ನವದೆಹಲಿ: ದೆಹಲಿಯ ಗಲಭೆ ಪೀಡಿತರಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳು ಜಮಾಅತೆ ಇಸ್ಲಾಮಿ ಹಿಂದ್ ನ ನೇತೃತ್ವದಲ್ಲಿ ಭರದಿಂದ ಸಾಗಿದ್ದು, ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ನೇತೃತ್ವದ ತಂಡವು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಗಲಭೆಯ ಮೊದಲ ದಿನದಿಂದಲೇ ಜಮಾಅತ್ ಪೀಡಿತರನ್ನು ಭೇಟಿ ಮಾಡಿದೆ ಮತ್ತು ತುರ್ತು ಪರಿಹಾರವನ್ನು ನೀಡುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಲು ಪ್ರಯತ್ನಿಸಿದೆ. ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗಾಗಿ ಹಿರಿಯ ಜಮಾಅತ್ ನಾಯಕರ ತಂಡವನ್ನು ರಚಿಸಲಾಗಿದ್ದು, ಈ ತಂಡವು ಮುಸ್ತಾಬಾದ್ನ ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿತು. ಇದು ನೂರಾರು ಸಂತ್ರಸ್ತರ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಸ್ಪತ್ರೆಯಾಗಿದೆ. ಶಿವ್ ವಿಹಾರ್ ಕಾಲನಿಯು ಗಲಭೆಯಲ್ಲಿ ತೀವ್ರ ಹಾನಿಗೀಡಾದ ಪ್ರದೇಶವಾಗಿದೆ.
ಸಂತ್ರಸ್ತರ ಬದುಕು ದಯನೀಯವಾಗಿದ್ದು, ಕೆಲವೊಮ್ಮೆ 7 ರಿಂದ 8 ಕುಟುಂಬಗಳು ನಿರಾಶ್ರಿತರಾಗಿ ಒಂದೇ ಮನೆಯಲ್ಲಿ ವಾಸಿಸಬೇಕಾದ ಸ್ಥಿತಿಯಲ್ಲಿದ್ದಾರೆ. ಅವರಿಗೆ ತಕ್ಷಣ ಪುನರ್ವಸತಿ ಒದಗಿಸಬೇಕಾಗಿದೆ.
ಜಫ್ರಾಬಾದ್ ಈದ್ಗಾದಲ್ಲಿ ಸ್ಥಾಪಿಸಲಾಗುತ್ತಿರುವ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ ನಿಯೋಗವು ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿತು. ಇಲ್ಲಿ ಸುಮಾರು 2000 ಜನರು ಕುಳಿತುಕೊಳ್ಳುವಷ್ಟು ಸ್ಥಳಾವಕಾಶವಿದೆ. ಇಲ್ಲಿಗೆ ಅಗತ್ಯವಿರುವ ವಸ್ತುಗಳ ಪೂರೈಕೆಗೆ ಜಮಾಅತ್ ಸಹಾಯ ಮಾಡುತ್ತಿದೆ. ಅದೇ ರೀತಿ ಎನ್ಜಿಒಗಳು, ದೆಹಲಿ ಸರ್ಕಾರ ಮತ್ತು ಸ್ಥಳೀಯ ಜನರ ಸಹಯೋಗದೊಂದಿಗೆ, ಮುಸ್ತಾಬಾದ್ನ ಸ್ಥಳೀಯರು ಆಯೋಜಿಸಿದ್ದ ಶಾಂತಿ ಮೆರವಣಿಗೆಯಲ್ಲಿ ಜಮಾಅತ್ ಭಾಗವಹಿಸಿತಲ್ಲದೆ, ಡಾ. ಝಫರುಲ್ ಇಸ್ಲಾಮ್ ಖಾನ್ ನೇತೃತ್ವದ ತಂಡವು ದೆಹಲಿಯ ಅಲ್ಪಸಂಖ್ಯಾತ ಆಯೋಗವನ್ನು ಭೇಟಿ ಮಾಡಿ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದೆ.
