@ ರೈಹಾನ ವಿ.ಕೆ
ಹ. ಮೂಸಾ(ಅ)ರ ಊರುಗೋಲಿಗೆ ಅದ್ಭುತವಾದಂತಹ ಶಕ್ತಿಯಿತ್ತು. ಸಮುದ್ರಕ್ಕೆ ಅದರಿಂದ ಹೊಡೆದಾಗ; ಅದು ಅಲ್ಲಾಹನ ಆಜ್ಞೆಯಂತೆ ಸಮುದ್ರವನ್ನು ಇಬ್ಭಾಗವನ್ನಾಗಿಸಿ ಬಹಳ ಎತ್ತರವಾದಂತಹ ಪರ್ವತದಂತಾಗಿಸಿತು. ಸೂರಃ ತಾಹಾದಲ್ಲಿ ಅಲ್ಲಾಹನು ಹೇಳುತ್ತಾನೆ: “ಲಾಠಿಯಿಂದ ಹೊಡೆದಾಗ ಸಮುದ್ರದ ನೀರು ಇಬ್ಭಾಗವಾಗಿ ಮಹಾ ಪರ್ವತದಂತೆ ನಿಂತು ಬಿಟ್ಟಿತು. ಮಾತ್ರವಲ್ಲ ಆ ಬಳಿಕ ಗೋಚರವಾದ ದಾರಿಯು ಒಣಗಿತ್ತು.” ಇಂತಹ ಒಂದು ಅದ್ಭುತ ಪವಾಡವು ಮೂಸಾ(ಅ)ರ ಚಾಟಿಯಿಂದ ಸಂಭವಿಸುತ್ತದೆ. ಮಾತ್ರವಲ್ಲ; ಜನರು ಇಂದೂ ಸಹ ಅದನ್ನು ಗುರುತಿಸುತ್ತಾರೆ. ಇದು ಅಲ್ಲಾಹನ ನಿದರ್ಶನಗಳಲ್ಲೊಂದಾಗಿದೆ.
ಪವಿತ್ರ ಕುರ್ಆನಿಗೂ ಇಂತಹದೇ ಅದ್ಭುತವಾದ ಶಕ್ತಿ ಇದೆ. ಸಿಂಹದಂತೆ ಘರ್ಜಿಸುತ್ತಾ ಪ್ರವಾದಿಯವರನ್ನು ವಧಿಸಲು ಬಂದ ಉಮರ್ ರನ್ನು ಪ್ರವಾದಿಯವರ(ಸ) ಆಪ್ತ ಮಿತ್ರರನ್ನಾಗಿಸಿದ ಕುರ್ಆನ್, ದೊರೆ ನಜ್ಜಾಶಿಯ ಆಸ್ಥಾನದಲ್ಲಿ ಜಅಫರ್ ರನ್ನು ಅಪ್ರತಿಮ ಘೋಷಕನನ್ನಾಗಿಸಿದ ಕುರ್ಆನ್, ಕ್ರೂರಿಯಾದ ಹಿಂದ್ಳ ಮನಪರಿವರ್ತಿಸಿದ ಕುರ್ಆನ್, ಇಂದಿಗೂ ಅದರ ಯಾವುದೇ ಪದವೂ ಹಸ್ತಕ್ಷೇಪಕ್ಕೊಳಗಾಗದೆ ನಮ್ಮ ಕೈಯಲ್ಲಿದೆ. ಆದರೆ ಇದರಿಂದ ನಮಗೆ ಅತ್ಯದ್ಭುತವಾದ ಪ್ರಯೊಜನವಾಗಬೇಕಾದರೆ ನಾವದರ ಆಳಕ್ಕೆ ಇಳಿಯಬೇಕು. ಅದರ ಪ್ರತಿಯೊಂದು ಶಬ್ದ ರಚನೆ ಹಾಗೂ ಪದಬಳಕೆ ಅದ್ಭುತವಾಗಿದೆ. ಆದ್ದರಿಂದ ನಾವಿದರ ಕೇವಲ ವಾಚಕರು ಮಾತ್ರವಾಗಿರದೆ; ಪ್ರತಿಯೊಂದು ಶಬ್ದಕ್ಕಿರುವ ವಿಸ್ತ್ರತವಾದ ಅರ್ಥವನ್ನು ಅರಿಯಲು ಪ್ರಯತ್ನಿಸಬೇಕು. ಇದಕ್ಕಿರುವ ಎಲ್ಲಾ ದಾರಿಗಳನ್ನು ಅಲ್ಲಾಹನು ನಮಗೆ ಸುಲಭಗೊಳಿಸಿರುವನು. ಆದರೆ ಅರಿಯುವ ತುಡಿತ ನಮ್ಮಲ್ಲಿರಬೇಕು. ಬಾಯಾರದವನ ಮುಂದೆ ಒಂದು ಕಾಲುವೆಯೇ ಹರಿಯುತ್ತಿರಲಿ; ಅದರಿಂದ ಅವನಿಗೇನು ಪ್ರಯೋಜನ? ಯಾರು ಕುರ್ಆನಿನಿಂದ ಪ್ರಯೋಜನ ಪಡೆಯ ಬಯಸುತ್ತಾರೋ ಅಂತಹವರ ಹೃದಯವನ್ನು ಮಾತ್ರ ಅದು ಬದಲಾಯಿಸುತ್ತದೆ. ಅಂತಹವರ ಹೃದಯದಲ್ಲಿ ಒಳಿತುಗಳು ತುಂಬಿ ಅದು ಪರಿಸರದಾದ್ಯಂತ ಸುವಾಸನೆಯನ್ನು ಬೀರುತ್ತದೆ.
ಕುರ್ಆನ್ ಶ್ರೇಷ್ಠ ವಚನವನ್ನು ಉತ್ತಮ ಜಾತಿಯ ಮರವೆಂದಿದೆ: ಅಲ್ಲಾಹನು ಶ್ರೇಷ್ಠ ವಚನವನ್ನು ಯಾವುದಕ್ಕೆ ಹೋಲಿಸುತ್ತಾನೆಂದು ನೀವು ನೋಡುವುದಿಲ್ಲವೇ? ಅದರ ಉಪಮೆ ಹೀಗಿದೆ; ಒಂದು ಉತ್ತಮ ಜಾತಿಯ ಮರ ಅದರ ಬೇರುಗಳು ನೆಲದೊಳಗೆ ಆಳಕ್ಕೆ ಸ್ಥಿರವಾಗಿ ನಾಟಿವೆ. ಅದರ ಗೆಲ್ಲುಗಳು ಆಕಾಶದೆತ್ತರಕ್ಕೆ ಚಾಚಿವೆ. ಅದು ಸದಾಕಾಲ ತನ್ನ ಪ್ರಭುವಿನ ಅನುಜ್ಞೆಯಂತೆ ಫಲಗಳನ್ನು ಕೊಡುತ್ತಿದೆ. ಜನರು ಇವುಗಳಿಂದ ಪಾಠ ಕಲಿಯಲೆಂದು ನಾವು ಉಪಮೆಯನ್ನು ನೀಡುತ್ತೇವೆ.
ಪ್ರಸ್ತುತ ಪವಿತ್ರ ವಚನವನ್ನು ಮನದಾಳದಿಂದ ಅಂಗೀಕರಿಸಿದ ವ್ಯಕ್ತಿಯ ಜೀವನದಿಂದ ಪ್ರತೀ ನಿಮಿಷವೂ ಪ್ರಯೋಜನಗಳು ಲಭಿಸುತ್ತಿರುತ್ತವೆ. ಅಂತಹ ವ್ಯಕ್ತಿಗಳ ವಿಚಾರದಲ್ಲಿ ಸ್ಪಷ್ಟತೆ, ಗುಣದಲ್ಲಿ ಸೌಮ್ಯತೆ, ಸ್ವಭಾವದಲ್ಲಿ ಸಂತುಲನೆ, ಚಾರಿತ್ರ್ಯದಲ್ಲಿ ದೃಢತೆ, ನಡವಳಿಕೆಯಲ್ಲಿ ಪಾವಿತ್ರ್ಯತೆ, ಆತ್ಮದಲ್ಲಿ ಸ್ವಚ್ಛತೆ, ದೇಹದಲ್ಲಿ ಶುಭ್ರತೆ, ವರ್ತನೆಯಲ್ಲಿ ಸೌಹಾರ್ದತೆ, ವ್ಯವಹಾರದಲ್ಲಿ ಪ್ರಾಮಾಣಿಕತೆ, ಮಾತಿನಲ್ಲಿ ಸತ್ಯಸಂಧತೆ, ವಚನ ಪಾಲನೆಯಲ್ಲಿ ನಂಬಿಕೆ, ಒಡನಾಟದಲ್ಲಿ ಸರಳತೆ, ಸಂಸ್ಕಾರದಲ್ಲಿ ಸಂತುಲನೆ, ಆರ್ಥಿಕತೆಯಲ್ಲಿ ನ್ಯಾಯ- ನೀತಿ, ಆಡಳಿತದಲ್ಲಿ ಮೌಲ್ಯ ಪ್ರಜ್ಞೆ, ಯುದ್ಧದಲ್ಲಿ ಸೌಜನ್ಯ ಹಾಗೂ ಕುಟುಂಬ ಸಂಬಂಧದಲ್ಲಿ ಭದ್ರತೆ, ಪ್ರೀತಿಯ ಒಡನಾಟ, ಹಿರಿಯರೊಂದಿಗೆ ಗೌರವ, ಕಿರಿಯರೊಂದಿಗೆ ವಿನಯ, ಕೋಪವನ್ನು ನುಂಗುವ ಸಾಮರ್ಥ್ಯ ಕ್ಷಮಾಶೀಲತೆ ಎಂಬಿತ್ಯಾದಿ ಪುಷ್ಪಗಳು ಅರಳಿ ಅದರ ಸುಗಂಧವು ಪರಿಸರದಲ್ಲೆಡೆ ಹರಡಿ ಕುಟುಂಬವೂ ಸಮಾಜವೂ ಅದನ್ನು ಆಸ್ವದಿಸುವಂತಾಗಬೆಕು. ವ್ಯಕ್ತಿಯ ಬಾಹ್ಯರೂಪವಷ್ಟೇ ಬದಲಾದರೆ ಸಾಲದು; ಅವನ ಅಂತರಂಗ ಕೂಡ ಬದಲಾದಾಗ ಮಾತ್ರ ಇಂತಹ ಒಳಿತುಗಳನ್ನು ನಿರೀಕ್ಷಿಸಬಹುದು.
IslamKannada News Portal

