Home / ಲೇಖನಗಳು / ಕ್ಷಮಾ ಗುಣ

ಕ್ಷಮಾ ಗುಣ

@ ಅಬೂ ಝೀಶಾನ್

ಇಸ್ಲಾಮೀ ಇತಿಹಾಸದಲ್ಲಿ ಹೆಚ್ಚಿನ ಶ್ರೇಷ್ಠ ಇಮಾಮರುಗಳಿಗೆ ಆಯಾ ಕಾಲದಲ್ಲಿ ಅನೇಕ ಶತ್ರುಗಳಿರುತ್ತಿದ್ದರು. ಶೈಖುಲ್ ಇಸ್ಲಾಮ್ ಇಬ್ನು ತೈಮಿಯರಿಗೆ ಅನೇಕ ಶತ್ರುಗಳಿದ್ದರು. ಅವರಲ್ಲಿ ಒಬ್ಬರಂತೂ ಶೈಖ್‌ರಿಗೆ ಬಹಳ ಕೀಟಲೆ ಕೊಡುತ್ತಿದ್ದರು. ಅವರು ಕೂಡಾ ವಿದ್ವಾಂಸರಾಗಿದ್ದರು. ಇಬ್ನು ತೈಮಿಯರ ವಿರುದ್ಧ ಅನೇಕ ಅಪಪ್ರಚಾರವನ್ನು ಮಾಡಿದ್ದರು. ಒಂದು ದಿನ ಅವರ ನಿಧನರಾದರು. ಆಗ ಒಬ್ಬ ಶಿಷ್ಯ ಓಡಿ ಬಂದು ಶೈಖ್‌ರೊಂದಿಗೆ ಹೇಳಿದರು, “ತಮಗೆ ಶುಭವಾರ್ತೆ, ಸಂತೋಷ ಪಡಿರಿ. ತಮ್ಮ ಅತಿ ದೊಡ್ಡ ಶತ್ರು ಇಂದು ಮರಣ ಹೊಂದಿದರು.” ಇದನ್ನು ಕೇಳಿ ಶೈಖ್ ಇಬ್ನು ತೈಮಿಯರ ಮುಖಭಾವ ಬದಲಾಯಿತು. ತುಂಬಾ ದುಃಖಿತಗೊಂಡು ಆತನೊಂದಿಗೆ ಹೇಳಿದರು, “ಒಬ್ಬ ಮುಸ್ಲಿಮ್ ಸಹೋದರನ ಮರಣ ವಾರ್ತೆಯಿಂದ ಸಂತೋಷಗೊಳ್ಳಿರೆಂದು ಹೇಳುತ್ತಿರುವೆಯಾ?” ನಂತರ ನೇರವಾಗಿ ಮರಣ ಹೊಂದಿದ ಅವರ ಮನೆಗೆ ಹೋದರು. ಅವರ ಮಕ್ಕಳನ್ನು ಅಪ್ಪಿ ಹಿಡಿದು ಸಾಂತ್ವನಿಸಿದರು. ನಂತರ ಆ ಮಕ್ಕಳೊಂದಿಗೆ ಹೇಳಿದರು, “ಇಂದಿನಿಂದ ನಿಮ್ಮ ತಂದೆ ನಾನಾಗಿದ್ದೇನೆ. ನಿಮ್ಮ ಜವಾಬ್ದಾರಿ ನನ್ನ ಮೇಲೆ.” ಎಂತಹ ಮಾತು. ಜೀವನವಿಡೀ ತನಗೆ  ಕಷ್ಟವನ್ನೇ ಕೊಟ್ಟ ಆತನ ಮಕ್ಕಳೊಂದಿಗೆ ಹೇಳುವ ಮಾತು.

ಶೈಖುಲ್ ಇಸ್ಲಾಮ್ ಇಬ್ನು ತೈಮಿಯರ ಇನ್ನೊಂದು ಘಟನೆ. ಈಜಿಪ್ಟ್ ನ ಆಡಳಿತಾಧಿಕಾರಿ ಅವರನ್ನು ಬಹಳಷ್ಟು ಪ್ರೀತಿಸುತ್ತಿದ್ದರು ಹಾಗೂ ಗೌರವಿಸುತ್ತಿದ್ದರು. ಆದರೆ ಆ ಆಡಳಿತಾಧಿಕಾರಿಯ ವಿರುದ್ಧ ಒಳಸಂಚು ನಡೆದು ಅವರನ್ನು ಪದಚ್ಯುತಗೊಳಿಸಲಾಯಿತು. ಆ ಆಡಳಿತಾಧಿಕಾರಿ ಜೀವ ಉಳಿಸಿ ಓಡಿ ಹೋದರು. ಹೊಸ ಆಡಳಿತಾಧಿಕಾರಿ ಇಬ್ನು ತೈಮಿಯರನ್ನು ದ್ವೇಷಿಸುತ್ತಿದ್ದನು. ಶೈಖ್‌ರನ್ನು ದ್ವೇಷಿಸುತ್ತಿದ್ದ ವಿದ್ವಾಂಸರಿಗೆ ಇದರಿಂದ ಶಕ್ತಿ ದೊರೆಯಿತು. ಶೈಖ್‌ರ ವಿರುದ್ಧ ಅಪವಾಧಗಳನ್ನು ಹೊರಿಸಲಾಯಿತು. ಅವರ ವಿರುದ್ಧ ಪುಸ್ತಕಗಳನ್ನು ಬರೆದೂ ಹಂಚಲಾಯಿತು. ಇವೆಲ್ಲ ಕಾರಣಗಳಿಂದ ಶೈಖ್‌ರನ್ನು ಜೈಲಿಗೆ ಹಾಕಲಾಯಿತು. ಹಾಗೂ ಅನೇಕ ಸಮಯಗಳ ಕಾಲ ಅವರು  ಜೈಲಿನಲ್ಲೇ ಕಳೆದರು ನಂತರ ಆ ಶೈಖ್‌ರನ್ನು ಇಷ್ಟ ಪಡುತ್ತಿದ್ದ ಪದುಚ್ಯುತಗೊಳಿಸಲ್ಪಟ್ಟಿದ್ದ ಆಡಳಿತಾಧಿಕಾರಿ ಮತ್ತೊಮ್ಮೆ ಸೇನೆಯನ್ನು  ಒಟ್ಟುಗೂಡಿಸಿ ಅಧಿಕಾರವನ್ನು ಮರಳಿ ಗಳಿಸಲು ಸಫಲರಾದರು. ಅಧಿಕಾರ ದೊರೆತೊಡನೆ ಅವರು ಮಾಡಿದ ಪ್ರಥಮ ಆಜ್ಞೆ ಶೈಖ್  ಇಬ್ನು ತೈಮಿಯರನ್ನು ಜೈಲಿನಿಂದ ಬಿಡುಗಡೆಗೊಳಿಸುವುದಾಗಿತ್ತು. ಶೈಖ್‌ರನ್ನು ಸ್ವಾಗತಿಸಲು ಅರಮನೆಯ ಅಂಗಳದಲ್ಲೇ ಕಾದು ನಿಂತರು. ಶೈಖ್ ಬಂದ ಕೂಡಲೇ ಅವರನ್ನು ತಬ್ಬಿ ಹಿಡಿದು ಆಲಂಗಿಸಿದರು. ನಂತರ ಶೈಖ್‌ರ ಕೈಗೆ ಒಂದು ಕಾಗದವನ್ನು ಕೊಟ್ಟು  ಹೇಳಿದರು, ಈ ಕಾಗದದಲ್ಲಿ ನಿಮ್ಮನ್ನು ದ್ವೇಷಿಸುವ ಹಾಗೂ ನಿಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡಿದ ವಿದ್ವಾಂಸರ ಹೆಸರುಗಳಿವೆ. ಒಂದು  ಆಜ್ಞೆ ಕೊಡಿ, ಎಲ್ಲರನ್ನೂ ಜೈಲಿಗೆ ತಳ್ಳುತ್ತೇವೆ. ಆಗ ಆ ಮಹಾನುಭಾವ ಹೇಳುವ ಮಾತು, “ಬೇಡ, ನಾನು ಎಲ್ಲರನ್ನೂ ಕ್ಷಮಿಸಿದ್ದೇನೆ. ಇವರು ಕೂಡಾ ಇಸ್ಲಾಮಿನ ವಿದ್ವಾಂಸರಾಗಿದ್ದಾರೆ. ನೀವು ಇವರನ್ನು ಜೈಲಿಗೆ ಹಾಕಿದರೆ ಧರ್ಮದ ಸೇವೆಗಾಗಿ ಇವರ ಬದಲಿಗೆ ಯಾರನ್ನು ತರುವಿರಿ.”

ಇಮಾಮ್ ಅಹ್ಮದ್ ಬಿನ್ ಹಂಬಲ್(ರ)ರನ್ನು ಜೈಲಿಗೆ ಹಾಕಿ ನಿರಂತರ ಛಡಿಯೇಟಿನ ಶಿಕ್ಷೆ ಕೊಟ್ಟಾಗ ಅವರ ಬೆನ್ನು ಭಾಗ ತಾಗಿ ಒಳಗಿನಿಂದ ಮಾಂಸ ಕಾಣುತ್ತಿತ್ತು. ಇಂತಹ ದೌರ್ಜನ್ಯ ನಡೆಸಿದವರ ವಿರುದ್ಧ ಕೈಯೆತ್ತಿ ಅಲ್ಲಾಹನೊಂದಿಗೆ ಪ್ರಾರ್ಥಿಸಿರಿ ಎಂದು ಅವರ ಶಿಷ್ಯನೊಬ್ಬ ಅವರೊಂದಿಗೆ ಹೇಳಿದಾಗ ಆ ಮಹಾನುಭಾವ ಹೇಳುವ ಮಾತು, “ನನಗೆ ಯಾರ ವಿರುದ್ಧವೂ ಏನೂ ದ್ವೇಷವಿಲ್ಲ. ನಾನು ಎಲ್ಲರನ್ನೂ ಕ್ಷಮಿಸಿದ್ದೇನೆ.

ಕ್ಷಮಾಗುಣವು ಬಹಳ ದೊಡ್ಡ ಗುಣವಾಗಿದೆ. ತನ್ನ ಮನ ಮನೋಯಿಸಿದ, ತನಗೆ ತೀವ್ರವಾಗಿ ತೊಂದರೆ ಕೊಟ್ಟವನನ್ನು ಕ್ಷಮಿಸಿ ಆಲಂಗಿಸುವುದು ಎಷ್ಟು ದೊಡ್ಡ ಪುಣ್ಯ ಕಾರ್ಯ. ಇದು ಅಷ್ಟು ಸುಲಭದ ಕಾರ್ಯವಲ್ಲ. ಆದರೆ ಯಾರೆಲ್ಲ ಈ ಕಾರ್ಯವನ್ನು  ಮಾಡಿದರೋ ಅಲ್ಲಾಹನು ಅವರ ಹೃದಯಗಳನ್ನು ವಿಶಾಲಗೊಳಿಸುವನು ಹಾಗೂ ಈ ಲೋಕದಲ್ಲೂ ಅವರನ್ನು ಉನ್ನತ ಸ್ಥಾನಕ್ಕೆ ತಲುಪಿಸುವನು.

ನಮ್ಮ ನೆಚ್ಚಿನ ಪ್ರವಾದಿಯವರ(ಸ) ಜೀವನದ ಪ್ರತಿಯೊಂದು ಘಟ್ಟದಲ್ಲೂ ಈ ಗುಣವು ನಮಗೆ ಕಾಣ ಸಿಗುತ್ತದೆ. ತಾಯಿಫ್‌ನ ಸಂದರ್ಭ,  ತನ್ನ ನೆಚ್ಚಿನ ಪತ್ನಿಯ ಮೇಲೆ ವ್ಯಭಿಚಾರದ ಆರೋಪ ಹೊರಿಸಿದ ಸಂದರ್ಭ: ತನಗೆ ಜೀವನವಿಡೀ ಕೀಟಲೆ ಕೊಟ್ಟವರ ವಿರುದ್ಧ ಅಧಿಕಾರ  ದೊರೆತಾಗ ಪ್ರತೀಕಾರವೆಸಗಬಹುದಾದ ಸಂದರ್ಭ ಎಲ್ಲ ಕಡೆಯೂ ಪ್ರವಾದಿಯವರ(ಸ) ಒಂದೇ ಧೋರಣೆಯಾಗಿತ್ತು. ಎಲ್ಲರಿಗೂ ಕ್ಷಮೆ. ಇದನ್ನು ಪ್ರವಾದಿ(ಸ) ತನ್ನ ಜೀವನದಲ್ಲಿ ಮಾಡಿ ತೋರಿಸಿದ್ದು ಮಾತ್ರವಲ್ಲ ತನ್ನ ಸಹಾಬಿಗಳಿಗೂ ಇದನ್ನು ಮಾಡಲು ಉತ್ತೇಜಿಸುತ್ತಿದ್ದರು. ಪ್ರವಾದಿ(ಸ) ಹೇಳಿದರು, “ನೀವು ಇತರರನ್ನು ಕ್ಷಮಿಸಿ, ಅಲ್ಲಾಹನು ನಿಮ್ಮನ್ನು ಕ್ಷಮಿಸುವನು.”

ಆದರೆ ಆ ಪ್ರವಾದಿಯ(ಸ) ಉಮ್ಮತ್ ಆದ ನಾವು ಇತರರನ್ನು ಕ್ಷಮಿಸಲು ತಯಾರಿಲ್ಲ. ಯಾಕೆಂದರೆ ಶೈತಾನನು ದ್ವೇಷವನ್ನು ನಮ್ಮ ಮನಸ್ಸಿನಲ್ಲಿ ತುಂಬಲು ಸದಾ ಪ್ರಯತ್ನಿಸುತ್ತಿರುತ್ತಾನೆ. ಅದೇ ಸಮಯದಲ್ಲಿ ಒಂದು ವೇಳೆ ನಾವು ಏನಾದರೂ ತಪ್ಪು ಮಾಡಿದರೆ ಇತರರು ಹಾಗೂ ಅಲ್ಲಾಹನು ನಮ್ಮನ್ನು ಕ್ಷಮಿಸಬೇಕೆಂದು ಸದಾ ಬಯಸುತ್ತೇವೆ. ಇತರರ ಬಗ್ಗೆ ದ್ವೇಷ ಇಟ್ಟು ಏನಾದರೂ ಪ್ರಯೋಜನವಿದೆಯೇ? ಅದರಿಂದ ಮನಸ್ಸು ಕೂಡಾ ಭಾರವಾಗಿರುತ್ತದೆ. ಒಂದು ವೇಳೆ ಮರಣದ ಸಾಂದರ್ಭಿಕ ಕ್ಷಮಾಗುಣಕ್ಕಿರುವ ಪ್ರತಿಫಲವನ್ನು ತೋರಿಸಿ ಅಲ್ಲಾಹನು ಒಂದು ನಿಮಿಷ ಕಾಲಾವಕಾಶ ಕೊಟ್ಟರೆ, ನಾವು ಯಾರೊಂದಿಗೆಲ್ಲ ನಮಗೆ ದ್ವೇಷವಿದೆಯೋ ಅವರೆಲ್ಲರನ್ನೂ ಆ ಒಂದು ನಿಮಿಷದಲ್ಲಿ ಖಂಡಿತವಾಗಿಯೂ ಕ್ಷಮಿಸಿ ಬಿಡುವೆವು. ಹಾಗಾಗಿ ಯಾರೊಂದಿಗೂ ದ್ವೇಷವಿಡದೆ ಎಲ್ಲರನ್ನು ಅಲ್ಲಾಹನ  ಸಂಪ್ರೀತಿಗಾಗಿ ಕ್ಷಮಿಸಿ ಕ್ಷಮಾಗುಣವನ್ನು ನಮ್ಮಲ್ಲಿ ಬೆಳೆಸಬೇಕು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …