Home / ವಾರ್ತೆಗಳು / ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿಯುವ ಮುಸ್ಲಿಂ ವಿದ್ಯಾರ್ಥಿಗಳಿಗೆ ‘ಸಂಸ್ಕೃತ’ ಪಾಠ

ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಲಿಯುವ ಮುಸ್ಲಿಂ ವಿದ್ಯಾರ್ಥಿಗಳಿಗೆ ‘ಸಂಸ್ಕೃತ’ ಪಾಠ

ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಯೊಂದರಲ್ಲಿ ‘ಮುತಅಲ್ಲಿಮ್'(ಧಾರ್ಮಿಕ ವಿದ್ಯಾಭ್ಯಾಸ ಕಲಿಯುವ ಮುಸ್ಲಿಂ ವಿದ್ಯಾರ್ಥಿ)ಗಳು ‘ಸಂಸ್ಕೃತ’ ಅಭ್ಯಾಸ ಮಾಡುತ್ತಿದ್ದು, ಶ್ಲೋಕಗಳು ಮತ್ತು ಮಂತ್ರಗಳನ್ನು ಪಠಿಸುತ್ತಿದ್ದಾರೆ. ಹಿಂದೂ ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಸಂಸ್ಕೃತ ಪಾಠ ನಡೆಯುತ್ತಿದೆ.

ತ್ರಿಶೂರ್ ಜಿಲ್ಲೆಯ ಸಕ್ತನ್ ನಗರದಲ್ಲಿರುವ ಮುಸ್ಲಿಂ ಶಿಕ್ಷಣ ಸಂಸ್ಥೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಗುರುಗಳು ಕೇಳುವ ವಿಭಿನ್ನ ಸಂಸ್ಕೃತ ಶ್ಲೋಕಗಳನ್ನು ಪಠಿಸುತ್ತಿದ್ದಾರೆ. ಶಿಕ್ಷಕರ ಜತೆ ಸಂಸ್ಕೃತ ಭಾಷೆಯಲ್ಲಿಯೇ ಮಾತನಾಡುವ ಪ್ರಯತ್ನ ಕೂಡ ಮಾಡುತ್ತಾರೆ. ತರಗತಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಎಲ್ಲ ಸಂಭಾಷಣೆಗಳೂ ಸಂಸ್ಕೃತದಲ್ಲಿಯೇ ನಡೆಸಲಾಗುತ್ತಿದೆ.

“ಮುಸ್ಲಿಂ ಮಕ್ಕಳಿಗೂ ಸಂಸ್ಕೃತ, ಉಪನಿಷದ್, ಪುರಾಣಗಳು ಮುಂತಾದವುಗಳನ್ನು ಕಲಿಸುವುದರ ಹಿಂದಿನ ಉದ್ದೇಶ, ಬೇರೆ ಧರ್ಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ತಿಳಿವಳಿಕೆ ಮೂಡಿಸುವುದಾಗಿದೆ” ಎಂದು ಮಾಲಿಕ್ ಬಿನ್ ದೀನಾರ್ ಇಸ್ಲಾಮಿಕ್ ಕಾಂಪ್ಲೆಕ್ಸ್ (ಎಂಐಸಿ) ನಡೆಸುತ್ತಿರುವ ಅಕಾಡೆಮಿ ಆಫ್ ಷರಿಯಾ ಮತ್ತು ಆಧುನಿಕ ಅಧ್ಯಯನಗಳು (ಎಎಸ್ಎಎಸ್) ಸಂಸ್ಥೆಯ ಪ್ರಾಂಶುಪಾಲ ಒನಂಪಿಲ್ಲಿ ಮುಹಮ್ಮದ್ ಫೈಝಿ ತಿಳಿಸಿದ್ದಾರೆ.

“ಬೇರೆ ಧರ್ಮಗಳು, ಅವರ ಸಂಪ್ರದಾಯ ಹಾಗೂ ಆಚರಣೆಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ನನಗೆ ಅನಿಸಿತ್ತು. ಆದರೆ, ಎಂಟು ವರ್ಷಗಳ ಕಲಿಕಾ ಅವಧಿಯಲ್ಲಿ ಸಂಸ್ಕೃತ ಮತ್ತು ಉಪನಿಷದ್‌ಗಳು, ಶಾಸ್ತ್ರಗಳು ಹಾಗೂ ವೇದಗಳ ಆಳವಾದ ಅಧ್ಯಯನ ಸಾಧ್ಯವಿಲ್ಲ” ಎಂದು ಮುಹಮ್ಮದ್ ಫೈಝಿ ತಿಳಿಸಿದ್ದಾರೆ.

ಭಗವದ್ಗೀತೆ, ಉಪನಿಷದ್, ಮಹಾಭಾರತ, ರಾಮಾಯಣದ ಆಯ್ದ ಮಹತ್ವದ ಭಾಗಗಳನ್ನು ಎಂಟು ವರ್ಷಗಳ ಅವಧಿಗೆ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸಲು ಆಯ್ಕೆ ಮಾಡಲಾಗಿದೆ. 10ನೇ ತರಗತಿ ಉತ್ತೀರ್ಣರಾದ ಬಳಿಕ ಈ ಶಿಕ್ಷಣ ನೀಡಲಾಗುತ್ತಿದೆ.

ಈ ಪಾಠಗಳನ್ನು ಆಯ್ಕೆಯ ವಿಷಯಗಳಾಗಿ ಕಲಿಸಲಾಗುತ್ತಿದೆ. ಕೊಲ್ಕತ್ತಾ ವಿಶ್ವವಿದ್ಯಾನಿಲಯದ ಅಧೀನಕ್ಕೆ ಒಳಪಟ್ಟಿರುವ ಈ ಷರಿಯಾ ಶಿಕ್ಷಣ ಸಂಸ್ಥೆಯಲ್ಲಿ ಕಲಾ ವಿಭಾಗದ ಪದವಿ ಕೋರ್ಸ್‌ಗಳ ಜೊತೆಗೆ ಉರ್ದು ಮತ್ತು ಆಂಗ್ಲ ಭಾಷೆಯನ್ನು ಕೂಡ ಆಯ್ಕೆಯ ವಿಷಯಗಳನ್ನಾಗಿ ಕಲಿಸಲಾಗುತ್ತಿದೆ.

“ಶೈಕ್ಷಣಿಕ ಕೆಲಸದ ಹೊರೆ ತುಂಬಾ ಹೆಚ್ಚಿದೆ. ಹೀಗಾಗಿ ಅದನ್ನು ನಿಭಾಯಿಸಲು ಸಾಧ್ಯವಾಗುವಂತಹ ವಿದ್ಯಾರ್ಥಿಗಳನ್ನು ನಾವು ತೆಗೆದುಕೊಳ್ಳುತ್ತೇವೆ. ವಿದ್ಯಾರ್ಥಿಗಳ ಪ್ರವೇಶಾತಿಗೆ ಪ್ರವೇಶ ಪರೀಕ್ಷೆ ಕೂಡ ಇದೆ. ಯಾರಿಂದಲೂ ಈವರೆಗೂ ನಕಾರಾತ್ಮಕ ಅಥವಾ ಧೃತಿಗೆಡಿಸುವ ಮಾತುಗಳು ಕೇಳಿಬಂದಿಲ್ಲ. ಇದನ್ನು ಕೇಳಿದವರೆಲ್ಲರೂ ಶ್ಲಾಘಿಸಿದ್ದಾರೆ ಮತ್ತು ನಮಗೆ ಪ್ರೋತ್ಸಾಹ ನೀಡಿದ್ದಾರೆ” ಎಂದು ಮುಹಮ್ಮದ್ ಫೈಝಿ ತಿಳಿಸಿದ್ದಾರೆ.

“ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರಿಂದಾಗಲೀ ಅಥವಾ ಬೇರೆ ಯಾರಿಂದಲೂ ಆಕ್ಷೇಪ ವ್ಯಕ್ತವಾಗಿಲ್ಲ. ನನ್ನನ್ನು ಇಲ್ಲಿಗೆ ಆಹ್ವಾನಿಸಿದಾಗ, ನಾನೊಬ್ಬ ಹಿಂದೂವಾಗಿರುವುದರಿಂದ ಅರೇಬಿಕ್ ಸಂಸ್ಥೆಯಲ್ಲಿ ಕಲಿಸುವುದರ ಬಗ್ಗೆ ಆತಂಕವಿತ್ತು. ಆದರೆ, ಇಲ್ಲಿ ಹಿಂದೂ ಅಥವಾ ಮುಸ್ಲಿಂ ಸಮಸ್ಯೆಯೇ ಇಲ್ಲ. ನಾನು ಕಲಿಸಲು ಸಿದ್ಧನಾಗಿ ಬರುತ್ತಿದ್ದೇನೆ. ಹೀಗಾಗಿ ನನ್ನಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲ” ಎಂದು ಸಂಸ್ಕೃತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಕೆ ಕೆ ಯತೀಂದ್ರನ್ ತಿಳಿಸಿದ್ದಾರೆ.

“ಹಣೆಗೆ ತಿಲಕ ಇರಿಸಿಕೊಂಡು ಅರೇಬಿಕ್ ಶಿಕ್ಷಣ ಸಂಸ್ಥೆ ಕಡೆಗೆ ತೆರಳುವ ನನ್ನನ್ನು ಅನೇಕರು ವಿಚಿತ್ರವಾಗಿ ನೋಡಿ ಪ್ರಶ್ನಿಸುತ್ತಿದ್ದರು. ನಿಮಗೆ ಅಲ್ಲಿ ಏನು ಕೆಲಸ ಎಂದು ಕೇಳುತ್ತಿದ್ದರು. ಇಲ್ಲಿ ಧಾರ್ಮಿಕ ವಿದ್ಯಾಭ್ಯಾಸ ಕಲಿಯುತ್ತಿರುವ ಮುಸ್ಲಿಂ ಮಕ್ಕಳಿಗೆ ಸಂಸ್ಕೃತ ಕಲಿಸುವುದಾಗಿ ಹೇಳಿದಾಗ ಅವರೆಲ್ಲ ಅಚ್ಚರಿಪಡುತ್ತಿದ್ದರು” ಎಂದು ಯತೀಂದ್ರನ್ ಹೇಳಿದ್ದಾರೆ.

ಮುಸ್ಲಿಂ ಶಿಕ್ಷಣ ಸಂಸ್ಥೆಯ ಈ ನಡೆಯು ‘ಸೋಷಿಯಲ್ ಮೀಡಿಯಾ’ಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …