Home / ವಾರ್ತೆಗಳು / ದ್ವೇಷದ ಗೋಡೆಯನ್ನು ಕೆಡವಿ ಭ್ರಾತೃತ್ವದ ಭಾರತವನ್ನು ಕಟ್ಟೋಣ- ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ| ಬೆಳಗಾಮಿ ಮುಹಮ್ಮದ್ ಸಾದ್ ಕರೆ

ದ್ವೇಷದ ಗೋಡೆಯನ್ನು ಕೆಡವಿ ಭ್ರಾತೃತ್ವದ ಭಾರತವನ್ನು ಕಟ್ಟೋಣ- ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ| ಬೆಳಗಾಮಿ ಮುಹಮ್ಮದ್ ಸಾದ್ ಕರೆ

ಸಿದ್ದಾಪುರ : ಮಾ 5: ಜಮಾಅತೆ ಇಸ್ಲಾಮೀ ಹಿಂದ್ ಕಳೆದ ಏಳು ದಶಕಗಳಿಂದ ದೇವನ ದಾಸರೆಂಬ ನೆಲೆಯಲ್ಲಿ ಜಾತಿ- ಧರ್ಮಗಳ ಬೇಧವಿಲ್ಲದೆ ಭಾರತೀಯರನ್ನು ಒಂದುಗೂಡಿಸಲು ಶಕ್ತಿ ಮೀರಿ ಪ್ರಯತ್ನಿಸಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ| ಮುಹಮ್ಮದ್ ಸಅದ್ ಬೆಳಗಾಮಿ ಹೇಳಿದ್ದಾರೆ. ಅವರು ಇಂದು ಸಿದ್ದಾಪುರದ ಎಂ.ಜಿ.ರಸ್ತೆಯ ಹಿರಾ ಸೆಂಟರ್ ಪ್ರಾಂಗಣದಲ್ಲಿ ಪೀಪಲ್ಸ್ ಫೌಂಡೇಶನ್ ಮತ್ತು ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ ಸಹಯೋಗದಲ್ಲಿ ಕಳೆದ ವರ್ಷದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರಿಗೆ ನಿರ್ಮಿಸಿ ನೀಡಲಾಗುವ 50 ಮನೆಗಳ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಪ್ರಕೃತಿ ವಿಕೋಪಕ್ಕೆ ಪ್ರಕೃತಿಯ ಮೇಲಿನ ಮಾನವನ ಹಸ್ತಕ್ಷೇಪವೂ ಒಂದು ಕಾರಣವಾಗಿದೆ. ಪ್ರಕೃತಿಯಲ್ಲಿ ಈ ಕಾರಣದಿಂದ ಹವಾಮಾನವೂ ಸೇರಿದಂತೆ ವಿವಿಧ ರೀತಿಯ ಅಸಮತೋಲನಗಳು ಉಂಟಾಗುತ್ತಿದೆ. ಪ್ರಕೃತಿಯನ್ನು ಸ್ವಾರ್ಥಕ್ಕಾಗಿ ನಾಶಪಡಿಸುವ ಪ್ರಕ್ರಿಯೆ ಕೊನೆಗೊಳ್ಳದಿದ್ದಲ್ಲಿ ಮುಂದೆ ವಿನಾಶ ಕಾಡುತ್ತದೆ. ಪ್ರಕೃತಿ ವಿಕೋಪಗಳು ಮನುಷ್ಯನ ನಿಸ್ಸಹಾಯಕತೆ ಮತ್ತು ಗೌಣತೆಯನ್ನು ಎತ್ತಿ ತೋರಿಸುತ್ತದೆ. ಜಮಾಅತ್ ಪ್ರಾರಂಭದ ದಿನದಿಂದಲೂ ಸಮಾಜ ಸೇವೆಯನ್ನು ತನ್ನ ಪ್ರಮುಖ ಧ್ಯೇಯಗಳಲ್ಲಿ ಒಂದೆ೦ದು ಪರಿಗಣಿಸಿದೆ. ಸಮಾಜವನ್ನು ಮೇಲೆತ್ತುವ ಕೆಲಸಕ್ಕೆ ನಾವು ಮುಂದಾಗುತ್ತೇವೆ. ಸಮಾಜದಲ್ಲಿ ನೈತಿಕತೆ ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಜಮಾಅತ್ ಶಿಕ್ಷಣ ಕ್ಷೇತ್ರದಲ್ಲಿ ಈ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿದೆ. ಎಲ್ಲರೂ ಗೌರವಯುತವಾದ ಬದುಕು ಸಾಗಿಸಬೇಕು ಎಂಬುದು ಜಮಾಅತ್‍ನ ಆಶಯ. ಜಾತಿಯ, ಧರ್ಮದ ಮತ್ತು ಪೌರತ್ವದ ಹೆಸರಿನಲ್ಲಿ ಸಮಾಜವನ್ನ ಒಡೆಯುವ ಕೆಲಸ ಆಗಬಾರದು” ಎಂದರು.

ಕೇರಳ ರಾಜ್ಯ ಉಪಾಧ್ಯಕ್ಷ ಪಿ.ಮುಜೀಬುರ್ರಹ್ಮಾನ್ ಶಂಕುಸ್ಥಾಪನಾ ಫಲಕವನ್ನು ಅನಾವರಣಗೊಳಿಸಿದರು. ರಾಜ್ಯ ಕಾರ್ಯದರ್ಶಿ ಅಕ್ಬರಲಿ ಉಡುಪಿ ದಿಕ್ಸೂಚಿ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ| ಸುಮನ್ ಡಿ.ಪನ್ನೇಕರ್ ನಾಗರಿಕ ಸೇವಾ ಕೇಂದ್ರದ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ವಸತಿ ಯೋಜನೆಗೆ ಭೂಮಿ ದಾನ ನೀಡಿರುವ ಟಚ್ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಶಿಹಾಬುದ್ದೀನ್ ಇಬ್‍ನು ಹಂಝ , ಗ್ರಾಮ ಪಂಚಾಯ್ತಿಯ ಅಭಿವೃದ್ದಿ ಅಧಿಕಾರಿಗಳಾದ ಅನಿಲ್ ಕುಮಾರ್ ಹಾಗೂ ವಿಶ್ವನಾಥ್, ಹೆಚ್.ಆರ್.ಎಸ್.ನ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮರಕಡ ಶುಭ ಹಾರೈಸಿ ಮಾತನಾಡಿದರು.

ಸಿದ್ದಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ.ಕೆ.ಮಣಿ, ನೆಲ್ಲಿಹುದಿಕೇರಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಸಫಿಯಾ, ಬೆಂಗಳೂರಿನ ಹಿರಾ ವೆಲ್ಫೇರ್ ಅಸೋಸಿಯೇಶನ್‍ನ ಮುಹಮ್ಮದ್ ಶಂಶೀರ್, ಶಮೀರ್ ಮುಹಮ್ಮದ್, ಜಮಾಅತೆ ಇಸ್ಲಾಮೀ ಅಂತರ ರಾಜ್ಯ ವಿಭಾಗದ ಯು.ಪಿ. ಸಿದ್ದೀಖ್ ಹಾಜರಿದ್ದರು. ಹೆಚ್.ಆರ್.ಎಸ್.ವಲಯ ಮೇಲ್ವಿಚಾರಕ ಯು.ಅಬ್ದುಸ್ಸಲಾಮ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಾರಂಭದಲ್ಲಿ ಉಮರ್ ಮೌಲವಿಯವರು ಖಿರಾಅತ್ ಮತ್ತು ಪ್ರಾರ್ಥನಾ ಗೀತೆಯನ್ನು ನಡೆಸಿಕೊಟ್ಟರು. ಟಿ.ಎ. ಬಷೀರ್ ಕಾರ್ಯಕ್ರಮವನ್ನು ನಿರೂಪಿಸಿದರು. ಎನ್.ಎ. ಗಫೂರ್ ಧನ್ಯವಾದವಿತ್ತರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …