@ ಶಹನಾಝ್ ಎಂ.
(ಲೇಖಕಿ, ಸಂಪಾದಕಿ ಅನುಪಮ ಮಾಸಿಕ)
ಈ ಜಗತ್ತಿನಲ್ಲಿರುವ ಮುಸ್ಲಿಮರೆಲ್ಲರೂ ಪವಿತ್ರ ಗ್ರಂಥ ಕುರ್ಆನನ್ನು ಖಂಡಿತಾ ಓದುತ್ತಾರೆ. ತಮ್ಮ ಧರ್ಮ ಗ್ರಂಥವನ್ನು ಗೌರವಿಸುತ್ತಾರೆ. ದಿನಾಲೂ ಓದುವವರೂ ಇದ್ದಾರೆ. ತಿಂಗಳಿ ಗೊಮ್ಮೆ ಓದುವವರೂ ಇದ್ದಾರೆ. ವರ್ಷಕ್ಕೆ ಒಮ್ಮೆ (ರಮಝಾನ್ ತಿಂಗಳಲ್ಲಿ) ತೆರೆದು ಓದುವವರೂ ಇದ್ದಾರೆ. ನೂರು ಬಾರಿ ಈ ಗ್ರಂಥವನ್ನು ಓದಿದರೂ ನಿಮಗೆ ಅರಬೀ ಭಾಷೆಯ ಜ್ಞಾನ ಇಲ್ಲದಿದ್ದರೆ ಅದರಲ್ಲಿ ಏನು ಹೇಳಲಾಗಿದೆ ಎಂಬ ಸತ್ಯದಿಂದ ನೀವು ವಂಚಿತರಾಗುವಿರಿ.
ಎಲ್ಲಾ ಮುಸ್ಲಿಮರೂ ಅರಬೀ ಪಂಡಿತರಾಗಿ ಇರುವುದಿಲ್ಲ. ಅಂತಹ ಜನರಿಗಾಗಿ ಕುರ್ಆನ್ ಗ್ರಂಥದ ಅನುವಾದ ಎಲ್ಲಾ ಭಾಷೆಯಲ್ಲೂ ಇಂದು ಲಭ್ಯವಿದೆ. ಒಂದು ಬಾರಿ ಇಂತಹ ಅನುವಾದದ ಕುರ್ಆನನ್ನು ನಾವು ಓದಲೇಬೇಕು. ಕುರ್ಆನ್ ದೇವಗ್ರಂಥ ಎಂಬ ಸತ್ಯವನ್ನು ಮನದಟ್ಟು ಮಾಡಬೇಕಾದರೆ ಮೊದಲು ಅದು ಏನು ಹೇಳುತ್ತಿದೆ ಮಾನವನಿಗೆ ಎಂಬುವುದನ್ನು ಅರಿಯಬೇಕು.
ದೇವ ಸಂದೇಶವೆಂದು ಅನುಯಾಯಿಗಳು ಬಿಂಬಿಸುವ ಹಲವು ಗ್ರಂಥಗಳು ಈ ಭೂಮಿಯಲ್ಲಿವೆ. ಆದ್ರೆ, ದೈವಿಕ ಗ್ರಂಥ ಎಂದು ಹೇಳಿಕೊಳ್ಳುವ ಒಂದು ಗ್ರಂಥವೇ ಕುರ್ಆನ್. ಇದಕ್ಕೆ ಸರಿಸಾಟಿಯಾದ ಯಾವುದೇ ಗ್ರಂಥವೂ ಇಲ್ಲ. ಮಾನವ ಜೀವದ ಹುಟ್ಟಿನಿಂದ ಮರಣದವರೆಗೆ ಒಂದು ಸಂಪೂರ್ಣ ಜೀವನ ವ್ಯವಸ್ಥೆಯನ್ನು ಮಾನವ ಲೋಕಕ್ಕೆ ಈ ಗ್ರಂಥ ತೆರೆದಿಡುತ್ತದೆ. ಈ ಭೂಮಿಯ ಹುಟ್ಟು ಮತ್ತು ಸಾವು, ಸೃಷ್ಟಿಯ ಸಮಗ್ರ ವಿವರಗಳನ್ನು ವಿವರಿಸುತ್ತದೆ. ಈ ಮಾನವರನ್ನು ಯಾಕಾಗಿ ದೇವನು ಹುಟ್ಟಿಸಿದ!? ಆತನಿಗೆ ಬೇರೆ ಕೆಲಸ ಇರಲಿಲ್ಲವೇ?! ಎಂದು ಕೇಳುವವರಿಗೆ ಈ ಗ್ರಂಥ ಉತ್ತರ ಕೊಡುತ್ತದೆ.
