Home / ವಾರ್ತೆಗಳು / ಅಝಾನ್‌ನಿಂದ ಶಬ್ದ ಮಾಲಿನ್ಯವಾಗುವುದಿಲ್ಲ; ಬಜರಂಗದಳ ನಾಯಕನ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್ 

ಅಝಾನ್‌ನಿಂದ ಶಬ್ದ ಮಾಲಿನ್ಯವಾಗುವುದಿಲ್ಲ; ಬಜರಂಗದಳ ನಾಯಕನ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್ 

ಮಸೀದಿಗಳಲ್ಲಿ ಅಝಾನ್‌ಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸುವಂತೆ ಕೋರಿ ಬಜರಂಗದಳದ ನಾಯಕ ಶಕ್ತಿಸಿಂಹ ಝಾಲಾ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದ್ದು, ಮನವಿಯನ್ನು ಸಂಪೂರ್ಣವಾಗಿ ತಪ್ಪುಕಲ್ಪನೆ ಎಂದು ಹೇಳಿದೆ.

ಧ್ವನಿವರ್ಧಕಗಳ ಮೂಲಕ ಅಝಾನ್‌ ಕೊಡುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಇದು ಜನರ ವಿಶೇಷವಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರ ಬಜರಂಗದಳದ ನಾಯಕ ಕೋರ್ಟ್‌ನಲ್ಲಿ ವಾದಿಸಿದ್ದರು.

ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಪಿ ಮಾಯೆ ಅವರ ವಿಭಾಗೀಯ ಪೀಠವು, ಅರ್ಜಿ ವಿಚಾರಣೆಯ ವೇಳೆ ದೇವಾಲಯದಲ್ಲಿ ಆರತಿ ಸಮಯದಲ್ಲಿ ಗಂಟೆ ಶಬ್ಧವು ಹೊರಗೆ ಕೇಳಿಸುವುದಿಲ್ಲವೇ ಎಂದ ಪೀಠವು, ಯಾವ ಆಧಾರದ ಮೇಲೆ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ ಎಂದು ಪ್ರಶ್ನಿಸಿದೆ.

ಅಝಾನ್‌ನ್ನು ದಿನದಲ್ಲಿ ಹೆಚ್ಚೆಂದರೆ 10 ನಿಮಿಷಗಳಂತೆ 5 ಬಾರಿ ಕೂಗಲಾಗುತ್ತದೆ. ಬೆಳಿಗ್ಗೆ ಧ್ವನಿವರ್ಧಕದ ಮೂಲಕ ಅಝಾನ್ ನೀಡುವ ಮಾನವ ಧ್ವನಿಯು ಶಬ್ದ ಮಾಲಿನ್ಯವನ್ನು ಹೇಗೆ ಉಂಟು ಮಾಡುತ್ತದೆ ಎಂದು ನಾವು ತಿಳಿಯಲು ವಿಫಲರಾಗಿದ್ದೇವೆ ಎಂದು ಕೋರ್ಟ್‌ ಹೇಳಿದೆ.

ನಾವು ಈ ರೀತಿಯ ಪಿಐಎಲ್‌ನ್ನು ಪರಿಗಣಿಸುತ್ತಿಲ್ಲ. ಇದು ವರ್ಷಗಳಿಂದ ನಡೆದುಕೊಂಡು ಬಂದಿರುವ ನಂಬಿಕೆ ಮತ್ತು ಆಚರಣೆಯಾಗಿದೆ. ಇದು 5-10 ನಿಮಿಷಗಳ ಕಾಲ ಇರುತ್ತದೆ. ಮುಂಜಾನೆ 3 ಗಂಟೆಗೆ ದೇವಸ್ಥಾನದಲ್ಲಿ, ಡ್ರಮ್ಸ್ ಮತ್ತು ಸಂಗೀತದೊಂದಿಗೆ ಬೆಳಿಗ್ಗೆ ಆರತಿ ಕೂಡ ಪ್ರಾರಂಭವಾಗುತ್ತದೆ. ಹಾಗಾದರೆ ಇದು ಯಾರಿಗೂ ಯಾವುದೇ ರೀತಿಯ ಶಬ್ದವನ್ನು ಉಂಟು ಮಾಡುವುದಿಲ್ಲವೇ? ಗಂಟೆಯ ಶಬ್ಧ ದೇವಾಲಯದ ಹೊರಗೆ ಕೇಳಿಸುವುದಿಲ್ಲವೇ ಎಂದು ಕೋರ್ಟ್‌ ಪ್ರಶ್ನಿಸಿದೆ.

ದಿನದ ಬೇರೆ ಬೇರೆ ಅವಧಿಗಳಲ್ಲಿ 10 ನಿಮಿಷಗಳ ಕಾಲ ಆಝಾನ್ ಕೂಗುವುದರಿಂದ ಉಂಟಾಗುವ ಶಬ್ದ ಮಾಲಿನ್ಯ ಕುರಿತು ವೈಜ್ಞಾನಿಕ ರೀತಿಯ ಆಧಾರ ಒದಗಿಸಲು ಅರ್ಜಿದಾರರು ವಿಫಲವಾಗಿದ್ದಾರೆ. ಹಾಗಾಗಿ ಇದು ಸಂಪೂರ್ಣ ತಪ್ಪು ತಿಳಿವಳಿಕೆಯಿಂದ ಕೂಡಿದೆ. ಈ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ’ ಎಂದು ಉಲ್ಲೇಖಿಸುತ್ತಾ ಗುಜರಾತ್ ಹೈಕೋರ್ಟ್‌ ಅರ್ಜಿಯನ್ನು ವಜಾಗೊಳಿಸಿದೆ.

 

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …