ಅದ್ವೈತ ಸಿದ್ಧಾಂತವನ್ನು ಇಸ್ಲಾಮ್ ಅಂಗೀಕರಿಸುತ್ತದೆಯೇ? ಇಲ್ಲವೆಂದಾದರೆ ಏಕೆ?
ಶ್ರೀ ಶಂಕರಾಚಾರ್ಯರು ಒಂದು ಸಿದ್ಧಾಂತದ ರೂಪದಲ್ಲಿ ಅದ್ವೈತವನ್ನು ಪರಿಚಯಸಿದವರು. ಅವರು ಏಳನೇ ಶತಮಾನದ ಅಂತ್ಯ ಹಾಗೂ 8ನೇ ಶತಮಾನದ ಆರಂಭದಲ್ಲಿ ಜೀವಿಸಿದ್ದರೆಂದು ಸಾಮಾನ್ಯ ನಂಬಿಕೆ. 8ನೇ ಶತಮಾನದ ಅಂತ್ಯದಲ್ಲೆಂದೂ, ಒಂಬತ್ತನೇ ಶತಮಾನದ ಆದಿಯಲ್ಲೆಂದೂ ಬದುಕಿದ್ದರೆಂದು ಹೇಳುವವರೂ ಇದ್ದಾರೆ. ಅವರ ಜನ್ಮಸ್ಥಳ ಕೇರಳದ ಕಾಲದಿಯಲ್ಲೆಂದು ಊಹಿಸಲಾಗಿದೆ. ಶಂಕರಾಚಾರ್ಯರು ತನ್ನ ಗುರು ಗೋವಿಂದ ಎಂಬವರ ಆಚಾರ್ಯರಾದ ಗೌಡಪಾದರಿಂದ ಅದ್ವೈತ ಸಿದ್ಧಾಂತವನ್ನು ಸ್ವೀಕರಿಸಿದರು. ಆದರೂ ಬಾದರಾಯಣನ ಬ್ರಹ್ಮ ಸೂತ್ರದ ವ್ಯಾಖ್ಯಾನವೆಂಬ ರೀತಿಯಲ್ಲಿ ಅವರು ಅದ್ವೈತವನ್ನು ಆವಿಷ್ಕರಿಸಿದರು. ಬ್ರಹ್ಮಸೂತ್ರವೆಂದರೆ ಉಪನಿಷತ್ತುಗಳ ಸಮನ್ವಯ ರೂಪವಾಗಿದೆ.
ಕೇರಳದ ಅದ್ವೈತದ 8ನೇ ಪ್ರಬಲ ಆಚಾರ್ಯರಾದ ವಿದ್ಯಾವಾಚಸ್ವತಿ ವಿ. ಪನೋಳಿ ಬರೆಯುತ್ತಾರೆ: ಅದ್ವೈತ ದರ್ಶನವನ್ನು ಯಥಾರ್ಥಗೊಳಿಸುವ ಹಜ್ಜೆಯ ಆಚಾರ್ಯ ದೃಷ್ಟಿಕೋನ. ಬ್ರಹ್ಮನು ನಿರಾಕಾರನೂ, ಪರಮಾತ್ಮನು ಏಕನೂ, ಜೀವಾತ್ಮನೂ ಆಗಿದ್ದಾನೆಂದು ಸಾಬೀತುಪಡಿಸಲು ಶ್ರೀ ಶಂಕರ ಭಗವದ್ಪಾದರ್ಕರಿಗಲ್ಲದೆ ಯಾವ ಆಚಾರ್ಯರಿಗೂ ಸಾಧ್ಯವಾಗಲಿಲ್ಲ (ಶ್ರೀ ಶಂಕರ ದರ್ಶನಂ, ಮಾತೃಭೂಮಿ ಪ್ರಿಂಟಿಂಗ್ ಆ್ಯಂಡ್ ಪಬ್ಲಿಶಿಂಗ್ ಕಂಪೆನಿ ಲಿಮಿಟೆಡ್, 1998 ಪುಟ 6)
ಬುದ್ದ ಸಿದ್ಧಾಂತವನ್ನು ಎದುರಿಸಲು ಶ್ರೀ ಶಂಕರಾಚಾರ್ಯರು ಅದ್ವೈತ ಸಿದ್ದಾಂತವನ್ನು ಆವಿಷ್ಕರಿಸಿದರು. ವಿ.ಪನೋಳಿ ಬರೆಯುತ್ತಾರೆ: ಶಂಕರಾಚಾರ್ಯರು ಬೌದ್ಧ ಧರ್ಮದ ವಿರೋಧಗಳನ್ನು ಎದುರಿಸಬೇಕಾಯಿತು. ಬೌದ್ಧ ಧರ್ಮದ ಬೆದರಿಕೆಯನ್ನು ಎದುರಿಸಲು ಶಕ್ತವಾದ, ನೂತನವಾದ ಒಂದು ತತ್ವಸಿದ್ಧಾಂತವನ್ನು ರೂಪಿಸಬೇಕಾದ್ದು ಅತ್ಯಗತ್ಯವಾಗಿತ್ತು. ಶ್ರೀಶಂಕರರ ಅದ್ವೈತ ಸಿದ್ಧಾಂತವು ಅತ್ಯಂತ ಸಮರ್ಥ ರೀತಿಯಲ್ಲಿ ಆ ಪಂಥಾಹ್ವಾನವನ್ನು ಎದುರಿಸಿತು.(Ibid ಪುಟ-138)
ಬೌದ್ಧ ಧರ್ಮವನ್ನು ಎದುರಿಸಲು ಶಂಕರಾಚಾರ್ಯರು ಅದರ ಆದರ್ಶಗಳನ್ನೇ – ಎರವಲು ಪಡೆಯುತ್ತಿದ್ದರು. ವಿ. ಪನೋಳಿ ಬರೆಯುತ್ತಾರೆ. ಬೌದ್ಧ ಧರ್ಮದಿಂದ ತಮಗೆ ಸ್ವೀಕಾರಾರ್ಹವಾದುದನ್ನು ಸ್ವೀಕರಿಸುತ್ತಾ, ತನ್ನಿಚ್ಚೆಯಂತೆ ಅದನ್ನು ಸೇರಿಸಿಕೊಂಡರು. ‘ಪ್ರಚ್ಛನ್ನ ಬುದ್ದ’ ಎಂಬ ಹೆಸರು ಕೂಡಾ ಶ್ರೀ ಶಂಕರಾಚಾರ್ಯರಿಗೆ ಇತ್ತು. (Ibid ಪುಟ-68)
ಶಂಕರಾಚಾರ್ಯರು ಅದ್ವೈತವನ್ನು ಹೀಗೆ ವಿವರಿಸಿದರು:
‘ಬ್ರಹ್ಮಂ ಸತ್ಯಂ ಜಗನ್ನಿಡ್ಯ ಜೀವೋ ಬ್ರಹ್ಮಮ ನಾಪರ’ : (ಬ್ರಹ್ಮನೇ ಸತ್ಯ. ಜಗತ್ತು ಮಿಥ್ಯ, ಜೀವಬ್ರಹ್ಮನಲ್ಲದೆ ಬೇರಾರೂ ಇಲ್ಲ)
ವಿ. ಪನೋಳಿ ಬರೆಯುತ್ತಾರೆ: ಆಚಾರ್ಯ ಮುನಿಗಳು ಸಾವಿರಾರು ವರ್ಷಗಳಿಂದ ಲೋಕದ ಜನರೊಂದಿಗೆ ಹೇಳಿದರು: ಈ ಕಾಣುವ ಪ್ರಪಂಚ ಬ್ರಹ್ಮನಿಂದ ಉದಯವಾಗಿದೆ. ಅದು ಏಕವೂ ನಿತ್ಯ ನಿರಂತರವೂ ಆಗಿದೆ. ಅಂಗರ, ಅಮರ, ಪರಮಾತ್ಮ ಮೊದಲಾದ ಹೆಸರುಗಳಿಂದ ಬ್ರಹ್ಮ ಕರೆಯಲ್ಪಡುತ್ತಾನೆ. ಅದನ್ನು ಅರಿತರೆ ಸರ್ವವನ್ನೂ ಅರಿಯಲು ಸಾಧ್ಯವಾಗುತ್ತದೆ ವೇದಗ್ರಂಥಗಳಿಗೂ ಬ್ರಹ್ಮವೆಂಬ ಹೆಸರಿದೆ. ಪರಮಾತ್ಮನೂ ಜೀವಾತ್ಮನೂ ಒಂದೇ. ಕೇವಲ ಅಜ್ಞಾನ ಮಾತ್ರ ಅದನ್ನು ನಿರಾಕರಿಸುತ್ತದೆ. ಅಜ್ಞಾನವೇ ದುಃಖಕ್ಕೆ ಕಾರಣ. ಆತ್ಮ ಜ್ಞಾನೋದಯದಲ್ಲಿ ಅಜ್ಞಾನ ತೊಳೆದು ಹೋಗುತ್ತದೆ. ಜ್ಞಾನಿಗಳಿಗೆ ಕರ್ಮವಿಲ್ಲ, ಶರೀರ ಸಂಬಂಧವಿಲ್ಲ, ಬ್ರಹ್ಮನ ಉಪಾಸಕರು ಬ್ರಹ್ಮನೊಂದಿಗೆ ಲೀನವಾಗುತ್ತಾರೆ. (Ibid ಪುಟ 113) ಅವರು ಬರೆಯುತ್ತಾರೆ: ಜೇಡರ ಹುಳದಿಂದ ನೂಲು, ಶರೀರದಿಂದ ಕೇಶ, ರೋಮಗಳೆಂಬಂತೆ ಚಿರಂತನನಾದ ಬ್ರಹ್ಮನಿಂದ ಈ ಜಗತ್ತು ಉದ್ಭವವಾಗಿದೆ ಎಂದು ಮಂಡಕೋಪನಿಷತ್ತಿನಲ್ಲಿ ಪ್ರಸ್ತಾಪಿಸಿರುವುದು ಕಾಣಬಹುದು. (Ibid ಪುಟ 48)
ಪರಮಾರ್ಥವು ಬ್ರಹ್ಮ ಮಾತ್ರವೆಂದೂ, ಜಗತ್ತು ಮಾಯೆಯೆಂದೂ ಅದು ವಾಸ್ತವವೆಂದು ಅನುಭವವಾಗಲು ಅಜ್ಞಾನವೇ ಕಾರಣವೆಂದೂ ಅದ್ವೈತ ಸಿದ್ದಾಂತವು ಹಲವು ಉದಾಹರಣೆಗಳನ್ನು ಸಮರ್ಪಿಸಿತು. ಕೆಲವನ್ನು ಇಲ್ಲಿ ಸೇರಿಸುತ್ತೇನೆ.
1. ಚಿನ್ನದ ಸರವನ್ನು ತೋರಿಸಿ ಇದೇನೆಂದು ಕೇಳಿದರೆ ಎಲ್ಲರ ಉತ್ತರ ಚಿನ್ನದ ಸರ ಎಂದಾಗಿರುವುದು. ಅದನ್ನು ಕರಗಿಸಿ ಬಳೆಯಾಗಿ ಪರಿವರ್ತಿಸಿದರೆ ಬಳೆಯೆಂದೂ, ಕಾಲಿನ ಗೆಜ್ಜೆಯಾಗಿ ಬದಲಾಯಿಸಿದಾಗ ಕಾಲಿನ ಗೆಜ್ಜೆಯೆಂದೂ ಹೇಳಲಾಗುತ್ತದೆ. ಆದರೆ ಚಿನ್ನ ಎಂಬುದು ಇಲ್ಲಿ ಮಾಯವಾಗುವುದಿಲ್ಲ. ಈ ರೀತಿ ಜಗತ್ತು ಬ್ರಹ್ಮನ ಬದಲಾದ ರೂಪವಾಗಿದೆ. ಅಜ್ಞಾನದಿಂದಾಗಿ ಪ್ರಕಾಶಮಯ ರೂಪವನ್ನು ಕಂಡು ಅದೇ ನೈಜವೆಂದು ನಂಬುತ್ತಾರೆ. ಆಧ್ಯಾತ್ಮಿಕ ಜ್ಞಾನವನ್ನು ಪಡೆದವರು ಅವು ವ್ಯಾವಹಾರಿಕವೆಂದೂ, ಪಾರಮಾರ್ಥಿಕವಾಗಿ ಬ್ರಹ್ಮನೇ ಇರುವುದೆಂದು ಅರಿಯುತ್ತಾರೆ. ಬಳೆ, ಸರ, ಕಾಲಿನ ಗೆಜ್ಜೆ ಏನೇ ಇದ್ದರೂ ಅವೆಲ್ಲಾ ಸ್ವರ್ಣ ಎಂಬ ಅರಿವಿರುವಂತೆ ಅವರು ಜಗತ್ತನ್ನು ತಿಳಿಯುತ್ತಾರೆ.
2. ಕನಸಿನ ಅನುಭವಕ್ಕೂ ಎಚ್ಚರದಲ್ಲಿನ ಅನುಭವಕ್ಕೂ ವ್ಯತ್ಯಾಸವಿಲ್ಲ, ಆದರೆ ಕನಸಿನಲ್ಲಾಗುವ ಅನುಭವ ನೈಜವಲ್ಲ, ಅಜ್ಞಾನದಿಂದ ನೈಜವೆಂದು ತೋರುವ ವಿಷಯಗಳು. ಜ್ಞಾನ ಪಡೆಯುವುದರೊಂದಿಗೆ ಮಾಯೆಯೆಂಬ ಅರಿವಾಗುತ್ತದೆ. ನಿದ್ದೆಯಲ್ಲಿ ಕಂಡ ಕನಸು ಎಚ್ಚರವಾದಾಗ ಸುಳ್ಳೆಂದು ಸಾಬೀತಾದಂತೆ. ಇದೂ ತಿಳಿದುಬರುತ್ತದೆ.
3. ಮಂದ ಬೆಳಕಿನಲ್ಲಿ ಬಳ್ಳಿಯನ್ನು ಕಂಡರೆ ಹಾವೆಂದು ಭಾಸವಾಗುತ್ತದೆ. ಬೆಳಕು ಬರುವುದರೊಂದಿಗೆ ಸತ್ಯ ಮನವರಿಕೆಯಾಗುತ್ತದೆ. ಅದೇ ರೀತಿ ಅಜ್ಞಾನದಿಂದ ಜಗತ್ತು ಯಥಾರ್ಥವೆಂಬಂತೆ ತೋರುತ್ತದೆ. ಬ್ರಹ್ಮ ಜ್ಞಾನ ಲಭಿಸುವುದರೊಂದಿಗೆ ಅದು ಮಾಯೆಯೆಂದೂ, ಬ್ರಹ್ಮ ಮಾತ್ರ ಪರಮಾರ್ಥವೆಂದೂ ಮನವರಿಕೆಯಾಗುತ್ತದೆ. ಆದ್ದರಿಂದ ಜೀವಾತ್ಮಕ್ಕೆ ವಾವಹಾರಿಕ ನೆಲೆಯಲ್ಲಿ ಮಾತ್ರ ಅಸ್ತಿತ್ವವಿದೆ. ಪರಮಾರ್ಥಿಕವಾಗಿ ಬ್ರಹ್ಮ ಮಾತ್ರವೇ ಸತ್ಯ. ಅಥವಾ ಜೀವಾತ್ಮವೂ ಬ್ರಹ್ಮಾತ್ಮವೂ ಒಂದೇ. ಜ್ಞಾನ ಗಳಿಸುವುದರೊಂದಿಗೆ ಇದು ಮನವರಿಕೆಯಾಗುತ್ತದೆ.
ಈ ಅದ್ವೈತ ಸಿದ್ದಾಂತವನ್ನು ಇಸ್ಲಾಮ್ ಅಂಗೀಕರಿಸುತ್ತದೋ ಇಲ್ಲವೋ ಎಂದು ಚಿಂತಿಸುವ ಮೊದಲು ಇದು ದೈವಿಕವೋ, ವೈದಿಕವೋ ಅಥವಾ ಧಾರ್ಮಿಕವೋ ಎಂದು ಪರೀಕ್ಷಿಸಬೇಕು. ಶಂಕರಾಚಾರ್ಯರು ಬ್ರಹ್ಮ ಸೂತ್ರವನ್ನು ಅವಲಂಬಿಸಿ ಅದ್ವೈತ ಸಿದ್ದಾಂತವನ್ನು ಆವಿಷ್ಕರಿಸಿದರು. ಬ್ರಹ್ಮ ಸೂತ್ರವು ಯಾರಿಗೂ ಯಾವ ರೀತಿಯಲ್ಲೂ ವ್ಯಾಖ್ಯಾನಿಸಲು ಸಾಧ್ಯವಾಗದಷ್ಟು ಅಸ್ಪಷ್ಟತೆಯಿಂದ ಕೂಡಿದೆ. ಡಾ| ರಾಧಾಕೃಷ್ಣನ್ ಬರೆಯುತ್ತಾರೆ: “ವಾಕ್ಯಗಳನ್ನು ಸಾಧ್ಯವಾದಷ್ಟು ಕಡಿತಗೊಳಿಸುವ ಭರದಲ್ಲಿ ಸೂತ್ರಗಳು ಗ್ರಹಿಸಲು ಅಸಾಧ್ಯವೂ, ವ್ಯಾಖ್ಯಾನವು ಅನಿವಾರ್ಯವೂ ಆಯಿತು.” (ಬ್ರಹ್ಮಸೂತ್ರ-ಪುಟ-23) ಹಾಜಿಮಿ ನಕಮುರ ಬರೆಯುತ್ತಾರೆ: “ಬ್ರಹ್ಮಸೂತ್ರದ ಒಂದು ವಾಕ್ಯವನ್ನು ಕೂಡಾ ವ್ಯಾಖ್ಯಾನವಿಲ್ಲದೆ ಅರ್ಥೈಸಲು ಕಷ್ಟವಿದೆ. ಅದರ ಒಂದೊಂದು ವಾಕ್ಯಕ್ಕೆ ವಿಷಯವೋ ಅರ್ಥವೋ ಇರದಿರುವುದು ಸಾಮಾನ್ಯ. ಕೆಲವೊಮ್ಮೆ ಅತ್ಯಂತ ಪ್ರಧಾನವಾದ ಪದವೇ ಬಿಟ್ಟು ಹೋಗಿರುತ್ತದೆ. ಅದಿಲ್ಲದೆ ಆ ವಾಕ್ಯವನ್ನು ಗ್ರಹಿಸಲು ಸಾಧ್ಯವಿಲ್ಲ, ಎರಡೋ ಅಥವಾ ಹೆಚ್ಚೆಂದರೆ ಹತ್ತು ವಾಕ್ಯಗಳು ಒಂದು ಸೂತ್ರದಲ್ಲಿದೆ. ದೀರ್ಘವಾದ ಸೂತ್ರವು ಅಪರೂಪವಾಗಿದೆ. ಕೆಲವೊಮ್ಮೆ ಒಂದು ಸೂತ್ರದಲ್ಲಿ ಒಂದು ವಾಕ್ಯವೇ ಇರುವುದಿದೆ.” History of Early Vedantha Philosophy, p.440.
ಉದ್ದರಣೆ: ಬ್ರಹ್ಮಸೂತ್ರ ದ್ವೈತವೋ ಅದ್ವೈತವವೋ? ಪುಟ-31).
ಇದರಿಂದ ವ್ಯಾಖ್ಯಾನಕಾರರ ಭಾವನೆ ಹಾಗೂ ಉದ್ದೇಶಗಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು. ಬ್ರಹ್ಮಸೂತ್ರಕ್ಕೆ ಪರಸ್ಪರ ವಿರುದ್ಧವಾದ ಸಿದ್ಧಾಂತಗಳು ರೂಪಗೊಳ್ಳಲು ಇದೇ ಕಾರಣ, ಶಂಕರಾಚಾರ್ಯರ ಅದ್ವೈತ, ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ, ಮಧ್ವಾಚಾರ್ಯರ ದ್ವೆತ ಸಿದ್ದಾಂತ ಎಲ್ಲವೂ ಬ್ರಹ್ಮಸೂತ್ರದ ಆಧಾರದಿಂದ ರಚಿತವಾಗಿದೆ. ಇವು ಮೂರು ಸಿದ್ಧಾಂತಗಳನ್ನು ಅಧ್ಯಯನ ಮಾಡಿದ ವಿದ್ವಾಂಸರು, ಬ್ರಹ್ಮಸೂತ್ರಕ್ಕೆ ಅದ್ವೈತದ ನೈಜ ಮೂಲ ಅಪಭ್ರಂಶಗೊಂಡಿರುವ ಬೌದ್ಧ ದರ್ಶನವೆಂದು ಅಭಿಪ್ರಾಯಿಸಿದ್ದಾರೆ.
ಭಾರತೀಯ ದರ್ಶನದ ಇತಿಹಾಸವನ್ನು ಸಮಗ್ರವಾಗಿ ಸಮರ್ಪಿಸಿದ ಪ್ರಮುಖ ಪಂಡಿತನಾದ ದಾಸಗುಪ್ತ ಹೇಳುತ್ತಾರೆ: ಸೂತ್ರಗಳ ಆಧಾರದಲ್ಲಿ ಹೇಳವುದಾದರೆ ಶಂಕರರ ದಾರ್ಶನಿಕ ಸಿದ್ಧಾಂತವನ್ನು ಬ್ರಹ್ಮಸೂತ್ರವು ಬೆಂಬಲಿಸುವುದೆಂದು ನನಗೆ ಅನಿಸುವುದಿಲ್ಲ. ಸ್ವತಃ ಶಂಕರರೇ ದ್ವೈತ ಸಿದ್ದಾಂತ ರೂಪದಲ್ಲಿ ವ್ಯಾಖ್ಯಾನಿಸಿದ ಕೆಲವು ಸೂತ್ರಗಳು ಅದರಲ್ಲಿದೆ. (A History of Indian philosophy vol II, p-2)
ಅವರು ಮುಂದುವರಿಸುತ್ತಾರೆ: ತನ್ನ ದರ್ಶನವು ಉಪನಿಷತ್ತುಗಳನ್ನು ಕಲಿಸಿಕೊಡುತ್ತದೆಂದು ಸಾಬೀತುಪಡಿಸಲು ಶಂಕರಾಚಾರ್ಯರಿಗೆ ಹೆಚ್ಚಿನ ಆಸಕ್ತಿಯಿತ್ತು. ಆದರೆ ಆಸ್ತಿಕವಾದವೂ, ದ್ವೈತ ಸಿದ್ದಾಂತದ ಧಾರಾಳ ನುಡಿಗಳೂ, ಉಪನಿಷತ್ತುಗಳಲ್ಲಿವೆ. ಭಾಷಾ ಪಾಂಡಿತ್ಯ ಅತ್ಯುತ್ತಮವಾಗಿದ್ದರೂ, ಶಂಕರರ ಸಿದ್ದಾಂತವನ್ನು ಬೆಂಬಲಿಸುವುದು ಕಂಡು ಬರುವುದಿಲ್ಲ. ( Ibid,p-2).
ಬ್ರಹ್ಮಸೂತ್ರಕ್ಕೆ ಆರಕ್ಕಿಂತಲೂ ಅಧಿಕ ವೈಷ್ಣವ ವ್ಯಾಖ್ಯಾನಗಳಿವೆ. ಅದು ಶಂಕರರ ವ್ಯಾಖ್ಯಾನಕ್ಕಿಂತ ಭಿನ್ನವಾಗಿದೆ. ಮಾತ್ರವಲ್ಲ ಬಹಳ ವ್ಯತ್ಯಾಸಗಳಿವೆ. ಅದು ದ್ವೈತ ಸಿದ್ದಾಂತಗಳಿಗೆ ಹಲವು ರೀತಿಯಿಂದ ಪುಷ್ಟಿ ನೀಡುತ್ತದೆ. ಒಟ್ಟಿನಲ್ಲಿ ಶಂಕರರ ವ್ಯಾಖ್ಯಾನಗಳಿಗಿಂತ ಬ್ರಹ್ಮಸೂತ್ರಗಳೊಂದಿಗೆ ಹೆಚ್ಚಿನ ಸಾಮ್ಯತೆಯಿರುವುದು ದ್ವೈತ ಸಿದ್ಧಾಂತಕ್ಕೆಂದು ನನ್ನ ಅಚಲ ವಿಶ್ವಾಸ. (Ibid vol-1 P.420-421)
ಶಂಕರಾಚಾರ್ಯರ ಅನುಯಾಯಿಯೆಂದು ಸ್ವಯಂ ಒಪ್ಪಿಕೊಂಡಿರುವ ಡಾ| ರಾಧಾಕೃಷ್ಣನ್ ಬರೆಯುತ್ತಾರೆ: ಅಜ್ಞಾನದಿಂದ ಲೋಕವು ಯಥಾರ್ಥವಾಗಿ ತೋರುತ್ತದೆಂಬ ದೃಷ್ಟಿಕೋನವು ಬ್ರಹ್ಮಸೂತ್ರಕ್ಕಿರಲಿಲ್ಲ, ಪ್ರಪಂಚದ ಸೃಷ್ಟಿಯನ್ನು ಒಂದು ಗಂಭೀರ ವಿಷಯವಾಗಿ ಸೂತ್ರಧಾರನು ಕಂಡಿದ್ದಾನೆ. ಸಂಖ್ಯಾಗಣತಿಯ ಪ್ರಕೃತಿಯು ಪ್ರಪಂಚದ ಸೃಷ್ಟಿಗೆ ಕಾರಣವಲ್ಲವೆಂದೂ, ಅತೀವ ಬುದ್ದಿವಂತನಾದ ಬ್ರಹ್ಮನ ಕೈವಾಡ ಅದರಲ್ಲಿದೆಯೆಂದು ಸೂತ್ರಕಾರನ ವಾದ. ಲೋಕವು ಮಾಯೆಯೆಂಬ ಯಾವುದೇ ವಾದವೂ ಸೂಚನೆಯೂ ಇಲ್ಲಿಲ್ಲ
(Brahma Suthra, P.252)
ಜೀವಾತ್ಮವೂ ಪರಮಾತ್ಮವೂ ಒಂದೇ ಎಂಬ ಶಂಕರದರ್ಶನವನ್ನು ಡಾ| ರಾಧಾಕೃಷ್ಣರು ನಿರಾಕರಿಸುತ್ತಾರೆ. ”ಜೀವಾತ್ಮವು ಕರ್ಮನಿರತವಾಗಿದೆ. ಅದು ಒಳಿತು-ಕೆಡಕನ್ನು ಪಡೆಯುತ್ತಾ, ಸುಖ ದುಃಖ ಸಂತೋಷವನ್ನು ಅನುಭವಿಸುತ್ತಲೂ ಇದೆ. ಪರಮಾತ್ಮಕ್ಕೆ ಬೇರೆಯೇ ಸ್ವಭಾವವಿದೆ. ಅದು ಎಲ್ಲಾ ದುರಂತಗಳಿಂದಲೂ ಸ್ವತಂತ್ರವಾಗಿದೆ. ಎರಡೂ ಭಿನ್ನವಾಗಿರುವುದರಿಂದ ಜೀವಾತ್ಮದ ಅನುಭವಗಳು ಪರಮಾತ್ಮವನ್ನು ಬಾಧಿಸುವುದಿಲ್ಲ ಜೀವಾತ್ಮವು ಸುಖ ದುಃಖವನ್ನು ಅನುಭವಿಸುವುದರಿಂದ ಅದು ಕರ್ಮವಿಧೇಯವಾಗಿದೆ. ಆದರೆ ಪರಮ ಆತ್ಮವು ಅದಕ್ಕಿಂತ ಮಿಗಿಲಾಗಿದೆ.’
‘ಸ್ವರ್ಗ ಶಕ್ತಿಯಾದ ಬ್ರಹ್ಮವು ಜೀವಾತ್ಮಕ್ಕಿಂತ ಭಿನ್ನವಾಗಿದೆ. ಜೀವಾತ್ಮಕ್ಕೆ ಸ್ವಯಂಭೂ ಆಗಲು, ಸ್ವಯಂ ನಾಶ ಹೊಂದಲು ಸಾಧ್ಯವಿಲ್ಲ ಪ್ರಯೋಜನಕಾರಿಯಲ್ಲದ ಅನಿಷ್ಟವಾದ ಕರ್ಮಗಳನ್ನು ಬ್ರಹ್ಮ ಮಾಡುವುದಿಲ್ಲ, ಉಪಕಾರ ಮಾಡುವ ಅಥವಾ ಹಾನಿ ಮಾಡುವ ಅಗತ್ಯವೇ ಅದಕ್ಕಿಲ್ಲ, ಬ್ರಹ್ಮನ ಅರಿವಿಗೆ ಬಾರದ ಅಥವಾ ಬ್ರಹ್ಮನ ಪಾಲು ಇಲ್ಲದ ಯಾವುದೂ ಇಲ್ಲ ಜೀವಾತ್ಮಕ್ಕೆ ವಿಭಿನ್ನವಾದ ಸ್ವಭಾವ ವೈಶಿಷ್ಟ್ಯವಿದೆ. ಮೇಲೆ ಸೂಚಿಸಿದ ಎಲ್ಲಾ ಪರಿಮಿತಿಗಳು ಅದಕ್ಕಿದೆ. ಜೀವಾತ್ಮವೂ ಪರಮಾತ್ಮವೂ ಒಂದೇ ಎಂದು ನಾವು ಭಾವಿಸುವುದಿಲ್ಲ, ಏಕೆಂದರೆ ಅವುಗಳ ನಡುವಿನ ವ್ಯತ್ಯಾಸವನ್ನು ಬಹಳ ಸ್ಪಷ್ಟವಾಗಿ ಪ್ರಸ್ತಾಪಿಸಲಾಗಿದೆ.” (Ibid – 417)
ಜೀವಾತ್ಮ ಮತ್ತು ಪರಮಾತ್ಮವು ಒಂದೇ ಎಂಬ ಶಂಕರಾಚಾರ್ಯರ ಸಿದ್ಧಾಂತವನ್ನು ಬ್ರಹ್ಮಸೂತ್ರವು ಒಪ್ಪುವುದಿಲ್ಲವೆಂಬ ಸತ್ಯವನ್ನು ಡಾ| ರಾಧಾಕೃಷ್ಣನ್ರಂತೆ ಹಲವಾರು ದಾರ್ಶನಿಕರು ಸ್ಪಷ್ಟಪಡಿಸಿದ್ದಾರೆ. ಶಂಕರರ ದ್ವೈತದ ಪ್ರಬಲ ಬೆಂಬಲಿಗನಾಗಿದ್ದರೂ ಡಾ| ರಾಧಾಕೃಷ್ಣನ್ರು ಇದೇ ಕಾರಣದಿಂದ ವಿರೋಧ ವ್ಯಕ್ತಪಡಿಸಬೇಕಾಯಿತು. ಇದೇ ರೀತಿ ಶಂಕರಾಚಾರ್ಯರು ನಿರಂತರವಾಗಿ ಆವರ್ತಿಸುವ ‘ಮಾಯ’ ಎಂಬ ಪದವನ್ನು ಬ್ರಹ್ಮ ಸೂತ್ರದ ಒಂದೆಡೆ ಮಾತ್ರ ಪ್ರಯೋಗಿಸಲಾಗಿದೆ.( ಬ್ರಹ್ಮಸೂತ್ರ 3:2-3)
ಸ್ವಪ್ಪಲೋಕವು ಅದರ ಮೌಲಿಕ ಸ್ವಭಾವದಲ್ಲಿ ಕೇವಲ ಒಂದು ತೋರಿಕೆಯೆಂದೂ ಎಚ್ಚರದ ಸ್ಥಿತಿಯ ವಿಶೇಷತೆಗಳು ಅದಕ್ಕಿಲ್ಲವೆಂದೂ ಸೂತ್ರಕಾರನು ಸ್ಪಷ್ಟಪಡಿಸಿದ್ದಾನೆ. ಅಥವಾ ಒಂದೆಡೆ ‘ಮಾಯ’ ಎಂಬ ಪದ ಪ್ರಯೋಗವೇ ಶಂಕರಾಚಾರ್ಯರ ಸಿದ್ಧಾಂತಕ್ಕೆ ವಿರುದ್ಧವಾಗಿದೆ. ಸ್ವಪ್ನದ ಅನುಭವ ಮತ್ತು ಎಚ್ಚರದ ಸ್ಥಿತಿಯು ಒಂದೇ ಎಂಬ ವಾದವನ್ನು ಶಂಕರ ದರ್ಶನವು ಸಮರ್ಪಿಸುತ್ತದೆ.
ವಾಸ್ತವಿಕತೆಯನ್ನು ಪಾರಮಾರ್ಥಿಕ ಹಾಗೂ ವ್ಯಾವಹಾರಿಕವೆಂದು ಶಂಕರರು 2 ವಿಭಾಗ ಮಾಡಿ ವ್ಯಾವಹಾರಿಕವು ಮಾಯೆಯೆಂದು ವಾದಿಸಿದರು. ಆದರೆ ಇಂತಹ ವಿಂಗಡನೆಯು ಬ್ರಹ್ಮಸೂತ್ರಕ್ಕೆ ಅಪರಿಚಿತವಾಗಿದೆ. ಡಾ| ನಗಮುದ ಬರೆಯುತ್ತಾರೆ: ‘ಇದು ವ್ಯಾವಹಾರಿಕತೆಯ ಅರ್ಥದ ವಿವರಣೆಯಾಗಿದೆ. ಪರಮಾರ್ಥಕತೆಯ ಆಧಾರದಲ್ಲಿರುವುದಲ್ಲ, ಪರಮಾರ್ಥದಲ್ಲಿ ಇವೆರಡೂ ಒಂದೇ ಆಗಿದೆ. ಶಂಕರರ ಚಿಂತನೆಗಳು ಬ್ರಹ್ಮಸೂತ್ರದ ಸ್ವತಕ್ಕೆ ನಿಲುಕುವುದಿಲ್ಲ’ (History of Early Vedantha Philosophy P. 460)
ಉದ್ದರಣೆ: ಬ್ರಹ್ಮಸೂತ್ರ ದ್ವೈತವೋ? ಅದ್ವೈತವೋ, ಪುಟ-44
ಶಂಕರಾಚಾರ್ಯರ ಅದ್ವೈತ ಸಿದ್ಧಾಂತವು ವೇದ ಹಾಗೂ ಉಪನಿಶತ್ತುಗಳ ಸಮನ್ವಯ ರೂಪವಾದ ಬಾದರಾಯಣ ಬ್ರಹ್ಮಸೂತ್ರಕ್ಕೆ ವಿರುದ್ಧವಾಗಿದೆಯೆಂದು ಇವೆಲ್ಲ ಸಂಶಯಾತೀತವಾಗಿ ಸ್ಪಷ್ಟಪಡಿಸಿದೆ. ಅವರ ನೈಜ ಮೂಲವಾದ ಗೌತಪಾದನ್ ಈ ವಿಷಯವನ್ನು ಬೌದ್ದಧರ್ಮಿಯರೊಂದಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಡಾ| ರಾಧಾಕೃಷ್ಣನ್ ಬರೆಯುತ್ತಾರೆ: ‘ನನ್ನ ದರ್ಶನವು ಯಾವುದೇ ಧರ್ಮಶಾಸ್ತ್ರ ಗ್ರಂಥಗಳನ್ನು, ಈಶ್ವರಸ್ತ್ರೋತಸ್ಸನ್ನು ದಿವ್ಯತೆಯನ್ನು ಆಧಾರವಾಗಿಸುವುದಿಲ್ಲ ಎಂಬ ನೆಲೆಯಲ್ಲಿ ಅವರು ಬೌದ್ಧ ಧರ್ಮೀಯರೊಂದಿಗೆ ವಿನಂತಿ ಮಾಡಿದರು.” (ಭಾರತೀಯ ದರ್ಶನ, ಭಾಗ ಎರಡು, ಪುಟ 444) .
ಶಂಕರಾರ್ಚಾರ ಅದ್ವೈತವು ವೇದಕ್ಕೆ ವಿರುದ್ಧವೆಂಬಂತೆ ಯುಕ್ತಿಗೂ ವಿರುದ್ಧವಾಗಿದೆ. ಇದೇ ಕಾರಣದಿಂದ ತುಂಬಾ ಪ್ರಸಕ್ತವಾದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅದ್ವೈತವಾದಿಗಳು ಸೋಲುತ್ತಾರೆ. ಕೆಲವನ್ನು ಇಲ್ಲಿ ಸೇರಿಸುತ್ತೇನೆ.
1.ಲೋಕವು ಒಂದು ಮಾಯೆಯೆಂದು ಹೇಳುವ ಶಂಕರಾಚಾರ್ಯರು ಹಾಗೂ ಅವರ ಶರೀರ, ಅವಯವಗಳು, ಮನಸ್ಸು ಹಾಗೂ ಬುದ್ಧಿಯೆಲ್ಲವೂ ಮಾಯೆಯೇ ಅಲ್ಲವೆ? ಪ್ರಪಂಚ
ಒಂದು ಮಾಯೆಯೆಂದು ಕಂಡು ಹಿಡಿದ ಮನಸ್ಸು ಮಾಯೆಯಾದ್ದರಿಂದ ಮಾಯೆಯ ಸಂಶೋಧನೆಯೂ ಆಕಸ್ಮಿಕವಲ್ಲವೇ? ಅದ್ವೈತ ಸಿದ್ಧಾಂತವು ಮನಸ್ಸಿನ ಸಂಶೋಧನೆಯಾದ್ದರಿಂದ ಅದ್ವೈತವೂ ಮಾಯೆಯಲ್ಲವೇ? ಅಂತೆಯೇ ಲೋಕವೇ ಆಕಸ್ಮಿಕವಾದ್ದರಿಂದ ಆ ಸಿದ್ದಾಂತವು ಮಾಯೆಯ ದರ್ಶನವೆಂಬ ನೆಲೆಯಲ್ಲಿ ಅದೂ ಮಾಯೆಯಲ್ಲವೇ?
2. ಬಾದರಾಯಣನೂ ಆತನ ಬ್ರಹ್ಮಸೂತ್ರವೂ ಮಾಯಯಲ್ಲವೇ? ಮಾಯೆಯಾದ ಬ್ರಹ್ಮಸೂತ್ರಕ್ಕೆ ಮಾಯೆಯಾದ ಶಂಕರಾಚಾರ್ಯರು ನೀಡಿದ ವ್ಯಾಖ್ಯಾನವೂ ಮಾಯೆಯಲ್ಲವೇ?
3.ಸತ್ಯವಾಗಿರುವ ಬ್ರಹ್ಮನ ಮತ್ತು ಅವಾಸ್ತವಿಕವಾಗಿರುವ ಜಗತ್ತಿನ ನಡುವೆ ಸಂಬಂಧವೇನು? ಜಗತ್ತು ಬ್ರಹ್ಮನಿಂದ ಅಪರಿಚಿತವಲ್ಲವೆಂದಾದರೆ, ಬ್ರಹ್ಮದಲ್ಲಿ ಅಧಿಷ್ಟಿತವೆಂದಾದರೆ ಬದಲಾವಣೆ ವಿಧೇಯವಾದ ಜಗತ್ತು ಮತ್ತು ಬದಲಾವಣೆಗೆ ವಿಧೇಯನಲ್ಲದ ಬಹು ಒಂದಾಗಲು ಹೇಗೆ ಸಾಧ್ಯ? ಮಾಯಯೂ ಪರಮಾರ್ಥವೂ ಸಮಾನವಾಗಲು ಸಾಧ್ಯವೇ?
4. ಬ್ರಹ್ಮನು ಮಾಯೆಯಾದ ಪ್ರಚಂಚವನ್ನು ಸ್ವೀಕರಿಸುತ್ತಾನೋ? ಬ್ರಹ್ಮನು ಜಗತಿಗೆ ಕಾರಣಕರ್ತನೇ ಆಗಿದ್ದರೆ ಕಾರಣಕರ್ತನಾದ ಬ್ರಹ್ಮನು ಅನಂತನೂ ಸ್ವಯಂಸ್ಥಿರನೂ ಆಗಿರುವುದರಿಂದ ಜಗತ್ತು ಕೂಡಾ ಅನಂತವೇ ಆಗಬೇಕಲ್ಲವೇ.?
5. ಜಗತ್ತು ಶಂಕರಾಚಾರ್ಯರ ವಾದದಂತೆ ನೆರಳಾಗಿದ್ದರೆ, ನ್ಯೂನ್ಯತೆ ರಹಿತವಾದ ಬ್ರಹ್ಮನ ನೆರಳಿನಲ್ಲಿ ನ್ಯೂನ್ಯತೆ ಇರಲು ಸಾಧ್ಯವೇ? ಅಪರಾಧ ಮುಕ್ತವಾದ ಬ್ರಹ್ಮನ ನೆರಳಲ್ಲಿ ಅಪರಾಧ ಇರಲು ಸಾಧ್ಯವೇ? ನೆರಳಿನಲ್ಲಿ ಪಾಪ-ಪುಣ್ಯ ಇರಲು ಹೇಗೆ ಸಾಧ್ಯ?
6. ಮಾಯೆಗೆ ಅಸ್ತಿತ್ವವಿದೆಯೇ? ಇಲ್ಲದಿದ್ದರೆ ಈ ಕಾಣುವ ಪ್ರಪಂಚವನ್ನು ನಿರ್ಮಿಸಲು ಶಕ್ತವಾಗಿದೆಯಲ್ಲವೇ ಮಾಯೆ. ಅಸ್ತಿತ್ವವಿದೆಯೆಂದಾದರೆ ಬ್ರಹ್ಮನೊಂದಿಗೆ ಅಸ್ತಿತ್ವವಿರುವ
ಬೇರೇನಾದರೂ ಇದೆಯೇ? ಇದ್ದರೆ ಅದು ದೇವನಾಗುವುದಿಲ್ಲವೇ?
7. ಜಗತ್ತಿಗೆ ಬ್ರಹ್ಮ ಕಾರಣವೋ ಅಥವಾ ಅಜ್ಞಾನವೋ? ಅಜ್ಞಾನವೆಂಬುಂದು ಯಾರ ಸೃಷ್ಟಿ? ಬ್ರಹ್ಮನೇ ಅಜ್ಞಾನಕ್ಕೆ ಕಾರಣನೇ? ಅಜ್ಞಾನವು ಮಾಯೆಯಲ್ಲವೇ? ಹಾಗಿದ್ದರೆ ಮಾಯೆಯಾದ ಅಜ್ಞಾನವು ಪ್ರಪಂಚ ಮಾಯೆಯೆಂದು ತೋರದಿರಲು ಕಾರಣವಾದ ಸಿದ್ಧಾಂತವೂ ಮಾಯೆಯಲ್ಲವೇ?
8. ಅಜ್ಞಾನ ಪಾರಮಾರ್ಥಿಕ ಸತ್ಯವೆಂಬ ವಾದವಿದ್ದರೆ ಪಾರಮಾರ್ಥಿಕವಾಗಿ ಬ್ರಹ್ಮವೂ ಇದೆ. ಅಜ್ಞಾನವೂ ಇದೆ. ಅದು ದೇವನನ್ನು ಅಂಗೀಕರಿಸಿದಂತಾಗದೇ? ಎರಡು ಸತ್ಯವಿದೆ ಯೆಂದು ಒಪ್ಪಿದಂತಾಗುತ್ತದೆ. ಆದ್ದರಿಂದ ಅಜ್ಞಾನವು ಪಾರಮಾರ್ಥಿಕ ಸತ್ಯವೆಂದು ಹೇಳಿದರೂ, ವ್ಯಾವಹಾರಿಕವೆಂದು ವಾದಿಸಿದರೂ ಅಸಂಬದ್ಧವೆನಿಸುವುದಿಲ್ಲವೇ?
9. ಕನಸಿನ ಅನುಭವ ಹಾಗೂ ಎಚ್ಚರದ ಅನುಭವ ಒಂದೇ ಎಂಬ ಶಂಕರಾಚಾರ್ಯರ ವಾದ ತಪ್ಪಲ್ಲವೇ? ಸ್ವಪ್ನವು ಕೇವಲ ತೋರಿಕೆ ಮಾತ್ರ ಎಂಬುದು ನಿಜಸಂಗತಿಯಲ್ಲವೇ? ಒಬ್ಬನಿಗೆ ಬಿದ್ದು ಕಾಲು ಮುರಿಯಿತೆಂದು ಕನಸು ಕಂಡರೆ ಕಾಲು ಮುರಿದಂತೆ ನೋವನುಭವಿಸಿದಂತೆ ಭಾಸವಾಗುತ್ತದೆ. ಅದು ಕನಸು ಮಾತ್ರ. ಎಚ್ಚರವಾದಾಗ ಕಾಲು ಸರಿಯಾಗಿಯೇ ಇರುತ್ತದೆ. ಆದರೆ ಎಚ್ಚರದ ಸ್ಥಿತಿಯಲ್ಲಿ ಕಾಲು ಮುರಿದರೆ ಅದು ವಾಸ್ತವವಾಗಿರುತ್ತದೆ.
10.ಎಚ್ಚರದ ಸ್ಥಿತಿಯ ಅನುಭವಗಳಿಗೆ ವಸ್ತುಸ್ಥಿತಿಯೊಂದಿಗೆ ಸಂಬಂಧವಿರುತ್ತದೆ. ಗಾಯವಾದರೆ ಮಾತ್ರ ರಕ್ತ ಬರುತ್ತದೆ. ಆದರೆ ಕನಸಿನಲ್ಲಿ ವಾಸ್ತವಿಕವಲ್ಲದ ಘಟನೆಗಳು ಅನುಭವವಾಗುತ್ತದೆ. ಕನಸು ಮತ್ತು ವಾಸ್ತವ ಒಂದೇ ಆಗಲು ಸಾಧ್ಯವೇ ಇಲ್ಲ ಅಲ್ಲವೇ?
11. ಸ್ವಪ್ನವೆಂಬುದು ಸುಳ್ಳೋ ಅಥವಾ ಮಾಯೆಯೋ ಅಲ್ಲ, ಕನಸು ಕಾಣಬೇಕಾದರೆ ಕಾಣುವ ವ್ಯಕ್ತಿ ಬೇಕು. ಆತ ನಿದ್ರಿಸಿರಬೇಕು. ಕನಸು ಕಾಣುವುದಕ್ಕೆ ಯಾವುದೋ ಒಂದು ವಾಸ್ತವಿಕ ಲೋಕದ ಅಸ್ತಿತ್ವವಿರಬೇಕು. ಆದ್ದರಿಂದ ಕನಸು ಮಾಯೆ ಎಂಬ ವಾದವೇ ಸರಿಯಲ್ಲ, ನಿದ್ದೆ ಬಂದರೆ ಮಾತ್ರ ಕನಸು ಕಾಣಲು ಸಾಧ್ಯ. ಜೀವನದಲ್ಲಿ ಯಾವುದನ್ನೂ ನೋಡಲಾಗದ ಅಂಧ ವ್ಯಕ್ತಿ ಕನಸು ಕಾಣುತ್ತಾನೆಯೇ? ಹಾಗಾದರೆ ಕನಸು ಕಾಣಲು ಕಣ್ಣೆಂಬ ವಸ್ತು ಇರಲೇಬೇಕು.
12. ಕತ್ತಲಿನಲ್ಲಿ ಹಗ್ಗವನ್ನು ನೋಡುವಾಗ ಹಾವೆಂದು ಭಾಸವಾಗುವುದು. ಕತ್ತಲು, ಹಾವು, ಹಗ್ಗ ಎಂಬುದು ವಾಸ್ತವಿಕತೆಯಾದುದರಿಂದ ಆಗಿದೆ. ಬೆಳಕು ಬರುವಾಗ ಹಗ್ಗವೆಂದು ತಿಳಿಯಲು ಹಗ್ಗಕ್ಕೆ ಅಸ್ತಿತ್ವವಿರುವುದು ಕಾರಣ. ವಾಸ್ತವ ಲೋಕದಲ್ಲಿ ಹಗ್ಗ ಹಾವು, ಕತ್ತಲು ಇಲ್ಲದಿರುತ್ತಿದ್ದರೆ ಹಾವೆಂಬ ಭಾವನೆಯೇ ಬರುತ್ತಿರಲಿಲ್ಲ ಆದ್ದರಿಂದ ಶಂಕರಾಚಾರ್ಯರ ಲೋಕ ಮಾಯೆಯೆಂದೂ, ಅಜ್ಞಾನವೇ ಅದನ್ನು ನೈಜವೆಂದು ಬಿಂಬಿಸುತ್ತದೆಂದೂ ಸಾಬೀತುಪಡಿಸಲು ನೀಡಿದ ಉದಾಹರಣೆಗಳು ಕೂಡಾ ಪ್ರಪಂಚ ಮಾಯೆಯೆಲ್ಲ ವಾಸ್ತವವೆಂಬುದನ್ನು ಸಾಬೀತುಪಡಿಸುತ್ತದೆ.
13. ವಾಸ್ತವದಲ್ಲಿ ಜೀವಾತ್ಮ, ಬ್ರಹ್ಮ ಅಥವಾ ಪರಮಾತ್ಮನು ಒಂದೇ ಎಂದೂ ಅದರಲ್ಲಿ ಜೀವಾತ್ಮವು ಮಿಥ್ಯವೆಂದೂ ವಾದಿಸುವ ಶಂಕರಾಚಾರ್ಯರು, ಜೀವಾತ್ಮವು ಬ್ರಹ್ಮಜ್ಞಾನವನ್ನು ಗಳಿಸುವ ಮೂಲಕ ಪರಮಾತ್ಮ ಅಥವಾ ಬ್ರಹ್ಮವೆಂದು ಮನವರಿಕೆಯಾಗುತ್ತದೆಂದು ವಾದಿಸುತ್ತಾರೆ. ವ್ಯಾವಹಾರಿಕವಾಗಿ ಮಾತ್ರ ಅಸ್ತಿತ್ವವಿರುವ, ಪಾರಮಾರ್ಥಿಕತೆಗೆ ನಿಲುಕದ ಜೀವಾತ್ಮವು ಪರಮಾತ್ಮನಾಗಿ ಬದಲಾಗುವುದು ಹೇಗೆ? ಸೂರ್ಯನು ನೀರಿನಲ್ಲಿರುವ ಅದರ ಪ್ರತಿಬಿಂಬದಂತೆ ಪರಮಾತ್ಮ ಹಾಗೂ ಜೀವಾತ್ಮವೆಂದು ಗೌಡಪಾದರೂ ಶಂಕರಾಚಾರ್ಯರೂ ಉದಾಹರಿಸುತ್ತಾರೆ. ಪ್ರತಿಬಿಂಬವು ಸೂರ್ಯನೂ ಅಲ್ಲ, ಅದರ ಅಂಶವೂ ಅಲ್ಲ, ವಾಸ್ತವದಲ್ಲಿ ಅಸ್ತಿತ್ವವಿಲ್ಲದ ಪ್ರತಿಬಿಂಬವು ಸೂರ್ಯನಾಗಲು ಹೇಗೆ ಸಾಧ್ಯ? ಜೀವಾತ್ಮವು ಮಿಥ್ಯೆಯೆಂದಾದರೆ ಅದು ಬ್ರಹ್ಮ ಜ್ಞಾನ ಗಳಿಸುವುದು ಹೇಗೆ? ಜೀವಾತ್ಮ ವ್ಯಾವಹಾರಿಕವೊ? ವಾಸ್ತವಿಕವೊ? ವ್ಯಾವಹಾರಿಕ ಯಾ ಮಿಥ್ಯ ಎಂದಾದರೆ ಅಸ್ತಿತ್ವವಿಲ್ಲದ ಒಂದು ಬ್ರಹ್ಮ ಜ್ಞಾನ ಗಳಿಸುವುದು ಹೇಗೆ? ನೈಜವೆಂದಾದರೆ ಪರಮಾತ್ಮದೊಂದಿಗೆ ಜೀವಾತ್ಮವು ಅಸ್ತಿತ್ವದಲ್ಲಿ ಇರಲೇ ಬೇಕಲ್ಲವೇ? ಇದು ದ್ವೈತವಲ್ಲವೇ?
14. ಬ್ರಹ್ಮ ಜ್ಞಾನವು ವ್ಯಾವಹಾರಿಕವೋ ಪಾರಮಾರ್ಥಿಕವೊ? ವ್ಯಾವಹಾರಿಕವೆಂದಾದರೆ ಇಲ್ಲದ ಒಂದನ್ನು ಸ್ವಾಯತ್ತಗೊಳಿಸುವುದು ಹೇಗೆ? ವಾಸ್ತವವೆಂದಾದರೆ ಬ್ರಹನೊಂದಿಗೆ ಅಸ್ತಿತ್ವವಿರುವ ಬ್ರಹ್ಮಜ್ಞಾನವೆಂಬುದು ಸೇರಿಕೊಂಡಿರಲೇಬೇಕಲ್ಲವೆ?
15. ವ್ಯಾವಹಾರಿಕವಾಗಿ ಮಾತ್ರ ನೆಲೆನಿಲ್ಲುವ ಮಾಯೆಯನ್ನು ಮತ್ತು ಸ್ವರ್ಣ,ಜೇಡ, ಶರೀರದಂತಹವುಗಳನ್ನು ಬ್ರಹ್ಮನೊಂದಿಗೆ ಉಪಮೆ ಮಾಡಿದ್ದು ಸರಿಯೇ? ವ್ಯಾವಹಾರಿಕವಾಗಿ ಮಾತ್ರವಿರುವ ಅಥವಾ ಮಾಯೆಯಾದ ಜೇಡರ ಹುಳದ ಮಾಯೆಯಾದ ನೂಲನ್ನು ಮಾಯೆಯಾದ ಶರೀರವನ್ನು ಮಾಯೆಯಾದ ಕೂದಲನ್ನು ಹೇಗೆ ಪರಮಾರ್ಥವಾದ ಬ್ರಹ್ಮ ನೊಂದಿಗೆ ಹೋಲಿಸಬಹುದು?
16. ಅದ್ವೈತ ಎಂಬುದು ಸಮಾಜವು ಸ್ವೀಕರಿಸಬಹುದಾದ ಅಥವಾ ಪ್ರಾಯೋಗಿಕ ಗೊಳಿಸಬಹುದಾದ ಸಿದ್ಧಾಂತವಲ್ಲ . ಇದನ್ನು ವಿದ್ಯಾವಾಚಸ್ಪತಿ.ವಿ.ಪನೋಳಿಯವರು ಹಲವು ಕಡೆ ಸ್ಪಷ್ಟಪಡಿಸಿದ್ದಾರೆ.
ವಿವೇಕ-ವಿಚಾರ-ವೈರಾಗ್ಯವಿರುವ ವ್ಯಕ್ತಿಗಳು ಲೋಕದ 10 ಲಕ್ಷ ಜನರಲ್ಲಿ ಒಬ್ಬರೂ ಇಲ್ಲ ಎಂಬುದು ವಾಸ್ತವ. ಜ್ಞಾನೋದಯ ಹೊಂದಿ ಅನುಗ್ರಹಿತರೂ ಪ್ರಪಂಚದ ಕ್ಷಣಿಕತೆಯನ್ನು ಗ್ರಹಿಸಿದ ಪುಣ್ಯಾತ್ಮರು ಮಾತ್ರ ಮೋಕ್ಷ ಹೊಂದಲು ಸಾಧ್ಯ, ಅಂಥವರ ಸಂಖ್ಯೆ ಬಹಳ ಕಡಿಮೆಯಿದೆ. (ಶ್ರೀ ಶಂಕರದರ್ಶನಂ ಪುಟ 136)
ಕೋಟ್ಯಾಂತರ ಜನರಲ್ಲಿ ಒಬ್ಬರೋ ಇಬ್ಬರೋ ಮಾತ್ರ ಇಂತಹ ಮೋಕ್ಷವನ್ನು ಗುರಿಯಾಗಿಸಿರಬಹುದು (Ibid ಪುಟ 14)
ಕೇವಲ ಒಂದು ಸಿದ್ಧಾಂತಕ್ಕಾಗಿ ಕೋಟಿಗಟ್ಟಲೆ ಜನರನ್ನು ಸೃಷ್ಟಿಸಲಾಗಿದೆಯೆಂದಾದರೆ ಅದು ನಿರರ್ಥಕ ಹಾಗೂ ಮೂರ್ಖತನವೆನಿಸುವುದಿಲ್ಲವೆ?
17. ಅದ್ವೈತ ಸಿದ್ದಾಂತವನ್ನು ವಿವರಿಸುತ್ತಾ, ಶ್ರೀ ಶಂಕರಾಚಾರ್ಯರು ಹೇಳಿದರು: ”ಕರ್ಮಣಾಂ ಚಾ ವಿದ್ವ ದ್ವಿಷಯ” ( ಕರ್ಮಗಳು ಅಜ್ಞಾನಿಗಳಿಗೆ ಇರುವುದು)
‘ಶಂಕರಾಚಾರ್ಯರು ಭಾರತೀಯರನ್ನು ಕರ್ಮವಿಮುಕ್ತಗೊಳಿಸಿದರು’ ಎಂದು ಆಚಾರ್ಯರನ್ನು ವಿಮರ್ಶಿಸಿ ಅರವಿಂದನ್ ತಮ್ಮ ‘ಈಶೋಪನಿಷತ್’ ಎಂಬ ಕೃತಿಯಲ್ಲಿ ತಿಳಿಸಿದ್ದಾರೆ. (ಉದ್ದರಣೆ: Ibid, ಪುಟ 35) ಇದನ್ನು ವಿಮರ್ಶಿಸಿ ವಿ. ಪನೋಳಿ ಬರೆಯುತ್ತಾರೆ: ಚೂರಿಯ ಅಲಗಿನ ಮೇಲೆ ನಡೆಯುವಂತೆ ಬಹಳ ಕ್ಲಿಷ್ಟಕರವಾಗಿದೆ. ಈ ಆಧ್ಯಾತ್ಮಿಕ ಚರ್ಯೆಯಂತೆ ಕೋಟಿ ಜನರಲ್ಲಿ ಒಬ್ಬರಿಗಾದರೂ ಇದರಂತೆ ನಡೆಯಲು ಸಾಧ್ಯವಾದರೆ ಅದೇ ಮಹಾಭಾಗ್ಯ. ಹಾಗಾದರೆ ಭಾರತೀಯರನ್ನು ಆಚಾರ್ಯರು ಕರ್ಮದಿಂದ ವಿಮುಖಗೊಳಿಸಿ ಬಿಟ್ಟರು. ಎಂಬವಾದ ನಿರರ್ಥಕ. (Ibid ಪುಟ 30)
ಕೋಟಿಗಟ್ಟಲೆ ಜನರಲ್ಲಿ ಒಬ್ಬರಿಗೂ ಅದ್ವೈತ ಸಿದ್ದಾಂತವನ್ನು ಅಂಗೀಕರಿಸಿ ಬದುಕಲು ಸಾಧ್ಯವಿಲ್ಲವೆಂದು ಇದರಿಂದ ಸ್ಪಷ್ಟವಾಗುತ್ತದೆ. ಅಲ್ಲದೆ ಸಮಾಜವು ಅದ್ವೈತ ಸಿದ್ದಾಂತದಂತೆ
ಬಾಳಿದರೆ ಕರ್ಮವಿಮುಖವಾಗುವುದೆಂದು ಮತ್ತು ನಾಡು, ಸಮೂಹವು ನಾಶವಾಗುವುದೆಂಬ ವಿಮರ್ಶೆಯನ್ನು ಪನೋಳಿ ಇಲ್ಲಿ ಒಪ್ಪಿದಂತಾಗಿಲ್ಲವೇ?
18. ಶಂಕರಾಚಾರ್ಯರು ಹೇಳುತ್ತಾರೆ: ಆತ್ಮ ಜ್ಞಾನೋದಯದಿಂದ ಅಜ್ಞಾನ ದೂರವಾಗುತ್ತದೆ. ಕರ್ತವ್ಯ ಪ್ರಜ್ಞೆಯು ಜೀವಾತ್ಮದ ಗುಣಗಳು, ಜ್ಞಾನಿಗಳಿಗೆ ಕರ್ಮವಿಲ್ಲ, ಶಾರೀರಿಕ ಸಂಬಂಧವಿಲ್ಲ, ಬ್ರಹ್ಮನ ಉಪಾಸಕರು ಬ್ರಹ್ಮನೊಂದಿಗೆ ಲೀನವಾಗುತ್ತಾರೆ. (ಉದ್ದರಣೆ Ibid ಪುಟ 113) ಈ ರೀತಿ ಅದ್ವೈತ ಅನುಭವವನ್ನು ಪಡೆದವರು ಈ ಭೂಮಿಯಲ್ಲಿ ಇದ್ದಾರೆಯೇ? ಅಥವಾ ಅಹಾರವನ್ನು ತಿನ್ನದೆ ಅಥವಾ ಇತರ ಶಾರೀರಿಕ ಸಂಬಂಧವಿಲ್ಲದೆ ಜೀವಿಸಲು ಸಾಧ್ಯವಾಗಲಿಲ್ಲ. ಸ್ವತಃ ತಾವೇ ಪಾಲಿಸಲು ಸಾಧ್ಯವಾಗದ ಸಿದ್ಧಾಂತವನ್ನು ಅವರು ಜನತೆಯ ಮುಂದಿರಿಸಿದರು.
19. ಅದ್ವೈತವು ಮನುಷ್ಯರು ಅನುಸರಿಬಹುದಾದ ಒಂದು ಜೀವನ ವ್ಯವಸ್ಥೆಯನ್ನು ನೀಡದಿದ್ದರೆ ಆ ಸಿದ್ಧಾಂತದಿಂದ ಪ್ರಯೋಜನವೇನು? ಕೋಟಿಗಳಲ್ಲಿ ಒಬ್ಬರಿಗೂ ಅನುಷ್ಠಾನ ಗೊಳಿಸಲು ಅಸಾಧ್ಯವೆಂಬ ಸಿದ್ದಾಂತ ಯಾರಿಗಾಗಿ? ಯಾಕಾಗಿ? ಇಂತಹ ಹಲವು ಸಂಶಯಗಳಿಗೆ ಅದ್ವೈತದಲ್ಲಿ ಉತ್ತರವಿಲ್ಲ, ಯುಕ್ತಿಯ ಪರಿಧಿಯಲ್ಲಿ ಎಲ್ಲವೂ ಬರುವುದೆಂಬ ವಾದದಿಂದ ಈ ಗೊಂದಲಗಳು ಹುಟ್ಟಿಕೊಂಡದ್ದಲ್ಲ, ಎಲ್ಲವನ್ನೂ ವಿಚಾರವಾದದ ಬೆಳಕಿನಲ್ಲಿ ನೋಡುವ ದೃಷ್ಟಿಕೋನ ಅದ್ವೈತವಾದಿಗಳದ್ದು, ಅದ್ವೈತ ಸಿದ್ಧಾಂತವು ದಾರ್ಶನಿಕ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ, ಅದು ಇನ್ನಷ್ಟು ಕಗ್ಗಂಟಾಗಿಸುತ್ತದೆ. ಅರವಿಂದ ಘೋಷ್ ಅದನ್ನು ಹೀಗೆ ವ್ಯಕ್ತಪಡಿಸಿದ್ದಾರೆ: “ಮಿಥ್ಯ ಎಂಬ ಅರ್ಥದಲ್ಲಿರುವ ಮಾಯಾ ಸಿದ್ಧಾಂತವೂ ಪ್ರಪಂಚವು ಅವಾಸ್ತವಿಕವೆಂಬ ವಾದವೂ ದಾರ್ಶನಿಕ ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಅದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ.’ (Sri, Aurobindo, The Life Divine 1949, Quoted by Thomas o’ Neil p,201, ಉದ್ದರಣೆ: ಬ್ರಹ್ಮಸೂತ್ರ ದ್ವೈತವೋ ಅದ್ವೈತವೋ ಪುಟ 63)
ಅದ್ವೈತ ಸಿದ್ದಾಂತವನ್ನು ಒಂದು ಜೀವನ ವ್ಯವಸ್ಥೆಯಾಗಿ ಅನುಸರಿಸಲು ಅದರ ಸ್ಥಾಪಕ ಆಚಾರ್ಯರಿಗೂ ಸಾಧ್ಯವಾಗಲಿಲ್ಲ ದೇವಾಲಯಗಳು, ತೀರ್ಥ ಕ್ಷೇತ್ರಗಳು ಅಗತ್ಯವಿಲ್ಲವೆನ್ನುತ್ತಿದ್ದ ಶಂಕರಾಚಾರ್ಯರೆ ಅಲ್ಲಿಗೆ ಹೋಗುತ್ತಿದ್ದರು. ಈ ಕಾರಣಕ್ಕಾಗಿ ಮರಣಾಸನ್ನರಾಗಿರುವಾಗ ಪರಿತಪಿಸಬೇಕಾಯಿತು. ಡಾ| ರಾಧಾಕೃಷ್ಣನ್ ಬರೆಯುತ್ತಾರೆ: ಶಂಕರಾಚಾರ್ಯರು ಮರಣ ಶಯ್ಯೆಯಲ್ಲಿ ಮಲಗಿರುವ ಸಂದರ್ಭದಲ್ಲಿ ಹಲವೊಮ್ಮೆ ಕ್ಷೇತ್ರದರ್ಶನ ಮಾಡಿದ್ದಕ್ಕೆ, ಕ್ಷಮ ಯಾಚನೆ ಮಾಡಿದ್ದರೆಂದು ಹೇಳಲಾಗುತ್ತದೆ. ಏಕೆಂದರೆ ಅದು ಈಶ್ವರನು ಸರ್ವವ್ಯಾಪಿ ಎಂಬುದನ್ನು ನಿಷೇಧಿಸಿದಂತಾಗುತ್ತದೆ. (ಭಾರತೀಯ ದರ್ಶನಂ, ಭಾಗ ಎರಡು, ಪುಟ 647)
ಅದ್ವೈತದೊಂದಿಗೆ ತನಗೆ ನ್ಯಾಯ ಪಾಲಿಸಲಾಗಲಿಲ್ಲವೆಂದು ಶಂಕರಾಚಾರ್ಯರು ಹೇಳಿರುವುದು ಸಮತಾರ್ಹವಲ್ಲವೇ? ವಿ. ಪನೋಳಿ ಬರೆಯುತ್ತಾರೆ: ”ಶ್ರೀ ಮದ್ ಭಾರತಿ
ತೀರ್ಥ ಸ್ವಾಮಿಗಳು (ಶೃಂಗೇರಿ ಮಠ ಶ್ರೀ ಶಂಕರಾಚಾರ್ಯರು) ಕಲ್ಲಿಕೋಟೆಗೆ 1985ರಲ್ಲಿ ಭೇಟಿ ನೀಡಿದಾಗ ನಾನು ಅವರನ್ನು ಭೇಟಿ ಮಾಡಿದ್ದೆ. ಅತ್ಯದ್ಭುತ ಪಾಂಡಿತ್ಯದ ಒಡೆಯ ಎನ್ನುವುದಕ್ಕಿಂತ ಅವರು ಅದೈತ ಸಿದ್ದಾಂತದ ಅಧಿಕೃತ ವಕ್ತಾರರಾಗಿದ್ದರೆಂಬುದು ಹೆಚ್ಚು ವಿಶೇಷವಾಗಿತ್ತು. ಆದ್ದರಿಂದ ಆಚಾರ್ಯರ ಕೃತಿಗಳ ಕುರಿತು ಅವರ ಅಭಿಪ್ರಾಯಗಳೇ ಹೆಚ್ಚು ಸ್ವೀಕಾರಾರ್ಹವಾಗಿರುತ್ತದೆ. ವಿಷ್ಟೋತ್ತರ ಶಂಕರ ಭಾಷ್ಯದಲ್ಲಿ ತಿಳಿಸಿರುವ ಆಶಯಗಳ ಉನ್ನತಿಯನ್ನು ತಿಳಿಸದೆ, ಇನ್ನು ಕೆಲ ಆಶಯಗಳಿಗೆ ಸ್ವಲ್ಪವಾದರೂ ದುರ್ಬಲಗೊಳಿಸುವ ಚಿಂತನೆಗಳು “ವಿವೇಕ ಚೂಡಾಮನಿ ಮೊದಲಾದ ಕೃತಿಗಳಲ್ಲಿ ಕಂಡು ಬರುತ್ತಿದೆಯಲ್ಲವೇ? ಎಂಬ ಸಂಶಯವನ್ನು ಶ್ರೀಮಾನ್ ಶಂಕರಾಚಾರ್ಯರ ಮುಂದೆ ಈ ಲೇಖಕ ಕೇಳಿದಾಗ ಅವರ ಉತ್ತರ ಹೀಗಿತ್ತು.
‘ಕಾಳಿದಾಸನ ಕೃತಿಗಳಾದ ರಘುವಂಶದಲ್ಲೂ ಇತರ ವ್ಯಾಕರಣ ನಿಯಮವನ್ನು ತಿಳಿಸದ ಹಲವು ಪದಪ್ರಯೋಗಗಳು ಇಲ್ಲವೇ? ಏನೋ ಕೆಲವು ಪರಿಸ್ಥಿತಿಗೆ ವಿಧೇಯನಾಗಿ ಮಹಾಕವಿ ಹಾಗೆ ಪದ ಪ್ರಯೋಗ ಮಾಡಿದ್ದರೆಂದು ಊಹಿಸುವುದು ಒಳಿತಲ್ಲವೇ? ಆಚಾರ್ಯರ ವಿವೇಕ ಚೂಡಾಮನಿ ಮೊದಲಾದ ಕೃತಿಗಳು ಹಾಗೂ ಹಲವು ಕಡೆಗಳಲ್ಲಿ ಕಾಣಬಹುದಾದ ಆಶಯಗಳ ಗುಣ ಸ್ವಭಾವವೂ ಅದೇ ರೀತಿಯಲ್ಲಿ ರೂಪ ಪಡೆದಿದೆ ಎಂದು ಭಾವಿಸಿದರೆ ಸಾಕು.” (ಶ್ರೀ ಶಂಕರರ ದರ್ಶನ ಪುಟ 44, 45)
ಶ್ರೀ ಶಂಕರಾಚಾರ್ಯರಿಗೂ ಅದ್ವೈತ ಸಿದ್ದಾಂತವನ್ನು ಭದ್ರವಾಗಿ ಹಿಡಿಯಲು ಸಾಧ್ಯವಾಗಿರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಶಂಕರಾಚಾರ್ಯರಿಗೆ ಬ್ರಹ್ಮಜ್ಞಾನ ಲಭಿಸಿರಲಿಲ್ಲ ಎಂದು ಇದರಿಂದ ತಿಳಿಯುತ್ತದೆ. ಅಂತಹ ಜ್ಞಾನ ಲಭಿಸಿದ್ದರೆ ಆಶಯಗಳಲ್ಲಿ ವ್ಯತ್ಯಾಸ ಉಂಟಾಗುತ್ತಿರಲಿಲ್ಲ, ಆದ್ದರಿಂದಲೇ ವೇದ ವಿರೋಧಿಯಾದ ಯುಕ್ತಿಗೆ ವಿರುದ್ಧವಾದ ಅದ್ವೈತ ಸಿದ್ದಾಂತವನ್ನು ಇಸ್ಲಾಮ್ ಅಂಗೀಕರಿಸುವುದಿಲ್ಲ, ವೇದ ಹಾಗೂ ಉಪನಿಷತ್ತು ವಾಕ್ಯಗಳ ಸಮನ್ವಯ ರೂಪವಾದ ಬ್ರಹ್ಮಸೂತ್ರವು ಕಲಿಸುವಂತೆ ಬ್ರಹ್ಮ ಅಥವಾ ಅಲ್ಲಾಹನು ಈ ಪ್ರಪಂಚವನ್ನು ಸೃಷ್ಟಿಸಿದ್ದಾನೆ. ಹಾಗೂ ಈ ಲೋಕವು ಮಿಥ್ಯಯೋ, ಆಕಸ್ಮಿಕವೋ ಅಲ್ಲವೆಂದೂ, ದೇವನು ಸೃಷ್ಟಿಸಿದ ಕ್ಷಣಿಕ ಸೃಷ್ಟಿಯೆಂದೂ ಅದು ಹೇಳುತ್ತದೆ.
ಸೃಷ್ಟಿಕರ್ತನು ಸರ್ವಗುಣ ಸಂಪನ್ನನಾಗಿದ್ದಾನೆ. ಸೃಷ್ಟಿ ಹಾಗೂ ಸೃಷ್ಟಿಕರ್ತ ಯಾವುದೇ ರೀತಿಯಲ್ಲೂ ಸಮಾನರಲ್ಲ ಸೃಷ್ಟಿಕರ್ತನ ಸವಿಶೇಷತೆಗಳು ಸೃಷ್ಟಿಗಳಿಗಿಲ್ಲ, ಸೃಷ್ಟಿಕರ್ತನಿಗೆ ಸರಿಸಮಾನರು ಯಾರೂ ಇಲ್ಲ. ವೇದ ಹಾಗೂ ಬ್ರಹ್ಮಸೂತ್ರವೂ ಇದನ್ನೆ ಪ್ರತಿಪಾದಿಸುತ್ತದೆ.
ಸರ್ವಶಕ್ತನೂ, ಸರ್ವಜ್ಞನೂ ಸರ್ವನಿಯಂತ್ರಕನೂ ಅಲ್ಲಾಹನೆಂದು ಕುರ್ಆನ್ ಪರಿಚಯಸುತ್ತದೆ. ಬ್ರಹ್ಮಸೂತ್ರವು ಬ್ರಹ್ಮನನ್ನು ಇದೇ ರೀತಿ ಪರಿಚಯಿಸುತ್ತದೆ. ‘ಜನ್ಮಾದಿ ಅಸ್ಯಯಥಾ’ (ಬ್ರಹ್ಮಸೂತ್ರ 1:12) ಎಂಬುದರ ವ್ಯಾಖ್ಯಾನದಲ್ಲಿ ಡಾ| ರಾಧಾಕೃಷ್ಣನ್ ಬರೆಯುತ್ತಾರೆ. ಈ ಸೂತ್ರದಲ್ಲಿ ಪ್ರಕೃತಿಪರವಾದ ವ್ಯಾಖ್ಯಾನದ ಆಧಾರದಲ್ಲಿ ದೇವಶಾಸ್ತ್ರವಿದೆ. ಅನುಭವೀ ದೃಷ್ಟಿಕೋನದಿಂದ ಅತ್ಯಂತ ವಾಸ್ತವಿಕತೆಯಿಂದ ಕೂಡಿದ ಸಿದ್ದಾಂತವನ್ನು ನಾವು ರೂಪಿಸಿದ್ದೇವೆ. ಇದು ವೈದಿಕ ಮೌಲ್ಯದೆಡೆಗೆ ನಮ್ಮ ಗಮನವನ್ನು ತಿರುಗಿಸುತ್ತದೆ. ವಿಶ್ವದ ಕುರಿತು ಆಲೋಚಿಸುವಾಗ ಏಕ ಪರಮೋನ್ನತ ಶಕ್ತಿಯ ಕುರಿತು ನಿಗಮನಕ್ಕೆ ತಲುಪುತ್ತದೆ. ವಿಶ್ವದ ಅಸ್ತಿತ್ವ ಹಾಗೂ ಅದನ್ನು ನೆಲೆನಿಲ್ಲಿಸಲು ಸ್ವಯಂ ಪರ್ಯಾಪ್ತನಾದ ಸೃಷ್ಟಿಕರ್ತನನ್ನು ನಾವು ತಲುಪುತ್ತೇವೆ. (ಬ್ರಹ್ಮಸೂತ್ರ ಪುಟ 226)
ಅಂತೆಯೇ ಶಂಕರಾಚಾರ್ಯರು ತಮ್ಮ ನೈಜ ಮೂಲವೆಂದು ವಾದಿಸುವ ಬ್ರಹ್ಮಸೂತ್ರವು ಬ್ರಹ್ಮನೇ ಲೋಕದ ಸೃಷ್ಟಿಗೂ, ನಿಯಂತ್ರಿಸಲೂ, ನಾಶಕ್ಕೂ ಕಾರಣವೆಂದು ಸ್ಪಷ್ಟವಾಗಿ ವಿವರಿಸುತ್ತದೆ. (1:1-2) ಬ್ರಹ್ಮನ ಇಚ್ಚೆಯೇ ಸೃಷ್ಟಿಗೆ ಕಾರಣವೆಂದು ಹೇಳುವ ಇಸ್ಲಾಮ್ ದೃಷ್ಟಿಕೋನ ಅದೇ ಆಗಿದೆ. ಅಲ್ಲಾಹನು ಪ್ರಪಂಚದ ಸೃಷ್ಟಿಕರ್ತ, ಸಂರಕ್ಷಕ, ಒಡೆಯ, ನಿಯಂತ್ರಕನಾಗಿದ್ದಾನೆ. ಅವನ ಇಚ್ಚೆ( ಇಬಾದತ್ ಅಥವಾ ಮಶೀಅತ್) ತೀರ್ಮಾನ (ಕದಾಲ್) ಯೇ ಸೃಷ್ಟಿಗೆ ಕಾರಣವೆಂದು ಅದು ಸ್ಪಷ್ಟಪಡಿಸುತ್ತದೆ. ಇದಕ್ಕೆ ವಿರುದ್ಧವಾಗಿರುವ ಅದ್ವೈತ ಸಿದ್ಧಾಂತವನ್ನು ನಿರಾಕರಿಸುತ್ತದೆ.
‘ದೇವರು – ಧರ್ಮ – ಧರ್ಮಗ್ರಂಥ ಸ್ನೇಹ ಸಂವಾದ’ ಕೃತಿಯಿಂದ
IslamKannada News Portal
