✍️ ಅಬ್ದುಲ್ಲತೀಫ್ ಆಲಿಯಾ
ಕುರ್ಆನಿನಲ್ಲಿ “ಕಾಫಿರ್” (كافر) ಎಂಬ ಪದವನ್ನು ಹಲವಾರು ಅರ್ಥಗಳಲ್ಲಿ ಬಳಸಲಾಗಿದೆ. ಇದರ ಮೂಲ ಅರ್ಥವೇನೆಂದರೆ – ಸತ್ಯ ಸ್ಪಷ್ಟವಾಗಿ ತಿಳಿದ ಮೇಲೂ ಅದನ್ನು ಜಾಣ್ಮೆಯಿಂದ ಮುಚ್ಚುವ ಅಥವಾ ನಿರಾಕರಿಸುವ ವ್ಯಕ್ತಿ. ಇದು ಯಾವುದೇ ಜಾತಿಯ ಹೆಸರು ಅಲ್ಲ, ಯಾವುದೇ ಧರ್ಮದ ಹೆಸರು ಅಲ್ಲ, ಹಾಗೆಯೇ ಎಲ್ಲ ಮುಸ್ಲಿಮೇತರರ ಮೇಲಿನ ಸಾಮಾನ್ಯ ಲೇಬಲ್ ಕೂಡ ಅಲ್ಲ. ಈ ಅರ್ಥವನ್ನು ಗಮನಿಸದೇ “ಕಾಫಿರ್” ಎಂಬ ಪದವನ್ನು ಸಾಮಾನ್ಯ ಅವಮಾನ ಅಥವಾ ಶತ್ರುತ್ವದ ಅರ್ಥದಲ್ಲಿ ಬಳಸುವುದು ಕುರ್ ಆನಿನ ಉದ್ದೇಶಕ್ಕೆ ವಿರುದ್ಧವಾಗಿದೆ.
ದುರ್ಭಾಗ್ಯವಶಾತ್, “ಕಾಫಿರ್ಗಳನ್ನು ವಧಿಸಿರಿ” ಎಂಬಂತೆ ಕೆಲವು ಆಯತ್ಗಳನ್ನು ಸಂದರ್ಭವಿಲ್ಲದೆ ಉಲ್ಲೇಖಿಸಿ, ಇಸ್ಲಾಂ ಅನ್ನು ಹಿಂಸಾತ್ಮಕ ಧರ್ಮವೆಂದು ಚಿತ್ರಿಸಲಾಗುತ್ತದೆ. ಆದರೆ ಕುರ್ಆನಿನಲ್ಲಿ ಯುದ್ಧ ಅಥವಾ ವಧೆಯ ಭಾಷೆ ಬಳಸಿರುವ ಆಯತ್ಗಳು ಬಹಳ ಕಡಿಮೆ ಮತ್ತು ಅವುಗಳೆಲ್ಲವೂ ನಿರ್ದಿಷ್ಟ ಇತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆಯಲ್ಲೇ ಅವತೀರ್ಣಗೊಂಡಿವೆ.
ಸೂರತ್ ಅಲ್-ಬಖರಾ 2:190–193: ಆತ್ಮರಕ್ಷಣೆಗೆ ನೀಡಿದ ಮೊದಲ ಅನುಮತಿ
ಸೂರತ್ ಅಲ್-ಬಖರಾ 2:190 ರಲ್ಲಿ ಅಲ್ಲಾಹ್ ಹೇಳುತ್ತಾನೆ:
“ನಿಮ್ಮ ವಿರುದ್ಧ ಯುದ್ಧ ಮಾಡುವವರ ವಿರುದ್ಧ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ; ಆದರೆ ಅತಿಕ್ರಮಿಸಬೇಡಿ. ಅಲ್ಲಾಹ್ ಅತಿಕ್ರಮಿಸುವವರನ್ನು ಪ್ರೀತಿಸುವುದಿಲ್ಲ.”
ಈ ಆಯತ್ ಬಹಳ ಮಹತ್ವದ್ದಾಗಿದೆ, ಏಕೆಂದರೆ ಇಲ್ಲಿ ಯುದ್ಧಕ್ಕೆ ಅನುಮತಿ ನೀಡಲಾಗಿದೆ ಆಕ್ರಮಣಕ್ಕಾಗಿ ಅಲ್ಲ, ಬದಲಾಗಿ ಆತ್ಮರಕ್ಷಣೆಗೆ ಮಾತ್ರ. ಜೊತೆಗೆ “ಅತಿಕ್ರಮಿಸಬೇಡಿ” ಎಂಬ ಕಟ್ಟುನಿಟ್ಟಾದ ನಿಯಮವನ್ನು ಕೂಡ ಹಾಕಲಾಗಿದೆ. 2:191 ರಲ್ಲೂ “ಅವರು ನಿಮಗೆ ಯುದ್ಧ ಮಾಡಿದ ಸ್ಥಳದಲ್ಲೇ ನೀವು ಅವರನ್ನು ಎದುರಿಸಿರಿ” ಎಂದು ಹೇಳಲಾಗಿದೆ – ಅಂದರೆ ಯುದ್ಧ ಆರಂಭಿಸಿದವರ ವಿರುದ್ಧ ಮಾತ್ರ.
ಈ ಆಯತ್ಗಳ ಅವತೀರ್ಣದ ಹಿನ್ನೆಲೆ ಏನೆಂದರೆ, ಮಕ್ಕಾದಲ್ಲಿ ಮುಸ್ಲಿಮರು ಸುಮಾರು 13 ವರ್ಷಗಳ ಕಾಲ ಭಾರೀ ಹಿಂಸೆಗೆ ಒಳಗಾಗಿದ್ದರು. ಹತ್ಯೆ, ಹಿಂಸೆ, ಸಾಮಾಜಿಕ ಬಹಿಷ್ಕಾರ ಮತ್ತು ಆಸ್ತಿ ಕಳೆದುಕೊಳ್ಳುವಿಕೆ ಸಾಮಾನ್ಯವಾಗಿತ್ತು. ಮದೀನಾಕ್ಕೆ ಹಿಜ್ರತ್ ಮಾಡಿದ ನಂತರವೂ ಅವರ ಮೇಲೆ ಯುದ್ಧವನ್ನು ಹೇರಲಾಯಿತು. ಇಂತಹ ಸಂದರ್ಭದಲ್ಲಿ ಮಾತ್ರ ಮೊದಲ ಬಾರಿಗೆ ಯುದ್ಧಕ್ಕೆ ಅನುಮತಿ ನೀಡಲಾಯಿತು.
ಸೂರತ್ ಅತ್-ತೌಬಾ 9:5: ಅತ್ಯಂತ ತಪ್ಪಾಗಿ ಅರ್ಥಮಾಡಿಕೊಳ್ಳುವ ಆಯತ್
ಸೂರತ್ ಅತ್-ತೌಬಾ 9:5 ಅನ್ನು “ಎಲ್ಲ ಕಾಫಿರ್ಗಳನ್ನು ಕೊಲ್ಲಿರಿ” ಎಂಬಂತೆ ಸಾಮಾನ್ಯ ಆದೇಶವಾಗಿ ಬಳಸಲಾಗುತ್ತದೆ. ಆದರೆ ಇದು ಕುರ್ ಆನಿನ ಅತಿ ಹೆಚ್ಚು ತಪ್ಪಾಗಿ ಉಲ್ಲೇಖವಾಗುವ ಆಯತ್ ಆಗಿದೆ. ಈ ಆಯತ್ ಅನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಅದರ ಮುಂಚಿನ ಮತ್ತು ನಂತರದ ಆಯತ್ಗಳನ್ನು ನೋಡಲೇಬೇಕು.
9:4 ರಲ್ಲಿ, “ಒಪ್ಪಂದವನ್ನು ಪಾಲಿಸಿದ ಮುಶ್ರಿಕರೊಂದಿಗೆ ನೀವು ಸಹ ಒಪ್ಪಂದವನ್ನು ಪಾಲಿಸಿರಿ” ಎಂದು ಹೇಳಲಾಗಿದೆ. 9:6 ರಲ್ಲಿ, “ಅವರಲ್ಲಿ ಯಾರಾದರೂ ರಕ್ಷಣೆ ಬೇಡಿದರೆ, ಅವನಿಗೆ ರಕ್ಷಣೆ ನೀಡಿ ಮತ್ತು ಅವನನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಿ” ಎಂದು ಆದೇಶಿಸಲಾಗಿದೆ. ಇದು ಯುದ್ಧದ ಮಧ್ಯೆಯಲ್ಲೂ ಮಾನವೀಯತೆ ಮತ್ತು ಕರುಣೆಗೆ ಆದ್ಯತೆ ನೀಡುತ್ತದೆ.
ಈ ಆಯತ್ಗಳ ಅವತೀರ್ಣದ ಹಿನ್ನೆಲೆ ಹುದೈಬಿಯ ಒಪ್ಪಂದವನ್ನು ಮುರಿದು, ಮುಸ್ಲಿಮರ ಮೇಲೆ ದಾಳಿ ಮಾಡಿದ ನಿರ್ದಿಷ್ಟ ಗುಂಪಿನ ಮುಶ್ರಿಕರು. ಆದ್ದರಿಂದ ಇದು ಎಲ್ಲಾ ಕಾಫಿರ್ಗಳಿಗೆ ವಿರುದ್ಧವಾದ ಸಾಮಾನ್ಯ ಅಥವಾ ಶಾಶ್ವತ ಆದೇಶವಲ್ಲ, ಬದಲಾಗಿ ಒಪ್ಪಂದಭಂಗ ಮಾಡಿ ಯುದ್ಧ ಪ್ರಾರಂಭಿಸಿದವರ ವಿರುದ್ಧ ಮಾತ್ರ ಸೀಮಿತವಾಗಿದೆ.
ಶಾಂತಿಗೆ ಆದ್ಯತೆ: ಕುರ್ ಆನಿನ ಮೂಲ ತತ್ವ
ಕುರ್ಆನಿನಲ್ಲಿ ಯುದ್ಧಕ್ಕಿಂತ ಶಾಂತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸೂರತ್ ಅಲ್-ಅನ್ಫಾಲ್ 8:61 ರಲ್ಲಿ,
“ಅವರು ಶಾಂತಿಗೆ ಒಲಿದರೆ, ನೀವೂ ಶಾಂತಿಗೆ ಒಲಿಯಿರಿ” ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದು ಯುದ್ಧ ನಡೆಯುತ್ತಿರುವಾಗಲೂ ಶಾಂತಿ ಸಾಧ್ಯವಾದರೆ ಅದನ್ನೇ ಆರಿಸಬೇಕೆಂಬ ಸಂದೇಶ ನೀಡುತ್ತದೆ.
ಸೂರತ್ ಅಲ್-ಹಜ್ಜ್ 22:39 ರಲ್ಲಿ, “ಅನ್ಯಾಯಕ್ಕೆ ಒಳಗಾದವರಿಗೆ ಯುದ್ಧಕ್ಕೆ ಅನುಮತಿ ನೀಡಲಾಗಿದೆ” ಎಂದು ಹೇಳಲಾಗಿದೆ. ಇದು ದಮನ ಮತ್ತು ಅಕ್ರಮದ ವಿರುದ್ಧ ಆತ್ಮರಕ್ಷಣೆಯ ಹಕ್ಕನ್ನು ಒತ್ತಿ ಹೇಳುತ್ತದೆ. 22:40 ರಲ್ಲಿ ಮಠಗಳು, ಚರ್ಚ್ಗಳು, ಸಿನಗಾಗ್ಗಳು ಮತ್ತು ಮಸೀದಿಗಳು ನಾಶವಾಗದಂತೆ ರಕ್ಷಿಸುವ ಉದ್ದೇಶವನ್ನು ಉಲ್ಲೇಖಿಸಲಾಗಿದೆ. ಇದರಿಂದ ಇಸ್ಲಾಂ ಎಲ್ಲಾ ಧರ್ಮಗಳ ಪೂಜಾ ಸ್ಥಳಗಳ ರಕ್ಷಣೆಯನ್ನು ಒಪ್ಪಿಕೊಳ್ಳುತ್ತದೆ ಎಂಬುದು ಸ್ಪಷ್ಟವಾಗುತ್ತದೆ.
ಯುದ್ಧಕ್ಕೂ ನಿಯಮಗಳಿವೆ: ಪ್ರವಾದಿ ﷺ ಅವರ ಆದೇಶಗಳು
ಪ್ರವಾದಿ ಮುಹಮ್ಮದ್ ﷺ ಅವರು ಯುದ್ಧದಲ್ಲಿಯೂ ಕಟ್ಟುನಿಟ್ಟಾದ ನೈತಿಕ ನಿಯಮಗಳನ್ನು ಪಾಲಿಸುವಂತೆ ಆದೇಶಿಸಿದ್ದರು. ಮಹಿಳೆಯರನ್ನು, ಮಕ್ಕಳನ್ನು, ವೃದ್ಧರನ್ನು ಕೊಲ್ಲಬಾರದು ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಬೆಳೆಗಳು, ಮರಗಳು, ಪೂಜಾಸ್ಥಳಗಳನ್ನು ನಾಶ ಮಾಡಬಾರದು ಎಂದು ಕೂಡ ಆದೇಶಿಸಿದ್ದಾರೆ. ಇದು ಇಸ್ಲಾಂ ಅಕ್ರಮ ಹಿಂಸೆಯನ್ನು ಯಾವತ್ತೂ ಅನುಮೋದಿಸುವುದಿಲ್ಲ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.
“ಕಾಫಿರ್(ಸತ್ಯ ನಿಷೇಧಿ) ಆದ್ದರಿಂದ ಕೊಲ್ಲಬೇಕು” ಎಂಬುದು ಕುರ್ ಆನಿನ ಸಂದೇಶವೇ ಅಲ್ಲ
ಬಹಳ ಮುಖ್ಯವಾದ ಸ್ಪಷ್ಟೀಕರಣವೆಂದರೆ – “ಕಾಫಿರ್ ಆದ್ದರಿಂದ ಕೊಲ್ಲಬೇಕು” ಎಂಬುದು ಕುರ್ಆನಿನ ಷರತ್ತು ರಹಿತ ಆದೇಶವೇ ಅಲ್ಲ. ಸೂರತ್ ಅಲ್-ಮುಮ್ತಹಿನಾ 60:8 ರಲ್ಲಿ, “ನಿಮ್ಮ ವಿರುದ್ಧ ಯುದ್ಧ ಮಾಡದವರೊಂದಿಗೆ ದಯೆ ಮತ್ತು ನ್ಯಾಯದಿಂದ ವರ್ತಿಸುವುದನ್ನು ಅಲ್ಲಾಹ್ ನಿಷೇಧಿಸುವುದಿಲ್ಲ” ಎಂದು ಹೇಳಲಾಗಿದೆ. ಹಾಗೆಯೇ 2:256 ರಲ್ಲಿ “ಧರ್ಮದಲ್ಲಿ ಬಲವಂತ ಇಲ್ಲ” ಎಂದು ಸ್ಪಷ್ಟವಾಗಿ ಘೋಷಿಸಲಾಗಿದೆ.
ಅಂತಿಮವಾಗಿ: ಕುರ್ ಆನಿನ ಮೂಲ ಸಂದೇಶ
“ಕಾಫಿರ್ಗಳನ್ನು ವಧಿಸಿರಿ” ಎಂಬಂತೆ ಕೇಳಿಸಿಕೊಳ್ಳುವ ಆಯತ್ಗಳು ಸಾರ್ವತ್ರಿಕ ಆದೇಶಗಳಲ್ಲ. ಅವು ನಿರ್ದಿಷ್ಟ ಯುದ್ಧ ಪರಿಸ್ಥಿತಿ, ಆತ್ಮರಕ್ಷಣೆ, ಒಪ್ಪಂದಭಂಗ ಮತ್ತು ನಿರಂತರ ದಾಳಿಗಳಂತಹ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿವೆ. ಉದಾಹರಣೆಗೆ ಒಂದು ದೇಶದ ಮೇಲೆ ಯಾವುದಾದರೂ ರಾಷ್ಟ್ರ ಅನ್ಯಾಯವಾಗಿ ಯುದ್ಧ ಸಾರಿದರೆ ಆ ಸಂದರ್ಭದಲ್ಲಿ ಆ ದೇಶದ ನಾಗರಿಕರು ಸಂರಕ್ಷಣೆಯ ಉದ್ದೇಶದಿಂದ ಈ ಆದೇಶವನ್ನು ಪಾಲಿಸಲು ಬಾಧ್ಯಸ್ಥರಲ್ಲವೇ? ಕುರ್ ಆನಿನ ಮೂಲ ಸಂದೇಶ ಶಾಂತಿ, ನ್ಯಾಯ, ಮಾನವ ಗೌರವ ಮತ್ತು ಧಾರ್ಮಿಕ ಸ್ವಾತಂತ್ರ್ಯವಾಗಿದೆ.
ಅಂತಿಮವಾಗಿ ಹೇಳಬೇಕಾದರೆ, ಕುರ್ ಆನನ್ನು ಒಂದು ಆಯತ್ನಿಂದಲ್ಲ, ಸಂಪೂರ್ಣ ಕುರ್ಆನಿನ ಬೆಳಕಿನಲ್ಲಿ ಅರ್ಥಮಾಡಿಕೊಳ್ಳಬೇಕು.ಅವತೀರ್ಣದ ಕಾರಣ ಹಾಗೂ ಸಂದರ್ಭಗಳನ್ನು ನೋಡದೆ ಆಯತ್ಗಳನ್ನು ಉಲ್ಲೇಖಿಸುವುದು ಸತ್ಯವನ್ನಲ್ಲ, ತಪ್ಪು ಕಲ್ಪನೆಗಳನ್ನು ಮಾತ್ರ ಹುಟ್ಟುಹಾಕುತ್ತದೆ.
IslamKannada News Portal