ಇದೇ ವೇಳೆ, ಮಾತಾಡಿದ ಜಮಾಅತ್ ರಾಷ್ಟ್ರೀಯ ಅಧ್ಯಕ್ಷರಾದ ಸೈಯದ್ ಸಆದತುಲ್ಲಾ ಹುಸೇನಿಯವರು, ಗಲಭೆಕೋರರು ಯೋಜಿತವಾಗಿ ದಾಳಿ ನಡೆಸಿದ್ದಾರೆ. ಮುಸ್ಲಿಮರ ಆಸ್ತಿ ಪಾಸ್ತಿ ಮತ್ತು ಮಸೀದಿಯನ್ನು ಗುರಿಯಾಗಿರಿಸಿ ದಾಳಿ ನಡೆಸಲಾಗಿದೆ. ಗೋಕುಲ್ಪುರಿ ಟೈರ್ ಮಾರುಕಟ್ಟೆಗೆ ಬೆಂಕಿ ಹಚ್ಚಲಾಗಿದ್ದು, 200 ಕ್ಕೂ ಹೆಚ್ಚು ಅಂಗಡಿಗಳು ಸಂಪೂರ್ಣ ಬೂದಿಯಾಗಿವೆ. ಗರಿಷ್ಠ ಹಾನಿ ಉಂಟು ಮಾಡಲು ಗ್ಯಾಸ್ ಸಿಲಿಂಡರ್ಗಳನ್ನು ಬಳಸಲಾಗಿದೆ. ವಾಹನಗಳು ಮತ್ತು ಅಪಾರ್ಟ್ಮೆಂಟ್ಗಳನ್ನು ನಿರ್ಧಿಷ್ಟವಾಗಿ ಆಯ್ಕೆ ಮಾಡಿ ಉರಿಸಲಾಗಿದೆ. ಪೊಲೀಸರ ಪಾತ್ರ ಅತ್ಯಂತ ಕೆಟ್ಟದಾಗಿತ್ತು. ಅವರು ಉತ್ತಮ ವೀಕ್ಷಕರು ಮತ್ತು ಕೆಟ್ಟ ಸಹಯೋಗಿಗಳಾಗಿದ್ದರೇ ಹೊರತು ರಕ್ಷಕರಾಗಿರಲಿಲ್ಲ. ಬಲಿ ಪಶುಗಳು ಮತ್ತು ಬದುಕುಳಿದವರು ತೀವ್ರ ಆಘಾತಕ್ಕೊಳಗಾಗಿದ್ದಾರೆ ಮತ್ತು ಹತಾಶರಾಗಿದ್ದಾರೆ. ಅವರಿಗೆ ಕೌನ್ಸಿಲಿಂಗ್ ನ ಅಗತ್ಯವಿದೆ. ಸಕಾರಾತ್ಮಕ ಅಂಶವೆಂದರೆ, ಅನೇಕ ಸಂದರ್ಭಗಳಲ್ಲಿ, ಹಿಂದೂಗಳು ಮುಸ್ಲಿಮರ ಜೀವವನ್ನು ಉಳಿಸಿದ್ದಾರೆ. ಮಾತ್ರವಲ್ಲ, ಅವರ ಈ ನೆರವು ಈ ಗಲಭೆಯಲ್ಲಿ ಸ್ಥಳೀಯರು ಪಾಲ್ಗೊಂಡಿಲ್ಲ ಮತ್ತು ಹೊರಗಿನವರು ಬಂದು ಈ ಕ್ರೌರ್ಯ ಎಸಗಿದ್ದಾರೆ ಅನ್ನುವುದನ್ನು ಸೂಚಿಸುತ್ತದೆ ಎಂದವರು ಹೇಳಿದ್ದಾರೆ.
ಜಮಾಅತ್ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಅಹ್ಮದ್ ಅವರ ನೇತೃತ್ವದಲ್ಲಿ ಪರಿಹಾರ ಕಾರ್ಯಗಳು ನಡೆಯುತ್ತಿದ್ದು, ಈ ಕುರಿತಾಗಿ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿದ್ದೇವೆ. ಸಮೀಕ್ಷೆ ನಡೆಸುವುದು ಮತ್ತು ಹಾನಿಯ ಪ್ರಮಾಣವನ್ನು ನಿರ್ಣಯಿಸುವುದು, ಸರ್ಕಾರ ಘೋಷಿಸಿದ ಪ್ರಯೋಜನಗಳನ್ನು ಪಡೆಯಲು ಮತ್ತು ಸಂತ್ರಸ್ತರ ಕೌನ್ಸಿಲಿಂಗ್ ಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಹಾಗೆಯೇ ವೈದ್ಯಕೀಯ ನೆರವನ್ನೂ ನೀಡಬೇಕಾಗಿದೆ. ವೈದ್ಯಕೀಯ ಚಿಕಿತ್ಸೆ ಪಡೆಯದ ಅನೇಕ ಗಾಯಾಳುಗಳು ಈಗಲೂ ಇದ್ದಾರೆ. ಪೊಲೀಸರಿಗೆ ಹೆದರಿ ಅವರು ಆಸ್ಪತ್ರೆಗೆ ಹೋಗುತ್ತಿಲ್ಲ. ಅವರನ್ನು ಶುಶ್ರೂಷೆ ಮಾಡಬೇಕು ಅಥವಾ ಆಸ್ಪತ್ರೆಗಳಿಗೆ ಸಾಗಿಸಬೇಕಾಗಿದೆ.
ಹಾಗೆಯೇ, ಅಗತ್ಯವಿರುವವರಿಗಾಗಿ ತಾತ್ಕಾಲಿಕ ಆಸ್ಪತ್ರೆಯನ್ನೂ ಸ್ಥಾಪಿಸಿದ್ದೇವೆ. ಗಲಭೆಯಿಂದಾಗಿ ಅನೇಕರು ತಮ್ಮ ಜೀವನೋಪಾಯವಾದ ಕೆಲಸ, ವ್ಯವಹಾರವನ್ನು ಕಳೆದುಕೊಂಡಿದ್ದಾರೆ ಅವರೆಲ್ಲರಿಗೂ ಪುನರ್ವಸತಿ ಕಲ್ಪಿಸಬೇಕಾಗಿದೆ. ಅದೇವೇಳೆ, ಕಾನೂನಾತ್ಮಕ ಕೆಲಸಗಳಿವೆ. ಎಫ್ಐಆರ್ಗಳನ್ನು ನೋಂದಾಯಿಸುವ ಕೆಲಸ ಮತ್ತು ಕಾನೂನು ಕ್ರಮ ಜರುಗಿಸುವ ಅಗತ್ಯವೂ ಇದೆ. ಈ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯ ಪಾತ್ರ ವಹಿಸುತ್ತಿರುವ ಮಹಿಳೆಯರೂ ಸೇರಿದಂತೆ ಸ್ವಯಂ ಸೇವಕರ ತಂಡವನ್ನು ರಚಿಸಿದ್ದೇವೆ ಎಂದವರು ಹೇಳಿದ್ದಾರೆ. ಈ ಎಲ್ಲ ಚಟುವಟಿಕೆಗಳನ್ನು ನೋಡಿಕೊಳ್ಳುವುದಕ್ಕಾಗಿ ಸೈಯದ್ ಸದತುಲ್ಲಾ ಹುಸೇನಿ (ಅಧ್ಯಕ್ಷ), ಮುಹಮ್ಮದ್ ಜಾಫರ್ ಮತ್ತು ಸಲೀಮ್ ಎಂಜಿನಿಯರ್ (ಉಪಾಧ್ಯಕ್ಷರು), ರಾಷ್ಟ್ರೀಯ ಕಾರ್ಯದರ್ಶಿಗಳಾದ ಮುಹಮ್ಮದ್ ಅಹ್ಮದ್ ಮತ್ತು ಶಫಿ ಮದನಿ ಮತ್ತು ನದೀಮ್ ಖಾನ್ ರ ತಂಡವನ್ನು ರಚಿಸಲಾಗಿದೆ ಎಂದವರು ಹೇಳಿದ್ದಾರೆ.
IslamKannada News Portal

