Home / ಪ್ರಶ್ನೋತ್ತರ / ಇಸ್ಲಾಮ್ ಬಡ್ಡಿಯನ್ನು ನಿಷೇಧಿಸಿರುವುದೇಕೆ?

ಇಸ್ಲಾಮ್ ಬಡ್ಡಿಯನ್ನು ನಿಷೇಧಿಸಿರುವುದೇಕೆ?

ಸಾಲ ಕೊಟ್ಟವನು ಸಾಲ ಪಡೆದವನಿಂದ ಒಂದು ನಿಶ್ಚಿತ ದರದಲ್ಲಿ ವಸೂಲು ಮಾಡುವ ಹೆಚ್ಚಿನ ಹಣಕ್ಕೆ ಬಡ್ಡಿ ಎನ್ನುತ್ತಾರೆ. ಇಸ್ಲಾಮ್ ಬಡ್ಡಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಪ್ರವಾದಿ ಮುಹಮ್ಮದ್‍ರವರ(ಸ) ಕಾಲದಲ್ಲಿ ಬಡ್ಡಿಯ ವ್ಯವಹಾರಗಳು ಈ ಕೆಳಗಿನ ರೂಪದಲ್ಲಿ ಜಾರಿಯಲ್ಲಿದ್ದವು.

ಅರ್ಥ ವ್ಯಾಪ್ತಿ

1. ಒಂದು ವಸ್ತುವನ್ನು ಒಬ್ಬನು ಇನ್ನೊಬ್ಬನಿಗೆ ಸಾಲ ಕೊಡುತ್ತಿದ್ದ. ಸಾಲ ಮರುಪಾವತಿಗೆ ಒಂದು ಕಾಲಾವಧಿಯನ್ನು ನಿರ್ಣಯಿಸಲಾಗುತ್ತಿತ್ತು. ಆ ಕಾಲಾವಧಿಯಲ್ಲಿ ಸಾಲ ಮರುಪಾವತಿಯಾಗದಿದ್ದಾಗ ಅವನಿಗೆ ಮತ್ತಷ್ಟು ಅವಧಿಯನ್ನು ಕೊಟ್ಟು ಆ ವಸ್ತುವಿನ ಕ್ರಯವನ್ನು ಹೆಚ್ಚಿಸಲಾಗುತ್ತಿತ್ತು.

2. ಒಬ್ಬನು ಇನ್ನೊಬ್ಬನಿಗೆ ಹಣ ಸಾಲ ಕೊಡುವಾಗ ಇಂತಿಷ್ಟು ಅವಧಿಗೆ ಇಂತಿಷ್ಟು ಹಣವನ್ನು ಅಸಲಿಗಿಂತ ಹೆಚ್ಚು ಕೊಡಬೇಕೆಂದು ನಿಶ್ಚಯಿಸಲಾಗುತ್ತಿತ್ತು.

3. ಸಾಲ ಕೊಟ್ಟವನ ಮತ್ತು ಪಡೆದವನ ಮಧ್ಯೆ ನಿಶ್ಚಿತ ಅವಧಿಗೆ ನಿಶ್ಚಿತ ದರದ ನಿರ್ಣಯವಾಗುತ್ತಿತ್ತು. ಆ ಅವಧಿಯೊಳಗೆ ಸಾಲ ನಿಶ್ಚಿತ ದರದೊಂದಿಗೆ ಮರು ಪಾವತಿಯಾಗದಿದ್ದರೆ ಮೊದಲಿಗಿಂತ ಹೆಚ್ಚಿನ ದರದಲ್ಲಿ ಮತ್ತಷ್ಟು ಅವಧಿಯನ್ನು ಕೊಡಲಾಗುತ್ತಿತ್ತು.

ವಾಸ್ತವದಲ್ಲಿ ಬಡ್ಡಿಕೋರರು ಹಣದಾಸೆಯಲ್ಲಿ ಮರುಳರಂತಾಗುತ್ತಾರೆ. ತಮ್ಮ ಈ ಸ್ವಾರ್ಥದ ಹುಚ್ಚಿನಲ್ಲಿ ಅವರಿಗೆ ಅದರಿಂದ ವ್ಯಕ್ತಿ ಮತ್ತು ಸಮಾಜದ ಮೇಲೆ ಆಗುವ ಭೀಕರ ದುಷ್ಪರಿಣಾಮಗಳ ಪರಿವೆಯೇ ಇರುವುದಿಲ್ಲ. ಬಡ್ಡಿಯಿಂದ ಮಾನವ ಪ್ರೇಮ, ಮಾನವ ಸೋದರತೆ ಮತ್ತು ಮಾನವೀಯ ಅನುಕಂಪವು ಬೇರು ಸಹಿತ ಕೀಳಲ್ಪಡುತ್ತದೆ. ಇದರಿಂದ ಸಮಾಜ ಕಲ್ಯಾಣದ ಕಲ್ಪನೆಗೇ ಕೊಡಲಿಯೇಟು ಬೀಳುತ್ತದೆ. ಅಸಂಖ್ಯಾತ ಜನರನ್ನು ದುಸ್ಥಿತಿಗೆ ತಳ್ಳಿ ಬಡ್ಡಿಕೋರನು ತಾನು ಸುಖ ಸಂತೋಷದಿಂದಿರಲು ಬಯಸುತ್ತಾನೆ. ಆದ್ದರಿಂದಲೇ ಪವಿತ್ರ ಕುರ್‍ಆನ್ ಬಡ್ಡಿಕೋರರನ್ನು ಹುಚ್ಚರಿಗೆ ಹೋಲಿಸಿದೆ.
“ಬಡ್ಡಿ ತಿನ್ನುವವರ ಅವಸ್ಥೆಯು ಶೈತಾನನ ಸೋಂಕಿನಿಂದ ಹುಚ್ಚನಾದವನಂತಿದೆ.” (2:275)

ನಿಷಿದ್ಧ ಏಕೆ?
ಬಡ್ಡಿಯೂ ವ್ಯಾಪಾರದಂತಲ್ಲವೆ? ವ್ಯಾಪಾರದಲ್ಲಿ ಹಣ ತೊಡಗಿಸಿ ಒಬ್ಬ ವ್ಯಕ್ತಿಯು ಲಾಭ ಗಳಿಸುವುದು ಧರ್ಮಸಮ್ಮತವಾಗಿದ್ದರೆ ಅದೇ ಹಣವನ್ನು ಬ್ಯಾಂಕಿನಲ್ಲಿಟ್ಟು ಅಥವಾ ಅಗತ್ಯವಿದ್ದವನಿಗೆ ಸಾಲ ಕೊಟ್ಟು ಅವನು ಅದನ್ನು ವ್ಯಾಪಾರದಲ್ಲಿ ತೊಡಗಿಸಿದರೆ ಅದಕ್ಕೆ ಬಡ್ಡಿ ಪಡೆಯುವುದು ನಿಷಿದ್ಧವಾಗುವುದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಬಡ್ಡಿಯಾಧಾರಿತ ಆರ್ಥಿಕ ವ್ಯವಸ್ಥೆಯನ್ನು ಪ್ರತಿಪಾದಿಸುವವರು ಸಹಜವಾಗಿಯೇ ಮುಂದಿಡುತ್ತಾರೆ. ಈ ಪ್ರಶ್ನೆಗಳಿಗೆ ಅವರು ನೆಚ್ಚಿಕೊಂಡಿರುವ ಸಿದ್ಧಾಂತದ ದೋಷವೇ ಕಾರಣವಾಗಿದೆ.

ವ್ಯಾಪಾರದಲ್ಲಿ ತೊಡಗಿಸಿದ ಬಂಡವಾಳದ ಮೇಲೆ ಪಡೆಯುವ ಲಾಭ ಮತ್ತು ಸಾಲಕೊಟ್ಟ ಅಸಲಿನ ಮೇಲೆ ಪಡೆಯುವ ಬಡ್ಡಿಯ ವ್ಯತ್ಯಾಸವನ್ನು ಅವರು ತಿಳಿಯುವುದಿಲ್ಲ. ಜನರು ತಮ್ಮ ಶ್ರಮದಿಂದ ಅಥವಾ ಶ್ರಮ ಮತ್ತು ಬಂಡವಾಳಗಳೆರಡರಿಂದಲೂ ನಡೆಸುತ್ತಿರುವ ವ್ಯಾಪಾರ, ವಹಿವಾಟು, ಕೃಷಿ ಮತ್ತು ಕೈಗಾರಿಕೋದ್ಯಮಗಳಲ್ಲಿ ಲಾಭದಂತೆಯೇ ನಷ್ಟದ ಭೀತಿಯೂ ಇದ್ದೇ ಇರುತ್ತದೆ. ಹೀಗಿರುವಾಗ ಬಂಡವಾಳ ಹೂಡುವವನು ಮಾತ್ರ ನಷ್ಟದ ಭೀತಿಯಿಲ್ಲದೆ ಖಾತ್ರಿಯಾದ ಲಾಭಕ್ಕೆ ಹಕ್ಕುದಾರನಾಗುವುದು ಸರಿಯೇ?

ವ್ಯಾಪಾರ, ಕೃಷಿ ಮತ್ತು ಕೈಗಾರಿಕೋದ್ಯಮಗಳಲ್ಲಿ ಕೆಲವರು ತಮ್ಮ ಪರಿಶ್ರಮ, ಸಮಯ, ಸಾಮರ್ಥ್ಯ, ಬಂಡವಾಳಗಳನ್ನೆಲ್ಲಾ ತೊಡಗಿಸುತ್ತಾರೆ. ಅದು ಲಾಭದಾಯಕವಾಗುವುದು ಅವರ ಅವಿರತ ಸಾಧನೆ ಮತ್ತು ಪರಿಶ್ರಮಗಳನ್ನೇ ಅವಲಂಬಿಸಿದೆ. ಆದರೂ ನಷ್ಟದ ಭೀತಿ ಇದ್ದೇ ಇರುತ್ತದೆ. ಆದರೆ ಅವರಿಗೆ ಬಂಡವಾಳವನ್ನು ಸಾಲವಾಗಿ ಕೊಟ್ಟವನು ಯಾವುದೇ ನಷ್ಟದ ಭೀತಿಯಿಲ್ಲದೆ ನಿಶ್ಚಿತ ದರದಲ್ಲಿ ಲಾಭವನ್ನು ಪಡೆಯುತ್ತಿರುತ್ತಾನೆ. ಇದು ತರ್ಕಬದ್ಧವೇ?

ಬುದ್ಧಿ ಮತ್ತು ವಿವೇಕ ಇದನ್ನು ಸರಿಯೆನ್ನುತ್ತದೆಯೇ? ಮಾನವ ಸಹಜ ನ್ಯಾಯ ಪ್ರಜ್ಞೆಯಾಗಲಿ ನೈತಿಕ ಮೌಲ್ಯಗಳಾಗಲೀ ಇದನ್ನು ಅನುಮತಿಸಲು ಸಾಧ್ಯವೇ?

ಬಡ್ಡಿ ಮತ್ತು ಲಾಭ?
ಅರ್ಥ ಶಾಸ್ತ್ರ ಮತ್ತು ನೈತಿಕತೆಯ ದೃಷ್ಟಿಯಿಂದ ವ್ಯಾಪಾರ-ವಹಿವಾಟುಗಳಿಂದ ಬರುವ ಲಾಭ ಮತ್ತು ಬಡ್ಡಿಗಳ ಮಧ್ಯೆ ಇರುವ ಮೂಲಭೂತ ವ್ಯತ್ಯಾಸಗಳನ್ನು ನಾಲ್ಕು ಅಂಶಗಳಲ್ಲಿ ಸಂಕ್ಷೇಪಿಸಬಹುದು.

1. ಬಡ್ಡಿಯ ವ್ಯವಹಾರವು ಒಬ್ಬನಿಗೆ ಲಾಭ ಮತ್ತು ಇನ್ನೊಬ್ಬನಿಗೆ ನಷ್ಟವನ್ನುಂಟು ಮಾಡುತ್ತದೆ ಅಥವಾ ಒಬ್ಬನಿಗೆ ನಿರ್ದಿಷ್ಟ ಲಾಭವನ್ನು ಖಾತ್ರಿ ಪಡಿಸಿ ಇನ್ನೊಬ್ಬನಿಗೆ ಅನಿರ್ದಿಷ್ಟ ಲಾಭವನ್ನೊದಗಿಸುತ್ತದೆ. ವ್ಯಾಪಾರದಲ್ಲಿ ಮಾರಾಟಗಾರ ಮತ್ತು ಗ್ರಾಹಕರ ಮಧ್ಯೆ ಲಾಭದ ಸರಿಸಮಾನ ವಿನಿಮಯವಾಗುತ್ತದೆ. ಗ್ರಾಹಕನು ತಾನು ಖರೀದಿಸಿದ ವಸ್ತುವಿನಿಂದ ಪ್ರಯೋಜನ ಪಡೆಯುತ್ತಾನೆ. ವ್ಯಾಪಾರಿಯು ಅದಕ್ಕಾಗಿ ವ್ಯಯಿಸಿದ ಶ್ರಮ, ಬುದ್ಧಿ-ಸಾಮರ್ಥ್ಯ ಮತ್ತು ಸಮಯದ ಪ್ರತಿಫಲ ಪಡೆಯುತ್ತಾನೆ.

2. ವ್ಯಾಪಾರದಲ್ಲಿ ಎಷ್ಟು ಲಾಭ ಬಂದರೂ ಅದು ಒಂದು ಸಲ ಮಾತ್ರ. ಆದರೆ ಬಡ್ಡಿಗೆ ಹಣ ಕೊಟ್ಟವನು ಅದನ್ನು ನಿರಂತರವಾಗಿ ಪಡೆಯುತ್ತಿರುತ್ತಾನೆ. ಕಾಲ ಕಳೆದಂತೆ ಅವನ ಬಡ್ಡಿಯೂ ಹೆಚ್ಚುತ್ತಲೇ ಹೋಗುತ್ತದೆ. ಸಾಲಗಾರನು ತಾನು ಪಡೆದ ಸಾಲದಿಂದ ಪ್ರಯೋಜನ ಪಡೆಯುವುದಕ್ಕೆ ಒಂದು ನಿರ್ದಿಷ್ಟ ಮಿತಿಯಿದೆ. ಆದರೆ ಸಾಲ ಕೊಟ್ಟಾತನಿಗೆ ಅವನು ಅದರ ಬದಲಿಗೆ ಪಡೆಯುವ ಲಾಭಕ್ಕೆ ಮಿತಿಯೇ ಇಲ್ಲ. ಕೆಲವೊಮ್ಮೆ ಸಾಲಗಾರನ ಸಂಪೂರ್ಣ ಜೀವನದ ಸಂಪಾದನೆ, ಅವನ ಸಾಧನಗಳು ಮಾತ್ರವಲ್ಲ ಉಡುವ ಬಟ್ಟೆ ಮತ್ತು ಮನೆಯ ಪಾತ್ರೆಗಳನ್ನು ಮಾರಿದರೂ ಸಾಲ ಕೊಟ್ಟಾತನ ಸಾಲ ಹಾಗೇ ಉಳಿದಿರುತ್ತದೆ.

3. ವ್ಯಾಪಾರದಲ್ಲಿ ವಸ್ತು ಮತ್ತದರ ಬೆಲೆಯ ವಿನಿಮಯದೊಂದಿಗೆ ವ್ಯವಹಾರ ಮುಗಿದು ಹೋಗುತ್ತದೆ. ಭೂ ಸೊತ್ತಿನ ಗೇಣಿ, ಮನೆ ಮತ್ತಿತರ ಸಾಧನಗಳ ಬಾಡಿಗೆಯ ವ್ಯವಹಾರದಲ್ಲಿ ಆ ವಸ್ತುಗಳು ಖರ್ಚಾಗಿ ಹೋಗುವುದಿಲ್ಲ. ಅವು ಬಾಡಿಗೆಯ ಅವಧಿ ಮುಗಿದ ಬಳಿಕ ಹಾಗೆಯೇ ಹಿಂತಿರುಗಿಸಲ್ಪಡುತ್ತವೆ. ಆದರೆ ಸಾಲ ಪಡೆದಾತನು ಅದನ್ನು ಖರ್ಚು ಮಾಡಿ ಬಿಡುತ್ತಾನೆ. ಅವನು ಆ ಹಣವನ್ನು ಮತ್ತೆ ಸಂಪಾದಿಸಿ ಬಡ್ಡಿ ಸಹಿತ ಮರಳಿಸಬೇಕಾಗುತ್ತದೆ.

4. ವ್ಯಾಪಾರ, ಕೃಷಿ ಮತ್ತು ಕೈಗಾರಿಕೋದ್ಯಮಗಳಲ್ಲಿ ವ್ಯಕ್ತಿಯು ದೈಹಿಕ ಶ್ರಮ, ಬೌದ್ಧಿಕ ಶಕ್ತಿ ಮತ್ತು ಸಮಯವನ್ನು ವ್ಯಯಿಸಿ ಅನಿಶ್ಚಿತವಾದ ಪ್ರತಿಫಲ ಪಡೆಯುತ್ತಾನೆ. ಆದರೆ ಬಡ್ಡಿ ವ್ಯವಹಾರದಲ್ಲಿ ಒಬ್ಬನು ತನ್ನ ಉಳಿತಾಯವನ್ನು ಮಾತ್ರ ಹೂಡಿ ಯಾವ ಪರಿಶ್ರಮವೂ ಇಲ್ಲದೆ ಇತರರ ಸಂಪಾದನೆಯಲ್ಲಿ ಸಿಂಹಪಾಲನ್ನು ಪೂರ್ವ ನಿಶ್ಚಿತವಾಗಿರುವಂತೆಯೇ ಪಡೆಯುತ್ತಿರುತ್ತಾನೆ.

ಮಾನವೀಯ ಮೌಲ್ಯಗಳಿಗೆ ವ್ಯತಿರಿಕ್ತ
ಈ ಕಾರಣಗಳಿಂದಾಗಿ ವ್ಯಾಪಾರವು ಮಾನವ ನಾಗರಿಕತೆಯ ನಿರ್ಮಾಣಕ್ಕೆ ಪೂರಕವಾದರೆ ಬಡ್ಡಿಯ ವ್ಯವಹಾರವು ಅವರ ವಿನಾಶಕ್ಕೆ ಕಾರಣವಾಗುತ್ತದೆ. ನೈತಿಕವಾಗಿ ಬಡ್ಡಿಕೋರತನವು ಮನುಷ್ಯರಲ್ಲಿ ಲೋಭ, ಸ್ವಾರ್ಥ, ದೌರ್ಜನ್ಯ, ನಿರ್ದಯೆ, ಧನ ಪೂಜೆಯಂತಹ ದುರ್ಗುಣಗಳನ್ನುಂಟು ಮಾಡಿ ಪರಸ್ಪರ ಸಹಾಯ-ಸಹಕಾರ, ಸಹಾನುಭೂತಿಯ ಬೇರನ್ನೇ ಕಿತ್ತೊಗೆಯುತ್ತದೆ. ಇನ್ನೊಂದೆಡೆ ಬಡ್ಡಿ ಕೊಡುವವರಲ್ಲಿ ತಿರಸ್ಕಾರ, ಕ್ರೋಧ, ಪ್ರತೀಕಾರ ಮನೋಭಾವ ಮತ್ತು ಮತ್ಸರಗಳಂತಹ ನೈತಿಕ ಜಾಡ್ಯಗಳುಂಟಾಗುತ್ತವೆ. ಇದುವೇ ಧನಿಕರಲ್ಲಿ ಬಂಡವಾಳಶಾಹೀ ಪ್ರವೃತ್ತಿ ಮತ್ತು ಬಡವರಲ್ಲಿ ಕಮ್ಯೂನಿಸ್ಟ್ ಮನೋವೃತ್ತಿಯ ಬೆಳವಣಿಗೆಗೆ ಕಾರಣವಾಗಿ ಅದು ವರ್ಗ ಸಂಘರ್ಷದಲ್ಲಿ ಪರ್ಯವಸಾನ ಗೊಳ್ಳುತ್ತದೆ.

ಪ್ರಕೃತಿ ನಿಯಮದಂತೆ ಸಂಪತ್ತಿನ ವಿತರಣೆಯಲ್ಲಿ ತನ್ನ ನೈಜ ಅವಶ್ಯಕತೆಗಳಿಗಿಂತ ಅಧಿಕ ಪಾಲು ಪಡೆದವನು ಮಾತ್ರ ಬಡ್ಡಿಗೆ ಸಾಲ ಕೊಡಬಲ್ಲ ಅಥವಾ ಬಡ್ಡಿ ಸಂಪಾದನೆಗಾಗಿ ಅದನ್ನು ಠೇವಣಿ ಇಡಬಲ್ಲನೆಂಬುದು ಎಲ್ಲರಿಗೂ ತಿಳಿದ ವಿಷಯ.

ಒಬ್ಬನಿಗೆ ಆತನ ನೈಜ ಅವಶ್ಯಕತೆಗಳಿಗಿಂತ ಹೆಚ್ಚಿನ ಸಂಪತ್ತು ದೊರೆತಿದ್ದರೆ ಅದು ಅಲ್ಲಾಹನ ಅನುಗ್ರಹವೆಂದು ಪವಿತ್ರ ಕುರ್‍ಆನ್ ಹೇಳುತ್ತದೆ. ಈ ಅನುಗ್ರಹದ ಕೃತಜ್ಞತೆಗಾಗಿ ಇತರರಿಗೆ ಝಕಾತ್, ದಾನ ಧರ್ಮ, ಬಡ್ಡಿ ರಹಿತ ಸಾಲಗಳ ರೂಪದಲ್ಲಿ ನೆರವಾಗಬೇಕೆಂದೂ ಅದು ಆದೇಶಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಸಂಪತ್ತಿನ ವಿತರಣೆಯಲ್ಲಿ ತನ್ನ ಆವಶ್ಯಕತೆಗಳಿಗಿಂತ ಕಡಿಮೆ ಪಾಲು ಪಡೆದವನಿಂದ ಅದರಿಂದಲೂ ಒಂದಂಶವನ್ನು ಕಸಿದುಕೊಳ್ಳುವುದು ಮಹಾ ಕೃತಘ್ನತೆ, ಅಕ್ರಮ, ಅನ್ಯಾಯ ಮತ್ತು ದುಷ್ಕರ್ಮವೆಂದು ಅದು ಪರಿಗಣಿಸುತ್ತದೆ.

ಆದುದರಿಂದ ಇಸ್ಲಾಮ್ ಬಡ್ಡಿಯ ಎಲ್ಲ ವ್ಯವಹಾರಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಇಸ್ಲಾವಿೂ ರಾಷ್ಟ್ರದಲ್ಲಿ ಬಡ್ಡಿಯ ವ್ಯವಹಾರವು ಒಂದು ದಂಡನಾರ್ಹ ಅಪರಾಧವಾಗಿದೆ. ಬಡ್ಡಿ ಪಡೆಯುವುದು, ಕೊಡುವುದು, ಬಡ್ಡಿ ವ್ಯವಹಾರಗಳಿಗೆ ಸಾಕ್ಷಿ ನಿಲ್ಲುವುದು, ಅದರ ಲೆಕ್ಕಪತ್ರಗಳನ್ನು ಬರೆಯುವುದು ಹಾಗೂ ಬಡ್ಡಿಯ ವ್ಯವಹಾರಕ್ಕೆ ನೆರವಾಗುವ ಎಲ್ಲ ಕಾರ್ಯಗಳೂ ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ.

ತಪ್ಪು ಕಲ್ಪನೆಗಳು ಕೃತಿಯಿಂದ

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *