✍️ ಮದೀಹಾ ನಿದಾ, ರಾಜಮಂಡ್ರಿ
ಅನುವಾದ ಮುಖಾರ್ ಅಹ್ಮದ್
ಮಾನವ ಜ್ಞಾನದ ಅನಾವರಣದೊಂದಿಗೆ, ಬ್ರಹ್ಮಾಂಡದ ಬಗ್ಗೆ ಅನೇಕ ಸತ್ಯಗಳು ತಡವಾಗಿ ಬೆಳಕಿಗೆ ಬಂದವು. ಈಗ ನಾವು ಸ್ಫೋಟಗೊಳ್ಳುವ ಆಕಾಶ ಗಂಗೆಗಳು, ವಿಸ್ತರಿಸುವ ಬಾಹ್ಯಾಕಾಶ, ಸೂಕ್ಷ್ಮ ಕೋಶಗಳು ಮತ್ತು ಗುಪ್ತ ಗಡಿಗಳನ್ನು ಹೊಂದಿರುವ ಸಾಗರಗಳ ಬಗ್ಗೆ ಮಾತನಾಡುತ್ತೇವೆ.
ವಿಜ್ಞಾನವು ಈ ಆವಿಷ್ಕಾರಗಳಿಗೆ ಹೆಸರುಗಳು, ಸಿದ್ದಾಂತಗಳು ಮತ್ತು ಅಳತೆಗಳನ್ನು ನೀಡಿದೆ. ಆದರೂ, ಈ ಸತ್ಯಗಳಲ್ಲಿ ಹಲವು ಹದಿನಾಲ್ಕು ಶತಮಾನಗಳಿಗೂ ಹಿಂದೆ ಕುರ್ಆನ್ನಲ್ಲಿ ಮಾನವ ಮನಸ್ಸನ್ನು ಜಾಗ್ರತೆಗೊಳಿಸುವ ಚಿಹ್ನೆಗಳಾಗಿ ಇದ್ದವು ಎಂಬುದು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ.
ಕುರ್ಆನ್ ವಿಜ್ಞಾನವನ್ನು ನಂಬಿಕೆಗೆ ಪ್ರತಿಸ್ಪರ್ಧಿ ಎಂದು ಪ್ರಸ್ತುತಪಡಿಸುವುದಿಲ್ಲ. ಬದಲಾಗಿ, ಅದು ತಫಕ್ಕುರ್ಗೆ (ಆಳವಾದ ಚಿಂತನೆ) ಆಹ್ವಾನಿಸುತ್ತದೆ. ಕುರ್ಆನ್ ಪ್ರಕಾರ, ವಿಶ್ವವನ್ನು ಅರ್ಥಮಾಡಿಕೊಳ್ಳುವುದು ಕೇವಲ ಬೌದ್ಧಿಕ ಅಭ್ಯಾಸವಲ್ಲ, ಇದು ನಂಬಿಕೆ ಮತ್ತು ಜ್ಞಾನದೊಂದಿಗೆ ಅಲ್ಲಾಹನ ಶಕ್ತಿ (ಖುದ್ರತ್) ಮತ್ತು ಪರಿಪೂರ್ಣ ಯೋಜನೆಯನ್ನು (ತದ್ಬೀರ್) ಗುರುತಿಸುವ ಆಧ್ಯಾತ್ಮಿಕ ಪ್ರಯಾಣವಾಗಿದೆ.
ಬ್ರಹ್ಮಾಂಡದ ಆರಂಭ: ಮಹಾ ಸ್ಫೋಟ
ಆಧುನಿಕ ವಿಜ್ಞಾನವು ವಿಶ್ವಕ್ಕೆ ಒಂದು ಆರಂಭವಿತ್ತು ಎಂಬುದನ್ನು ದೃಢಪಡಿಸುತ್ತದೆ. ಬಿಗ್ಬ್ಯಾಂಗ್ ಸಿದ್ಧಾಂತವು ವಿವರಿಸುವ ಪ್ರಕಾರ, ಎಲ್ಲವೂ – ಸಮಯ, ಸ್ಥಳ, ವಸ್ತು – ಎಲ್ಲವೂ ಮೊದಲು ಒಂದೇ ಸಾಂದ್ರಮೂಲದಿಂದ ಹೊರಹೊಮ್ಮಿತು.
ಈ ವಾಸ್ತವವನ್ನು ಪವಿತ್ರ ಕುರ್ಆನ್ ಬಹಳ ಸ್ಪಷ್ಟವಾಗಿ ಹೇಳುತ್ತದೆ: “ಆಕಾಶಗಳೂ ಭೂಮಿಯೂ ಕೂಡಿಕೊಂಡಿದ್ದು ಅನಂತರ ನಾವು ಅವುಗಳನ್ನು ಬೇರ್ಪಡಿಸಿದ್ದನ್ನು ಅವರು ಕಾಣಲಿಲ್ಲವೇ?” (ಪವಿತ್ರ ಕುರ್ಆನ್- 21: 30)
‘ರತ್ಕ್’ ಎಂಬ ಪದದ ಅರ್ಥ ಒಟ್ಟಿಗೆ ಬೆಸೆದುಕೊಂಡಿರುವ ಅಥವಾ ಮುಚ್ಚಿದ ವಸ್ತು. ಅದೇವೇಳೆ ʻಫತಕ್’ ಎಂದರೆ ವಿಭಜನೆ ಅಥವಾ ತೆರೆಯುವುದು ಎಂದರ್ಥ. ಈ ವಚನವು ಯಾವುದೇ ವೈಜ್ಞಾನಿಕ ಸೂತ್ರವನ್ನು ಪ್ರಸ್ತುತಪಡಿಸುವುದಿಲ್ಲವಾದರೂ ಒಂದು ಪರಿಕಲ್ಪನೆಯನ್ನು ಪ್ರಸ್ತುತ ಪಡಿಸುತ್ತದೆ. ವಿಶ್ವವು ಶಾಶ್ವತ ಅಥವಾ ಆಕಸ್ಮಿಕವಲ್ಲ, ಒಂದು ಉದ್ದೇಶದಿಂದ ಪ್ರಾರಂಭವಾಯಿತು ಎಂಬುದನ್ನು ಹೇಳುತ್ತದೆ.
ಈ ವಚನವು ಕುರುಡು ಸ್ವೀಕಾರವನ್ನಲ್ಲ, ಬದಲಾಗಿ `ತಫಕ್ಕುರ್’ ಕಡೆಗೆ ಆಹ್ವಾನಿಸುತ್ತದೆ. ಇದು ಬ್ರಹ್ಮಾಂಡದ ಆರಂಭವು ಉದ್ದೇಶಪೂರ್ವಕವಾಗಿದೆ ಎಂದು ಕಲಿಸುತ್ತದೆ. ಜ್ಞಾನ ಮತ್ತು ಯುಕ್ತಿಯನ್ನು (ಹಿಕ್ಮ) ಹೊಂದಿರುವ ಸೃಷ್ಟಿಕರ್ತನ ಕಡೆಗೆ ಸೂಚಿಸುತ್ತದೆ.
ಬ್ರಹ್ಮಾಂಡದ ವಿಸ್ತರಣೆ
ಆಧುನಿಕ ವಿಜ್ಞಾನವು ವಿಶ್ವವು ಇನ್ನೂ ವಿಸ್ತರಿಸುತ್ತಿದೆ ಎಂದು ದೃಢಪಡಿಸುತ್ತದೆ. ಕುರ್ಆನ್ ಈ ವಿಸ್ತರಣೆಯನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ:
“ನಾವು ಈ ವಿಶ್ವವನ್ನು ಮಹಾ ಶಕ್ತಿಯಿಂದ ನಿರ್ಮಿಸಿದ್ದೇವೆ ಮತ್ತು ನಾವು ಅದನ್ನು ಖಂಡಿತವಾಗಿಯೂ ವಿಸ್ತರಿಸುತ್ತಿದ್ದೇವೆ.” (ಕುರ್ಆನ್- 51: 47)
ಈ ವಚನವು ನಿರಂತರ ವಿಸ್ತರಣೆಯ ಬಗ್ಗೆ ಮಾತನಾಡುತ್ತದೆ. ಪ್ರತಿ ಕ್ಷಣವೂ ಅಲ್ಲಾಹನ ಇಚ್ಛೆಯಿಂದ ಪೋಷಿಸಲ್ಪಡುವ ಒಂದು ವಿಶ್ವ ಸೃಷ್ಟಿಯು ತನ್ನದೇ ಆದ ನೆಲೆಯಲ್ಲಿ ನಡೆಯುತ್ತಿಲ್ಲ, ಬದಲಾಗಿ ಅಲ್ಲಾಹನ ಶಕ್ತಿ ಮತ್ತು ತದ್ಬೀರ್ (ಪರಿಪೂರ್ಣ ಕ್ರಮ) ಪ್ರಕಾರ ಅಸ್ತಿತ್ವದಲ್ಲಿದೆ ಎಂದು ಇದು ಕಲಿಸುತ್ತದೆ.
ಅಲ್ಲಾಹನ ಆಜ್ಞೆಯಿಂದ ವಿಶ್ವವು ವಿಸ್ತರಿಸುತ್ತಿದೆ ಎಂದು ಅರಿತುಕೊಳ್ಳುವುದು ನಂಬಿಕೆಯನ್ನು ಪುನರ್ರೂಪಿಸುತ್ತದೆ. ಅಲ್ಲಾಹನು ವಿಶ್ವದಿಂದ ದೂರವಿಲ್ಲ, ಅವನು ಅಲ್ ಖಯ್ಯೂಮ್ – ಪ್ರತಿಯೊಂದು ಪರಮಾಣು, ಪ್ರತಿಯೊಂದು ನಕ್ಷತ್ರ, ಪ್ರತಿಯೊಂದು ಚಲನೆಯನ್ನು ನಡೆಸಿಕೊಳ್ಳುವವನು ಆಗಿದ್ದಾನೆ.
ಮಾನವ ಸೃಷ್ಟಿ ಮತ್ತು ಬೆಳವಣಿಗೆ
ಮಾನವ ಸೃಷ್ಟಿಯ ಕುರಿತಾದ ಕುರ್ಆನಿನ ವಿವರಣೆಯು ವೈಜ್ಞಾನಿಕ ನಿಖರತೆಯನ್ನು ಒಳನೋಟದೊಂದಿಗೆ ಸಂಯೋಜಿಸುತ್ತದೆ:
“ತರುವಾಯ ಅದನ್ನು ಒಂದು ಸುರಕ್ಷಿತ ಸ್ಥಳದಲ್ಲಿ ತೊಟ್ಟಿಕ್ಕಿದ ಹನಿಯಾಗಿ ಇರಿಸಿದೆವು.” (ಕುರ್ಆನ್- 23: 13)
‘ನುತ್ಫಹ್’ ಎಂದರೆ ವೀರ್ಯ- ಚಿಕ್ಕದು ಮತ್ತು ದುರ್ಬಲವಾದದ್ದು. ಪ್ರತಿಯೊಬ್ಬ ಮನುಷ್ಯನು ಜೀವನವನ್ನು ಸಂಪೂರ್ಣವಾಗಿ ಅಲ್ಲಾಹನ ಮೇಲೆ ಅವಲಂಬಿತವಾಗಿ ಪ್ರಾರಂಭಿಸುತ್ತಾನೆ.
ನಂತರ ಕುರ್ಆನ್ ಮುಂದುವರಿಯುತ್ತದೆ: “ಅನಂತರ ಆತನಿಗೆ ಮಾಂಸ ಪಿಂಡದ ರೂಪ ಕೊಟ್ಟೆವು. ಬಳಿಕ ಮಾಂಸ ಪಿಂಡವನ್ನು ಮಾಂಸ ಖಂಡವನ್ನಾಗಿ ಮಾಡಿದೆವು. ಆ ಮೇಲೆ ಮಾಂಸ ಖಂಡವನ್ನು ಎಲುಬುಗಳಾಗಿ ಮಾಡಿದೆವು. ತರುವಾಯ ಎಲುಬುಗಳ ಮೇಲೆ ಮಾಂಸ ತೊಡಿಸಿದೆವು. ಆ ಬಳಿಕ ಅದನ್ನೊಂದು ಬೇರೆಯೇ ಸೃಷ್ಟಿಯನ್ನಾಗಿ ಮಾಡಿ ನಿಲ್ಲಿಸಿದೆವು. ಅಲ್ಲಾಹನು ಮಹಾ ಸಮೃದ್ಧನು; ಸಕಲ ಶಿಲ್ಪಿಗಳಿಗಿಂತ ಶ್ರೇಷ್ಠ ಶಿಲ್ಪಿ.” (ಕುರ್ಆನ್- 23-14)
ಅಲಖಾ’ ಎಂದರೆ ಅಂಟಿಕೊಳ್ಳುವ ವಸ್ತು. ವಿಜ್ಞಾನವು ಇದನ್ನು ಗರ್ಭಕ್ಕೆ ಅಂಟಿಕೊಳ್ಳುವ ಭ್ರೂಣ ಎಂದು ಕರೆಯುತ್ತದೆ. ಕುರ್ಆನ್ ಇದನ್ನು ವೈಜ್ಞಾನಿಕ ಪುರಾವೆಯಾಗಿ ಅಲ್ಲ, ಬದಲಾಗಿ ಪ್ರತಿಬಿಂಬದ ಅಂಶವಾಗಿ ಪ್ರಸ್ತುತಪಡಿಸುತ್ತದೆ. ಪ್ರತಿಯೊಬ್ಬ ಮನುಷ್ಯನು ಚಿಕ್ಕದಾಗಿ, ಅವಲಂಬಿತನಾಗಿ ಮತ್ತು ಪ್ರಪಂಚದಿಂದ ಕಾಣದಂತೆ ಪ್ರಾರಂಭಿಸುತ್ತಾನೆ- ಆದರೆ ಅಲ್ಲಾಹನಿಂದ ಸಂಪೂರ್ಣವಾಗಿ ತಿಳಿದಿದ್ದಾನೆ.
ಮುಂದಿನ ಹಂತಗಳು- ಮೂಳೆಗಳು, ಸ್ನಾಯುಗಳು ಮತ್ತು ಮಾಂಸದ ರಚನೆ- ಇದು ಆಧುನಿಕ ಭ್ರೂಣ ಶಾಸ್ತ್ರವನ್ನು ಪ್ರತಿಬಿಂಬಿಸುತ್ತವೆ. ಈ ವಿವರಣೆಗಳು ನಮ್ಮ ಸೃಷ್ಟಿಯಲ್ಲಿನ ಪವಾಡ ಮತ್ತು ಪ್ರತಿಯೊಂದು ಜೀವದ ಹಿಂದಿನ ಸೂಕ್ಷ್ಮ ಯೋಜನೆಯನ್ನು ನಮಗೆ ನೆನಪಿಸುತ್ತವೆ.
ಪರ್ವತಗಳು: ಭೂಮಿಯ ಸ್ಥಿರತೆ
ಆಧುನಿಕ ಭೂ ವಿಜ್ಞಾನವು ಪರ್ವತಗಳು ಭೂಮಿಯ ಹೊರ ಪದರವನ್ನು ಸ್ಥಿರಗೊಳಿಸುವ ಆಳವಾದ ಬೇರುಗಳನ್ನು ಹೊಂದಿವೆ ಎಂದು ದೃಢಪಡಿಸುತ್ತದೆ.
ಕುರ್ಆನ್ ಹೇಳುತ್ತದೆ, “ಪರ್ವತಗಳನ್ನು ಮೊಳೆಗಳಂತೆ ನಾಟಿ ಬಿಟ್ಟಿರುವುದು.” (78: 7)
ಪರ್ವತಗಳು ನೆಲದ ಆಳಕ್ಕೆ ತೂರಿಕೊಂಡು ಅದರ ಮೇಲೇರುತ್ತವೆ. ಅವು ಸಮತೋಲನ, ರಚನೆ ಮತ್ತು ವಿನ್ಯಾಸದ ಸಂಕೇತಗಳಾಗಿವೆ. ಜಗತ್ತು ಅಸ್ತವ್ಯಸ್ತವಾಗಿಲ್ಲ, ಅದು ಸೃಷ್ಟಿಕರ್ತನು ನಿಗದಿಪಡಿಸಿದ ನಿಖರವಾದ ನಿಯಮಗಳನ್ನು ಅನುಸರಿಸುತ್ತದೆ ಅನ್ನುವುದು ಇದರಿಂದ ಗೊತ್ತಾಗುತ್ತದೆ.
ಜಲಚಕ್ರ: ಅಳತೆ ಮತ್ತು ನಿಯಂತ್ರಿತ ವ್ಯವಸ್ಥೆ
ಭೂಮಿಯು ಗೊತ್ತು ಗುರಿಯಿಲ್ಲದೆ ಚಲಿಸುವುದಿಲ್ಲ. ಅದು ನಿಖರವಾದ ವ್ಯವಸ್ಥೆಯನ್ನು ಅನುಸರಿಸುತ್ತದೆ – ಸಮುದ್ರಗಳು ಮತ್ತು ಸಾಗರಗಳಿಂದ ಆವಿಯಾಗುವಿಕೆ, ಮೋಡಗಳ ರಚನೆ, ಮಳೆ, ಮಣ್ಣಿನಲ್ಲಿ ಹೀರಿಕೊಳ್ಳುವಿಕೆ ಮತ್ತು ನದಿಗಳು ಇತ್ಯಾದಿಗಳು ಆಧುನಿಕ ವಿಜ್ಞಾನವು ಇದನ್ನು ಜಲಚಕ್ರ ಎಂದು ಕರೆಯುತ್ತದೆ. ಆದರೆ ಮಾನವರು ಅದರ ಕಾರ್ಯ ವಿಧಾನವನ್ನು ಅರ್ಥ ಮಾಡಿಕೊಳ್ಳುವ ಮೊದಲೇ ಕುರ್ಆನ್ ಅದರ ಸಮತೋಲನವನ್ನು ವಿವರಿಸಿದೆ.
“ನಾವು ಆಕಾಶದಿಂದ ನಿರ್ದಿಷ್ಟ ಪ್ರಮಾಣದಲ್ಲಿ ನೀರನ್ನು ಇಳಿಸುವೆವು ಹಾಗೂ ಅದನ್ನು ಭೂಮಿಯಲ್ಲಿ ಉಳಿಸುವೆವು.” (23: 18)
ಇಲ್ಲಿ ಬಿ-ಖದರ್ (ನಿಖರವಾದ ಅಳತೆಯಲ್ಲಿ) ಎಂಬ ಪವಿತ್ರ ಕುರ್ಆನಿನ ನುಡಿಗಟ್ಟು ನಿರ್ಣಾಯಕವಾಗಿದೆ. ಮಳೆಯು ಅಂತ್ಯವಿಲ್ಲದೆ ಬೀಳುವುದಿಲ್ಲ ಅಥವಾ ಕಾರಣವಿಲ್ಲದೆ ತಡೆ ಹಿಡಿಯಲ್ಪಡುವುದಿಲ್ಲ. ಅತಿಯಾದ ಮಳೆಯು ವಿನಾಶಕ್ಕೆ ಕಾರಣವಾಗುತ್ತದೆ. ಬದುಕುಳಿಯುವಿಕೆಯು ಕಾಕತಾಳೀಯವಲ್ಲ. ಅಲ್ಲಾಹನು ವಿನ್ಯಾಸಗೊಳಿಸಿದ ನಿಯಂತ್ರಿತ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿದೆ ಎಂದು ತೋರಿಸಲು ಕುರ್ಆನ್ ಈ ಸಮತೋಲನವನ್ನು ಎತ್ತಿ ತೋರಿಸುತ್ತದೆ.
ಅಂತರ್ಜಲ ಸಂಗ್ರಹಗಳು, ಬುಗ್ಗೆಗಳು ಮತ್ತು ನದಿಗಳು ಪ್ರಕೃತಿಯ ಆಕಸ್ಮಿಕ ಘಟನೆಗಳಲ್ಲ. ಅವು ಕೃಷಿ, ಪರಿಸರ ವ್ಯವಸ್ಥೆಗಳು ಮತ್ತು ಮಾನವ ಜೀವವನ್ನು ಉಳಿಸಿಕೊಳ್ಳುವ ನಿರಂತರ ಚಕ್ರದ ಭಾಗವಾಗಿದೆ. ಈ ವಚನವು ಅತ್ಯಂತ ಸಾಮಾನ್ಯವಾದ ಅನುಗ್ರಹವಾಗಿರುವ ನೀರು ಸಹ ದೈವಿಕ ಕ್ರಮದಿಂದ ನಿಯಂತ್ರಿಸಲ್ಪಡುತ್ತದೆ ಎಂದು ನೆನಪಿಸುತ್ತದೆ. ಈ ಸಮತೋಲನವು ತೊಂದರೆಗೊಳಗಾದಾಗ ಮಾನವ ಶಕ್ತಿಯು ದುರ್ಬಲವಾಗುತ್ತದೆ, ನಿಯಂತ್ರಣದ ಮಿತಿಗಳನ್ನು ಮತ್ತು ಅವಲಂಬನೆಯ ವಾಸ್ತವಿಕತೆಯನ್ನು ಇದು ಬಹಿರಂಗ ಪಡಿಸುತ್ತದೆ.
ಜೇನುನೊಣಗಳ ಯುಕ್ತಿ
ಆಳವಾದ ಪಾಠಗಳನ್ನು ಕಲಿಸಲು ಅಲ್ಲಾಹನು ತನ್ನ ಸೃಷ್ಟಿಗಳ ಉದಾಹರಣೆ ನೀಡುತ್ತಾನೆ.
“ನಿಮ್ಮೊಡೆಯನು, ಜೇನು ನೊಣಗಳಿಗೆ (ಹೀಗೆಂದು) ದಿವ್ಯ ಸಂದೇಶವನ್ನು ನೀಡಿದನು: ಪರ್ವತಗಳಲ್ಲಿ, ಮರಗಳಲ್ಲಿ ಮತ್ತು ಜನರು ನಿರ್ಮಿಸುವ ಚಪ್ಪರಗಳಲ್ಲೂ ನಿಮ್ಮ ಗೂಡುಗಳನ್ನು ನಿರ್ಮಿಸಿ.” (16: 68)
ಜೇನು ನೊಣವು ಮನಬಂದಂತೆ ಕಾರ್ಯ ನಿರ್ವಹಿಸುವುದಿಲ್ಲ. ಅದು ದೈವಿಕ ಮಾರ್ಗದರ್ಶನವನ್ನು ಅನುಸರಿಸುತ್ತದೆ. ನಿಖರವಾದ ಮನೆಗಳನ್ನು ನಿರ್ಮಿಸುವುದು, ವಿವಿಧ ಮೂಲಗಳಿಂದ ಸಿಹಿ ಸಂಗ್ರಹಿಸುವುದು ಮತ್ತು ಗುಣ ಪಡಿಸುವ ಜೇನು ತುಪ್ಪವನ್ನು ಉತ್ಪಾದಿಸುವುದು. ಇದು ಸೃಷ್ಟಿಯಲ್ಲಿ ಅಲ್ಲಾಹನು ಇರಿಸಿದ ನಿಝಾಮ್ (ಪರಿಪೂರ್ಣ ಕ್ರಮ)ವನ್ನು ಪ್ರತಿಬಿಂಬಿಸುತ್ತದೆ.
ಸಮುದ್ರಗಳ ನಡುವಿನ ತಡೆಗಳು
ವಿಶ್ವದ ಸಾಗರಗಳಲ್ಲಿನ ಅತ್ಯಂತ ಗುಮನಾರ್ಹ ವಿದ್ಯಮಾನವೆಂದರೆ ವಿವಿಧ ಜಲರಾಶಿಗಳ ನಡುವೆ ಅಡೆತಡೆಗಳ ಅಸ್ತಿತ್ವ. ಫೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾ ಸಾಗರಗಳಂತಹ ದೊಡ್ಡ ಸಾಗರಗಳು ಸಂಧಿಸುತ್ತವೆ. ಆದರೆ ಲವಣಾಂಶ, ತಾಪಮಾನ ಮತ್ತು ಸಾಂದ್ರತೆಯಲ್ಲಿ ವ್ಯತ್ಯಾಸಗಳು ಉಳಿದಿವೆ. ಏಕೆಂದರೆ ನೀರೊಳಗಿನ ಗಡಿಗಳು ಮತ್ತು ಪ್ರವಾಹಗಳು.
“ಎರಡು ಸಮುದ್ರಗಳನ್ನು ಸೇರಿಸಿಟ್ಟಿರುವವನು ಅವನೇ. ಒಂದು ರುಚಿಕರವೂ ಸಿಹಿಯೂ ಆಗಿದೆ. ಇನ್ನೊಂದು ಉಪ್ಪು, ಕಹಿಯೂ ಆಗಿದೆ. ಇವೆರಡರ ನಡುವೆ ಒಂದು ತೆರೆ ಇದೆ. ಅವು ಪರಸ್ಪರ ಬೆರೆಯದಂತೆ ಮಾಡುವ ಒಂದು ತಡೆಯಿದೆ.” (25: 53)
ಫೆಸಿಫಿಕ್ ಮತ್ತು ಅಟ್ಲಾಂಟಿಕ್ನಂತಹ ಸಾಗರಗಳು ವಿಲೀನಗೊಳ್ಳುವಂತೆ ಕಂಡು ಬರುವ ಸ್ಥಳಗಳಲ್ಲಿಯೂ ಸಹ, ಪೂರ್ಣ ಮಿಶ್ರಣವಾಗುವ ಭೌತಿಕ ಮತ್ತು ರಾಸಾಯನಿಕ ಗಡಿಗಳ ಉಪಸ್ಥಿತಿಯನ್ನು ವೈಜ್ಞಾನಿಕ ಸಂಶೋಧನೆಯು ದೃಢಪಡಿಸುತ್ತದೆ. ಕುರ್ಆನ್ ಈ ವಾಸ್ತವವನ್ನು ಬರ್ಝಖ್’ ಎಂಬ ಪದದೊಂದಿಗೆ ವಿವರಿಸುತ್ತದೆ. ಅದು ಗೋಚರಿಸದೆ ಇರುವ ಪ್ರತ್ಯೇಕತೆಯಾಗಿದೆ.
ಜ್ಞಾನ ಮತ್ತು ಅದರ ಮಿತಿಗಳು
ಕುರ್ಆನ್ ಕಲಿಕೆಯನ್ನು ಗೌರವಿಸುತ್ತದೆ, ಆದರೆ ಬೌದ್ಧಿಕ ದುರಹಂಕಾರದ ವಿರುದ್ಧ ಎಚ್ಚರಿಸುತ್ತದೆ:
“ಮತ್ತು ನೀವು ಜ್ಞಾನದ ಅಲ್ಪಾಂಶವನ್ನು ಮಾತ್ರ ಪಡೆದಿರುತ್ತೀರಿ.” (17:85)
ಮಾನವರು ಎಷ್ಟೇ ಸಂಶೋಧನೆ ಮಾಡಿಕೊಂಡರೂ ನಿಗೂಢತೆಗಳು ಉಳಿಯುತ್ತವೆ. ಈ ಮೇಲಿನ ವಚನವು ವಿವೇಚನೆಯನ್ನು ಸ್ವಯಂ ವಿನಾಶಕಾರಿಯಾಗದಂತೆ ರಕ್ಷಿಸುತ್ತದೆ. ಜ್ಞಾನವು ಸಮತೋಲನಕ್ಕೆ ಕಾರಣವಾಗಬೇಕು. ರಹಸ್ಯ (ಗೈಬ್) ನಿರಾಕರಣೆಗೆ ಅಲ್ಲವೆಂದು ಅದು ಕಲಿಸುತ್ತದೆ.
ನಂಬಿಕೆ ಮತ್ತು ವಿವೇಚನೆಯ ನಡುವೆ
ಕುರ್ಆನ್, ನಂಬಿಕೆ ಮತ್ತು ವಿವೇಚನೆಯನ್ನು ಜೊತೆಗಾರರು ಎಂದು ತೋರಿಸುತ್ತದೆ. ಪ್ರವಾದಿಗಳು ಪ್ರಶ್ನೆಗಳನ್ನು ಕೇಳಿದರು- ಪುರಾವೆಗಳನ್ನು ಹುಡುಕಿದರು ಮತ್ತು ಆಳವಾಗಿ ಚಿಂತಿಸಿದರು – ಪ್ರವಾದಿ ಇಬ್ರಾಹೀಮ್(ಅ) ನಕ್ಷತ್ರಗಳು, ಚಂದ್ರ ಮತ್ತು ಸೂರ್ಯನನ್ನು ಪ್ರಶ್ನಿಸಿದರು. ಅಥವಾ ಪ್ರವಾದಿ ಮೂಸಾ(ಅ) ಅಲ್ಲಾಹನ ಚಿಹ್ನೆಗಳನ್ನು ಹುಡುಕಿದರು.
ಕುತೂಹಲವು ಅವಿಶ್ವಾಸವಲ್ಲ, ಅದು ಮನವರಿಕೆ ಮಾಡಿಕೊಳ್ಳುವ ಮಾರ್ಗವಾಗಿದೆ. ಮನಸ್ಸು (ಅಕ್ಲ್) ಮತ್ತು ಹೃದಯ (ಖಲ್ಬ್) ಒಟ್ಟಾಗಿ ತೊಡಗಿಸಿಕೊಂಡಾಗ, ನಂಬಿಕೆಯು ಜೀವಂತಿಕೆಯಾಗುತ್ತದೆ.
ಕೊನೆಯದಾಗಿ
ಕುರ್ಆನ್ ಮಾನವ ಮನಸ್ಸನ್ನು ಸ್ವಿಚ್ ಆಫ್ ಮಾಡಲು ಹೇಳುವುದಿಲ್ಲ. ಅದನ್ನು ಎಚ್ಚರಿಕೆಯಿಂದ ನೋಡಲು ಅದು ಹೇಳುತ್ತದೆ. ಅದರ ವೈಜ್ಞಾನಿಕ ಚಿಹ್ನೆಗಳು ಸಂಶೋಧನೆಯನ್ನು ಬದಲಿಸಲು ಅಲ್ಲ, ಬದಲಾಗಿ ಸಂಶೋಧನೆಗೆ ಮಾರ್ಗದರ್ಶನ ನೀಡುತ್ತವೆ. ಜ್ಞಾನವು ವಿಸ್ತರಿಸಿದಂತೆ, ಈ ಕುರ್ಆನ್ ವಚನಗಳು ಆವಿಷ್ಕಾರಕ್ಕೆ ಪ್ರೋತ್ಸಾಹ ನೀಡುತ್ತಲೇ ಹೋಗುತ್ತದೆ. ನಂಬಿಕೆ ಮತ್ತು ವಿವೇಚನೆಯ ನಡುವೆ, ಕುರ್ಆನ್ ನಿರ್ದೇಶನವನ್ನು ನೀಡುತ್ತದೆ – ಅಲ್ಲಿ ಚಿಂತನೆಯು ನಂಬಿಕೆಗೆ ಕಾರಣವಾಗುತ್ತದೆ ಮತ್ತು ನಂಬಿಕೆಯು ತಿಳುವಳಿಕೆಯ ಮೇಲೆ ನಿಂತಿದೆ.
IslamKannada News Portal