ಮೋಜು, ಮಸ್ತಿ ಮಾಡಿ ಮದುವೆ ಆಗಿ, ಮಕ್ಕಳನ್ನು ಹುಟ್ಟಿಸಿ ಮತ್ತೆ ಸಾಯಿರಿ… ಎಂದು ಮಾನವನನ್ನು ಸೃಷ್ಟಿಸಿದ್ದಲ್ಲ.
ಈ ಭೂಮಿಯಲ್ಲಿ ಮಾನವ ಹೇಗೆ ಬದುಕಬೇಕು, ಬದುಕಿನ ವಿಧಾನ ಏನು, ಯಾಕೆ ಸೃಷ್ಟಿಸಲಾಗಿದೆ, ಕುಟುಂಬದಲ್ಲಿ ಆತನ ಹೊಣೆಗಾರಿಕೆ ಏನು, ಯಾವುದನ್ನು ತಿನ್ನಬೇಕು? ಹೇಗೆ ಸಂಪಾದಿಸಬೇಕು? ಪುಣ್ಯದ ದಾರಿ ಯಾವುದು? ಇತ್ಯಾದಿ ಎಲ್ಲಾ ಮಾರ್ಗದರ್ಶನ ನೀಡಲು ಝಬೂರ್, ತೌರಾತ್, ಇಂಜೀಲ್ ಮತ್ತು ಕುರ್ಆನ್ ಗ್ರಂಥಗಳನ್ನು ಅಲ್ಲಾಹನು ವಿವಿಧ ದೂತರ ಮೂಲಕ ವಿವಿಧ ಸಮುದಾಯಗಳಿಗೆ ನೀಡಿರುತ್ತಾನೆ. ಇದರ ನಂತರವೂ ನಾವು ದೇವನನ್ನು ಅರಿಯದೇ ಹೋಗುವುದಾದರೆ ಇದಕ್ಕಿಂತ ದೊಡ್ಡ ನಷ್ಟ, ಮೂರ್ಖತನ ಬೇರೇನಿದೆ!
ಕುರ್ಆನ್ಗಿಂತ ಮುಂಚೆ ಬಂದ ಪವಿತ್ರ ಗ್ರಂಥಗಳೆಲ್ಲಾ ಪುರೋಹಿತರ, ಆಡಳಿತಗಾರರ ಇಚ್ಛಾಶಕ್ತಿಯಂತೇ ಹಲವು ಹಸ್ತಕ್ಷೇಪಗಳಿಂದ ಮೂಲ ಸ್ವರೂಪವನ್ನು ಕಳೆದುಕೊಂಡರೂ ಕುರ್ಆನ್ ಮಾತ್ರ ಯಾವುದೇ ತಿದ್ದುಪಡಿಗೂ ತುತ್ತಾಗಲಿಲ್ಲ. ಪ್ರವಾದಿ ಮುಹಮ್ಮದ್(ಸ)ರಿಗೆ ದೇವನ ಕಡೆಯಿಂದ ಪ್ರಥಮ ದಿವ್ಯ ಸಂದೇಶವು ಕ್ರಿ.ಶ. 610 ರಲ್ಲಿ ಪ್ರಾಪ್ತವಾಗಿತ್ತು. ಅನಂತರದ 23 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ಕುರ್ಆನಿನ ಭಾಗಗಳು ಅವರಿಗೆ ಪ್ರಾಪ್ತವಾಗುತ್ತಾ ಹೋದವು. ಪ್ರವಾದಿವರ್ಯರ(ಸ) ನಿಧನಕ್ಕೆ ಕೆಲವೇ ದಿನ ಮುನ್ನ ಕ್ರಿ.ಶ. 632ರಲ್ಲಿ ಈ ಸರಣಿ ಪರಿಪೂರ್ಣಗೊಂಡಿತು.
ಕುರ್ಆನ್ ಪ್ರಕಾರ ಯಾವ ಮಾನವನೂ ಜನ್ಮತಃ ಪಾಪಿಯಾಗಿರುವುದಿಲ್ಲ. ಈ ಲೋಕದಲ್ಲಿ ಯಾರೂ ಪಾಪದ ಹೊರೆ ಹೊತ್ತು ಹುಟ್ಟುವುದಿಲ್ಲ. ಪಾಪ-ಪುಣ್ಯಗಳ ಪ್ರಜ್ಞೆ ಆರಂಭ ವಾಗುವುದೇ ಆತನು ಚಿಂತನೆ ಮಾಡಲು ಶುರು ಮಾಡಿದಾಗ, ಬುದ್ಧಿ ಬೆಳೆದಾಗ. ಪ್ರತೀ ಒಂದು ಮಾನವನ ಜನನದ ನಂತರ ಈ ಭೂಮಿಯಲ್ಲಿ ಬದುಕಿರುವಷ್ಟು ಕಾಲ ಅವರ ಪರೀಕ್ಷಾ ಸಮಯವಾಗಿರುತ್ತದೆ. ಮರಣದೊಂದಿಗೆ ಈ ಪರೀಕ್ಷೆ ಮುಕ್ತಾಯವಾಗುತ್ತದೆ. ಈ ಜೀವನ ಹೇಗೆ ಸಾಗಿಸಬೇಕೆಂಬ ಮಾರ್ಗದರ್ಶಿ ಸಂಹಿತೆಯನ್ನೂ ದೇವನೇ ನೀಡಿರುತ್ತಾನೆ. ಈ ಸಂಹಿತೆಯನ್ನು ಸರಿಯಾಗಿ ಅರ್ಥಮಾಡಿಕೊಂಡ ಜನರು ಈ ಲೋಕದ ಬದುಕಿನಲ್ಲಿ ಎದುರಾಗುವ ದುಃಖ, ನಷ್ಟ, ಕಷ್ಟ, ಸಂಕಟ, ನೋವುಗಳಿಗೆ ಭಯಭೀತರಾಗುವುದಿಲ್ಲ, ದುಃಖಿಸುವುದೂ ಇಲ್ಲ. ಉದಾ:ಇತ್ತೀಚೆಗೆ ನಾವೆಲ್ಲಾ ಟರ್ಕಿಯಲ್ಲಿ ಸಂಭವಿಸಿದ ಭಯಾನಕ ಭೂಕಂಪದ ಕರುಣಾಜನಕ ದೃಶ್ಯಗಳನ್ನು ಟಿ.ವಿ.ಯಲ್ಲಿ ನೋಡಿದ್ದೇವೆ. ಬಹಳ ಸಂಕಟ, ದುಃಖದಿಂದ ಕಣ್ಣಲ್ಲಿ ನೀರೂ ಸುರಿಸಿದ್ದೇವೆ. ಜನರ ಸಾವು-ನೋವಿನ ದೃಶ್ಯಗಳನ್ನು ಕಂಡು ಮನಸ್ಸು ಭಾರ ಆಗಿತ್ತು. ಸಾವಿನ ಮನೆಯಾದ ಟರ್ಕಿ ಮತ್ತು ಸಿರಿಯಾದ ಆ ರುದ್ರಭೂಮಿಯಲ್ಲಿ ಒಂದು ಧ್ವನಿ ಆಗಾಗ ಮೊಳಗುತ್ತಿತ್ತು. ಅದುವೇ `ಅಲ್ಲಾಹು ಅಕ್ಬರ್’. ಕುಸಿದು ಬಿದ್ದ ಸಿಮೆಂಟಿನ ಅವಶೇಷಗಳ ಒಳಗಿನಿಂದ ಒಂದು `ಮಗು’ ಜೀವಂತ ಕಾಣ ಸಿಕ್ಕಿದಾಗ `ಅಲ್ಲಾಹು ಅಕ್ಬರ್’ ಎಂಬ ದೇವನ ಸ್ಮರಣೆ ನಾಲ್ಕು ದಿಕ್ಕುಗಳಿಂದಲೂ ಕಿವಿಗೆ ಕೇಳಿಸುತ್ತಿತ್ತು. ಇಂತಹ ಭಯಾನಕವಾದ, ದುಃಖಕರವಾದ ಸಾವು-ನೋವಿನ ಸಂಕಟಗಳ ನಡುವೆಯೂ ಅಲ್ಲಿಯ ಜನರಿಗೆ ದೇವನು ಮಹಾನನು ಆಗಿಯೇ ಇದ್ದಾನೆ! ಸಂಕಟ ಅಪ್ಪಳಿಸಿದಾಗ ಅವರು ದೇವನನ್ನು ನಿಂದಿಸಲಿಲ್ಲ, ದೂರು ಹೇಳಲಿಲ್ಲ…! ಇದುವೇ ಓರ್ವ ನೈಜ ಮುಸ್ಲಿಮನ ಲಕ್ಷಣ. ಅವರು ದೇವನನ್ನು ಅರಿತಿದ್ದಾರೆ. ಧರ್ಮ ಗ್ರಂಥವನ್ನು ತಿಳಿದಿದ್ದಾರೆ. ಇದೆಲ್ಲಾ ದೇವನ ಪರೀಕ್ಷೆ ಎಂದು ದೇವವಿಶ್ವಾಸಿ ಚಿಂತಿಸಿದರೆ, ದೇವನಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಹೇಳುವವರೂ ಇದರ ನಡುವೆ ಇದ್ದಾರೆ.
ತನ್ನ ಓರ್ವನೇ ಪುಟ್ಟ ಮಗನನ್ನು ಕಳೆದುಕೊಂಡು ಶಿಲೆಯಂತೇ ಕುಳಿತ ನನ್ನ ಮಗಳಿಗೆ ನಾನು ಕಣ್ಣೀರು ಸುರಿಸುತ್ತಾ ಹೇಳಿದ್ದೆ,
“ಒಂದು ಸಲ ಅತ್ತು ಬಿಡು ಮಗಳೇ… ಮನಸ್ಸು ಹಗುರವಾಗುತ್ತದೆ…!” ಆಗ ಅವಳೆಂದಳು,
“ಅಮ್ಮಾ… ಅಲ್ಲಾಹ್ ನನಗೆ ಸ್ವಲ್ಪ ಸಮಯಕ್ಕಾಗಿ ಖುಶಿ ಪಡಲು ಕೊಟ್ಟಿದ್ದ ಮಗುವನ್ನು ಆತನೇ ವಾಪಸ್ ಪಡೆದುಕೊಂಡ! ನನ್ನ ಮಗು ಸ್ವರ್ಗದಲ್ಲಿ ಆಡುತ್ತಿದೆ… ನಾನೇಕೆ ಅಳಲಿ?! ನಾನು ನಾಳೆ ಪರಲೋಕದಲ್ಲಿ ನನ್ನ ಮಗುವನ್ನು ಖಂಡಿತಾ ಮರಳಿ ಪಡೆಯುತ್ತೇನೆ… ಇದು ನನಗೆ ಪರೀಕ್ಷೆ ತಾನೆ…! ಎಂದಾಗ ಅವಳ ವಿಶ್ವಾಸದ ಮೇಲೆ ಅಭಿಮಾನ ಮೂಡಿತು. ನಂತರ ಪ್ರವಾದಿವರ್ಯರು(ಸ) ತನ್ನ ಮಗ ಇಬ್ರಾಹೀಮ್ನನ್ನು ಕಳೆದು ಕೊಂಡಾಗ ಸಹನೆ ವಹಿಸಿದ ವೃತ್ತಾಂತವನ್ನು ಹೇಳುತ್ತಾ ಸೂರಃ ಮರ್ಯಮ್ನ ಕೆಲವು ಸೂಕ್ತಗಳನ್ನು ಓದಿ ಮನಸ್ಸು ಹಗುರಮಾಡಿ ಕೊಂಡಳು. ಇದನ್ನು ಯಾಕೆ ಇಲ್ಲಿ ಪ್ರಸ್ತಾಪಿಸಿದೆನೆಂದರೆ, ಇಂತಹ ತಾಳ್ಮೆ (ಸಹನೆ) ಹಾಗೂ ಪರಲೋಕದ ಒಲವು, ದೇವನ ಮೇಲೆ ಅಚಲ ವಿಶ್ವಾಸ, ಭಕ್ತಿ ನಮಗೆ ಪ್ರಾಪ್ತವಾಗಬೇಕಾದರೆ ಪವಿತ್ರ ಕುರ್ಆನ್ ಎಂಬ ದೇವವಾಣಿಯನ್ನು ನಾವು ತಿಳಿದಿರಲೇಬೇಕು. ಜೀವನ-ಮರಣ, ಪಾಪ-ಪುಣ್ಯ, ಒಳಿತು-ಕೆಡುಕು, ಸುಖ-ದುಃಖ ಇತ್ಯಾದಿಗಳೆಲ್ಲಾ ನಮ್ಮನ್ನು ಪರೀಕ್ಷೆ ಮಾಡುವ ಸಾಧನಗಳಾಗಿವೆ. ಇದರಲ್ಲಿ ನಾವು ವಿಜಯಿ ಆಗಬೇಕಾದರೆ ಕುರ್ಆನಿನ ಜ್ಞಾನ ಬೇಕು.
ಇಂದು ಆಧುನಿಕ ಜನತೆ ದೇವನ ಅಸ್ತಿತ್ವವನ್ನೇ ನಿರಾಕರಿಸುವಂತಹ, ನಾಸ್ತಿಕವಾದದ ಕಡೆಗೆ ಚಲಿಸುತ್ತಿದೆ. ನಾವು ನಮ್ಮ ಮಕ್ಕಳನ್ನು ಉನ್ನತ ಶಿಕ್ಷಣ ಪ್ರಾಪ್ತ ಮಾಡಲು ನಮ್ಮ ಮನೆ, ಊರು, ರಾಜ್ಯದಿಂದಲೇ ದೂರ ಪ್ರದೇಶಕ್ಕೆ ಕಳಿಸುತ್ತಿದ್ದೇವೆ. ಆಧುನಿಕ ಪ್ರಪಂಚದ ಪ್ರಗತಿಪರ ಜೀವನವನ್ನು ಪ್ರವೇಶಿಸುವ ಈ ಯುವ ಜನಾಂಗಕ್ಕೆ ಪ್ರಾರ್ಥನೆ ಮಾಡಲೂ ಸಮಯ ಇಲ್ಲ! ನಮಾಝ್ ಬಗ್ಗೆ ಚಿಂತನೆ ಇಲ್ಲವೆಂದ ಮೇಲೆ ಧರ್ಮ ಗ್ರಂಥವನ್ನು ಪಠಣ ಮಾಡುವ ಮಾತೇ ದೂರದ್ದು. ಎಂ.ಬಿ.ಎ. ಮಾಡಿದ ಯುವಕನಿಗೆ ಸಂದರ್ಶಕರೋರ್ವರು ಪ್ರವಾದಿ ಮುಹಮ್ಮದ್(ಸ)ರಿಗೆ ದಿವ್ಯವಾಣಿ ನೀಡುತ್ತಿದ್ದ ದೇವದೂತನ ಹೆಸರೇನೆಂದು ಪ್ರಶ್ನಿಸಿದಾಗ ಈ ಮುಸ್ಲಿಮ್ ಯುವಕನಿಗೆ ಉತ್ತರ ತಿಳಿಯದಾಗಿತ್ತು. ಕುರ್ಆನ್ ಬಗ್ಗೆ ಅರಿವಿದ್ದಿದ್ದರೆ `ಜಿಬ್ರೀಲ್’ ಎಂದು ಹೇಳುತ್ತಿದ್ದ. ಇದು ಇಂದು ನಾವು ಕಾಣುತ್ತಿರುವ ವಿದ್ಯಾವಂತ ಮುಸ್ಲಿಮ್ ಯುವ ಸಮೂಹದ ಕಥೆ.
ಸಮೀಕ್ಷಾ ವರದಿಯ ಪ್ರಕಾರ, ಇಂದು ಪ್ರಪಂಚದಲ್ಲಿರುವ 50% ಮಂದಿ ನಾಸ್ತಿಕವಾದವನ್ನು ಅಪ್ಪಿಕೊಳ್ಳುತ್ತಿದ್ದಾರೆ! ಇಂತಹ `ವಾದಿ’ಗಳ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಮಕ್ಕಳಿಗೆ ನಮ್ಮ ಪವಿತ್ರ ಗ್ರಂಥವನ್ನು ಒಂದು ಬಾರಿಯಾದರೂ ಅರ್ಥಸಮೇತ ಓದುವಂತೇ ತಿಳಿಸಬೇಕು. ಕೇವಲ ಅರಬೀ ಭಾಷೆಯಲ್ಲಿ ಪಠಣ ಮಾಡಿ ಏನೂ ಪ್ರಯೋಜನ ಇಲ್ಲ. ಗ್ರಂಥದಲ್ಲಿ ಬರುವ ಇಸ್ಲಾಮಿನ ಚರಿತ್ರೆಯನ್ನು, ಘಟನೆಗಳ ಸತ್ಯ ವಿಚಾರಗಳನ್ನೂ ಅರಿಯಬೇಕು. ಆದಮ್(ಅ)ರಿಂದ ತೊಡಗಿ ಪ್ರವಾದಿ ಮುಹಮ್ಮದ್(ಸ)ರವರೆಗೆ ಕುರ್ಆನ್ ಏನನ್ನು ಜನರಿಗೆ ತಿಳಿಸುತ್ತದೆ ಎಂಬ ಜ್ಞಾನ ಎಲ್ಲರಿಗೂ ಬೇಕು. ಹರಾಮ್-ಹಲಾಲ್ ವಿಷಯದ ವಿವಾದಗಳು, ಹಿಜಾಬ್ ವಿವಾದಗಳು, ತಲಾಕ್ನ ವಿಷಯಗಳೆಲ್ಲಾ ಈ ದೇಶದಲ್ಲಿ `ವಾದ’ಗಳಾಗಿ ಮೊಳಗಿದಾಗ ಎಷ್ಟು ಜನ ಮುಸ್ಲಿಮರಿಗೆ ಈ ವಿಚಾರದ `ಜ್ಞಾನ’ ಇತ್ತು!? ನಮಗೇ ಈ ಕುರಿತು ತಿಳುವಳಿಕೆ ಇಲ್ಲದೇ ಇದ್ದಾಗ ನಾವು ಇತರ ಧರ್ಮಿಯರ ಟೀಕೆಗಳ, ಆರೋಪಗಳ ಕುರಿತು ತಲೆಬಿಸಿ ಮಾಡಲು ಅರ್ಹರೇ…!? ಒಂದು ವಾಸ್ತವ ಹೀಗಿದೆ.
ಹದಿನೈದು, ಇಪ್ಪತ್ತು ವರ್ಷದ ಮೊದಲು ಫ್ಯಾಮಿಲಿ ಕೌನ್ಸಿಲಿಂಗ್ ಸೆಂಟರ್ಗೆ ಪುರುಷರು ನೀಡುವ `ತಲಾಕ್’ ವಿಷಯದಲ್ಲಿ ಹೆಚ್ಚು ದೂರು ಬರುತ್ತಿತ್ತು. ಇಂದು ಪರಿಸ್ಥಿತಿ ಬದಲಾಗಿದೆ. ಇಂದಿನ ಮಹಿಳೆಯರಿಗೆ `ತಲಾಕ್’ ಅಷ್ಟು ಸುಲಭವಾಗಿ ಕೊಡುವಂತಿಲ್ಲ. ಅವರಿಂದು ಪ್ರಶ್ನೆ ಹಾಕುವಷ್ಟು ಇಸ್ಲಾಮೀ ಜ್ಞಾನ ಬೆಳೆಸಿಕೊಂಡಿದ್ದಾರೆ. ಶರಿಅತ್ನ ಯಾವುದೆಲ್ಲಾ ನಿಯಮದಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಇದೆ, ಹಕ್ಕು ಸ್ಥಾನಮಾನ ಇದೆ, ಯಾವುದು ಸರಿ-ತಪ್ಪು ಎಂದು ಮಹಿಳೆಯರು ಇಂದು ಅರಿತಿದ್ದಾರೆ. ಅವರು ಪ್ರಶ್ನೆ ಕೇಳುವವರಾಗಿ ಬದಲಾಗಿದ್ದಾರೆ. ಪತ್ನಿಗೆ ಬೇಕಾ ಬಿಟ್ಟಿ ತ್ರಿವಳಿ ತಲಾಕ್ ನೀಡಿ ಪರಾರಿ ಆಗಲು ಪತಿಗೆ ಇಂದು ಸಾಧ್ಯವಾಗಲಾರದು. ಕುರ್ಆನ್ ಗ್ರಂಥವನ್ನು ಅರ್ಥ ಅರಿತು ಓದುವ ಇಂದಿನ ವಿದ್ಯಾವಂತರು ಇಸ್ಲಾಮ್ ಧರ್ಮವನ್ನು ಗೌರವಿಸುತ್ತಾರೆ, ದೇವನ ಮೇಲೆ ಅಚಲ ವಿಶ್ವಾಸ ಬೆಳೆಸಿಕೊಳ್ಳುತ್ತಾರೆ. ಅಜ್ಞಾನಿಗಳ ಪ್ರಶ್ನೆಗಳಿಗೆ, ಆರೋಪಗಳಿಗೆ ಸರಿಯಾದ ಸೂಕ್ತವಾದ ಉತ್ತರಗಳನ್ನು ಧರ್ಮಗ್ರಂಥಗಳ ಮೂಲಕ ನೀಡಲು ಸಮರ್ಥರಾಗಿದ್ದಾರೆ. ಈ ದೇಶದ ಎಲ್ಲಾ ಭಾಷೆಯಲ್ಲೂ ಕುರ್ಆನ್ ಅನುವಾದ ಲಭ್ಯವಿದೆ. ನಮಗೆ ಅರಿವಿದ್ದ ಭಾಷೆಯಲ್ಲಿ ಒಂದು ಸಲ ನಾವು ಓದಿದಾಗ ಅದ್ಭುತವಾದ ದಿವ್ಯ ಸಂದೇಶವು ನಮ್ಮ ಹೃದಯದೊಳಗೆ ಇಳಿದು ನಾವು ನಮ್ಮನ್ನೇ ಆತ್ಮಾವಲೋಕನ ಮಾಡಲು ತೊಡಗುತ್ತೇವೆ. ಬನ್ನಿ, ತಡಬೇಡಾ… ಕನ್ನಡ, ಹಿಂದಿ, ಮಲಯಾಳಂ, ಉರ್ದು, ಇಂಗ್ಲೀಷ್… ಎಲ್ಲಾ ಭಾಷೆಯಲ್ಲೂ ಕುರ್ಆನ್ ಅನುವಾದ ಲಭಿಸುತ್ತಿದೆ. ವಿಜ್ಞಾನ ಇಂದು ಜಗತ್ತಿನ ಮುಂದೆ ಇಡುವ ಈ ಭೂಮಿ, ಆಕಾಶ, ಮನುಷ್ಯನ ಎಲ್ಲಾ ರಹಸ್ಯಗಳನ್ನು ಕುರ್ಆನ್ 1,400 ವರ್ಷಗಳ ಹಿಂದೆಯೇ ದಿವ್ಯವಾಣಿಯಾಗಿ ಜಗತ್ತಿಗೆ ಅರ್ಪಿಸಿದೆ.
IslamKannada News Portal
