ಮೂಲ: ಅಬೂ ಯಹ್ಯಾ ಟಿ ಅನುವಾದ: ಅಬೂ ಆಫಿಯಾ
ಓ ಆದಮರ ಸಂತತಿಯವರೇ, ಉಪಾಸನೆಯ ಎಲ್ಲ ಸಂದರ್ಭಗಳಲ್ಲೂ ನಿಮ್ಮ ‘ಅಲಂಕಾರ’ಗಳಿಂದ ಭೂಷಿತರಾಗಿರಿ. ಉಣ್ಣಿರಿ, ಕುಡಿಯಿರಿ ಮತ್ತು ಮಿತಿ ಮೀರಬೇಡಿರಿ. ಅಲ್ಲಾಹನು ಮಿತಿ ಮೀರುವವರ ನ್ನು ಮೆಚ್ಚುವುದಿಲ್ಲ.
ಓ ಪೈಗಂಬರರೇ, ಅವರೊಡನೆ ಕೇಳಿರಿ, “ಅಲ್ಲಾಹನು ತನ್ನ ದಾಸರಿಗಾಗಿ, ಹೊರ ತೆಗೆದಿರುವ ವಸ್ತ್ರ ಭೂಷಣಗಳನ್ನೂ ಶುದ್ಧ ಆಹಾರ ಸಾಮಗ್ರಿಗಳನ್ನೂ ನಿಷಿದ್ಧಗೊಳಿಸಿದವನಾರು?” ಹೇಳಿರಿ, “ಇವೆಲ್ಲ ವಸ್ತುಗಳೂ ಇಹಜೀವನದಲ್ಲೂ ಸತ್ಯವಿಶ್ವಾಸಿಗಳಿಗಾಗಿರುತ್ತವೆ ಮತ್ತು ಪುನರುತ್ಥಾನ ದಿನದಲ್ಲಂತೂ ಇವು ಕೇವಲ ಅವರಿಗಾಗಿಯೇ ಮೀಸಲಾಗಿರುವುವು.” ಇದೇ ರೀತಿ ನಾವು ನಮ್ಮ ಸೂಕ್ತಗಳನ್ನು ಜ್ಞಾನವುಳ್ಳವರಿಗೆ ಸುಸ್ಪಷ್ಟವಾಗಿ ವಿವರಿಸುತ್ತೇವೆ.
ಓ ಪೈಗಂಬರರೇ, ಇವರೊಡನೆ ಹೇಳಿರಿ: ನನ್ನ ಪ್ರಭು ನಿಷಿದ್ಧಗೊಳಿಸಿದ ವಿಷಯಗಳಿವು- ಲಜ್ಜಾಹೀನ ಕಾರ್ಯಗಳು. ಅವು ಪ್ರತ್ಯಕ್ಷವಾದವುಗಳಿರಲಿ ಅಥವಾ ರಹಸ್ಯವಾದವುಗಳಿರಲಿ,
ಪಾಪ ಕಾರ್ಯಗಳು, ಸತ್ಯಕ್ಕೆ ವಿರುದ್ಧವಾದ ಅತಿರೇಕ, ಅಲ್ಲಾಹನು ಯಾರ ಪರವಾಗಿ ಯಾವುದೇ ಆಧಾರ ಅವತೀರ್ಣಗೊಳಿಸಿಲ್ಲವೋ ಅಂಥವರನ್ನು ಅವನೊಡನೆ ಸಹಭಾಗಿಯಾಗಿಸುವುದು ಮತ್ತು (ವಾಸ್ತವದಲ್ಲಿ ಅಲ್ಲಾಹನೇ ಹೇಳಿರುತ್ತಾನೆಂದು) ನಿಮಗೆ ತಿಳುವಳಿಕೆ ಇಲ್ಲದಿರುವ ಮಾತನ್ನು ಅಲ್ಲಾಹನ ಹೆಸರಲ್ಲಿ ಹೇಳುವುದು.”
(ಪವಿತ್ರ ಕುರ್ಆನ್: 7: 31-33)
ಶೀರ್ಷಿಕೆ ಮತ್ತು ಬೇಡಿಕೆಗಳು:
ಅಲ್ ಅಅïರಾಫ್ ಅಧ್ಯಾಯದ ಈ ವಚನಗಳಲ್ಲಿ, ಹಲಾಲ್ ಮತ್ತು ಹರಾಮ್ಗಳ ಕುರಿತ ಮಾನವರ ಅಸಂತುಲನೆಯನ್ನು ಮುಂದಿಟ್ಟು, ಅಲ್ಲಾಹ್ ಮತ್ತು ಮಾನವರ ಹಕ್ಕುಗಳಿಗೆ ಸಂಬಂಧಿಸಿ ಯಾವೆಲ್ಲ ವಸ್ತುಗಳು ಮೂಲತಃ ನಿಷಿದ್ಧವಾಗಿವೆ ಹಾಗೂ ಪ್ರತಿ ನಿಷಿದ್ಧದ ಮೂಲವಾಗಿದೆ ಎಂಬುದನ್ನು ತಿಳಿಸಲಾಗಿದೆ.
1. ವಸ್ತ್ರಾಲಂಕಾರ ಮತ್ತು ಆಹಾರ ಪಾನೀಯ ಸೇವನೆಯ ಆದೇಶ
(ಉಪಾಸನೆಯ ಎಲ್ಲ ಸಂದರ್ಭಗಳಲ್ಲೂ ನಿಮ್ಮ ‘ಅಲಂಕಾರ’ಗಳಿಂದ ಭೂಷಿತರಾಗಿರಿ. ಉಣ್ಣಿರಿ, ಕುಡಿಯಿರಿ)
ವಿಶದೀಕರಣ: ಮಾನವನಲ್ಲಿ ಒಂದು ಸಮಸ್ಯೆ ಇದೆ. ಅದೇನೆಂದರೆ ಅವನು, ತನ್ನ ಧಾರ್ಮಿಕತೆಯ ಪರಾಕಾಷ್ಠೆಯಿಂದಾಗಿ ಎಲ್ಲ ವಸ್ತುಗಳನ್ನೂ ತನ್ನ ಮೇಲೆ ನಿಷಿದ್ಧಗೊಳಿಸತೊಡಗುತ್ತಾನೆ. ವಸ್ತುತಃ ಅಲ್ಲಾಹನ ಕಡೆಯಿಂದ ಅಂತಹ ಯಾವುದೇ ಆದೇಶ ಬಂದಿರುವುದಿಲ್ಲ. ಉದಾಹರಣೆಗೆ, ಕುರೈಶರ ಧಾರ್ಮಿಕ ನೇತಾರರು ತವಾಫ್ನ ವೇಳೆ ಕುರೈಶೇತರರು ವಸ್ತ್ರ ಧರಿಸುವುದು ಅನುವದನೀಯವಲ್ಲ ಎಂದು ಸಾರಿದ್ದರು. ಏಕೆಂದರೆ ಅವರ ದೃಷ್ಟಿಯಲ್ಲಿ ಇತರ ಜನರ ವಸ್ತ್ರಗಳು ಲೌಕಿಕ ಅಲಂಕಾರವಾಗಿತ್ತು. ಪವಿತ್ರ ಕುರ್ಆನ್ ಅದನ್ನೇ ತಿದ್ದಿತು. ಉಪಾಸನೆಯ ಎಲ್ಲ ಸಂದರ್ಭದಲ್ಲೂ ವಸ್ತ್ರಾಲಂಕಾರ ಭೂಷಿತರಾಗಿರಲು ಮತ್ತು ಸಮಾಧಾನದಿಂದ ಉಣ್ಣಲು, ಕುಡಿಯಲು ಆದೇಶಿಸಿತು.
ಅಲ್ಲದೆ ಈ ವಸ್ತ್ರವಿರಲಿ ಅಥವಾ ಇನ್ನಾವುದೇ ಅಲಂಕಾರವಿರಲಿ ಅಥವಾ ಪರಿಶುದ್ಧ ಆಹಾರವೇ ಇರಲಿ ಇವೆಲ್ಲವೂ ವಿಶ್ವಾಸಿಗಳಿಗೆ ಇರುವಂತಹುದು ಎಂದು 32ನೇ ವಚನದಲ್ಲಿ ಸ್ಪಷ್ಟಪಡಿಸಲಾಗಿದೆ. ಆದ್ದರಿಂದ ವಿಶ್ವಾಸ ಎಂದ ಮಾತ್ರಕ್ಕೆ ಐಹಿಕ ಅಲಂಕಾರ ಮತ್ತು ಅನುಗ್ರಹಗಳನ್ನು ತೊರೆಯಬೇಕೆಂದು ಖಂಡಿತ ಅರ್ಥ ಅಲ್ಲ. ಹಾಗಾಗಿ ಅಲಂಕಾರ ಭೂಷಿತರಾಗಿರಿ ಮತ್ತು ಸಮಾಧಾನದಿಂದ ಉಣ್ಣಿರಿ, ಕುಡಿಯಿರಿ. ಅಲ್ಲಾಹ್ ಅದರಿಂದ ತಡೆಯುವುದಿಲ್ಲ.
ಹದೀಸ್: ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಅಲ್ಲಾಹನು ತನ್ನ ದಾಸನಿಂದ ತನ್ನ ಅನುಗ್ರಹಗಳ ಪ್ರಕಟವನ್ನು ಇಷ್ಟಪಡುತ್ತಾನೆ.” [ವರದಿ: ಅಮ್ರ್ ಬಿನ್ ಶುಐಬ್(ರ) ಅವರು ತಮ್ಮ ತಂದೆಯಿಂದ ಮತ್ತು ಅವರು ತಮ್ಮ ತಂದೆಯಿಂದ – ತಿರ್ಮಿದಿ]
ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ದಾಸನು ಏನಾದರೂ ತಿಂದರೆ ಮತ್ತು ಕುಡಿದರೆ ಅದಕ್ಕಾಗಿ ಅಲ್ಲಾಹನನ್ನು ಸ್ತುತಿಸಿ ಅವನಿಗೆ ಕೃತಜ್ಞತೆ ಅರ್ಪಿಸುವುದನ್ನು ಅಲ್ಲಾಹ್ ಬಹಳ ಮೆಚ್ಚುತ್ತಾನೆ.” [ವರದಿ: ಅನಸ್(ರ) – ಮುಸ್ಲಿಮ್]
ಅಲೀಯವರು(ರ) ಮೂರು ದಿರ್ಹಮ್ಗೆ ಒಂದು ವಸ್ತ್ರ ಖರೀದಿಸಿದರು. ಅದನ್ನು ಧರಿಸುವಾಗ, “ಜನರ ಮುಂದೆ ಸೌಲಭ್ಯ ಗಳಿಸುವಂತಹ ಮತ್ತು ನನ್ನ ದೇಹ ಮುಚ್ಚುವಂತಹ ಈ ವಸ್ತ್ರದ ಅಲಂಕಾರವನ್ನು ದಯಪಾಲಿಸಿದ ಅಲ್ಲಾಹನಿಗೆ ಸಕಲ ಸ್ತುತಿ ಮತ್ತು ಕೃತಜ್ಞತೆಗಳು.” [ವರದಿ: ಅಬ್ರ್ ಮಿತ್ತರ್ ತಾಬಈ(ರ)- ಮುಸ್ನದ್ ಅಹ್ಮದ್]
ಅಬುಲ್ ಅಹೂಸ್ ತಾಬಈ(ರ) ತಮ್ಮ ತಂದೆ ಮಾಲಿಕ್ ಬಿನ್ ಫಝ್ಲಃ(ರ)ರಿಂದ ವರದಿ ಮಾಡುತ್ತಾರೆ: ನಾನು ಅಲ್ಲಾಹನ ಸಂದೇಶವಾಹಕರ(ಸ) ಸನ್ನಿಧಿಯಲ್ಲಿ ಹಾಜರಾದ ವೇಳೆ ಬಹಳ ಕೆಳ ದರ್ಜೆಯ ವಸ್ತ್ರ ಧರಿಸಿದ್ದೆ. ಅಲ್ಲಾಹನ ಸಂದೇಶವಾಹಕರು(ಸ) ನನ್ನೊಡನೆ ಕೇಳಿದರು, “ನಿಮ್ಮ ಬಳಿ ಏನೂ ಸಂಪತ್ತಿಲ್ಲವೇ?” ನಾನೆಂದೆ, “ಹೌದು, ಅಲ್ಲಾಹನ ಅನುಗ್ರಹದಿಂದ ಇದೆ.” ಅವರು(ಸ) ಕೇಳಿದರು, “ಯಾವ ರೀತಿಯ ಸಂಪತ್ತು?” ನಾನು ಹೇಳಿದೆ, “ಅಲ್ಲಾಹನು ನನಗೆ ಎಲ್ಲ ರೀತಿಯ ಸಂಪತ್ತನ್ನು ದಯಪಾಲಿಸಿದ್ದಾನೆ. ಒಂಟೆಗಳಿವೆ, ಹಸು-ಎತ್ತುಗಳಿವೆ, ಕುರಿ-ಆಡುಗಳಿವೆ, ಕುದುರೆಗಳಿವೆ ಮತ್ತು ಸೇವಕ- ಸೇವಕಿಯರಿದ್ದಾರೆ.” ಆಗ ಅಲ್ಲಾಹನ ಸಂದೇಶವಾಹಕರು(ಸ) ಇಂತೆಂದರು, “ಅಲ್ಲಾಹನು ನಿಮಗೆ ಇಷ್ಟೆಲ್ಲ ಸಂಪತ್ತನ್ನು ನೀಡಿರುವಾಗ ಅಲ್ಲಾಹನ ಕೊಡುಗೆ, ಅನುಗ್ರಹ ಮತ್ತು ಉಪಕಾರದ ಪ್ರಭಾವವು ನಿಮ್ಮಲ್ಲಿ ಪ್ರಕಟವಾಗಬೇಕಲ್ಲವೇ?” (ಮುಸ್ನದ್ ಅಹ್ಮದ್, ನಸಾಯೀ)
ಒಮ್ಮೆ ಅಲ್ಲಾಹನ ಸಂದೇಶವಾಹಕರು(ಸ) ನಮ್ಮಲ್ಲಿಗೆ ಆಗಮಿಸಿದರು. ಅಗ ಅವರ ದೃಷ್ಟಿಯು ಓರ್ವ ವ್ಯಕ್ತಿಯ ಮೇಲೆ ಬಿತ್ತು. ಆತನ ತಲೆ ಗೂದಲು ಕೆದರಿತ್ತು. ಅಲ್ಲಾಹನ ಸಂದೇಶವಾಹ ಕರು(ಸ) ಹೇಳಿದರು, “ಈ ವ್ಯಕ್ತಿಗೆ ತನ್ನ ತಲೆ ಗೂದಲನ್ನು ಸರಿಪಡಿಸುವ ವಸ್ತುವನ್ನು ಗಳಿಸಿದರೆ ಆಗದೇ?” (ಅದೇ ಸಭೆಯಲ್ಲಿ) ಅವರು ಇನ್ನೋರ್ವ ವ್ಯಕ್ತಿಯನ್ನು ಕಂಡರು. ಆತ ಧೂಳು ಮೆತ್ತಿದ ವಸ್ತ್ರ ಧರಿಸಿದ್ದ. ಅವನನ್ನು ಕಂಡು ಹೇಳಿದರು, “ಇವನಿಗೆ ತನ್ನ ವಸ್ತ್ರವನ್ನು ತೊಳೆದು ಸ್ವಚ್ಛಗೊಳಿಸುವಂತಹ ವಸ್ತು ದೊರೆತಿಲ್ಲವೇ?” [ವರದಿ: ಜಾಬಿರ್(ರ)- ಮುಸ್ನದ್ ಅಹ್ಮದ್, ಸುನನ್ ನಸಾಯೀ]
2. ದುಂದುವೆಚ್ಚ ಮಾಡಬಾರದು
(ಮತ್ತು ಮಿತಿ ಮೀರಬೇಡಿರಿ. ಅಲ್ಲಾಹನು ಮಿತಿ ಮೀರುವವರನ್ನು ಮೆಚ್ಚುವುದಿಲ್ಲ)
ವಿಶದೀಕರಣ: ವಸ್ತ್ರಾಲಂಕಾರದ ಅನುಮತಿ ನೀಡುವುದರ ಜೊತೆಗೆ ಅದರಲ್ಲಿ ಮಿತಿ ಮೀರಬಾರದು ಎಂದೂ ಎಚ್ಚರಿಸಲಾಗಿದೆ. ಅಂದರೆ ಅನುಮತಿ ದೊರೆತಿತೆಂದು ಮಾನವನು ಸದಾ ಅಲಂಕಾರವನ್ನು ಪ್ರದರ್ಶಿಸುತ್ತಾ ತಿರುಗುವುದು ಮತ್ತು ಆಹಾರ-ಪಾನೀಯ ಸೇವನೆಯಲ್ಲಿಯೇ ತೊಡಗಿಕೊಳ್ಳುವುದಲ್ಲ ಹಾಗೂ ಅವುಗಳನ್ನೇ ಜೀವನದ ಉದ್ದೇಶವೆಂದು ಬಗೆದು ಸಮತೋಲನವನ್ನು ಕೆಡಿಸುವುದಲ್ಲ. ಬದಲಾಗಿ ಅವೆಲ್ಲವನ್ನೂ ಒಂದು ಮಿತಿಯಲ್ಲಿ ಬಳಸಬೇಕು. ತಮ್ಮ ಸಂಪತ್ತನ್ನು ಕೇವಲ ಇವೇ ವಸ್ತುಗಳಿಗಾಗಿ ಖರ್ಚು ಮಾಡುವುದನ್ನು ಅಲ್ಲಾಹ್ ಖಂಡಿತ ಮೆಚ್ಚನು.
ಹದೀಸ್: ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಉಣ್ಣಿರಿ, ಕುಡಿಯಿರಿ ಮತ್ತು ದಾನ-ಧರ್ಮ ಮಾಡಿರಿ. ಉಡುವಾಗ ಅದರಲ್ಲಿ ದುಂದು ವ್ಯಯ ಅಥವಾ ಅಹಂಕಾರವು ಪ್ರಕಟವಾಗದಂತೆ ನೋಡಿಕೊಳ್ಳಿರಿ.” [ವರದಿ: ಅಬ್ದುಲ್ಲಾ ಬಿನ್ ಅಮ್ರ್ ಬಿನ್ ಆಸ್(ರ) – ಬುಖಾರಿ]
ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಸಚ್ಚಾರಿತ್ರ್ಯ, ಸಮಾಧಾನದಿಂದ ಘನತೆಯೊಂದಿಗೆ ತನ್ನ ಕೆಲಸವನ್ನು ಮಾಡುವ ಅಭ್ಯಾಸ ಮತ್ತು ಸಮತೋಲನ ಪಾಲನೆಯು ಪ್ರವಾದಿತ್ವದ ಇಪ್ಪತ್ತ ನಾಲ್ಕನೆಯ ಒಂದಂಶವಾಗಿದೆ.” [ವರದಿ: ಅಬ್ದುಲ್ಲಾ ಬಿನ್ ಸರ್ಜಿಸ್(ರ) – ತಿರ್ಮಿದಿ]
3. ಅಶ್ಲೀಲತೆಯಂತಹ ಗುಪ್ತ ಮತ್ತು ಬಹಿರಂಗ ಪಾಪ
(ಲಜ್ಜಾಹೀನ ಕಾರ್ಯಗಳು. ಅವು ಪ್ರತ್ಯಕ್ಷವಾದವುಗಳಿರಲಿ ಅಥವಾ ರಹಸ್ಯವಾದವುಗಳಿರಲಿ)
ವಿಶದೀಕರಣ: ಅಲಾಹನು ತನ್ನ ಶರೀಅತ್ನಲ್ಲಿ ಯಾವೆಲ್ಲ ವಸ್ತುಗಳನ್ನು ನಿಷೇಧವೆಂದು ಸಾರಿರುವನೋ ಅವೆಲ್ಲವುಗಳ ಮೂಲ ಆಧಾರ, ಅವು ಅಶ್ಲೀಲವಾಗಿವೆ ಎಂಬುದಾಗಿದೆ. ಈ ಅಶ್ಲೀಲತೆಯ ಉದಾಹರಣೆಯು ನಗ್ನತೆ, ಕೆಟ್ಟ ದೃಷ್ಟಿ, ವ್ಯಭಿಚಾರ ಮತ್ತಿತರ ಲೈಂಗಿಕ ಕಾಮನೆಗಳಾಗಿವೆ. ಈ ಪಾಪ ಕೃತ್ಯಗಳು ಬಹಿರಂಗವಾಗಿರಲಿ ಅಥವಾ ಜನರಿಂದ ಮರೆಯಾಗಿ ನಡೆಯಲಿ, ಅಲ್ಲಾಹನ ದೃಷ್ಟಿಯಲ್ಲಿ ಸ್ಪಷ್ಟವಾಗಿ ನಿಷಿದ್ಧವಾಗಿವೆ.
ಹದೀಸ್: ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಗತ ಪ್ರವಾದಿತ್ವದ ವಿಷಯಗಳ ಪೈಕಿ ಜನರಿಗೆ ತಿಳಿಸಲಾದ ಉಪದೇಶಗಳಲ್ಲಿ ಒಂದು ‘ನಿಮ್ಮಲ್ಲಿ ಲಜ್ಜೆ ಇಲ್ಲದಿದ್ದರೆ, ಮನಬಂದಂತೆ ವರ್ತಿಸಿರಿ’ ಎಂಬುದಾಗಿದೆ.” [ವರದಿ: ಅಬ್ದುಲ್ಲಾ ಬಿನ್ ಮಸ್ಊದ್(ರ) – ಬುಖಾರಿ]
ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಯಾರಾದರೂ ನನಗೆ ತನ್ನ ನಾಲಗೆ ಮತ್ತು ಗುಪ್ತಾಂಗದ ನಿಯಂತ್ರಣದ ಭರವಸೆ ನೀಡಿದರೆ, ನಾನು ಆತನಿಗೆ ಸ್ವರ್ಗದ ಭರವಸೆ ನೀಡುತ್ತೇನೆ.” [ವರದಿ: ಸಹ್ಲ್ ಬಿನ್ ಸಅದ್(ರ) – ಬುಖಾರಿ]
ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಲಜ್ಜೆಯು ವಿಶ್ವಾಸದ ಭಾಗವಾಗಿದೆ ಮತ್ತು ವಿಶ್ವಾಸವು ಸ್ವರ್ಗದೆಡೆಗೆ ಕೊಂಡೊಯ್ಯುತ್ತದೆ. ನಿರ್ಲಜ್ಜೆಯು ಅಕ್ರಮವಾಗಿದೆ ಮತ್ತು ಅಕ್ರಮವು ನರಕದೆಡೆಗೆ ಕೊಂಡೊಯ್ಯುತ್ತದೆ.” [ವರದಿ: ಅಬೂಹುರೈರಾ(ರ) – ತಿರ್ಮಿದಿ]
4. ಹಕ್ಕುಚ್ಯುತಿಯಂತಹ ಪಾಪ
(ಅಲ್ಲಾಹ್ ಪಾಪ ಕಾರ್ಯವನ್ನು ನಿಷೇಧಿಸಿದ್ದಾನೆ)
ವಿಶದೀಕರಣ: ಈ ಜಗತ್ತಿನಲ್ಲಿ ಮಾನವನ ಮೇಲೆ ಅನೇಕ ಹಕ್ಕುಗಳಿವೆ. ಆ ಹಕ್ಕುಗಳು ಅವನ ಅಸ್ತಿತ್ವ, ಕುಟುಂಬ, ನಿಕಟ ಬಂಧುಗಳು, ಅಪೇಕ್ಷಿತ ವರ್ಗಗಳು, ಸಮಾಜ ಮತ್ತು ಸ್ವತಃ ಅಲ್ಲಾಹನ ಅಸ್ತಿತ್ವಕ್ಕೆ ಸಂಬಂಧಿಸಿವೆ. ಇದು ಒಂದರ್ಥದಲ್ಲಿ ಮಾನವ ಹಕ್ಕು ಮತ್ತು ದೇವನ ಹಕ್ಕುಗಳ ಸಮಗ್ರಾರ್ಥವಾಗಿದೆ. ಈ ಹಕ್ಕುಗಳ ವಿವರಣೆಯು ಅಲ್ಲಲ್ಲಿ ಈ ಆಯ್ದ ಜಾಗಗಳಲ್ಲಿ ಉಲ್ಲೇಖಗೊಂಡಿವೆ. ಇವುಗಳ ಪಾಲನೆಯಲ್ಲಿ ಆಗುವ ಕೊರತೆಗೆ ಇಲ್ಲಿ ‘ಇಸ್ಮ್’ (ಪಾಪ) ಎಂಬ ಪದವನ್ನು ಬಳಸಲಾಗಿದೆ. ಈ ಹಕ್ಕುಚ್ಯುತಿಯನ್ನು ಅಲ್ಲಾಹ್ ಸ್ಪಷ್ಟವಾಗಿ ನಿಷೇಧಿಸಿದ್ದಾನೆ. ಮುಂದೆ ನಾಲ್ಕನೆಯ ಅಧ್ಯಾಯದಲ್ಲಿ ‘ಅಲ್ಲಾಹನ ಉಪದೇಶ’ ಎಂಬ ಶೀರ್ಷಿಕೆಯಲ್ಲಿ ಅಶ್ಲೀಲತೆ ಮತ್ತು ಧಿಕ್ಕಾರದ ನಡುವೆ ಹಕ್ಕುಚ್ಯುತಿಗೆ ‘ಮುಂಕರಾತ್’ (ಕೆಡುಕುಗಳು) ಎಂಬ ಪದ ಬಳಸಲಾಗಿದೆ. ಈ ಮೂಲಕ ಅಲ್ಲಾಹನ ದಾಸರ ಈ ಹಕ್ಕುಗಳ ಬಗ್ಗೆ ಅಲ್ಲಾಹನಿಗೆ ತಿಳಿಸಬೇಕಾದ ಅಗತ್ಯವಿಲ್ಲ, ಬದಲಾಗಿ ಈ ಕೆಡುಕುಗಳನ್ನು ನೀವೂ (ಜನರೂ) ಕೆಡುಕುಗಳೆಂದೇ ತಿಳಿದುಕೊಂಡಿರುತ್ತಾರೆ ಎಂದು ತಿಳಿಸಲಾಗಿದೆ.
ಹದೀಸ್: ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಒಬ್ಬನು ಯಾರದಾದರೂ ಜಮೀನನ್ನು ಅನ್ಯಾಯವಾಗಿ ಕಬಳಿಸಿದರೆ, ಕಿಯಾಮತ್ ನಂದು ಅವನು ಆ ಜಮೀನಿನ ಕಾರಣವಾಗಿ ಭೂಮಿಯ ಏಳು ಪದರುಗಳಷ್ಟು ಕೆಳಗೆ ಹೂತು ಬಿಡಲಾಗುವುದು.” [ವರದಿ: ಅಬ್ದುಲ್ಲಾ ಬಿನ್ ಉಮರ್(ರ) – ಬುಖಾರಿ]
ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಒಬ್ಬನು ಯಾರದಾದರೂ ಒಂದು ವಸ್ತುವನ್ನು ಕಿತ್ತುಕೊಂಡರೆ ಅಥವಾ ಲೂಟಿಗೈದರೆ ಅವನು ನಮ್ಮವನಲ್ಲ.” [ವರದಿ: ಇಮ್ರಾನ್ ಬಿನ್ ಹಸೀನ್(ರ) – ತಿರ್ಮಿದಿ]
ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಸಂಬಂಧ ಮುರಿಯುವವನು (ಅಂದರೆ ಬಂಧುಗಳ ಹಕ್ಕುಗಳನ್ನು ತೀರಿಸದವನು) ಸ್ವರ್ಗ ಪ್ರವೇಶಿಸಲಾರ.” [ವರದಿ: ಜುಬೈರ್ ಬಿನ್ ಮುತ್ಇಮ್(ರ) – ಬುಖಾರಿ, ಮುಸ್ಲಿಮ್]
ಒಮ್ಮೆ (ಪ್ರಯಾಣವೊಂದರಲ್ಲಿ) ನಾನು ಅಲ್ಲಾಹನ ಸಂದೇಶವಾಹಕರ(ಸ) ಜೊತೆ ಅಫೀರ್ ಎಂಬ ಕತ್ತೆಯ ಮೇಲೆ ಸವಾರನಾಗಿದ್ದೆ. ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು, “ಓ ಮುಆದ್! ದಾಸರ ಮೇಲೆ ಅಲ್ಲಾಹನ ಯಾವೆಲ್ಲ ಹಕ್ಕುಗಳಿವೆ ಅಲ್ಲಾಹನ ಮೇಲೆ ದಾಸರ ಯಾವೆಲ್ಲ ಹಕ್ಕುಗಳಿವೆ ಎಂದು ನಿಮಗೆ ತಿಳಿದಿದೆಯೇ?” ನಾನೆಂದೆ, “ಅಲ್ಲಾಹ್ ಮತ್ತು ಅವನ ಸಂದೇಶವಾಹಕರೇ(ಸ) ಹೆಚ್ಚು ಬಲ್ಲರು.” ಅವರೆಂದರು, “ದಾಸರು ಅಲ್ಲಾಹ ನನ್ನೇ ಆರಾಧಿಸಬೇಕು ಮತ್ತು ಅವನೊಡನೆ ಯಾರನ್ನೂ ಭಾಗೀದಾರರನ್ನಾಗಿ ಮಾಡದಿರುವುದು ದಾಸರ ಮೇಲೆ ಅಲ್ಲಾಹನ ಹಕ್ಕಾಗಿದೆ. ಅಂತೆಯೇ ತನ್ನೊಡನೆ ಯಾರನ್ನೂ ಭಾಗೀದಾರರನ್ನಾಗಿ ಮಾಡದವರಿಗೆ ಯಾತನೆ ನೀಡದಿರುವುದು ಅಲ್ಲಾಹನ ಮೇಲೆ ದಾಸರ ಹಕ್ಕಾಗಿದೆ.” ನಾನು “ಈ ವಿಷಯ ವನ್ನು ಜನರಿಗೆ ತಿಳಿಸಲೇ?” ಎಂದು ಕೇಳಿದೆ. “ಜನರಿಗೆ ತಿಳಿಸಬೇಡಿರಿ. ಅವರು ಭರವಸೆ ಇಟ್ಟು ಸುಮ್ಮನೆ ಕುಳಿತಾರು” ಎಂದು ಅವರು ಉತ್ತರಿಸಿದರು.
[ವರದಿ: ಮುಆದ್ ಬಿನ್ ಜಬಲ್(ರ) – ಬುಖಾರಿ]
5. ವಿದ್ರೋಹದಂತಹ ಪಾಪ
(ಮತ್ತು ಅಲ್ಲಾಹನು ಸತ್ಯಕ್ಕೆ ವಿರುದ್ಧವಾದ ಅತಿರೇಕವನ್ನು ನಿಷೇಧಿಸಿದ್ದಾನೆ)
ವಿಶದೀಕರಣ: ಈ ವಚನದಲ್ಲಿ ‘ಬಗೀ’ ಎಂಬ ಪದ ಬಳಸಲಾಗಿದೆ. ಅದಕ್ಕೆ ಕನ್ನಡದಲ್ಲಿ ‘ವಿದ್ರೋಹ’ ಎಂದು ಅರ್ಥೈಸಬಹುದಾಗಿದೆ. ಈ ವಿದ್ರೋಹವು ಜನರ ವಿಷಯಗಳಿಗೆ ಸಂಬಂಧಿಸಿ ಉಂಟಾದರೆ ಅಕ್ರಮ, ಅನ್ಯಾಯ ಹುಟ್ಟಿಕೊಳ್ಳುತ್ತವೆ; ಸೃಷ್ಟಿಕರ್ತನಿಗೆ ಸಂಬಂಧಿಸಿ ಉಂಟಾದರೆ ದೇವನಿಂದ ನಿರಪೇಕ್ಷತೆ ಮತ್ತು ದೇವಧಿಕ್ಕಾರ ಹುಟ್ಟಿಕೊಳ್ಳುತ್ತದೆ. ಓರ್ವ ವಿಶ್ವಾಸಿಯು ಇತರ ಪಾಪಗಳಿಂದ ದೂರವಿರಲು ಪ್ರಯತ್ನಿಸುತ್ತಾನೆ. ಆದರೆ ವಿದ್ರೋಹದ ಹತ್ತಿರವೂ ಸುಳಿಯಲಾರ. ಏಕೆಂದರೆ ಅದು ಹೆಚ್ಚಿನ ವೇಳೆ ಅದು ಸುಧಾರಣೆಗೆ ಅರ್ಹವಾಗಿರುವುದಿಲ್ಲ.
ಹದೀಸ್: ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಒಬ್ಬನು ಯಾರದಾದರೂ ಮಾನ ಅಥವಾ ಇತರ ವಸ್ತುವಿನ ಮೇಲೆ ಅಕ್ರಮ ಮಾಡಿದರೆ, ದಿರ್ಹಮ್ ಮತ್ತು ದೀನಾರ್ ಯಾವುದೂ ಪ್ರಯೋಜನಕ್ಕೆ ಬಾರದ ದಿನ ಆಗಮಿಸುವುದಕ್ಕೆ ಮುಂಚೆಯೇ ಅದಕ್ಕಾಗಿ ಕ್ಷಮೆ ಯಾಚಿಸಲಿ. ಯಾಕೆಂದರೆ ಅವನ ಬಳಿ ಸತ್ಕರ್ಮವಿದ್ದರೆ, ಅವನೆಸಗಿದ ಅಕ್ರಮದ ಪ್ರಮಾಣಕ್ಕೆ ಅನುಗುಣವಾಗಿ ಅವನಿಂದ ಕಸಿದು ಮರ್ದಿತನಿಗೆ ನೀಡಲಾಗುವುದು. ಒಂದು ವೇಳೆ ಅವನ ಬಳಿ ಸತ್ಕರ್ಮಗಳಿಲ್ಲದಿದ್ದರೆ ಮರ್ದಿತನ ಕೆಡುಕುಗಳನ್ನು ಇವನ ಮೇಲೆ ಹೊರಿಸಲಾಗುವುದು.” [ವರದಿ: ಅಬೂ ಹುರೈರಾ(ರ)ರಿಂದ ಸಈದ್ ಮುಕ್ಬರೀ(ರ) – ಬುಖಾರಿ]
ಅಲ್ಲಾಹನ ಸಂದೇಶವಾಹಕರು(ಸ) ಒಮ್ಮೆ ಕೇಳಿದರು, “ಮುಫ್ಲಿಸ್ (ದರಿದ್ರ) ಯಾರೆಂದು ನಿಮಗೆ ಗೊತ್ತೇ?” ಜನರೆಂದರು, “ಯಾರ ಬಳಿ ದಿರ್ಹಮ್ ಅಥವಾ ಯಾವದೇ ವಸ್ತು ಇಲ್ಲವೋ ಅವನು ನಮ್ಮಲ್ಲಿ ದರಿದ್ರನಾಗಿದ್ದಾನೆ.” ಪ್ರವಾದಿವರ್ಯರು(ಸ) ಹೇಳಿದರು, “ಅಲ್ಲ. ನನ್ನ ಉಮ್ಮತ್ನ ಪೈಕಿ ಮುಫ್ಲಿಸ್ ಅಥವಾ ದಿವಾಳಿ ಯಾರೆಂದರೆ, ಕಿಯಾಮತ್ನಂದು ತನ್ನೆಲ್ಲ ನಮಾಝ್, ಉಪವಾಸ ವ್ರತ ಮತ್ತು ಝಕಾತ್ ಗಳೊಂದಿಗೆ ಅಲ್ಲಾಹನ ಮುಂದೆ ಹಾಜರಾದವನು; ಅದರ ಜೊತೆಗೆ ಅವನು ಜಗತ್ತಿನಲ್ಲಿ ಯಾರಿಗಾದರೂ ಬೈದಿರುವನು, ಅಪವಾದ ಹೊರಿಸಿರುವನು, ಸೊತ್ತು ಕಬಳಿಸಿರುವನು, ಅನ್ಯಾಯವಾಗಿ ಕೊಂದಿರುವನು, ಅನ್ಯಾಯವಾಗಿ ಹೊಡೆದಿರುವನು. ಆ ಎಲ್ಲ ಮರ್ದಿತರಿಗೆ ಅವನ ಸತ್ಕರ್ಮಗಳನ್ನು ಹಂಚಿ ಬಿಡಲಾಗುವುದು. ಅವನ ಸತ್ಕರ್ಮಗಳು ಮುಗಿದು ಹೋದ ಮೇಲೂ ಆ ಮರ್ದಿತರ ಹಕ್ಕು ಉಳಿದಿದ್ದರೆ, ಅವರಿಂದಾಗಿರಬಹುದಾದ ಪಾಪಗಳನ್ನು ಅವನ ಮೇಲೆ ಹೊರಿಸಲಾಗುವುದು. ತರುವಾಯ ಅವನನ್ನು ನರಕಕ್ಕೆ ತಳ್ಳಿ ಬಿಡಲಾಗುವುದು.” [ವರದಿ: ಅಬೂ ಹುರೈರಾ(ರ) – ಮುಸ್ಲಿಮ್]
6. ಅಲ್ಲಾಹನೊಂದಿಗೆ ಇತರರನ್ನು ಭಾಗೀದಾರರನ್ನಾಗಿ ಮಾಡುವುದು
(ಅಲ್ಲಾಹನು ಯಾರ ಪರವಾಗಿ ಯಾವುದೇ ಆಧಾರ ಅವತೀರ್ಣಗೊಳಿಸಿಲ್ಲವೋ ಅಂಥವರನ್ನು ಅವನೊಡನೆ ಸಹಭಾಗಿಯಾಗಿಸುವುದು)
ವಿಶದೀಕರಣ: ಇದರ ಬಗ್ಗೆ ಮೊದಲ ಅಧ್ಯಾಯದಲ್ಲಿ (ಸಿರಾತೆ ಮುಸ್ತಕೀಮ್) ಚರ್ಚಿಸಲಾಗಿದೆ. ಶಿರ್ಕ್ನ ಪರವಾಗಿ ಯಾವುದೇ ವೈಚಾರಿಕ ಅಥವಾ ತಾರ್ಕಿಕವಾದ ಆಧಾರ ಪ್ರಮಾಣಗಳಿಲ್ಲ ಮತ್ತು ಅಲ್ಲಾಹನು ಅದರ ಪರವಾಗಿ ಯಾವುದೇ ಆಧಾರವನ್ನು ಇಳಿಸಿಲ್ಲ ಎಂಬುದನ್ನು ಇಲ್ಲಿ ಸ್ಪಷ್ಟಪಡಿಸಲಾಗಿದೆ.
ಹದೀಸ್: ‘ಜನರು ವಿಶ್ವಾಸವಿರಿಸಿದ ಮೇಲೆ ತಮ್ಮ ವಿಶ್ವಾಸದಲ್ಲಿ ಅಕ್ರಮವನ್ನು ಸೇರಿಸದಿದ್ದರೆ…’ ಎಂಬ ವಚನ ಅವತೀರ್ಣಗೊಂಡಾಗ, ಅಲ್ಲಾಹನ ಸಂದೇಶವಾಹಕರು(ಸ) ಸಹಾಬಿಗಳನ್ನುದ್ದೇಶಿಸಿ ಹೇಳಿದರು, “ನಮ್ಮ ಪೈಕಿ ಯಾರು ವಿಶ್ವಾಸವಿರಿಸಿದ ಮೇಲೆ ತನ್ನ ವಿಶ್ವಾಸದಲ್ಲಿ ಅಕ್ರಮವನ್ನು ಬೆರೆಸದಿಲ್ಲವೋ ಅವರ ಪರವಾಗಿ ಈ ವಚನ ಅವತೀರ್ಣಗೊಂಡಿದೆ. ಅಲ್ಲಾಹನ ಜೊತೆ ಯಾರನ್ನೂ ಸಹಭಾಗಿಗೊಳಿಸದಿರಿ. ನಿಶ್ಚಯವಾಗಿಯೂ ಶಿರ್ಕ್ ಅತಿ ದೊಡ್ಡ ಅಕ್ರಮವಾಗಿದೆ.” [ವರದಿ: ಅಬ್ದುಲ್ಲಾ(ರ) – ಬುಖಾರಿ]
7. ಅಲ್ಲಾಹನ ಹೆಸರಲ್ಲಿ ಕಾನೂನು ರಚನೆ
(ಮತ್ತು (ವಾಸ್ತವದಲ್ಲಿ ಅಲ್ಲಾಹನೇ ಹೇಳಿರುತ್ತಾನೆಂದು) ನಿಮಗೆ ತಿಳುವಳಿಕೆ ಇಲ್ಲದಿರುವ ಮಾತನ್ನು ಅಲ್ಲಾಹನ ಹೆಸರಲ್ಲಿ ಹೇಳುವುದು)
ವಿಶದೀಕರಣ: ಈ ಶೀರ್ಷಿಕೆಯ ಆರಂಭದಲ್ಲಿ ಜನರ ಒಂದು ಸಮಸ್ಯೆಯ ಕುರಿತು ಬೆಟ್ಟು ಮಾಡಲಾಗಿತ್ತು. ಅವರು ವಸ್ತುಗಳನ್ನು ನಿಷೇಧಿಸುವುದರಲ್ಲಿ ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ. ಅದೇ ರೀತಿ ಜನರು ಸ್ವಂತ ಆಲೋಚನೆಯಂತೆ ಒಂದು ಅಭಿಪ್ರಾಯವನ್ನು ಹೊಂದುತ್ತಾರೆ ಮತ್ತು ಸಾವಕಾಶವಾಗಿ ಅದನ್ನು ಅಲ್ಲಾಹನ ಆದೇಶವೆಂದು ಬಗೆದು ಅದುವೇ ಅಲ್ಲಾಹನ ಶರೀಅತ್ ಎಂಬುದಾಗಿ ಹೇಳತೊಡಗುವುದು ಮಾನವರ ಇನ್ನೊಂದು ಸಮಸ್ಯೆಯಾಗಿದೆ. ಈ ಧೋರಣೆಯು ಖಂಡಿತವಾಗಿಯೂ ನಿಷಿದ್ಧವಾಗಿದೆ. ಏಕೆಂದರೆ ಇಂತಹ ಧೋರಣೆಯಿಂದ ಧರ್ಮದಲ್ಲಿ ನವೀನಾಚಾರ (ಬಿದ್ಅತ್) ಮತ್ತು ಕಂದಾಚಾರದ ಬಾಗಿಲುಗಳು ತೆರೆದುಕೊಳ್ಳುತ್ತವೆ. ತರುವಾಯ ಹಲಾಲ್ ಮತ್ತು ಹರಾಮ್ಗಳ ಕುರಿತು ಜನರಲ್ಲಿ ಗೊಂದಲ ಹುಟ್ಟಿಕೊಳ್ಳುತ್ತವೆ.
ಹದೀಸ್: ನಾನು ಅಲ್ಲಾಹನ ಸಂದೇಶವಾಹಕರ(ಸ) ಸನ್ನಿಧಿಯಲ್ಲಿ ಹಾಜರಾದಾಗ, ಅವರೆಂದರು, “ಅದೀ! ಈ ವಿಗ್ರಹವನ್ನು ನಿನ್ನಿಂದ ದೂರಗೊಳಿಸು.” ತರುವಾಯ ಅವರು, “ಅವರು ಅಲ್ಲಾಹನ ಹೊರತು ತಮ್ಮ ವಿದ್ವಾಂಸರನ್ನೂ ಸಂತರನ್ನೂ ತಮ್ಮ ಪ್ರಭುಗಳನ್ನಾಗಿ ಮಾಡಿಕೊಂಡಿರುತ್ತಾರೆ” (ಅತ್ತೌಬ: 31) ಎಂಬ ವಚನವನ್ನು ಪಠಿಸುವುದನ್ನು ನಾನು ಕೇಳಿಸಿಕೊಂಡೆ. ಆ ಬಳಿಕ ಅವರು(ಸ) ಹೇಳಿದರು, “ಆ ಜನರು ಅವರನ್ನು ಆರಾಧಿಸುತ್ತಿರಲಿಲ್ಲ, ಆದರೆ ಅವರು (ವಿದ್ವಾಂಸರು ಮತ್ತು ಸಂತರು) ಅವರಿಗೆ ಯಾವುದಾದರೂ ವಸ್ತುವನ್ನು ಹಲಾಲ್ಗೊಳಿಸಿದರೆ ಅವರೂ ಅದನ್ನು ಹಲಾಲ್ ಎಂದು ಬಗೆಯುತ್ತಿದ್ದರು; ಅದೇ ರೀತಿ ಅವರು ಹರಾಮ್ಗೊಳಿಸಿದ ವಸ್ತುಗಳನ್ನು ಅವರೂ ತಮಗೆ ನಿಷೇಧಿಸಿಕೊಳ್ಳುತ್ತಿದ್ದರು.” [ವರದಿ: ಅದೀ ಬಿನ್ ಹಾತಿಮ್(ರ)- ತಿರ್ಮಿದಿ]
IslamKannada News Portal




