ಸಂಗ್ರಹ: ಎನ್.ಎಂ. ಪಡೀಲ್
ಅನ್ ಅಬೀದರ್ರ್(ರ) ಕಾಲ, ಕುಲ್ತು ಯಾ ರಸೂಲಲ್ಲಾಹ್ ಅಯ್ಯುಲ್ ಅಅïಮಾಲಿ ಅಫ್ದಲು? ಅಲ್ ಈಮಾನುಬಿಲ್ಲಾಹಿ ವಲ್ ಜಿಹಾದು ಫೀ ಸಬೀಲಿಹಿ.
ಅಬೂದರ್(ರ) ಹೇಳುತ್ತಾರೆ: ನಾನು ಪ್ರವಾದಿಯವರೊಡನೆ(ಸ) ಕೇಳಿದೆ, “ಕರ್ಮಗಳಲ್ಲಿ ಅತ್ಯಂತ ಶ್ರೇಷ್ಠವಾದುದು ಯಾವುದು?” ಪ್ರವಾದಿ(ಸ)ರು ಉತ್ತರಿಸಿದರು- ಅಲ್ಲಾಹನ ಮೇಲಿನ ವಿಶ್ವಾಸ ಮತ್ತು ಅಲ್ಲಾಹನ ಮಾರ್ಗದ ಹೋರಾಟ.
ಜಿಹಾದ್ ಎಂದು ಹೇಳಿದರೆ ವ್ಯಕ್ತಿ, ಸಮೂಹ, ರಾಷ್ಟ್ರದ ಒಳಿತು ಮತ್ತು ಅಭಿವೃದ್ಧಿಗಾಗಿ ಮಾಡುವ ಎಲ್ಲಾ ಕರ್ಮಗಳಿಗೆ ಉಪಯೋಗಿಸುವ ಒಂದು ಪದವಾಗಿದೆ. ಸ್ವಾತಂತ್ರ್ಯ ಸಮರವು ಕೂಡಾ ಜಿಹಾದ್ ಆಗಿತ್ತು. ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಗಸ್ಟ್ 15 ರಂದು ಆಚರಿಸಿದೆವು. ಇಸ್ಲಾಮಿನಲ್ಲಿ ಸ್ವಾತಂತ್ರ್ಯದ ಕುರಿತ ಕಲ್ಪನೆಯೇನು ಎಂಬುದನ್ನು ನಾವು ಸರಿಯಾಗಿ ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ್ರ ಗಳಿಸಲಿಕ್ಕಾಗಿ ಎಲ್ಲಾ ಪ್ರವಾದಿಗಳ ಕಾಲಗಳಲ್ಲೂ ಹೋರಾಟ ನಡೆದಿದೆ. ಇಸ್ಲಾಮ್ ಮಾನವರ ಸ್ವಾತಂತ್ರ್ಯ ಸಂರಕ್ಷಣೆಗಾಗಿ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತದೆ. ಹ. ಇಬ್ರಾಹೀಮ್(ಅ) ಸರ್ವಾಧಿಕಾರಿಯಾದ ನಮ್ರೂದ್ನ ವಿರುದ್ಧ ನಡೆಸಿದ ಹೋರಾಟವೂ ಸ್ವಾತಂತ್ರ್ಯಕ್ಕಾಗಿ ಆಗಿತ್ತು. ಹೂದ್(ಅ), ಲೂತ್(ಅ), ಸಾಲಿಹ್(ಅ) ಸೇರಿದಂತೆ ಹೆಚ್ಚಿನ ಪ್ರವಾದಿಗಳು ತಮ್ಮ ವಿಶ್ವಾಸ ಸ್ವಾತಂತ್ರ್ಯ ಹಾಗೂ ಸಂದೇಶ ಪ್ರಚಾರದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದರು.
ಮದೀನಾದಲ್ಲಿ ಪ್ರವಾದಿಯವರು(ಸ) ಒಂದು ಪುಟ್ಟ ಸಾಮ್ರಾಜ್ಯವನ್ನು ನಿರ್ಮಿಸಿದಾಗ ಅದನ್ನು ಸರ್ವನಾಶ ಮಾಡಲು ಕುರೈಶ್ ಮತ್ತು ಅವರ ಬೆಂಬಲಿಗರು ನಡೆಸಿದ ಯುದ್ಧವಾಗಿತ್ತು ಬದ್ರ್ ಹಾಗೂ ಉಹುದ್, ಕಂದಕ್ ಯುದ್ಧಗಳು. ಅಲ್ಲಾಹನ ಸಹಾಯ ಪ್ರವಾದಿವರ್ಯರಿಗೂ, ಸಹಾಬಿಗಳಿಗೂ ಲಭಿಸಿದಾಗ ಅವರು ಯುದ್ಧದಲ್ಲಿ ವಿಜಯಗಳಾದರು.
ಸ್ವಾತಂತ್ರ್ಯ ಸಮರಕ್ಕೆ ಅನುಮತಿ ನೀಡುವ, ಆಹ್ವಾನ ನೀಡುವ ಹಲವಾರು ಆಯತ್ಗಳನ್ನು ನಾವು ಪವಿತ್ರ ಕುರ್ಆನ್ನಲ್ಲಿ ಕಾಣಬಹುದು. ಯಾರ ವಿರುದ್ಧ ಯುದ್ಧ ನಡೆಸಲಾಗುತ್ತಿದೆಯೋ ಅವರಿಗೆ ಅನುಮತಿ ನೀಡಲಾಗಿದೆ. ಏಕೆಂದರೆ ಅವರು ಮರ್ದಿತರು. ಇವರು, `ನಮ್ಮ ಪ್ರಭು ಅಲ್ಲಾಹ್’ ಎಂದಿಷ್ಟೇ ಹೇಳಿದ ತಪ್ಪಿಗಾಗಿ ತಮ್ಮ ಮನೆಗಳಿಂದ ಅನ್ಯಾಯವಾಗಿ ಹೊರಹಾಕ ಲ್ಪಟ್ಟವರು- (ಸೂರಃ ಹಜ್ಜ್: 40).
ನೀವು ಮರ್ದನಕ್ಕೊಳಗಾದ ಪುರುಷರು, ಸ್ತ್ರೀಯರು ಮತ್ತು ಮಕ್ಕಳಿಗಾಗಿ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ಕಾರಣವೇ? (ಅನ್ನಿಸಾ- 75)
ಕ್ಷೋಭೆಯು ಸಂಪೂರ್ಣ ಅಳಿದು ಹೋಗುವವರೆಗೂ ಧರ್ಮವು ಪರಿಪೂರ್ಣವಾಗಿ ಅಲ್ಲಾಹ ನಿಗೇ ಆಗುವವರೆಗೂ ಅವರ ವಿರುದ್ಧ ಹೋರಾ ಡಿರಿ. (ಅಲ್ಬಕರ- 193).
ತಮ್ಮ ವಿಶ್ವಾಸ ಹಾಗೂ ಆದರ್ಶದಂತೆ ಬದುಕಲು ಹೋರಾಡು ವುದು ಮತ್ತು ಅದಕ್ಕಾಗಿ ವಧಿಸಲ್ಪಡುವುದು ಸ್ವರ್ಗ ಪ್ರವೇಶಕ್ಕೆ ಅರ್ಹವಾಗಿಸುತ್ತದೆಂದು ಪವಿತ್ರ ಕುರ್ಆನ್ನ ಸೂರಃ ತೌಬ 111 ಆಯತ್ನಲ್ಲಿ ತಿಳಿಸಲಾಗಿದೆ.
ವಾಸ್ತವದಲ್ಲಿ ಅಲ್ಲಾಹ್ ಸತ್ಯವಿಶ್ವಾಸಿಗಳಿಂದ ಅವರ ತನು-ಧನಗಳನ್ನು ಸ್ವರ್ಗದ ಬದಲಿಗೆ ಖರೀದಿಸಿದ್ದಾನೆ. ತೌರಾತ್, ಇಂಜೀಲ್ ಮತ್ತು ಕುರ್ಆನ್ನಲ್ಲಿ ಅವರೊಡನೆ (ಮಾಡಲಾದ ಸ್ವರ್ಗದ ವಾಗ್ದಾನವು) ಅಲ್ಲಾಹನ ಹೊಣೆಯಲ್ಲಿರುವ ದೃಢ ವಾಗ್ದಾನವಾಗಿದೆ.
ಪ್ರವಾದಿ(ಸ)ರ ನಿಯೋಗದ ಉದ್ದೇಶವೇ ಮನುಷ್ಯರಿಗೆ ಸ್ವಾತಂತ್ರ್ಯಗಳಿಸಿಕೊಡುವುದು ಎಂಬುದಾಗಿತ್ತು. ಪ್ರವಾದಿಗಳು ಅವರಿಗೆ ಶುದ್ಧ ವಸ್ತುಗಳನ್ನು ಧರ್ಮ ಸಮ್ಮತಗೊಳಿಸುತ್ತಾರೆ. ಅಶುದ್ಧ ವಸ್ತುಗಳನ್ನು ನಿಷಿದ್ಧಗೊಳಿಸುತ್ತಾರೆ. ಅವರ ಮೇಲೆ ಹೇರಲಾಗಿರುವ ಹೊರೆಗಳನ್ನು ಇಳಿಸುತ್ತಾರೆ. ಅವರನ್ನು ಬಿಗಿಯಲಾಗಿದ್ದ ಬಂಧನಗಳನ್ನು ಬಿಡಿಸುತ್ತಾರೆ.
(ಸೂರಃ ಅಅïರಾಫ್: 157)
ಮಾನವನು ಬಂಧಿಸಲ್ಪಟ್ಟಿರುವ ಎಲ್ಲಾ ಸಂಕೋಲೆಗಳಿಂದ ರಕ್ಷಣೆ ಹೊಂದಲು ಇಸ್ಲಾಮ್ ಆಗತವಾಗಿದೆ. ರಾಜಕೀಯ, ಸಾಮಾಜಿಕ ಗುಲಾಮತನ ಎಲ್ಲರಿಂದಲೂ ಮನುಷ್ಯಕುಲವನ್ನು ರಕ್ಷಿಸಿ, ಕೇವಲ ಏಕೈಕನಾದ ಅಲ್ಲಾಹನಿಗೆ ವಿಧೇಯಗೊಳಿಸಲು ಪ್ರವಾದಿಯವರನ್ನು ನೇಮಿಸಲಾಗಿದೆ. ಅಲ್ಲಾಹನೊಂದಿಗಿನ ದಾಸ್ಯತನ ಮನುಷ್ಯನನ್ನು ಎಲ್ಲಾ ರೀತಿಯ ದಾಸ್ಯತನದಿಂದ ಮುಕ್ತಗೊಳಿಸುತ್ತದೆ. ಪರ್ಶಿಯನ್ ಸಾಮ್ರಾಜ್ಯದಲ್ಲಿ ಗುಲಾಮರಾಗಿದ್ದ ಸಾವಿರಾರು ಮಂದಿಯನ್ನು ಸ್ವತಂತ್ರಗೊಳಿಸಿದ್ದು ಇಸ್ಲಾಮ್ ಆಗಿತ್ತು. ಖಾದಿಸಿಯಾ ಯುದ್ಧದಲ್ಲಿ ಇಸ್ಲಾಮೀ ಸೇನೆಯೊಂದಿಗಿನ ಹೋರಾಟವನ್ನು ಇಲ್ಲವಾಗಿಸಲು ಮುಸ್ಲಿಮ್ ಸೈನಿಕ ನೇತೃತ್ವವನ್ನು ಚರ್ಚೆಗೆ ಆಹ್ವಾನಿಸಲಾಗಿದೆ.
ಪರ್ಶಿಯನ್ ಸೇನಾಧಿಪತಿ ರುಸ್ತುಮ್ರ ಬಳಿಗೆ ಮಾತುಕತೆಗೆ ಬಂದದ್ದು ಓರ್ವ ಸಾಮಾನ್ಯನಾದ ರುಬೈಲಿನ್ ಆಮಿರ್ ಎಂಬ ಸೈನಿಕರಾಗಿದ್ದರು. ದೊಡ್ಡ ನೇತಾರರು ಮಾತುಕತೆಗೆ ಬರಬಹುದೆಂದು ನಿರೀಕ್ಷಿಸಿದ್ದ ರುಸ್ತುಮ್ಗೆ ನಿರಾಶೆಯಾಗಿತ್ತು. ನಮ್ಮಲ್ಲಿ ನಿಮಗೆ ಇಷ್ಟೇ ಬೆಲೆ ನೀಡುವುದು ಎಂದು ಪರ್ಶಿಯನ್ ಸೇನೆಗೆ ಮನಗಾಣಿಸಿ ಕೊಡಲು ಈ ರೀತಿ ಕಳಿಸಲಾಗಿತ್ತು. ರುಸ್ತುಮ್ ಅವರೊಡನೆ ಕೇಳಿದರು: “ನಮ್ಮ ಸಾಮ್ರಾಜ್ಯಕ್ಕೆ ನೀವು ಏಕೆ ಬಂದಿದ್ದೀರಿ?
ರುಬೈಬ್ರ ಉತ್ತರವು ಇತಿಹಾಸ ಪುಟದಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡಲಾಗಿದೆ. ಅವರು ಹೇಳಿದರು: “ನಮ್ಮನ್ನು ಅಲ್ಲಾಹನು ಕಳಿಸಿದ್ದಾನೆ. ಮಾನವನ ಗುಲಾಮತನದಿಂದ ಅವರನ್ನು ರಕ್ಷಿಸಿ, ವಿಶ್ವಸಂರಕ್ಷನಾದ ಅಲ್ಲಾಹನ ಕಡೆಗೆ ಅವರನ್ನು ತಲುಪಿಸಲಿಕ್ಕಾಗಿ, ಇಹಲೋಕದ ಇಕ್ಕಟ್ಟಿನಿಂದ ಅದರ ವಿಶಾಲತೆಯೆಡೆಗೂ, ಧರ್ಮದ ಅತಿಕ್ರಮದಿಂದ ಇಸ್ಲಾಮಿನ ನ್ಯಾಯ ವ್ಯವಸ್ಥೆಯ ಕಡೆಗೂ ಆಹ್ವಾನಿಸಲು ನಾವು ಇಲ್ಲಿಗೆ ಬಂದಿದ್ದೇವೆ. ಇಸ್ಲಾಮ್ ವಿಶ್ವದಾದ್ಯಂತ ಹರಡಲು ಮುಖ್ಯ ಕಾರಣ ಈ ದಾಸ್ಯತನದ ವಿರುದ್ಧ ಹೋರಾಡಿದ್ದೇ ಆಗಿದೆ. ಮಾನವ ಸಮೂಹದ ಸ್ವಾತಂತ್ರ್ಯ ಘೋಷಣೆಯೇ ಜನರು ಇಸ್ಲಾಮಿನೆಡೆಗೆ ಆಕರ್ಷಿತಗೊಳ್ಳಲು ಕಾರಣವಾಗಿತ್ತು.
ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 74 ವರ್ಷವಾದರೂ ಈಗಲೂ ಒಂದೊಂದೇ ಸ್ವಾತಂತ್ರ್ಯ ಕಸಿಯಲಾಗುತ್ತಿದೆ. ಆಹಾರ, ವಸ್ತ್ರ, ವಿಶ್ವಾಸ, ಆರಾಧನೆ, ಭಾಷೆ ಹೀಗೆ ಎಲ್ಲಾ ಸ್ವಾತಂತ್ರ್ಯಗಳನ್ನು ಕಸಿಯಲಾಗುತ್ತದೆ. ತಾನು ಹೇಳಿದ ನೀತಿ ನಿಯಮಗಳು ಇಲ್ಲಿರಬೇಕು ಎಂಬ ಕಾಠಿಣ್ಯ ಗೋಚರವಾಗುತ್ತದೆ. ನಮ್ಮಿಂದ ಕಸಿಯಲಾಗುತ್ತಿರುವ ಈ ಸ್ವಾತಂತ್ರ್ಯವನ್ನು ಮರಳಿ ಪಡೆಯುವುದು ಪ್ರತಿಯೊಬ್ಬ ವಿಶ್ವಾಸಿಯ ಕರ್ತವ್ಯವಾಗಿದೆ. ಖಲೀಫಾ ಉಮರ್(ರ) ತನ್ನ ಈಜಿಪ್ಟ್ನ ರಾಜ್ಯಪಾಲರೊಂದಿಗೆ ಕೇಳಿದ ಪ್ರಶ್ನೆ ಪ್ರಸಕ್ತವಾದುದು- “ನೀವು ಜನರನ್ನು ಯಾವಾಗ ಗುಲಾಮರನ್ನಾಗಿ ಮಾಡಲು ಆರಂಭಿಸಿದ್ದೀರಿ? ಅವರ ತಾಯಂದಿರು ಸ್ವತಂತ್ರರಾಗಿಯೇ ಅವರಿಗೆ ಜನ್ಮ ನೀಡಿದ್ದಾರಲ್ಲವೇ? ಈಗ ವಿಶ್ವದಲ್ಲಿರುವ ಹಾಗೂ ಎಲ್ಲಾ ಕಡೆಯ ಸರ್ವಾಧಿಕಾರಿ ಮನೋವೃತಿಯ ಆಡಳಿತಗಾರರೊಂದಿಗೆ ನಮಗೆ ಕೇಳಲಿಕ್ಕಿರುವ ಪ್ರಶ್ನೆಯೂ ಅದೇ ಆಗಿದೆ.
IslamKannada News Portal


