ಒಂದರ್ಥದಲ್ಲಿ ಯೋಚಿಸುವಾಗ ಸಮಯವೇ ಜೀವನ. ಆದ್ದರಿಂದಲೇ ಯಾರಾದರೂ ಮರಣಹೊಂದಿದವರ ಬಗ್ಗೆ ಮಾತಾಡುವಾಗ ‘ಏನೂ ಮಾಡಲಾಗದು, ಅವನ ಸಮಯ ಬಂದು ಬಿಟ್ಟಿತು’ ಅನ್ನುವುದು ಮತ್ತು ‘ಅವನ ಸಮಯ ಮುಗಿಯಿತು’ ಎಂದು ಮಾತಾಡುವುದು ಸಹಜ. ಹಾಗಾಗಿ ಸಮಯ ವ್ಯರ್ಥ ಮಾಡುವುದೆಂದರೆ ಜೀವನವನ್ನು ವ್ಯರ್ಥ ಮಾಡುವುದು ಎಂದೇ ಅರ್ಥ.
ಸಮಯದ ಬಗ್ಗೆ ಪ್ರವಾದಿ ವಚನ ಒಂದಿದೆ. “ನೀವು ಪ್ರತಿಯೊಬ್ಬರೂ ಸಮಯದ ಬಗ್ಗೆ ಪ್ರಶ್ನಿಸಲ್ಪಡುವಿರಿ.” ಆದ್ದರಿಂದ ನಿರರ್ಥಕ ಕಾರ್ಯಗಳಿಂದ ನಾವು ಮುಕ್ತರಾಗಬೇಕು. ಇಲ್ಲಿ ಪ್ರತಿಯೊಂದು ಶ್ವಾಸ ಕೂಡಾ ಅಮೂಲ್ಯವಾದದ್ದು.
ಒಬ್ಬ ವ್ಯಕ್ತಿಯ ಜೀವನದ ಕೊನೆಯ ಶ್ವಾಸಕ್ಕೆ ನಾವು ಸಾಕ್ಷಿ ಯಾದಾಗ ಈ ಒಂದು ಶ್ವಾಸಕ್ಕಿರುವ ಪ್ರಾಮುಖ್ಯತೆಯನ್ನು ನಮಗೆ ಅರ್ಥೈಸಿಕೊಳ್ಳಬಹುದು.
ಮಾಡಬೇಕಾದ ಕೆಲಸವನ್ನು ತಕ್ಷಣವೇ ಮಾಡುವುದು ಸಮಯದ ಅಥವಾ ಜೀವನದ ಸದುಪಯೋಗ ಎನ್ನಬಹುದು. ಅರಬಿ ಭಾಷೆಯಲ್ಲಿ ಒಂದು ಮಾತಿದೆ, “ಯಾರು ಬಾಗಿಲು ತಟ್ಟುತ್ತಾನೋ ಹಾಗೂ ತೆರೆಯಲು ಪ್ರಯತ್ನಿಸುತ್ತಾನೋ ಅವನು ಖಂಡಿತಾ ಒಳಗೆ ಪ್ರವೇಶಿಸುತ್ತಾನೆ.”
ಆದ್ದರಿಂದ ಸಮಯದ ಸದುಪಯೋಗದಿಂದ ಯಶಸ್ವೀ ಜೀವನದ ಬಾಗಿಲನ್ನು ತಟ್ಟಲು ಪ್ರಯತ್ನಿಸಬೇಕು. ಈ ಪ್ರಯತ್ನದಲ್ಲಿ ಉದುರುವ ಪ್ರತಿಯೊಂದು ಬೆವರ ಹನಿಯನ್ನು ಸೃಷ್ಟಿಕರ್ತನು ಮುತ್ತಾಗಿ ಪರಿವರ್ತಿಸುವನು.
ಸಮಯದ ಸದುಪಯೋಗ, ಜೀವನದ ಉದ್ದೇಶದ ಪ್ರಜ್ಞೆ, ಪರಿಶ್ರಮ, ನಿಶ್ಚಯದಾರ್ಢ್ಯ, ಸ್ಪೂರ್ತಿ ಮತ್ತು ಅವಲೋಕನ ಇವನ್ನು ನಾವು ಪಾಲಿಸಿದಾಗ ಯಶಸ್ಸು ಖಂಡಿತಾ ನಮ್ಮದಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಸೃಷ್ಟಿಕರ್ತನು ಅವನ ವಚನದಲ್ಲಿ ಸಮಯದ ಬಗ್ಗೆ ಆಣೆ ಹಾಕಿರುವುದನ್ನು ನಮಗೆ ಕಾಣಬಹುದು. ಹಾಗಾಗಿ ಸಮಯವೇ ಜೀವನ. ಸಮಯ ಕಳೆದರೆ ಜೀವನವು ಕಳೆದು ಹೋದಂತೆ. ಪ್ರತಿಯೊಬ್ಬರ ಜೀವನದಲ್ಲಿ ಅವರ ಸಮಯ ಎಂಬುದು ಖಂಡಿತಾ ಇದೆ.
ಕೊನೇಯದಾಗಿ ಒಂದು ಮಾತು, ಖಂಡಿತಾ ಕೆಟ್ಟ ಸಮಯ ಎಂಬುದು ಯಾರ ಜೀವನದಲ್ಲೂ ಇಲ್ಲ. ಎಲ್ಲಾ ಸಮಯವೂ ಒಳ್ಳೆಯ ಸಮಯವೇ. ಆದರೆ ಶುಭ ನಿರೀಕ್ಷೆ ಮಾತ್ರ ನಮ್ಮದಾಗಿರಬೇಕು.
ಯಾವುದನ್ನು ಕೆಟ್ಟ ಸಮಯವೆಂದು ನಾವು ವ್ಯಾಖ್ಯಾನಿಸುತ್ತೆವೆಯೋ ಅದು ಖಂಡಿತಾ ನಮ್ಮ ತಪ್ಪು ಕಲ್ಪನೆ. ವಿಶ್ವಾಸಿಯ ಪಾಲಿಗೆ ಎಲ್ಲಾ ಗಳಿಗೆಯೂ ಶುಭಗಳಿಗೆಯೇ ಆಗಿದೆ. ಆದ್ದರಿಂದ ನಮ್ಮ ಸಮಯವನ್ನು ನಮ್ಮ ಯಶಸ್ವೀ ಜೀವನಕ್ಕಾಗಿ ವಿನಿಯೋಗಿಸಬೇಕು.
✍️ರೈಹಾನ್ ವಿ. ಕೆ. ಸಚ್ಚೇರಿಪೇಟೆ
IslamKannada News Portal
