಂಬಿಕೆ, ಮನೋಭಾವ ಮತ್ತು ವರ್ತನೆಯ ಆಧಾರದ ಮೇಲೆ ವಿಭಿನ್ನ ಅರ್ಥಗಳಲ್ಲಿ ಬಳಕೆಯಾಗಿದೆ.
1.ಸತ್ಯ ಸ್ಪಷ್ಟವಾದ ನಂತರ ನಿರಾಕರಣೆ
‘ಕುಫ್ರ್’ ಪದದ ಪ್ರಮುಖ ಅರ್ಥಗಳಲ್ಲಿ ಒಂದು – ಸತ್ಯ ಸ್ಪಷ್ಟವಾದ ನಂತರ ಅದನ್ನು ಉದ್ದೇಶಪೂರ್ವಕವಾಗಿ ತಿರಸ್ಕರಿಸುವುದು:
ಕುರ್ಆನ್ ಹೀಗೆನ್ನುತ್ತದೆ: “ಆದರೆ ಸತ್ಯವಿಶ್ವಾಸ ಸ್ವೀಕರಿಸಿದ ಬಳಿಕ ನಿಷೇಧ ರೀತಿಯನ್ನು ಅನುಸರಿಸಿ ತಮ್ಮ ಈ ನಿಷೇಧ ರೀತಿಯಲ್ಲಿ ಮುಂದುವರಿಯುತ್ತಾ ಹೋದರೆ, ಅವರ ಪಶ್ಚಾತ್ತಾಪವನ್ನು ಸ್ವೀಕರಿಸಲಾಗದು. ಇಂತಹವರು ಶುದ್ಧ ಪಥಭ್ರಷ್ಟರು” (ಕುರ್ಆನ್- 3: 90)
ಈ ಸೂಕ್ತದಲ್ಲಿರುವ ‘ಕುಫ್ರ್’ ಅಜ್ಞಾನವನ್ನು ಸೂಚಿಸುವುದಿಲ್ಲ, ಬದಲಾಗಿ ತಿಳಿದಿದ್ದರೂ ನಿರಾಕರಿಸುವ ಮನೋಭಾವವನ್ನು ಸೂಚಿಸುತ್ತದೆ.
ಇನ್ನೊಂದು ಕಡೆ ಕುರ್ಆನ್ ಹೀಗೆನ್ನುತ್ತದೆ: “ಸತ್ಯ ನಿಷೇಧಿಸಿದವರಿಗೆ ನೀವು ಎಚ್ಚರಿಕೆ ಕೊಟ್ಟರೂ ಕೊಡದಿದ್ದರೂ ಸರಿಯೇ. ಅವರಂತೂ ವಿಶ್ವಾಸವಿಡುವವರಲ್ಲ” (ಕುರ್ಆನ್ – 2:6)
ಇದು ಅಜ್ಞಾನದಿಂದಾಗಿರುವ ನಿರಾಕರಣೆಯಲ್ಲ. ಅಹಂಕಾರ, ಹಠ ಮತ್ತು ವೈರಾಗ್ಯದಿಂದ ಕೂಡಿದ ಉದ್ದೇಶಿತವಾದ ನಿರಾಕರಣೆ.
2.ಕೃತಘ್ನತೆ
ಕುರ್ಆನಿನಲ್ಲಿ ಕುಫ್ರ್ ಪದವನ್ನು ಕೃತಘ್ನತೆ ಎಂಬರ್ಥದಲ್ಲೂ ಉಲ್ಲೇಖಿಸಲಾಗಿದೆ:
ನೀವು ಕೃತಜ್ಞರಾಗಿದ್ದರೆ ನಾನು ನಿಮಗೆ ಇನ್ನೂ ಹೆಚ್ಚು ಪ್ರದಾನ ಮಾಡುವೆನೆಂದೂ ನೀವು ಕುಫ್ರ್ (ಕೃತಘ್ನತೆ) ತೋರಿದರೆ ನನ್ನ ಶಿಕ್ಷೆಯು ಅತ್ಯಂತ ಕಠಿಣವಾಗಿದೆಯೆಂದೂ ನಿಮ್ಮ ಪ್ರಭು ಎಚ್ಚರಿಕೆ ಕೊಟ್ಟಿದ್ದುದನ್ನೂ ಸ್ಮರಿಸಿರಿ.” (ಕುರ್ಆನ್ – 14:7)
ಈ ವಚನದಲ್ಲಿ ಕುಫ್ರ್ ಎಂದರೆ ದೇವಾಸ್ತಿತ್ವವನ್ನು ನಿರಾಕರಿಸುವುದಲ್ಲ, ಅದು ಕೃತಜ್ಞತಾ ಮನೋಭಾವದ ಕೊರತೆಯನ್ನು ತೋರಿಸುತ್ತದೆ. ಇದರಿಂದ ಕುಫ್ರ್ ಅಂದರೆ ಒಂದು ನೈತಿಕ ಮನೋಭಾವವೂ ಹೌದು ಎಂಬುದು ಸ್ಪಷ್ಟವಾಗುತ್ತದೆ.
3.ನಿರ್ದಿಷ್ಟ ವರ್ಗದ ಗುರುತಲ್ಲ – ಒಂದು ಮನೋಸ್ಥಿತಿ
ಸತ್ಯವಿಶ್ವಾಸ ಸ್ವೀಕರಿಸಿದವರು ಮತ್ತು ಸತ್ಯ ನಿಷೇಧಿಗಳು ಎಂಬ ಅಭಿವ್ಯಕ್ತಿ ಪವಿತ್ರ ಕುರ್ಆನಿನಲ್ಲಿ ಪದೇ ಪದೇ ಕಾಣಸಿಗುತ್ತದೆ. ಇದು ಒಬ್ಬ ವ್ಯಕ್ತಿಯ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನು ವಿವರಿಸುತ್ತದೆಯೇ ಹೊರತು ಜಾತಿ, ಸಂಸ್ಕೃತಿ ಅಥವಾ ವಂಶವನ್ನಲ್ಲ.
ಅವನೇ ನಿಮ್ಮನ್ನು ಸೃಷ್ಟಿಸಿದನು. ಇನ್ನು ನಿಮ್ಮಲ್ಲಿ ಸತ್ಯವಿಶ್ವಾಸಿಗಳೂ ಇದ್ದಾರೆ ಮತ್ತು ನಿಮ್ಮಲ್ಲಿ ಸತ್ಯನಿಷೇಧಿಗಳೂ ಇದ್ದಾರೆ (ಕುರ್ಆನ್ – 64:2)
ಈ ಸೂಕ್ತವು ಬಹಳ ಮನೋಜ್ಞವಾಗಿ ಮನುಷ್ಯನ ಸ್ವತಂತ್ರ ಆಯ್ಕೆಗಳು ಮತ್ತು ದೃಷ್ಟಿಕೋನಗಳನ್ನು ವಿವರಿಸುತ್ತದೆ. ಅವನ ಅಂತರ್ಗತ ಮೌಲ್ಯಮಾಪನವನ್ನು ಅದು ಮಾಡುವುದಿಲ್ಲ.
ಮಾನವರೆಲ್ಲರೂ ಘನತೆಗೆ ಅರ್ಹರು ಎಂಬುದನ್ನು ಕೂಡ ಪವಿತ್ರ ಕುರ್ಆನ್ ಬಲವಾಗಿ ಪ್ರತಿಪಾದಿಸುತ್ತದೆ: “ನಾವು ಆದಮರ ಸಂತತಿಯನ್ನು ಗೌರವಾನ್ವಿತರಾಗಿಸಿದ್ದೇವೆ.” (ಕುರ್ಆನ್- 17:70)
4.ಪ್ರವಾದಿ(ಅ)ರಿಗೆ ಫಿರ್ಔನ್ ಉಪಯೋಗಿಸಿದ ಪದ
ಫಿರ್ಔನನು, “ನಾವು ನಿನ್ನನ್ನು ನಮ್ಮಲ್ಲಿ ಮಗುವಿನಂತೆ ಸಾಕಿರಲಿಲ್ಲವೇ? ನೀನು ನಿನ್ನ ಜೀವಮಾನದ ಅನೇಕ ವರ್ಷಗಳನ್ನು ನಮ್ಮಲ್ಲಿ ಕಳೆದಿರುವೆ. ಅನಂತರ ನೀನು ಏನು ಮಾಡಿದೆಯೋ ಅದನ್ನು ಮಾಡಿದೆ. ನೀನು ಮಹಾ ಕಾಫಿರ್ ಆಗಿರುವೆ” ಎಂದನು. (ಕುರ್ಆನ್- 26: 18-19)
ಈ ಸೂಕ್ತದಲ್ಲಿರುವ “ಕಾಫಿರ್” ಎಂಬ ಪದವು ಬಂಡಾಯ ಮನೋಭಾವ, ಕೃತಘ್ನತೆ ಮತ್ತು ಸಕ್ರಿಯ ವಿರೋಧ ಎಂಬ ಗುಣಗಳನ್ನು ಸೂಚಿಸುತ್ತದೆ. ಇಲ್ಲಿ ಈ ಪದ `ಧಾರ್ಮಿಕ ನಂಬಿಕೆ’ಯನ್ನು ಸೂಚಿಸುವುದೇ ಇಲ್ಲ.
5.ಸತ್ಕರ್ಮ’ದ ವಿರುದ್ಧ ಪದ
ಅಲ್ಲಾಹನು ಸತ್ಯವಿಶ್ವಾಸಿಗಳೊಂದಿಗೆ ಕೆಲವೊಂದು ದುರ್ಗುಣಗಳ ಬಗ್ಗೆ ಪ್ರಸ್ತಾಪಿಸಿದ ನಂತರ ಕಾಫಿರ್ಗಳ ಪರಿಣಾಮ ಇದಾಗಿದೆ ಎಂದು ಹೇಳುವ ಅನೇಕ ಸೂಕ್ತಗಳಿವೆ. ಮುಸ್ಲಿಮನಾಗಿದ್ದು ಕೂಡ ಒಬ್ಬ ವ್ಯಕ್ತಿಯ ನೈತಿಕ ಮಟ್ಟ ಕುಸಿಯುವುದನ್ನು ಇಲ್ಲಿ ಕುಫ್ರ್ಗೆ ಹೋಲಿಸಲಾಗುತ್ತದೆ.
ದಾನ ಮಾಡದ ಸತ್ಯವಿಶ್ವಾಸಿಯ ಬಗ್ಗೆ ಹೀಗೆ ಹೇಳಲಾಗಿದೆ; “ಸತ್ಯವಿಶ್ವಾಸಿಗಳೇ, ವ್ಯಾಪಾರ ವಿನಿಮಯಗಳು ನಡೆಯದ, ಗೆಳೆತನಗಳೂ ಶಿಫಾರಸುಗಳೂ ಫಲಕಾರಿಯಾಗದ ಆ ದಿನ ಬರುವುದಕ್ಕಿಂತ ಮೊದಲೇ ನಾವು ನಿಮಗೊದಗಿಸಿರುವ ಸೊತ್ತು ವಿತ್ತಗಳಿಂದ ಖರ್ಚು ಮಾಡಿರಿ. ಕುಫ್ರ್ ನ ನೀತಿ ಹೊಂದಿದವರೇ ಅಕ್ರಮಿಗಳು.” (ಕುರ್ಆನ್- 2: 254)
ದಾನ ಮಾಡಿ ಉಪಕಾರ ಭಾರ ತೋರುವ ಸತ್ಯವಿಶ್ವಾಸಿಯ ಬಗ್ಗೆ ಅಲ್ಲಾಹನು ಹೇಳುತ್ತಾನೆ; “ಇಂತಹವರು ತಾವು ದಾನ ಮಾಡಿ ಗಳಿಸಿದೆವೆಂದೆಣಿಸಿರುವ ಪುಣ್ಯವೇನೂ ಅವರ ಕೈ ಸೇರದು. ಕಾಫಿರ್ಗಳಿಗೆ ಮಾರ್ಗದರ್ಶನ ಮಾಡುವ ಪರಿಪಾಠವನ್ನು ಅಲ್ಲಾಹ್ ಇಟ್ಟುಕೊಂಡಿರುವುದಿಲ್ಲ.” (ಕುರ್ಆನ್- 2: 264)
ಬಡ್ಡಿ ವ್ಯವಹಾರದಲ್ಲಿ ತೊಡಗಿರುವ ಮುಸ್ಲಿಮರ ಬಗ್ಗೆ ಹೇಗೆ ಹೇಳಲಾಗಿದೆ; “ಓ ಸತ್ಯವಿಶ್ವಾಸಿಗಳೇ, ಬಡ್ಡಿ-ಮಾರ್ಬಡ್ಡಿ ತಿನ್ನುವುದನ್ನು ಬಿಟ್ಟು ಬಿಡಿರಿ ಮತ್ತು ಅಲ್ಲಾಹನನ್ನು ಭಯಪಡಿರಿ. (ಆಗ) ನೀವು ಕೃಪೆಗೆ ಅರ್ಹರಾಗಿರುವಿರೆಂದು ಆಶಿಸಬಹುದು. ಮತ್ತು ಸತ್ಯ ನಿಷೇಧಿಗಳಿಗಾಗಿ ಸಿದ್ಧಗೊಳಿಸಲ್ಪಟ್ಟಿರುವ ಆ ನರಕಾಗ್ನಿಗೆ ಅಂಜಿರಿ.” (ಕುರ್ಆನ್- 3: 130)
ಜಿಪುಣತೆ ತೋರುವ ಮುಸ್ಲಿಮರ ಬಗ್ಗೆ ಹೇಗೆ ಹೇಳಲಾಗಿದೆ; “ಸ್ವತಃ ಜಿಪುಣತೆ ತೋರುವವರನ್ನೂ ಇತರರನ್ನು ಜಿಪುಣತೆಗೆ ಪ್ರೇರೇಪಿಸುವವರನ್ನೂ ಅಲ್ಲಾಹನು ತನ್ನ ಅನುಗ್ರಹದಿಂದ ತಮಗೆ ದಯಪಾಲಿಸಿದುದನ್ನು ಬಚ್ಚಿಡುವವರನ್ನೂ ಅಲ್ಲಾಹನು ಮೆಚ್ಚುವುದಿಲ್ಲ. ಅಂತಹ ಕಾಫಿರ್ಗಳಿಗಾಗಿ ನಾವು ಅಪಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿರುತ್ತೇವೆ.” (ಕುರ್ಆನ್- 4: 37)
ಅದಲ್ಲದೆ ಕುರ್ಆನ್ ಮಾನವನ ಸ್ವತಂತ್ರ ಇಚ್ಛೆಯನ್ನು ಗುರುತಿಸುತ್ತದೆ ಮತ್ತು ಒತ್ತಡ ಅಥವಾ ಹಿಂಸಾಚಾರವಿಲ್ಲದೆ ತನ್ನ ನಂಬಿಕೆಗಳನ್ನು ಆಯ್ಕೆ ಮಾಡುವ ಹಕ್ಕನ್ನು ಪ್ರತಿಯೊಬ್ಬನಿಗೂ ಒದಗಿಸುತ್ತದೆ.
“ಧರ್ಮದ ವಿಷಯದಲ್ಲಿ ಯಾವುದೇ ಒತ್ತಾಯ ಬಲಾತ್ಕಾರಗಳಿಲ್ಲ. ಸನ್ಮಾರ್ಗವು ದುರ್ಮಾರ್ಗದಿಂದ ಬೇರ್ಪಡಿಸಲ್ಪಟ್ಟಿದೆ.” (ಕುರ್ಆನ್- 2: 256)
ಅಲ್ಲಾಹನು ನ್ಯಾಯ ಪರತೆಯ ವಿಷಯದಲ್ಲಿ ಯಾವುದೇ ರೀತಿಯ ತಾರತಮ್ಯಕ್ಕೆ ಆಸ್ಪದವಿಲ್ಲವೆಂದು ಕೂಡಾ ಸ್ಪಷ್ಟಪಡಿಸುತ್ತಾನೆ.
ಧರ್ಮದ ವಿಷಯದಲ್ಲಿ ನಿಮ್ಮೊಡನೆ ಯುದ್ಧ ಮಾಡಿರದ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರ ಹಾಕಿರದವರೊಂದಿಗೆ ಸೌಜನ್ಯ ಹಾಗೂ ನ್ಯಾಯದೊಂದಿಗೆ ವರ್ತಿಸುವುದರಿಂದ ಅಲ್ಲಾಹನು ನಿಮ್ಮನ್ನು ತಡೆಯುವುದಿಲ್ಲ. ಅಲ್ಲಾಹನು ನ್ಯಾಯ ಪಾಲನೆ ಮಾಡುವವರನ್ನು ಪ್ರೀತಿಸುತ್ತಾನೆ. (ಕುರ್ಆನ್- 60: 8)
ಏನಿದ್ದರೂ ಜಗತ್ತಿನ ಎಲ್ಲಾ ಪ್ರಮುಖ ಧರ್ಮಗಳ ಪಾರಿಭಾಷಿಕದಲ್ಲಿ ಅವರವರ ನಂಬಿಕೆಗೆ ವಿರುದ್ಧಾರ್ಥಕ ಪದಗಳನ್ನು ಬಳಸುವುದು ಒಂದು ಸಾಮಾನ್ಯ ಸಂಗತಿ. ಅವುಗಳು ಇತರರನ್ನು ಅಪಮಾನಿಸಲು ಬಳಸುವ ಪದವಲ್ಲ, ಬದಲಾಗಿ ನಂಬಿಕೆಯುಳ್ಳವರು ಮತ್ತು ನಂಬಿಕೆಯಿಲ್ಲದವರು, ಒಳಗಿನವರು ಮತ್ತು ಹೊರಗಿನವರು, ಅಥವಾ ನಿರ್ದಿಷ್ಟ ಸಂಪ್ರದಾಯದ ಅನುಯಾಯಿಗಳು ಮತ್ತು ಅನುಯಾಯಿಗಳಲ್ಲದವರ ನಡುವೆ ವ್ಯತ್ಯಾಸವನ್ನು ತೋರಿಸಲು ಬಳಸಲಾಗುತ್ತದೆ.
ಹಿಂದೂ ಧರ್ಮದಲ್ಲಿ, “ಮ್ಲೇಚ್ಛ” ಎಂಬ ಪದವು ವೈದಿಕೇತರ ಮೂಲದ ಜನರು ಅಥವಾ ವಿದೇಶಿಯರನ್ನು ಸೂಚಿಸುತ್ತದೆ. ಕ್ರಿಶ್ಚಿಯನ್ ಧರ್ಮ ಮತ್ತು ಯಹೂದಿ ಧರ್ಮಗಳಲ್ಲಿ, gentiles (ಅನ್ಯಜನರು) ಎಂಬ ಪದವನ್ನು ಇಸ್ರೇಲ್ ಅಥವಾ ಯಹೂದಿ ಸಮುದಾಯದ ಭಾಗವಾಗಿಲ್ಲದವರನ್ನು ವಿವರಿಸಲು ಬಳಸಲಾಗುತ್ತದೆ. ಈ ಪದ್ಧತಿ ಯಾವುದೇ ಒಂದು ಧರ್ಮಕ್ಕೆ ವಿಶಿಷ್ಟವಲ್ಲ. ಇತರ ಹಲವು ಧರ್ಮಗಳು ಸಹ ಇದೇ ರೀತಿಯ ವಿರುದ್ಧ ಪದಗಳನ್ನು ಬಳಸುತ್ತವೆ;
ಸಿಖ್ ಧರ್ಮ: ಗುರುಮುಖ (ದೇವ-ಕೇಂದ್ರಿತ ವ್ಯಕ್ತಿ) – ಮನ್ಮುಖ (ಸ್ವಾರ್ಥ ವ್ಯಕ್ತಿ)
ಬೌದ್ಧ ಧರ್ಮ: ಆರ್ಯ (ಉದಾತ್ತ/ಪ್ರಬುದ್ಧ) – ಅನಾರ್ಯ (ಅಜ್ಞಾನ/ಎಚ್ಚರಗೊಳ್ಳದ)
ಜೈನ ಧರ್ಮ: ಶ್ರಾವಕ (ಜೈನ ಅನುಯಾಯಿ) – ನಾಸ್ತಿಕ (ಜೈನ ಸಿದ್ಧಾಂತದಲ್ಲಿ ನಂಬಿಕೆಯಿಲ್ಲದವ)
ಒಟ್ಟಿನಲ್ಲಿ ‘ಕಾಫಿರ್’ ಪದದ ಬಗ್ಗೆ ಇರುವ ಅನೇಕ ವಿವಾದಗಳು ಅದನ್ನು ವ್ಯಾಖ್ಯಾನಿಸಿದ ರೀತಿಯಿಂದ ಉಂಟಾಗಿವೆ. ವಾಸ್ತವದಲ್ಲಿ ಪವಿತ್ರ ಕುರ್ಆನಿನ ಪ್ರಕಾರ ‘ಕುಫ್ರ್’ ಎಂಬ ಪರಿಕಲ್ಪನೆ ಒಬ್ಬ ವ್ಯಕ್ತಿಯ ಆಧ್ಯಾತ್ಮಿಕ ಸ್ಥಿತಿ ಮತ್ತು ಅದಕ್ಕೆ ತಕ್ಕಂತೆ ಅವನು ಮಾಡುವ ಕರ್ಮಗಳನ್ನು ಆಧರಿಸಿದೆ. ಅದು ಅಮಾನವೀಯವಾದ ಅಥವಾ ಅಪಮಾನಕಾರಿಯಾದ ಪದವಲ್ಲ. ಯಾವುದೇ ವರ್ಗೀಯತೆಯನ್ನೋ ಜಾತೀಯತೆಯನ್ನೋ ಸೂಚಿಸುವ ಪದವೂ ಅಲ್ಲ. ಅದು ಗಂಭೀರವಾದ ನೈತಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯನ್ನು ನಿರೂಪಿಸುವ ಪದವಾಗಿದೆ.
ಪವಿತ್ರ ಕುರ್ಆನ್ ಕಾಫಿರ್ ಎಂಬ ಪದವನ್ನು ಭಿನ್ನ ನಂಬಿಕೆಗಳನ್ನು ಹೊಂದಿರುವವರನ್ನು ಕರೆಯಲು ಉಪಯೋಗಿಸಿಲ್ಲ, ಬದಲಾಗಿ ಕಾಫಿರ್ ಎಂದರೆ ಸತ್ಯವನ್ನು ಅರಿಯದವನು ಅಥವಾ ಅದರ ಮೇಲೆ ವಿಶ್ವಾಸವಿಡದವನು ಮಾತ್ರವಲ್ಲ ತನ್ನ ಮನಸ್ಸು, ಬುದ್ಧಿಶಕ್ತಿ, ಮತ್ತು ಹೃದಯಕ್ಕೆ ಸ್ಪಷ್ಟವಾದ ಸತ್ಯವನ್ನು ಅಹಂಕಾರ, ಅಸೂಯೆ, ಕೃತಘ್ನತೆ ಅಥವಾ ದುರಾಸೆಯಿಂದಾಗಿ, ಜಾಣ್ಮೆಯಿಂದ ಹಾಗೂ ಇಚ್ಛಾಪೂರ್ವಕವಾಗಿ ತಿರಸ್ಕರಿಸುವವನು ಎಂದಾಗಿದೆ.
ಕುರ್ಆನ್ನ ದೃಷ್ಟಿಯಲ್ಲಿ ‘ಕುಫ್ರ್’ ಕೇವಲ ನಂಬಿಕೆಯ ಮಟ್ಟಕ್ಕೆ ಮಾತ್ರ ಸೀಮಿತವಾಗಿಲ್ಲ; ದೈವಿಕ ಆದೇಶಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯೂ ಅದೇ ರೀತಿಯ ನಿರಾಕರಣೆಯಾಗಿದೆ. ಈ ಆಳವಾದ ಅರ್ಥವನ್ನು ಅರಿತುಕೊಳ್ಳುವುದರಿಂದ ಕುರ್ಆನ್ನ ಸಂಕೀರ್ಣ ಪರಿಕಲ್ಪನೆಗಳನ್ನು ನಿಖರವಾಗಿ ಅರ್ಥಮಾಡಿಕೊಳ್ಳಬಹುದು ಮತ್ತು ಇಂತಹ ಪಾರಿಭಾಷಿಕಗಳನ್ನು ದುರುಪಯೋಗಪಡಿಸಿ ಸಮಾಜದಲ್ಲಿ ವಿಭಜನೆ ಉಂಟುಮಾಡುವವರ ಕುಯುಕ್ತಿಗಳನ್ನು ವಿಫಲಗೊಳಿಸಬಹುದು.
(ಲೇಖಕರು, ಔರಾ ಇಂಗ್ಲಿಷ್ ಆನ್ಲೈನ್ ಮ್ಯಾಗಸಿನ್ನ ಪ್ರಧಾನ ಸಂಪಾದಕರು ಮತ್ತು ಜಮಾಅತೆ ಇಸ್ಲಾಮೀ ಹಿಂದ್ ಮಹಿಳಾ ವಿಭಾಗದ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು)
IslamKannada News Portal
