Home / ಲೇಖನಗಳು / ಉಪವಾಸ ವ್ರತ ಮತ್ತು ಆತ್ಮಸಂಸ್ಕರಣೆ

ಉಪವಾಸ ವ್ರತ ಮತ್ತು ಆತ್ಮಸಂಸ್ಕರಣೆ

ಮೌ| ಮುಹಮ್ಮದ್ ಫಾರೂಕ್ ಖಾನ್
ಅನು: ಮುಹಮ್ಮದ್ ಅಶ್ರಫ್

ರಮಝಾನ್ ತಿಂಗಳು ಬಹಳ ಸಮೃದ್ಧವಾದ ತಿಂಗಳಾಗಿದೆ. ಈ ತಿಂಗಳಲ್ಲಿಯೇ ಪವಿತ್ರ ಕುರ್‌ಆನ್‌ನ ಅವತೀರ್ಣಗೊಳ್ಳಲು ಆರಂಭವಾಗಿತ್ತು. ಅದಾದರೋ ಮಾನವರಿಗೆ ಸಾದ್ಯಂತ ಮಾರ್ಗದರ್ಶಕ ಗ್ರಂಥವಾಗಿದೆ. ಅದರ ಬೆಳಕಿನಲ್ಲಿ ಮಾನವನು ನೇರ ಮಾರ್ಗವನ್ನು ಅಂದರೆ ಸರಿಯಾದ ಮಾರ್ಗವನ್ನು ಕಂಡುಕೊಳ್ಳಬಲ್ಲನು. ಅದನ್ನು ಅನುಸರಿಸಿ ಮಾನವನು ಯಶಸ್ಸಿನ ಪಯಣವನ್ನು ದಾಟಬಲ್ಲನು. ಅದೇ ರೀತಿ ವೈಚಾರಿಕ ಮತ್ತು ತಾತ್ವಿಕ ಪಥಭ್ರಷ್ಠತೆ, ಪ್ರಾಯೋಗಿಕ ಪಥಭ್ರಷ್ಠತೆ ಮುಂತಾದವುಗಳನ್ನು ಅರಿತು ಅವುಗಳಿಂದ ಸುರಕ್ಷಿತವಾಗಿರಬಲ್ಲನು. ಲೋಕದಲ್ಲಿರುವ ವಿವಿಧ ಚಿಂತನೆ ಮತ್ತು ಸಿದ್ಧಾಂತಗಳಲ್ಲಿ ಸರಿಯಾದ ಸಿದ್ಧಾಂತ ಯಾವುದೆಂಬುದನ್ನು ಪವಿತ್ರ ಕುರ್‌ಆನ್ ತಿಳಿಸಿಕೊಡುತ್ತದೆ. ವಿಭಿನ್ನವಾದ ಭಾವನೆ ಮತ್ತು ಸಂವೇದನೆಗಳಲ್ಲಿ ಸರಿಯಾದ ಮತ್ತು ಅಮೂಲ್ಯವಾದ ಭಾವನೆ ಯಾವುದೆಂಬುದನ್ನು ತಿಳಿಸಿಕೊಡುತ್ತದೆ. ವಿಭಿನ್ನ ರೀತಿಯ ಕಾರ್ಯವಿಧಾನಗಳಲ್ಲಿ ಮಾನವನ ಮಟ್ಟಿಗೆ ಸರಿಯಾದ ಮತ್ತು ಸ್ವಾಭಾವಿಕವಾದ  ಕಾರ್ಯವಿಧಾನವು ಏನೆಂಬುದನ್ನು ಕಲಿಸಿ ಕೊಡುತ್ತದೆ. ಒಟ್ಟಿನಲ್ಲಿ ಜ್ಞಾನ, ಅಂತರ್ದೃಷ್ಟಿ, ಯುಕ್ತಿ ಮತ್ತು ಪರಿಶುದ್ಧ ಜೀವನದ ಕಡೆಗೆ ಆಹ್ವಾ ನಿಸುವ ಪವಿತ್ರ ಕುರ್‌ಆನ್ ಮಾನವ ಕುಲದ ಮಟ್ಟಿಗೆ ಒಂದು ಪರಿಪೂರ್ಣವಾದ ಮಾರ್ಗದರ್ಶಕ ಗ್ರಂಥವಾಗಿದೆ. ಅದು ವೈಚಾರಿಕ ಮತ್ತು  ಪ್ರಾಯೋಗಿಕ ಭಿನ್ನತೆ ಹಾಗೂ ಅಸ್ತವ್ಯಸ್ತತೆಯಿಂದ ರಕ್ಷಿಸುತ್ತದೆ. ಅಂತೆಯೇ ಅನುಪಮವಾದ ವೈಚಾರಿಕ ಮತ್ತು ಪ್ರಾಯೋಗಿಕ ವ್ಯವಸ್ಥೆಯನ್ನು  ತೋರಿಸಿ ಕೊಡುತ್ತದೆ. ಅದಕ್ಕಿಂತ ಉತ್ತಮವಾದ ಮತ್ತು ಸ್ವಾಭಾವಿಕವಾದ ವ್ಯವಸ್ಥೆಯನ್ನು ಮಾನವ ಚಿತ್ತವು ಕಲ್ಪಿಸಲೂ ಸಾಧ್ಯವಿಲ್ಲ. ಪವಿತ್ರ  ಕುರ್‌ಆನ್ ಕಲಿಸುವ ಕರ್ಮವಿಧಾನವು ಎಲ್ಲ ರೀತಿಯ ಕುಂದು ಕೊರತೆಯಿಂದ ಮುಕ್ತವಾದ ಸಂತುಲಿತ ಮತ್ತು ಪರಿಪೂರ್ಣ  ವ್ಯವಸ್ಥೆಯಾಗಿದೆ.

ಪವಿತ್ರ ಕುರ್‌ಆನ್ ಮಾನವನ ಜೀವನದಲ್ಲಿ ಅತೀ ಹೆಚ್ಚು ಮಹತ್ವ ಕಲ್ಪಿಸಿರುವುದು ಅವನ ವ್ಯಕ್ತಿತ್ವಕ್ಕಾಗಿದೆ. ವ್ಯಕ್ತಿತ್ವ ನಿರ್ಮಾಣವೇ ಅದರ ಎಲ್ಲ ಶಿಕ್ಷಣದ ಸಾರವಾಗಿದೆ. ಅದೇ ವ್ಯಕ್ತಿತ್ವ ಮತ್ತು ಚಾರಿತ್ರ್ಯ ನಿರ್ಮಾಣವನ್ನೇ ಪವಿತ್ರ ಕುರ್‌ಆನ್ ಆತ್ಮಸಂಸ್ಕರಣೆ ಎಂದು ಬಣ್ಣಿಸಿದೆ. ಈ ಸಂಸ್ಕರಣೆಯೇ ಜೀವನೋದ್ದೇಶ ಮತ್ತು ಕುರ್‌ಆನ್ ಶಿಕ್ಷಣದ ಸಾರವಾಗಿದೆ. ಆದ್ದರಿಂದಲೇ ಅದರ ಗಳಿಕೆಯನ್ನು ಕುರ್‌ಆನ್ ಯಶಸ್ಸು ಮತ್ತು ಮೋಕ್ಷವೆಂದು ಸಾರಿದೆ. ಹಾಗಾಗಿ ಪವಿತ್ರ ಕುರ್‌ಆನ್ ಹೇಳುತ್ತದೆ, “ತನ್ನನ್ನು ಸಂಸ್ಕರಿಸಿಕೊಂಡವನು ಯಶಸ್ವಿಯಾಗಿ ಬಿಟ್ಟನು.”  (ಅಲ್ ಅಅï‌ಲಾ: 14)

ಇನ್ನೊಂದೆಡೆ ಹೀಗೆನ್ನಲಾಗಿದೆ, “(ಅವರಿಗೆ) ಸದಾ ಹಸಿರಾಗಿರುವ ಉದ್ಯಾನಗಳಿರುವುದು. ಅವುಗಳ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. ಅವರು ಅವುಗಳಲ್ಲಿ ಸದಾಕಾಲ ವಾಸಿಸುತ್ತಿರುವರು. ತನ್ನನ್ನು ಪರಿಶುದ್ಧಗೊಳಿಸುವವನಿಗೆ ಪ್ರತಿಫಲವಿದು.” (ತಾಹಾ:  76)

ಮತ್ತೊಂದೆಡೆ ಹೀಗೆನ್ನಲಾಗಿದೆ, “ಖಂಡಿತವಾಗಿಯೂ ತನ್ನ ಆತ್ಮವನ್ನು ಸಂಸ್ಕರಿಸಿಕೊಂಡವನು ವಿಜಯಿಯಾದನು ಮತ್ತು ಅದನ್ನು ದಮನಿಸಿದವನು ಸೋಲುಂಡನು.” (ಅಶ್ಶಮ್ಸ್: 9-10)

ಪವಿತ್ರ ಕುರ್‌ಆನಿನ ಬೋಧನೆಗಳ ಮೂಲ ಉದ್ದೇಶ ಆತ್ಮಸಂಸ್ಕರಣೆಯ ಹೊರತು ಬೇರೇನಲ್ಲ ಎಂದು ಇದರಿಂದ ತಿಳಿದು ಬರುತ್ತದೆ. ಈ ಉದ್ದೇಶವು ಎಷ್ಟು ಸುಂದರ ಮತ್ತು ಆಹ್ಲಾದಕರವಾಗಿದೆ ಎಂಬುದನ್ನು ಪ್ರತಿಯೊಬ್ಬ ಸಂವೇದನಾ ಶೀಲ ವ್ಯಕ್ತಿಯೂ ಅರ್ಥ ಮಾಡಬಲ್ಲ.  ನಮ್ಮ ವ್ಯಕ್ತಿತ್ವದಲ್ಲಿ ಪ್ರಗತಿಯ ಯಾವ ಸಾಧ್ಯತೆಗಳಿವೆಯೋ ಅವು ದಮನಿಸಲ್ಪಟ್ಟಿರಬಾರದು, ಬದಲಾಗಿ ಅವು ವ್ಯಕ್ತವಾಗಬೇಕು ಎಂಬುದೇ  ಆತ್ಮಸಂಸ್ಕರಣೆಯ ವ್ಯಾಖ್ಯಾನವಾಗಿದೆ. ಅದನ್ನು ಒಂದು ಉದಾಹರಣೆಯಿಂದ ಅರ್ಥ ಮಾಡಬಹುದಾಗಿದೆ: ಗುಲಾಬಿಯ ಒಂದು ಸಣ್ಣ ಗಿಡದಲ್ಲಿ ಗೆಲ್ಲುಗಳು ಹುಟ್ಟಿಕೊಳ್ಳುವ, ಮೊಗ್ಗುಗಳು ಹುಟ್ಟಿಕೊಳ್ಳುವ ಮತ್ತು ಒಂದು ದಿನ ಆ ಮೊಗ್ಗುಗಳು ಬಿರಿದು ಸುಂದರ ಹೂವುಗಳು ಅರಳಿ ಕಂಪನ್ನು ಬೀರುವ ಸಾಧ್ಯತೆ ಇದೆ. ಹಾಗೊಂದು ವೇಳೆ ಆದರೆ ಆ ಗಿಡದಲ್ಲಿ ಇದ್ದ ಸಾಧ್ಯತೆಗಳೆಲ್ಲವೂ ವ್ಯಕ್ತವಾಗಿ ಪ್ರಕಟಗೊಂಡಿತು ಎಂದು ಹೇಳಬಹುದು. ಆದರೆ ಗುಲಾಬಿಯ ಆ ಗಿಡ ಹೂ ಬಿಡುವುದಕ್ಕೆ ಮುನ್ನವೇ ಒಣಗಿದರೆ ಅಥವಾ ಯಾರಾದರೂ ಅದನ್ನು ತುಳಿದು ಬಿಟ್ಟರೆ ಅಥವಾ ಅದನ್ನು ಕಿತ್ತೆಸೆದರೆ ಆ ಗಿಡವು ತನ್ನ ಉದ್ದೇಶ ಈಡೇರಿಕೆಗೆ ತಲುಪಲಿಲ್ಲ ಮತ್ತು ವ್ಯರ್ಥವಾಗಿ ನಾಶಹೊಂದಿತು  ಎಂದು ನಾವು ಪ್ರತಿಕ್ರಿಯಿಸುವೆವು ತಾನೇ? ಮಾನವನದು ಕೂಡ ಇದೇ ಅವಸ್ಥೆ. ಯಾವ ಮಾನವನೂ ಹುಟ್ಟಿದೊಡನೆ ಯಶಸ್ಸಿನ ಮಜಲನ್ನು ದಾಟುವುದಿಲ್ಲ; ಅವನನ್ನು ಸೃಷ್ಟಿಸಿದ ಉದ್ದೇಶವೂ ಈಡೇರುವುದಿಲ್ಲ. ಅದಕ್ಕಾಗಿ ಅವನಲ್ಲಿರಿಸಲಾಗಿರುವ ಪ್ರಗತಿ ಮತ್ತು ಪ್ರಬುದ್ಧತೆಯ ಸಾಧ್ಯತೆಯು ದಮನಿಸಲ್ಪಡದಂತೆ ನೋಡಿ ಕೊಳ್ಳಬೇಕಾಗಿದೆ. ಬದಲಾಗಿ ಒಂದು ಅತ್ಯುತ್ತಮ ಮತ್ತು ದೋಷರಹಿತ ವ್ಯಕ್ತಿತ್ವದ ರೂಪದಲ್ಲಿ ಅದು ವ್ಯಕ್ತಗೊಳ್ಳಬೇಕು. ಕುರ್‌ಆನ್ ಬಯಸುವ ಇಂತಹ ವ್ಯಕ್ತಿತ್ವದ ನಿರ್ಮಾಣ ಮತ್ತು ಪರಿಪೂರ್ಣತೆಯು ಅತ್ಯುತ್ತಮ ಚಿಂತನೆ,  ಅತ್ಯುತ್ತಮ ಭಾವನೆ ಮತ್ತು ಚಾರಿತ್ರ್ಯ ಹಾಗೂ ಅತ್ಯುತ್ತಮ ಕರ್ಮಗಳಿಂದ ಸಾಧ್ಯವಾಗುತ್ತದೆ. ಒಂದು ವೇಳೆ ಅವುಗಳ ಪೈಕಿ ಯಾವುದಾದರೊಂದು ಮಗ್ಗುಲಲ್ಲಿ ದೋಷ ಕಂಡು ಬಂದರೆ, ಅದರರ್ಥ ಮಾನವನಾಗಿರುತ್ತಾ ವ್ಯಕ್ತಿಯು ತನ್ನ ಜೀವನೋದ್ದೇಶವನ್ನು ಪೂರ್ತಿ  ಗೊಳಿಸುವಲ್ಲಿ ಸೋತು ಹೋದನೆಂದಾಗುತ್ತದೆ.

ಜೀವನೋದ್ದೇಶ ಸಾಧಿಸುವಲ್ಲಿ ಮಾನವನಿಂದ ಆಗುವಂತಹ ಪ್ರಮಾದಗಳಿಗೆ ಹಲವಾರು ಕಾರಣಗಳಿರುತ್ತವೆ. ಕೆಲವೊಮ್ಮೆ ಅವನು ಲಕ್ಷ್ಯವಿಲ್ಲದೆ, ತನ್ನ ಹೊಣೆಗಾರಿಕೆಗಳ ಪ್ರಜ್ಞೆಯಿಲ್ಲದೆ ಬಾಳುವುದು ಕಾರಣವಾಗುತ್ತದೆ. ಇದನ್ನು ಆತ ಪಥಭ್ರಷ್ಟತೆ ಮತ್ತು ಅಧರ್ಮದಲ್ಲಿ ಬಿದ್ದು ಕೊಂಡಿದ್ದಾನೆ ಎಂದು ಹೇಳಲಾಗುವುದು.
ಕೆಲವೊಮ್ಮೆ ವ್ಯಕ್ತಿಯು ಭೌತಿಕವಾದ ಪ್ರಯೋಜನಗಳು ಮತ್ತು ದೈಹಿಕ ಸುಖ ಸಂತೋಷಗಳ ಹಿಂದೆ ಬಿದ್ದುಕೊಂಡಿರುತ್ತಾನೆ. ಹೀಗೆ ಅವನು ಅದರ ಸುತ್ತ ಮುತ್ತಲೇ ಬಾಳತೊಡಗುತ್ತಾನೆ. ದೇಹ ಸುಖದ ಹೊರತೂ ಬೇರೆ ಅನೇಕ ವಿಷಯಗಳಿವೆ, ಭೌತಿಕ ಅಗತ್ಯಗಳ  ಹೊರತೂ ಅನೇಕ ಅಗತ್ಯಗಳಿರುತ್ತವೆ ಮತ್ತು ಅವು ಭೌತಿಕತೆಗಿಂತ ಎಷ್ಟೋ ಪಟ್ಟು ಹೆಚ್ಚು ಮೌಲ್ಯಯುತವಾಗಿರುತ್ತವೆ ಎಂಬುದರ ಅರಿವು  ಅವನಿಗಿರುವುದಿಲ್ಲ. ಇಂತಹ ವ್ಯಕ್ತಿಯು ಲೌಕಿಕ ಲಾಭ ಮತ್ತು ಲೌಕಿಕ ಸಂತೋಷಗಳನ್ನೇ ಸರ್ವಸ್ವವೆಂದು ಭಾವಿಸತೊಡಗುತ್ತಾನೆ. ಅದರ  ಹೊರತು ಅವನು ಬೇರೇನನ್ನು ಆಲೋಚಿಸಲಾರ. ಅಷ್ಟು ಮಾತ್ರವಲ್ಲ, ಅವನಿಗೆ ಬೇರಾವುದೇ ವಸ್ತುವಿನಲ್ಲಿ ಅವನಿಗೆ ಆಸಕ್ತಿಯೂ  ಇರುವುದಿಲ್ಲ.

ಹಾಗಿದ್ದರೂ ಹಲವಾರು ಬಾರಿ ಪ್ರವಾದಿಗಳ ಮತ್ತು ಸಂದೇಶವಾಹಕರುಗಳ ಶಿಕ್ಷಣವು ಅವನ ಮುಂದೆ ಬರುತ್ತವೆ. ಆದರೆ ಅವನು ತನ್ನ ವೈಯಕ್ತಿಕ ಆಸಕ್ತಿಗಳು ಮತ್ತು ಪೂರ್ವಾಗ್ರಹ ಪೀಡಿತ ಚಿಂತನೆಗಳಿಗೆ ಎದುರು ಅವನು ಆ ಶಿಕ್ಷಣಕ್ಕೆ ಯಾವುದೇ ಮಹತ್ವ ಕಲ್ಪಿಸುವುದಿಲ್ಲ;  ಅವನು ಬಹಳ ಉದ್ಧಟತನದಿಂದ ಆ ಶಿಕ್ಷಣವನ್ನು ಸುಳ್ಳಾಗಿಸಲು ಮುಂದಾಗುತ್ತಾನೆ. ನೈಜ ಬೋಧನೆ, ನ್ಯಾಯ-ಸಮಾನತೆ ಮತ್ತು ಸತ್ಯ ಪರತೆಯ ಬದಲು ಅವನು ಅನ್ಯಾಯಯುತವಾದ ವ್ಯವಹಾರವನ್ನು ಕೈಗೊಳ್ಳುತ್ತಾನೆ. ಇಂತಹ ವರ್ತನೆ ತೋರುವಾಗ ಅವನಿಗೆ ತನ್ನ  ಚಾರಿತ್ರ್ಯದ ಚಿಂತೆಯೂ ಇರುವುದಿಲ್ಲ ತನ್ನನ್ನು ಸೃಷ್ಟಿಸಿದವನೊಬ್ಬನಿದ್ದಾನೆ ಮತ್ತು ಅವನ ಮುಂದೆ ತಾನು ಉತ್ತರದಾಯಿಯಾಗಿದ್ದೇನೆ ಎಂಬ  ಪ್ರಜ್ಞೆಯೂ ಇರುವುದಿಲ್ಲ.

ಕೆಲವೊಮ್ಮೆ ವ್ಯಕ್ತಿಯು ಜನಾಂಗೀಯ ಅಥವಾ ಕುಲ ಪಕ್ಷಪಾತದಲ್ಲಿ ಬಿದ್ದು ಬಿಟ್ಟಿರುತ್ತಾನೆ ಮತ್ತು ಪಕ್ಷಪಾತದ ಬಂಧನದಿಂದ  ಹೊರಬರಲಾರದೆ ಸತ್ಯದಿಂದ ವಂಚಿತನಾಗಿ ಬಿಡುತ್ತಾನೆ. ಕೆಲವೊಮ್ಮೆ ಅನಗತ್ಯವಾದ ಅಹಂಕಾರ ಮತ್ತು ಒಣಜಂಭವು ಅವನ ಹಾದಿಯಲ್ಲಿ  ತೊಡಕಾಗಿ ಬಿಟ್ಟಿರುತ್ತದೆ ಮತ್ತು ಅವನು ತನ್ನ ತಪ್ಪು ವಿಧಾನವನ್ನೇ ಬಿಗಿಯಾಗಿ ಹಿಡಿದಿಟ್ಟಿರುತ್ತಾನೆ; ಹೀಗೆ ಅವನು ಯಾವ ಸ್ಥಿತಿಯಲ್ಲೂ  ತನ್ನ ವ್ಯವಹಾರ ನೀತಿಯಲ್ಲಿ ಸುಧಾರಣೆಗೆ ಅವನು ಸಿದ್ಧನಾಗುವುದೇ ಇಲ್ಲ. ಈ ರೀತಿಯಾಗಿ ಮಾನವನು ಕಣ್ಣಿದ್ದೂ ಕುರುಡನಾಗಿದ್ದು  ಬಿಡುತ್ತಾನೆ, ಕಿವಿಯಿದ್ದೂ ಕಿವುಡನಾಗಿರುತ್ತಾನೆ ಮತ್ತು ಹೃದಯವಿದ್ದೂ ಕಲ್ಲಿನಂತೆ ಸಂವೇದನಾ ರಹಿತನಾಗಿದ್ದು ಬಿಡುತ್ತಾನೆ. ಇಂತಹ  ಕಾರಣಗಳಿಂದಾಗಿಯೇ ಸತ್ಯದಿಂದ ದೂರವಿರುವ ಜನರನ್ನು ಪವಿತ್ರ ಕುರ್‌ಆನ್ ಕೆಲವೆಡೆ ಅಕ್ರಮಿಗಳೆಂದು ಸಾರಿದೆ, ಕೆಲವು ಕಡೆ ಅಪರಾಧಿಗಳೆಂದೂ ಮತ್ತೆ ಕೆಲವೆಡೆ ವಿದ್ರೋಹಿಗಳೆಂದಿದೆ, ಮತ್ತೆ ಕೆಲವೆಡೆ ಕೃತಘ್ನರೆಂದೂ ಉಪಕಾರಗೇಡಿಗಳೆಂದೂ ಹೇಳಿದೆ, ಮಗದೊಂದೆಡೆ  ಪ್ರಾಣಿಗಳಂತೆ ಎಂದೂ ಮಾತ್ರವಲ್ಲ ಪ್ರಾಣಗಳಿಗಿಂತ ಕೀಳೆಂದೂ ಹೇಳಿದೆ, ಇನ್ನು ಕೆಲವೆಡೆ ಸಂವೇದನಾರಹಿತರೆಂದೂ ಮೃತರೆಂದೂ  ಕತ್ತಲನ್ನು ಪೂಜಿಸುವವರೆಂದೂ ಹೇಳಿದೆ.

ಈ ಮೇಲೆ ತಿಳಿಸಲಾಗಿರುವ ಕೇಡುಗಳಲ್ಲಿ ಕೆಲವು ಮಾನಸಿಕವಾಗಿದ್ದರೆ; ಇನ್ನು ಕೆಲವು ಅಜ್ಞಾನ, ಭೌತಿಕತೆ ಮತ್ತು ಡಂಭಾಚಾರಗಳಿಗೆ ಸಂಬಂಧಿಸಿದವುಗಳಾಗಿವೆ. ಡಂಭಾಚಾರ ಮತ್ತು ಭೌತಿಕತೆಯ ಪ್ರೇರಣೆಯ ಕಾರಣದಿಂದ ವ್ಯಕ್ತಿಯು ಕೇವಲ ತನ್ನ ಹೊಣೆಗಾರಿಕೆಯಿಂದ  ನುಣುಚಿಕೊಳ್ಳುವುದು ಮಾತ್ರವಲ್ಲ, ತನ್ನ ಜೀವನದ ಮೂಲಭೂತ ಉದ್ದೇಶ ಅಂದರೆ ತನ್ನ ವ್ಯಕ್ತಿತ್ವದ ನಿರ್ಮಾಣವನ್ನೂ ಸಾರಾಸಗಟಾಗಿ  ಕಡೆಗಣಿಸುವ ಮೂಲಕ ಆತ್ಮಹತ್ಯೆಯೆಂಬ ಪಾಪವನ್ನೆಸಗುತ್ತಾನೆ.
ಈ ಲೋಕದಲ್ಲಿ ಪ್ರಜ್ಞಾವಂತಿಕೆಯಿಂದ ಇರುವುದಕ್ಕೆ ಬದಲು ಮಾನವನು ಅಲಕ್ಷ್ಯತನದಿಂದಿರುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಈ ಲೋಕವು ಕ್ಷೋಭೆಗಳಿಂದ ತುಂಬಿಕೊಂಡಿದೆ ಮತ್ತು ಜೀವನದಲ್ಲಿ ಮಾನವನಿಗೆ ವಿವಿಧ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ. ಅವುಗಳನ್ನು ಎದುರಿಸುವಲ್ಲಿ ಸಾಮಾನ್ಯ ವಾಗಿ ಅವನು ಸೋತು ಹೋಗುತ್ತಾನೆ. ಇಂತಹ ಸ್ಥಿತಿಯಲ್ಲಿ ಮಾನವನ ಶಿಕ್ಷಣ ಮತ್ತು  ತರಬೇತಿಯ ಕಡೆಗೆ ವಿಶೇಷ ಗಮನಹರಿಸಬೇಕಾದುದು ಅಗತ್ಯವಾಗಿತ್ತು. ಹಾಗಾಗಿ ಇಡೀ ರಮಝಾನ್ ತಿಂಗಳನ್ನು ಅದಕ್ಕಾಗಿ ಮೀಸಲಿಡಲಾಯಿತು ಹಾಗೂ ಈ ತಿಂಗಳಲ್ಲಿ ಉಪವಾಸ ವ್ರತಾಚರಿಸುವುದು ಕಡ್ಡಾಯವೆಂದು ಸಾರಲಾಯಿತು. ಈ ಉಪವಾಸ ವ್ರತವು ಹಲವು  ಮಗ್ಗಲುಗಳಲ್ಲಿ ಆತ್ಮಸಂಸ್ಕರಣೆ ಅಥವಾ ವ್ಯಕ್ತಿತ್ವ ನಿರ್ಮಾಣದಲ್ಲಿ ಅಸಾಧಾರಣವಾದ ಪಾತ್ರವನ್ನು ವಹಿಸುತ್ತದೆ.
ಸಹನೆ, ಸಂಯಮ ಮತ್ತು ಆತ್ಮ ನಿಗ್ರಹದ ಹೊರತು ನಾವು ವ್ಯಕ್ತಿತ್ವ ಮತ್ತು ಚಾರಿತ್ರ್ಯದ ಕಲ್ಪನೆಯನ್ನೇ ಇರಿಸಲಾರೆವೆಂಬುದು ನಿಮಗೆ ತಿಳಿದಿದೆಯೇ?

ಆದ್ದರಿಂದಲೇ ಕುರ್‌ಆನ್ ಸಹನೆ, ಸಂಯಮಗಳಿಗೆ ಪ್ರಧಾನ ಮಹತ್ವ ನೀಡುತ್ತಾ ಹೇಳುತ್ತದೆ,
“ಈ ಗುಣವಿಶೇಷವು ಸಹನಶೀಲರಿಗಲ್ಲದೆ ಇನ್ನಾರಿಗೂ ಲಭ್ಯವಾಗುವುದಿಲ್ಲ. ಈ ಸ್ಥಾನವು ಮಹಾ ಅದೃಷ್ಟಶಾಲಿಗಳ ಹೊರತು  ಮತ್ತಾರಿಗೂ ಪ್ರಾಪ್ತವಾಗುವುದಿಲ್ಲ.”
(ಫುಸ್ಸಿಲತ್: 35)

ಸಹನೆಯ ಈ ಪ್ರಧಾನವಾದ ಮಹತ್ವವನ್ನು ದೃಷ್ಟಿಯಲ್ಲಿರಿಸುತ್ತಾ, ಪರಲೋಕದ ಯಶಸ್ಸು ಮತ್ತು ಸ್ವರ್ಗದಂತಹ ಅನುಗ್ರಹವನ್ನು ಸಹನಾಶೀಲ ಗುಣವುಳ್ಳವರಿಗೆ ನೀಡಲಾಗುವುದು ಎಂದು ಹೇಳಲಾಗಿದೆ. ಪವಿತ್ರ ಕುರ್‌ಆನ್ ಹೇಳುತ್ತದೆ,
“ಅಲ್ಲಾಹನು ಅವರನ್ನು ಆ ದಿನದ ಕೇಡಿನಿಂದ ರಕ್ಷಿಸುವನು ಮತ್ತು ಅವರಿಗೆ ಉಲ್ಲಾಸವನ್ನೂ ಹರ್ಷವನ್ನೂ ನೀಡುವನು ಮತ್ತು ಅವರ ಸಹನೆಯ ಪ್ರತಿಫಲವಾಗಿ ಅವರಿಗೆ ಸ್ವರ್ಗೋದ್ಯಾನವನ್ನೂ ರೇಶ್ಮೆಯ ಉಡುಪನ್ನೂ ದಯಪಾಲಿಸುವನು.” (ಅದ್ದಹ್ರ್: 11-12)

ಸಹನೆ, ಸಂಯಮದಂತೆಯೇ ಚಾರಿತ್ರ್ಯ ನಿರ್ಮಾಣಕ್ಕಾಗಿ ವ್ಯಕ್ತಿಯು ಸತ್ಯವಂತನಾಗಿರಬೇಕಾದುದೂ ಅಗತ್ಯ. ಅದರಲ್ಲಿ ಯಾವುದೇ ಕಪಟತೆ ಇರಬಾರದು ಮತ್ತು ಅವನ ಮೇಲೆ ಸಂಪೂರ್ಣವಾಗಿ ಭರವಸೆಯನ್ನಿರಿಸಲ್ಪಡಬೇಕು. ಸತ್ಯವಂತಿಕೆಯ ಹೊರತು ವ್ಯಕ್ತಿಯು ಸ್ವರದ  ದೌರ್ಬಲ್ಯ ಮತ್ತು ಟೊಳ್ಳುತನದಿಂದ ಮುಕ್ತಿಯನ್ನು ಗಳಿಸಲಾರ. ಆದ್ದರಿಂದ ಕುರ್‌ಆನಿನ ದೃಷ್ಟಿ ಯಲ್ಲಿ ಸಹನೆಯಂತೆಯೇ ಸತ್ಯವಂತಿಕೆಗೂ ಜೀವನದಲ್ಲಿ ಪ್ರಧಾನ ಮಹತ್ವ ಸಾಧ್ಯವಿದೆ.
“ಅಲ್ಲಾಹ್ ಸತ್ಯಸಂಧರಿಗೆ ಅವರ ಸತ್ಯಸಂಧತೆಯ ಸತ್ಫಲ ನೀಡುವಂತಾಗಲಿಕ್ಕೂ…”(ಅಲ್ ಅಹ್‌ಝಾಬ್: 24)

ಇನ್ನೊಂದೆಡೆ ಹೀಗೆನ್ನಲಾಗಿದೆ, “ಆಗ ಅಲ್ಲಾಹನು ಹೇಳುವನು- ಸತ್ಯಸಂಧರಿಗೆ ಅವರ ಸತ್ಯಸಂಧತೆಯು ಫಲ ನೀಡುವ ದಿನವಿದು.  ಅವರಿಗಾಗಿ ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ. ಇಲ್ಲಿ ಅವರು ಸದಾ ಕಾಲವೂ ವಾಸಿಸುತ್ತಿರುವರು. ಅಲ್ಲಾಹನು ಅವರಿಂದ ಸಂತುಷ್ಟನಾದನು ಮತ್ತು ಅವರು ಅವನಿಂದ ಸಂತುಷ್ಟರಾದರು. ಇದೇ ಅತ್ಯುತ್ಕೃಷ್ಟ ಯಶಸ್ಸು.”

ಇನ್ನು ಉಪವಾಸ ವ್ರತವು ವ್ಯಕ್ತಿಯಲ್ಲಿ ಈ ಎಲ್ಲ ಗುಣಗಳನ್ನು ಹೇಗೆ ಉಂಟು ಮಾಡುತ್ತದೆ ಮತ್ತು ಅವುಗಳಿಗೆ ಶಕ್ತಿಯನ್ನು ನೀಡುತ್ತದೆ  ಎಂಬುದನ್ನು ಪರ್ಯಾಲೋಚಿಸಿ ನೋಡಿ. ವಾಸ್ತವದಲ್ಲಿ ಆ ಗುಣಗಳು ಚಾರಿತ್ರ್ಯ ಮತ್ತು ನಡತೆಯ ಅನಿವಾರ್ಯ ಭಾಗಗಳಾಗಿವೆ.  ಅವುಗಳ ಹೊರತು ಚಿತ್ತದ ಉನ್ನತಿ ಮತ್ತು ಅದರ ಬೆಳವಣಿಗೆಯನ್ನು ಕಲ್ಪಿಸಲೂ ಸಾಧ್ಯವಿಲ್ಲ.

ವಿಶ್ವಾಸಿಯು ರಮಝಾನ್ ತಿಂಗಳಲ್ಲಿ ಉಪವಾಸ ವ್ರತಾಚರಿಸುವ ಮೂಲಕ ಅಲ್ಲಾಹನ ಮೇಲಿರುವ ತನ್ನ ವಿಶ್ವಾಸವನ್ನು ವ್ಯಕ್ತಪಡಿಸುತ್ತಾನೆ  ಮತ್ತು ಆ ವಿಶ್ವಾಸಕ್ಕೆ ಶಕ್ತಿಯನ್ನೂ ತುಂಬುತ್ತಾನೆ. ತಾನು ಅಲ್ಲಾಹನ ಯಾವುದೇ ಆದೇಶವನ್ನೂ ಉಲ್ಲಂಘಿಸಲಾರೆನೆಂದು ಕಾರ್ಯತಃ  ಘೋಷಿಸುತ್ತಾನೆ. ಏಕೆಂದರೆ ಅಲ್ಲಾಹನ ಆದೇಶಗಳ ಉಲ್ಲಂಘನೆಯು ನಾಳೆ ಪುನರುತ್ಥಾನ ದಿನದಂದು ತನಗೆ ನಷ್ಟಕಾರಿಯಾಗಿರುವುದು ಮತ್ತು ದೇವಕ್ರೋಧವೇ ತನ್ನ ಪಾಲಿಗಿರುವುದು ಎಂಬ ಪ್ರಜ್ಞೆ ಅವನಲ್ಲಿರುತ್ತದೆ. ರಮಝಾನ್ ತಿಂಗಳಲ್ಲಿ ಉಪವಾಸ ವ್ರತಾಚರಿಸಿ ಹಸಿವು- ದಾಹವನ್ನು ಸಹಿಸುವ ಮೂಲಕ ತನ್ನಲ್ಲಿ ಸಹನೆಯೆಂಬ ಗುಣವನ್ನು ಉದ್ದೀಪಿಸು ತ್ತಾನೆ. ಅಲ್ಲಾಹನ ಸಂದೇಶವಾಹಕರು(ಸ) ಕೂಡ ರಮಝಾನನ್ನು ಸಹನೆಯ ತಿಂಗಳು ಎಂದು ಬಣ್ಣಿಸಿರುವರು.

ಈ ತಿಂಗಳ ರಾತ್ರಿಗಳಲ್ಲಿ ಕಿಯಾಮ್(ನಮಾಝ್)ನ ವಿಶೇಷ ವ್ಯವಸ್ಥೆಯನ್ನು  ಮಾಡಲಾಗುತ್ತದೆ. ಇದರಿಂದ ಒಂದೆಡೆ ಅಲ್ಲಾಹನೊಂದಿಗೆ ಸಂಬಂಧ ಬಲಗೊಳ್ಳುತ್ತದೆ, ಇನ್ನೊಂದೆಡೆ ಅದರಿಂದ ಮಾನವನಲ್ಲಿ ಪರಿಶ್ರಮದ  ಕಷ್ಟಗಳನ್ನು ಸಹಿಸುವ ಶಕ್ತಿ ಬೆಳೆಯುತ್ತದೆ. ಸಹನೆ ಮತ್ತು ಸತ್ಯವಂತಿಕೆಯ ನಡುವೆ ಗಾಢವಾದ ಸಂಬಂಧವಿದೆ. ಸಹನೆಯ ಹೊರತು  ಸತ್ಯದಲ್ಲಿ ಸ್ಥಿರವಾಗಿರಲು ಸಾಧ್ಯವಿಲ್ಲ. ಉಪವಾಸವು ಕರ್ಮಕ್ಕೆ ಸಂಬಂಧಿಸಿರುವ ಕಾರಣ, ಅದರಿಂದ ಆ ಮೂಲಕ ವ್ಯಕ್ತಿಯಲ್ಲಿ  ಬೆಳೆಯುವ ಗುಣವು ಭರವಸೆಗೆ ಯೋಗ್ಯವಾಗಿರುವುದು. ಉಪವಾಸಿಗನು ಜನರ ಕಣ್ಣು ತಪ್ಪಿಸಿ ತಿನ್ನಲಾರ. ತನ್ನ ಉಪವಾಸವು ಅಲ್ಲಾಹ ನಿಗಾಗಿದೆ ಮತ್ತು ಅಲ್ಲಾಹನಿಂದ ತನ್ನ ಕಳ್ಳತನವನ್ನು ಎಂದೂ ಮರೆ ಮಾಚಲಾರೆನೆಂಬುದನ್ನು ಅವನು ಚೆನ್ನಾಗಿ ಬಲ್ಲನು. ಈ ಪ್ರಕಾರ  ಉಪವಾಸ ವ್ರತವು ಮಾನವನನ್ನು ಎಲ್ಲ ರೀತಿಯ ಮೋಸ ಮತ್ತು ವಂಚನೆಯಿಂದ ರಕ್ಷಿಸಿ ಅವನನ್ನು ಓರ್ವ ಸತ್ಯವಂತ ದಾಸನನ್ನಾಗಿ  ಮಾಡುತ್ತದೆ.

ಇನ್ನು ಈ ಉಪವಾಸ ವ್ರತವು ವ್ಯಕ್ತಿಯ ಸುಪ್ತ ಪ್ರಜ್ಞೆಯನ್ನು ಬಡಿದೆಬ್ಬಿಸುತ್ತದೆ ಮತ್ತು ಅವನ ಭಾವನೆಗಳಿಗೆ ಸೊಬಗನ್ನು ನೀಡುತ್ತದೆ.  ಅದರ ಕಾರಣದಿಂದ ಅವನಲ್ಲಿ ಸ್ವಾಭಾವಿಕವಾಗಿಯೇ ತನ್ನ ಜೊತೆಯಲ್ಲಿ ಉಪವಾಸ ವ್ರತಾಚರಿಸುವ ಮತ್ತು ದೇವಾರಾಧನೆಯಲ್ಲಿ  ತತ್ಪರರಾಗಿರುವ ತನ್ನ ಸಹೋದರರೊಂದಿಗೆ ಉತ್ತಮ ಸಂಬಂಧ ಬೆಳೆಯುತ್ತದೆ. ಆ ಪೈಕಿ ಬಡವರೂ ಅಪೇಕ್ಷಿತರೂ ಇರುತ್ತಾರೆ.  ಅವರಿಗಾಗಿ ಹೃದಯದಲ್ಲಿ ಸಹಾನುಭೂತಿಯ ಭಾವನೆ ಬೆಳೆಯುವುದು ಒಂದು ಸ್ವಾಭಾವಿಕ ಪ್ರಕ್ರಿಯೆಯಾಗಿದೆ. ಅಂತಹ ಜನರಿಗೆ ಸಹಾಯ ಮಾಡುವುದರಿಂದ ವ್ಯಕ್ತಿಗೆ ಸಂತೋಷ ಲಭಿಸುತ್ತದೆ.

ಪವಿತ್ರ ಕುರ್‌ಆನಿನ ಪ್ರಕಾರ ಉಪವಾಸ ವ್ರತಾಚರಣೆಯಿಂದ ಮಾನವನಲ್ಲಿ ತಕ್ವಾದ (ಧರ್ಮನಿಷ್ಠೆಯ) ಗುಣ ಬೆಳೆಯುತ್ತದೆ. ಅವನಲ್ಲಿರಬಹುದಾದ ಅಲಕ್ಷ್ಯ ಆಲಸ್ಯ ದೂರವಾಗುತ್ತದೆ. ಅವನಿಗೆ ಪ್ರಜ್ಞಾವಂತಿಕೆ ಮತ್ತು ಹೊಣೆಗಾರಿಕೆಯ ಪ್ರಜ್ಞೆಯೊಂದಿಗೆ ಬದುಕುವ ಪಾಠ ಲಭಿಸುತ್ತದೆ. ಪವಿತ್ರ ಕುರ್‌ಆನಿನಲ್ಲಿ ಸ್ಪಷ್ಟವಾಗಿ ಹೀಗೆನ್ನಲಾಗಿದೆ, “ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ  ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯ ಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ  ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ.” (ಅಲ್ ಬಕರ: 183)

ನಿಮ್ಮಲ್ಲಿರಬಹುದಾದ ಅಲಕ್ಷ್ಯ-ಆಲಸ್ಯವು ದೂರವಾಗಬೇಕು, ಪ್ರಜ್ಞಾವಂತಿಕೆಯ ಸ್ವಭಾವವು ಬೆಳೆದು ಬರಬೇಕು, ಸರಿ-ತಪ್ಪುಗಳನ್ನು ಅರಿಯುವಲ್ಲಿ ವಿಳಂಬ ವಾಗದಷ್ಟು ನಿಮ್ಮ ಆಸಕ್ತಿ ಸ್ವಚ್ಛ ಮತ್ತು ಸ್ಪಷ್ಟಗೊಳ್ಳಬೇಕು, ಯಾವ ಕಾರ್ಯ ವಿಧಾನವನ್ನು ಅನುಸರಿಸುವುದರಿಂದ  ನೈಜ ಪ್ರಯೋಜನವಿದೆ ಮತ್ತು ಯಾವ ಕಾರ್ಯ ವಿಧಾನದಿಂದ ನೈತಿಕ ಅಧಃಪತನವಾಗುವುದು ಎಂಬುದರ ಅರಿವು ನಿಮ್ಮಲ್ಲಿ ಬೆಳೆದು ಬರಬೇಕೆಂಬ ಉದ್ದೇಶದಿಂದಲೇ ನಿಮ್ಮ ಮೇಲೆ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದಲೇ ಅಲ್ಲಾಹನ ಸಂದೇಶವಾಹಕರು(ಸ) ಹೇಳಿರುವರು, “ಯಾರಾದರೂ ವಿಶ್ವಾಸ ಮತ್ತು ಆತ್ಮಾವಲೋಕನದೊಂದಿಗೆ ಉಪವಾಸ ವ್ರತಾಚರಿಸಿದರೆ, ಅವನ ಗತ  ಪಾಪಗಳೆಲ್ಲವೂ ಕ್ಷಮಿಸಲ್ಪಡುವುದು.” (ಬುಖಾರಿ, ಮುಸ್ಲಿಮ್)

ಉಪವಾಸ ವ್ರತದಲ್ಲಿ ಅಲ್ಲಾಹ್ ಮತ್ತು ಅಲ್ಲಾಹನೊಡನೆ ಭೇಟಿಯ ವಿಶ್ವಾಸವು ನವೀಕರಿಸಲ್ಪಡುವುದು ಹಾಗೂ ನಿಜಾರ್ಥದಲ್ಲಿ ಅಲ್ಲಾಹನ ಸಂಪ್ರೀತಿಯು ಉದ್ದೇಶ ವಾಗಿದ್ದರೆ ಅದುವೇ ವಿಶ್ವಾಸ ಮತ್ತು ಆತ್ಮಾವಲೋಕನವಾಗಿದೆ. ಈ ವಿಶ್ವಾಸ ಮತ್ತು ಆತ್ಮಾವಲೋಕನವು  ವಾಸ್ತವದಲ್ಲಿ ಉಪವಾಸ ವ್ರತದ್ದೇ ಒಂದು ಭಾಗವಾಗಿದೆ. ಅದರ ಕಾರಣದಿಂದಲೇ ಉಪವಾಸ ವ್ರತವು ಪ್ರಜ್ಞಾಪೂರ್ವಕ ಮತ್ತು ನೈಜವಾಗಿ  ಮಾರ್ಪಡುತ್ತದೆ; ಅದು ಕೇವಲ ಸಂಪ್ರದಾಯವಾಗಿದ್ದು ಬಿಡುವುದಿಲ್ಲ. ಇಂತಹ ಉಪವಾಸ ವ್ರತದಲ್ಲಿ ವ್ಯಕ್ತಿಯು ಪಾಪಗಳಿಂದ ಮುಕ್ತನಾಗುವ ಮತ್ತು ಕೆಡುಕುಗಳ ಪ್ರಭಾವದಿಂದ ಸಂಪೂರ್ಣ ಸುರಕ್ಷಿತನಾಗುವ ಗುಣವನ್ನು ಬೆಳೆಸಿಕೊಳ್ಳುತ್ತಾನೆ. ಅಲ್ಲದೆ ಉಪವಾಸ ವ್ರತವು  ಕೇವಲ ಪಾಪಗಳನ್ನು ಅಳಿಸುವುದಷ್ಟೇ ಅಲ್ಲ, ವ್ಯಕ್ತಿಯನ್ನು ಎಲ್ಲ ರೀತಿಯ ಪಾಪ, ಅಕ್ರಮ ಮತ್ತು ದೇವಾಜ್ಞೋ ಲ್ಲಂಘನೆಯ ಕಾರ್ಯಗಳಿಂದ ತಡೆದಿರಿಸಲ್ಪಡುತ್ತದೆ. ಆದ್ದರಿಂದಲೇ ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿರುವರು,
“ಯಾರು ಸುಳ್ಳು ಮಾತನ್ನಾಡುವುದನ್ನು ಮತ್ತು ಅದರಂತೆ ವರ್ತಿಸುವುದನ್ನು ತೊರೆಯುವುದಿಲ್ಲವೋ ಅವನು (ಉಪವಾಸ ವ್ರತಾಚರಿಸಿ)  ಆಹಾರ ಪಾನೀಯ ವನ್ನು ತೊರೆಯುವ ಅಗತ್ಯ ಅಲ್ಲಾಹನಿಗಿಲ್ಲ.” (ಬುಖಾರಿ)

ಸ್ವತಃ ಪವಿತ್ರ ಕುರ್‌ಆನಿನಲ್ಲಿ ಉಪವಾಸದ ಶಿಷ್ಟಾಚಾರಗಳನ್ನು ಉಲ್ಲೇಖಿಸುತ್ತಾ ಹೀಗೆನ್ನಲಾಗಿದೆ, “ನೀವು ನಿಮ್ಮ ಸಂಪತ್ತನ್ನು ಪರಸ್ಪರ ಅನುಚಿತ ರೀತಿಯಿಂದ ಕಬಳಿಸಬಾರದು ಮತ್ತು ನಿಮಗೆ ಇತರರ ಸಂಪತ್ತಿನ ಒಂದಂಶವನ್ನು ಉದ್ದೇಶ ಪೂರ್ವಕವಾಗಿ ಅಕ್ರಮ ರೂಪದಿಂದ  ಕಬಳಿಸುವ ಸಂದರ್ಭ ಸಿಗುವಂತೆ ಅವು ಗಳನ್ನು ಅಧಿಕಾರಿಗಳ ಮುಂದೆ ಸಮರ್ಪಿಸ ಬಾರದು.” (ಅಲ್‌ಬಕರ: 188)

ಈ ಮೇಲೆ ತಿಳಿಸಲಾದಂತೆ ಉಪವಾಸ ವ್ರತದಿಂದ ಮಾನವನ ತರಬೇತಿಯಾಗುತ್ತದೆ. ಆ ಮೂಲಕ ಅವನು ಚಿತ್ತಾಕಾಂಕ್ಷೆಗಳು ಮತ್ತು  ದೇಹೇಚ್ಛೆಯ ಗುಲಾಮನಾಗಿ ಉಳಿಯುವುದಿಲ್ಲ. ಮಾನವನ ಭೌತಿಕ ಅಗತ್ಯಗಳೂ ಇರುತ್ತವೆ. ಅದನ್ನು ಯಾವತ್ತಿಗೂ ನಿರಾಕರಿಸಲಾಗದು.  ಆದರೆ ಆ ಅಗತ್ಯಗಳ ಹಿಂದೆಯೇ ಬಿದ್ದುಕೊಂಡು ಅವುಗಳನ್ನೇ ಜೀವನದ ಪರಮ ಗುರಿಯೆಂದು ಭಾವಿಸುವಂತಾಗಬಾರದು;  ಹಲಾಲ್-ಹರಾಮ್, ಸಹ್ಯ-ಅಪ್ರಿಯ ವಿಷಯಗಳ ವ್ಯತ್ಯಾಸವೇ ಉಳಿಯದಂತಾಗಬಾರದು; ಅಂತೆಯೇ ನ್ಯಾಯ-ಸಮಾನತೆ,  ಸಹೋದರತೆ, ಸಹಾನುಭೂತಿ, ಹಿತ ಚಿಂತನೆ, ಪ್ರೀತಿ ಇತ್ಯಾದಿಗಳನ್ನು ಬದಿಗಿರಿಸಿ ಒಂದು ಸ್ವಾರ್ಥ ಪ್ರಾಣಿಯಂತಾಗಿ ಬಿಡುವಷ್ಟು ಭೌತಿಕ ಮೋಹವೂ ಬೆಳೆಯಬಾರದು.
ಮಾನವನು ಅಲ್ಲಾಹನ ಆದೇಶದಂತೆ ಉಪವಾಸ ವ್ರತಾಚರಿಸುತ್ತಾನೆ, ಹಗಲಲ್ಲಿ ಆಹಾರ-ಪಾನೀಯ ತೊರೆಯುತ್ತಾನೆ ಮತ್ತು ಲೈಂಗಿಕೇಚ್ಛೆಯ ಈಡೇರಿಕೆ ಯಿಂದಲೂ ದೂರವುಳಿಯುತ್ತಾನೆ. ಹೀಗೆ ವಾಸ್ತವದಲ್ಲಿ ಅಲ್ಲಾಹನ ಎಲ್ಲ ಆದೇಶಗಳನ್ನು ಪಾಲಿಸಲು, ಜೀವನದ ಎಲ್ಲ ರಂಗಗಳಲ್ಲಿ ಅಲ್ಲಾಹನ ಆಜ್ಞಾಪಾಲಕ ಮತ್ತು ಪ್ರಾಮಾಣಿಕ ದಾಸನಾಗಿ ಇರಲು ತನ್ನನ್ನು ತರಬೇತುಗೊಳಿಸುತ್ತಾನೆ. ಇದರಿಂದಾಗಿ ಅಲ್ಲಾಹನಿಗೆ ವಿದ್ರೋಹವೆಸಗುವ ಮತ್ತು ಅವನ ಆಜ್ಞೆಗಳನ್ನು ಉಲ್ಲಂಘಿಸುವ ಒಲವುಗಳಿಗೆ ಬೆಳೆಯಲು ಅವಕಾಶವೊದಗುವುದಿಲ್ಲ. ಇಂತಹ ವ್ಯಕ್ತಿಯು ಅಲ್ಲಾಹನ ದೃಷ್ಟಿಯಲ್ಲಿ ಅಪರಾಧಿಯೆಂದು ಪರಿಗಣಿಸಲ್ಪಡುವುದನ್ನು ಇಷ್ಟಪಡುವುದಿಲ್ಲ ಅಥವಾ ಅವನ ದರಬಾರಿನಲ್ಲಿ ಅಕ್ರಮಿ ಮತ್ತು ವಿದ್ರೋಹಿಯೆಂದು ಸಾರಲ್ಪಡುವುದನ್ನು ಇಷ್ಟಪಡುವುದಿಲ್ಲ ಅಥವಾ ತೀರ್ಮಾನದ ದಿನ ಸುಳ್ಳುಗಾರ ಮತ್ತು  ಕಪಟವಿಶ್ವಾಸಿ ಎಂದು ಸಾಬೀತುಗೊಳ್ಳಲು ಇಷ್ಟಪಡುವುದಿಲ್ಲ ಹಾಗೆಯೇ ತನ್ನ ಮೌಲ್ಯದ ಪ್ರಜ್ಞೆಯಿಲ್ಲದ, ತನ್ನ ಕೆಟ್ಟ ಪರಿಣಾಮದ ಅರಿವು ಇಲ್ಲದ ಅಜ್ಞಾನದ ಅಂಧಕಾರದಲ್ಲಿ ಕರಗಿಹೋದವರಲ್ಲಿ ಸೇರಿಸಲ್ಪಡುವುದನ್ನು ಇಷ್ಟಪಡುವುದಿಲ್ಲ.

ಒಂದು ತಿಂಗಳ ನಿರಂತರ ಉಪವಾಸ ವ್ರತದಿಂದ, ಐಹಿಕವಾದ ಭೌತಿಕ ಅನುಗ್ರಹಗಳಿಗೂ ಮೀರಿದ ಒಂದು ಅನುಗ್ರಹವಿದೆ ಮತ್ತು  ಅದನ್ನು ಎಂದಿಗೂ ಕಡೆಗಣಿಸ ಲಾಗದು ಎಂಬ ವಾಸ್ತವವು ಬೆಳಕಿಗೆ ಬರುತ್ತದೆ. ಯಾವ ಪ್ರಭುವಿನ ನಾಮವೆತ್ತಿ ನಾವು ಉಪವಾಸ  ವ್ರತಾಚರಿಸುತ್ತೇವೋ ಮತ್ತು ಉಪವಾಸ ಪಾರಣೆ ಮಾಡು ತ್ತೇವೋ ಆ ಪ್ರಭುವಿನ ನಾಮ ಸ್ಮರಣೆ ಹಾಗೂ ಅವನ ಸಂತುಷ್ಟಿಯನ್ನು  ಇಚ್ಛಿಸುವುದೇ ಆ ಅನುಗ್ರಹವಾಗಿದೆ. ಇದು ಉಪವಾಸ ವ್ರತಕ್ಕೆ ಒಂದು ಅತ್ಯುತ್ತಮ ಆರಾಧನೆಯ ಸ್ಥಾನವನ್ನು ಗಳಿಸಿ ಕೊಡುತ್ತದೆ. ಆ  ಆರಾಧನೆಯ ಮೂಲಕ ನಮ್ಮ ಆತ್ಮದ ಸಂಸ್ಕರಣೆಯಾಗುತ್ತದೆ. ಜಗತ್ತಿನ ಸಕಲ ಅನುಗ್ರಹಗಳ ಪೈಕಿ ಅತ್ಯುತ್ತಮ ಅನುಗ್ರಹವು ಜೀವನ  ಮತ್ತು ಜೀವನ ಪ್ರಜ್ಞೆಯಾಗಿದೆ. ಆದರೆ ಅದನ್ನು ಪೂರ್ತೀಕರಿಸುವ ಕರ್ತವ್ಯದಲ್ಲಿ ನಾವು ಅಲಕ್ಷ್ಯ ತೋರಿದರೆ ಆ ಜೀವನವೇ ಮಿಥ್ಯೆಯಾಗಿ  ಮಾರ್ಪಡುತ್ತದೆ. ಜೀವನದ ಮೂಲ ಗಳಿಕೆಯು ಉನ್ನತವಾದ ಚಾರಿತ್ರ್ಯವಾಗಿದೆ. ಇದೇ ಉನ್ನತವಾದ ಚಾರಿತ್ರ್ಯವನ್ನು ಗಳಿಸುವುದೇ ಆತ್ಮ ಸಂಸ್ಕರಣೆಯಾಗಿದೆ. ಒಂದು ವೇಳೆ ನಮ್ಮ ಉಪವಾಸ ವ್ರತದಿಂದ ನಮ್ಮ ಆತ್ಮಸಂಸ್ಕರಣೆ ಆಗದಿದ್ದರೆ, ಉಪವಾಸ ವ್ರತಾಚರಿಸಿದರೂ ನಾವು ಉನ್ನತ ಚಾರಿತ್ರ್ಯವನ್ನು ಗಳಿಸದೇ ಹೋದರೆ, ನಮ್ಮ ಉಪವಾಸ ವ್ರತವು ನೈಜ ಆತ್ಮದಿಂದ ಮುಕ್ತವಾಗಿರುವ ಒಂದು ಸಂಪ್ರದಾಯ ಮಾತ್ರವಾಗಿ ಉಳಿದಿದೆ ಎಂದಷ್ಟೇ ಹೇಳಬಹುದಾಗಿದೆ. ಹಾಗಾಗಿ ನಮ್ಮ ಉಪವಾಸ ವ್ರತವು ಕೇವಲ ಸಾಂಪ್ರದಾಯಿಕ ಮಾತ್ರವಾಗಿ  ಉಳಿಯದಂತೆ, ಅದೊಂದು ನೈಜವಾದ ಆರಾಧನೆಯಾಗುವಂತೆ ಪ್ರಾರ್ಥಿಸಬೇಕಾಗಿದೆ. ಈ ರೀತಿಯಾಗಿ ಅಲ್ಲಾಹನು ಯಾವ ಉದ್ದೇಶ ದಿಂದ ನಮ್ಮ ಮೇಲೆ ಉಪವಾಸ ವ್ರತವನ್ನು ಕಡ್ಡಾಯಗೊಳಿಸಿರು ವನೋ ಆ ಉದ್ದೇಶ ಪೂರ್ತಿಯಾಗಲೆಂದು ಪ್ರಾರ್ಥಿಸಬೇಕು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …