ಅನುಬಂಧ-2
(ಖ್ಯಾತ ವಿದ್ವಾಂಸ, ಚಿಂತಕ ಮತ್ತು ಇತಿಹಾಸ ಸಂಶೋಧಕರಾದ ಶ್ರೀ ಬಿ.ಎನ್. ಪಾಂಡೆ 1985ರ ಡಿಸೆಂಬರ್ 19, 20, 21ರಂದು ಪಾಟ್ನಾದಲ್ಲಿ ಜರಗಿದ ‘ಖುದಾ ಬಕ್ಷ್’ ವಾರ್ಷಿಕ ಸಮಾರಂಭದಲ್ಲಿ ಮಾಡಿದ ಭಾಷಣಗಳ ಸಂಗ್ರಹವಾಗಿರುವ ‘ಇಸ್ಲಾಮ್ ಏಂಡ್ ಇಂಡಿಯನ್ ಕಲ್ಚರ್’ ಎಂಬ ಪುಸ್ತಕದ ಆಯ್ದ ಭಾಗಗಳನ್ನು ಇಲ್ಲಿ ಅನುಬಂಧವಾಗಿ ಸೇರಿಸಲಾಗಿದೆ.)
ಭಾರತೀಯ ಇತಿಹಾಸದ ಕುರಿತು ವ್ಯಾಪಕ ಮತ್ತು ಗಹನವಾದ ನಿಷ್ಪಕ್ಷ ಅಧ್ಯಯನ ತುರ್ತಾಗಿ ನಡೆಯಬೇಕಾಗಿದೆ. ಈ ಅಧ್ಯಯನವು ಹಿಂದಿಗಿಂತ ಇಂದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಇತಿಹಾಸವನ್ನು ಪೌರಾಣಿಕ ಇತಿಹಾಸ, ಆಧುನಿಕ ಇತಿಹಾಸ, ಮಧ್ಯಕಾಲೀನ ಇತಿಹಾಸವೆಂದು ವಿಂಗಡಿಸಬಹುದೇ ಎಂಬ ಪ್ರಶ್ನೆ ಪ್ರಸ್ತುತವಾಗಿದೆ. ಆಕ್ಸ್ಫರ್ಡ್ನ ಮಾನ್ಯ ಪ್ರೊಫೆಸರ್ ಫ್ರೀಮ್ಯಾನ್ರು, ಇತಿಹಾಸದ ಮುಂದುವರಿಕೆ ಮತ್ತು ಐಕ್ಯದ ಭದ್ರತೆಯೇ ಆಧುನಿಕ ವೈಜ್ಞಾನಿಕ ದೃಷ್ಟಿಕೋನದಿಂದ ಇತಿಹಾಸವನ್ನು ಕಲಿಸುವುದರ ಮೂಲ ಸಿದ್ಧಾಂತವೆಂದು ಹೇಳಿದ್ದಾರೆ.
ಅದನ್ನು ಸಮರ್ಥಿಸಿ ಡಾ| ಬಿ.ಆರ್. ಭಂಡಾರ್ಕರ್ ಹೀಗೆ ಹೇಳಿದ್ದಾರೆ: “ಭಾರತದ ಇತಿಹಾಸವನ್ನು ಮೂರು ಭಾಗ ಮಾಡಿ ಹಿಂದೂ ಕಾಲ, ಮುಹಮ್ಮದೀಯ ಕಾಲ, ಬ್ರಿಟಿಷ್ ಕಾಲವೆಂದು ಹೇಳಲು ಸಾಧ್ಯವಿಲ್ಲ. ಹಾಗೆ ಹೇಳುವುದು ಮಹಾ ಅವಿವೇಕತನವಾಗಿದೆ. ಒಂದನೆಯದಾಗಿ, ಇತಿಹಾಸವು ಹಿಂದು, ಮುಸ್ಲಿಮ್, ಕ್ರೈಸ್ತವಾಗಿರುವಂತೆಯೇ ಪೌರಾಣಿಕ, ಮಧ್ಯಕಾಲ ಮತ್ತು ಆಧುನಿಕವೂ ಆಗಿರುತ್ತದೆ. ಸಾಮುದಾಯಿಕ ಆಧಾರದಲ್ಲಿರುವ ಭಾರತೀಯ ಇತಿಹಾಸದ ವಿಭಜನೆಯನ್ನು ಎಲ್ಲ ಇತಿಹಾಸ ಪುಸ್ತಕಗಳಿಂದಲೂ ತೆಗೆದು ಹಾಕಬೇಕು. ಎರಡನೆಯದಾಗಿ, ಪ್ರಸ್ತುತ ವಿಭಜನೆಯು ಅಧ್ಯಯನಕ್ಕೆ, ವಿಶೇಷತಃ ಸಾಂಸ್ಕೃತಿಕ ವಿಶ್ಲೇಷಣೆಗೆ ಸಹಾಯಕವಾಗಬಹುದು. ಆದರೆ ಇತಿಹಾಸವು ಮುಂದುವರಿಕೆಯಾಗಿದೆಯೆಂಬ ವಿಷಯವನ್ನು ಯಾವಾಗಲೂ ಗಮನದಲ್ಲಿರಿಸಬೇಕು. ವಿಶೇಷ ಅಧ್ಯಯನಗಳಿಗಾಗಿ ಮಾತ್ರ ಇತಿಹಾಸ ಕಾಲಗಳನ್ನು ತಾತ್ಕಾಲಿಕವಾಗಿ ವಿಭಜಿಸಬಹುದಾಗಿದೆ. ಇದು ಇತಿಹಾಸದ ಮೂಲ ತತ್ವವೆಂದು ಇತಿಹಾಸ ವಿದ್ಯಾರ್ಥಿಗಳೆಲ್ಲರೂ ಒಪ್ಪುತ್ತಾರೆ.
ಭಾರತದ ವಿವಿಧ ಧಾರ್ಮಿಕ ಸಮುದಾಯಗಳಲ್ಲಿರುವ ಪರಸ್ಪರ ಅನೈಕ್ಯ, ಅಸಹಿಷ್ಣುತೆ ಮತ್ತು ಅಪನಂಬಿಕೆಯ ಕಾರಣಗಳನ್ನು ನಾವು ಪರಿಶೀಲಿಸಬೇಕಾಗಿದೆ. ಈ ತಪ್ಪುತಿಳುವಳಿಕೆಯು ನಾನಾ ರೂಪದಲ್ಲಿ ಹುಟ್ಟಿ ಹಲವು ಭಾವಗಳನ್ನು ಪ್ರದರ್ಶಿಸುತ್ತದೆ. ಉಭಯ ವರ್ಗದ ಸಂಪ್ರದಾಯವಾದಿಗಳು ಭಾರತೀಯ ಇತಿಹಾಸದ ವಾಸ್ತವಿಕಾಂಶಗಳನ್ನು ದುರ್ವ್ಯಾಖ್ಯಾನಿಸಿ ಇತಿಹಾಸದ ಘಟನೆಗಳನ್ನು ತಮ್ಮ ವಿಚಾರಧಾರೆಗೆ ಅನುಕೂಲವಾಗುವ ರೀತಿಯಲ್ಲಿ ಮಂಡಿಸಲು ಪ್ರಯತ್ನಿಸಿರುವುದು ಕಂಡು ಬರುತ್ತದೆ. ಜನಸಮುದಾಯ ಮತ್ತು ಅವರ ಧ್ಯೇಯಗಳ ಬಗ್ಗೆ ನಮ್ಮ ನಿರ್ಣಯವು ಅತಿರಂಜಿತವಾಗಿರುವುದೇ ಎಲ್ಲ ಗೊಂದಲಗಳಿಗೆ ಕಾರಣ. ಕ್ಷುಲ್ಲಕ ಘಟನೆಗಳನ್ನು ಎತ್ತಿ ಹಿಡಿದು ಧರ್ಮ, ವಿವಾದ, ಕಾನೂನು ಮತ್ತು ಶಿಸ್ತು ಪಾಲನೆಯ ಕ್ರಮ ಅವುಗಳನ್ನು ಉದ್ದೇಶಪೂರ್ವಕ, ಏಕಪಕ್ಷೀಯ ಅಥವಾ ಯೋಜಿತವೆಂದು ಪ್ರತಿಬಿಂಬಿಸಲು ಪ್ರಯತ್ನಿಸಲಾಗುತ್ತದೆ. ಈ ಸಂಶಯವು ಜೀವನದ ದೃಷ್ಟಿಕೋನಗಳನ್ನು ಸಂಪೂರ್ಣ ಅಡಿಮೇಲುಗೊಳಿಸುವ ಆಚಾರ, ನಡವಳಿಕೆ, ವಸ್ತ್ರಧಾರಣೆ ಅಥವಾ ಭಾಷೆಯಲ್ಲಿರುವ ಸಹಜ ಭಿನ್ನತೆಗಳನ್ನು ವೈಭವೀಕರಿಸಿ ಸಾಂಸ್ಕೃತಿಕ ರಂಗಗಳಲ್ಲಿಯೂ ಆರ್ಥಿಕ- ಸಾಮಾಜಿಕ-ರಾಜಕೀಯ ಆಧ್ಯಾತ್ಮಿಕ ರಂಗಗಳಲ್ಲಿಯೂ ಅಪಾರ ಭಿನ್ನತೆಗಳಿವೆಯೆಂದು ಚಿತ್ರೀಕರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವನಾದರೂ ವ್ಯಕ್ತಿ ಅಥವಾ ಕೆಲವಾರು ಜನರ ಸ್ವಂತ ಸಮಸ್ಯೆಗಳಿಂದಾಗುವ ಜಗಳಗಳು ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಮುದಾಯಿಕ ಅಸಹಿಷ್ಣುತೆಗೆ ಪ್ರೇರಕವಾಗುವುದರಲ್ಲಿ ಅಚ್ಚರಿಯಿಲ್ಲ.
ಇದು ಗಂಭೀರ ಸಮಸ್ಯೆಯಾಗಿದೆ. ಏಕೆಂದರೆ, ನಮ್ಮ ಶಾಲಾ ಕಾಲೇಜುಗಳಲ್ಲಿ ತಲೆ ತಲಾಂತರಗಳಿಂದ ಕಲಿಸಲಾಗುತ್ತಿರುವ ಭಾರತೀಯ ಇತಿಹಾಸಗಳು ಐರೋಪ್ಯ ಬರಹಗಾರರು ಕ್ರೋಡೀಕರಿಸಿದ್ದಾಗಿದೆ. ತಮ್ಮ ಐರೋಪ್ಯ ಗುರುಗಳು ತುರುಕಿಸಿದ ಪಕ್ಷಪಾತೀ ಕೃತಿಗಳನ್ನು ಕಿತ್ತೊಗೆಯುವ ಭಾರತೀಯರ ಪ್ರಯತ್ನ ಈ ತನಕ ಯಶಸ್ವಿಯಾಗಿಲ್ಲ. ಅದೇ ವೇಳೆ ಈ ಸ್ವಯಂಘೋಷಿತ ಇತಿಹಾಸಗಾರರು ರಾಷ್ಟ್ರೀಯ ಜೀವನವನ್ನು ಮಲಿನಗೊಳಿಸುವಂತಹ, ಅಳಿಸಲಾಗದ ಕಲೆಗಳನ್ನು ತಮ್ಮ ವಾಚಕರ ಮನದಲ್ಲಿ ಮೂಡಿಸುತ್ತಾರೆ. ಇವರು ಮುಖ್ಯವಾಗಿ, ಹಿಂದುಗಳ ಮತ್ತು ಮುಸ್ಲಿಮರ ಮಧ್ಯೆ ನಡೆದ ಆಕ್ರಮಣ, ಯುದ್ಧ, ಗಲಭೆ, ಬಲಾತ್ಕಾರ, ಮತಭ್ರಾಂತಿಗಳನ್ನು ಚಿತ್ರಿಸಿ ತೋರಿಸುತ್ತಾರೆ. ಇವರು ಮುಸ್ಲಿಮರನ್ನು ಹಿಂದೂ ಸಂಸ್ಕೃತಿ ಮತ್ತು ಆಚಾರವನ್ನು ನಾಶಪಡಿಸಿದವರು, ದುಷ್ಟರು, ವಿಗ್ರಹ ಭಂಜಕರು, ಹಿಂದುಗಳನ್ನು ಬಲಾತ್ಕಾರವಾಗಿ ಮತಾಂತರಗೊಳಿಸಿದವರು, ನಿರಾಕರಿಸಿದವರನ್ನು ಖಡ್ಗದಿಂದ ಕೊಂದವರೆಂದು ಮುಂತಾಗಿ ಪ್ರಸ್ತುತಪಡಿಸುತ್ತಾರೆ.
ಭಾರತದ ವಿದ್ಯಾವಂತ ಜನರೂ ಈ ವಿಷಲಿಪ್ತ ಪ್ರಚಾರವನ್ನು ನಂಬಿ ಜೀವನದ ವಸಂತದಲ್ಲಿ ಪರಸ್ಪರ ವೈರ-ವಿದ್ವೇಷದಿಂದ ವೀಕ್ಷಿಸುತ್ತಿರುವುದು ಅಚ್ಚರಿದಾಯಕವಾಗಿದೆ.
800 ವರ್ಷಗಳಷ್ಟು ಸುದೀರ್ಘವಾದ ಭಾರತೇತಿಹಾಸದ ಮುಸ್ಲಿಮ್ ಕಾಲಘಟ್ಟವು ಒಂದು ಕರಾಳ ರಾತ್ರಿಯೆಂದು ಹಿಂದುಗಳನ್ನು ನಂಬಿಸಲಾಗಿದೆ. ಈ ಕಾಲಾವಧಿಯಲ್ಲಿ ಅಭಿಮಾನ ಪಡುವಂಥ ಯಾವುದೂ ಅವರಿಗೆ ಕಾಣಿಸುವುದಿಲ್ಲ. ಪಾಶ್ಚಾತ್ಯ ಕ್ರೈಸ್ತ ರಾಷ್ಟ್ರದ ಹಸ್ತಗಳಿಂದ ಅಧಿಕಾರ ಕಳೆದುಕೊಂಡ ಮುಸ್ಲಿಮರಾದರೋ ತಮ್ಮನ್ನು ಕೇವಲ ಆಕ್ರಮಣಕಾರಿಗಳೆಂದು ಹಿಂದುಗಳು ಚಿತ್ರಿಸುತ್ತಿರುವುದನ್ನು ಸಹಿಸಬೇಕಾಗುತ್ತದೆ. ತಮ್ಮ ಹಳೆಯ ಪ್ರತಾಪ, ಸಾಧನೆ ಮತ್ತು ಸಾಂಸ್ಕೃತಿಕ ಪ್ರಗತಿಯನ್ನು ನಿರ್ಲಕ್ಷಿಸುತ್ತಿರುವುದನ್ನು ಸಹಿಸದೆ ಅವುಗಳಲ್ಲಿ ಪ್ರತಿಷ್ಠೆಯ ಅಂಶಗಳನ್ನು ಗುರುತಿಸುತ್ತಾರೆ. ಈ ಭಾವನೆಗಳನ್ನು ಇತಿಹಾಸಗಾರರು ಹೇಗೆ ಶೋಷಿಸಿದರೆಂದು ಸರ್.ಎಚ್.ಎಮ್, ಈಲಿಯೆಟ್ರ ‘ಸ್ವಂತ ಇತಿಹಾಸಗಾರರು ಹೇಳಿದ ಭಾರತದ ಚರಿತ್ರೆ’ (History of India as told by its own Historians) ಎಂಬ ಗ್ರಂಥವು ಸ್ಪಷ್ಟಪಡಿಸುತ್ತದೆ. ಅದರ ಮುನ್ನುಡಿಯಲ್ಲಿ ಹೀಗೆ ಹೇಳಲಾಗಿದೆ.
“ನಾವು ರಾಜಂದಿರನ್ನು ನೋಡಿದೆವು… ಅವರು ಅಕ್ರಮಗಳಲ್ಲಿ ಮುಳುಗಿ ಹೋಗಿದ್ದಾರೆ. ಅಂಥ ಆಡಳಿತಗಾರರ ಅಧೀನದಲ್ಲಿ ನ್ಯಾಯದ ಬುನಾದಿಯೇ ಕುಸಿದು ಬಿದ್ದುದರಲ್ಲಿ ಅಚ್ಚರಿಯಿಲ್ಲ. ಭ್ರಷ್ಟಾಚಾರ ಎಲ್ಲೆಡೆ ವ್ಯಾಪಿಸಿತ್ತು. ಬಲಪ್ರಯೋಗಿಸದೆ ಕರ ವಸೂಲು ಮಾಡಲು ಸಾಧ್ಯವಿರಲಿಲ್ಲ. ಅಕ್ರಮಗಳು ತಾಂಡವವಾಡಿದುವು. ಗ್ರಾಮಗಳನ್ನು ಸುಟ್ಟು ಹಾಕಲಾಯಿತು. ಜನರನ್ನು ಹಿಂಸಿಸಿ ಗುಲಾಮಗೊಳಿಸಲಾಯಿತು. ಅವರಿಗೆ ಭದ್ರತೆ ಒದಗಿಸಬೇಕಾದ ಅಧಿಕಾರಿಗಳೇ ದರೋಡೆ ಮಾಡಿದರು. ದುಷ್ಟರನ್ನು ದಂಡಿಸುವ ಬದಲಾಗಿ ಜನ ಸಾಮಾನ್ಯರು ಅವರ ಅಕ್ರಮಗಳನ್ನು ಸಹಿಸಬೇಕಾಯಿತು.
ಈ ಪುಸ್ತಕದ ಇತರ ಕೆಲವು ವಾಕ್ಯಗಳನ್ನು ಗಮನಿಸಿರಿ- “ಮುಸ್ಲಿಮರೊಡನೆ ಸಂಘರ್ಷಿಸಿ ಹಿಂದುಗಳು ಹತರಾದರು. ವಿಗ್ರಹಗಳನ್ನು ಧ್ವಂಸಗೊಳಿಸಲಾಯಿತು. ಹಿಂದೂ ದೇವಾಲಯಗಳನ್ನು ಮಲಿನಗೊಳಿಸಿ ಬಲಾತ್ಕಾರದಿಂದ ಮತಾಂತರ ಮತ್ತು ವಿವಾಹಗಳನ್ನು ನೆರವೇರಿಸಲಾಯಿತು. ಅಕ್ರಮ ಸ್ವಾಧೀನ ಮತ್ತು ಜಪ್ತಿ ಹೆಚ್ಚಿತು. ಸಾಮೂಹಿಕ ಹತ್ಯೆಗಳೂ ನಡೆದುವು. ಇದು ಅತಿಶಯೋಕ್ತಿಯಲ್ಲ.”
ಬ್ರಿಟಿಷರು ಒಡೆದು ಆಳುವ ತಂತ್ರವನ್ನು ಹೇಗೆ ರೂಪಿಸಿದರೆಂದು ಅವರ ಅಧಿಕೃತ ದಾಖಲೆಗಳಿಂದಲೇ ಗ್ರಹಿಸಬಹುದು. ಎಲ್ಜೀನ್ ದೊರೆಯ ರಾಜ್ಯ ಕಾರ್ಯದರ್ಶಿ ಹಿಂದೆ ಹೀಗೆ ಬರೆದಿದ್ದರು. “ಒಂದು ವಿಭಾಗವನ್ನು ಇನ್ನೊಂದು ವಿಭಾಗದ ವಿರುದ್ಧ ಕೆರಳಿಸಿ ಭಾರತದಲ್ಲಿ ನಮ್ಮ ಅಧಿಕಾರವನ್ನು ಭದ್ರಪಡಿಸಲಾಗುತ್ತಿದೆ. ಈ ನೀತಿಯನ್ನು ಕಾಯ್ದುಕೊಳ್ಳಬೇಕು. ಅದಕ್ಕಾಗಿ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು. ಅದರಿಂದ ಸಾಮೂಹಿಕ ಭಾವನೆ ಬೆಳೆಯದಂತೆ ತಡೆಯಬಹುದು.” (ವುಡ್ ಪೇಪರ್: ವುಡ್ ಟು ಎಲ್ಜೀನ್, ಮಾರ್ಚ್ 3, 1862)
ಭಾರತದ ಕಾರ್ಯದರ್ಶಿ ಜೋರ್ಜ್ ಫ್ರಾನ್ಸಿಸ್ ಹೆಮಿಲ್ಟನ್, ಕರ್ಝನ್ ದೊರೆಗೆ ಹೀಗೆ ಬರೆದರು: “ನನ್ನ ಅಭಿಪ್ರಾಯದಲ್ಲಿ ಭಾರತದಲ್ಲಿ ನಮ್ಮ ಆಡಳಿತಕ್ಕೆ ಈಗ ಬೆದರಿಕೆಯಿಲ್ಲ- 50 ವರ್ಷಗಳ ಬಳಿಕ ಅದು ತೀವ್ರವಾಗಬಹುದು. ಅಷ್ಟರಲ್ಲಿ ಪಾಶ್ಚಾತ್ಯ ತತ್ವಸಿದ್ಧಾಂತ ಮತ್ತು ಹೋರಾಟಗಳು ಪ್ರಬಲವಾಗುವುವು. ಆದ್ದರಿಂದ ತೀರಾ ಭಿನ್ನವಾದ ವಿಚಾರ ಧಾರೆಗಳಲ್ಲಿ ಭಾರತದ ಬುದ್ಧಿ ಜೀವಿಗಳನ್ನು ನಾವು ಎರಡು ವಿಭಾಗಗಳಾಗಿ ಒಡೆಯಬೇಕು. ಹಾಗೆ ಮಾಡಿದರೆ ಮಾತ್ರ ನಮ್ಮ ಸ್ಥಾನವನ್ನು ಬಲಪಡಿಸಬಹುದು. ಶೈಕ್ಷಣಿಕ ಪ್ರಚಾರ ಮಾಧ್ಯಮಗಳಿಂದ ಹಾಗೆ ಮಾಡುವುದು ನಮ್ಮ ಆಡಳಿತ ನೀತಿಯಾಗಿರಬೇಕು. ಶೈಕ್ಷಣಿಕ ರಂಗದಲ್ಲಿ ಪಾಠ ಪುಸ್ತಕಗಳ ಮೂಲಕ ಸಮುದಾಯಗಳನ್ನು ಒಡೆಯುವ ಯೋಜನೆಗಳನ್ನು ನಾವು ಸಮರ್ಥವಾಗಿ ಜಾರಿಗೊಳಿಸಬೇಕಾಗಿದೆ.” (ಹೆಮಿಲ್ಟನ್ ಟು ಕರ್ಝನ್, 26, ಮಾರ್ಚ್, 1888)
ಕ್ರಾಸ್, ರಾಜ್ಯಪಾಲ ಡಫ್ರಿನ್ನಿಗೆ ಹೀಗೆ ತಿಳಿಸಿದ್ದರು: “ಧಾರ್ಮಿಕ ಭಾವನೆಗಳನ್ನು ನೋಯಿಸುವ ನೀತಿಯು ನಮಗೆ ಬಹಳ ಉಪಯುಕ್ತವಾಗಿದೆ. ಭಾರತದ ಶಿಕ್ಷಣ ಮತ್ತು ಅಧ್ಯಯನ ವಿಷಯಗಳಿಗೆ ಸಂಬಂಧಪಟ್ಟ ನಿಮ್ಮ ಸಮೀಕ್ಷಾ ಮಂಡಳಿಯಿಂದಲೂ ಕೆಲವು ಅಂಶಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. (ಕ್ರೋಸ್ ಟು ಡಫ್ರಿನ್, 14, ಜನವರಿ 1887)
ಈ ರೀತಿಯ ಯೋಜಿತ ನೀತಿಯಿಂದ ಭಾರತದ ಇತಿಹಾಸ ಪಠ್ಯ ಪುಸ್ತಕಗಳನ್ನು ವಿಕೃತಗೊಳಿಸಲಾಯಿತು. ಮಧ್ಯಕಾಲೀನ ಭಾರತೇತಿಹಾಸದಲ್ಲಿ ಮುಸ್ಲಿಮ್ ಆಡಳಿತಗಾರರು ಹಿಂದೂ ಪ್ರಜೆಗಳನ್ನು ಪೀಡಿಸಿದರು, ಮುಸ್ಲಿಮರ ಆಡಳಿತದಲ್ಲಿ ಹಿಂದುಗಳು ಅಸಹ್ಯ ಸಂಕಷ್ಟಗಳನ್ನು ಅನುಭವಿಸಬೇಕಾಯಿತು ಎಂಬ ಸುಳ್ಳುಗಳನ್ನು ತುರುಕಿಸಲಾಯಿತು. ಸಾಮಾಜಿಕ, ರಾಜಕೀಯ, ಆರ್ಥಿಕ ಜೀವನದಲ್ಲಿ ಯಾವುದೇ ಹೊಂದಾಣಿಕೆಯಿರಲಿಲ್ಲವೆಂದು ಪ್ರಚುರ ಪಡಿಸಲಾಗಿತ್ತು.
ಈ ಆರೋಪಗಳ ವಾಸ್ತವಿಕತೆಯನ್ನು ನಾವು ಗಂಭೀರವಾಗಿ ಪರಿಶೀಲಿಸಬೇಕಾಗಿದೆ.
ಸಮಕಾಲೀನ ಮುಸ್ಲಿಮ್ ಇತಿಹಾಸಗಾರರು ಏನು ಹೇಳಿರುವರೆಂದು ನೋಡೋಣ.
ಖಾಝಿ ಮೊಯಿಝುದ್ದೀನ್ ಹೀಗೆ ವಿಶ್ಲೇಷಿಸಿದ್ದಾರೆ: “ಮಧ್ಯಕಾಲೀನ ಶತಮಾನದಲ್ಲಿ ಭಾರತದ ರಾಷ್ಟ್ರ ನಾಯಕನು ಮುಸ್ಲಿಮನಾಗಿದ್ದರೂ ರಾಷ್ಟ್ರವು ಇಸ್ಲಾಮ್ ನಿಷ್ಠವಾಗಿರಲಿಲ್ಲ. ಪವಿತ್ರ ಗ್ರಂಥಗಳಾದ ಕುರ್ಆನ್ ಮತ್ತು ಹದೀಸ್ಗಳ ಆಜ್ಞಾನಿರ್ದೇಶಗಳನ್ನಾಗಲಿ, ಸುನ್ನೀ ನ್ಯಾಯಶಾಸ್ತ್ರದ ನಾಲ್ಕು ವಿಧದ ಅಧ್ಯಯನಗಳಲ್ಲಿರುವ ಕಾನೂನನ್ನಾಗಲಿ ರಾಷ್ಟ್ರವು ಪಾಲಿಸುತ್ತಿರಲಿಲ್ಲ. ಮಧ್ಯಕಾಲೀನ ಭಾರತ ದೇಶವು ಧರ್ಮಾಧಿಷ್ಠಿತವಾಗಿತ್ತೆನ್ನುವುದು ತಪ್ಪು, ಏಕೆಂದರೆ, ಮುಸ್ಲಿಮ್ ಧರ್ಮ ವಿದ್ವಾಂಸರ ಮಾರ್ಗದರ್ಶನದಂತೆ ಅದು ಕಾರ್ಯ ನಿರ್ವಹಿಸುತ್ತಿರಲಿಲ್ಲ.”
13ನೆಯ ಶತಮಾನದಿಂದೀಚೆಗಿನ ಭಾರತದ ಪ್ರತಿಯೊಬ್ಬ ಮುಸ್ಲಿಮ್ ರಾಜನೂ ಶರೀಅತ್ ಬದ್ಧ ಆಡಳಿತ ವ್ಯವಸ್ಥೆಯ ಕ್ಲಿಷ್ಟತೆ ಮತ್ತು ಅಸಾಧ್ಯತೆಗಳ ಬಗ್ಗೆಯೇ ಹೇಳುತ್ತಿದ್ದರು. ಅಲಮಿಷ್, ಬಾಲ್ಬನ್, ಅಲಾವುದ್ದೀನ್ ಖಿಲ್ಜಿ, ಮುಹಮ್ಮದ್ ತುಗ್ಲಕ್ ಮುಂತಾದ ಮೊಗಲರಿಗಿಂತ ಹಿಂದಿನ ರಾಜರು ಮುಸ್ಲಿಮ್ ಕಾನೂನುಗಳನ್ನು ಭಾರತದಲ್ಲಿ ಜಾರಿಗೊಳಿಸುವ ಔಚಿತ್ಯವನ್ನು ಪ್ರಶ್ನಿಸಿದ್ದರು. ಇತಿಹಾಸಗಾರ ಝಿಯಾವುದ್ದೀನ್ ಬರ್ನಿಯವರು ತಮ್ಮ ‘ಫತಾವಾ ಫಹಂದರಿ’ಯಲ್ಲಿ ಹೇಳುತ್ತಾರೆ:
“ಪ್ರವಾದಿಯವರ ಹೆಜ್ಜೆಗಳನ್ನು ಅನುಗಮಿಸುವುದೇ ನೈಜ ಧರ್ಮವಾಗಿದೆ. ಆದರೆ, ಅರಸೊತ್ತಿಗೆಗಳಿಗೆ ಕುಸ್ರು ಫರ್ವಾಝ್ ಮತ್ತು ಇರಾನ್ನ ಮಹಾ ರಾಜರ ನೀತಿಗಳನ್ನು ಮಾತ್ರ ಪಾಲಿಸಲು ಸಾಧ್ಯವಿತ್ತು.” “ಪ್ರವಾದಿ ಮುಹಮ್ಮದ್(ಸ) ಸಂಪ್ರದಾಯ (ಸುನ್ನತ್) ಮತ್ತು ಜೀವನ ವಿಧಾನಕ್ಕೂ ಇರಾನ್ ರಾಜಂದಿರ ಆಚಾರ ಮತ್ತು ಜೀವನ ವಿಧಾನಕ್ಕೂ ಬಹಳಷ್ಟು ಅಂತರವಿದೆ’ ಎಂದು ಅವರು ಒಪ್ಪಿಕೊಂಡಿದ್ದಾರೆ.
ಝಿಯಾವುದ್ದೀನ್ ಮುಂದೆ ಹೀಗೆಂದಿದ್ದಾರೆ: “ದೇವಾಜ್ಞೆಯಾಗಿರುವ ಶರೀಅತನ್ನು ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಮಾತ್ರ ರಾಜಕೀಯ ವ್ಯವಹಾರಗಳಲ್ಲಿ ಅವಲಂಬಿಸಬೇಕಾಗಿದೆ. ಪ್ರವಾದಿ ಮುಹಮ್ಮದ್ರಿಗೆ ಅಲ್ಲಾಹನ ನೇರ ಪ್ರೇರಣೆಯಿದ್ದುದರಿಂದ ಶರೀಅತ್ನ ಜಾರಿಯಲ್ಲಿ ಅವರು ಯಶಸ್ವಿಯಾದರು. ಪ್ರವಾದಿಯವರೊಂದಿಗಿನ ಒಡನಾಟದಿಂದ ನಾಲ್ವರು ಖಲೀಫರಿಗೂ ಅದು ಸಾಧ್ಯವಾಯಿತು. ಪ್ರವಾದಿತ್ವವು ಧರ್ಮದ ಪರಿಪೂರ್ಣತೆಯಾಗಿದ್ದರೂ ರಾಜಾಧಿಕಾರವು ಕೇವಲ ಭೌತಿಕ ಸಾಧನೆಯಾಗಿದ್ದಿತು. ಈ ಎರಡು ಗುಣವೈಶಿಷ್ಟ್ಯಗಳು ಪರಸ್ಪರ ವಿರುದ್ಧವಾಗಿದ್ದುವು. ಅವುಗಳ ಸಂಯೋಜನೆಯು ವ್ಯಾವಹಾರಿಕವಾಗಿರಲಿಲ್ಲ.
ನಾಝಿಮುದ್ದೀನ್ ಹೀಗೆ ಬರೆದಿದ್ದಾರೆ: “ಬಾಲ್ಬನನು ಆಡಳಿತ ವ್ಯವಹಾರಗಳಲ್ಲಿ ಧರ್ಮಕ್ಕಿಂತ ಸಂಪ್ರದಾಯಗಳಿಗೆ ಹೆಚ್ಚು ಆದ್ಯತೆ ನೀಡಿದ್ದನು.” (ತಬ್ಕಾತೆ ಅಕ್ಬರಿ, ಸಂಪುಟ:1, ಪುಟ:82)
ಬರ್ನಿ ಹೇಳಿದ್ದಾರೆ: “ಆತನು ಶಿಕ್ಷೆ ಮತ್ತು ರಾಜಾಧಿಕಾರದ ವಿಷಯದಲ್ಲಿ ದೇವನಿಗೆ ಹೆದರದೆ ವ್ಯವಹರಿಸಿದನು. ಸರಕಾರಕ್ಕೆ ಹಿತವೆಂದು ತೋಚಿದ ಎಲ್ಲವನ್ನೂ ಆತನು ಮಾಡಿದನು. ಅವು ಶರೀಅತ್ಗೆ ಬದ್ಧವಾಗಿವೆಯೇ ವಿರುದ್ಧವಾಗಿವೆಯೇ ಎಂಬುದನ್ನು ಆತ ಲೆಕ್ಕಿಸಲಿಲ್ಲ.” ಕಾಝಿ ಮೊಯಿಝುದ್ದೀನ್ ಮತ್ತು ಅಲಾವುದ್ದೀನ್ ಖಿಲ್ಜಿ ಯವರ ವಾದ ಪ್ರತಿವಾದ ಖ್ಯಾತವಾಗಿದೆಯಷ್ಟೆ ಕೊನೆಗೆ ಅವರು ಹೀಗೆ ಹೇಳಿ ಮುಗಿಸಿದ್ದರು: “ಸಮಯೋಚಿತ ಮತ್ತು ಸರಕಾರಕ್ಕೆ ಹಿತವೆಂದು ಮನಗಂಡ ಎಲ್ಲವನ್ನೂ ನಾನು ಆಜ್ಞಾಪಿಸುತ್ತೇನೆ. ಅಂತ್ಯ ದಿನದಲ್ಲಿ ಸರ್ವೋನ್ನತನಾದ ದೇವನು ನನ್ನನ್ನು ಹೇಗೆ ಪರಿಗಣಿಸುವನೆಂದು ತಿಳಿದಿಲ್ಲ.” (ತಾರೀಖೆ ಷಾಹಿ)
ಪ್ರೊ| ಎಮ್.ಹಬೀಬ್ ಹೀಗೆ ಹೇಳಿದ್ದಾರೆ: “ವಿದೇಶಗಳಿಂದ ಬಂದ ಮುಸ್ಲಿಮ್ ರಾಜರು ಆರೇಳು ಶತಮಾನಗಳ ಕಾಲ ಭಾರತದ ಸಿಂಹಾಸನದಲ್ಲಿ ಕುಳಿತಿದ್ದರೆಂಬುದು ನಿಜ. ಆದರೆ, ಅವರ ಆರೋಹಣವು ಮುಸ್ಲಿಮ್ ಆಡಳಿತದ ಸಿಂಹಾಸನದಲ್ಲಾಗಿರಲಿಲ್ಲ. ಹಾಗಿರುತ್ತಿದ್ದರೆ ಅವರು ಒಂದು ಪೀಳಿಗೆಯ ಕಾಲವೂ ಉಳಿಯುತ್ತಿರಲಿಲ್ಲ.” (ಮಿಡಿವಲ್ ಇಂಡಿಯಾ, ಕ್ವಾಟರ್ಲಿ ಪುಟ:5)
ಇನ್ನು, ಇತಿಹಾಸದ ವಾಸ್ತವಿಕತೆಗಳನ್ನು ಹೇಗೆ ತಿರುಚಲಾಯಿತೆಂಬುದನ್ನು ಸೂಚಿಸುವ ಕೆಲವು ಉದಾಹರಣೆಗಳನ್ನು ತಿಳಿಸುತ್ತೇನೆ:
1928ರಲ್ಲಿ ನಾನು ಅಲಹಾಬಾದ್ನಲ್ಲಿ ಟಿಪ್ಪುಸುಲ್ತಾನನ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾಗ ಆಂಗ್ಲೋ-ಬಂಗಾಳಿ ಕಾಲೇಜಿನ ವಿದ್ಯಾರ್ಥಿ ಸಂಘದ ಕೆಲವು ಪದಾಧಿಕಾರಿಗಳು ನನ್ನ ಸಂದರ್ಶನಕ್ಕೆ ಬಂದರು. ಅವರ ಇತಿಹಾಸ ಮಂಡಳಿಯನ್ನು ಉದ್ಘಾಟಿಸಬೇಕೆಂದೂ ವಿನಂತಿಸಿದರು. ಪಠ್ಯಪುಸ್ತಕಗಳನ್ನು ಕೈಯಲ್ಲಿ ಹಿಡಿದು ಕಾಲೇಜಿನಿಂದ ನೇರವಾಗಿ ಅವರು ಬಂದಿದ್ದರು. ಸಂದರ್ಭವಶಾತ್, ನಾನು ಅವರ ಇತಿಹಾಸ ಪಾಠ ಪುಸ್ತಕಗಳನ್ನು ಒಮ್ಮೆ ಅವಲೋಕಿಸಿದೆ. ಅದರ ಒಂದು ವಾಕ್ಯವು ನನ್ನನ್ನು ಬೆಚ್ಚಿಬೀಳಿಸಿತು: “ಮೂರು ಸಾವಿರ ಬ್ರಾಹ್ಮಣರನ್ನು ಟಿಪ್ಪು ಸುಲ್ತಾನ್ ಬಲಾತ್ಕಾರದಿಂದ ಇಸ್ಲಾಮಿಗೆ ಮತಾಂತರಿಸಲು ನಿರ್ಬಂಧಿಸಿದಾಗ ಅವರು ಆತ್ಮಹತ್ಯೆ ಮಾಡಿಕೊಂಡರು.” ಆ ಪುಸ್ತಕವನ್ನು ಕಲ್ಕತ್ತಾ ವಾರ್ಸಿಟಿಯ ಸಂಸ್ಕೃತ ವಿಭಾಗದ ವಿದ್ವಾನ್ ಮಹಾ ಮಹೋಪಾಧ್ಯಾಯ ಡಾ| ಹರಿಪ್ರಸಾದ್ ಶಾಸ್ತ್ರಿಯವರು ಬರೆದಿದ್ದರು. ಆ ಕೂಡಲೇ ನಾನು ಈ ಮಾಹಿತಿ ಎಲ್ಲಿಂದ ದೊರೆಯಿತೆಂದು ವಿಚಾರಿಸಿ ಡಾ| ಶಾಸ್ತ್ರಿಯವರಿಗೆ ಪತ್ರ ಬರೆದೆ. ಹಲವು ಬಾರಿ ತಿಳಿಸಿದ ಬಳಿಕ ಉತ್ತರ ಬಂತು. ಮೈಸೂರು ಗಝೆಟ್ನಲ್ಲಿ ಅವರಿಗೆ ಆ ಮಾಹಿತಿ ಲಭಿಸಿತ್ತಂತೆ. ಮೈಸೂರು ಗಝೆಟ್, ಅಲಹಾಬಾದ್ ಅಥವಾ ಕಲ್ಕತ್ತಾದ ಇಂಪೀರಿಯಲ್ ಲೈಬ್ರೆರಿಯಲ್ಲಿ ಲಭ್ಯವಿರಲಿಲ್ಲ, ಆದ್ದರಿಂದ ನಾನು ಶಾಸ್ತ್ರಿಯವರ ಹೇಳಿಕೆಯ ನಿಜಸ್ಥಿತಿಯನ್ನು ವಿಚಾರಿಸಿ ಮೈಸೂರು ವಾರ್ಸಿಟಿಯ ಅಂದಿನ ವೈಸ್ ಛಾನ್ಸಲರ್ ಸರ್ ಬೃಜೇಂದ್ರನಾಥ್ರಿಗೆ ಪತ್ರ ಬರೆದೆ. ಅವರು ಆ ಪತ್ರವನ್ನು, ಮೈಸೂರು ಗಝೆಟಿನ ಹೊಸ ಆವೃತ್ತಿಯ ತಯಾರಿಯಲ್ಲಿ ನಿರತರಾಗಿದ್ದ ಪ್ರೊ ಶ್ರೀಕಂಠಯ್ಯನವರಿಗೆ ರವಾನಿಸಿದರು.
ಪ್ರೊ| ಶ್ರೀ ಕಂಠಯ್ಯನವರು, 3,000 ಬ್ರಾಹ್ಮಣರು ಆತ್ಮಹತ್ಯೆ ಮಾಡಿಕೊಂಡ ಕಥೆ ಮೈಸೂರು ಗಝೆಟಿನಲ್ಲಿ ಇಲ್ಲವೆಂದು ನನಗೆ ತಿಳಿಸಿದರು. ಮೈಸೂರು ಇತಿಹಾಸದ ವಿದ್ಯಾರ್ಥಿಯೆಂಬ ನೆಲೆಯಲ್ಲಿ, ಅಂತಹ ಘಟನೆ ನಡೆದಿಲ್ಲವೆಂದು ಖಚಿತವಾಗಿ ಹೇಳಬಹುದಾಗಿದೆಯೆಂದೂ ಅವರು ಒತ್ತಿ ಹೇಳಿದರು. ಅನಂತರ ಅವರು, ಟಿಪ್ಪು ಸುಲ್ತಾನ್ನ ಪ್ರಧಾನಿಯಾಗಿದ್ದ ಪೂರ್ಣಯ್ಯ ಮತ್ತು ದಂಡಾಧಿಕಾರಿ ಕೃಷ್ಣ ರಾವ್ ರು ಬ್ರಾಹ್ಮಣರೆಂದೂ ತಿಳಿಸಿದ್ದರು. ಟಿಪ್ಪು ವಾರ್ಷಿಕ ಧನ ಸಹಾಯ ನೀಡುತ್ತಿದ್ದ 156 ಹಿಂದೂ ಕ್ಷೇತ್ರಗಳ ಯಾದಿಯನ್ನು ಅವರು ನನಗೆ ಕಳುಹಿಸಿ ಕೊಟ್ಟರು. ಟಿಪ್ಪು ಸುಲ್ತಾನ್ ರೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದ ಶೃಂಗೇರಿಯ ಜಗದ್ಗುರು ಶಂಕರಾಚಾರ್ಯರಿಗೆ ಟಿಪ್ಪು ಸುಲ್ತಾನ್ ಕಳುಹಿಸಿದ್ದ 30 ಪತ್ರಗಳ ಫೋಟೋ ಪ್ರತಿಗಳನ್ನು ಅವರು ನನಗೆ ಕಳುಹಿಸಿದರು. ಮೈಸೂರು ರಾಜರ ಪರಂಪರೆಯಂತೆ ಟಿಪ್ಪುಸುಲ್ತಾನ್ರು ಪ್ರತಿದಿನ ಬೆಳಗ್ಗಿನ ಉಪಹಾರಕ್ಕಿಂತ ಮುಂಚೆ ಶ್ರೀರಂಗ ಪಟ್ಟಣದ ಕೋಟೆಯೊಳಗಿರುವ ಶ್ರೀರಂಗನಾಥ ದೇವಾಲಯವನ್ನು ಸಂದರ್ಶಿಸುತ್ತಿದ್ದರು. ಡಾ| ಶಾಸ್ತ್ರಿಯವರು, ಕರ್ನಲ್ ಮೈಲ್ಸ್ನ ಸ್ವಯಂ ಘೋಷಿತ ‘ಮೈಸೂರು ಇತಿಹಾಸ’ ಎಂಬ ಪುಸ್ತಕವನ್ನು ಅವಲಂಬಿಸಿರಬಹುದೆಂದೂ ಪ್ರೊ| ಶ್ರೀಕಂಠಯ್ಯ ಅಭಿಪ್ರಾಯ ಪಟ್ಟಿದ್ದರು. ಇದು ವಿಕ್ಟೋರಿಯಾ ರಾಣಿಯ ಖಾಸಗಿ ಲೈಬ್ರೆರಿಯಲ್ಲಿ ದೊರೆತ ‘ಟಿಪ್ಪು ಸುಲ್ತಾನ್’ ಎಂಬ ಪರ್ಶಿಯನ್ ಹಸ್ತ ಪ್ರತಿಯ ಅನುವಾದವೆಂದೂ ವಾದಿಸಲಾಗಿತ್ತು. ಆ ಬಗ್ಗೆ ವಿಶೇಷ ಶೋಧ ನಡೆಸಿದಾಗ, ವಿಕ್ಟೋರಿಯಾ ರಾಣಿಯ ಲೈಬ್ರೆರಿಯಲ್ಲಿ ಅಂಥ ಹಸ್ತ ಪ್ರತಿಯಿಲ್ಲ. ಕರ್ನಲ್ ಮೈಲ್ಸ್ರ ಇತಿಹಾಸ ಪುಸ್ತಕದಲ್ಲಿರುವ ಹೆಚ್ಚಿನ ವಿವರಗಳು ಕಟ್ಟು ಕಥೆ ಮತ್ತು ಹಸಿ ಸುಳ್ಳೆಂದು ವ್ಯಕ್ತವಾಯಿತು.
ಡಾ| ಶಾಸ್ತ್ರಿಯವರ ಪುಸ್ತಕವನ್ನು ಬಂಗಾಳ, ಅಸ್ಸಾಮ್, ಬಿಹಾರ, ಒರಿಸ್ಸಾ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ರಾಜಸ್ತಾನಗಳಲ್ಲಿ ಹೈಸ್ಕೂಲು ಮಟ್ಟದ ಇತಿಹಾಸ ಪಠ್ಯವಾಗಿ ಅಂಗೀಕರಿಸಲಾಗಿತ್ತು. ನಾನು ಅಂದಿನ ಕಲ್ಕತ್ತಾ ವಾರ್ಸಿಟಿಯ ವೈಸ್ ಛಾನ್ಸಲರ್ ಅಷ್ಟೋಸ್ ಚೌಧರಿಯವರನ್ನು ಸಂಪರ್ಕಿಸಿ, ಡಾ| ಶಾಸ್ತ್ರಿ ಮೈಸೂರು ವಾರ್ಸಿಟಿಯ ವೈಸ್ ಛಾನ್ಸಲರ್ ಸರ್ ಬೃಜೇಂದ್ರನಾಥ್ ಸೀಲ್ ಮತ್ತು ಪ್ರೊ| ಶ್ರೀಕಂಠಯ್ಯನವರೊಡನೆ ನಡೆಸಿದ ಪತ್ರ ವ್ಯವಹಾರಗಳನ್ನು ಅವರಿಗೆ ರವಾನಿಸಿದೆ. ಪಾಠ ಪುಸ್ತಕದಲ್ಲಿರುವ ಆಕ್ಷೇಪಾರ್ಹ ವಿವರಣೆಯ ವಿರುದ್ಧ ಅವಶ್ಯಕ ಕ್ರಮಕೈಗೊಳ್ಳಬೇಕೆಂದೂ ವಿನಂತಿಸಿದೆ. ಡಾ| ಎಚ್.ವಿ. ಶಾಸ್ತ್ರಿಯವರ ಇತಿಹಾಸ ಪುಸ್ತಕವನ್ನು ಪಠ್ಯಪದ್ಧತಿಯಿಂದ ಕೈಬಿಟ್ಟಿರುವುದಾಗಿ ಸರ್, ಅಷ್ಟೋಸ್ ಚೌಧರಿಯವರು ನನಗೆ ಕೂಡಲೇ ಉತ್ತರ ಬರೆದರು.
ಆದರೆ, 1972ರಲ್ಲಿ ಉತ್ತರ ಪ್ರದೇಶದ ಹೈಸ್ಕೂಲಿನ 6,7,8ನೇ ತರಗತಿಗಳಿಗೆ ಸಿದ್ಧಪಡಿಸಿದ ಇತಿಹಾಸ ಪುಸ್ತಕಗಳಲ್ಲಿ ಈ ಆತ್ಮಹತ್ಯೆಯ ಕಥೆ ನೋಡಿ ನಾನು ದಂಗಾದೆ.
ಗಾಂಧೀಜಿಯವರ ‘ಯಂಗ್’ ಇಂಡಿಯಾ’ 1930ರ ಜನವರಿ 23ರ ಸಂಚಿಕೆಯ 31ನೆಯ ಪುಟದಲ್ಲಿ ಹೀಗೆ ಪ್ರಕಟಿಸಲಾಗಿತ್ತು: “ವಿದೇಶ ಇತಿಹಾಸಕಾರರು ಮೈಸೂರಿನ ಟಿಪ್ಪು ಸುಲ್ತಾನನನ್ನು ಮತಭ್ರಾಂತ, ಹಿಂದೂ ಪ್ರಜೆಗಳನ್ನು ಮರ್ದಿಸಿ ಇಸ್ಲಾಮ್ ಧರ್ಮ ಸ್ವೀಕರಿಸುವಂತೆ ಬಲಾತ್ಕಾರಿಸಿದವನೆಂದು ಚಿತ್ರಿಸಿದ್ದಾರೆ. ಆದರೆ, ಅವರು ಹಾಗಿರಲಿಲ್ಲ. ಬದಲಾಗಿ ಹಿಂದೂ ಪ್ರಜೆಗಳೊಡನೆ ಅವರ ಸಂಬಂಧವು ಬಹಳ ಸೌಹಾರ್ದಮಯವಾಗಿತ್ತು. ಮೈಸೂರು ಸಂಸ್ಥಾನದ ಪ್ರಾಚ್ಯವಸ್ತು ಇಲಾಖೆಯಲ್ಲಿ ಟಿಪ್ಪು ಸುಲ್ತಾನ್ರು ಶೃಂಗೇರಿ ಮಠದ ಶಂಕರಾಚಾರ್ಯರಿಗೆ ಬರೆದ ಸುಮಾರು 30 ಪತ್ರಗಳಿವೆ. ಆ ಪೈಕಿ ಒಂದು ಪತ್ರವನ್ನು 1793ರಲ್ಲಿ ಬರೆಯಲಾಗಿತ್ತು. (ಟಿಪ್ಪುವಿಗೆ ಶಂಕರಾಚಾರ್ಯರು ಕಳುಹಿಸಿದ ಪತ್ರ ತಲಪಿದೆಯೆಂದೂ ಅದರಲ್ಲಿ ತಿಳಿಸಲಾಗಿದೆ. ಅದರಲ್ಲಿ ಶಂಕರಾಚಾರ್ಯರೊಡನೆ ವಿಶ್ವ ಕಲ್ಯಾಣದಂತೆಯೇ ದೇಶ ಕಲ್ಯಾಣಕ್ಕಾಗಿಯೂ ಪ್ರಾರ್ಥಿಸುವಂತೆ ವಿನಂತಿಸಲಾಗಿದೆ. ಅವರನ್ನು ಮೈಸೂರಿಗೆ ಆಮಂತ್ರಿಸಿ ದೇಶದಲ್ಲಿ ಸಜ್ಜನರ ಸಾನ್ನಿಧ್ಯವು ಮಳೆ-ಬೆಳೆ ವೃದ್ಧಿಗೆ ಸಹಾಯಕ ಎಂದು ಹೇಳಲಾಗಿದೆ. ಅದು ಭಾರತೇತಿಹಾಸದಲ್ಲಿ ಸ್ವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಪತ್ರವಾಗಿದೆ. ಅನೇಕ ಸಂಸ್ಕೃತ ಪದಗಳಿರುವ ಆ ಪತ್ರದ ಕೆಲವು ವಾಕ್ಯಗಳನ್ನು ಯಥಾವತ್ತಾಗಿ ಉಲ್ಲೇಖಿಸುತ್ತೇನೆ.
ಶ್ರೀ ಮದ್ ಪರಮಹಂಸ ತೀರ್ಥ ಬಿರುದಾಂಕಿತ ಶೃಂಗೇರಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಯವರಿಗೆ, ಟಿಪ್ಪುಸುಲ್ತಾನ್ ಬಾದಷಾರ ತಾಳೆಬರಹ*.(• ಮೂಲ ಗ್ರಂಥದಲ್ಲಿ ಈ ವಾಕ್ಯಗಳು ದೇವನಾಗರಿ ಲಿಪಿಯಲ್ಲಿ ಪ್ರಕಟವಾಗಿದೆ.)
“ನೀವು ಕಳುಹಿಸಿದ ಪತ್ರದಿಂದ ಸಕಲ ಅಭಿಲಾಷೆಯು ತಿಳಿಯಲಾಯಿತು. ತಾವು ಜಗದ್ಗುರುಗಳು ಸರ್ವಲೋಕ ಸುಖ ಕ್ಷೇಮ ಆಗಬೇಕು. ಜನರು ಸ್ವಾಸ್ಥ್ಯದಲ್ಲಿ ಇರಬೇಕೆಂಬುದಾಗಿ ತಪಸ್ಸು ಮಾಡುತ್ತಲೇ ಇದ್ದೀರಿ. ಸರಕಾರದ ಕ್ಷೇಮವೂ ಉತ್ತರೋತ್ತರ ಅಭಿವೃದ್ಧಿಯೂ ಆಗುವಂತೆ ತ್ರಿಕಾಲ ತಪಸ್ಸು ಮಾಡುವಲ್ಲಿಯೂ ಈಶ್ವರ ಪ್ರಾರ್ಥನೆ ಮಾಡುತ್ತಾ ಬರುವುದು ತಮ್ಮಂತಹ ದೊಡ್ಡವರು ಯಾವ ದೇಶದಲ್ಲಿ ಇದ್ದಾರೆಯೋ ಆ ದೇಶಕ್ಕೆ ಮಳೆ ಬೆಳೆ ಸಕಲವೂ ಆಗಿ ಸುಭಿಕ್ಷವಾಗಿ ಇರತಕ್ಕದಾದ್ದರಿಂದ ಪರಸ್ಥಳದಲ್ಲಿ ಬಹಳ ದಿವಸ ತಾವು ಯಾತಕ್ಕೆ ಇರಬೇಕು. ಹೋದ ಕೆಲಸವನ್ನು ಬೇಗನೆ ಅನುಕೂಲಪಡಿಸಿಕೊಂಡು ಸ್ಥಳಕ್ಕೆ ಸಾಗಿಬರುವಂತೆ ಮಾಡಿಸುವುದು, (ತಾರೀಕು 21 ಮಾರಹರಾಜಿಸಾಲ್ ಸಹರ್ಸನ 1220 ಮುಹಮ್ಮದ್) ಪರಿಂಧಾವಿ ಸಂವತ್ಸರದ ಮಾಫ ಬಹುಳ 14 ಲುಖತ್ ಸುಬಾಯಿ ಮುನ್ಶಿಹಸೂರ್.
ಹಿಂದೂ ಕ್ಷೇತ್ರಗಳಿಗೆ ಟಿಪ್ಪುವು ಭಾರೀ ಪ್ರಮಾಣದಲ್ಲಿ ಜಮೀನು ದಾನ ಮಾಡಿದ್ದನು. ಟಿಪ್ಪುವಿನ ಅರಮನೆಗಳಿಗೆ ಅಭಿಮುಖವಾಗಿರುವ ಶ್ರೀ ವೆಂಕಟರಮಣ, ಶ್ರೀನಿವಾಸ, ಶ್ರೀರಂಗನಾಥ ಮುಂತಾದ ಕ್ಷೇತ್ರಗಳು ಆ ಮಹಾನುಭಾವನ ಸಹಿಷ್ಣುತೆ ಮತ್ತು ವಿಶಾಲ ಮನೋಭಾವದ ಅವಿಸ್ಮರಣೀಯ ಸ್ಮಾರಕಗಳಾಗಿವೆ. ಅಲ್ಲಾಹನ ಭಕ್ತನಾಗಿದ್ದ ಆ ಮಹಾನ್ ಹುತಾತ್ಮನಿಗೆ ಅವರು ಸ್ವಾತಂತ್ರ್ಯದ ಹುತಾತ್ಮರಾಗಿದ್ದರು. ಹಿಂದೂ ಕ್ಷೇತ್ರಗಳ ಘಂಟಾನಾದವು ತನ್ನ ಪ್ರಾರ್ಥನೆಗಳಿಗೆ ಅಡ್ಡಿಯೆನಿಸಿರಲಿಲ್ಲ. ಟಿಪ್ಪು ಸ್ವಾತಂತ್ರ್ಯಕ್ಕಾಗಿ ಕಾದಾಡಿ ಹತರಾದರು. ವೈರಿಗಳಿಗೆ ಶರಣಾಗಬೇಕೆಂಬ ಆದೇಶವನ್ನು ಅವರು ತುಚ್ಛೀಕರಿಸಿದರು. ಅನೇಕ ಅಜ್ಞಾತ ಸೈನಿಕರ ಮಧ್ಯೆ ಅವರ ಮೃತದೇಹ ಪತ್ತೆಯಾಯಿತು. ಆ ಹತಭಾಗ್ಯರೊಂದಿಗೆ ಅವರು ಅಭಿಮಾನದಿಂದ ಭಾಗಿಯಾಗಿದ್ದರು. ಮರಣದಲ್ಲಿಯೂ ಅವರು ತನ್ನ ಕೈಯನ್ನು ಖಡ್ಗದ ಹಿಡಿಯಿಂದ ಬಿಟ್ಟಿರಲಿಲ್ಲ. ಅದು ಸ್ವಾತಂತ್ರ್ಯದ ಘೋಷಣೆಯೊಂದಿಗೆ ಎತ್ತಿ ಹಿಡಿದ ಅಸ್ತ್ರವಾಗಿತ್ತು. ಟಿಪ್ಪುವಿನ ಮಾತುಗಳನ್ನು ಜ್ಞಾಪಿಸಿರಿ:
“200 ವರ್ಷ ನಾಯಿಯಂತೆ ಬಾಳುವುದಕ್ಕಿಂತ ಎರಡು ದಿನ ಸಿಂಹದಂತೆ ಬಾಳುವುದು ಉತ್ತಮ.
ಅವರ ಗೌರವಾರ್ಥ ರಚಿಸಿದ ಶೋಕಗೀತೆಯ ತುಣುಕನ್ನು ನೆನಪಿಸುತ್ತೇನೆ. “ಅಲ್ಲಾಹನೇ! ಹೀನ ಮತ್ತು ಅಪಮಾನಿತನಾಗಿ ಬಾಳುವುದಕ್ಕಿಂತ ನಮ್ಮ ತಲೆಯಿಂದ ರಕ್ತ ಸುರಿಸುತ್ತಾ ರಣರಂಗದಲ್ಲಿ ಸಾಯುವುದು ಉತ್ತಮ.”
ಇದೇ ರೀತಿ ನಾನು ಅಲಹಾಬಾದ್ ಮುನ್ಸಿಪಲ್ ಚೆಯರ್ಮನ್ ಆಗಿದ್ದಾಗ (1948-58) ಒಂದು ವಿವಾದ ನನ್ನ ಬಳಿಗೆ ಬಂತು, ಸೋಮೇಶ್ವರನಾಥ ಮಹಾದೇವಾಲಯಕ್ಕೆ ದಾನ ನೀಡಿದ ಸೊತ್ತಿನ ಬಗ್ಗೆ ವಿವಾದವುಂಟಾಗಿತ್ತು. ಮಹಂತರ ನಿಧನದ ಬಳಿಕ ಇಬ್ಬರು ವಾರಿಸುದಾರರು ಮುಂದೆ ಬಂದರು. ಹಕ್ಕುದಾರರಲ್ಲೊಬ್ಬರು ಕುಟುಂಬದ ವಶವಿದ್ದ ಕೆಲವು ದಾಖಲೆಗಳನ್ನು ಸಲ್ಲಿಸಿದರು. ಅದು ಔರಂಗಝೇಬ್ ಚಕ್ರವರ್ತಿ ನೀಡಿದ ಆಜ್ಞೆಯಾಗಿತ್ತು. ಔರಂಗಝೇಬ್, ಜಮೀನು ಮತ್ತು ಹಣವನ್ನು ದೇವಾಲಯಕ್ಕೆ ನೀಡಿದ ದಸ್ತಾವೇಜು. ನನಗೆ ಅಚ್ಚರಿಯಾಯಿತು. ಈ ದಾಖಲೆಗಳು ಕೃತಕವಾಗಿರಬಹುದೇ ಎಂಬ ಸಂಶಯವೂ ಮೂಡಿತು. ದೇವಾಲಯ ಧ್ವಂಸಕನೆಂದು ಚಿತ್ರಿಸಲಾಗುವ ಔರಂಗಝೇಬನು, “ಈ ಜಮೀನನ್ನು ಪೂಜೆ ಹೋಮಾದಿಗಳಿಗಾಗಿಯೆಂದು ತಿಳಿಸಿ ಯಾಕೆ ದಾನ ನೀಡಿದ? ಔರಂಗಝೇಬ್ ವಿಗ್ರಹ ಪ್ರೇಮಿಯಾಗುವುದಾದರೂ ಹೇಗೆ?
ಈ ದಾಖಲೆಗಳು ಸುಳ್ಳೆಂದು ನನಗೆ ಖಚಿತವಿತ್ತು. ಆದರೂ ಆ ಬಗ್ಗೆ ತೀರ್ಮಾನ ಕೈಗೊಳ್ಳುವುದಕ್ಕಿಂತ ಮುಂಚೆ ಪರ್ಶಿಯನ್ ಮತ್ತು ಅರಬಿ ಭಾಷಾ ಪಂಡಿತರಾಗಿದ್ದ
ಡಾ| ಸರ್ತೇಜ್ ಬಹದೂರ್ ಸಪ್ರುರವರ ಅಭಿಪ್ರಾಯ ತಿಳಿಯಲು ನಿರ್ಧರಿಸಿದೆ. ದಾಖಲೆಗಳನ್ನು ಪರಿಶೀಲಿಸಿದ ಡಾ| ಸಪ್ರು, ಔರಂಗಝೇಬರ ಫರ್ಮಾನು ಇರುವ ಈ ದಾಖಲೆ ನಿಜವೆಂದು ಹೇಳಿದರು. ತರುವಾಯ ಅವರು ತನ್ನ ಗುಮಾಸ್ತನಿಗೆ, ವಾರಣಾಸಿಯ ಜಂಗಂಬಾಡಿ ಶಿವ ಕ್ಷೇತ್ರದ ದಾವೆಯ ದಾಖಲೆ ಪತ್ರಗಳನ್ನು ತರುವಂತೆ ತಿಳಿಸಿದರು. ಅಲಹಾಬಾದ್ ಹೈಕೋರ್ಟ್ನಲ್ಲಿ ಈ ಕುರಿತು ಅನೇಕ ದೂರುಗಳು ತನಿಖೆಯಾಗದೆ ಮೂಲೆ ಸೇರಿವೆ, ಜಂಗಂಬಾಡಿ ಕ್ಷೇತ್ರದ ಮಹಂತರ ಬಳಿಯಲ್ಲಿಯೂ ಕ್ಷೇತ್ರಕ್ಕೆ ಔರಂಗಝೇಬ್ ಜಮೀನು ನೀಡಿ ಆಜ್ಞೆ ಹೊರಡಿಸಿದ ಹಲವು ಸಾಕ್ಷ್ಯಾಧಾರಗಳಿವೆ.
ಇದು ಔರಂಗಝೇಬ್ನ ಕುರಿತು ನನಗೆ ಹೊಸ ಮಾಹಿತಿ ಒದಗಿಸಿತು. ಡಾ| ಸಪ್ರುರ ಸಲಹೆಯನ್ವಯ ಭಾರತದ ಹಲವು ಪ್ರಮುಖ ದೇವಾಲಯಗಳಿಗೆ ಪತ್ರ ಬರೆದೆ. ಅವರ ಬಳಿ ದೇವಾಲಯಕ್ಕೆ ಔರಂಗಝೇಬನು ಭೂಮಿ ದಾನ ಮಾಡಿದ ಆಜ್ಞೆಗಳಿದ್ದರೆ ಅವುಗಳ ಛಾಯಾ ಪ್ರತಿಯನ್ನು ಕಳುಹಿಸಿಕೊಡುವಂತೆ ವಿನಂತಿಸಿದೆ. ಅದರ ಸಂಗ್ರಹಣೆಯು ಇನ್ನೊಂದು ಅದ್ಭುತವಾಗಿತ್ತು. ಮಹಾ ಕಾಳೇಶ್ವರ, ಉಜೈನಿಯ ಬಾಲಾಜಿ ಕ್ಷೇತ್ರ, ಚಿತ್ರಕೂಟ, ಉಮಾನಂದ ಕ್ಷೇತ್ರ ಮತ್ತು ಗೌಹಟಿ ಮುಂತಾದ ಪ್ರಧಾನ ಕ್ಷೇತ್ರಗಳಿಂದಲೂ ಶತ್ರುಂಜದ ಜೈನ ಬಸದಿಯಿಂದಲೂ ನನಗೆ ಔರಂಗಝೇಬ್ ಹೊರಡಿಸಿದ್ದ ಅಜ್ಞೆಗಳ ಪ್ರತಿಗಳು ದೊರೆತವು. ಅಲ್ಲದೆ ಉತ್ತರ ಭಾರತದ ಇತರ ಕೆಲವು ಕ್ಷೇತ್ರಗಳಿಂದಲೂ ಗುರುದ್ವಾರಗಳಿಂದಲೂ ಇಂತಹ ಪ್ರತಿಗಳು ಬಂದುವು. ಈ ಎಲ್ಲ ಆಜ್ಞೆಗಳು ಹಿಜರಿ 1065 ರಿಂದ (1659) 1091ರ (1685) ಅವಧಿಯದ್ದಾಗಿದ್ದುವು.
ಇವೆಲ್ಲವೂ ಹಿಂದುಗಳು ಮತ್ತು ಅವರ ದೇವಾಲಯಗಳ ಬಗ್ಗೆ ಔರಂಗಝೇಬನ ವಿಶಾಲ ಮನೋಭಾವದ ಕೆಲವಾರು ಉದಾಹರಣೆಗಳಾಗಿವೆ. ಇತಿಹಾಸಕಾರರು ಅವರ ಕುರಿತು ಬರೆದಿರುವುದೆಲ್ಲವೂ ಸುಳ್ಳು ಮತ್ತು ಚಿತ್ರದ ಒಂದು ಮುಖ ಮಾತ್ರವೆಂದು ಸ್ಪಷ್ಟ ಪಡಿಸುವ ಇತರ ಅನೇಕ ಆಧಾರಗಳಿವೆ. ಭಾರತವು ಸಹಸ್ರಾರು ದೇವಾಲಯಗಳಿರುವ ಬಹುದೊಡ್ಡ ದೇಶವಾಗಿದೆ. ಪ್ರಾಮಾಣಿಕವಾಗಿ ಸಂಶೋಧನೆ ನಡೆಸಿದರೆ ಔರಂಗಝೇಬನು ಮುಸ್ಲಿಮೇತರರಿಗೆ ಮಾಡಿದ ಉಪಕಾರಗಳನ್ನು ಸ್ಪಷ್ಟಪಡಿಸುವ ಅನೇಕ ವಿಷಯಗಳು ಬಹಿರಂಗವಾಗುವುದರಲ್ಲಿ ಸಂದೇಹವಿಲ್ಲ.
ಔರಂಗಝೇಬನ ಫರ್ಮಾನುಗಳ ಸಂಶೋಧನೆಯ ವೇಳೆ ಪಾಟ್ನಾ ವಸ್ತು ಸಂಗ್ರಹಾಲಯದ ಮಾಜಿ ಉದ್ಯೋಗಿಯಾಗಿದ್ದ ಶ್ರೀ ಜ್ಞಾನ ಚಂದ್ರ, ಡಾ| ಪಿ.ಎಲ್. ಗುಪ್ತಾ ಎಂಬವರ ಪರಿಚಯವಾಯಿತು. ಅವರೀರ್ವರೂ ಔರಂಗಝೇಬನ ಇತಿಹಾಸದ ಸಂಶೋಧನೆ ನಡೆಸುತ್ತಿದ್ದರು. ಇತರ ಕೆಲವು ಸಂಶೋಧಕರೂ ಔರಂಗಝೇಬನ ಮಲಿನಗೊಳಿಸಲಾದ ಚಿತ್ರವನ್ನು ಶುಚಿಗೊಳಿಸಲು ಪ್ರಯತ್ನಿಸುತ್ತಿರುವುದನ್ನು ನೋಡಿ ನನಗೆ ಸಂತೃಪ್ತಿಯಾಯಿತು. ಕಪಟ ಇತಿಹಾಸಕಾರರು ಔರಂಗಝೇಬನ ವಿಕೃತ ಚರಿತ್ರೆಯನ್ನು ಭಾರತದ ಮುಸ್ಲಿಮ್ ಆಳ್ವಿಕೆಯ ಪ್ರತೀಕವೆಂದು ಚಿತ್ರಿಸುತ್ತಿದ್ದಾರೆ.
ಔರಂಗಝೇಬನನ್ನು ಹಿಂದೂ ವಿರೋಧಿ ಚಕ್ರವರ್ತಿಯೆಂದು ಚಿತ್ರಿಸುವಾಗಲೂ ‘ಬನಾರಸ್ ದಾಖಲೆ’ಯೆಂದು ಖ್ಯಾತವಾದ ಒಂದು ಕಡತದ ಬಗ್ಗೆ ಹೇಳಬೇಕಾಗುತ್ತದೆ. ಈ ದಾಖಲೆಯು ಗೌರಿ ಮೊಹಲ್ಲದಲ್ಲಿ ವಾಸವಾಗಿರುವ ವಾರಣಾಸಿಯ (ಬನಾರಸ್) ಒಂದು ಬ್ರಾಹ್ಮಣ ಕುಟುಂಬಕ್ಕೆ ಸೇರಿದೆ. 1905 ರಲ್ಲಿ ಗೋಪಿ ಉಪಾಧ್ಯಾಯರ ಮಗಳ ಪುತ್ರನಾದ ಮಂಗಳವಾಡೆ ಈ ಕಡತವನ್ನು ಜಿಲ್ಲಾ ಮೆಜಿಸ್ಟ್ರೇಟರಿಗೆ ಹಾಜರುಪಡಿಸಿದರು. ಇದು ಅನೇಕ ಪಂಡಿತರ ಗಮನ ಸೆಳೆಯಿತು. 1911ರಲ್ಲಿ ಅದು ಬಂಗಾಳೀಯರ ಏಶ್ಯಾಟಿಕ್ ಸೊಸೈಟಿಯ ನಿಯತ ಕಾಲಿಕದಲ್ಲಿ ಮೊದಲ ಬಾರಿ ಪ್ರಕಟವಾಯಿತು. ಆ ಬಳಿಕ ಹಲವು ಇತಿಹಾಸಗಾರರು ಆ ದಾಖಲೆಯನ್ನು ಉದ್ಧರಿಸುತ್ತಿದ್ದಾರೆ. ಈ ಆಜ್ಞೆಯ ವಾಸ್ತವಿಕಾಂಶವನ್ನು ಗ್ರಹಿಸದ ಅವರು ಔರಂಗಝೇಬನು ದೇವಾಲಯ ನಿರ್ಮಾಣಕ್ಕೆ ಅಡ್ಡಿಯುಂಟು ಮಾಡಿದನೆಂದು ಆರೋಪಿಸುತ್ತಾರೆ. (ಹಿಸ್ಟರಿ ಓಫ್’ ಔರಂಗಝೇಬ್ ಜದುನಾಥ್ ಸರ್ಕಾರ್)
ಔರಂಗಝೇಬನ ಈ ಆಜ್ಞೆಯನ್ನು ಹಿಜರಿ 1065ರ ಜುಮಾದಿಲ್ ಅವ್ವಲ್ 15ರಂದು (ಮಾರ್ಚ್ 10, 1659) ದೇವಾಲಯ ಪರಿಪಾಲಕರಾದ ಕೆಲವು ಬ್ರಾಹ್ಮಣರು ಪೀಡನೆಯ ಬಗ್ಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಬನಾರಸ್ನ ಸ್ಥಾನೀಯ ಅಧಿಕಾರಿಗಳಿಗೆ ಕಳುಹಿಸಲಾಗಿತ್ತು. ಅದರಲ್ಲಿ ಹೀಗೆ ಹೇಳಲಾಗಿದೆ:
“ನಮ್ಮ ಅರಸೊತ್ತಿಗೆಯ ಔದಾರ್ಯ ಮತ್ತು ನಂಬಿಕೆಗೆ ಅಬುಲ್ ಹಸನ್ ಅರ್ಹರಾಗಿದ್ದಾರೆ. ಆದರೆ, ನೈಸರ್ಗಿಕ ಔದಾರ್ಯವಾಗಿರುವ ನಮ್ಮ ಸಂಪನ್ಮೂಲಗಳು ಕೋಮು ಪಕ್ಷಪಾತವಿಲ್ಲದೆ ಎಲ್ಲ ವಿಭಾಗದವರ ಕಲ್ಯಾಣಕ್ಕಾಗಿದೆಯೆಂದು ಅವರು ತಿಳಿದಿರಲಿ. ನಮ್ಮ ಪಾವನ ಕಾನೂನಿನನ್ವಯ ಯಾವೊಂದು ಪ್ರಾಚೀನ ದೇವಾಲಯಗಳನ್ನೂ ನಾಶಪಡಿಸ ಬಾರದೆಂದು ನಾವು ನಿರ್ಣಯಿಸಿದ್ದೇವೆ. ಹೊಸತು ನಿರ್ಮಿಸುವುದೂ ಬೇಡ.
ನ್ಯಾಯ ಪಾಲನೆಯಾಗುತ್ತಿರುವ ಈ ದಿನಗಳಲ್ಲಿಯೂ ಬನಾರಸ್ ಮತ್ತು ಪರಿಸರ ಪ್ರದೇಶದ ಹಿಂದುಗಳನ್ನು ಕೆಲವರು ಪೀಡಿಸುತ್ತಿರುವರೆಂದು ದರ್ಬಾರಿಗೆ ಸುದ್ದಿ ಬಂದಿದೆ. ಈ ಪ್ರಾಚೀನ ದೇವಾಲಯಗಳ ಪರಿಪಾಲಕರು ಮತ್ತು ಹೊಣೆಗಾರರಾಗಿರುವ ಬ್ರಾಹ್ಮಣರನ್ನು ಆ ಪೌರಾಣಿಕ ಸ್ಥಾನದಿಂದ ಉಚ್ಚಾಟಿಸುವ ಕೆಲವು ಪ್ರಯತ್ನಗಳು ನಡೆದಿವೆ. ಬ್ರಾಹ್ಮಣರ ಮೇಲಿನ ಈ ಹಸ್ತಕ್ಷೇಪವು ಆ ಸಮುದಾಯವನ್ನು ಅಸ್ವಸ್ಥಗೊಳಿಸಿದೆ.
ಆದ್ದರಿಂದ, ನಮ್ಮ ರಾಜಾಜ್ಞೆಯೇನೆಂದರೆ, ಈ ಉಜ್ವಲ ಆಜ್ಞೆ ತಲಪಿದ ಕೂಡಲೇ ಇನ್ನು ಮುಂದೆ ಆ ಪ್ರದೇಶದ ಬ್ರಾಹ್ಮಣ ಅಥವಾ ಇತರ ಹಿಂದುಗಳನ್ನು ಪೀಡಿಸಬಾರದು, ಅವರ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಬಾರದೆಂದು ನೀವು ಆದೇಶಿಸಬೇಕು. ಆ ಮೂಲಕ ಅವರಿಗೆ ನೆಮ್ಮದಿಯಿಂದ ಹಿಂದಿನ ಕೆಲಸಗಳನ್ನು ನಿರ್ವಹಿಸುತ್ತಾ ದೇವದತ್ತವಾದ ಈ ಸಾಮ್ರಾಜ್ಯದ ಶಾಶ್ವತ ಉಳಿವಿಗಾಗಿ ಪ್ರಾರ್ಥಿಸಲು ಸಾಧ್ಯವಾಗಬಹುದು. ಈ ಆಜ್ಞೆಯನ್ನು ತುರ್ತಿನದ್ದೆಂದು ಪರಿಗಣಿಸಬೇಕು.”
ಈ ಆಜ್ಞೆಯಿಂದ ನಮಗೆ ತಿಳಿಯುವುದೇನೆಂದರೆ, ಔರಂಗಝೇಬನು ಯಾವುದಾದರೂ ಹೊಸ ದೇವಾಲಯದ ನಿರ್ಮಾಣದ ವಿರುದ್ಧ ಹೊಸ ಫರ್ಮಾನು ಹೊರಡಿಸಲಿಲ್ಲ. ಜಾರಿಯಲ್ಲಿರುವ ಕಾನೂನೊಂದನ್ನು ಸೂಚಿಸಿ, ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದಷ್ಟೇ ಸೂಚಿಸಿದ್ದನು. ಹಾಲೀ ದೇವಾಲಯಗಳನ್ನು ನಾಶಪಡಿಸುವುದಕ್ಕೆ ಆತ ಸಂಪೂರ್ಣ ವಿರುದ್ಧವಾಗಿದ್ದನು. ತನ್ನ ಹಿಂದೂ ಪ್ರಜೆಗಳು ಶಾಂತಿಯಿಂದ ಬಾಳಬೇಕೆಂಬ ಕಳಕಳಿಯನ್ನೂ ಆತನು ಈ ಆಜ್ಞೆಯಲ್ಲಿ ಸ್ಪಷ್ಟಪಡಿಸಿದ್ದನು.
ಅದೇ ಪ್ರಕಾರ ಹಿಂದೂ ಪ್ರಜೆಗಳು ಶಾಂತಿಯಿಂದ ಬಾಳಬೇಕೆಂಬ ಔರಂಗಝೇಬನ ಕಳಕಳಿಯನ್ನು ಸೂಚಿಸುವ ಇನ್ನೊಂದು ಬನಾರಸ್ ಆಜ್ಞೆ ಹೀಗಿದೆ: “ಈ ಶುಭ ಸಂದರ್ಭದಲ್ಲಿ ಹೊರಡಿಸುವ ವಿಶೇಷಾಜ್ಞೆಯೇನೆಂದರೆ, ಮಹಾರಾಜಾಧಿರಾಜ ರಾಮ್ ಸಿಂಗ್ ಈ ಪವಿತ್ರ ರಾಜ ದರ್ಬಾರಿನಲ್ಲಿ ನಿವೇದಿಸಿಕೊಂಡಿರುವಂತೆ, ಅವರ ತಂದೆಯು ತಮ್ಮ ಗುರು ವರ್ಯರಾದ ಭಗವತ್ ಗೋಸ್ರ ವಾಸಕ್ಕಾಗಿ ಬನಾರಸ್ನ ಮಧೋರಮ್ ಮೊಹಲ್ಲದಲ್ಲಿ ಯಮುನಾ ತೀರದಲ್ಲಿ ಕಟ್ಟಿಸಿದ ಮಂದಿರದಲ್ಲಿ ಅವರನ್ನು ಕೆಲವರು ಪೀಡಿಸುತ್ತಿರುವರೆಂದು ತಿಳಿದು ಬಂದಿದೆ. ನಮ್ಮ ರಾಜಾಜ್ಞೆಯೇನೆಂದರೆ ಈ ಮಹಾನ್ ಆಜ್ಞೆ ದೊರೆತ ಕೂಡಲೇ ಹಾಲೀ ಮತ್ತು ಭಾವೀ ಅಧಿಕಾರಿಗಳಿಗೆ ಆದೇಶಿಸುವುದೇನೆಂದರೆ ಯಾವ ಕಾರಣಕ್ಕೂ ಯಾರೊಬ್ಬರೂ ಅವರಿಗೆ ತೊಂದರೆ ಕೊಡಬಾರದು, ಅವರ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಬಾರದು. ಆ ಮೂಲಕ ಅವರು ದೇವದತ್ತವಾದ ಈ ಸಾಮ್ರಾಜ್ಯದ ಉಳಿವಿಗಾಗಿ ಪ್ರಾರ್ಥಿಸುತ್ತಿರಲಿ. ಇದನ್ನು ತುರ್ತು ಕಾರ್ಯವೆಂದು ಪರಿಗಣಿಸಲಿ, ರಬೀವುಲ್ ಆಖಿರ್, ತಾರೀಕು 17, ಹಿಜರಿ 1091” (ಶ್ರೀ ಗ್ಯಾನ್ ಚಂದ್ರರಿಗೆ ಪಾಕಿಸ್ತಾನದ ಆರ್ಕೆವಿಡ್ ಡೈರೆಕ್ಟರ್ ಎಸ್.ಎಮ್. ಜಾಫರ್ ತಿಳಿಸಿದ್ದು)
ಜಂಗಂಬಾಡಿ ಮಠದ ಮಹಂತರ ವಶವಿರುವ ಆಜ್ಞೆಗಳನ್ವಯ ಔರಂಗಝೇಬನು ತನ್ನ ಪ್ರಜೆಗಳಿಗಾಗುವ ಅದು ಹಿಂದುವಾಗಿರಲಿ ಯಾ ಮುಸ್ಲಿಮರಾಗಿರಲಿ- ಅಕ್ರಮ ಅನ್ಯಾಯಗಳನ್ನು ಸಹಿಸುತ್ತಿರಲಿಲ್ಲವೆಂದು ವ್ಯಕ್ತವಾಗುತ್ತದೆ. ಅಪರಾಧಿಗಳನ್ನು ಆತ ಕಠಿಣವಾಗಿ ದಂಡಿಸುತ್ತಿದ್ದ. ಇಂತಹ ಇನ್ನೊಂದು ಆಜ್ಞೆಯಲ್ಲಿ ಔರಂಗಝೇಬನ ಆಸ್ಥಾನದಲ್ಲಿ ಜಂಗಮ ಸಮುದಾಯದವರು, ಬನಾರಸ್ನಲ್ಲಿ ವಾಸವಾಗಿದ್ದ ನಾಸಿರ್ ಬೇಗ್ ಎಂಬ ಮುಸ್ಲಿಮನ ವಿರುದ್ಧ ನೀಡಿದ ದೂರಿನ ಬಗ್ಗೆ ಹೇಳಲಾಗಿದೆ. ಆ ಕುರಿತು ರಾಜಶಾಸನ ಹೀಗಿದೆ:
“ಸೂಬಾ ಅಲಹಾಬಾದ್ನ ಬನಾರಸ್ ಎಂದು ಖ್ಯಾತವಾಗಿರುವ ಹವೇಲಿ ಮುಹಮ್ಮದಾಬಿನ ಅಧಿಕಾರಿಯ ಗಮನಕ್ಕೆ ಪರಗಣ ಬನಾರಸ್ ವಾಸಿಗಳಾದ ಅರ್ಜುನ್
ಮಾಲ್ ಮತ್ತು ಜಂಗಮರು ಚಕ್ರವರ್ತಿಗೆ ಸಮರ್ಪಿಸಿರುವ ದೂರಿನಂತೆ, ಕಸ್ಬಾ ಬನಾರಸ್ ನಲ್ಲಿ ಅವರ ಸ್ವಾಧೀನವಿರುವ 5 ಸ್ಥಳಗಳನ್ನು ಬನಾರಸ್ ನಿವಾಸಿ ನಾಸಿರ್ ಬೇಗ್ ಬಲಾತ್ಕಾರದಿಂದ ವಶಪಡಿಸಿಕೊಂಡಿದ್ದಾರೆ. ಈ ದೂರಿನಲ್ಲಿ ಸತ್ಯಾಂಶವಿದ್ದರೆ, ನಾಸಿರ್ ಬೇಗ್ನನ್ನು ಅಲ್ಲಿಗೆ ಪ್ರವೇಶಿಸಲು ಬಿಡಬಾರದು. ಅಂತೆಯೇ ಮುಂದೆ ಜಂಗಮರು ಈ ಬಗ್ಗೆ ನಮಗೆ ದೂರು ನೀಡುವ ಅವಕಾಶವಾಗದಂತೆ ಎಚ್ಚರ ವಹಿಸಬೇಕು.” ಆಜ್ಞೆಯ ತಾರೀಕು 11, ಶಅಬಾನ್ ಸಾನ್ 13 ಜುಲೂಸ್ (1672 ಕ್ರಿ.ಶ.)
(ಹೈಕೋರ್ಟಿನ ಕಡತಗಳು. ಅಲಹಾಬಾದ್ ಹೈಕೋರ್ಟ್ನಲ್ಲಿ ಕೃಷ್ಣಗಿರಿ ಮತ್ತಿತರರು ಜಗದ್ಗುರು ಶ್ರೀ ಮಹಂತ ಮಾಲಿಕ್ ಅರ್ಜುನ್ ಸ್ವಾಮಿಯವರ ವಿರುದ್ಧ 1984ರಲ್ಲಿ ಸಲ್ಲಿಸಿದ ದೂರು, ಎಕ್ಸಿಬಿಟ್ -20)
ಇದೇ ಮಠದವರ ಬಳಿಯಿರುವ ಇನ್ನೊಂದು ದಾಖಲೆಯಲ್ಲಿ (ತಾರೀಕು, 1 ರಬೀವುಲ್ ಅವ್ವಲ್ 1078) ಜಂಗಮರಿಗೆ ಅನುಮತಿಸಿದ ಭೂಮಿಯನ್ನು ವಿತರಿಸುವಂತೆ ಆಜ್ಞಾಪಿಸಲಾಗಿದೆ. ಅದು ಹೀಗಿದೆ: ಸೂಬಾ ಅಲಹಾಬಾದಿಗೆ ಸೇರಿದ ಹವೇಲಿ ಬನಾರಸ್ ಪರಗಣದ ಈಗಿನ ಮತ್ತು ಮುಂದಿನ ಉದ್ಯೋಗಿಗಳ ಗಮನಕ್ಕೆ-9 ಅಮರ್ದಾದ್ ಇಲಾಹಿ ತಾರೀಕಿನ ರಾಜಾಜ್ಞೆಯನ್ವಯ 178 ಬಿಘ ಜಮೀನನ್ನು ಜಂಗಮ ಸಮುದಾಯದವರಿಗೆ ಅವರ ಆದಾಯ ಮೂಲವಾಗಿ ಅನುಮತಿಸಲಾಗಿತ್ತು. ಹಳೆಯ ಅಧಿಕಾರಿಗಳು ಈ ವಿಷಯವನ್ನು ಹಿಂದೆ ಪರಿಶೀಲಿಸಿದ್ದರು. ಈಗ ಪರಗಣದ ಸರದಾರನ (ಮಲಿಕ್) ಮುದ್ರೆ ಹಾಕಿ ಸಲ್ಲಿಸಿರುವ ದಾಖಲೆ ಪತ್ರಗಳಿಂದಲೂ ಹಿಂದಿನ ಕಾಲದಿಂದಲೇ ಈ ಜಮೀನು ಅವರ ವಶವಿದ್ದಿತೆಂದು ವ್ಯಕ್ತವಾಗುತ್ತದೆ. ಆದ್ದರಿಂದ ಚಕ್ರವರ್ತಿಯ ಆಜ್ಞಾನುಸಾರ ಅದು ಅವರಿಗೆ ಕಾಣಿಕೆ (ನಿಸಾರ್)ಯಾಗಿ ಸೇರಬೇಕಾಗಿದೆ. ಈ ಜಮೀನನ್ನು ಸನ್ 10ರ ಖಾರಿಫ್ ಬೆಳೆಗಿಂತ ಮುಂಚಿತವಾಗಿ ಅವರಿಗೆ, ಹಿಂದಿನ ಸ್ಥಿತಿಯಲ್ಲಿಯೇ ಮರಳಿಸಬೇಕು. ಈ ವಿಷಯದಲ್ಲಿ ಯಾರೂ ಹಸಕ್ಷೇಪ ನಡೆಸಬಾರದು. ಆ ಮೂಲಕ ಜಂಗಮ ಸಮುದಾಯವು ಪ್ರತಿಯೊಂದು ಧಾನ್ಯದ ಆದಾಯವನ್ನೂ ಚಕ್ರವರ್ತಿಯ ಈ ನಾಡಿನಲ್ಲಿ ಅವರ ಪರಿಪಾಲನೆಗಾಗಿ ಬಳಸಲಿ. ಇದರಲ್ಲಿ ಲೋಪವುಂಟು ಮಾಡಬಾರದು. (Ibid, ಎಕ್ಸಿಬಿಟ್ ನಂಬ್ರ-11)
ಈ ಆಜ್ಞೆಯು ಅವರ ನ್ಯಾಯ ಪ್ರಜ್ಞೆಯನ್ನು ಮಾತ್ರವಲ್ಲ, ಹಿಂದು ಭಿಕ್ಷುಗಳಿಗೆ ಕಾಣಿಕೆ (ನಿಸಾರ್) ನೀಡುವುದರಲ್ಲಿ ಪಕ್ಷಪಾತ ತೋರಿಸುತ್ತಿರಲಿಲ್ಲವೆಂದೂ ವ್ಯಕ್ತಪಡಿಸುತ್ತದೆ. ಮೇಲೆ ಹೇಳಿದ 178 ಬಿಘ ಜಮೀನನ್ನು ಜಂಗಮ ಸಮುದಾಯದವರಿಗೆ ಬಹುವಂಶ ಔರಂಗಝೇಬನೇ ಕೊಡುಗೆ ನೀಡಿದ್ದೆಂದು ಭಾವಿಸಬೇಕಾಗಿದೆ, ಹಿಜರಿ 1071ರ ರಮಝಾನ್ 5ರಂದು ಹೊರಡಿಸಿದ ಆಜ್ಞೆಯೊಂದರಲ್ಲಿ ಪ್ರಸ್ತುತ ಜಮೀನಿನ ಕುರಿತು ಹೀಗೆ ಪ್ರಸ್ತಾವಿಸಲಾಗಿದೆ:
“ಸೂಬಾ ಅಲಹಾಬಾದ್ನ ಉಪವಲಯವಾಗಿರುವ ಬನಾರಸ್ನ ಪರಗಣ ಹವೇಲಿಯ ಈಗಿನ ಮತ್ತು ಮುಂದಿನ ಅಧಿಕಾರಿಗಳ ಗಮನಕ್ಕೆ, ಚಕ್ರವರ್ತಿ ಆಜ್ಞೆಯನ್ವಯ ಪರಗಣ ಬನಾರಸ್ನ 178 ಬಿಘ ಜಮೀನನ್ನು ಜಂಗಮ ಸಮುದಾಯದವರ ಪರಿಪಾಲನೆಯ ಖರ್ಚಿಗಾಗಿ ನೀಡಲಾಗಿದೆ. ಈ ಹಿಂದೆ ಚಕ್ರವರ್ತಿಯ ದರ್ಬಾರಿಗೆ, ಜಂಗಮರು ಆಗಮಿಸಿದ್ದರು. ಅವರ ಹಕ್ಕುಗಳನ್ನು ಅಂಗೀಕರಿಸಲಾಗಿತ್ತು, ಅದೇ ಜನರು ಬದುಕಿದ್ದಾರೆ. ಅವರು ಜಮೀನಿನ ಅನುಭೋಗಿಗಳಾಗಿದ್ದಾರೆ. ಆದ್ದರಿಂದ ಅದೇ ಜಮೀನನ್ನು ಅವರಿಗೆ ಚಕ್ರವರ್ತಿಯ ಕಾಣಿಕೆಯಾಗಿ ಈ ಹಿಂದೆ ನೀಡಿದಂತೆ ಪುನಃ ನೀಡಲಾಗುತ್ತಿದೆ. ಈ ಭೂಮಿಯನ್ನು ‘ದಾನಭೂಮಿ (ಮುಫ್)ಯಾಗಿ ಪರಿಗಣಿಸಬೇಕು. ಹಾಗೆಯೇ ಅವರು ಅದನ್ನು ಅನುಭೋಗಿಸುತ್ತಾ ಅಲ್ಲಿಯೇ ಚಕ್ರವರ್ತಿಯ ಸಾಮ್ರಾಜ್ಯದ ಉಳಿವಿಗಾಗಿ ಪ್ರಾರ್ಥಿಸುತ್ತಿರಬಹುದು.” (Ibid, ಎಕ್ಸಿ ಬಿಟ್ ನಂಬ್ರ-16)
ಓರ್ವ ಹಿಂದೂ ಧರ್ಮ ಪ್ರಚಾರಕನಿಗೆ ಹಿಜರಿ 1098ರಲ್ಲಿ ಔರಂಗಝೇಬನು ಬನಾರಸ್ ನಗರದಲ್ಲಿ ಜಮೀನು ನೀಡಿದ ವಿವರಣೆ ಹೀಗಿದೆ: “ಈ ಶುಭ ಮುಹೂರ್ತದಲ್ಲಿ ಹೊರಡಿಸುವ ಆಜ್ಞೆಯೇನೆಂದರೆ ಬನಾರಸ್ನ ಯಮುನಾ ತೀರದ ಬನಿಮಾಂಡ ಘಾಟ್ನಲ್ಲಿ 588 ಬಿಘ ವಿಸ್ತೀರ್ಣದ ಎರಡು ಖಾಲಿ ಸ್ಥಳಗಳಿವೆ. (ಒಂದು ಸ್ಥಳವು ರಾಮ್ ಜೀವನ್ರ ಮನೆಯ ಮುಂದೆ ಮಸೀದಿಯ ಹಿಂಬದಿಯಲ್ಲಿ ಇನ್ನೊಂದು ಸ್ಥಳವು ಅದರ ಸ್ವಲ್ಪ ಮೇಲ್ಬಾಗದಲ್ಲಿದೆ.) ಅದು ಬೈತುಲ್ಮಾಲ್ಗೆ (ಸಾರ್ವಜನಿಕ ಬೊಕ್ಕಸ) ಸೇರಿದೆ. ಅವುಗಳನ್ನು ನಾವು ರಾಮ್ ಜೀವನ್ ಮತ್ತು ಅವರ ಪುತ್ರನಿಗೆ ದಾನ ನೀಡುತ್ತೇವೆ. ಹಾಗೆಯೇ ಅಲ್ಲಿ ಭಕ್ತರಾದ ಬ್ರಾಹ್ಮಣರು ಮತ್ತು ಸಾಧುಗಳಿಗಾಗಿ ಭವನಗಳನ್ನು ನಿರ್ಮಿಸಿ, ಪ್ರಾರ್ಥನಾ ನಿರತರಾಗಿ ದೇವದತ್ತವಾದ ಈ ಸಾಮ್ರಾಜ್ಯದ ಉಳಿವಿಗಾಗಿ ಏರ್ಪಾಡು ಮಾಡಲಿ, ಈ ಆಜ್ಞೆಯನ್ನು ಕಾಪಾಡಬೇಕಾದುದು ನಮ್ಮ ಮಕ್ಕಳು, ಮಂತ್ರಿಗಳು, ಸರದಾರರು, ಹಿರಿಯ ಅಧಿಕಾರಿಗಳು ಮತ್ತು ಈಗಿನ ಹಾಗೂ ಮುಂದಿನ ಕೊತವಾಲರ ಕರ್ತವ್ಯವಾಗಿದೆ. ಪ್ರಸ್ತುತ ಜಮೀನುಗಳನ್ನು ಅನುಭೋಗದಾರರ ಸುಪುರ್ದಿನಲ್ಲಿ ಉಳಿಸಿ, ಎಲ್ಲ ದೇಣಿಗೆ ಮತ್ತು ತೆರಿಗೆಗಳಿಂದ ಮುಕ್ತಗೊಳಿಸಬೇಕು. ವರ್ಷಂಪ್ರತಿ ಹೊಸ ಆಧಾರ ಪತ್ರವನ್ನು (ಸನದು) ಅವರಿಂದ ಅಪೇಕ್ಷಿಸಬಾರದು.” (ಎಸ್.ಎಂ. ಜಾಫರ್ರು, ಗ್ಯಾನ್ ಚಂದ್ರರಿಗೆ ತಿಳಿಸಿದ್ದು)
ಔರಂಗಝೇಬನು, ಪ್ರಜೆಗಳ ಧಾರ್ಮಿಕ ಭಾವನೆಗಳನ್ನು ಬಹಳ ಶ್ರದ್ಧೆಯಿಂದ ಗೌರವಿಸುತ್ತಿದ್ದನೆಂದು ಭಾವಿಸಬೇಕಾಗಿದೆ. (ಪ್ರಜೆಗಳ ಭಾವನೆಗಳನ್ನು ಗೌರವಿಸಿ ಅಸ್ಸಾಮಿನಲ್ಲಿ ಪ್ರಾಚೀನ ಮುದ್ರೆಯಿರುವ ನಾಣ್ಯವನ್ನು ಬಂಗಾಳಿ ಲಿಪಿಯಲ್ಲಿ ಬಿಡುಗಡೆಗೊಳಿಸಿದರು.
ಆಡಳಿತದ 9ನೇ ವರ್ಷದ ಸಫರ್ ತಿಂಗಳ 2ರಂದು ಚಕ್ರವರ್ತಿ ಹೊರಡಿಸಿದ ಎರಡು ಆಜ್ಞೆಗಳು ನಮ್ಮ ಬಳಿಯಿದೆ. ಅಸ್ಸಾಮ್ನ ಗೌಹಟಿಯಲ್ಲಿರುವ ಉಮಾನಂದ ದೇವಳದ ಸುದಾಮ ಎಂಬ ಬ್ರಾಹ್ಮಣ ಅರ್ಚಕನ ಪರವಾಗಿ ಅದನ್ನು ಹೊರಡಿಸಲಾಗಿತ್ತು. ಅಸ್ಸಾಮ್ನ ಹಿಂದೂ ಆಡಳಿತಗಾರರು ಈ ದೇವಾಲಯ ಮತ್ತು ಅದರ ಪರಿಪಾಲನೆಯ ಖರ್ಚಿಗಾಗಿ ಅರ್ಚಕರಿಗಾಗಿ ಸ್ವಲ್ಪ ಜಮೀನು, ಕೆಲವು ಕಾಡುತ್ಪತ್ತಿಗಳನ್ನೂ ಅನುಮತಿಸಿದ್ದರು. ಈ ಸಂಸ್ಥಾನವನ್ನು ಔರಂಗಝೇಬನು ಸ್ವಾಧೀನಪಡಿಸಿದ ಕೂಡಲೇ ಅವರು ತಮಗಿಂತ ಮುಂಚಿನ ಹಿಂದೂ ರಾಜರು ಅನುಮತಿಸಿದ್ದ ಜಮೀನು ಮತ್ತು ಆದಾಯವನ್ನು ಪುನಃ ದೇವಾಲಯ ಮತ್ತು ಅರ್ಚಕರಿಗೆ ಅನುಮತಿಸಿರುವುದನ್ನು ದೃಢೀಕರಿಸಿ ಆಜ್ಞೆ ಹೊರಡಿಸಿದರು.
ಗೌಹಟಿ ಆಜ್ಞೆಯಲ್ಲಿ ಹೀಗೆ ಹೇಳಲಾಗಿದೆ:
“ಇಂದಿನ ಮತ್ತು ಮುಂದಿನ ಪ್ರಧಾನರು, ಚೌಧರಿಗಳು, ಕಾನೂನಿಗರು, ಮುಖದಮರು ಮತ್ತು ಬಂಗೇಸರದ ರೈತರಿಗೂ ತಿಳಿಯಪಡಿಸುವುದೇನೆಂದರೆ ಹಿಂದಿನ ಆಡಳಿತಗಾರರು, ಸಕಾರ ಗ್ರಾಮದ ಹೊರಗಿರುವ 21/2 ರೆವೆನ್ಯೂ ಬಾಬಿನಲ್ಲಿ 30 ರೂ. ಬೆಲೆಯ ಪ್ರಸ್ತುತ ಸ್ಥಳವನ್ನು ಉಮಾನಂದದ ಅರ್ಚಕ ಸುಧಾಮರಿಗೂ ಪುತ್ರರಿಗೂ ನೀಡಿದ್ದರು…ಇಂಟಕಾಲಿ ಗ್ರಾಮದ ರೆವೆನ್ಯೂಗೆ ಒಳಪಡದ ಅರಣ್ಯ ಭಾಗವನ್ನು ಪರಿಪಾಲನೆಯ ವೆಚ್ಚಕ್ಕಾಗಿ ಅನುಮತಿಸಲಾಗಿತ್ತು. ಅದು ಅವರ ಅಧೀನದಲ್ಲಿಯೇ ಸ್ಥಿರ ಪರಿಪಾಲನೆಗಾಗಿ ಬಿಟ್ಟು ಕೊಡಬೇಕು. ಅಲ್ಲಿ ಅವರು ಈ ಸಾಮ್ರಾಜ್ಯದ ಅನಶ್ವರತೆಗಾಗಿ ಪ್ರಾರ್ಥಿಸುತ್ತಿರಲಿ. ಕರ, ಕಂದಾಯ ಇತ್ಯಾದಿಗಳಿಗಾಗಿ ಯಾರೂ ಅವರನ್ನು ಪೀಡಿಸಬಾರದು. ಹೊಸ ಆಧಾರ ಪತ್ರಕ್ಕಾಗಿ ಒತ್ತಾಯಿಸಬಾರದು… ಅವರು ಇದಕ್ಕಾಗಿ ಅಂಜಬೇಕಾಗಿಲ್ಲ, ಚಕ್ರವರ್ತಿಯ ಸ್ಥಾನಾರೋಹಣದ 9ನೆಯ ವರ್ಷದ ಸಫರ್ 2ರಂದು ಬರೆದುದು.” (ಅಸ್ಸಾಮ್ ರಿಸರ್ಚ್ ಸೊಸೈಟಿಯ ಜರ್ನಲ್ನಲ್ಲಿ ಪ್ರಕಟಿಸಿದ್ದು, ಜನವರಿ- ಎಪ್ರಿಲ್, 1942, ಪುಟ:1-12)
ಔರಂಗಝೇಬನಿಗೆ ಹಿಂದುಗಳು ಮತ್ತು ಅವರ ಧರ್ಮದೊಡನೆ ಸಹಿಷ್ಣುತಾಭಾವವಿತ್ತೆಂಬ ಅಭಿಪ್ರಾಯವನ್ನು ಉಜ್ಜೈನಿಯ ಮಹಾಕಾಳೇಶ್ವರ ದೇವಾಲಯದ ಪುರೋಹಿತರೂ ಸಮರ್ಥಿಸುತ್ತಾರೆ. ಅದು ಪ್ರಮುಖ ಶಿವಾಲಯಗಳಲ್ಲಿ ಸೇರಿದೆ. ಇಲ್ಲಿ ದಿನರಾತ್ರೆ ದೀಪ ಉರಿಸುತ್ತಾರೆ. ಅದನ್ನು ‘ನಂದಾದೀಪ’ವೆಂದು ಕರೆಯುತ್ತಾರೆ. ಈ ದೀಪಕ್ಕೆ ನಿತ್ಯ ನಾಲ್ಕು ಸೇರು ತುಪ್ಪ ಉಪಯೋಗಿಸಲಾಗುತ್ತಿತ್ತು. ಸರಕಾರಗಳು ಹಿಂದಿನ ಕಾಲದಿಂದಲೇ ಅದನ್ನು ನೀಡುತ್ತಿದ್ದುವು. ಮೊಗಲರ ಕಾಲದಲ್ಲಿಯೂ ಅದು ಲಭಿಸಿತ್ತೆಂದು ದೇವಾಲಯದ ಪುರೋಹಿತರು ಹೇಳುತ್ತಾರೆ.
ಔರಂಗಝೇಬನೂ ಈ ಪ್ರಾಚೀನ ಸಂಪ್ರದಾಯವನ್ನು ಪಾಲಿಸಿದ್ದನು. ದೌರ್ಭಾಗ್ಯವಶಾತ್, ಇದಕ್ಕೆ ಆಧಾರವಾಗಿ ಅವರ ಬಳಿ ರಾಜಾಜ್ಞೆಯ ದಾಖಲೆ ಪತ್ರಗಳಿಲ್ಲ, ಹಾಗಿದ್ದರೂ, ಹಿಜರಿ 1061ರ ಶವ್ವಾಲ್ 5ರಂದು ಮುರಾದ್ ಬಕ್ಷ್ ತನ್ನ ತಂದೆಯ ಆಡಳಿತ ಕಾಲದಲ್ಲಿ ಹೊರಡಿಸಿದ ಒಂದು ವಿಜ್ಞಾಪನೆಯ ನಕಲು ಅವರ ಬಳಿಯಿದೆ. ಮಹಾ ಕಾಳೇಶ್ವರ ದೇವಾಲಯದ ಅಂದಿನ ಅರ್ಚಕರಾಗಿದ್ದ ದೇವರಾಮ್ ದೂರಿನನ್ವಯ ಅವರು ಚಕ್ರವರ್ತಿಯ ಪರವಾಗಿ ಈ ವಿಜ್ಞಾಪನೆಯನ್ನು ಪ್ರಕಟಿಸಿದ್ದರು. ಪಿರ್ಯಾದಿದಾರನ ವಾರೀಸು ಹಕ್ಕಿನ ನಿರ್ಣಯಕ್ಕಾಗಿ ಹಕೀಮ್ ಮುಹಮ್ಮದ್ ಮಹದಿಯವರು ಹಳೆಯ ಕಡತಗಳನ್ನು ಪರಿಶೀಲಿಸಿದರು. ತರುವಾಯ ದೇವಾಲಯದ ಈ ‘ದೀಪಕ್ಕೆ ಅಗತ್ಯವಿರುವ ನಾಲ್ಕು ಸೇರು (ಅಕ್ಷರಿ) ತುಪ್ಪವನ್ನು ನೀಡುತ್ತಲಿರುವಂತೆ ಅಲ್ಲಿನ ತಹಶೀಲ್ದಾರರಿಗೆ ಆದೇಶಿಸಿದ್ದರು.
ಈ ಆಜ್ಞೆಯ ನಕಲನ್ನು ಹಿಜರಿ 1153ರಲ್ಲಿ ಮುಹಮ್ಮದ್ ಸಾದುಲ್ಲ ಹೊರಡಿಸಿದರು. ಅರ್ಥಾತ್, ಮೂಲ ಆಜ್ಞೆಯ 93 ವರ್ಷಗಳ ಬಳಿಕ, ಈಗಿನ ಪುರೋಹಿತರ ಅಭಿಪ್ರಾಯದಂತೆ ಹಲವು ವರ್ಷಗಳ ಬಳಿಕ. ಈ ನಕಲಿನ ಪ್ರಕಾಶನದಿಂದ, ಹಳೆಯ ಆಜ್ಞೆಯು ಅಂದಿನವರೆಗೂ ಜಾರಿಯಲ್ಲಿತ್ತೆಂದು ವ್ಯಕ್ತವಾಗುತ್ತದೆ. ಔರಂಗಝೇಬನೂ ಆ ಕಾಲಾವಧಿಯಲ್ಲಿ ಆಡಳಿತ ನಡೆಸಿದ್ದನು. ಇಂದಿನ ಕಾಲದಲ್ಲಿ ಆ ವಿಜ್ಞಾಪನೆಗೆ ಬೆಲೆಯಿಲ್ಲದಿರುವುದರಿಂದ ಆ ಅನೂರ್ಜಿತ ಹಳೆಯ ಆಜ್ಞೆಯ ಜೋಪಾನದ ಬಗ್ಗೆ ಯಾರೂ ಕಾಳಜಿ ವಹಿಸಲಿಲ್ಲ. ಈ ದೇವಾಲಯಕ್ಕೆ ಸಂಬಂಧಿಸಿ ನಾನು ಪರಿಶೀಲಿಸಿದ ಪ್ರಾಚ್ಯ ವಸ್ತು ಸಂಗ್ರಹಾಗಾರರಲ್ಲಿರುವ ಕೆಲವು ರಾಜಾಡಳಿತ ಕಡತಗಳಲ್ಲಿ ಅಂದಿನ ಮಹಂತ ಲಕ್ಷ್ಮೀ ನಾರಾಯಣರ ಬಳಿ ಔರಂಗಝೇಬನ ಕಾಲದ ಕೆಲವು ದಾಖಲೆ ಪತ್ರಗಳಿದ್ದುವೆಂದು ತಿಳಿದು ಬರುತ್ತದೆ.
ಅಹ್ಮದಾಬಾದ್ನ ನಾಗರ್ ಸೇಠ, ನಿರ್ಮಿಸಿದ ಚಿಂತಾಮಣಿ ದೇವಾಲಯವನ್ನು ಕೆಡಹಲಾಗಿದೆಯೆಂದು ಕೆಲವು ಇತಿಹಾಸಗಾರರು ಹೇಳುತ್ತಿರುವರಾದರೂ ಅದು ಸುಳ್ಳೆಂದೇ ತೋರುತ್ತದೆ. ಏಕೆಂದರೆ, ಈ ಔರಂಗಝೇಬನೇ ಇದೇ ನಾಗರ್ಸೇಠನಿಗೆ ಶತ್ರುಂಜಯ ಮತ್ತು ಅಬೂ ದೇವಾಲಯಗಳಿಗಾಗಿ ಜಮೀನು ನೀಡಿದ್ದನು.
ಶತ್ರುಂಜಯ ಕ್ಷೇತ್ರಕ್ಕೆ ಭೂಮಿ ನೀಡಿದ ಆಜ್ಞೆ ಹೀಗಿದೆ: “…ಕೊನೆಯ ಹರ್ಷದಾಯಕ ವಿಷಯವೇನೆಂದರೆ, ಆಭರಣ ವ್ಯಾಪಾರಿಯಾಗಿರುವ ಸತಿದಾಸ್ ತನ್ನ ಮಹಾನ್ ಸಾನ್ನಿಧ್ಯದಿಂದ ರಾಜ ದರ್ಬಾರಿಗೆ ಮನವಿ ಸಲ್ಲಿಸಿರುತ್ತಾರೆ… ಅವರು ಚಕ್ರವರ್ತಿಯನ್ನು ಸೊಲೊಮನ್ ಮತ್ತು ದೇವದಾಸನಾದ (ಮುಹಮ್ಮದ್ರ) ಅನುಯಾಯಿಯೆಂದು ಪ್ರಶಂಸಿಸಿ ಸಲ್ಲಿಸಿರುವ ಮನವಿಯಲ್ಲಿ 31ನೇ ವರ್ಷದ ಪವಿತ್ರ ರಮಝಾನ್ ತಿಂಗಳ 19ನೇ ದಿನ ಸೂಬ ಅಹ್ಮದಾಬಾದ್ನ ಭಾಗವಾಗಿರುವ ಸೂರತೆ ಸರಕಾರಕ್ಕೆ ಸೇರಿದ (ಎರಡು ಲಕ್ಷ ‘ದಾಮ್’ ತೀರ್ವಯಿರುವ) ಸತ್ರಂಜ್ ಜಿಲ್ಲೆಯನ್ನು ಇನಾಮಾಗಿ ಮನವಿದಾರನಿಗೆ ರಾಜ ದರ್ಬಾರು ಅನುಮತಿಸುವುದೆಂದು ನಿರೀಕ್ಷಿಸುತ್ತಿದ್ದಾರೆ. ಆದ್ದರಿಂದ ನಾವು ಈ ಹಿಂದೆ ಮಾಡುತ್ತಿದ್ದ ರೀತಿಯಲ್ಲಿಯೇ ಮೇಲೆ ಹೇಳಿದ ಜಿಲ್ಲೆಯನ್ನು ಮನವಿದಾರನಿಗೆ ಇನಾಮಾಗಿ ನೀಡುತ್ತೇವೆ. ಆದ್ದರಿಂದ ಸೂಬಾದ ಇಂದಿನ ಮತ್ತು ಮುಂದಿನ ಕಾರ್ಯನಿರ್ವಾಹಕರು ಮತ್ತು ಮೇಲೆ ಹೇಳಿದ ಸರಕಾರವು ತಿಳಿದಿರಬೇಕಾದುದೇನೆಂದರೆ, ಈ ಪವಿತ್ರ ಆಜ್ಞೆಯನ್ವಯ ಮೇಲೆ ಹೇಳಿರುವ ಜಿಲ್ಲೆಯು ಮೇಲೆ ಸೂಚಿಸಿದ ವ್ಯಕ್ತಿಯ ಸ್ವಾಧೀನವಿರುವುದು. ಅವರ ಉತ್ತರಾಧಿಕಾರಿಗಳಿಗೆ ವಾರೀಸು ನಿಯಮದ ಪ್ರಕಾರ ಅದು ತಲೆತಲಾಂತರಗಳಿಗೆ ಹಸ್ತಾಂತರವಾಗುವುದು. ಎಲ್ಲ ರೀತಿಯ ತೆರಿಗೆ ಮತ್ತಿತರ ನಿಬಂಧನೆಗಳಿಂದ ಅವರಿಗೆ ವಿನಾಯತಿಯಿರುವುದು. ಪ್ರತಿ ವರ್ಷವೂ ಹೊಸ ಆಧಾರ ಪತ್ರ(ಸನದು)ಬೇಕೆಂದು ಅಪೇಕ್ಷಿಸಬಾರದು. ಈ ಆಜ್ಞೆಯಲ್ಲಿ ಕಿಂಚಿತ್ತೂ ಬದಲಾವಣೆ ಮಾಡಬಾರದು. ದುಲ್ಕಅದ್ ತಿಂಗಳ 9ನೇ ತಾರೀಕು ಹಿಜರಿ ವರ್ಷ 1068 (ಕ್ರಿ.ಶ. 1658)ರಲ್ಲಿ ಬರೆದದ್ದು.” (ಭಾರತದ ಪ್ರಧಾನ ಕಾರ್ಯದರ್ಶಿಯವರಿಗೆ 1923ರಲ್ಲಿ ಜೈನರು ಸಲ್ಲಿಸಿದ್ದು.)
ನಾಗರಸೇಠ್ ಔರಂಗಝೇಬನ ಕೆಲವು ಯುದ್ಧಗಳಿಗೆ ನೆರವಾಗಿದ್ದರು. ಅವರ ಸೇವೆಯಿಂದ ಸಂತೃಪ್ತನಾದ ಚಕ್ರವರ್ತಿಯು ಬಹುಮಾನವಾಗಿ ಜಮೀನು ನೀಡಿದ್ದನು. ಇದು ಗಿರ್ನಾರ್ ಮತ್ತು ಅಬೂಗಳಲ್ಲಿ ಕ್ಷೇತ್ರಗಳಿರುವ ಸ್ಥಳಗಳಾಗಿವೆ. ಆ ಕುರಿತು ನೀಡಲಾದ ಆಜ್ಞೆ ಹೀಗಿದೆ:
”ಪರಮ ದಯಾಮಯನೂ ಕರುಣಾಳುವೂ ಆದ ಅಲ್ಲಾಹನ ನಾಮದಿಂದ:
(ತುಗ್ ರ) ಹೇ, ಸತ್ಯವಿಶ್ವಾಸಿಗಳೇ! ದೇವನನ್ನು ಅನುಸರಿಸಿರಿ, ಪ್ರವಾದಿಯವರನ್ನು ಅನುಸರಿಸಿರಿ, ನಿಮ್ಮ ಆಡಳಿತಗಾರರನ್ನೂ ಅನುಸರಿಸಿರಿ.
(ಸೀನ್) ಅಬುಲ್ ಮುಝಫರ್ ಮುಹ್ಯುದ್ದೀನ್ ಮುಹಮ್ಮದ್ ಔರಂಗಝೇಬ್” ಅಲಂಗೀರ್ ಬಾದಷಹ ಖಾಝಿ: ಈಗ ವಿಶೇಷಾಜ್ಞೆಯನ್ನು ಹೊರಡಿಸಿರುವುದೇಕೆಂದರೆ, ಶಾರ್ವಾಕ ಸಮುದಾಯದ ಸಹಸ್ ಬಾಯಿಯ ಪುತ್ರ ಶಾಂತಿದಾಸ್ ಜವಹರಿ ಸೈನಿಕ ಕಾರ್ಯಾಚರಣೆಯಲ್ಲಿ ಬಹಳಷ್ಟು ನೆರವು ನೀಡಿದ ವ್ಯಕ್ತಿಯೆಂಬ ನೆಲೆಯಲ್ಲಿ ಕೆಲವು ವಿಶೇಷ ಸೌಲಭ್ಯಗಳನ್ನು ನಿರೀಕ್ಷಿಸುತ್ತಿದ್ದಾರೆ. ಆದ್ದರಿಂದ ನಮ್ಮ ಗೌರವ ಸೂಚಕವಾಗಿ ಅಹ್ಮದಾಬಾದ್ಗೆ ಸೇರಿದ ಪಾಲಿಟಾನ ಜಿಲ್ಲೆ ಮತ್ತು ಕ್ಷೇತ್ರವಿರುವ ಪ್ರಸಿದ್ಧ ಶತ್ರಂಜ್ ಬೆಟ್ಟ ಪ್ರದೇಶಗಳನ್ನೂ ನಾವು ಸಂಪೂರ್ಣವಾಗಿ ಶಾರ್ವಾಕ ಸಮುದಾಯದ ಶಾಂತಿದಾಸ್ ಜವಹರಿಗೆ ನೀಡುತ್ತೇವೆ. ಶತ್ರಂಜ್ ಬೆಟ್ಟಗಳಲ್ಲಿರಬಹುದಾದ ಮರ, ಉರುವಲುಗಳು ಶಾರ್ವಾಕ ಸಮುದಾಯಕ್ಕೆ ಸೇರುವುದು. ಅವರು ಅದನ್ನು ತಮ್ಮ ಅಗತ್ಯಾನುಸಾರ ಬಳಸಿಕೊಳ್ಳಬಹುದು. ಶತ್ರಂಜ್ ಬೆಟ್ಟಗಳ ಮತ್ತು ಕ್ಷೇತ್ರದ ಪಾಲಕರು ಯಾರೇ ಆಗಿದ್ದರೂ ಪಾಲಿಟಾನದ ಆದಾಯಕ್ಕೆ ಅರ್ಹರಾಗಿರುತ್ತಾರೆ. ಈ ಚಿರಂತನ ಸರಕಾರದ ಶ್ರೇಯೋಭಿವೃದ್ಧಿಗಾಗಿ ಅವರು ಪ್ರಾರ್ಥಿಸುತ್ತಿರಲಿ, ಇಂದಿನ ಮತ್ತು ಮುಂದಿನ ಆಡಳಿತ ಸಮಿತಿಯ ಉದ್ಯೋಗಸ್ಥರು, ಜಾಗೀರುದಾರರು ಮತ್ತಿತರರು ಈ ಆಜ್ಞೆಯನ್ನು ನಿಷ್ಕರ್ಷೆಯಿಂದ ಪಾಲಿಸಬೇಕು. ಅದರಲ್ಲಿ ಯಾವ ರೀತಿಯ ಲೋಪವನ್ನೂ ಮಾಡಬಾರದು.
“ಅದಲ್ಲದೆ, ಸಿರೋಹಿಗೆ ಸೇರಿದ ಜುನಾಗಢದಲ್ಲಿ ಗಿರ್ನಾರ್’ ಎಂದು ಪ್ರಸಿದ್ಧವಾದ ಒಂದು ಕಾಡು ಮತ್ತು ಅಬುಜಿಯಲ್ಲಿ ಒಂದು ಬೆಟ್ಟವಿದೆ. ವಿಶೇಷ ಸೌಲಭ್ಯವೆಂಬ ನೆಲೆಯಲ್ಲಿ ಅವೆರಡನ್ನೂ ಶಾರ್ವಾಕ ಸಮುದಾಯದ ಶಾಂತಿದಾಸ್ ಜವಹರಿಗೆ ನೀಡುತ್ತೇವೆ. ಆ ಮೂಲಕ ಅವರು ಪೂರ್ಣ ಸಂತೃಪ್ತರಾಗಲಿ, ಅವರ ವಿಷಯದಲ್ಲಿ ಯಾರೂ ಹಸ್ತಕ್ಷೇಪ ನಡೆಸಬಾರದೆಂಬುದನ್ನು ಅಧಿಕಾರಿಗಳು ತಿಳಿದಿರಲಿ, ಯಾವ ರಾಜಂದಿರೂ ಅವರಿಗೆ ಅಡ್ಡಿಪಡಿಸಬಾರದು ಮಾತ್ರವಲ್ಲ, ನಮ್ಮ ರಾಜಪ್ರೀತಿಗೆ ಪಾತ್ರರಾಗಲು ಅವರಿಗೆ ನೆರವಾಗಬೇಕು. ಪ್ರತಿವರ್ಷ ಹೊಸ ಸನದು ಬೇಕೆಂದು ಕೇಳಬಾರದು. ಈ ಗ್ರಾಮ ಮತ್ತು ಮೂರು ಬೆಟ್ಟಗಳ ಹಕ್ಕಿಗಾಗಿ ಯಾರಾದರೂ ವಾದಿಸಿದರೆ ಅವರು ಜನರಂತೆಯೇ ದೇವನ ಕೋಪಕ್ಕೂ ಗುರಿಯಾಗುವರು ಅವರಿಗೆ ವಿಶೇಷ ಸನದನ್ನೇ ನೀಡಲಾಗಿದೆ. ಹಿಜರಿ ವರ್ಷ 1070ರ ರಜಬ್ ತಿಂಗಳ 10 ರಂದು ಬರೆದದ್ದು (ಮಾರ್ಚ್ 12, 1660).” (ಮುಂಬೈಯ ವಾರ್ಸಿಟಿ ಜರ್ನಲ್, ಸಂಪುಟ: 1, ಪುಟ: 54)
ಆದರೆ, ವಾರಣಾಸಿಯ ವಿಶ್ವನಾಥ ಕ್ಷೇತ್ರವನ್ನೂ ಗೋಲ್ಕೊಂಡದ ಜುಮಾ ಮಸೀದಿಯನ್ನೂ ಕೆಡಹುವಂತೆ ಔರಂಗಝೇಬ್ ಆಜ್ಞಾಪಿಸಿದ ಬಗ್ಗೆ ಸ್ಪಷ್ಟ ಪುರಾವೆಗಳಿವೆ. ಈ ಕ್ಷೇತ್ರ ಮತ್ತು ಮಸೀದಿಯ ಧ್ವಂಸಕ್ಕೆ ಕೆಲವು ಅನಿವಾರ್ಯ ಕಾರಣ ಮತ್ತು ಹಿತವನ್ನು ಮನಗಂಡಿರಬೇಕೆಂದು ಭಾಸವಾಗುತ್ತದೆ. ವಿಶ್ವನಾಥ ದೇವಾಲಯದ ಧ್ವಂಸಕ್ಕೆ ಕಾರಣವಾದ ಘಟನೆ ಹೀಗಿದೆ: ಔರಂಗಝೇಬನು ಬಂಗಾಳಕ್ಕೆ ತೆರಳುವ ಹಾದಿಯಲ್ಲಿ ಬನಾರಸ್ ಸಮೀಪ ತಲಪಿದಾಗ ಅವರ ಪರಿವಾರದಲ್ಲಿದ್ದ ಹಿಂದೂ ರಾಜರು ಪಯಣವನ್ನು ನಿಲ್ಲಿಸಿ ಒಂದು ದಿನ ಅಲ್ಲಿ ತಂಗಬೇಕೆಂದು ಅಪೇಕ್ಷಿಸಿದರು. ಅದರಿಂದ ತಮ್ಮ ರಾಣಿಯರಿಗೆ ವಾರಣಾಸಿಗೆ ಹೋಗಿ, ಗಂಗೆಯಲ್ಲಿ ಸ್ನಾನ ಮಾಡಿ, ವಿಶ್ವನಾಥ ದೇವನನ್ನು ಪೂಜಿಸುವ ಅವಕಾಶ ದೊರೆಯುವುದೆಂದು ಅವರು ತಿಳಿಸಿದರು. ಈ ವಿನಂತಿಯನ್ನು ಸಂತೋಷದಿಂದ ಒಪ್ಪಿದ ಔರಂಗಝೇಬರು ವಾರಣಾಸಿಯ ಐದು ಮೈಲು ದೂರದಲ್ಲಿ ಸೇನಾ ಶಿಬಿರವನ್ನು ಏರ್ಪಡಿಸಿದರು. ರಾಣಿಯರು ಪಲ್ಲಕ್ಕಿಯಲ್ಲಿ ಸಾಗಿದರು. ಗಂಗೆಯಲ್ಲಿ ಸ್ನಾನ ಮಾಡಿ ಅವರು ವಿಶ್ವನಾಥ ದೇವಾಲಯವನ್ನು ಸಂದರ್ಶಿಸಿದರು. ಪೂಜಾ ಕರ್ಮಗಳ ಬಳಿಕ ಒಬ್ಬರ ಹೊರತು ಕಛನ ಮಹಾರಾಣಿಯ ಹೊರತು ಎಲ್ಲ ರಾಣಿಯರೂ ಮರಳಿ ಬಂದರು. ದೇವಾಲಯದ ಪರಿಸರಗಳಲ್ಲಿ ತೀವ್ರ ಶೋಧ ನಡೆಸಿದರೂ ರಾಣಿಯ ಪತ್ತೆಯಾಗಲಿಲ್ಲ, ಈ ಸುದ್ದಿ ಕೇಳಿ ಔರಂಗಝೇಬನು ಬಹಳ ಕಳವಳಗೊಂಡನು, ರಾಣಿಯನ್ನು ಪತ್ತೆ ಹಚ್ಚುವಂತೆ ಅವನು ತನ್ನ ಉನ್ನತಾಧಿಕಾರಿಗಳಿಗೆ ಆದೇಶಿಸಿದನು. ಕೊನೆಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಗೋಡೆಯನ್ನು ಸರಿಸಬಹುದಾಗಿದೆಯೆಂದು ಅವರು ತಿಳಿದುಕೊಂಡರು. ವಿಗ್ರಹವನ್ನು ಸರಿಸಿದಾಗ ಕೆಳ ಅಂತಸ್ತಿನ ಮೆಟ್ಟಲುಗಳು ಅವರಿಗೆ ಕಾಣಿಸಿದುವು. ಅಲ್ಲಿ ಅಪಮಾನಿತ ಸ್ಥಿತಿಯಲ್ಲಿ ರೋದಿಸುತ್ತಿರುವ ರಾಣಿಯನ್ನು ನೋಡಿ ಅವರು ದಿಗ್ಭ್ರಾಂತರಾದರು. ಈ ಒಳಮಾಳಿಗೆಯು ವಿಶ್ವನಾಥಮೂರ್ತಿಯ ಆಸನ ಪೀಠದ ನೇರ ಅಡಿಭಾಗದಲ್ಲಿತ್ತು. ರಾಜಂದಿರು ಕೋಪದಿಂದ ಕಿಡಿಕಿಡಿಯಾದರು.
ಮಹಿಳೆಯರ ಮೇಲೆ ನಡೆದ ಈ ಕ್ರೌರ್ಯಕ್ಕೆ ಕಠಿಣ ದಂಡನೆ ವಿಧಿಸಬೇಕೆಂದು ಅವರು ಒತ್ತಾಯಿಸಿದರು. ಪವಿತ್ರ ಪೀಠವನ್ನು ಮಲಿನ ಗೊಳಿಸಿರುವುದರಿಂದ ವಿಶ್ವನಾಥ ಮೂರ್ತಿಯನ್ನು ಸ್ಥಳಾಂತರಿಸಿ ಪ್ರತಿಷ್ಠಾಪಿಸಬೇಕೆಂದು ಔರಂಗಝೇಬ್ ಆಜ್ಞಾಪಿಸಿದನು. ಮಹಂತನನ್ನು ಬಂಧಿಸಿ, ದಂಡಿಸಿ, ದೇವಾಲಯವನ್ನು ಕೆಡಹಿಸಿದನು.
ಪಟ್ಟಾಭಿ ಸೀತಾರಾಮಯ್ಯನವರು ‘ಗರಿಗಳು ಮತ್ತು ಕಲ್ಲುಗಳು’ (Feathers and Stones) ಎಂಬ ಖ್ಯಾತ ಗ್ರಂಥದಲ್ಲಿ ಈ ಘಟನೆಯನ್ನು ಸಾಕ್ಷ್ಯಾಧಾರಗಳ ಸಹಿತ ವಿವರಿಸಿದ್ದಾರೆ. ಪಾಟ್ನಾ ವಸ್ತು ಸಂಗ್ರಹಾಲಯದ ಹಿಂದಿನ ಮುಖ್ಯಸ್ಥ ಡಾ| ಪಿ.ಎಲ್.ಗುಪ್ತಾರು ಈ ಘಟನೆಯನ್ನು ಬಲವಾಗಿ ಸಮರ್ಥಿಸಿದ್ದಾರೆ.
ಜುಮಾ ಮಸೀದಿಯನ್ನು ಕೆಡಹಿದ ಕಥೆ ಹೀಗಿದೆ: ಗೋಲ್ಕೊಂಡದ ಪ್ರಸಿದ್ಧ ಆಡಳಿತಗಾರ ತಾನ್ಷಾ, ಸಂಸ್ಥಾನದ ಕಂದಾಯವನ್ನು ಸಂಗ್ರಹಿಸುತ್ತಿದ್ದರೂ ದೆಹಲಿಯ ಪಾಲನ್ನು ಪಾವತಿಸುತ್ತಿರಲಿಲ್ಲ. ಕೆಲವಾರು ವರ್ಷಗಳಲ್ಲಿ ಆ ಮೊತ್ತ ಕೋಟಿಗಳಿಗೇರಿತು. ತಾನ್ಷಾನನ್ನು ಸಮಾಧಿ ಮಾಡಿದ್ದ ಖಜಾನೆಯ ಮೇಲೆ ಒಂದು ಜುಮಾ ಮಸೀದಿಯನ್ನು ನಿರ್ಮಿಸಲಾಗಿತ್ತು. ಈ ವಿಷಯ ತಿಳಿದ ಔರಂಗಝೇಬನು ಮಸೀದಿಯನ್ನು ಕೆಡಹಿ ಹಾಕುವಂತೆ ಆಜ್ಞಾಪಿಸಿದನು. ದಫನ ಮಾಡಿದ್ದ ಖಜಾನೆಯನ್ನು ಸ್ವಾಧೀನಪಡಿಸಿ ಜನ ಕಲ್ಯಾಣ ಕಾರ್ಯಗಳಿಗಾಗಿ ವಿನಿಯೋಗಿಸಿದನು. ನ್ಯಾಯಪಾಲನೆಯಲ್ಲಿ ಔರಂಗಝೇಬನಿಗೆ ಮಸೀದಿ ಅಥವಾ ಮಂದಿರವೆಂಬ ಭೇದವಿರಲಿಲ್ಲವೆಂದು ಈ ಎರಡು ಘಟನೆಗಳಿಂದ ವ್ಯಕ್ತವಾಗುತ್ತದೆ.
ದೌರ್ಭಾಗ್ಯವಶಾತ್, ಮಧ್ಯಕಾಲದ- ‘ಆಧುನಿಕ ಭಾರತೇತಿಹಾಸದ ಘಟನೆಗಳನ್ನೂ ಕಥಾ ಪಾತ್ರಗಳನ್ನೂ ವಿಕೃತಗೊಳಿಸಿ ತಪ್ಪಾಗಿ ಚಿತ್ರೀಕರಿಸಿರುವವುಗಳನ್ನು ಯಥಾವತ್ತಾಗಿ ದಿವ್ಯಸತ್ಯ ವೆಂಬಂತೆ ಅಂಗೀಕರಿಸಲಾಗುತ್ತಿದೆ. ವಾಸ್ತವಿಕಾಂಶಗಳನ್ನು ವಿವರಿಸಲು ಪ್ರಯತ್ನಿಸುವವರನ್ನೂ ಸತ್ಯಾಸತ್ಯಗಳನ್ನು ಬೇರ್ಪಡಿಸುವವರನ್ನೂ ತಿರುಚಿದವುಗಳನ್ನು ಅನಾವರಣಗೊಳಿಸುವವರನ್ನೂ ಅಪರಾಧಿಗಳೆಂದು ಪರಿಗಣಿಸುವ ಮನೋಭಾವ ಇಂದು ಕಂಡು ಬರುತ್ತಿದೆ. ಸ್ಥಾಪಿತ ಕೋಮು ಹಿತಾಸಕ್ತರು ಇತಿಹಾಸವನ್ನು ತಿರುಚಿ ವಿಕೃತಗೊಳಿಸುವ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.
ಇಲ್ಲಿ ಇನ್ನೊಂದು ಅಂಶವೂ ಶೋಚನೀಯವಾಗಿದೆ. ಉಭಯ ವರ್ಗಕ್ಕೆ ಸೇರಿದ ಸಂಪ್ರದಾಯವಾದಿಗಳು ಭಾರತದ ಮಧ್ಯಕಾಲೀನ ಇತಿಹಾಸವನ್ನು ಮಾತ್ರವಲ್ಲ, ವೇದ ಮತ್ತು ಕುರ್ಆನ್ನ ಬೋಧನೆಗಳನ್ನೂ ತಪ್ಪಾಗಿ ವ್ಯಾಖ್ಯಾನಿಸುತ್ತಿದ್ದಾರೆ. ಆತ್ಮಸಾಕ್ಷಿ ಯಿಲ್ಲದ ರಾಜಕಾರಣಿಗಳು ವೈರತ್ವಕ್ಕೆ ಗಾಳಿ ಹಾಕುತ್ತಿದ್ದಾರೆ. ಈ ಚಂಡ ಮಾರುತದಿಂದ ತಮ್ಮ ದೇಶ ಬಾಂಧವರು ಕಿತ್ತೆಸೆಯಲ್ಪಡುವರೆಂಬುದನ್ನು ಅವರು ಮರೆಯುತ್ತಾರೆ. (ಸರ್ ಸೈಯದ್: ಮಖಾಲಾತೆ ಸರ್ ಸೈಯದ್, ಎಸ್.ಎಮ್. ಇಸ್ಮಾಈಲ್ ಕ್ರೋಡೀಕರಿಸಿದ್ದು, ಸಂಪುಟ:10, ಪುಟ:50)
ಇಸ್ಲಾಮ್ ಮತ್ತು ಪರಧರ್ಮ ಸಹಿಷ್ಣುತೆ ಎಂಬ ಕೃತಿಯಿಂದ
IslamKannada News Portal
