Home / ಲೇಖನಗಳು / ‘ಸಾಲವೂ ಒಂದು ದಾನ’ ಕುರ್‍ಆನಿನ ಸಾಮಾಜಿಕ ಚಿಂತನೆಗಳು

‘ಸಾಲವೂ ಒಂದು ದಾನ’ ಕುರ್‍ಆನಿನ ಸಾಮಾಜಿಕ ಚಿಂತನೆಗಳು

@ ಅಶೀರುದ್ದೀನ್ ಆಲಿಯಾ, ಮಂಜನಾಡಿ

“ನಿಮ್ಮ ಸಾಲಗಾರರು ಕಾಸಿಲ್ಲದವರಾದರೆ ಅವರಿಗೆ ಸುಸ್ಥಿತಿಯುಂಟಾಗುವ ತನಕ ಸಮಯಾವಕಾಶ ಕೊಡಿರಿ ಮತ್ತು ನೀವು ದಾನ ರೂಪದಲ್ಲಿ ಸಾಲವನ್ನೇ ಬಿಟ್ಟುಕೊಟ್ಟರೆ ಅದು ನಿಮ್ಮ ಮಟ್ಟಿಗೆ ಇನ್ನಷ್ಟು ಉತ್ತಮವಾಗಿರುವುದು ನೀವು ಅರಿತವರೇ  ಆಗಿದ್ದರೆ.” (ಅಲ್‍ಬಕರ 280)

ಅರ್ಥ ವ್ಯವಸ್ಥೆಯಲ್ಲಿ ಸಾಲವೂ ಒಂದು ಘಟಕವಾಗಿದೆ. ಸಾಲ ಎಂದರೆ ಕಡ, ಋಣ, ಕ್ರೆಡಿಟ್. ಅರಬಿಕ್‍ನಲ್ಲಿ `ಕರ್‍ಝ್’ ಎಂದು ಕರೆಯುತ್ತೇವೆ. ಎರವಲು ಒಂದು ಬಗೆಯ ಸಾಲವಾಗಿದೆ. ಹಣದ ರೂಪದಲ್ಲಿ ವಸ್ತ್ರಗಳ ರೂಪದಲ್ಲಿ, ಬಂಡವಾಳ  ಹೂಡಿಕೆಯ ಸಾಲಗಳು, ಜಮೀನಿನ ಮೇಲೆ, ಸ್ವರ್ಣಾಭರಣದ ಸಾಲಗಳು ಇತ್ಯಾದಿ ರೀತಿಯ ಸಾಲಗಳು ಇಂದು ಚಾಲ್ತಿಯಲ್ಲಿವೆ.

ಮನುಷ್ಯನ ವ್ಯಾವಹಾರಿಕ ಜೀವನದಲ್ಲಿ ಸಾಲವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ವ್ಯಾಪಾರ, ಕೃಷಿ, ಪ್ರಯಾಣ, ಮದುವೆ,  ಮನೆ ಇತ್ಯಾದಿಗಳಲ್ಲಿ ಸಾಲ ಪ್ರಮುಖ ಪಾತ್ರವಹಿಸುತ್ತದೆ. ಸಾಲದಾತ, ಸಾಲಗಾರನಿಗೆ ಯಾವುದೋ ಒಂದು ನಂಬಿಕೆಯಲ್ಲಿ ಹಣವನ್ನು ನೀಡುವುದು, ನೀಡಿದ ಹಣವನ್ನು ಮರಳಿ ನೀಡುವುದು ಒಂದು ನಂಬಿಕೆಯ ಮೇಲಾಗಿರುತ್ತದೆ. ಹಣಕಾಸಿನಲ್ಲಿ  ಸಾಲವು ಮತ್ತೊಂದು ಘಟಕ. ವೇದಗಳ ಕಾಲದಲ್ಲಿಯೂ ಸಾಲ ನೀಡುವ ಚಟುವಟಿಕೆ ಜಾರಿಯಲ್ಲಿತ್ತು. ಕುರ್‍ಆನಿನ ಅತೀ ದೀರ್ಘವಿರುವ ಸೂಕ್ತವು ಸಾಲದ ನಿಯಮಗಳ ಬಗ್ಗೆಯಾಗಿದೆ. ಪ್ರವಾದಿಯವರು(ಸ) ಸಾಲದ ವ್ಯವಹಾರ ನಡೆಸುತ್ತಿದ್ದರು. ಸಾಲ  ಕೊಡುತ್ತಿದ್ದರು ಮತ್ತು ಪಡೆಯುತ್ತಿದ್ದರು. ಬೈಬಲ್‍ನಲ್ಲಿಯೂ ಸಹ ಸಾಲದ ಬಗ್ಗೆ ಪ್ರಸ್ತಾಪವಿದೆ.

