ನ್ಯಾಯವು ಇಸ್ಲಾಮಿನ ಉತ್ಕೃಷ್ಟ ಮೌಲ್ಯಗಳಲ್ಲಿ ಅತ್ಯಧಿಕ ಮಹತ್ವದ್ದಾಗಿದೆ. ಸತ್ಯವಿಶ್ವಾಸಿಯು ಸದಾ ಒಳಿತಿನ ಮಾದರಿ ಮತ್ತು ನ್ಯಾಯದ ಪಾಲಕನಾಗಿರಬೇಕು.
“ಅಲ್ಲಾಹ್ ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರ ಬಗ್ಗೆ ಸೌಜನ್ಯದ ಆಜ್ಞೆ ನೀಡುತ್ತಾನೆ.” (ಪವಿತ್ರ ಕುರ್ ಆನ್, 16:90)
“ನ್ಯಾಯವನ್ನು ಪಾಲಿಸಿರಿ. ಅಲ್ಲಾಹನು ನ್ಯಾಯ ಪರಿಪಾಲಕರನ್ನು ಪ್ರೀತಿಸುತ್ತಾನೆ.” (ಪವಿತ್ರ ಕುರ್ ಆನ್, 49:9)
ನ್ಯಾಯ ಸ್ಥಾಪನೆಯು ಪ್ರವಾದಿಯವರ ನೇಮಕದ ಪ್ರಮುಖ ಉದ್ದೇಶಗಳಲ್ಲೊಂದಾಗಿದೆ. ”ನಾವು ನಮ್ಮ ಸಂದೇಶವಾಹಕರನ್ನು ಸುವ್ಯಕ್ತ ನಿದರ್ಶನಗಳು ಮತ್ತು ಸನ್ಮಾರ್ಗದರ್ಶನದೊಂದಿಗೆ ಕಳುಹಿಸಿದೆವು. ಜನರು ನ್ಯಾಯದಲ್ಲಿ ಸ್ಥಿರವಾಗಿ ನಿಲ್ಲಲೆಂದು ಅವರ ಜೊತೆ ಗ್ರಂಥ ಮತ್ತು ತಕ್ಕಡಿಯನ್ನು ಅವತೀರ್ಣಗೊಳಿಸಿದೆವು.” (ಪವಿತ್ರ ಕುರ್ ಆನ್, 57:25)
ನ್ಯಾಯ ಪಾಲನೆಯಿಂದ ತನಗೂ ತನ್ನವರಿಗೂ ಕಷ್ಟನಷ್ಟ ಸಂಭವಿಸುವುದಿದ್ದರೂ ಓರ್ವ ಮುಸ್ಲಿಮನು ಅದನ್ನು ಪಾಲಿಸಲೇಬೇಕು. ಕುರ್ಆನ್ ಆಜ್ಞಾಪಿಸಿರುತ್ತದೆ. ”ಓ ಸತ್ಯವಿಶ್ವಾಸಿಗಳೇ, ನೀವು ನ್ಯಾಯದ ಧ್ವಜವಾಹಕರೂ ಅಲ್ಲಾಹನಿಗಾಗಿ ಸಾಕ್ಷ್ಯ ವಹಿಸುವವರೂ ಆಗಿರಿ. ನಿಮ್ಮ ನ್ಯಾಯ ಮತ್ತು ಸಾಕ್ಷ್ಯವು ಸ್ವತಃ ನಿಮ್ಮ ಅಥವಾ ನಿಮ್ಮ ಮಾತಾಪಿತರ ಮತ್ತು ನಿಮ್ಮ ಸಂಬಂಧಿಕರ ವಿರುದ್ಧವಾಗಿದ್ದರೂ ಸರಿಯೇ, ಕಕ್ಷಿಯು ಧನಿಕನಿರಲಿ ಅಥವಾ ಬಡವನಿರಲಿ, ನಿಮಗಿಂತ ಹೆಚ್ಚಾಗಿ ಅಲ್ಲಾಹನು ಅವರ ಹಿತಚಿಂತಕನಾಗಿರುತ್ತಾನೆ. ಆದುದರಿಂದ ನಿಮ್ಮ ಚಿತ್ತಾಸಕ್ತಿಯ ಅನುಸರಣೆಯಲ್ಲಿ ನ್ಯಾಯ ಪರಿಪಾಲನೆಯಿಂದ ಸರಿಯಬೇಡಿರಿ.” (ಪವಿತ್ರ ಕುರ್ಆನ್, 4:135)
ಸ್ವಸಮುದಾಯ ಮತ್ತು ಸೌಹಾರ್ದದಲ್ಲಿರುವವರೊಡನೆ ಮಾತ್ರವಲ್ಲ, ಶತ್ರುಗಳೊಡನೆಯೂ ನ್ಯಾಯ ಪಾಲಿಸಲು ಸತ್ಯವಿಶ್ವಾಸಿಗಳು ಆಜ್ಞಾಪಿಸಲ್ಪಟ್ಟಿದ್ದಾರೆ. ”ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗಾಗಿ ಸತ್ಯದಲ್ಲೇ ನೆಲೆನಿಲ್ಲುವವರೂ ನ್ಯಾಯದ ಸಾಕ್ಷ್ಯ ವಹಿಸುವವರೂ ಆಗಿರಿ. ಒಂದು ವಿಭಾಗದ ಮೇಲಿನ ದ್ವೇಷವು ನಿಮ್ಮನ್ನು ನ್ಯಾಯದಿಂದ ವಿಮುಖರಾಗುವಷ್ಟು ರೇಗಿಸದಿರಲಿ. ನ್ಯಾಯ ಪಾಲಿಸಿರಿ. ಇದು ದೇವಭಯಕ್ಕೆ ಹೆಚ್ಚು ಅನುಗುಣವಾಗಿರುತ್ತದೆ.” (ಪವಿತ್ರ ಕುರ್ ಆನ್, 5:8)
”ಧರ್ಮದ ವಿಷಯದಲ್ಲಿ ನಿಮ್ಮೊಡನೆ ಯುದ್ಧ ಮಾಡಿರದ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರ ಹಾಕಿರದವರೊಂದಿಗೆ ಸೌಜನ್ಯ ಹಾಗೂ ನ್ಯಾಯದೊಂದಿಗೆ ವರ್ತಿಸುವುದರಿಂದ ಅಲ್ಲಾಹನು ನಿಮ್ಮನ್ನು ತಡೆಯುವುದಿಲ್ಲ, ಅಲ್ಲಾಹನು ನ್ಯಾಯ ಪಾಲನೆ ಮಾಡುವವರನ್ನು ಪ್ರೀತಿಸುತ್ತಾನೆ.” (ಪವಿತ್ರ ಕುರ್ಆನ್, 60:8)
ಪ್ರವಾದಿಯವರ(ಸ) ಕಾಲದಲ್ಲಿ ಝಫರ್ ಗೋತ್ರದ ಬಶೀರ್ ಬಿನ್ ಉಬೈರಿಕ್ ಎಂಬಾತನು ಓರ್ವ ಅನ್ಸಾರಿಯ ಯುದ್ಧ ಕವಚವನ್ನು ಕದ್ದನು. ಕಾಣೆಯಾದ ಕವಚದ ವಾರೀಸುದಾರನು ಅದನ್ನು ಹುಡುಕಲಾರಂಭಿಸಿದಾಗ ಆತನು ಓರ್ವ ಯಹೂದಿಯ ಬಳಿ ಅಡವಿರಿಸಿದನು. ಕಳವಿನ ಮಾಲು ಪತ್ತೆಯಾದಾಗ ಆ ಬಗ್ಗೆ ಪ್ರವಾದಿಯವರಿಗೆ ದೂರು ಸಲ್ಲಿಸಿದರು. ಆಗ ಯಹೂದಿಯು ಪ್ರಕರಣದ ವಾಸ್ತವಿಕಾಂಶವನ್ನು ತಿಳಿಸಿದ. ಹಾಗಿದ್ದರೂ ಬಶೀರ್ ಬಿನ್ ಉಬೈರಿಕ್ ಅದನ್ನು ಅಲ್ಲಗಳೆದನು. ಮಾತ್ರವಲ್ಲ, ಆರೋಪವನ್ನು ಆ ನಿರಪರಾಧಿಯ ಮೇಲೆಯೇ ಹೊರಿಸಿದನು. ಆತನ ಸಂಬಂಧಿಕರು ಮತ್ತು ಮಿತ್ರರು ಆತನ ಪಕ್ಷ ವಹಿಸಿ ಹೀಗೆಂದರು: “ಈತನೋರ್ವ ಯಹೂದಿ, ಈತನ ಮಾತುಗಳನ್ನು ನಂಬಲು ಸಾಧ್ಯವಿಲ್ಲ. ವಿಶ್ವಾಸಿಗಳಾಗಿರುವ ನಮ್ಮ ಮಾತಿಗೆ ಬೆಲೆ ನೀಡಬೇಕು.”
ಸಮಾಜ ಮತ್ತು ಸನ್ನಿವೇಶದ ಸಾಕ್ಷ್ಯವು ಯಹೂದಿಯ ವಿರುದ್ಧವಾಗಿದ್ದುದರಿಂದ ಪ್ರವಾದಿಯವರ(ಸ) ಮನಸ್ಸು ಕೂಡಾ ಅತ್ತ ವಾಲುತ್ತಿತ್ತು. ಹಾಗಿದ್ದರೂ ತೀರ್ಪು ನೀಡಿರಲಿಲ್ಲ. ಅದಕ್ಕಿಂತ ಮುಂಚೆಯೇ ಅಲ್ಲಾಹನು ಪವಿತ್ರ ಕುರ್ ಆನಿನ ಮೂಲಕ ಆತನ ನಿರಪರಾಧಿತ್ವವನ್ನು ತಿಳಿಸಿ ನೈಜ ಅಪರಾಧಿಯನ್ನು ಬಹಿರಂಗ ಪಡಿಸಿದನು. ಮುಸ್ಲಿಮರ ವಿರುದ್ಧ ಮತ್ತು ಯಹೂದಿಯ ಪರವಾಗಿ ಅವತೀರ್ಣಗೊಂಡ ದೇವವಚನ ಹೀಗಿದೆ: “ಓ ಪೈಗಂಬರರೇ ಅಲ್ಲಾಹ್ ನಿಮಗೆ ತೋರಿಸಿಕೊಟ್ಟ ಪ್ರಕಾರ ಜನರ ನಡುವೆ ತೀರ್ಪು ನೀಡಲಿಕ್ಕಾಗಿ ನಾವು ನಿಮ್ಮ ಮೇಲೆ ಈ ಗ್ರಂಥವನ್ನು ಸತ್ಯ ಸಹಿತ ಅವತೀರ್ಣಗೊಳಿಸಿದ್ದೇವೆ. ನೀವು ಅಪ್ರಾಮಾಣಿಕರ ಪರವಾಗಿ ವಾದಿಸುವವರಾಗಬೇಡಿರಿ. ಪಾಪ ವಿಮೋಚನೆಗಾಗಿ ಅಲ್ಲಾಹನನ್ನು ಪ್ರಾರ್ಥಿಸಿರಿ. ಅವನು ಅತ್ಯಂತ ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ. ಆತ್ಮವಂಚನೆ ಮಾಡುವವರನ್ನು ನೀವು ಸಮರ್ಥಿಸಬೇಡಿರಿ. ನಿಶ್ಚಯವಾಗಿಯೂ ವಿಶ್ವಾಸಘಾತಕ ಮತ್ತು ಪಾಪ ಕರ್ಮಿಗಳಾದವರು ಅಲ್ಲಾಹನಿಗೆ ಮೆಚ್ಚುಗೆಯವರಲ್ಲ, ಇವರು ತಮ್ಮ ಚಟುವಟಿಕೆಗಳನ್ನು ಮಾನವರಿಗೆ ತಿಳಿಯದಂತೆ ಅಡಗಿಸಿ ಬಿಡಬಲ್ಲರು. ಆದರೆ ಅಲ್ಲಾಹನಿಗೆ ತಿಳಿಯದಂತೆ ಅಡಗಿಸಲಾರರು. ಇವರು ರಾತ್ರಿ ಕಾಲದಲ್ಲಿ ಅವಿತುಕೊಂಡು ಅವನ ಇಚ್ಛೆಗೆ ವಿರುದ್ಧ ಗೂಢಾಲೋಚನೆ ನಡೆಸುತ್ತಿರುವಾಗಲೂ ಆತನು ಇವರ ಸಂಗಡವೇ ಇರುತ್ತಾನೆ. ಇವರ ಸಕಲ ಕರ್ಮಗಳನ್ನು ಅಲ್ಲಾಹನು ಆವರಿಸಿಕೊಂಡಿರುತ್ತಾನೆ. ನಿಜ, ನೀವು ಈ ಅಪರಾಧಿಗಳ ಪರವಾಗಿ ಇಹ ಜೀವನದಲ್ಲಂತು ವಾದ ಮಾಡಿದಿರಿ. ಆದರೆ ಪುನರುತ್ಥಾನ ದಿನದಂದು ಇವರಿಗಾಗಿ ಅಲ್ಲಾಹನೊಂದಿಗೆ ವಾದಿಸುವವರು ಯಾರಿದ್ದಾರೆ? ಅಲ್ಲಿ ಇವರ ವಕಾಲತ್ತು ವಹಿಸುವವರು ಯಾರು?” (ಪವಿತ್ರ ಕುರ್ ಆನ್, 4:105-109)
ಉಮರ್ ಫಾರೂಕ್ರ ಆಡಳಿತ ಕಾಲದಲ್ಲಿ ಅವರ ಈಜಿಪ್ಟ್ನ ರಾಜ್ಯಪಾಲರಾಗಿದ್ದ ಅಮ್ರ್ ಬಿನ್ ಆಸ್ರ ಪುತ್ರ ಮುಹಮ್ಮದ್ ಮತ್ತು ಕೋಪ್ಟ್ ವಂಶದ ಓರ್ವ ಕ್ರೈಸ್ತ, ಓಟದ ಸ್ಪರ್ಧೆ ನಡೆಸಿದರು. ಅದರಲ್ಲಿ ಮುಹಮ್ಮದ್ ಸೋತರು. ಪ್ರತೀಕಾರಕ್ಕಾಗಿ ಅವರು ತನ್ನ ಕ್ರೈಸ್ತ ಸಹೋದರನಿಗೆ ಚಾಟಿಯಿಂದ ಹೊಡೆದರು. ಆತನು, ತಂದೆಯು ಪುತ್ರನ ವಿರುದ್ಧ ಕ್ರಮ ಕೈಗೊಳ್ಳಲಾರರೆಂದು ಭಾವಿಸಿ, ರಾಜ್ಯಪಾಲರಿಗೆ ತಿಳಿಸದೆ ನೇರವಾಗಿ ಖಲೀಫರಿಗೆ ದೂರು ನೀಡಿದನು. ಆ ಕೂಡಲೇ ಉಮರ್ರು(ರ) ಫಿರ್ಯಾದಿದಾರನನ್ನೂ ರಾಜ್ಯಪಾಲ ಅಮ್ರ್ ಮತ್ತು ಅವರ ಪುತ್ರ ಮುಹಮ್ಮದ್ನನ್ನೂ ಕರೆಸಿ ವಿಚಾರಣೆ ನಡೆಸಿದರು. ಘಟನೆಯು ನಿಜವೆಂದು ಮನಗಂಡ ಬಳಿಕ ಕೋಪ್ಟ್ ವಂಶದ ಕ್ರೈಸ್ತ ಸಹೋದರನಿಗೆ ಚಾಟಿ ನೀಡಿ ಮುಹಮ್ಮದ್ನಿಗೆ ಹೊಡೆಯುವಂತೆ ಆದೇಶಿಸಿದರು. ಹಾಗೆಯೇ ಆತ ತನಗೆ ಹೊಡೆದುದಕ್ಕೆ ಪ್ರತಿಯಾಗಿ ಮುಹಮ್ಮದ್ಗೆ ಹೊಡೆದನು. ಪುನಃ ಉಮರ್ ಫಾರೂಕ್ ಹೇಳಿದರು: “ಇನ್ನು ಅಮ್ರ್ ರ ತಲೆಗೂ ಹೊಡೆಯಿರಿ, ಅಲ್ಲಾಹನಾಣೆ! ಕೇವಲ ಅವರ ಅಧಿಕಾರ ಬಲದಿಂದಾಗಿಯೇ ಮುಹಮ್ಮದ್ ನಿಮಗೆ ಹೊಡೆದಿದ್ದಾನೆ.” “ಸತ್ಯವಿಶ್ವಾಸಿಗಳ ನಾಯಕರೇ! ನನಗಿಷ್ಟೇ ಸಾಕು. ನನಗೆ ಹೊಡೆದವನೊಂದಿಗೆ ನಾನು ಪ್ರತೀಕಾರ ತೀರಿಸಿದ್ದೇನೆ.” ಕ್ರೈಸ್ತ ಬಾಂಧವ ಸಂತೃಪ್ತಿಯಿಂದ ಹೇಳಿದ.
ತರುವಾಯ ಅವನು ಅಲ್ಲಿಂದ ಹೊರಟಾಗ, ಉಮರ್ ಫಾರೂಕ್(ರ) ಅಮ್ರ್ ರನ್ನು ನೋಡಿ ಗಂಭೀರ ಸ್ವರದಲ್ಲಿ ಹೀಗೆ ಪ್ರಶ್ನಿಸಿದರು: “ನೀವು ಜನರನ್ನು ಗುಲಾಮರಾಗಿಸಲು ಆರಂಭಿಸಿದ್ದು ಯಾವಾಗ? ಅವರ ತಾಯಂದಿರು ಅವರನ್ನು ಸ್ವತಂತ್ರವಾಗಿ ಹೆತ್ತಿದ್ದಾರೆ. ಮತ್ತೊಮ್ಮೆ ಅಮ್ರ್ ಬಿನ್ ಆಸ್ರು ಓರ್ವ ಕ್ರೈಸ್ತ ಮಹಿಳೆಯ ಮನೆಯನ್ನು ಬಲಾತ್ಕಾರದಿಂದ ಮಸೀದಿಗೆ ಸೇರಿಸಿದರು. ಆ ಕುರಿತು ಮಹಿಳೆಯು ಖಲೀಫರಿಗೆ ದೂರು ನೀಡಿದಳು. ದೂರು ದೊರೆತ ತಕ್ಷಣವೇ ಉಮರ್ ಫಾರೂಕ್ರು ರಾಜ್ಯಪಾಲರನ್ನು ಕರೆಸಿ ವಿಚಾರಣೆ ನಡೆಸಿದರು. ಪ್ರಕರಣವನ್ನು ನಿಜವೆಂದು ಒಪ್ಪಿಕೊಂಡ ರಾಜ್ಯಪಾಲರು ಅದಕ್ಕೆ ಪ್ರೇರಕವಾದ ಹಿನ್ನೆಲೆಯನ್ನು ವಿವರಿಸಿದರು. ಮುಸ್ಲಿಮರ ಜನಸಂಖ್ಯೆ ಬಹಳಷ್ಟು ಹೆಚ್ಚಿತು. ಮಸೀದಿಯಲ್ಲಿ ಸ್ಥಳಾವಕಾಶ ಕಡಿಮೆಯಾಗಿ ತೊಂದರೆಯಾಯಿತು. ಮಸೀದಿಯನ್ನು ವಿಶಾಲಗೊಳಿಸಲು ತೀರ್ಮಾನಿಸಿದಾಗ ಸಮೀಪದಲ್ಲಿ ಆ ಮಹಿಳೆಯ ಮನೆಯಿತ್ತು. ಅದಕ್ಕೆ ನ್ಯಾಯೋಚಿತ ಬೆಲೆ ನೀಡುವೆವೆಂದು ತಿಳಿಸಿದರೂ ಆಕೆ ಮಾರಲು ಒಪ್ಪಲಿಲ್ಲ. ಆದ್ದರಿಂದ ಮನೆ ಕೆಡಹಿ ಮಸೀದಿಗೆ ಸೇರಿಸಬೇಕಾಯಿತು. ಅದರ ಬೆಲೆಯನ್ನು ಆಕೆ ಬಯಸಿದ ಕೂಡಲೇ ಪಡೆಯಲಿಕ್ಕಾಗಿ ಸಾರ್ವಜನಿಕ ಖಜಾನೆಯಲ್ಲಿರಿಸಿದ್ದೇನೆ.” ಸಾಮಾನ್ಯವಾಗಿ ಇದು ಇಂದಿನ ಕಾಲದಲ್ಲಿಯೂ ಎಲ್ಲೆಡೆ ರೂಢಿಯಲ್ಲಿರುವ ಕ್ರಮವಾಗಿದೆ. ಆದರೆ ಉಮರ್ ಫಾರೂಕ್ರ ಧೋರಣೆ ಇದಕ್ಕೆ ವ್ಯತಿರಿಕ್ತವಾಗಿತ್ತು. ಅವರು ಅಮ್ರ್ ರ ವಿವರಣೆಯನ್ನು ಸಂಪೂರ್ಣ ಆಲಿಸಿದ ಬಳಿಕ, ಮಸೀದಿಯ ಆ ಭಾಗವನ್ನು ಕೆಡಹಿ ಕೈಸ್ತ ಮಹಿಳೆಯ ಮನೆಯನ್ನು ಯಥಾಸ್ಥಾನದಲ್ಲಿ ಕಟ್ಟಿಸಿಕೊಡುವಂತೆ ಆದೇಶಿಸಿದರು.
ಹಿಂಸ್ನ ರಾಜ್ಯಪಾಲರಾಗಿದ್ದ ಉಮೈರ್ ಬಿನ್ ಸಅದ್ ಒಮ್ಮೆ ಓರ್ವ ಮುಸ್ಲಿಮ್ ಪ್ರಜೆಯೊಡನೆ ಮಾತಾಡುತ್ತಾ, “ಅಲ್ಲಾಹನು ನಿನ್ನನ್ನು ಹೀನನಾಗಿಸಿದ್ದಾನೆ’ ಎಂದು ಹೇಳಿದರು. ತರುವಾಯ ಅವರಿಗೆ ತನ್ನ ಮಾತು ಸ್ವಲ್ಪ ಅತಿಯಾಯಿತೆಂದು ತೋಚಿತು. ಅದಕ್ಕಾಗಿ ಮನಃಪೂರ್ವಕ ಪಶ್ಚಾತ್ತಾಪಪಟ್ಟು ಪ್ರಾಯಶ್ಚಿತ್ತ ಮಾಡಲು ನಿರ್ಧರಿಸಿದರು. ಹಾಗೆಯೇ ಅವರು ಖಲೀಫ ಉಮರ್ ಫಾರೂಕ್ರ ಬಳಿ ಹೋಗಿ ವಿಷಯ ತಿಳಿಸಿದರು. ಉನ್ನತ ಹುದ್ದೆಯಲ್ಲಿರುವುದರಿಂದ ನಾನು ಹಾಗೆ ಹೇಳಿದೆ. ಆದ್ದರಿಂದ ರಾಜ್ಯಪಾಲ ಹುದ್ದೆಗೆ ತಾನು ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದರು. ಹಾಗೆಯೇ ಆ ಕಾಲದ ಪ್ರಾಮಾಣಿಕ ಮತ್ತು ನ್ಯಾಯನಿಷ್ಠರೆಂದು ಖ್ಯಾತರಾಗಿದ್ದ ಉಮೈರ್ ರಾಜ್ಯಪಾಲ ಸ್ಥಾನವನ್ನು ತೊರೆದರು, ಖಲೀಫರು ಅದನ್ನು ಅಂಗೀಕರಿಸಿದರು.
ಖಲೀಫರಾಗಿದ್ದ ಹ. ಅಲೀಯವರು ತಮ್ಮ ರಾಷ್ಟ್ರದ ನ್ಯಾಯಾಲಯಕ್ಕೆ ಒಂದು ದೂರು ಸಲ್ಲಿಸಿದರು. ಆರೋಪಿಯು ಓರ್ವ ಯಹೂದಿಯಾಗಿದ್ದ “ನನ್ನ ಯುದ್ಧ ಕವಚವನ್ನು ಆತ ಕದ್ದಿದ್ದಾನೆ. ಅದು ಆತನ ಬಳಿಯಿದೆಯೆಂದು ಅಲೀಯವರು(ರ) ದೂರಿನಲ್ಲಿ ಹೇಳಿದ್ದರು. ವಿಚಾರಣೆಯ ವೇಳೆ ನ್ಯಾಯಾಧೀಶ ಶುರೈಹ್, ಯಹೂದಿಯೊಡನೆ ವಿಚಾರಿಸಿದರು: “ಅಮೀರುಲ್ ಮೂಮಿನೀನ್ರ ದೂರಿನ ಬಗ್ಗೆ ಏನು ಹೇಳುವೆ?”
“ಈ ಯುದ್ಧ ಕವಚ ನನ್ನದು. ನಿಜವಾಗಿಯೂ ನನ್ನದೇ.” ಆತ ಉತ್ತರಿಸಿದ.
“ನಿಮ್ಮ ವಾದವನ್ನು ಸಾಬೀತುಪಡಿಸಲು ಸಾಧ್ಯವಿದೆಯೇ?” ಶುರೈಹ್, ಖಲೀಫರೊಡನೆ ಕೇಳಿದರು.
“ಹೌದು. ಇದು ನನ್ನದು. ಆ ಬಗ್ಗೆ ಇಬ್ಬರು ಸಾಕ್ಷಿಗಳಿದ್ದಾರೆ.”- ಖಲೀಫ ಹೇಳಿದರು.
“ಸಾಕ್ಷಿಗಳು ಯಾರು?” ನ್ಯಾಯಾಧೀಶರು ವಿಚಾರಿಸಿದರು.
“ಪುತ್ರ ಹಸನ್ ಮತ್ತು ಸೇವಕ ಕಮರ್.”
“ಅವರು ನಿಮ್ಮದೇ ಜನರು. ಆದ್ದರಿಂದ ಅವರ ಸಾಕ್ಷ್ಯ ಸ್ವೀಕಾರಾರ್ಹವಲ್ಲ,” ಶುರೈಹ್ ದೃಢ ಸ್ವರದಲ್ಲಿ ಹೇಳಿದರು. ಅಲೀಯವರಿಗೆ ಬೇರೆ ಸಾಕ್ಷಿಗಳಿರಲಿಲ್ಲ. ಆದ್ದರಿಂದ ನ್ಯಾಯಾಧೀಶರು, ಯಹೂದಿಯ ಪರವಾಗಿ ತೀರ್ಪು ನೀಡಿದರು. ಯುದ್ಧ ಕವಚವನ್ನು ಯಹೂದಿಗೆ ನೀಡಿದರು. ಅಂತೆಯೇ ಆತ ಅದನ್ನು ಹಿಡಿದುಕೊಂಡು ಹೊರಟ. ಅಲೀಯವರು ಆತನನ್ನೇ ನೋಡುತ್ತಾ ನಿಂತರು. ಆ ಯಹೂದಿ ಸ್ವಲ್ಪ ದೂರ ಹೋಗಿ ಕೂಡಲೇ ಮರಳಿ ಬಂದ. ನ್ಯಾಯಾಧೀಶ ಶುರೈಹ್ ರನ್ನು ನೋಡಿ ಹೀಗೆ ಹೇಳಿದ: “ಖಂಡಿತ! ಇದು ಪ್ರವಾದಿಯವರ ಕಾನೂನೆಂದು ನಾನು ಸಾಕ್ಷ್ಯ ವಹಿಸುತ್ತೇನೆ. ಅಮೀರುಲ್ ಮೂಮಿನೀನ್ರು ತಮ್ಮ ನ್ಯಾಯಾಧೀಶರಿಗೆ ದೂರು ನೀಡುತ್ತಾರೆ. ನಂಬಲರ್ಹ ಸಾಕ್ಷ್ಯವಿಲ್ಲವೆಂದು ಹೇಳಿ ನ್ಯಾಯಾಲಯವು ಅವರ ವಿರುದ್ಧ ತೀರ್ಪು ನೀಡುತ್ತದೆ. ಇದು ನಿಜಕ್ಕೂ ಉತ್ಕೃಷ್ಟವಾಗಿದೆ. ಆದ್ದರಿಂದ ಅಲ್ಲಾಹನಲ್ಲದೆ ಅನ್ಯ ದೇವನಿಲ್ಲ, ಮುಹಮ್ಮದ್ರು(ಸ) ಆತನ ಪ್ರವಾದಿಯೆಂದು ನಾನು ಸಾಕ್ಷ್ಯ ವಹಿಸುತ್ತೇನೆ.” ಇದನ್ನು ಕೇಳಿದ ಖಲೀಫರು ನಗುತ್ತಾ ಹೀಗೆಂದರು: “ನಾನು ಅದನ್ನು ನಿಮಗೆ ದಾನ ಮಾಡಿರುತ್ತೇನೆ.”
ಇದು, ಇಸ್ಲಾಮಿನ ಧೋರಣೆಯು ಆಡಳಿತಗಾರನ ವಿರುದ್ಧ ಓರ್ವ ಮುಸ್ಲಿಮೇತರ ಪ್ರಜೆಯ ಪರವಾಗಿ ತೀರ್ಪು ನೀಡಬಹುದಾದಷ್ಟು ನ್ಯಾಯನಿಷ್ಠ ಮತ್ತು ಸಹಿಷ್ಣುತೆಯಿಂದ ಕೂಡಿದೆಯೆಂದು ಸ್ಪಷ್ಟಪಡಿಸುವ ಅನೇಕ ಘಟನೆಗಳಲ್ಲೊಂದಾಗಿದೆ.
ಉಮರ್ ಬಿನ್ ಅಬ್ದುಲ್ ಅಝೀಝ್ ರ ಅನನ್ಯ ನ್ಯಾಯನಿಷ್ಠೆಯ ಬಗ್ಗೆ ಕೇಳಿ ತಿಳಿದಿದ್ದ ಸಮರ್ಖಂದ್ ನಿವಾಸಿಗಳು, ರಾಜ್ಯಪಾಲ ಸುಲೈಮಾನ್ ಬಿನ್ ಅಬೀ ಸಿರ್ರ್ ರೊಡನೆ ಹೀಗೆಂದರು: “ಖುತೈಬ ನಮ್ಮನ್ನು ವಂಚಿಸಿ ನಮ್ಮ ನಾಡನ್ನು ಅನ್ಯಾಯವಾಗಿ ಸ್ವಾಧೀನ ಪಡಿಸಿದ್ದಾರೆ. ದೇವನು ನಾಡಿನ ಎಲ್ಲೆಡೆ ಸತ್ಯ ಮತ್ತು ನ್ಯಾಯವನ್ನು ಸಂಸ್ಥಾಪಿಸಿರುವನಲ್ಲವೇ, ಆದ್ದರಿಂದ, ಈ ಬಗ್ಗೆ ಅಮೀರುಲ್ ಮೂಮಿನೀನ್ರಿಗೆ ದೂರು ಸಲ್ಲಿಸಲಿಕ್ಕಾಗಿ ನಮ್ಮ ಪ್ರತಿನಿಧಿ ತಂಡಕ್ಕೆ ಅನುಮತಿ ನೀಡಬೇಕು.”
ಸುಲೈಮಾನ್ರು ಅವರ ಮನವಿಯನ್ನು ಸ್ವೀಕರಿಸಿದರು. ಹಾಗೆಯೇ ಸಮರ್ ಖಂದ್ನವರ ಒಂದು ನಿಯೋಗವು ಖಲೀಫರ ಬಳಿ ಹೋಗಿ ದೂರು ನೀಡಿತು. ಎಲ್ಲ ವಿಷಯಗಳನ್ನೂ ಚೆನ್ನಾಗಿ ಆಲಿಸಿದ ಬಳಿಕ ಉಮರ್ ಬಿನ್ ಅಬ್ದುಲ್ ಅಝೀಝ್ ರು ರಾಜ್ಯಪಾಲರಿಗೆ ಈ ರೀತಿ ಪತ್ರ ಬರೆದರು. “ಸಮರ್ಖಂದ್ ನಿವಾಸಿಗಳು ನೀವು ಮಾಡಿದ ಅನ್ಯಾಯದ ಬಗ್ಗೆ ದೂರು ಸಲ್ಲಿಸಿದ್ದಾರೆ. ಖುತೈಬಾ, ಅವರನ್ನು ತಮ್ಮ ನಾಡಿನಿಂದ ಹೊರ ಹಾಕಿರುವುದಾಗಿಯೂ ದೂರಿನಲ್ಲಿ ತಿಳಿಸಿದ್ದಾರೆ. ಆದ್ದರಿಂದ, ನನ್ನ ಈ ಪತ್ರ ತಲಪಿದ ಕೂಡಲೇ ನೀವು ಅವರಿಗಾಗಿ ಓರ್ವ ನ್ಯಾಯಾಧೀಶನನ್ನು ನೇಮಿಸಿರಿ. ಅವರು ಈ ಬಗ್ಗೆ ತನಿಖೆ ನಡೆಸಿ ತೀರ್ಪು ಇವರ ಪರವಾಗಿದ್ದರೆ ಮುಸ್ಲಿಮರು ತಮ್ಮ ನೆಲೆಗಳಿಗೆ ಮರಳಲಿ ಮತ್ತು ನೀವು ಖುತೈಬಾರ ಪ್ರದೇಶಕ್ಕಿಂತ ಮೊದಲಿನ ಸ್ಥಳಕ್ಕೆ ಸಾಗಿರಿ.”
ಪತ್ರ ತಲಪಿದ ಕೂಡಲೇ ಸುಲೈಮಾನ್, ಜಮೀಉಬಿನ್ ಹಾಝಿರುಲ್ ಬಾಜಿಯವರನ್ನು ನ್ಯಾಯಾಧೀಶರಾಗಿ ನೇಮಿಸಿದರು. ಅವರು ದೂರುಗಳನ್ನು ಪರಿಶೀಲಿಸಿ ಅದರಲ್ಲಿ ಸತ್ಯಾಂಶವಿದೆಯೆಂದು ಮನಗಂಡ ಬಳಿಕ ಮುಸ್ಲಿಮರ ವಿರುದ್ಧ ತೀರ್ಪು ನೀಡಿದರು. ಅವರು ಸಮರ್ಖಂದ್ ತೊರೆದು ನಗರದ ಗಡಿಯಲ್ಲಿರುವ ಗೋಡೆಯ ಹೊರಗಿನ ತಮ್ಮ ನೆಲೆಗಳಿಗೆ ಮರಳಬೇಕೆಂದು ಆಜ್ಞಾಪಿಸಿದರು. (ತ್ವಬ್ರಿ ಭಾಗ: 6, ಪುಟ: 567-568) ಇದು ಸಮರ್ಖಂದ್ ನಿವಾಸಿಗಳನ್ನು ಅಕ್ಷರಶಃ ದಿಗಿಲುಗೊಳಿಸಿತು. ಓರ್ವ ಮುಸ್ಲಿಮ್ ನ್ಯಾಯಾಧೀಶನು, ತನ್ನ ಧರ್ಮ ಮತ್ತು ಸಮುದಾಯದ ವಿರುದ್ಧ ನಮ್ಮ ಪರವಾಗಿ ತೀರ್ಪು ನೀಡುವುದೇ? ಇತಿಹಾಸದಲ್ಲಿ ಸಾಟಿಯಿಲ್ಲದ ಇಂತಹ ನ್ಯಾಯದ ಬಗ್ಗೆ ಅವರಿಗೆ ಊಹಿಸಲೂ ಸಾಧ್ಯವಿರಲಿಲ್ಲ. ಆದ್ದರಿಂದ ತಮ್ಮ ಸೇನೆ ಮತ್ತು ಸೇನಾನಾಯಕನ ವಿರುದ್ಧ ತೀರ್ಪು ನೀಡಿರುವುದನ್ನು ಕಣ್ಣಾರೆ ನೋಡಿದ ಸಮರ್ಖಂದ್ ನಿವಾಸಿಗಳಿಗೆ, ನ್ಯಾಯ ನಿಷ್ಕ ಮತ್ತು ಸಹಿಷ್ಣುಗಳಾದ ಮುಸ್ಲಿಮರು ಅಲ್ಲಿಂದ ಹೋಗುವುದು ಇಷ್ಟವಿರಲಿಲ್ಲ. ಅವರ ಪ್ರೀತಿ ತುಂಬಿದ ವಿನಂತಿಯನ್ನು ಮನ್ನಿಸಿ ಇಸ್ಲಾಮಿ ಸೇನೆಯು ಸಮರ್ಖಂದ್ನಲ್ಲಿಯೇ ಬಿಡಾರ ಹೂಡಿತು. ಈ ಘಟನೆಗೆ ಜಾಗತಿಕ ಇತಿಹಾಸದಲ್ಲಿ ಬೇರೆ ಉದಾಹರಣೆ ದೊರೆಯಲಾರದು. ಸೇನೆಯು ಒಂದು ನಗರವನ್ನು ಗೆದ್ದು ಅಲ್ಲಿ ತಂಗುತ್ತದೆ. ಆಗ ಸೋತವರು ಗೆದ್ದವರ ಸರಕಾರಕ್ಕೆ ದೂರು ನೀಡುತ್ತಾರೆ. ಹಾಗೆಯೇ ಅಲ್ಲಿಯ ನ್ಯಾಯಾಧೀಶರು ಜಯಗಳಿಸಿದ ತಮ್ಮ ಸೇನೆಯ ವಿರುದ್ಧವಾಗಿ ತೀರ್ಪು ನೀಡಿ ಕೂಡಲೇ ಅಲ್ಲಿಂದ ಹಿಂತೆರಳುವಂತೆ ಆದೇಶಿಸುತ್ತಾರೆ. ಇದರಿಂದ ಕಳವಳಗೊಂಡ ಸ್ಥಳೀಯ ನಿವಾಸಿಗಳು ವಿಜೇತ ಸೇನೆಯು ಅಲ್ಲಿಂದ ಹೋಗಬಾರದೆಂದು ಒತ್ತಾಯಿಸುತ್ತಾರೆ. ಆಧುನಿಕ ಅಥವಾ ಪ್ರಾಚೀನ ಜನಾಂಗಗಳಲ್ಲಿ ಇದಕ್ಕೆ ಸಮನಾದ ಇನ್ನೊಂದು ಘಟನೆಯನ್ನು ಬೆಟ್ಟು ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಇಸ್ಲಾಮಿ ಸಮಾಜವು ಸತ್ಯ ಮತ್ತು ನ್ಯಾಯದ ಮೌಲ್ಯಗಳಿಂದ ಹೀಗೆ ಬಂಧಿತರಾಗಿರುವಂತೆ, ಸ್ವಂತ ಅನುಯಾಯಿಗಳನ್ನು ಇಂತಹ ತತ್ವಗಳನ್ನು ನಿಷ್ಠೆಯಿಂದ ಪಾಲಿಸುವಂತೆ ಒತ್ತಾಯಿಸುವ ಬೇರೆ ಧರ್ಮ ಅಥವಾ ಸಿದ್ಧಾಂತ ಜಗತ್ತಿನಲ್ಲಿಲ್ಲ.
ಲೆಬನಾನಿನ ಕೆಲವು ಮುಸ್ಲಿಮೇತರ ಪ್ರಜೆಗಳು ತಮ್ಮ ರಾಜ್ಯಪಾಲ ಅಲಿ ಬಿನ್ ಅಬ್ದುಲ್ಲಾ ಬಿನ್ ಅಬ್ಬಾಸ್ರ ವಿರುದ್ಧ ದಂಗೆಯೆದ್ದರು. ರಾಜ್ಯಪಾಲರು ಅವರ ವಿರುದ್ಧ ಕ್ರಮಕೈಗೊಂಡು ಅವರ ಪ್ರಯತ್ನವನ್ನು ವಿಫಲಗೊಳಿಸಿದರು. ತರುವಾಯ ದೇಶದ ಭದ್ರತೆಯ ದೃಷ್ಟಿಯಿಂದ ಅವರನ್ನು ಬೇರೆಡೆಗಳಿಗೆ ಕಳುಹಿಸಿ ಪರಸ್ಪರ ದೂರವಿರುವಂತೆ ನೆಲೆಗೊಳಿಸುವುದು ಉತ್ತಮವೆಂದು ಭಾವಿಸಿದರು, ಅದಕ್ಕೆ ಅಗತ್ಯವಿರುವ ಏರ್ಪಾಡುಗಳನ್ನೂ ಮಾಡಿದರು. ಈ ಕ್ರಮವು ಸಾಮಾನ್ಯವಾಗಿ ಆಧುನಿಕ ನಾಗರಿಕ ರಾಷ್ಟ್ರಗಳ ಆಡಳಿತಗಾರರು ಕೈಗೊಳ್ಳುವ ಕ್ರಮಕ್ಕಿಂತ ಬಹಳ ಸರಳ ಶಿಕ್ಷೆಯಾಗಿದೆ. ಹಾಗಿದ್ದರೂ ಸಿರಿಯಾದ ಖ್ಯಾತ ವಿದ್ವಾಂಸ ಮತ್ತು ಚಿಂತಕ ಔಝಾಈ ಅದಕ್ಕೆ ಒಪ್ಪಲಿಲ್ಲ. ದಂಗೆಯಲ್ಲಿ ಭಾಗವಹಿಸದ ನಿರಪರಾಧಿಗಳನ್ನು ಶಿಕ್ಷೆಯಲ್ಲಿ ಸೇರಿಸುವುದು ಸರಿಯಲ್ಲ. ಆದ್ದರಿಂದ ಮುಸ್ಲಿಮೇತರ ಪ್ರಜೆಗಳೆಲ್ಲರನ್ನೂ ಸ್ಥಳಾಂತರಿಸುವುದು ನ್ಯಾಯವಲ್ಲವೆಂದು ಬಲವಾಗಿ ವಾದಿಸಿ ರಾಜ್ಯಪಾಲರನ್ನು ಉಗ್ರವಾಗಿ ಖಂಡಿಸಿದರು. ಔಝಾಈ, ರಾಜ್ಯಪಾಲರಿಗೆ ಕಳುಹಿಸಿದ ಸಂದೇಶದಲ್ಲಿ ಹೀಗೆ ಹೇಳಲಾಗಿತ್ತು: ನೀವು ಲೆಬನಾನ್ನಿಂದ ಅಲ್ಲಿನ ಮುಸ್ಲಿಮೇತರ ಪ್ರಜೆಗಳನ್ನು ಸ್ಥಳಾಂತರಿಸಿದ್ದು ತಿಳಿಯಿತು. ಆ ಪೈಕಿ ಕೆಲವರು ದಂಗೆಯಲ್ಲಿ ಶಾಮೀಲಾಗಿದ್ದರು. ಆದರೆ, ಕೇವಲ ಒಂದು ತಂಡದ ತಪ್ಪಿಗಾಗಿ ನೀವು ಎಲ್ಲರನ್ನೂ ಶಿಕ್ಷಿಸಿದ್ದೇಕೆ? ಅವರನ್ನು ತಮ್ಮ ಆಸ್ತಿಪಾಸ್ತಿಗಳಿಂದ ದೂರ ಕಳುಹಿಸಿದ್ದೇಕೆ? ಯಾರೂ ಅನ್ಯರ ಪಾಪಭಾರವನ್ನು ಹೊರಬೇಕಾಗಿಲ್ಲವೆಂಬುದು ದೇವ ನೀತಿಯಾಗಿದೆಯಷ್ಟೆ. ಅದು ಅತ್ಯುತ್ತಮ ಧೋರಣೆ ಮತ್ತು ಸರಿಯಾದ ನಿಲುಮೆಯಾಗಿದೆ. ಪ್ರವಾದಿಯವರ(ಸ) ಉಪದೇಶವನ್ನು ಪಾಲಿಸಬೇಕಾದುದು ನಿಮ್ಮ ಪ್ರಮುಖ ಕರ್ತವ್ಯವಾಗಿದೆ. ಅವರು ಹೀಗೆ ಹೇಳಿದ್ದರು: “ಯಾರಾದರೂ ಇಸ್ಲಾಮಿ ರಾಷ್ಟ್ರದ ಮುಸ್ಲಿಮೇತರ ಪ್ರಜೆಗಳಿಗೆ ತೊಂದರೆಕೊಟ್ಟರೆ ಅಥವಾ ಅಸಾಧ್ಯವಾದುದನ್ನು ಬಲಾತ್ಕಾರವಾಗಿ ಅವರ ಮೇಲೆ ಹೇರಿದರೆ ಅಂತ್ಯ ದಿನದಲ್ಲಿ ನಾನು ಅವರ ವೈರಿಯಾಗುವೆನು.”
ಇಮಾಮ್ ಔಝಾಈಯವರ ಈ ದಿಟ್ಟ ಧೋರಣೆಯಿಂದಾಗಿ, ತಾನು ಗಡಿಪಾರು ಮಾಡಿದ್ದ ಜನರನ್ನು ಗೌರವದಿಂದ ಮರಳಿ ಕರೆಸಲು ರಾಜ್ಯಪಾಲರು ನಿರ್ಬಂಧಿತರಾದರು. ಹೀಗೆ ಆಡಳಿತಗಾರರು ಇಸ್ಲಾಮಿನ ಉದಾತ್ತ ಮೌಲ್ಯಗಳಿಗೆ ವಿರುದ್ಧವಾಗಿ ಎಂದಾದರೂ ಮುಸ್ಲಿಮೇತರರೊಡನೆ ಅನ್ಯಾಯವಾಗಿ ವರ್ತಿಸಿದರೆ ಧರ್ಮ ವಿದ್ವಾಂಸರು ಮಧ್ಯ ಪ್ರವೇಶಿಸಿ ನ್ಯಾಯ ಪಾಲನೆಯಾಗುವಂತೆ ನೋಡಿಕೊಳ್ಳುತ್ತಿದ್ದರು.
ಸಿರಿಯಾದ ತಾರ್ತಾರಿಗಳೊಂದಿಗಿನ ಯುದ್ಧದಲ್ಲಿ ಅನೇಕ ಮುಸ್ಲಿಮರು, ಕ್ರೈಸ್ತರು ಮತ್ತು ಯಹೂದಿಯರು ಕೈದಿಗಳಾದರು. ತರುವಾಯ ತಾರ್ತಾರಿ ನಾಯಕರೊಡನೆ ಶೈಖುಲ್ ಇಸ್ಲಾಮ್ ಇಬ್ನು ತೈಮಿಯ್ಯರು ಕೈದಿಗಳ ವಿಮೋಚನೆಯ ಕುರಿತು ಮಾತುಕತೆ ನಡೆಸಿದಾಗ ಮುಸ್ಲಿಮ್ ಕೈದಿಗಳ ಬಿಡುಗಡೆಗೆ ಒಪ್ಪಿದರು. ಕ್ರೈಸ್ತ ಮತ್ತು ಯಹೂದಿ ಸೈನಿಕರನ್ನು ಬಿಡುಗಡೆಗೊಳಿಸಲು ಸಾಧ್ಯವಿಲ್ಲವೆಂದೂ ತಿಳಿಸಿದರು. ಆದರೆ, ಶೈಖುಲ್ ಇಸ್ಲಾಮ್ರು ಅದನ್ನು ಅಂಗೀಕರಿಸಲಿಲ್ಲ. ಅವರು ಹೀಗೆಂದರು, “ಎಲ್ಲ ಕ್ರೈಸ್ತ ಮತ್ತು ಯಹೂದಿಯರನ್ನೂ ಬಿಡುಗಡೆಗೊಳಿಸಬೇಕು ಅವರೂ ಮುಸ್ಲಿಮರಂತೆಯೇ ಸಮಾನರು.”
ಯುದ್ಧ ನಿರತ ಶತ್ರುಗಳೊಡನೆಯೂ ಅನ್ಯಾಯವಾಗಿ ವರ್ತಿಸಬಾರದೆಂದು ಇಸ್ಲಾಮ್ ಕಲಿಸುತ್ತದೆ. ಶಿಲುಬೆ ಸೇನೆಯ ವಶದಿಂದ ಇಸ್ಲಾಮಿ ರಾಷ್ಟ್ರಗಳನ್ನು ವಿಮೋಚನೆಗೊಳಿಸಿದ ಸುಲ್ತಾನ್ ಸಲಾಹುದ್ದೀನ್ ಅಯೂಬಿಯವರ ಬಳಿಗೆ ಓರ್ವ ಕ್ರೈಸ್ತ ಮಹಿಳೆಯು ಬಂದು, ತನ್ನ ಮಗುವನ್ನು ಸೈನಿಕರು ಅಪಹರಿಸಿರುವರೆಂದು ದೂರು ನೀಡಿದಳು. ಮಹಿಳೆಯ ಪ್ರಲಾಪವನ್ನು ಕೇಳಿ ಅವರ ಕಣ್ಣು ತೇವಗೊಂಡಿತು. ಕೂಡಲೇ ಅವರು ತಾವು ಯುದ್ಧ ಮಾಡಿದ ಶತ್ರು ಗುಂಪಿಗೆ ಸೇರಿದ ಆ ಮಹಿಳೆಯ ಮಗುವಿನ ಶೋಧಕ್ಕೆ ಬೇಕಾದ ಏರ್ಪಾಡು ಮಾಡಿದರು. ಹಾಗೆಯೇ ಬಹಳ ಕ್ಷಿಪ್ರವಾಗಿ ಮಗುವನ್ನು ಪತ್ತೆ ಹಚ್ಚಿ ತಾಯಿಗೆ ಒಪ್ಪಿಸಿದರು. ತರುವಾಯ ಆಕೆಯನ್ನು ಸುರಕ್ಷಿತವಾಗಿ ಆಕೆಯ ತಾಣಕ್ಕೆ ತಲಪಿಸಲಿಕ್ಕಾಗಿ ಅಂಗರಕ್ಷಕರನ್ನೂ ಕಳುಹಿಸಿದರು. ಹೀಗೆ ವೈರಿಗಳೊಡನೆಯೂ ನ್ಯಾಯ ಮತ್ತು ಉದಾರ ಧೋರಣೆಯನ್ನು ಪಾಲಿಸುತ್ತಿದ್ದ ಸಲಾಹುದ್ದೀನ್ ಅಯ್ಯುಬಿಯವರ ಗುಣ ವೈಶಿಷ್ಟ್ಯಗಳಿಂದ ನಿಬ್ಬೆರಗಾದ ಪಾಶ್ಚಾತ್ಯ ಬರಹಗಾರರು ಅವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಖ್ಯಾತ ಇತಿಹಾಸಜ್ಞ ಮಿಕಾಡ್ ಹೇಳುತ್ತಾರೆ: “ಅವರು ಕೈದಿಗಳಾದ ಮಕ್ಕಳನ್ನು ತಾಯಂದಿರಿಗೂ ಪತಿಯರನ್ನು ಪತ್ನಿಯರಿಗೂ ಬಿಟ್ಟುಕೊಟ್ಟರು. ಅನೇಕ ಕ್ರೈಸ್ತರು ತಮ್ಮ ಅಮೂಲ್ಯ ವಸ್ತುಗಳನ್ನು ಬಳಸಿ ತಮ್ಮ ದುರ್ಬಲ ತಾಯಂದಿರನ್ನೂ ರೋಗಿಗಳಾದ ಮಿತ್ರರನ್ನೂ ಕರೆದೊಯ್ದರು. ಈ ದೃಶ್ಯವು ಸಲಾಹುದ್ದೀನ್ರನ್ನು ತಲ್ಲಣಗೊಳಿಸಿತು. ಅವರು ಸೋತ ವೈರಿಗಳಿಗೆ ಅವಶ್ಯಕ ವಸ್ತುಗಳನ್ನೂ ಸಹಾಯ ಸಹಕಾರಗಳನ್ನೂ ನೀಡಿದರು.
ಮುಸ್ಲಿಮರ ಆಡಳಿತ ಕಾಲದಲ್ಲಿ ಭಾರತದ ಹಿಂದುಗಳಿಗೆ ಮುಸ್ಲಿಮರ ವಿರುದ್ಧವಾಗಿಯೂ ನ್ಯಾಯ ದೊರೆಯುತ್ತಿತ್ತೆಂದು ಕ್ಯಾಂಬ್ರಿಡ್ಜ್ ಹಿಸ್ಟರಿ ಆಫ್ ಇಂಡಿಯಾದಲ್ಲಿ ಸ್ಪಷ್ಟ ಪಡಿಸಲಾಗಿದೆ. (ಸಂಪುಟ: 3, ಪುಟ: 89,90)
ಆಧುನಿಕ ಪಾಕಿಸ್ತಾನದಲ್ಲಿ ಸಂಪೂರ್ಣ ಇಸ್ಲಾಮಿ ಆಡಳಿತವಿಲ್ಲದಿದ್ದರೂ ಧಾರ್ಮಿಕ ಅಲ್ಪಸಂಖ್ಯಾತರಿಗೆ ನ್ಯಾಯ ದೊರೆಯುತ್ತಿದೆ. ಸಿಂದ್ ಪ್ರಾಂತ್ಯದ ‘ಮುಹ್ತಸಿಬ್’ರ ಬಳಿಗೆ ಒಂದು ದೂರು ಬಂತು. ಹಿಂದುಗಳು ಓರ್ವ ಮುಸ್ಲಿಮನ ಬಗ್ಗೆ ದೂರು ನೀಡಿದ್ದರು. ತಮ್ಮ ಒಂದು ಗುಡಿಯನ್ನು ಇದಿರು ಕಕ್ಷಿಯು ಅಕ್ರಮವಾಗಿ ಸ್ವಾಧೀನವಿರಿಸಿರುವರೆಂದು ದೂರಲಾಗಿತ್ತು. ಗುಡಿಗೆ ಸಂಬಂಧಿಸಿದ ಸೊತ್ತುಗಳನ್ನು ಅವರಿಗೆ ಹಸ್ತಾಂತರಿಸಿದಾಗ ಗುಡಿಯನ್ನೂ ಅಕ್ರಮವಾಗಿ ಸ್ವಾಧೀನ ಪಡಿಸಲಾಗಿತ್ತು. ಅದನ್ನು ಆತನಿಂದ ತೆರವುಗೊಳಿಸಲಿಕ್ಕಾಗಿ ಸ್ಥಾನೀಯ ಮಟ್ಟದಲ್ಲಿ ನಡೆಸಿದ ಪ್ರಯತ್ನಗಳು ವಿಫಲವಾದುದರಿಂದ ಹಿಂದುಗಳು ಮುಹ್ತಸಿಬ್ ರಾಗಿದ್ದ ನ್ಯಾಯಾಧೀಶ ಮುಹಮ್ಮದ್ ಇಕ್ಬಾಲ್ರಿಗೆ ದೂರು ಸಲ್ಲಿಸಿದರು. ಹಿಂದುಗಳ ವಾದವು ನಿಜವೆಂದು ಮನಗಂಡ ಮುಹ್ತಸಿಬ್ ಅವರ ಪರವಾಗಿ ತೀರ್ಪು ನೀಡಿದರು. ಇದು ಪಾಕಿಸ್ತಾನದಲ್ಲಿ ಇಸ್ಲಾಮಿ ವ್ಯವಸ್ಥೆಯು ಪೂರ್ಣರೂಪದಲ್ಲಿ ಜಾರಿಯಲ್ಲಿಲ್ಲದಿದ್ದರೂ ಧಾರ್ಮಿಕ ಅಲ್ಪಸಂಖ್ಯಾತರೊಂದಿಗಿನ ಧೋರಣೆಯು ಸಂಪೂರ್ಣ ನ್ಯಾಯೋಚಿತವಾಗಿದೆಯೆಂದು ಸಾಬೀತುಪಡಿಸುವ ಅನೇಕ ಘಟನೆಗಳಲ್ಲೊಂದಾಗಿದೆ.
ಇಸ್ಲಾಮಿ ಆಡಳಿತ ವ್ಯವಸ್ಥೆಯು ಜಾರಿಯಲ್ಲಿದ್ದಾಗ ನ್ಯಾಯಪಾಲನೆಯು ನಿಷ್ಪಕ್ಷಪಾತವಾಗಿದ್ದಿತು. ರಾಷ್ಟ್ರದ ಪ್ರಜೆಗಳ ಮಧ್ಯೆ ಯಾವುದೇ ರೀತಿಯ ತಾರತಮ್ಯವನ್ನೂ ತೋರಿಸುತ್ತಿರಲಿಲ್ಲ. ಏಕೆಂದರೆ ಇಸ್ಲಾಮ್ ಧರ್ಮ ಅದರ ಅನುಯಾಯಿಗಳಿಗೆ, ಜಾತಿ, ಧರ್ಮ, ದೇಶ, ಭಾಷೆ, ವರ್ಗ, ವರ್ಣ, ಪಕ್ಷಪಾತವಿಲ್ಲದೆ ಮಾನವರ ಮಧ್ಯೆ ಕಟ್ಟುನಿಟ್ಟಿನಿಂದ ನ್ಯಾಯ ಪಾಲಿಸಬೇಕೆಂದು ಆಜ್ಞಾಪಿಸುತ್ತದೆ.
IslamKannada News Portal
