Home / ಲೇಖನಗಳು / ಹಣದ ಮುಂದೆ ಮಂಡಿಯೂರದಿರಿ

ಹಣದ ಮುಂದೆ ಮಂಡಿಯೂರದಿರಿ

@ ಪಿ.ಎಂ.ಎಂ. ಗಫೂರ್

ಸದ್ಭಕ್ತನಾದ ನೈಜ ದೈವ ಭಕ್ತನಾದ ವಿದ್ವಾಂಸರನ್ನು ದೋಚಬೇಕೆಂಬ ಬಯಕೆಯು ರಾಜ ಹಾರೂನ್ ರಶೀದ್‍ರಲ್ಲಿ ಮೊಳಕೆಯೊಡೆಯಿತು. ತನ್ನ ಪ್ರಧಾನ ಮಂತ್ರಿ ಫಝೀಲ್ ಬಿನ್ ರಬಾಅರನ್ನು ಕರೆದು ಈ ವಿಚಾರವನ್ನು ತಿಳಿಸಿದರು. ಅದರಂತೆ ಪ್ರಧಾನ ಮಂತ್ರಿಯವರನ್ನು ಓರ್ವ ಪ್ರಸಿದ್ಧ ವಿದ್ವಾಂಸರ ಬಳಿಗೆ ಕರೆದುಕೊಂಡು ಹೋದನು. ಆ ವಿದ್ವಾಂಸರು ಏನನ್ನೋ ಓದುವುದರಲ್ಲಿ ನಿರತರಾಗಿದ್ದರು. ರಾಜರನ್ನು ಕಂಡ ಕ್ಷಣವೇ ಎದ್ದು ನಿಂತು “ಅಮೀರ್‍ ರವರೇ, ತಾವು ನನ್ನನ್ನು ನೋಡಲು ಇಲ್ಲಿಯವರೆಗೆ ಯಾಕೆ ಬಂದಿದ್ದೀರಿ? ತಾವು ಒಂದು ಮಾತು ಹೇಳಿ ಕಳುಹಿಸಿದ್ದರೆ ನಾನೇ ಅಲ್ಲಿಗೆ ಬರುತ್ತಿದ್ದೆನಲ್ಲಾ” ಎಂದು ಹೇಳಿದರು.

ಆಗ ರಾಜರು “ನಿಮಗೆ ಹಣದ ಏನಾದರೂ ಅಗತ್ಯವಿದೆಯೇ?” ಎಂದು ಕೇಳಿದರು. “ಹೌದು. ನನಗೆ ತುಂಬಾ ಸಾಲಗಳಿವೆ” ಎಂದು ವಿದ್ವಾಂಸರು ಹೇಳಿದಾಗ ರಾಜರು ದೊಡ್ಡ ಮೊತ್ತದ  ಹಣವನ್ನು ನೀಡಿ ಹೊರಟರು.

ದಾರಿ ಮಧ್ಯೆ ರಾಜರು ಪ್ರಧಾನ ಮಂತ್ರಿಯೊಡನೆ, “ಆ ವಿದ್ವಾಂಸರ ಬಗ್ಗೆ ನನಗೆ ಅಷ್ಟೊಂದು ತೃಪ್ತಿಯೆನಿಸಲಿಲ್ಲ. ಅದಕ್ಕಾಗಿ ಇನ್ನೋರ್ವ ವಿದ್ವಾಂಸರನ್ನು ನನಗೆ ತೋರಿಸಿರಿ” ಎಂದು ಹೇಳಿದರು.

ಮತ್ತೋರ್ವ ಪ್ರಸಿದ್ಧರಾದ ವಿದ್ವಾಂಸರನ್ನು ರಾಜ ಮತ್ತು ಪ್ರಧಾನ ಮಂತ್ರಿಯವರು ಭೇಟಿಯಾದರು. ಅವರು ಕೂಡಾ ರಾಜರ ಆಗಮವನ್ನು ನೋಡಿ ಬೆರಗಾದರು. ಮಾತುಕತೆ ಮುಗಿದ ಬಳಿಕ  ನಿಮಗೆ ಹಣದ ಅಗತ್ಯವೇನಾದರೂ ಇದೆಯೇ ಎಂದು ರಾಜ ಕೇಳಿದರು. ಅವರು ಕೂಡಾ ಅತ್ಯಾಸೆಯಿಂದ ಉತ್ತರಿಸಿದಾಗ ರಾಜ ಅವರಿಗೂ ಧಾರಾಳ ಹಣವನ್ನು ನೀಡಿದರು. ಹಿಂದಿರುಗಿ  ಬರುವಾಗ ರಾಜರು ಪ್ರಧಾನ ಮಂತ್ರಿಯೊಂದಿಗೆ “ನೋಡಿ ನನಗೆ ಹಣದ ಆಸೆಯಿರುವ ವಿದ್ವಾಂಸರು ಬೇಕಾಗಿಲ್ಲ. ತನ್ನ ಪಾಂಡಿತ್ಯವನ್ನು ಹಣಕ್ಕೆ ಮಾರದೆ ಇರುವ ತಖ್ವಾ ಹೊಂದಿರುವ ವಿದ್ವಾಂಸರನ್ನು ನಾನು ಬಯಸುತ್ತಿದ್ದೇನೆ” ಎಂದು ಹೇಳಿದರು.

ನಂತರ ಅವರು ಮಹಾ ವಿದ್ವಾಂಸರಾದ ಫುದೈಲ್ ಬಿನ್ ಇಯಾಝ್‍ರವರ ಬಳಿಗೆ ತೆರಳಿದರು. ರಾಜರನ್ನು ನೋಡಿದ ಕೂಡಲೇ ಅವರ ಮುಖದಲ್ಲಿ ಯಾವುದೇ ವಿಶೇಷ ಬದಲಾವಣೆ  ಕಂಡು ಬರಲಿಲ್ಲ. ಏನಾದರೂ ನೆರವಿನ ಅಗತ್ಯವಿದೆಯೇ ಎಂದು ರಾಜರು ವಿದ್ವಾಂಸರ ಬಳಿ ಕೇಳಿದಾಗ, “ದುಃಖ ಬಾಧಿಸಿದಾಗ ನಿಮ್ಮಿಂದ ನಿಮಗೇ ಸಹಾಯ ಮಾಡಲಿಕ್ಕಾಗದು.  ಹೀಗಿರುವಾಗ ನೀವು ನನಗೆ ಹೇಗೆ ನೆರವಾಗುತ್ತೀರಿ” ಎಂದು ಪ್ರಶ್ನಿಸಿದರು.

“ನಿಮಗೆ ಹಣದ ಅಗತ್ಯವಿದೆಯೇ?” ಎಂದು ನಾನು ಕೇಳಿದೆ.
“ನೆರವಾಗಲು ನಿಮ್ಮದು ಅಂತ ಏನಿದೆ? ಈ ಸಂಪತ್ತು ಎಲ್ಲವೂ ಅಲ್ಲಾಹನದ್ದಲ್ಲವೇ?”
“ಅಲ್ಲಾಹನು ನನಗೆ ವಹಿಸಿಕೊಟ್ಟ ಈ ಸಂಪತ್ತಿನಿಂದ ನಿಮಗೆ ಏನಾದರೂ ಕೊಡಬಹುದಲ್ಲವೇ?”
“ಅಲ್ಲಾಹನು ನೀಡಿದ ಸಂಪತ್ತನ್ನು ಹೇಗೆ ವ್ಯಯಿಸಬೇಕೆಂದು ಅವನೇ ಕಲಿಸಿಕೊಟ್ಟಿದ್ದಾನೆ. ತಮ್ಮ ಅಧೀನದಲ್ಲಿರುವ ಸಂಪತ್ತು ಈ ನಾಡಿನ ಪ್ರಜೆಗಳದ್ದಾಗಿದೆ. ಅದರಿಂದ ನನಗೆ ಏನೂ ಬೇಡ”  ಎಂದು ವಿದ್ವಾಂಸರು ಹೇಳಿದರು.

ಫುದೈಲ್ ಬಿನ್ ಇಯಾಝ್‍ರವರ ಉತ್ತರ ಕೇಳಿದ ಹಾನೂನ್ ರಶೀದರು “ತಾನು ಹುಡುಕುತ್ತಿದ್ದ ವಿದ್ವಾಂಸರು ನನಗೆ ದೊರೆತರು ಎಂದು ಆಹ್ಲಾದಭರಿತರಾದರು. ಅವರ ಜೊತೆ ಕೆಲವು ದಿನಗಳ ಕಾಲ ತಂಗಿ ಅನೇಕ ವಿಚಾರಗಳನ್ನು ಕರಗತ ಮಾಡಿಕೊಂಡರು.

ಬುದ್ಧಿವಂತರಾದ ಹಾರೂನ್ ರಶೀದ್‍ರವರು ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುವ ಮಾನದಂಡವಾಗಿ ಯಾವುದನ್ನು ಬಳಸಿಕೊಂಡರು ಎಂಬುದನ್ನು ಗಮನಿಸಬೇಕು. ಅವರು ಹಣ,  ಸಂಪತ್ತಿನ ಮುಂದೆ ವಿದ್ವಾಂಸರು ಅಲುಗಾಡುತ್ತಾರೆಯೇ ಎಂದು ಪರೀಕ್ಷಿಸಿದರು. ಹೆಚ್ಚಿನವರು ಹಣದ ಮುಂದೆ ಸೋತು ಹೋಗುತ್ತಾರೆ ಎಂಬುದಕ್ಕೆ ಇತಿಹಾಸದಲ್ಲಿ ಧಾರಾಳ ಉದಾಹರಣೆಗಳಿವೆ. ಸೊತ್ತು ಸಂಪತ್ತು ವ್ಯಕ್ತಿತ್ವದ ಶುದ್ದಿಯ ಪ್ರಮುಖ ಘಟಕವಾಗಿದೆ.

ಪ್ರವಾದಿವರ್ಯರು(ಸ) ಹೇಳಿರುವ ಪ್ರಕಾರ ಓರ್ವ ವ್ಯಕ್ತಿಯನ್ನು ಅಳೆಯುವ ಮಾನದಂಡ ಹಣ, ಸಂಪತ್ತಾಗಿದೆ.

ಇನ್ನೊಂದು ಘಟನೆ ಹೀಗಿದೆ.
ಖಲೀಫ ಉಮರುಲ್ ಫಾರೂಕ್(ರ)ರು ಒಂದು ಚೀಲದಲ್ಲಿ ನಾಲ್ಕುನೂರು ದಿರ್‍ಹಮ್ ತುಂಬಿಸಿ ನೌಕರನ ಜೊತೆ “ಇದನ್ನು ಅಬೂ ಉಬೈದ ಬಿನ್ ಜರ್ರಾಹ್‍ಗೆ ಕೊಡುವಂತೆ ಸೂಚಿಸಿದರು. ಬಳಿಕ ಅವರು ಈ ಹಣವನ್ನು ಏನು ಮಾಡುತ್ತಾರೆಂಬುದನ್ನು ನೋಡಿ ಅಲ್ಲಿಯೇ ತಂಗಬೇಕು. ಅದರಂತೆ ಆತ ಈ ಹಣದ ಚೀಲವನ್ನು ಅಬೂ ಉಬೈದ ಬಿನ್ ಜರ್ರಾಹ್‍ರಿಗೆ ನೀಡಿ ಇದನ್ನು ನಿಮ್ಮ ಅಗತ್ಯಗಳಿಗೆ ಬಳಸಬೇಕೆಂದು ಅಮೀರುಲ್ ಮುಅïಮಿನೀನ್ ಸೂಚಿಸಿ ಕಳುಹಿಸಿ ಕೊಟ್ಟಿದ್ದಾರೆ ಎಂದು ಹೇಳಿದರು. “ಅಲ್ಲಾಹನು ಖಲೀಫರಿಗೆ ಅನುಗ್ರಹಗಳನ್ನು ವರ್ಷಿಸಲಿ” ಎಂದು ಪ್ರಾರ್ಥಿಸಿದರು. ಬಳಿಕ ಕೆಲಸಗಾರನನ್ನು ಕರೆದು “ಇದರಿಂದ ಏಳು ದಿನಾರ್ ಇಂತಿಂತಹವರಿಗೆ, ಹತ್ತು ದಿನಾರ್ ಇಂತಿಂತಹವರಿಗೆ, ಐದು ದಿನಾರ್ ಇಂತಿಂತಹವರಿಗೆ…” ಎಂದು ಆ ಚೀಲದ  ಹಣ ಮುಗಿಯುವ ತನಕ ಒಬ್ಬೊಬ್ಬರಿಗೆ ಹಂಚಲು ಹೇಳಿದರು.

ನಡೆದ ವಿಚಾರಗಳನ್ನೆಲ್ಲಾ ನೌಕರನು ಖಲೀಫರ ಮುಂದೆ ವಿವರಿಸಿದನು. ಅಬೂ ಉಬೈದರಿಗೆ ನೀಡಿದಂತೆ ಒಂದು ಹಣದ ಚೀಲವನ್ನು ಮುಆದ್ ಬಿನ್ ಜಬಲ್‍ರಿಗೆ ಸಿದ್ಧಪಡಿಸಿದ್ದರು. ಹಿಂದೆ ಹಣದ ಚೀಲ ನೀಡಿದಾಗ ನೀಡಿದ ಅದೇ ಸೂಚನೆಗಳೊಂದಿಗೆ ಮುಆದ್(ರ)ರ ಬಳಿಗೆ ಕಳುಹಿಸಿದರು. ಹಣದ ಚೀಲ ನೋಡಿದ ಕೂಡಲೇ ಮುಆದ್ ಬಿನ್ ಜಬಲ್ “ಖಲೀಫ ಉಮರ್ (ರ)ರವರನ್ನು ಅಲ್ಲಾಹನು ಅನುಗ್ರಹಿಸಲಿ” ಎಂದು ಪ್ರಾರ್ಥಿಸಿ ನೌಕರನನ್ನು ಕರೆದು ಈ ಎಲ್ಲಾ ಹಣವನ್ನು ಒಂದೊಂದು ಮನೆಗೆ ಹಂಚಲು ಸೂಚಿಸಿದರು. ಅಷ್ಟರಲ್ಲಿ ಬಾಗಿಲ ಸಂದಿನಿಂದ ಇಣುಕಿದ ಅವರ ಪತ್ನಿಯು “ಇಲ್ಲಿಯೂ ಬಡವರು ಇದ್ದಾರೆ” ಎಂದು ಹೇಳಿದರು. ಆಗ ಚೀಲದಲ್ಲಿ ಎರಡು ದಿನಾರ್ ಮಾತ್ರ ಉಳಿದಿತ್ತು.

ಸಹಾಬಿಗಳ ಜೀವನವು ಸೊತ್ತು ಮತ್ತು ಹಣದ ಮುಂದೆ ಶರಣಾಗತವಾಗುತ್ತಿರಲಿಲ್ಲ. ಹಣದ ಮುಂದೆ ಅವರ ತಲೆಯು ಬಾಗುತ್ತಿರಲಿಲ್ಲ. ಅತಿಯಾಸೆಯ ಜೀವನ ರೀತಿಯಲ್ಲಿ ಅವರಿಗೆ  ಆಸಕ್ತಿಯಿರಲಿಲ್ಲ. ಅದು ಅವರಿಗೇನೂ ತಿಳಿಯದ ವಿಚಾರವೇನಲ್ಲ. ಆದರೆ ಅವರ ಜೀವನವು ಮಹತ್ತರವಾದ ಜೀವನವಾಗಿತ್ತು. ಸ್ವಸ್ಥವಾದ ಜೀವನಕ್ಕೆ ಹಣದ ಅಗತ್ಯವಿಲ್ಲ ಎಂಬುದನ್ನು ಅವರು ಸತ್ಯವಿಶ್ವಾಸ ಸ್ವೀಕರಿಸಿದ ಬಳಿಕ ಕಲಿತರು. ಆಡಂಬರ, ಸುಖಲೋಲುಪತೆಯ ಜೀವನವನ್ನು ನಮ್ಮಲ್ಲಿ ಹೆಚ್ಚಿನವರು ಬಯಸುತ್ತಾರೆ. ಆಭರಣಗಳು, ಬಟ್ಟೆಬರೆಗಳು, ಪೀಠೋಪಕರಣಗಳು,  ಕೋಣೆಗಳು ಇಂದು ಅಗತ್ಯಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಖರೀದಿಸುತ್ತಾರೆ. ಅನೇಕ ವಸ್ತುಗಳು ಉಪಯೋಗ ಶೂನ್ಯವಾಗಿ ಬಿದ್ದಿರುತ್ತವೆ. ಈ ಕುರಿತು ನಾವು ಭಯಪಡಬೇಕು.

ಅಹ್ಮದ್‍ರವರು ಉದ್ಧರಿಸಿದ ಪ್ರವಾದಿ ವಚನವೊಂದು ಹೀಗಿದೆ, “ಆಡಂಬರ ಜೀವನವನ್ನು ತೊರೆಯಿರಿ. ಲೌಕಿಕ ಸುಖಲೋಲುಪತೆಯ ಹಿಂದೆ ಅಲ್ಲಾಹನ ದಾಸರು ಹೋಗಲಾರರು.” ತಬ್ರಾನಿಯವರು ಉದ್ಧರಿಸಿದ ಮತ್ತೊಂದು ಪ್ರವಾದಿ ವಚನ ಹೀಗಿದೆ, “ನನ್ನ ಸಮುದಾಯದಲ್ಲಿ ಒಂದು ಕೂಟವು ಬರಲಿಕ್ಕಿದೆ. ಅವರು ಬಹುವರ್ಣಗಳ ಆಹಾರವನ್ನು ಸೇವಿಸುವರು. ವಿವಿಧ ರೀತಿಯ ಪಾನೀಯಗಳನ್ನು ಕುಡಿಯುವರು. ನಾನಾ ರೀತಿಯ ಉಡುಗೆ ತೊಡುಗೆಗಳನ್ನು ಬಳಸುವರು. ಬಾಯಿ ಅಗಲಿಸಿ ಅಬ್ಬರಿಸಿ ನಗುವರು.

ನನ್ನ ಸಮುದಾಯದ ಭೌತಿಕವಾದ ಸುಖಾಡಂಬರಗಳು ನನಗೆ ದೊರೆಯದೇ ಇರುವುದು ಅಲ್ಲಾಹನಿಂದ ನನಗೆ ದೊರೆತ ದೊಡ್ಡ ಅನುಗ್ರಹವೆಂದು ವಿದ್ವಾಂಸರಾದ ಮರ್‍ಹೂಮ್ ಅಮಾನಿ ಮೌಲವಿ ಹೇಳುತ್ತಿದ್ದರು. ಈ ವಾಕ್ಯಗಳು ಪಾಂಡಿತ್ಯದ ಮತ್ತು ತೀರವಿಲ್ಲದ ಭಕ್ತಿಯ ಸಂಕೇತವಾಗಿದೆ!

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …