ಇಸ್ಲಾಮ್ ಮುಸ್ಲಿಮರಿಗೆ ಮಾತ್ರ ಸ್ವರ್ಗಪ್ರವೇಶ ಎಂದು ಹೇಳುತ್ತದೆ. ಇದು ಬಹಳ ಸಂಕುಚಿತ ದೃಷ್ಟಿಕೋನವಲ್ಲವೆ? ಪರಲೋಕದಲ್ಲೂ ಮೀಸಲಾತಿಯೇ?
ಓರ್ವ ವ್ಯಕ್ತಿಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕೆಂಬ ಬಯಕೆ ಇರುವುದಿಲ್ಲ, ಆದ್ದರಿಂದ ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ, ಏನೇನೆಲ್ಲಾ ಬರೆದಿಟ್ಟರೆ ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದಿಲ್ಲ, ಅಲ್ಲದೆ ಅವನಿಗೆ ತಾನು ಉತ್ತೀರ್ಣರಾಗುತ್ತೇನೆಂಬ ನಿರೀಕ್ಷೆಯೂ ಇರುವುದಿಲ್ಲ. ಅದೇ ರೀತಿ ಓರ್ವ ರೋಗಿಗೆ ರೋಗ ಗುಣವಾಗಬೇಕಾಗಿಲ್ಲ. ರೋಗ ಶಮನಕ್ಕೆ ನೀಡಿದ ಔಷಧಿಯನ್ನು ಸೇವಿಸುವುದಿಲ್ಲ, ಆದ್ದರಿಂದ ಆತನ ರೋಗ ಗುಣವಾಗಬೇಕೆಂದು ಯಾರೂ ಹೇಳಲಾರರು. ಹೀಗೆ ಸ್ವರ್ಗ ಲಭಿಸಲು ನಿಶ್ಚಯಿಸಲಾದ ಮಾರ್ಗವನ್ನು ಅವಲಂಬಿಸದೆ ಜೀವಿಸುವವರಿಗೆ ಸ್ವರ್ಗ ಲಭಿಸುವುದಿಲ್ಲ. ಅಂತಹವರಿಗೆ ಸ್ವರ್ಗ ನೀಡಬೇಕೆಂದು ನ್ಯಾಯ ಪ್ರಿಯರಿಂದ ಬೇಡಿಕೆಯೂ ಇರುವುದಿಲ್ಲ.
ಸ್ವರ್ಗವು ಸಜ್ಜನರಿಗೆ ದೇವನು ನೀಡುವ ವರದಾನವಾಗಿದೆ. ಧರ್ಮವೇದಗ್ರಂಥಗಳಲ್ಲಿ ದೇವ ಸಂದೇಶವಾಹಕರ ಮೂಲಕ ಅಲ್ಲಾಹನು ಅದನ್ನೇ ವಾಗ್ದಾನ ಮಾಡಿದ್ದಾನೆ. ಆದ್ದರಿಂದ ಸೃಷ್ಟಿಕರ್ತ, ಸ್ವರ್ಗ, ದೇವ ಸಂದೇಶವಾಹಕರು ಹಾಗೂ ದೇವ ಗ್ರಂಥಗಳಲ್ಲಿ ನೈಜ ವಿಶ್ವಾಸವಿರಿಸಿ, ಅದನ್ನು ಅನುಸರಿಸುವವರಿಗೆ ಮಾತ್ರ ಸ್ವರ್ಗ ಲಭಿಸುತ್ತದೆ. ಈ ವಿಷಯದಲ್ಲಿ ಅಲ್ಲಾಹನು ಯಾರೊಡನೆಯೂ ರಿಯಾಯಿತಿ ತೋರಿಸಲಾರ. ಆದರೆ ಅವೆಲ್ಲವನ್ನೂ ಧಿಕ್ಕರಿಸಿ ನಡೆದವರಿಗೆ ಸ್ವರ್ಗ ದೊರೆಯಬಹುದೆಂಬ ನಿರೀಕ್ಷೆಯೇ ಬೇಡ. ಅದನ್ನು ಅವರು ಬಯಸುವುದಕ್ಕೂ ಅರ್ಥವಿಲ್ಲ. ಆದ್ದರಿಂದ ಇದು ಸಂಕುಚಿತತೆ ಅಥವಾ ಮೀಸಲಾತಿಯ ವಿಷಯವಲ್ಲ, ನ್ಯಾಯದ ತೀರ್ಮಾನವೇ ಅಲ್ಲಿ ಜಾರಿಯಾಗುವುದು.
ಮುಸ್ಲಿಮೇತರರೆಲ್ಲಾ ನರಕ ಪ್ರವೇಶಿಸುವರೇ?
ಮುಸ್ಲಿಮ್ ಸಮುದಾಯದ ವ್ಯಕ್ತಿಗೆ ದೇವ, ಪ್ರವಾದಿ, ದೇವಗ್ರಂಥ ಹಾಗೂ ಸ್ವರ್ಗ-ನರಕಗಳ ಅರಿವು ಸಹಜವಾಗಿ ದೊರೆಯುತ್ತದೆ. ಆದರೆ ಬೇರೆ ಯಾರಿಗೂ ಇದು ದೊರೆಯುವ ಸಾಧ್ಯತೆಯಿಲ್ಲ ಆ ಧಾರ್ಮಿಕ ಜ್ಞಾನ ದೊರೆಯದೆ, ಆ ರೀತಿ ಬದುಕಲಾಗದವರು ನರಕವಾಸಿಗಳೆಂದು ನಿಮ್ಮ ಭಾವನೆಯೇ?
ಮುಸ್ಲಿಮ್ ಸಮುದಾಯದಲ್ಲಿ ಜನಿಸಿ, ಧಾರ್ಮಿಕ ಜ್ಞಾನದ ಸ್ಪಷ್ಟ ತಿಳುವಳಿಕೆ ಪಡೆದ ಬಳಿಕವೂ ಅದರಂತೆ ಜೀವಿಸದವರು ಸತ್ಯನಿಷೇಧಿ(ಕಾಫಿರ್)ಗಳಾಗಿದ್ದಾರೆ. ಅವರಿಗೆ ಮರಣಾನಂತರ ಕಠಿಣ ಶಿಕ್ಷೆ ದೊರೆಯುತ್ತದೆಂದು ಕುರ್ಆನ್ ಮುನ್ನೆಚ್ಚರಿಕೆ ನೀಡಿದೆ. ಮಾತ್ರವಲ್ಲ ದೇವಸಂದೇಶವನ್ನು ಮನವರಿಕೆಯಾಗಿ ಅದನ್ನು ಅರಿತವರು, ಅದನ್ನು ಅರಿಯದವರಿಗೆ ತಿಳಿಸಿಕೊಡದಿದ್ದರೆ, ಅವರು ಕೂಡಾ ಶಿಕ್ಷಾರ್ಹರಾಗುತ್ತಾರೆ.
ಆದರೆ ದೇವ ಧರ್ಮದ ಕುರಿತು ಸ್ವಲ್ಪವೂ ತಿಳವಳಿಕೆಯಿಲ್ಲದವರು ನರಕವಾಸಿಗಳೆಂದು ಇಸ್ಲಾಮ್ ಕಲಿಸುವುದಿಲ್ಲ, ಕುರ್ಆನ್ ಮತ್ತು ಪ್ರವಾದಿಚರ್ಯೆಯೂ ಅದನ್ನು ಸೂಚಿಸುವುದಿಲ್ಲ, ಬದಲಾಗಿ ದಿವ್ಯ ಸಂದೇಶ ತಲುಪದವರು ಶಿಕ್ಷಿಸಲ್ಪಡುವುದಿಲ್ಲವೆಂದು ಕುರ್ಆನ್ ಕಲಿಸುತ್ತದೆ. – ಹೀಗಿದೆ. ‘ಸನ್ಮಾರ್ಗ ಸ್ವೀಕರಿಸಿಕೊಳ್ಳುವವನ ಸನ್ಮಾರ್ಗಶಮನವು ಅವನಿಗೇ ಒಳಿತಾಗಿದೆ ಮತ್ತು ಪಥಭ್ರಷ್ಟನ ಪಥಭ್ರಷ್ಟತೆಯ ವಿಪತ್ತೂ ಅವನ ಮೇಲೆಯೇ ಬೀಳುತ್ತದೆ. ಯಾವ ಹೊರೆ ಹೊರುವಾತನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು. (ಜನರಿಗೆ ಸತ್ಯಾಸತ್ಯತೆಗಳ ಅಂತರವನ್ನು ತೋರಿಸಿಕೊಡಲು) ಓರ್ವ ಸಂದೇಶವಾಹಕರನ್ನು ಕಳಿಸಿಕೊಡದೆ ನಾವು ಯಾತನೆ ನೀಡುವವರಲ್ಲ.’ (ಪವಿತ್ರ ಕುರ್ಆನ್ 17:15)
ಅದೇ ವೇಳೆ ದೇವನ ಕುರಿತು ಅರಿಯದವರು ಅಥವಾ ಸಾಮಾನ್ಯ ಒಂದು ಭಾವನೆ ಇಲ್ಲದವರು ಇರುವುದಿಲ್ಲ, ದೇವನ ಕುರಿತು ಹುಡುಕಾಟ ನಡೆಸಲು ದೇವನಿಂದ ಏನಾದರೂ ಜೀವನ ಮಾರ್ಗ ಲಭ್ಯವಾಗಿದೆಯೇ? ಎಂದು ನೋಡಬೇಕಾದುದು ಅವರ ಜವಾಬ್ದಾರಿಯಾಗಿದೆ. ಅಲ್ಲದೆ ಸ್ವರ್ಗವೆಂಬುದು ಇದೆ ಮತ್ತು ನಿಶ್ಚಿತಮಾರ್ಗದಲ್ಲಿ ನಡೆದರೆ ಅದು ಲಭಿಸುತ್ತದೆಂಬ ವಿಷಯ ಕೇಳಿ ತಿಳಿದವರೆಲ್ಲಾ ಅದರ ಕುರಿತು ಕಲಿಯುವುದು ಅವರ ಕರ್ತವ್ಯವಾಗಿದೆ. ಅದರ ಉಲ್ಲಂಘನೆ ಶಿಕ್ಷಾರ್ಹ ಅಪರಾಧವಾಗುವುದು ಸ್ವಾಭಾವಿಕವಲ್ಲವೇ?
ಸತ್ಕರ್ಮಿಗಳೆಲ್ಲರೂ ಸ್ವರ್ಗವಾಸಿಗಳಾಗಬೇಕೆಂದಿಲ್ಲ.
ಓರ್ವ ವ್ಯಕ್ತಿಗೆ ದೇವನಲ್ಲಿ ಹಾಗೂ ಮರಣಾನಂತರ ಜೀವನದಲ್ಲಿ ವಿಶ್ವಾಸವಿರುವುದಿಲ್ಲ, ಆತ ಮದ್ಯಪಾನಿ ಅಥವಾ ವ್ಯಭಿಚಾರಿಯೂ ಅಲ್ಲ, ಯಾರನ್ನೂ ವಂಚಿಸುವವನೂ ಅಲ್ಲ, ತನ್ನ ಕೈಲಾದಷ್ಟು ಉಪಕಾರ ಮಾಡುತ್ತಾನೆ. ಆತನಿಗೆ ಸ್ವರ್ಗ ಲಭಿಸುವುದೇ? ಓರ್ವ ವ್ಯಕ್ತಿ ನಿಷ್ಠೆಯಿಂದ ದುಡಿದು ಕಾರ್ಯಸಾಧಿಸಿದ್ದರೂ ಆತ ಉದ್ದೇಶಿಸಿದ್ದು ಮಾತ್ರ ಲಭಿಸುತ್ತದೆ. ಅದೇ ರೀತಿ ಮರಣಾನಂತರ ಜೀವನ ಹಾಗೂ ದೇವನಲ್ಲಿ ವಿಶ್ವಾಸವಿಲ್ಲದ ವ್ಯಕ್ತಿ ಕೆಡುಕಿನಿಂದ ದೂರವುಳಿದು, ಸತ್ಕರ್ಮಗಳನ್ನು ಸ್ವರ್ಗಸಿಗಬೇಕೆಂಬ ಉದ್ದೇಶದಿಂದ ಖಂಡಿತ ಮಾಡುವುದಿಲ್ಲ, ಆ ಕಾರ್ಯಗಳಿಂದ ಸಮಾಜದಲ್ಲಿ ಹೆಸರು ಗಳಿಸಬೇಕೆಂಬ ಉದ್ದೇಶವಿದ್ದರೆ ಅದು ದೊರೆಯುತ್ತದೆ ಅಥವಾ ಮನಃ ಸಂತೃಪ್ತಿ ಅಥವಾ ಆತ್ಮಶಾಂತಿ ಬಯಸುವುದಾದರೆ ಅದೂ ಲಭಿಸುತ್ತದೆ. ದೇವ ಪ್ರೀತಿ ಮತ್ತು ಪ್ರತಿಫಲವನ್ನು ನಿರೀಕ್ಷಿಸಿ ಕಾರ್ಯನಿರತರಾದವರಿಗೆ ಮಾತ್ರ ಅದು ಲಭಿಸುವುದು. ಆದ್ದರಿಂದ ಮೊದಲೇ ಸ್ಪಷ್ಟಪಡಿಸಿದಂತೆ ಸ್ವರ್ಗದ ನಿರೀಕ್ಷೆಯಿಂದ ಅದೇ ದಾರಿಯಲ್ಲಿ ಸಾಗಿದವರಿಗೆ ಅಲ್ಲಿ ತಲುಪಲು ಸಾಧ್ಯ.
ಸ್ವರ್ಗ ಜೀವನವೆಂದರೆ ಹೇಗೆ?
ಇಸ್ಲಾಮ್ ಪ್ರಸ್ತಾಪಿಸುವ ಸ್ವರ್ಗದ ಕುರಿತು ವಿವರಣೆಗಳು ಶ್ರೀಮಂತ ಸಮೂಹದ ಸುಖಸುಪ್ಪತ್ತಿಗೆಯ ಜೀವನಕ್ಕೆ ಸಮಾನವೆಂಬ ಭಾವನೆ ಮೂಡುತ್ತದೆ. ಸ್ವರ್ಗ ಜೀವನ ಭೂಮಿಯ ಮೇಲಿನ ಜೀವನದಂತೆಯೇ ಇರುವುದೇ? ಅಲೌಕಿಕ ವಿಚಾರಗಳ ಕುರಿತ ಅರಿವು ಲಭಿಸುವ ಏಕೈಕ ಮಾಧ್ಯಮ ದೇವನ ಸಂದೇಶಗಳಾಗಿವೆ. ಆದ್ದರಿಂದ ದೇವ, ಸ್ವರ್ಗ, ನರಕ, ದೇವಚರರು, ಪಿಶಾಚಿಗಳ ಕುರಿತು ದೇವಸಂದೇಶವಾಹಕರಿಂದ ಲಭಿಸಿದ ಜ್ಞಾನದ ಹೊರತು ಬೇರೆ ಯಾರಿಗೂ ಅದರ ಜ್ಞಾನವಿಲ್ಲ, ಮನುಷ್ಯರ ಪರಿಮಿತಿಯನ್ನು ತಿಳಿದುಕೊಂಡ ಅವರು ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಭಾಷೆಯಲ್ಲಿ ಶೈಲಿಯಲ್ಲಿ ದೇವನು ಅಲೌಕಿಕ ವಿಷಯಗಳನ್ನು ವಿವರಿಸಿದ್ದಾನೆ.
ಆದ್ದರಿಂದ ಸ್ವರ್ಗದ ವಿವರಣೆಯಲ್ಲಿ ಕುರ್ಆನ್ ಯಾವುದೇ ಸಮಸ್ಯೆ, ನೋವು ದುಃಖವಿಲ್ಲದ ಸಂತೃಪ್ತಿ, ಆಹ್ಲಾದಭರಿತ ಸುಖಮಯ ಜೀವನವೆಂದು ಕುರ್ ಆನ್ ಹೇಳುತ್ತದೆ:
“ನಾವು ಈ ಲೋಕದ ಜೀವನದಲ್ಲೂ ಪರಲೋಕದಲ್ಲೂ ನಿಮ್ಮ ಸಂಗಾತಿಗಳಾಗಿದ್ದೇವೆ. ಅಲ್ಲಿ ನೀವು ಬಯಸಿದ್ದೆಲ್ಲವೂ ನಿಮಗೆ ಸಿಗುವುದು. ನೀವು ಆಶಿಸಿದ ಪ್ರತಿಯೊಂದು ವಸ್ತುವೂ ನಿಮ್ಮದಾಗುವುದು.’ (ಪವಿತ್ರ ಕುರ್ಆನ್ 41:31)
ಮನುಷ್ಯನ ಊಹೆಗೆ ನಿಲುಕದ ಸ್ವರ್ಗೀಯ ಸುಖದ ಕುರಿತು ಪ್ರವಾದಿ(ಸ) ಹೇಳಿದರು: “ಯಾವ ಕಣ್ಣೂ ಕಾಣದ, ಯಾವ ಕಿವಿಯೂ ಕೇಳಿರದ, ಯಾವುದೇ ಮನಸ್ಸುಊಹಿಸಿರದಂತಹ ಜೀವನವಾಗಿರುವುದು’ ಆದ್ದರಿಂದ ಸ್ವರ್ಗೀಯ ಬದುಕು ಯಾವ ರೀತಿಯೆಂದು ಇಲ್ಲಿಂದ ಲೆಕ್ಕ ಹಾಕುವುದು ಸಾಧ್ಯವಲ್ಲ, ಆದರೆ ಯಾವುದೇ ರೀತಿಯ ಸಂಕಷ್ಟ ದುಃಖವಿಲ್ಲದ, ನಮ್ಮ ಆಸೆ ಅಭಿಲಾಷೆಗಳೆಲ್ಲವೂ ಪೂರ್ಣಗೊಳಿಸುವ, ಶಾಂತಿ ಸಮಾಧಾನದ ಒಂದು ಸುಂದರ ಲೋಕ ಸ್ವರ್ಗ ಎಂಬುದರಲ್ಲಿ ಸಂಶಯವಿಲ್ಲ.
ಸ್ವರ್ಗದ ಬದುಕು ಸಾಕೆನಿಸುವುದಿಲ್ಲವೇ?
ಯಾವಾಗಲೂ ಒಂದೇ ರೀತಿಯ ಜೀವನದಿಂದ ನಮಗೆ ಸಾಕೆನಿಸಬಹುದಲ್ಲವೇ? ಈ ಪ್ರಶ್ನೆ ನಮ್ಮ ಇಂದಿನ ಮಾನಸಿಕ ಸ್ಥಿತಿ, ವಿಚಾರ ವಿಕಾರಗಳಿಂದ ಹುಟ್ಟಿಕೊಂಡಿದೆ. ಸ್ವಲ್ಪ ಕಾಲ ಸ್ವರ್ಗ ಸುಖ ಅನುಭವಿಸುವಾಗ ನಮಗೆ ಅದರಲ್ಲಿ ಜಿಗುಪ್ಪೆ ಮೂಡಬಹುದೆಂದು ನಮಗೆ ಭಾಸವಾಗುತ್ತದೆ. ಭೂಮಿಯಲ್ಲಿ ನಮಗೆ ಸಂತೋಷ, ಪ್ರೀತಿ, ದ್ವೇಷ, ನಿರಾಸೆ, ಆಸೆ, ಅಸೂಯೆ, ಹಗೆತನ, ಕರುಣೆ, ಹಿಂಸೆ ….. ಹೀಗೆ ವಿವಿಧ ರೂಪಗಳನ್ನು ನಾವು ಅನುಭವಿಸುತ್ತೇವೆ. ಆದರೆ, ಸ್ವರ್ಗದ ಮಾನಸಿಕ ಸ್ಥಿತಿ ಸಂಪೂರ್ಣ ಭಿನ್ನವಾಗಿದೆ. ಅಲ್ಲಿ ವಿರಸ, ದ್ವೇಷ, ಅಸೂಯ, ನಿರಾಸೆ ಎಂಬುದೇ ಇರುವುದಿಲ್ಲ, ಇದನ್ನು ಕುರ್ಆನ್ ಹಾಗೂ ಪ್ರವಾದಿ ವಚನಗಳು ಸ್ಪಷ್ಟಪಡಿಸಿದೆ. ಜಿಗುಪ್ಪೆ ಮೂಡುವ ಅಹಿತಕರವಾದ ಅನುಭವಗಳಿಂದ ಕೂಡಿದ ಸ್ಥಳವು ಸ್ವರ್ಗವಾಗಲು ಸಾಧ್ಯವಿಲ್ಲ ‘ಆಶಿಸುವುದೆಲ್ಲಾ ಅಲ್ಲಿ ಸಿಗುವುದು’ ಎಂದರೆ (ಪವಿತ್ರ ಕುರ್ಆನ್ 41:31) ಜಿಗುಪ್ಪೆ ಮೂಡದ ಮಾನಸಿಕ ಸ್ಥಿತಿಯೂ ಅಲ್ಲಿ ಇರಲೇ ಬೇಕಲ್ಲವೇ?
‘ದೇವರು – ಧರ್ಮ – ಧರ್ಮಗ್ರಂಥ ಸ್ನೇಹ ಸಂವಾದ’ ಕೃತಿಯಿಂದ
IslamKannada News Portal