ಕೆಲವರು ಸಾಲ ಪಡೆಯುವವರಿಂದಲೂ ನೀಡುವವರಿಂದಲೂ ವಾಗ್ದಾನ ಪತ್ರವನ್ನು ಬರೆಸುತ್ತಾರೆ. ಕೆಲವು ಸಾಲಗಳಿಗೆ ಕಾನೂನು ಬಾಧ್ಯತೆ ಇರುತ್ತದೆ. ಕೆಲವು ದಾಖಲೆಗಳಿಲ್ಲದೇ ವಿಶ್ವಾಸದಿಂದ ನೀಡಿದ ಸಾಲಗಳಾಗಿರುತ್ತವೆ. ಹೆಚ್ಚು ಪ್ರಮುಖ ಮತ್ತು  ಮಹತ್ವವಿರುವ ಸಾಲಗಳೆಂದರೆ ಹಣದ ಸಾಲ, ಬಂಡವಾಳ ಇತ್ಯಾದಿ. ಎರವಲು ಅಂದರೆ ದೈನಂದಿನ ನಿತ್ಯ ಬಳಕೆಯ ವಸ್ತುಗಳು. ಪರಸ್ಪರ ನೆರೆಕರೆಯವರು, ಸಹವಾಸಿಗಳು, ಸಹಪಾಠಿಗಳು ಒಂದು ಗಳಿಗೆಗೆ ಅಥವಾ ಬದಲಿಗೆ ಪಡೆಯುವುದು. ಅದು ಸಕ್ಕರೆ, ಉಪ್ಪು, ಪೆನ್ನು, ಪೆನ್ಸಿಲು ಇತ್ಯಾದಿ ರೂಪದಲ್ಲಾಗಿರುತ್ತದೆ. ಅದೂ ಕೂಡ ಸಾಲದ ಘಟಕಕ್ಕೆ ಸೇರುತ್ತದೆ.

ಸಾಲವೆಂದರೆ ಬಡ್ಡಿಯ ರೂಪವಲ್ಲ. ಸಾಲದ ಲಾಭಂಶ ಬಡ್ಡಿಯೂ ಆಗಿರಬಾರದು. ವ್ಯಾಪಾರಕ್ಕೆ, ಕೃಷಿಗೆ, ಬಂಡವಾಳದ ರೂಪದಲ್ಲಿ ಹಣ ನೀಡುವುದಾದರೆ ಅದರ ಲಾಭ-ನಷ್ಟದ ಹೊರೆಯನ್ನು ಹೊರುವ ಶರತ್ತು ಇರಬೇಕು. ಬದಲಾಗಿ ಸಾಲದ  ಬಡ್ಡಿಯನ್ನು ನೀಡಬೇಕು ಎನ್ನುವುದು ಧರ್ಮಬಾಹಿರವಾಗಿದೆ.

ಮನುಷ್ಯನ ನಿತ್ಯ ಜೀವನದ ಒಂದಲ್ಲಾ ಒಂದು ಸಮಯದಲ್ಲಿ ಸಾಲವು ಅಗತ್ಯವೆನಿಸುತ್ತದೆ. ಅಂತಹ ಸಮಯದಲ್ಲಿ ಸಾಲ ನೀಡುವುದು ಒಂದು ದೊಡ್ಡ ಮಹತ್ತರವಾದ ಕಾರ್ಯವಾಗಿದೆ. ಪ್ರವಾದಿ(ಸ) ಹೇಳಿರುವರು, “ಪ್ರತಿಯೊಂದು ಸಾಲವೂ ದಾನವಾಗಿದೆ.” ಸಾಲವು ಒಂದು ದಾನದ ರೂಪವಾಗಿದೆ. ಅಪೇಕ್ಷಿತರಿಗೆ ಸಾಲ ನೀಡಬೇಕು. ಮರುಪಾವತಿ ಮಾಡಲು ವಿಳಂಬವಾದರೆ ಕಾಲಾವಕಾಶವನ್ನು ನೀಡಬೇಕೆಂದು ಮೇಲಿನ ಸೂಕ್ತ ವ್ಯಕ್ತಪಡಿಸುತ್ತದೆ. ಸಾಲವೆಂಬುದು ಶೋಷಣೆಯಾಗಬಾರದು. ಸಾಲ ಪಡೆದವನನ್ನು ಸೇವಕನಂತೆ ಭಾವಿಸುವುದು ತಪ್ಪಾಗಿದೆ. ಉತ್ತಮ ಮನಸ್ಸಿನಿಂದ ಸಾಲ ನೀಡಬೇಕು. ಪ್ರವಾದಿ(ಸ) ಹೇಳಿದರು, “ಸಾಲ ಮಾಡುವುದರ ಮೂಲಕ ಅಲ್ಲಾಹನು ಕೊರತೆಗಳನ್ನು ಕ್ಷಮಿಸಬಹುದೆಂದು ನಿರೀಕ್ಷಿಸಬಹುದು.” (ಬುಖಾರಿ)

ಹಣ ಅಥವಾ ಸೊತ್ತನ್ನು ಉಪಯೋಗಕ್ಕೆ ನೀಡಿ ಅದನ್ನು ನಿರ್ದಿಷ್ಟ ಸಮಯದಿಂದ ಕಂತು ರೂಪದಲ್ಲೊ ಒಟ್ಟಾಗಿಯೋ ಮರು ಪಾವತಿಯನ್ನು ಬಯಸುವುದಾಗಿದೆ ಸಾಲ. ಸಾಲ ನೀಡುವಾಗ ವಸ್ತುವನ್ನು ಎಣಿಸಿ, ತೂಗಿಸಿ ನೀಡಬೇಕು. ಮೌಲ್ಯ ಹೊಂದಿದ  ವಸ್ತುಗಳನ್ನು, ಚಲಾವಣೆಯಲ್ಲಿರುವ ಹಣವನ್ನೇ ಸಾಲ ನೀಡಬೇಕಾಗುತ್ತದೆ. ಇಸ್ಲಾಮ್ ಸಾಲ ನೀಡುವ, ಪಡೆಯುವ, ವ್ಯವಸ್ಥೆಗೆ ಹಲವು ಶರತ್ತುಗಳನ್ನು ಹಾಕಿದೆ. ಸಾಲವನ್ನು ಕುರ್‍ಆನ್ ಒಂದು ಗೌರವದ ವ್ಯವಹಾರವಾಗಿ ಪರಿಗಣಿಸಿದೆ. ಎಷ್ಟರವರೆಗೆಂದರೆ, ಮರಣ ಹೊಂದುವ ವ್ಯಕ್ತಿ ಉಯಿಲು ಅಥವಾ ಆತನ ಆಸ್ತಿಯ ಪಾಲು ಆಗಬೇಕಾದರೆ, ಮೃತ ವ್ಯಕ್ತಿಗಿರುವ ಸಾಲದ ಲೇವಾದೇವಿಯೂ ಪೂರ್ತಿಯಾಗಬೇಕು. ಸಾಲ ಮರುಪಾವತಿ ಆದ ಬಳಿಕವೇ ಸೊತ್ತುಗಳ ಪಾಲು ಮಾಡಬೇಕಾಗುತ್ತದೆ.

ಇಸ್ಲಾಮಿನ ಝಕಾತ್ ವ್ಯವಸ್ಥೆಯಲ್ಲಿ ಎಂಟು ವಿಭಾಗದಲ್ಲಿ ಒಂದು ವಿಭಾಗವು ಸಾಲಗಾರರಾಗಿರುತ್ತಾರೆ. ಸಾಲವು ಒಂದು ಶೋಷಣೆಯಾಗದೆ ಒಂದು ಸೇವೆಯ ರೂಪದಲ್ಲಾಗಬೇಕು. ಅದಕ್ಕೆ ಅಲ್ಲಾಹನ ಬಳಿ ಪ್ರತಿಫಲವಿದೆ. ಒಳ್ಳೆಯ ಉದ್ದೇಶದಿಂದ  ಬಡವರಿಗೆ, ನಿರ್ಗತಿಕರಿಗೆ ಅರ್ಹರಿಗೆ ಸಾಲ ನೀಡುವವರು ನಿಜವಾಗಿಯೂ ಅಲ್ಲಾಹನಿಗೆ ಸಾಲ ನೀಡುವವರಂತೆ ಕುರ್‍ಆನ್ ಹೇಳುತ್ತದೆ, “ನೀವು ಅಲ್ಲಾಹನಿಗೆ ಉತ್ತಮ ಸಾಲ ನೀಡಿದರೆ ಅವನು ನಿಮಗೆ ಎಷ್ಟೋ ಪಟ್ಟು ವರ್ಧಿಸಿ ಕೊಡುವನು ಮತ್ತು ನಿಮ್ಮ ತಪ್ಪುಗಳನ್ನು ಕ್ಷಮಿಸುವನು. ಅಲ್ಲಾಹನು ಮಹಾ ಗುಣಗಾಹಿಯೂ ಸಹನಶೀಲನೂ ಆಗಿರುತ್ತಾನೆ.” (ಅತ್ತಗಾಬುನ್: 17)

ಅಲ್ಲಾಹನ ಸತ್ಕಾರ ಸಿಗಬೇಕಾದರೆ ಅಲ್ಲಾಹನಿಗೆ ಸಾಲಕೊಡಬೇಕೆಂದು ಕುರ್‍ಆನ್ ಹೇಳುತ್ತದೆ, ಇನ್ನೊಂದು ಕಡೆ ಹೀಗಿದೆ, “ಅಲ್ಲಾಹನಿಗೆ ಸಾಲ ಕೊಡುವವನಾರಿದ್ದಾನೆ? ಅತ್ಯುತ್ತಮ ಸಾಲ. ಅಲ್ಲಾಹ್ ಅದನ್ನು ಹಲವಾರು ಪಟ್ಟು ಹೆಚ್ಚಿಸಿ ಕೊಡುವನು ಮತ್ತು  ಅವನಿಗೆ ಅತ್ಯುತ್ತಮ ಪ್ರತಿಫಲವಿದೆ.” (ಅಲ್ ಹದೀದ್: 11)

ಸಾಲ ನೀಡುವವರಿಗೆ ಸಿಗುವ ಪ್ರತಿಫಲವೇ ಸಾಲ ಪಡೆದವರಿಗೂ ಅದರ ಮರುಪಾವತಿ ಸಮಯದಲ್ಲೂ ಸಿಗುವುದು. ಸಾಲ ನೀಡುವವರಿಗೆ ಒಳ್ಳೆಯ ಉದ್ದೇಶ ಇರುವಂತೆ, ಸಾಲ ಪಡೆಯುವವರಿಗೆ ದುರುದ್ದೇಶವಿರಬಾರದು. ಪ್ರವಾದಿ(ಸ) ಹೇಳಿರುವುರು,  “ಉತ್ತಮ ರೀತಿಯಲ್ಲಿ ಸಾಲ ಮರುಪಾವತಿ ಮಾಡುವವನೇ ಅತ್ಯುತ್ತಮನು.” (ಮುಸ್ಲಿಮ್)

ಆಫ್ರಿಕಾದ ಪ್ರಸಿದ್ಧ ಗಾದೆ ಈ ರೀತಿ ಇದೆ, “ಸಾಲ ತೆಗೆದುಕೊಳ್ಳುವಾಗ ಹಬ್ಬದೂಟ ತೀರಿಸುವಾಗ ಪ್ರಾಣ ಸಂಕಟ.” ಸಾಲ ಕೇಳಿ ಸ್ನೇಹ ಕಳೆದುಕೊಳ್ಳಬಾರದೆಂಬ ಮಾತು ನಮ್ಮ ನಡುವೆ ಪ್ರಚಲಿತವಿದೆ. ನಿಜವಾಗಿಯೂ ಸಾಲ ಕೇಳುವುದು ತಪ್ಪಲ್ಲ. ಮರು ಪಾವತಿ ಮಾಡದಿರುವುದರಿಂದಲೇ ಸ್ನೇಹ ಕಳೆದುಹೋಗುವುದು. ಸಾಲ ಮಾಡುವುದರಿಂದ ಯಹೋವ ದೇವರೊಂದಿಗೆ ನಮಗಿರುವ ಸಂಬಂಧ ಹಾಳಾಗುವ ಸಾಧ್ಯತೆ ಹೆಚ್ಚಿದೆ ಎಂದು ಬೈಬಲ್ ಹೇಳುತ್ತದೆ. ಸಾಲ ಮರುಪಾವತಿ ಮಾಡಲು  ಸಾಧ್ಯವಿರುವವರು ಮರು ಪಾವತಿ ಮಾಡಲು ಮೀನ-ಮೇಷ ಎಣಿಸಿದರೆ ಅದೊಂದು ಅನ್ಯಾಯ ಕೃತ್ಯವಾಗುವುದು (ಬುಖಾರಿ).

ಸಾಲದ ಬಗ್ಗೆ ಸರ್ವಜ್ಞರು ಈ ರೀತಿ ಹೇಳಿದ್ದಾರೆ,

ನಂಬಿಗೆಯ ಉಳ್ಳನಕ
ಕೊಂಬವದು ಸಾಲವನು
ನಂಬಿಕೆಯು ಕೆಟ್ಟ ಬಳಿಕ ಬೆಂದಾವಿಗೆಯೇ
ಕುಂಬದಂತಕ್ಕು ಸರ್ವಜ್ಞ”

ಇನ್ನೊಂದು ಕಡೆ `ಸಾಲವಿಲ್ಲದವನ ಮನೆಲೇಸು’ ಎಂದು ಹೇಳುತ್ತಾರೆ. ಸಾಲ ನಂಬಿಕೆಯ ಮೇಲೆ ನಿಲ್ಲುತ್ತದೆ. ನಂಬಿಕೆ ಕಳೆದರೆ ಸಾಲಗಾರನು ಕ್ರೂರಿಯಾಗಿ ಹೋಗುವುದು ಸಹಜ. ಸಾಲ ನೀಡಿದ ಬಳಿಕ ಮರು ಪಾವತಿಗೆ ಕಾಲಾವಕಾಶ ನೀಡಬೇಕು.  ಅದು ನೀಡಿಯೂ ಪಾವತಿಸದಿದ್ದರೆ ತನ್ನ ಹಕ್ಕನ್ನು ಪಡೆಯುವ ಹಕ್ಕು ಅವನಿಗೆ ಇದೆ. ಆದರೆ ಅದು ಒಂದು ಶೋಷಣೆಯ ರೂಪದಲ್ಲಾಗಬಾರದಷ್ಟೇ. ಪಾವತಿಸಲು ಅಸಾಧ್ಯವಿರುವ ಜನರಿಗೆ ಅದನ್ನು ದಾನವಾಗಿ ಮನ್ನಾ ಮಾಡಿದರೆ ಹೆಚ್ಚು ಪ್ರತಿಫಲ ಸಿಗುವುದು.

ಪ್ರವಾದಿ(ಸ) ಹೇಳಿರುವರು, “ಸಾಲ ಮರುಪಾವತಿ ಮಾಡುವ ಶಕ್ತಿಯಿದ್ದೂ ಪಾವತಿಸುವ ವಿಷಯದಲ್ಲಿ ಮೀನ-ವೇಷ ಎಣಿಸುವ ಸಾಲಗಾರನಿಗೆ ಛೀಮಾರಿ ಹಾಕುವುದು ಮತ್ತು ಶಿಕ್ಷೆ ವಿಧಿಸುವುದು ಸಮಾಜದ ಪಾಲಿಗೆ ಧರ್ಮ ಸಮ್ಮತವಾಗಿದೆ (ಅಬೂದಾವೂದ್).

ಅಲ್ಲಾಹನು ಸಾಲದ ಹೊರತು ಬೇರೆಲ್ಲಾ ಪಾಪಗಳನ್ನು  ಕ್ಷಮಿಸುವನೆಂದು ಪ್ರವಾದಿ(ಸ) ಹೇಳಿದ್ದಾರೆ. “ಬೇಕು ಬೇಕೆಂದೇ ಅಥವಾ ಉದ್ದೇಶಪೂರ್ವಕವಾಗಿ ಸಾಲ ತೀರಿಸದೇ ಇರುವವರನ್ನು ಬೈಬಲ್ `ದುಷ್ಟ’ ಎಂದು ಕರೆಯುತ್ತದೆ. (ಕೀರ್ತನೆ 37: 21) ಕೆಲವು ಸಾಲಗಾರರು ಅದನ್ನು ಪಡೆಯುವಾಗ ಹಲವಾರು  ಭರವಸೆ ವಾಗ್ದಾನ ನೀಡುತ್ತಾರೆ. ಆದರೆ ಮರುಪಾವತಿಯ ಸಮಯ ಬಂದಾಗ ಮೊಬೈಲನ್ನು ಸ್ವಿಚ್ಡ್ ಆಫ್ ಮಾಡುವುದು, ಕರೆ ಸ್ವೀಕರಿಸದೇ ಇರುವುದು, ಅವರನ್ನು ಕಂಡಾಗ ತಪ್ಪಿಸುವುದು, ವಂಚಿಸುವುದು, ಹಣ ನೀಡಲು ಬೇಕು ಬೇಕೆಂದೇ ವಿಳಂಬ  ಮಾಡುವುದು ಇತ್ಯಾದಿಗಳನ್ನು ಮಾಡುತ್ತಾರೆ. ಇದು ಧರ್ಮ ಬಾಹಿರ ಕೆಲಸ. ಹಣ ಮರುಪಾವತಿಗೆ ಅಸಾಧ್ಯ ವಾದವರು. ತಮ್ಮ ಕಷ್ಟವನ್ನು ಹೇಳಿ ಇನ್ನಷ್ಟು ಸಮಯಾವಕಾಶವನ್ನು ಪಡೆಯಬೇಕು. ಸಾಲದಿಂದ ದುರುದ್ದೇಶ ಹುಟ್ಟಿಕೊಂಡಾಗ  ಸಂಬಂಧಗಳು ಕಡಿದು ಹೋಗುತ್ತವೆ. ಗೆಳೆತನ ಮುರಿದು ಹೋಗುತ್ತದೆ. ನಂಬಿಕೆ ಇಲ್ಲವಾಗುತ್ತದೆ. ಭರವಸೆ ನಷ್ಟ ಹೊಂದುತ್ತದೆ. ಸಾಲ ಮರುಪಾವತಿ ಸಂಕಲ್ಪ ಹೊಂದಿದವರ ಪರ ಅಲ್ಲಾಹನಿದ್ದಾನೆ.

ಪ್ರವಾದಿ(ಸ) ಹೀಗೆ ಹೇಳಿರುವರು, “ಒಬ್ಬನು ಜನರಿಂದ  ಸಾಲ ಪಡೆದಿದ್ದು, ಅದನ್ನು ಮರು ಪಾವತಿಸುವ ಸಂಕಲ್ಪವನ್ನು ಹೊಂದಿದ್ದು, ಯಾವುದೋ ಕಾರಣದಿಂದ ಅದನ್ನು ಅವನಿಗೆ ಮರುಪಾವತಿ ಮಾಡಲು ಸಾಧ್ಯವಾಗದಿದ್ದರೆ ಅವನ ಪರವಾಗಿ ಅಲ್ಲಾಹನು ಮರುಪಾವತಿ ಮಾಡುವನು. ಇನ್ನೊಬ್ಬನು ಸಾಲ  ಪಡೆದಿದ್ದು ಮರುಪಾವತಿಯ ಸಂಕಲ್ಪವನ್ನು ಹೊಂದಿರದಿದ್ದರೆ ಅವನ ಈ ದುರಾಲೋಚನೆಯ ಕಾರಣದಿಂದಾಗಿ ಅಲ್ಲಾಹನು ಅವನನ್ನು ನಾಶಗೊಳಿಸಿ ಬಿಡುವನು (ಬುಖಾರಿ).

ಸಾಲವು ಒಂದು ಸಹಾಯ. ಒಂದು ಪುಣ್ಯ ಕರ್ಮ. ಅದರಿಂದ ಪ್ರೀತಿ ವಿಶ್ವಾಸ ನಷ್ಟ ಹೊಂದಬಾರದು. ಬೈಬಲ್ ಈ ರೀತಿ ಹೇಳುತ್ತದೆ, “ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಸಾಲ ಇರಬೇಕೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರಬಾರದು”  (ಬೈಬಲ್).

ಸಾಲ ಪಡೆಯುವಾಗ ಇರುವ ಸಂತಸ ಸಾಲ ತೀರಿಸುವಾಗ ಇಲ್ಲದವರ ಬಗ್ಗೆ ಸರ್ವಜ್ಞ ಈ ರೀತಿ ಹೇಳಿದ್ದಾನೆ.

“ಸಾಲವನು ಕೊಂಬಾಗ ಹಾಲೋಗರುಂಡಂತೆ.
ಸಾಲಿಗರು ಕೊಂಡು ಎಳೆವಾಗ
ಕಿಬ್ಬಡಿಯ ಕೀಲು ಮುರಿದಂತೆ ಸರ್ವಜ್ಞ”

ಅದೇ ರೀತಿ ಸಾಲ ಪಡೆಯುವವನೂ ಕೊಡುವವನೂ ಸಾಕ್ಷಿ ಪತ್ರ ಬರೆಯುವುದು ಅಗತ್ಯವಾಗಿದೆ. ಧಾರ್ಮಿಕ ಗ್ರಂಥಗಳು ಅದನ್ನು ಹೇಳುತ್ತವೆ. ಬೈಬಲ್ ಈ ರೀತಿ ಹೇಳುತ್ತದೆ,

“ನೀವು ಸಾಲ ತೆಗೆದುಕೊಂಡ ಕುರಿತು ಒಪ್ಪಂದ ಪತ್ರ ಮಾಡಿಟ್ಟುಕೊಳ್ಳಿ. ಇದರಿಂದ ಮುಂದೆ ಅಪಾರ್ಥಗಳು ಆಗದಂತೆ ತಡೆಯಬಹುದು.” (ಯೆರೆಮೀಯಾ 32:9)

ಕುರ್‍ಆನ್ `ಆಯತ್ತುದೈನ್’ ಎಂಬ ಸೂಕ್ತದಲ್ಲಿ ಸಾಲಗಾರ, ಸಾಲ ನೀಡುವವನಿಗೂ ಮತ್ತು ಸಾಲ ವ್ಯವಹಾರದಲ್ಲಿರಬೇಕಾದ ರೀತಿ ನಿಯಮಗಳನ್ನು ವ್ಯವಸ್ಥಿತವಾಗಿ ವಿವರಿಸಲಾಗಿದೆ.

ಅದು ಹೀಗಿವೆ.
“ಓ ಸತ್ಯವಿಶ್ವಾಸಿಗಳೇ, ನೀವು ಅವಧಿಯನ್ನು ನಿಶ್ಚಯಿಸಿಕೊಂಡು ಪರಸ್ಪರ ಸಾಲದ ಲೇವಾದೇವಿ ಮಾಡುವಾಗ ಅದನ್ನು ಬರೆದಿಟ್ಟುಕೊಳ್ಳಿರಿ. ಬರಹಗಾರನೊಬ್ಬನು ಉಭಯತ್ರರಲ್ಲಿ ಯಾರಿಗೂ ಅನ್ಯಾಯವಾಗದಂತೆ ಕರಾರು ಪತ್ರ ಬರೆಯಬೇಕು. ಅಲ್ಲಾಹನು  ಯಾರಿಗೆ ಬರವಣಿಗೆಯ ಅರ್ಹತೆ ಪ್ರದಾನ ಮಾಡಿರುವನೋ ಅವನು ಬರೆಯಲು ನಿರಾಕರಿಸಬಾರದು. ಅವನು ಬರೆಯಬೇಕು. ಸಾಲಕ್ಕೆ ಬಾಧ್ಯಸ್ಥನಾದವನು ಸಾಲಕ್ಕೆ ಬಾಧ್ಯಸ್ಥನಾದವನು ಒಕ್ಕಣೆಯನ್ನು ಬರೆಯಿಸಬೇಕು. ಅವನು ತನ್ನ ಪ್ರಭುವಾದ  ಅಲ್ಲಾಹನನ್ನು ಭಯಪಡಬೇಕು. ಇತ್ಯರ್ಥಗೊಂಡ ವ್ಯವಹಾರದಲ್ಲಿ ತಾರತಮ್ಯ ಮಾಡಬಾರದು. ಆದರೆ ಸಾಲ ಪಡೆದವನು ಅಲ್ಪಮತಿ ಅಥವಾ ದುರ್ಬಲನಾಗಿದ್ದರೆ ಅಥವಾ ಒಕ್ಕಣೆ ಹೇಳಲಾರದವನಾಗಿದ್ದರೆ ಅವನ ರಕ್ಷಕನು ನ್ಯಾಯ ಪೂರ್ಣವಾಗಿ ಒಕ್ಕಣೆ  ಬರೆಯಿಸಬೇಕು. ಅನಂತರ ನಿಮ್ಮ ಪುರುಷರ ಪೈಕಿ ಇಬ್ಬರನ್ನು ಸಾಕ್ಷಿಯಾಗಿರಿಸಿಕೊಳ್ಳಬೇಕು. ಇಬ್ಬರು ಪುರುಷರು ಸಿಗದಿದ್ದರೆ, ಒಬ್ಬ ಪುರುಷನೂ ಇಬ್ಬರು ಸ್ತ್ರೀಯರೂ ಬೇಕು. ಇದು ಒಬ್ಬಳು ಮರೆತು ಬಿಟ್ಟರೆ ಇನ್ನೊಬ್ಬಳು ನೆನಪಿಗೆ ತರಲಿಕ್ಕಾಗಿ. ಈ  ಸಾಕ್ಷಿದಾರರು ನಿಮ್ಮೊಳಗಿನ ಸ್ವೀಕಾರಾರ್ಹ ಸಾಕ್ಷಿದಾರರಲ್ಲಾಗಿರ ಬೇಕು. ಸಾಕ್ಷಿದಾರರೊಡನೆ ಸಾಕ್ಷಿ ನಿಲ್ಲಲು ಹೇಳಿದಾಗ ಅವರು ನಿರಾಕರಿಸಬಾರದು. ವ್ಯವಹಾರವು ಚಿಕ್ಕದಿರಲಿ ಅಥವಾ ದೊಡ್ಡದಿರಲಿ ಅವಧಿಯ ನಿರ್ಣಯದೊಂದಿಗೆ ಅದರ ಕರಾರು ಪತ್ರವ ನ್ನು ಬರೆಯಿಸಿಕೊಳ್ಳುವುದರ ಬಗ್ಗೆ ಉದಾಸೀನರಾಗದಿರಿ. ಈ ಕ್ರಮವು ಅಲ್ಲಾಹನ ಬಳಿ ನಿಮಗೆ ಹೆಚ್ಚು ನ್ಯಾಯ ಬದ್ಧವಾಗಿದೆ. ಇದರಿಂದ ಸಾಕ್ಷ್ಯ ನೆಲೆಗೊಳ್ಳಲು ಹೆಚ್ಚು ಸುಲಭವಾಗುತ್ತದೆ ಮತ್ತು ನೀವು ಸಂಶಯಗ್ರಸ್ತರಾಗುವ ಸಂಭಾವ್ಯತೆಯು ಕಡಿಮೆಯಾಗುತ್ತದೆ. ನೀವು ಪರಸ್ಪರ ಕೈ ಬದಲಾವಣೆಯೊಂದಿಗೆ ಮಾಡಿಕೊಳ್ಳುವ ವ್ಯಾಪಾರ ಸಂಬಂಧ ಲೇವಾದೇವಿಗಳನ್ನು ಬರೆದಿಡದಿದ್ದರೆ ದೋಷವಿಲ್ಲ. ಆದರೆ ವ್ಯಾಪಾರ ವ್ಯವಹಾರಗಳನ್ನು ಇತ್ಯರ್ಥಪಡಿಸಿಕೊಳ್ಳುವಾಗ ಸಾಕ್ಷಿದಾರರನ್ನು ಇರಿಸಿಕೊಳ್ಳಿರಿ.  ಬರಹಗಾರರನ್ನೂ ಸಾಕ್ಷಿದಾರರನ್ನೂ ಸತಾಯಿಸಬಾರದು. ಹಾಗೆ ಮಾಡಿದರೆ ಅದು ನೀವು ಮಾಡುವ ಪಾಪವಾಗುವುದು. ಅಲ್ಲಾಹನ ಕ್ರೋಧದಿಂದ ಭಯಪಡಿರಿ. ಅವನು ನಿಮಗೆ ಸರಿಯಾದ ಕರ್ಮವಿಧಾನದ ಶಿಕ್ಷಣವನ್ನೀಯುತ್ತಾನೆ ಮತ್ತು ಅವನು ಸರ್ವ ವಿಷಯಗಳ ಅಭಿಜ್ಞನಾಗಿರುತ್ತಾನೆ.” (ಅಲ್‍ಬಕರ: 282)

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …