@ ಪಿ.ಎಂ.ಎ. ಗಫೂರ್
ಮನದಲ್ಲಿ ಕೆಲವು ನೆನಪುಗಳು ಮರುಕಳಿಸಿದಾಗ, ನೆನಪಿನ ಬಾಣಗಳು ಹೃದಯವನ್ನು ಚುಚ್ಚಿದಾಗ, ಗತ ಕಾಲದ ದುಃಖದ ನೆನಪಿನ ಪುಟಗಳನ್ನು ಮತ್ತೊಮ್ಮೆ ತೆರೆದು ನೋಡಿದಾಗ, ನಮ್ಮಿಂದ ಅಗಲಿದವರ ನೆನಪು ಮರುಕಳಿಸಿದಾಗ ಬದುಕಿನ ಅತ್ಯಂತ ನೊಂದ ಘಟನೆಗಳನ್ನು ಸ್ಮರಿಸುವಾಗ ಕಣ್ಣುಗಳು ನೀರಿನಿಂದ ತುಂಬುತ್ತವೆ. ಹಠಾತ್ತನೆ ಕಣ್ಣು ನೀರಿಂದ ತುಂಬಿ ತುಳುಕುವ ಕೆಲವರಿದ್ದಾರೆ. ಜೀವನದ ಗತ ನೆನಪುಗಳು ಮರುಕಳಿಸಿದಾಗ ಅವರ ಕೆನ್ನೆಯ ಮೇಲೆ ನೀರು ಹರಿದಾಡುತ್ತದೆ. ಅಂತಹವರು ಶುದ್ಧ ಮನಸ್ಕರು. ಇನ್ನು ಕೆಲವರಿಗೆ ಎಷ್ಟೇ ದುಃಖವಾದರೂ ಒಂದು ಹನಿಯೂ ಅವರ ಕಣ್ಣಿಂದ ಉದುರದು. ಅವರು ಮನೊಬಲವಿರುವ ದೃಢ ಮನಸ್ಸಿನವರಾಗಿದ್ದಾರೆ.
ಕಣ್ಣೀರು ಸಾಂತ್ವನದ ಶುದ್ಧ ಜಲವಾಗಿದೆ. ಭಾರವಾದ ವಿಷಾದದ ಮಂಜಿನ ಕಟ್ಟೆಯನ್ನು ಒಡೆಯಲು ಕಣ್ಣೀರಿನಿಂದ ಸಾಧ್ಯ. ದುಃಖ ತುಂಬಿದ ಸಂದರ್ಭಗಳಲ್ಲಿ ತಮ್ಮ ಆಪ್ತ ಮಿತ್ರರ ಬಳಿ ಎಲ್ಲವನ್ನೂ ಹೇಳಿ ಮುಗಿಸಿ ಅಳುತ್ತಿರುವಾಗ ಗೆಳೆಯನ ಸಾಂತ್ವನದ ವಚನಗಳು ಮನಸ್ಸಿಗೆ ಮುದ ನೀಡುತ್ತದೆ. ಅಪರೂಪವಾಗಿ ಮಾತ್ರ ಕೆಲವರ ಮುಂದೆ ಕಣ್ಣು ತೇವಗೊಳ್ಳುತ್ತದೆ. ಅದರ ಮುಂದೆ ನಮಗೆ ಅದಕ್ಕೆ ಬೇಕಾದ ಸ್ವಾತಂತ್ರ್ಯ ನಮ್ಮಲ್ಲಿರಬೇಕು. `ಅಳಬೇಡ’ ಎಂಬ ಪದವು ನಮಗೆ ಹೊಸ ಉತ್ಸಾಹವನ್ನು ನೀಡುತ್ತದೆ. ಅಂತಹ ಒಂದು ಸ್ನೇಹ ಸೌಹಾರ್ದ ಸಂಬಂಧಗಳು ಜೀವನದ ಬೆಳಕಾಗಿದೆ, ಪ್ರಕಾಶ ಬಿಂದುಗಳಾಗಿವೆ.
ಸರ್, ಕೆಲವು ನೆನಪುಗಳು ನಮ್ಮ ಕಣ್ಣನ್ನು ಮಂಜಾಗಿಸುತ್ತವೆ. ಕೆಲವರ ಮುಂದೆ ನಮ್ಮ ಕಣ್ಣುಗಳು ತೇವಗೊಳ್ಳುತ್ತವೆ. ಆದರೆ ಅತಿ ಹೆಚ್ಚು ಕಣ್ಣು ತೇವಗೊಳ್ಳಬೇಕಾದ ಸಂದರ್ಭಗಳು ಯಾವುವು? ಯಾರ ಮುಂದೆ ನಾವು ಅತ್ಯಂತ ಹೆಚ್ಚು ಮನಸ್ಸು ತುಂಬಿ ಅಳಬೇಕು ಎಂಬುದು ಪ್ರಶ್ನೆಯಾಗಿದೆ. ಮಿತ್ರಾ! ಸರ್ವಲೋಕ ರಕ್ಷಕ ಪರಿಪಾಲಕನ ಸಾನಿಧ್ಯದಲ್ಲಿ. ಸ್ಮರಣೆಗಳು ನಮ್ಮ ಕಣ್ಣನ್ನು ತೇವಗೊಳಿಸುತ್ತದೆ ಎಂದಾದರೆ ಅಲ್ಲಾಹನ ಕುರಿತ ಸ್ಮರಣೆಗಳು ನಮ್ಮ ಕಣ್ಣನ್ನು ತೇವಗೊಳಿಸಬೇಕು. ಕೆಲವರೊಂದಿಗೆ ಮಾತನಾಡುವಾಗ ಇರುವ ಸ್ವಾತಂತ್ರ್ಯಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಅವನ ಮುಂದೆ ಪ್ರಾರ್ಥಿಸುವಾಗ ಇರುತ್ತದೆ.
ಒಮ್ಮೆ ಚಿಂತಿಸಿ ನೋಡಿರಿ. ನಾವು ಏನೂ ಇಲ್ಲದ ಶೂನ್ಯಾವಸ್ಥೆಯಲ್ಲಿದ್ದೆವು. ಈ ಬರೆಯುವ ಕೈಗಳು ಕೂಡಾ ಕೆಲವು ವರ್ಷಗಳ ಹಿಂದೆ ಇರಲಿಲ್ಲ. ಇದನ್ನು ಓದುವ ನಿಮ್ಮ ಅಸ್ತಿತ್ವವೂ ಕೆಲವು ವರ್ಷಗಳ ಹಿಂದೆ ಇರಲಿಲ್ಲ. ಶೂನ್ಯ! ಬೀಜ ಮತ್ತು ಅಂಡಾಶಯವನ್ನು ಎರಡು ಸ್ಥಳಗಳಲ್ಲಿ ಸೃಷ್ಟಿಸಿ ಒಂದು ಕೇಂದ್ರದಲ್ಲಿ ಸಂಯೋಜಿಸಿ ಎಲುಬು, ಮಾಂಸ ಮತ್ತು ಚರ್ಮವನ್ನೂ ನೀಡಿ ಅಂಗಾಗಳನ್ನು ಜೋಡಿಸಿ ಸುರಕ್ಷಿತವಾಗಿ ಒಂದೆಡೆ ಕೇಂದ್ರೀಕರಿಸಿ ಬಳಿಕ ನಮ್ಮನ್ನು ಭೂಮಿಗೆ ಕರುಣಾಳುವಾದ ದೇವನು ಕಳುಹಿಸಿದನು, ಆಗ ನಾವು ತಾಯಿಯ ಮಡಿಲಲ್ಲಿದ್ದೆವು. ಅಳುತ್ತಾ ನಾವು ಭೂಮಿಯನ್ನು ಪ್ರವೇಶಿಸುವಾಗ ಮುಗುಳ್ನಗುತ್ತಾ ನಮ್ಮನ್ನು ಸ್ವಾಗತಿಸಲು ಹಲವರು ಇದ್ದರು. ಹಾಗೆಯೇ ನಮಗಾಗಿ ಕೆಲವರನ್ನು ಸೃಷ್ಟಿಕರ್ತನು ನಿಶ್ಚಯಿಸಿದ್ದನು.
ಇನ್ನು ಒಂದು ದಿನ ನಾವು ಈ ಲೋಕದಿಂದ ವಿರಮಿಸಲಿದ್ದೇವೆ, ಅಂದು ನಮಗಾಗಿ ಹಲವಾರು ಮಂದಿ ಅಳುವರು. ಅದು ನಮ್ಮ ಭೌತಿಕ ಜೀವನದ ಯಶಸ್ಸು. ಅತ್ತು ಭೂಮಿಯನ್ನು ಪ್ರವೇಶಿಸಿದ ನಾವು ನಗುತ್ತಾ ಇಹಲೋಕಕ್ಕೆ ವಿದಾಯ ಹೇಳಬೇಕು. ಎಲ್ಲವನ್ನೂ ನೀಡಿದವನು ಅಲ್ಲಾಹನಾಗಿದ್ದಾನೆ.
ಇಂದು ನಮಗೆ ದೊರೆತ ಅನುಗ್ರಹಗಳನ್ನು ಅನುಭವಿಸಲು ನಾವೆಷ್ಟು ಅರ್ಹರು? ಅವನ ಮಾರ್ಗದಲ್ಲಿ ನಿರಂತರ ವ್ಯತಿಚಲಿಸಿಯೂ ಕೂಡಾ ಅವನು ನಮ್ಮೊಂದಿಗಿದ್ದಾನೆ. ಅವು ನಮ್ಮಿಂದ ದೂರವಾಗುತ್ತಿಲ್ಲ. ಪಶ್ಚಾತ್ತಾಪದ ಕಣ್ಣೀರಿನೊಂದಿಗೆ ಪುಟ್ಟ ಮಗುವಿನಂತೆ ನಾವು ಆತನನ್ನು ಸವಿೂಪಿಸಲು ಅಲ್ಲಾಹನು ನಿರೀಕ್ಷಿಸುತ್ತಿರುತ್ತಾನೆ. ಈ ಕರುಣೆಯನ್ನು ಸ್ಮರಿಸುವಾಗ ಅವನ ಕಣ್ಣುಗಳು ನೀರಿನಿಂದಾವೃತವಾಗದಿರುವುದು ಹೇಗೆ?
ನನಗಿಂತಲೂ ಹೆಚ್ಚು ಆತನಿಗೆ ನನ್ನ ಬಗ್ಗೆ ತಿಳಿದಿದೆ. ತಂದೆ-ತಾಯಿಗೆ ತಮ್ಮ ಮಗುವಿನ ಬಗ್ಗೆ ಅರಿವಿದೆ. ಆ ಶಿಶುವಿನ ಜನನ ಬಾಲ್ಯ ಪುಟ್ಟ ತುಟಿಯನ್ನು ಸೇರಿಸಿ ಅಪ್ಪ ಅಮ್ಮ ಎಂದು ಕರೆದದ್ದು, ಕಲಿಕೆ ಆ ಮಗುವಿನ ಜೀವನ ಶೈಲಿ ಎಲ್ಲವು… ಮಾತಾಪಿತರಿಗೆ ತಿಳಿದಿರುತ್ತದೆ. ಅದಕ್ಕಿಂತಲೂ ಹೆಚ್ಚು ನಮ್ಮ ಬಗ್ಗೆ ಅಲ್ಲಾಹನು ತಿಳಿದಿರುತ್ತಾನೆ. ತನ್ನ ಪ್ರೀತಿ ಸ್ಪರ್ಶದಿಂದ ನಮ್ಮೊಂದಿಗಿರುತ್ತಾನೆ. ಅವನ ಬಗೆಗಿನ ಸ್ಮರಣೆಯು ಸತ್ಯವಿಶ್ವಾಸಿಯ ಹೃದಯಕ್ಕೆ ಹೊಸತನ ನೀಡುತ್ತದೆ. ಆ ನೆನಪುಗಳನ್ನು ಸ್ಮರಣೀಯವಾಗಿರಿಸಿಕೊಳ್ಳಬೇಕು. ಅವನು ಇಷ್ಟ ಪಡದೇ ಇದ್ದದ್ದು ನನಗೂ ಕಡ್ಡಾಯವಾಗಿ ಇಷ್ಟವಾಗದಿರಬೇಕು. ಅವನು ಇಷ್ಟಪಡುವುದು ಮಾತ್ರ ನನ್ನಿಷ್ಟವಾಗಬೇಕು. ಇದು ಅತ್ಯಂತ ದೊಡ್ಡ ಪ್ರೀತಿಯಾಗಿದೆ. ಮನುಷ್ಯರ ತಮ್ಮಲ್ಲಿನ ಹೆಚ್ಚಿನ ಆಪ್ತತೆಯ ಮಾನದಂಡ ಇದಲ್ಲವೇ?
ಅಲ್ಲಾಹನ ಕುರಿತ ಸ್ಮರಣೆಗಳು ನಮ್ಮ ಕಣ್ಣನ್ನು ತೇವಗೊಳಿಸುವಂತೆಯೇ ಅವನ ಸಾನಿಧ್ಯವೂ ನಮ್ಮ ಕಣ್ಣುಗಳನ್ನು ತೇವಗೊಳಿಸಬೇಕು. ಏಕಾಂತವಾಗಿರುವಾಗ ಅಲ್ಲಾಹನ ಸಾನಿಧ್ಯದ ಮುಂದೆ ನಮ್ಮ ಮನದ ದುಃಖವನ್ನು ತಮ್ಮ ಪ್ರಮಾದಗಳನ್ನೂ ಒಂದೊಂದಾಗಿ ಹೇಳುವಾಗ ಸತ್ಯವಿಶ್ವಾಸಿಯ ಮನಸ್ಸು ನಡೆದು ಹೋದುದನ್ನು ಸ್ಮರಿಸಿ ಆದ್ರಗೊಳ್ಳುತ್ತದೆ. ಅವನರಿಯದೇ ಅವನ ಕಣ್ಣುಗಳು ತೇವಗೊಳ್ಳುತ್ತವೆ. ಈ ಕಣ್ಣೀರನ್ನು ಅಲ್ಲಾಹನು ಇಷ್ಟಪಡುತ್ತಾನೆ. ಮಹ್ಶರಾದ ಸುಡು ಬಿಸಿಲಿನಲ್ಲಿ ಅದು ನೆರಳಾಗಿ ಪರಿಣಮಿಸುತ್ತದೆ. ಆಗ ತಾನೇ ಕರೆದ ಹಾಲಿನಷ್ಟು ಶುಭ್ರವಾಗಿ ಅದು ಮರಳಿ ಕೆಚ್ಚಲಿಗೆ ಕಳುಹಿಸದಂತೆ ಅವರು ಆ ಸ್ವರ್ಗದಿಂದ ಹೊರ ಹೋಗಲಾರರು. ನರಕದಂಚಿಗೆ ಪ್ರವೇಶಿಸಲಾರರು” ಎಂದು ಪ್ರವಾದಿವರ್ಯರು(ಸ) ಹೇಳಿರುತ್ತಾರೆ.
ಆಇದ್ ಅಬ್ದುಲ್ಲಾ ಬರೆದ ಲಾ ತಹ್ಝನ್ ಎಂಬ ಗ್ರಂಥವನ್ನು ವಾಚಿಸಿದ್ದೆ. ಓರ್ವ ಸತ್ಯವಿಶ್ವಾಸಿ ಯಾಕೆ ಅಳಬಾರದು ಎಂಬುದಕ್ಕೆ ಮುನ್ನೂರರಷ್ಟು ಕಾರಣಗಳನ್ನು ಅದರಲ್ಲಿ ಹೇಳಲಾಗಿದೆ. ಜೀವನದಲ್ಲಿ ನಡೆದ ದುಃಖ ಅನುಭವಗಳನ್ನು ಸ್ಮರಿಸಿ ಸತ್ಯವಿಶ್ವಾಸಿ ಅಳಬಾರದು. ಅನುಭವಗಳಿಂದ ಆತ ಪಾಠ ಕಲಿಯಬೇಕು. ಸತ್ಯವಿಶ್ವಾಸಿಯು ಸುಳಿಗಾಳಿಗೆ ಹಾರುವ ತರಗೆಲೆಗಳಂತಲ್ಲ. ಬಿರುಗಾಳಿಗೂ ಗಟ್ಟಿಯಾಗಿ ನಿಲ್ಲುವ ಮರವಾಗಬೇಕು. ಆದರೆ ಅದೇ ಸತ್ಯವಿಶ್ವಾಸಿಯು ತನ್ನ ಪ್ರಭುವಿನ ಮುಂದೆ ಪುಟ್ಟ ಮಕ್ಕಳಂತೆ ಅತ್ತು ಕರವನ್ನೆತ್ತಿಕೊಂಡು ಪಾಪಗಳನ್ನು ಹೇಳಿಕೊಂಡು ಪಶ್ಚಾತ್ತಾಪಿಸಿ ಹೊಸ ಮನುಷ್ಯನಾಗಬೇಕು. ಯಾರ ಮುಂದೆಯೂ ಕದಲದ ಸತ್ಯವಿಶ್ವಾಸಿ. ಹಾಗೆ ದೃಢವಾಗಿ ನಿಲ್ಲಲು ಈಮಾನ್ ಮೂಲಕ ಕಣ್ಣು ತುಂಬಿ ಪ್ರೇರೇಪಿಸುತ್ತದೆ. ಅದು ಅರಿಯದೇ ಕಣ್ಣಿಂದ ನೀರು ಸುರಿಸುತ್ತದೆ.
ಜೀವನದಲ್ಲಿ ಎಂತಹಾ ಸಂಕಷ್ಟಗಳು ಎದುರಾದಾಗಲೂ ಒಂದು ಹನಿಯೂ ಕಣ್ಣು ನೀರು ಜಾರದಂತಹ ಈಮಾನ್ ಅಲ್ಲಾಹನ ಮುಂದೆ ಕೆನ್ನೆ ಮೇಲೆ ಸಂಪೂರ್ಣ ಹರಿಯುವಂತೆ ಮಾಡುತ್ತದೆ. ಇಂತಹ ಈಮಾನ್ ಗಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಿದೆಯೇ ಎಂದು ನಾವು ಚಿಂತಿಸಬೇಕು. ನಿಭಿಡತೆಯ ನಡುವೆಯೂ ನಾವು ಒಮ್ಮೆ ತಿರುಗಿ ನೋಡಬೇಕು. ನಮ್ಮ ಬಗ್ಗೆ ನಾವು ಅರಿಯಬೇಕು. ಮರಣದ ಬಾಗಿಲು ಯಾವ ಕ್ಷಣದ ಲ್ಲಿಯೂ ನಮ್ಮನ್ನು ನಿಶ್ಚಲಗೊಳಿಸಬಹುದು. ಪ್ರತಿಯೊಂದು ಉಸಿರೂ ನಮ್ಮ ಬದುಕಾಗಿದೆ. ಸೆಕೆಂಡುಗಳು ಅವಕಾಶವಾಗಿವೆ. ಅದನ್ನು ಸದುಪಯೋಗ ಪಡಿಸಿದರೆ ಯಶಸ್ಸು ಪಡೆಯಬಹುದು. ಮಾಡಿದ್ದೆಲ್ಲವನ್ನೂ ಒಂದು ಗ್ರಂಥದಲ್ಲಿ ಲಿಖಿತಗೊಳಿಸಿಡಲಾಗಿದೆ. ಅದನ್ನು ಅಳಿಸುವ ಸಾಧನವಾಗಿದೆ ಕಣ್ಣೀರಿಂದ ತುಂಬಿದ ಪ್ರಾರ್ಥನೆಗಳು. ಕೆಲವನ್ನು ಸ್ಮರಿಸುವಾಗ ನಾವು ಅತ್ತು ಬಿಡುತ್ತೇವೆ. ಹಾಗೆಯೇ ಅಲ್ಲಾಹನನ್ನು ಸ್ಮರಿಸಿ ನಾವು ಅತ್ತು ಬಿಡಬೇಕು. ಕೆಲವು ವ್ಯಕ್ತಿಗಳ ಮುಂದೆ ನಮಗೆ ಅಳುವ ಸ್ವಾತಂತ್ರ್ಯವಿದೆ. ಆದರೆ ಏಕೈಕ ಪಾಲಕ ಪ್ರಭುವಿನ ಮುಂದೆ ಭಯವಿಹ್ವಲತೆಯಿಂದ ಕಣ್ಣೀರು ಹರಿಯಬೇಕು. ಅದರಲ್ಲಿ ನಮ್ಮ ಮನದ ಕಲ್ಮಶಗಳು ಕೊಚ್ಚಿ ಹೋಗಬೇಕು. ಕಣ್ಣೀರು ಸತ್ಯವಿಶ್ವಾಸಿಯ ಕರ್ಮಶಕ್ತಿಯಾಗಿದೆ.
IslamKannada News Portal



