Home / ಲೇಖನಗಳು / ಉಪವಾಸ ವ್ರತ: ಸಮಗ್ರ ನೋಟ

ಉಪವಾಸ ವ್ರತ: ಸಮಗ್ರ ನೋಟ

  • ಫಲಾಹಿ

ಉಪವಾಸ ವ್ರತದ ವಿಧಗಳು

1. ಕಡ್ಡಾಯ ಉಪವಾಸ ವ್ರತ:
ರಮಝಾನ್ ತಿಂಗಳ ಉಪವಾಸ ವ್ರತವು ಪ್ರತಿಯೋರ್ವ ಪ್ರಾಯ ಪ್ರಬುದ್ಧ ಮುಸ್ಲಿಮ್ ಸ್ತ್ರೀ-ಪುರುಷರಿಗೆ ಕಡ್ಡಾಯವಾಗಿದೆ.
ಕಫ್ಫಾರದ ಉಪವಾಸ ವ್ರತ: ಒಂದು ವೇಳೆ ಮಾನವನಿಂದ ಏನಾದರೂ ಪ್ರಮಾದ ಅಥವಾ ಪಾಪ ಕಾರ್ಯವು ಸಂಭವಿಸಿ ಬಿಟ್ಟರೆ, ಅದಕ್ಕೆ ಪ್ರತಿಯಾಗಿ ಕಫ್ಫಾರದ ಉಪವಾಸ ವ್ರತವನ್ನು ಆಚರಿಸಲಾಗುತ್ತದೆ. ಇದರ ಪ್ರಮಾಣವನ್ನು ಕುರ್‌ಆನ್ ಮತ್ತು ಪ್ರವಾದಿಚರ್ಯೆಗಳಲ್ಲಿ ನಿಶ್ಚಯಿಸಲಾಗಿದೆ. ಹಾಗಾಗಿ ಅದರಲ್ಲಿ ಏನೂ ಹೆಚ್ಚು ಕಡಿಮೆ ಮಾಡಲಾಗದು.
ಹರಕೆಯ ಉಪವಾಸ ವ್ರತ: ಇವುಗಳನ್ನು ಪೂರ್ತೀಕರಿಸ ಬೇಕಾದುದು ಅನಿವಾರ್ಯವಾಗಿದೆ.

2. ನಿಷಿದ್ಧ ಉಪವಾಸ ವ್ರತಗಳು:
ಪತ್ನಿಯು ತನ್ನ ಪತಿಯ ಅನುಮತಿಯಿಲ್ಲದೆ ಅಥವಾ ಅವನ ಇಚ್ಛೆಗೆ ವಿರುದ್ಧವಾಗಿ ನಫಿಲ್ ಉಪವಾಸ ವ್ರತಗಳನ್ನು ಆಚರಿಸಿದರೆ ಅದು ನಿಷಿದ್ಧವಾಗಿದೆ. ಕೆಲವು ಕರ್ಮಶಾಸ್ತ್ರಜ್ಞರ ಪ್ರಕಾರ ಅದು ಅಪ್ರಿಯವಾಗಿದೆ. ಇನ್ನು ತನ್ನ ಪತಿಗೆ ಅಭ್ಯಂತರ ಇಲ್ಲವೆಂದು ಅವಳಿಗೆ ತಿಳಿದಿದ್ದರೆ ಅಥವಾ ಪತಿ-ಪತ್ನಿಯರ ಸಹಶಯನದ ಅವಕಾಶ ಇಲ್ಲದಂತಹ ಸಂದರ್ಭದಲ್ಲಿ ಉದಾಹರಣೆಗೆ: ಪತಿಯು ಊರಲ್ಲಿಲ್ಲದಿದ್ದರೆ ಅಥವಾ ಹಜ್ಜ್-ಉಮ್ರಾಗೆ ಹೊರಟಿದ್ದರೆ ಅಥವಾ ಇಅï‌ತಿಕಾಫ್‌ನಲ್ಲಿದ್ದರೆ, ಆಕೆಯು ತನ್ನ ಪತಿಯ ಅನುಮತಿಯಿಲ್ಲದೆಯೂ ನಫಿಲ್ ಉಪವಾಸ ವ್ರತಗಳನ್ನು ಆಚರಿಸಬಹುದು.
ಈದುಲ್ ಫಿತ್ರ್, ಈದುಲ್ ಅಝ್ಹಾ ಮತ್ತು ಅಯ್ಯಾಮುತ್ತಶ್ರೀಕ್‌ನ ದಿನಗಳಲ್ಲಿ ಉಪವಾಸ ವ್ರತಾಚರಿಸುವುದು ನಿಷಿದ್ಧವಾಗಿದೆ. ಆದರೆ ಕುರ್ಬಾನಿಯ ಜಾನುವಾರನ್ನು ಕೊಂಡು ಹೋಗದ (ಅಂದರೆ ಕುರ್ಬಾನಿ ನೀಡಲಾಗದ) ಹಾಜಿಯು ಅದರ ಪರಿಹಾರಾರ್ಥ ಅಯ್ಯಾಮುತ್ತಶ್ರೀಕ್‌ನಲ್ಲೂ ಉಪವಾಸ ವ್ರತಾಚರಿಸಬಹುದಾಗಿದೆ. ಕೆಲವು ಮಂದಿ ಕರ್ಮಶಾಸ್ತ್ರಜ್ಞರ ಪ್ರಕಾರ, ಅಯ್ಯಾಮುತ್ತಶ್ರೀಹ್‌ನ ದಿನಗಳಲ್ಲಿ ಉಪವಾಸ ವ್ರತಾಚರಿಸುವುದು ನಿಷಿದ್ಧ ಅಲ್ಲ, ಬದಲಾಗಿ ಅಪ್ರಿಯವಾಗಿದೆ.
ಮುಟ್ಟಾಗಿರುವ ಮತ್ತು ಹೆರಿಗೆ ಸ್ರಾವ ಇರುವ ಸ್ತ್ರೀಯು ಉಪವಾಸ ವ್ರತಾಚರಿಸುವುದು ನಿಷಿದ್ಧವಾಗಿದೆ. ಒಂದು ವೇಳೆ ಆಕೆಯು ರಮಝಾನ್ ಅಥವಾ ಕಫ್ಫಾರದ ಉಪವಾಸ ವ್ರತವನ್ನು ಆಚರಿಸಿದ್ದರೆ, ಅದನ್ನು ಪುನಃ ಆಚರಿಸಬೇಕು.
ಉಪವಾಸ ವ್ರತಾಚರಿಸಿದರೆ ಜೀವಕ್ಕೆ ಅಪಾಯವಿದ್ದರೆ ಮತ್ತು ಅದನ್ನು ತಿಳಿದಿರುತ್ತಾ ಉಪವಾಸ ವ್ರತಾಚರಿಸುವುದು ನಿಷಿದ್ಧವಾಗಿದೆ.

3. ಅಪ್ರಿಯ ಉಪವಾಸ ವ್ರತಗಳು:
– ನಿರಂತರ ಉಪವಾಸ ವ್ರತಾಚರಿಸುವುದು.
– ಕೇವಲ ಶುಕ್ರವಾರದಂದು ಉಪವಾಸ ವ್ರತಾಚರಿಸುವುದು.
– ಕೇವಲ ಶನಿವಾರದಂದು ಉಪವಾಸ ವ್ರತಾಚರಿಸುವುದು.
– ಸಂಶಯದ ದಿನ (ಶಅಬಾನ್ 30ರಂದು) ಉಪವಾಸ ವ್ರತಾಚರಿಸುವುದು.
– ಕಡ್ಡಾಯ ಉಪವಾಸ ವ್ರತವು ಬಾಕಿ ಇರುವ ವ್ಯಕ್ತಿಯು ನಫಿಲ್ ಉಪವಾಸ ವ್ರತಾಚರಿಸುವುದು ಅಪ್ರಿಯವಾಗಿದೆ. ಆತ/ಆಕೆ ಮೊದಲು ಬಿಟ್ಟು ಹೋಗಿರುವ ಕಡ್ಡಾಯ ಉಪವಾಸ ವ್ರತವನ್ನಾಚರಿಸಬೇಕು, ಆ ಬಳಿಕವೇ ನಫಿಲ್ ಉಪವಾಸ ವ್ರತಾಚರಿಸಬಹುದು.
– ಇಫ್ತಾರ್ ಇಲ್ಲದೆಯೇ ಎರಡೆರಡು ದಿನ ಉಪವಾಸ ವ್ರತಾಚರಿಸುವುದು.

4. ನಫಿಲ್ ಉಪವಾಸ ವ್ರತಗಳು:
ಇವು ಒಬ್ಬ ಮುಸ್ಲಿಮನು ತನ್ನ ಪ್ರಭುವಿನ ಸಂತುಷ್ಟಿಗಾಗಿ ಮತ್ತು ಹೆಚ್ಚೆಚ್ಚು ಪುಣ್ಯ ಗಳಿಸಲಿಕ್ಕಾಗಿ ಹಾಗೂ ಸ್ವರ್ಗಕ್ಕೆ ಹಕ್ಕುದಾರನಾಗಬೇಕೆಂದು ಇರಿಸುವ ಉಪವಾಸ ವ್ರತಗಳಾಗಿವೆ. ಈ ಉಪವಾಸ ವ್ರತಗಳನ್ನು ಅಲ್ಲಾಹನ ಸಂದೇಶವಾಹಕರು(ಸ) ಆದ್ಯತೆ ನೀಡಿರುವ ದಿನಗಳಲ್ಲಿ ಆಚರಿಸುವುದು ಹೆಚ್ಚು ಉತ್ತಮವಾಗಿದೆ.
ಅವು ಈ ರೀತಿ ಇವೆ:
– ಪ್ರತೀ ಸೋಮವಾರ ಮತ್ತು ಗುರುವಾರದಂದು.
– ಅಯ್ಯಾಮು ಬೈಝ್ ಅಂದರೆ ಚಾಂದ್ರಮಾನ ತಿಂಗಳ 13, 14 ಮತ್ತು 15ನೇ ದಿನಾಂಕದಂದು. ಇಬ್ನು ಮುಲ್ಹಾನ್ ರವರು ವರದಿ ಮಾಡುತ್ತಾರೆ: “ಪ್ರವಾದಿವರ್ಯರು(ಸ) ಜನರಿಗೆ ಅಯ್ಯಾಮು ಬೈಝ್‌ಗಳಲ್ಲಿ ಉಪವಾಸ ವ್ರತಾಚರಿಸಲು ಆದೇಶಿಸುತ್ತಿದ್ದರು.” (ನಸಾಈ,)
– ಶವ್ವಾಲ್‌ನ ಆರು ಉಪವಾಸ. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಯಾರಾದರೂ ರಮಝಾನಿನ ಉಪವಾಸದ ಬಳಿಕ ಶವ್ವಾಲ್‌ನ ಆರು ಉಪವಾಸಗಳನ್ನು ಆಚರಿಸಿದರೆ, ಅವನು ಇಡೀ ಜೀವನ ಉಪವಾಸ ವ್ರತಾಚರಿಸಿದಂತೆ.” (ಮುಸ್ಲಿಮ್)
ಈ ಆರು ಉಪವಾಸಗಳು ನಿರಂತರವಾಗಿಯೂ ಇರಿಸಬಹುದು ಮತ್ತು ದಿನ ಬಿಟ್ಟು ದಿನವೂ ಆಚರಿಸಬಹುದು. ಆದರೆ ಈದುಲ್ ಫಿತ್ರ್ ನ ನಂತರದ ದಿನದಿಂದ ನಿರಂತರ ಆಚರಿಸುವುದು ಹೆಚ್ಚು ಉತ್ತಮವಾಗಿದೆ.
– ಮುಹರ‍್ರಮ್‌ನ ಒಂಬತ್ತನೇ ಮತ್ತು ಹತ್ತನೇ ದಿನದ ಉಪವಾಸ: ಅಲ್ಲಾಹನ ಸಂದೇಶವಾಹಕರೊಡನೆ(ಸ) ಆಶೂರದ ಉಪವಾಸದ ಕುರಿತು ಕೇಳಿದಾಗ, “ಅದು ಹಿಂದಿನ ವರ್ಷದ ಪಾಪಗಳಿಗೆ ಪ್ರಾಯಶ್ಚಿತ್ತವಾಗಿದೆ” ಎಂದು ಹೇಳಿದರು.(ಮುಸ್ಲಿಮ್)
– ಅರಫಾ ದಿನದ ಉಪವಾಸ: ಅರಫಾ ದಿನದ ಉಪವಾಸದ ಕುರಿತು ಪ್ರವಾದಿವರ್ಯರೊಡನೆ(ಸ) ಕೇಳಿದಾಗ, ಅವರೆಂದರು, “ಅದು ಕಳೆದ ವರ್ಷ ಮತ್ತು ಮುಂದಿನ ವರ್ಷದ ಪಾಪಗಳಿಗೆ ಪರಿಹಾರವಾಗಿದೆ.” (ಮುಸ್ಲಿಮ್)
– ದುಲ್ ಹಜ್ಜ್ ನ ಒಂಭತ್ತು ದಿನದ ಉಪವಾಸ. (ಹಾಜಿಯೇತರರಿಗೆ ಅರಫಾ ದಿನವೂ ಇದರಲ್ಲಿ ಸೇರಿದೆ).
– ಪವಿತ್ರ ಮಾಸಗಳಲ್ಲಿ (ಮುಹರ‍್ರಮ್, ರಜಬ್, ದುಲ್ ಕಅದ್ ಮತ್ತು ದುಲ್ ಹಜ್ಜ್) ಹೆಚ್ಚೆಚ್ಚು ಉಪವಾಸ ವ್ರತಾಚರಿಸುವುದು.
– ಶಅಬಾನ್ ತಿಂಗಳಲ್ಲಿ ಹೆಚ್ಚೆಚ್ಚು ಉಪವಾಸ ವ್ರತಾಚರಿಸುವುದು.
– ಒಂದು ದಿನ ಬಿಟ್ಟು ಒಂದು ದಿನ ಉಪವಾಸ ವ್ರತಾಚರಿಸುವುದು. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಅಲ್ಲಾಹನ ಬಳಿ ಅತೀ ಶ್ರೇಷ್ಠವಾದ ಉಪವಾಸವು ಪ್ರವಾದಿ ದಾವೂದ್‌ರ(ಅ) ಉಪವಾಸವಾಗಿದೆ. ಅವರು ಒಂದು ದಿನ ಉಪವಾಸವಿರುತ್ತಿದ್ದರೆ, ಒಂದು ದಿನ ತೊರೆಯುತ್ತಿದ್ದರು.” (ಮುಸ್ಲಿಮ್)
ನಫಿಲ್ ಉಪವಾಸಗಳನ್ನು ನಿಷಿದ್ಧ ದಿನಗಳ ಹೊರತಾಗಿ ವರ್ಷದ ಯಾವ ದಿನವೂ ಆಚರಿಸಬಹುದಾಗಿದೆ. ಯಾರಾದರೂ ನಫಿಲ್ ಉಪವಾಸವನ್ನು ತೊರೆದರೆ ಮತ್ತು ಅದನ್ನು ಕಝಾ ಆಚರಿಸದಿದ್ದರೆ ತೊಂದರೆಯಿಲ್ಲ. ಅಬುದ್ದರ್ದಾ(ರ)ರ ಒಂದು ಘಟನೆಯಿದೆ. ಅವರು ಉಪವಾಸದಿಂದಿದ್ದರು. ಆಗ ಸಲ್ಮಾನ್ ಫಾರ್ಸಿಯವರು(ರ) ಅವರ ಮನೆಗೆ ಆಗಮಿಸಿ ದರು. ಅಬುದ್ದರ್ದಾರು(ರ) ಸಲ್ಮಾನ್‌ರ(ರ) ಮುಂದೆ ಆಹಾರವನ್ನು ಇರಿಸಿ ಹೇಳಿದರು, “ನೀವು ತಿನ್ನಿರಿ. ನಾನು ಉಪವಾಸದಿಂದಿದ್ದೇನೆ.” ಆದರೆ ಸಲ್ಮಾನ್(ರ) ಹೇಳಿದರು, “ನೀವು ತಿನ್ನುವವರೆಗೆ ನಾನೂ ತಿನ್ನುವುದಿಲ್ಲ.” ಆಗ ಅಬುದ್ದರ್ದಾ(ರ) ತಮ್ಮ ಉಪವಾಸವನ್ನು ತೊರೆದರು ಮತ್ತು ಆಹಾರ ಸೇವಿಸಿದರು. (ಬುಖಾರಿ)
ನಫಿಲ್ ಉಪವಾಸವನ್ನು ಇರಿಸಿದ ಮೇಲೆ ಮಧ್ಯದಲ್ಲಿ ತೊರೆದರೆ, ಬಳಿಕ ಒಂದು ಉಪವಾಸವನ್ನು ಕಝಾ ಆಗಿ ಆಚರಿಸಬೇಕು ಎಂದು ಕೆಲವು ಕರ್ಮ ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.

ರಮಝಾನಿನ ಉಪವಾಸ
ರಮಝಾನಿನ ಉಪವಾಸವು ಕಡ್ಡಾಯವಾಗಿದೆ. ಅದನ್ನು ನಿರಾಕರಿಸುವುದು ಸತ್ಯನಿಷೇಧವಾಗಿದೆ. ಇದು ಇಸ್ಲಾಮಿನ ಕಡ್ಡಾಯ ಕರ್ಮಗಳ ಪೈಕಿ ಪ್ರಧಾನವಾದ ಆರಾಧನೆಯಾಗಿದೆ. ಅಲ್ಲಾಹ್ ಹೇಳುತ್ತಾನೆ,
ಉಪವಾಸ ಯಾರೆಲ್ಲರ ಮೇಲೆ ಕಡ್ಡಾಯವಾಗಿದೆ?
ಪ್ರೌಢರಾಗಿರುವ, ಬುದ್ಧಿ ಇರುವ ಮತ್ತು ಉಪವಾಸ ವ್ರತಾಚರಿಸುವ ಶಕ್ತಿಯನ್ನು ಹೊಂದಿರುವ ಪ್ರತಿಯೊಬ್ಬ ಮುಸ್ಲಿಮ್ ಸ್ತ್ರೀ-ಪುರುಷರ ಮೇಲೆ ಉಪವಾಸ ವ್ರತವು ಕಡ್ಡಾಯವಾಗಿದೆ. ಸ್ತ್ರೀಯರು ಮುಟ್ಟು ಹಾಗೂ ಹೆರಿಗೆ ಸ್ರಾವದಿಂದ ಶುದ್ಧರಾಗಿರಬೇಕು.

ಮಕ್ಕಳ ಉಪವಾಸ
ಅಪ್ರಾಪ್ತ ಮಕ್ಕಳ ಮೇಲೆ ಉಪವಾಸ ಕಡ್ಡಾಯವಿಲ್ಲ. ಆದರೆ ಒಂದು ವೇಳೆ ಮಕ್ಕಳಿಗೆ ಉಪವಾಸವಿರಿಸುವುದು ಸಾಧ್ಯವೆಂದಾಗಿದ್ದರೆ ಅವರ ಮಾತಾಪಿತರು ಮತ್ತು ಪೋಷಕರು ಅವರಿಗೆ ಉಪವಾಸವಿರಿಸಲು ಉಪದೇಶಿಸಬೇಕು. ಈ ಮೂಲಕ ಅವರಿಗೆ ಅದರ ಅಭ್ಯಾಸವಾಗುವುದು, ಅವರು ಉಪವಾಸದ ಕಾಠಿಣ್ಯಗಳನ್ನು ಸಹಿಸಲು ಕಲಿಯುವರು. ಹೀಗೆ ಅವರು ಬೆಳೆದು ದೊಡ್ಡವರಾದ ಮೇಲೆ ಉಪವಾಸ ವ್ರತಾಚರಿಸುವುದು ಅವರಿಗೆ ಕಷ್ಟವೆನಿಸಲಾರದು. ಮಕ್ಕಳ ಮೇಲೆ ಉಪವಾಸವು ಕಡ್ಡಾಯವಿಲ್ಲದಿದ್ದರೂ ಅವರು ಧೈರ್ಯ ವಹಿಸಿ ಉಪವಾಸವಿರಿಸಿದರೆ ಅವರಿಗೆ ಅದರ ಪ್ರತಿಫಲ ಖಂಡಿತ ದೊರೆಯುವುದು.

ಉಪವಾಸದ ವಿಧಿಗಳು
1. ಪ್ರಭಾತದಿಂದ ಸೂರ್ಯಾಸ್ತಮಾನದ ವರೆಗೆ ಆಹಾರ-ಪಾನೀಯ ಸೇವನೆ ಮತ್ತು ಉಪವಾಸ ಮುರಿಯುವಂತಹ ಇತರ ಎಲ್ಲ ವಸ್ತುಗಳಿಂದ ದೂರವಿರುವುದು.
2. ನಿಯ್ಯತ್. ಇತರ ಆರಾಧನೆಗಳಲ್ಲಿ ನಿಯ್ಯತ್ ಶರ್ತವಾಗಿರುವಂತೆಯೇ ಉಪವಾಸ ವ್ರತಕ್ಕೂ ನಿಯ್ಯತ್ ಶರ್ತವಾಗಿದೆ. ನಿಯ್ಯತ್ ಎಂದರೆ ವ್ಯಕ್ತಿಯು ಅಲ್ಲಾಹನ ಆದೇಶದ ಪಾಲನೆ ಮತ್ತು ಅವನ ಸಂಪ್ರೀತಿಗಾಗಿ ಉಪವಾಸ ವ್ರತಾಚರಿಸುವ ಸಂಕಲ್ಪವನ್ನಿರಿಸುವುದು. ಸೂರ್ಯೋದಯಕ್ಕಿಂತ ಮುಂಚೆ ಪ್ರತಿದಿನವೂ ಇದರ ಸಂಕಲ್ಪ ಮಾಡುವುದು ಅಥವಾ ಮೊದಲ ದಿನದಿಂದಲೇ ಇಡೀ ತಿಂಗಳ ಸಂಕಲ್ಪ ಮಾಡುವುದು.

ಉಪವಾಸದ ಶಿಷ್ಟಾಚಾರಗಳು ಮುಸ್ತಹಬ್‌ಗಳು
ಉಪವಾಸ ವ್ರತಕ್ಕೆ ಹಲವಾರು ಶಿಷ್ಟಾಚಾರಗಳು ಮತ್ತು ಮುಸ್ತಹಬ್ [ಪ್ರವಾದಿವರ್ಯರು(ಸ) ಮೆಚ್ಚಿದ] ಕಾರ್ಯಗಳಿವೆ. ಅವುಗಳಲ್ಲಿ ಪ್ರಮುಖವಾದುವು ಈ ಪ್ರಕಾರ ಇವೆ-

1. ಸಹ್ರಿ ಉಣ್ಣುವುದು. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಸಹ್ರಿ ಉಣ್ಣಿರಿ. ಏಕೆಂದರೆ ಅದರಲ್ಲಿ ಸಮೃದ್ಧಿ ಇದೆ.” (ಮುತ್ತಫಕ್ ಅಲೈಹಿ)
ಸಹ್ರಿಯಲ್ಲಿ ಕೊನೆಯ ಸಮಯದ ತನಕ ವಿಳಂಬಿಸುವುದು ಮುಸ್ತಹಬ್ ಆಗಿದೆ. ಆದರೆ ಸಮಯವಾಯಿತೋ ಎಂದು ಸಂಶಯವಾಗುವಷ್ಟರ ಮಟ್ಟಿಗೆ ವಿಳಂಬ ಮಾಡುವುದು ತರವಲ್ಲ. ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು, “ಸಂಶಯವುಂಟಾಗುವುದಿದ್ದರೆ, ಆ ಸಮಯವನ್ನು ಬಿಟ್ಟು ಸಂಶಯವಾಗದ ಸಮಯವನ್ನು ಆಯ್ದುಕೊಳ್ಳಿರಿ.” (ಬುಖಾರಿ)
ಸಹ್ರಿ ಉಣ್ಣುವುದು ಅಗತ್ಯವಾಗಿದೆ. ಅದು ಸಣ್ಣ ಪ್ರಮಾಣದಲ್ಲಿದ್ದರೂ ಸರಿಯೇ. ಎಲ್ಲಿಯವರೆಗೆಂದರೆ, ಒಂದು ಗುಟುಕು ನೀರಾದರೂ ಸರಿ.

2. ಸೂರ್ಯಾಸ್ತವಾದ ಮೇಲೆ ಪಾರಣೆಗೆ ತ್ವರೆ ಮಾಡುವುದು. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಜನರು ಇಫ್ತಾರ್‌ನಲ್ಲಿ ತ್ವರೆ ಮಾಡುತ್ತಿರುವಷ್ಟು ಕಾಲ ಅವರು ಕ್ಷೇಮದಿಂದಿರುತ್ತಾರೆ.” (ಮುತ್ತಫಕ್ ಅಲೈಹಿ)
ತಾಜಾ ಖರ್ಜೂರದಲ್ಲಿ ಪಾರಣೆ ಮಾಡಬೇಕು. ಅದು ದೊರೆಯದಿದ್ದರೆ ಉತ್ತುತ್ತೆಯಿಂದ ಪಾರಣೆ ಮಾಡಬೇಕು; ಅದೂ ದೊರೆಯದಿದ್ದರೆ ಹಾಲಿನಿಂದ, ಹಾಲು ಇಲ್ಲದಿದ್ದರೆ ನೀರಿನಿಂದ ಪಾರಣೆ ಮಾಡಬೇಕು ಅಥವಾ ಇರುವ ಆಹಾರದಿಂದ ಪಾರಣೆ ಮಾಡಬೇಕು. ಯಾವುದಾದರೂ ಸಂದರ್ಭದಲ್ಲಿ ಏನೂ ದೊರೆಯದಿದ್ದಾಗ ಇಫ್ತಾರ್‌ನ (ಉಪವಾಸ ಪಾರಣೆ ಮಾಡಿರುವುದಾಗಿ) ಸಂಕಲ್ಪ ಮಾಡಬೇಕು. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ನಿಮ್ಮ ಪೈಕಿ ಯಾರಾದರೂ ಉಪವಾಸ ವ್ರತಾಚರಿಸಿದರೆ, ಅವನ್ನು ಖರ್ಜೂರದಿಂದ ಪಾರಣೆ ಮಾಡಲಿ. ಅದು ದೊರೆಯದಿದ್ದರೆ, ನೀರಿನಿಂದ ಪಾರಣೆ ಮಾಡಲಿ. ಏಕೆಂದರೆ ನೀರು ಪರಿಶುದ್ಧ ವಸ್ತುವಾಗಿದೆ.” (ಅಬೂದಾವೂದ್, ತಿರ್ಮಿದಿ, ಇಬ್ನು ಮಾಜಃ)
ಪಾರಣೆಯಲ್ಲಿ ಬೆಸ ಸಂಖ್ಯೆಯ ಕಡೆಗೆ ಗಮನವಿರಿಸುವುದು ಮುಸ್ತಹಬ್ ಆಗಿದೆ. ಅಂದರೆ ಖರ್ಜೂರದಿಂದ ಇಫ್ತಾರ್ ಮಾಡುವುದಾದರೆ ಮೂರು, ಐದು ಅಥವಾ ಏಳು ಖರ್ಜೂರ ತಿನ್ನ ಬೇಕು. ಏಕೆಂದರೆ ಅಲ್ಲಾಹನ ಸಂದೇಶವಾಹಕರು(ಸ) ನಮಾಝ್‌ಗೆ ಮುಂಚೆ ಕೆಲವು ಖರ್ಜೂರ ಅಥವಾ ಉತ್ತುತ್ತೆ ತಿನ್ನುತ್ತಿದ್ದರು. ಅದು ದೊರೆಯದಿದ್ದಾಗ ಕೆಲವು ಗುಟುಕು ನೀರು ಕುಡಿಯುತ್ತಿದ್ದರು (ಅಬೂದಾವೂದ್, ಅಹ್ಮದ್) ಎಂದು ಹದೀಸ್‌ನಲ್ಲಿ ಉಲ್ಲೇಖಗೊಂಡಿದೆ.

3. ಪಾರಣೆಯ ವೇಳೆ ಪ್ರಾರ್ಥಿಸುವುದು. ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು, “ಪಾರಣೆಯ ವೇಳೆ ಉಪವಾಸಿಗನ ಪ್ರಾರ್ಥನೆಯನ್ನು ರದ್ದುಗೊಳಿಸಲಾಗುವುದಿಲ್ಲ.” (ಇಬ್ನು ಮಾಜಃ)
ಈ ಸಂದರ್ಭದಲ್ಲಿ ಪಠಿಸಬೇಕಾದ ಪ್ರಾರ್ಥನೆಯು ಈ ರೀತಿ ಇದೆ, “ಓ ಅಲ್ಲಾಹ್! ನಾನು ನಿನಗಾಗಿ ಉಪವಾಸ ವ್ರತಾಚರಿಸಿದೆ ಮತ್ತು ನಿನ್ನ ಆಹಾರದಿಂದ ಪಾರಣೆ ಮಾಡಿದೆ.” (ಅಬೂದಾವೂದ್) ಅದಾದ ಮೇಲೆ ಈ ರೀತಿಯೂ ಹೇಳಬೇಕು, “ದಾಹ ಇಂಗಿತು. ನರಗಳು ತೇವಗೊಂಡುವು. ಅಲ್ಲಾಹನಿ ಚ್ಛಿಸಿದರೆ ಪ್ರತಿಫಲವೂ ದೊರೆತೀತು.” (ಅಬೂದಾವೂದ್)

4. ನಿರರ್ಥಕ ಮಾತು ಮತ್ತು ವ್ಯರ್ಥ ಕಾರ್ಯಗಳಿಂದ ತಮ್ಮನ್ನು ತಡೆದಿರಿಸುವುದು. ಉದಾಹರಣೆಗೆ- ಪರನಿಂದೆ, ಚಾಡಿ, ಸುಳ್ಳು, ಬೈಗುಳ, ಗಲಾಟೆ, ತುಂಟತನ ಇತ್ಯಾದಿ ಇತ್ಯಾದಿ. ಈ ಎಲ್ಲ ಕಾರ್ಯಗಳು ಹೇಗಿದ್ದರೂ ಅಸಭ್ಯ ಮತ್ತು ನಿಷಿದ್ಧವಾಗಿವೆ. ಉಪವಾಸದ ಸ್ಥಿತಿಯಲ್ಲಿ ಅವುಗಳಿಂದ ದೂರವಿರಬೇಕಾದುದು ಅನಿವಾರ್ಯವಾಗಿದೆ.

5. ತರಾವೀಹ್ ಮತ್ತು ತಹಜ್ಜುದ್ ಅನುಷ್ಠಾನಿಸುವುದು. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಯಾರಾದರೂ ಸತ್ಯವಿಶ್ವಾಸದ ಸ್ಥಿತಿಯಲ್ಲಿ ಮತ್ತು ಅಲ್ಲಾಹನಿಂದ ಪ್ರತಿಫಲದ ಸಂಕಲ್ಪದೊಂದಿಗೆ ರಮಝಾನಿನ ರಾತ್ರಿಗಳಲ್ಲಿ (ನಮಾಝ್‌ಗಾಗಿ) ನಿಂತರೆ ಅವನ ಗತ ಪಾಪಗಳು ಕ್ಷಮಿಸಲ್ಪಡುವುದು.” (ಮುತ್ತಫಕ್ ಅಲೈಹಿ)
ತರಾವೀಹ್‌ನ ಸಮಯವು ಇಶಾ ನಮಾಝ್‌ನ ಬಳಿಕದಿಂದ ಫಜ್ರ್ ಗೆ ಮುಂಚಿನವರೆಗೆ ಇರುತ್ತದೆ.

6. ಮನೆ, ಕುಟುಂಬಕ್ಕಾಗಿ ಮನ ಬಿಚ್ಚಿ ಖರ್ಚು ಮಾಡುವುದು ಮತ್ತು ಸಂಬಂಧಿಕರೊಡನೆ ಸದ್ವರ್ತನೆ ತೋರುವುದು ಹಾಗೂ ಹೆಚ್ಚೆಚ್ಚು ಸದಕಾ (ದಾನ) ಮಾಡುವುದು: ಹದೀಸ್‌ಗಳಲ್ಲಿ ಉಲ್ಲೇಖವಾಗಿರುವಂತೆ, “ಅಲ್ಲಾಹನ ಸಂದೇಶವಾಹಕರು(ಸ) ಕೊಡುಗೈ ದಾನಿಯಾಗಿದ್ದರು ಮತ್ತು ರಮಝಾನಿನಲ್ಲಿ ಜಿಬ್ರೀಲರು(ಅ) ಅವರನ್ನು ಭೇಟಿಯಾಗಲು ಬರುವಾಗಲಂತೂ ಅವರ ದಾನಶೀಲತೆಯು ಇನ್ನಷ್ಟು ವೇಗ ಪಡೆದುಕೊಳ್ಳುತ್ತಿತ್ತು.” (ಮುತ್ತಫಕ್ ಅಲೈಹಿ)

7. ವಿದ್ಯಾರ್ಜನೆ, ಕುರ್‌ಆನ್ ಪಾರಾಯಣ ಮತ್ತು ಅಧ್ಯಯನ ಹಾಗೂ ಇನ್ನಿತರ ಸತ್ಕರ್ಮಗಳಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವುದು.

8. ಇಅï‌ತಿಕಾಫ್ (ತಪಶ್ಚರ್ಯೆಗೆ) ಕುಳಿತುಕೊಳ್ಳುವುದು. ವಿಶೇಷತಃ ರಮಝಾನಿನ ಕೊನೆಯ ಹತ್ತರಲ್ಲಿ. “ಅಲ್ಲಾಹನ ಸಂದೇಶವಾಹಕರು (ಸ) ರಮಝಾನಿನ ಕೊನೆಯ ಹತ್ತರಲ್ಲಿ ಟೊಂಕ ಕಟ್ಟಿಕೊಳ್ಳುತ್ತಿದ್ದರು ಮತ್ತು ರಾತ್ರಿ ಜಾಗರಣೆಯ ವ್ಯವಸ್ಥೆಯನ್ನೂ ಮಾಡುತ್ತಿದ್ದರು ಹಾಗೂ ತಮ್ಮ ಮನೆಯವರನ್ನೂ ಎಬ್ಬಿಸುತ್ತಿದ್ದರು.” (ಮುತ್ತಫಕ್ ಅಲೈಹಿ)

ಉಪವಾಸದ ಅಪ್ರಿಯ ಕಾರ್ಯಗಳು
1. ಎರಡು ದಿನಗಳ ಉಪವಾಸ ವ್ರತಾಚರಿಸುವುದು. ಅಂದರೆ ಉಪವಾಸ ಪಾರಣೆ ಮಾಡದೆ ನಿರಂತರವಾಗಿ ಎರಡು ದಿನ ಉಪವಾಸ ವ್ರತಾಚರಿಸುವುದು.
2. ಮುನ್ನಲಿವು. ಅಂದರೆ ಸಂಸರ್ಗಕ್ಕೆ ಮುಂಚಿನ ಕಾರ್ಯಗಳು. ಉದಾ: ಆಲಿಂಗಿಸುವುದು, ಚುಂಬಿಸುವುದು ಇತ್ಯಾದಿ. ಅದು ಮಾನಸಿಕವಾಗಿ ಆಗಿದ್ದರೂ ಸರಿ.
3. ಅಲಂಕಾರ ವಸ್ತುಗಳನ್ನು ಅಧಿಕವಾಗಿ ಬಳಸುವುದು. ಅದು ಅನುವದನೀಯವಾಗಿದ್ದರೂ ಸರಿಯೇ. ಉದಾಹರಣೆಗೆ: ಹೆಚ್ಚು ಸುಗಂಧ ಹಚ್ಚುವುದು.
4. ಅನಗತ್ಯವಾಗಿ ಆಹಾರದ ರುಚಿ ನೋಡುವುದು.

ಉಪವಾಸದಲ್ಲಿ ಅನುವದನೀಯ ಕಾರ್ಯಗಳು
1. ಸ್ನಾನ ಮಾಡುವುದು ಅಥವಾ ಬಚ್ಚಲು ಕೋಣೆಯನ್ನು ಬಳಸುವುದು. ಒಮ್ಮೆ ಪ್ರವಾದಿವರ್ಯರು(ಸ) ಅತೀವ ಸೆಖೆಯ ಸಂದರ್ಭದಲ್ಲಿ ತೀವ್ರವಾಗಿ ಬಾಯಾರಿದಾಗ ತಲೆಯ ಮೇಲೆ ನೀರನ್ನು ಸುರಿದಿದ್ದರು. (ಅಬೂದಾವೂದ್, ಅಹ್ಮದ್)
2. ಸುರ್ಮಾ ಹಚ್ಚುವುದು.
3. ಚಿಕಿತ್ಸೆಗಾಗಿ ರಕ್ತ ತೆಗೆಸುವುದು.
4. ಹಲ್ಲುಜ್ಜುವುದು.

ಉಪವಾಸ ತೊರೆಯಲು ಸೂಕ್ತ ಕಾರಣಗಳು
ಇಸ್ಲಾಮ್ ಸವಲತ್ತು ಮತ್ತು ಸೌಲಭ್ಯದ ಧರ್ಮವಾಗಿದೆ. ಅಲ್ಲಾಹ್ ಹೇಳುತ್ತಾನೆ, “ಅಲ್ಲಾಹ್ ನಿಮಗೆ ಸೌಲಭ್ಯವನ್ನೀಯಲು ಬಯಸುತ್ತಾನೆ; ನಿಮ್ಮನ್ನು ಕಷ್ಟಕ್ಕೀಡು ಮಾಡಲು ಬಯಸುವುದಿಲ್ಲ.”(ಪವಿತ್ರ ಕುರ್‌ಆನ್: 2: 185)
ಮಾನವನಿಗೆ ಕೆಲವೊಮ್ಮೆ ಎದುರಾಗುವ ಪರಿಸ್ಥಿತಿಗಳನ್ನು ಅನುಸರಿಸಿ, ಶರೀಅತ್ ಅವನಿಗೆ ಕೆಲವು ರಿಯಾಯಿತಿಗಳನ್ನು ನೀಡುತ್ತದೆ ಮತ್ತು ಅವನ ಮೇಲೆ ಉಪವಾಸವು ಕಡ್ಡಾಯವಾಗಿ ಉಳಿಯುವುದಿಲ್ಲ. ಅಂತಹ ಸ್ಥಿತಿಗಳು ಈ ಕೆಳಗಿನಂತಿರುವುದು:

1. ಪ್ರಯಾಣ: ಅಲ್ಲಾಹ್ ಹೇಳುತ್ತಾನೆ, “ನೀವೆಲ್ಲಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಇತರ ದಿನಗಳಲ್ಲಿ ಅಷ್ಟೇ ಸಂಖ್ಯೆಯನ್ನು ಪೂರ್ತಿಗೊಳಿಸಿಕೊಳ್ಳಬೇಕು.” (ಪವಿತ್ರ ಕುರ್‌ಆನ್: 2: 184)
ಕುರ್‌ಆನ್ ಮತ್ತು ಹದೀಸ್‌ಗಳಲ್ಲಿ ಪ್ರಯಾಣದ ದೂರವನ್ನು ನಿರ್ಧರಿಸಲಾಗಿಲ್ಲ; ಆದರೆ ಕೆಲವು ಕರ್ಮಶಾಸ್ತ್ರಜ್ಞರು ಪ್ರಯಾಣಕ್ಕೆ 98 ಕಿಲೋ ಮೀಟರ್‌ಗಳ ದೂರವನ್ನು ನಿಶ್ಚಯಿಸಿದ್ದಾರೆ.

2. ರೋಗ: ಅಂದರೆ ಉಪವಾಸ ಇರುವುದರಿಂದ ರೋಗವು ಉಲ್ಬಣವಾಗುವ ಸ್ಥಿತಿಯಿದ್ದರೆ ಅಥವಾ ವ್ಯಕ್ತಿ ಮರಣ ಹೊಂದಬಹುದೆಂಬ ಆಶಂಕೆ ಇದ್ದರೆ ಅಥವಾ ಉಪವಾಸ ಇರಿಸಲಾಗದಂತಹ ಯಾವುದಾದರೂ ಗುರುತರವಾದ ರೋಗವಿದ್ದರೆ ಅಥವಾ ರೋಗ ಶಮನಕ್ಕೆ ವಿಳಂಬವಾಗುವ ಭಯವಿದ್ದರೆ ಉಪವಾಸವನ್ನು ತೊರೆಯಬಹುದಾಗಿದೆ. ಆದರೆ ರೋಗವನ್ನು ಕಾರಣವಾಗಿಟ್ಟು ಉಪವಾಸ ವ್ರತದಿಂದ ದೂರವುಳಿಯುವುದು ಸರಿಯಲ್ಲ. ಅಲ್ಲಾಹ್ ಹೃದಯಗಳೊಳಗಿನ ಭೇದಗಳನ್ನೂ ಬಲ್ಲವನಾಗಿದ್ದಾನೆ.

3 ಮತ್ತು 4. ಗರ್ಭಧಾರಣೆ ಮತ್ತು ಸ್ತನ್ಯಪಾನ: ಗರ್ಭಿಣಿಯರು ಮತ್ತು ಹಾಲೂಡಿಸುವ ತಾಯಂದಿರಿಗೆ ತನ್ನ ಅಥವಾ ತನ್ನ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದೆಂಬ ಆಶಂಕೆ ಇದ್ದರೆ, ಶರೀಅತ್ ಅಂತಹವರಿಗೆ ಉಪವಾಸ ಆಚರಿಸದಿರಲು ಅನುಮತಿಸು ತ್ತದೆ. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಅಲ್ಲಾಹನು ಪ್ರಯಾಣಿಕರಿಂದ ಉಪವಾಸ ಸರಿಸಿದ್ದಾನೆ ಮತ್ತು ಅರ್ಧ ನಮಾಝ್‌ನ ಆದೇಶ ನೀಡಿದ್ದಾನೆ. ಅಂತೆಯೇ ಗರ್ಭಿಣಿ ಮತ್ತು ಮೊಲೆ ಹಾಲೂಡಿಸುವ ಸ್ತ್ರೀಯರಿಂದ ಉಪವಾಸವನ್ನು ಸರಿಸಿದ್ದಾನೆ.” (ಅಸ್ಹಾಬುಸ್ಸುನನ್)

5. ವೃದ್ಧಾಪ್ಯ: ಅಲ್ಲಾಹ್ ಹೇಳುತ್ತಾನೆ, “ಉಪವಾಸವಿರಲು ಅಶಕ್ತರಾದವರು ಪ್ರಾಯಶ್ಚಿತ್ತವನ್ನು ಕೊಡಬೇಕು. ಒಂದು ದಿನದ ಉಪವಾಸದ ಪ್ರಾಯಶ್ಚಿತ್ತವು ಓರ್ವ ಬಡವನಿಗೆ ಆಹಾರ ನೀಡುವುದಾಗಿದೆ.” (ಪವಿತ್ರ ಕುರ್‌ಆನ್: 2: 184)

6. ಯಾರನ್ನಾದರೂ ಬಲವಂತದಿಂದ ಉಪವಾಸ ಪಾರಣೆ ಮಾಡಿಸಿದರೆ, ಅವನಿಗೂ ಅನುಮತಿ ಇದೆ.

ಉಪವಾಸ ಮುರಿಯುವ ಕಾರ್ಯಗಳು
1. ಪ್ರಜ್ಞಾಪೂರ್ವಕವಾಗಿ ಏನಾದರೂ ತಿನ್ನುವುದು ಅಥವಾ ಕುಡಿಯುವುದು ಅಥವಾ ಸೂಕ್ತ ಶರಈ ಕಾರಣವು ಎದುರಾಗುವುದು. ಉದಾಹರಣೆಗೆ: ರೋಗ, ಪ್ರಯಾಣ ಅಥವಾ ಬಲವಂತ ಇತ್ಯಾದಿ.
2. ಸಂಸರ್ಗ.
3. ಉದ್ದೇಶಪೂರ್ವಕ ವಾಂತಿ ಮಾಡುವುದು.
4. ಮುಟ್ಟು ಅಥವಾ ಹೆರಿಗೆ ಸ್ರಾವ: ಸ್ತ್ರೀಗೆ ಹಗಲು ಹೊತ್ತಲ್ಲಿ ರಕ್ತಸ್ರಾವ ಆದರೆ ಉಪವಾಸ ಮುರಿಯುತ್ತದೆ.
5. ಯಾವುದಾದರೂ ವಸ್ತು ಬಾಯಿಯ ಮೂಲಕ ಹೊಟ್ಟೆಗೆ ಹೋಗುವುದು. ಅದು ಹರಳು ಕಲ್ಲಾದರೂ ಸರಿ.
6. ಉಪವಾಸ ಮುರಿಯುವ ಸಂಕಲ್ಪ ಮಾಡುವುದು. ಆಗ ಏನನ್ನೂ ತಿನ್ನದಿದ್ದರೂ ಸರಿಯೆ? ಏಕೆಂದರೆ ಸಂಕಲ್ಪವೇ ಉಪವಾಸಕ್ಕಿರುವ ಶರ್ತವಾಗಿದೆ.
7. ಯಾವುದೇ ರೋಗ ಅಥವಾ ಇತರ ತೊಂದರೆಯ ಕಾರಣವಿಲ್ಲದೆ ಕಾಮೇಚ್ಛೆಯುಂಟಾಗಿ ವೀರ್ಯಸ್ಖಲನವಾಗುವುದು.

ಕಝಾ ಉಪವಾಸ
ರಮಝಾನಿನ ಉಪವಾಸಗಳ ಪೈಕಿ ಯಾರದಾದರೂ ಒಂದು ಅಥವಾ ಅದಕ್ಕಿಂತ ಹೆಚ್ಚು ಉಪವಾಸವು ಕಾರಣಾಂತರ ಗಳಿಂದ ಬಿಟ್ಟು ಹೋಗಿದ್ದರೆ, ಅದನ್ನು ಕಝಾ ಆಚರಿಸಬೇಕು. ಅಂದರೆ ಬಳಿಕ ಉಪವಾಸ ವ್ರತಾಚರಿಸಬೇಕು.
ಕಝಾದ ಸಮಯ: ರಮಝಾನ್ ಕಳೆದು ಇನ್ನೊಂದು ರಮಝಾನ್ ಆಗತವಾಗುವ ವರೆಗೆ ಬಿಟ್ಟು ಹೋದ ಉಪವಾಸವನ್ನು ಕಝಾ ಆಗಿ ಆಚರಿಸಬೇಕು. ಕಝಾ ಮಾಡುವುದರಲ್ಲಿ ತ್ವರೆ ಮಾಡುವುದು ಉತ್ತಮವಾಗಿದೆ. ಇನ್ನು ಎಷ್ಟು ಉಪವಾಸಗಳು ಬಾಕಿ ಉಳಿದಿರುವುದೋ ಅಷ್ಟೇ ದಿನಗಳು ಇನ್ನೊಂದು ರಮಝಾನಿಗೆ ಉಳಿದಿದ್ದರೆ ಆ ಬಿಟ್ಟು ಹೋದ ಉಪವಾಸಗಳ ಕಝಾ ವಾಜಿಬ್ ಆಗುತ್ತದೆ. ಉಪವಾಸವಿರಲು ಅನುಮತಿ ಇರುವ ದಿನಗಳಲ್ಲಿ ಮಾತ್ರವೇ ಕಝಾ ಉಪವಾಸಗಳನ್ನು ಇರಿಸಬೇಕಾಗಿದೆ. ಒಂದು ವೇಳೆ ನಿಷೇಧಿತ
ದಿನಗಳಲ್ಲಿ ಅಂದರೆ ಈದ್ ಮತ್ತು ಅಯ್ಯಾಮುತ್ತಶ್ರೀಕ್‌ಗಳಲ್ಲಿ ಕಝಾ ಉಪವಾಸ ಇರಿಸಿದರೆ ಅದರಿಂದ ಪ್ರಯೋಜನವಿರಲಾರದು. ರಮಝಾನಿನ ಕಝಾ ಉಪವಾಸಗಳನ್ನು ನಿರಂತರ ಇರಿಸಬೇಕೆಂದಿಲ್ಲ. ಆದರೆ ರಮಝಾನ್‌ನ ಬಳಿಕ ಆದಷ್ಟು ಬೇಗ ಕಝಾ ಆಚರಿಸುವುದು ಅಥವಾ ನಿರಂತರ ಆಚರಿಸಿ ಮುಗಿಸುವುದು ಉತ್ತಮವೇ ಆಗಿದೆ. ಏಕೆಂದರೆ ಕಡ್ಡಾಯಗಳನ್ನು ಆದಷ್ಟು ಬೇಗ ಮುಗಿಸಿಬಿಡುವುದು ಮತ್ತು ಅದರಲ್ಲಿ ವಿನಾ ಕಾರಣ ವಿಳಂಬ ಮಾಡದಿರುವುದು ಉತ್ತಮ.

ಉಪವಾಸದ ಪ್ರಾಯಶ್ಚಿತ್ತ
ವಿನಾ ಕಾರಣ ರಮಝಾನಿನ ಉಪವಾಸ ಇರಿಸದಿದ್ದರೆ ಅಥವಾ ಮುರಿದಿದ್ದರೆ ಅದನ್ನು ಕಝಾ ಆಗಿ ಇರಿಸುವುದರೊಂದಿಗೆ ಕಫ್ಫಾರ (ಪ್ರಾಯಶ್ಚಿತ್ತ)ವನ್ನೂ ನೀಡುವುದು ಅನಿವಾರ್ಯವಾಗಿದೆ. ಈ ಪ್ರಾಯಶ್ಚಿತ್ತವನ್ನು ಮೂರು ರೂಪದಲ್ಲಿ ನೀಡಬಹುದಾಗಿದೆ.
– ಓರ್ವ ಮುಸ್ಲಿಮ್ ಗುಲಾಮನನ್ನು ವಿಮೋಚಿಸುವುದು.
– ಎರಡು ತಿಂಗಳು ನಿರಂತರ ಉಪವಾಸ ಇರಿಸುವುದು. ಒಂದು ವೇಳೆ ಈ ಮಧ್ಯೆ ಈದುಲ್ ಅಝ್ಹಾ ಅಥವಾ ರಮಝಾನಿನ ಉಪವಾಸ ಅಥವಾ ಬೇರೇನಾದರೂ ಅಡ್ಡಿಯುಂಟಾ ದರೆ ಕಫ್ಫಾರ ಸ್ವೀಕಾರಾರ್ಹವಾಗಲಾರದು. ಆದರೆ ಹರಕೆಯ ಉಪವಾಸವು ಮಧ್ಯದಲ್ಲಿ ಬಂದರೆ ಕಫ್ಫಾರ ಪೂರ್ತಿಗೊಳಿಸಬೇಕು. ಈ ಎಣಿಕೆಯಲ್ಲಿ ಹರಕೆಯ ಉಪವಾಸವನ್ನು ಸೇರಿಸಲಾಗದು.
– ಅರುವತ್ತು ಮಂದಿ ಮಿಸ್ಕೀನರಿಗೆ ಆಹಾರ ನೀಡುವುದು. ಧಾನ್ಯದ ರೂಪದಲ್ಲಿಯೂ ನೀಡಬಹುದು ಅಥವಾ ಬೇಯಿಸಿದ ಆಹಾರವನ್ನೂ ನೀಡಬಹುದು.

ಎರಡು ಸ್ಥಿತಿಯಲ್ಲಿ ಕಫ್ಫಾರ ಅನಿವಾರ್ಯವಾಗುತ್ತದೆ:
1. ಸಂಸರ್ಗ.
2. ಬೇಕೆಂತಲೇ ಆಹಾರ-ಪಾನೀಯ ಸೇವಿಸುವುದು. (ಕೇವಲ ಮಾಲಿಕೀಗಳ ದೃಷ್ಟಿಯಲ್ಲಿ).
ಕಫ್ಫಾರದಲ್ಲಿ ಕ್ರಮಬದ್ಧತೆಯನ್ನು ಪಾಲಿಸಬೇಕಾಗುತ್ತದೆ. ಅಂದರೆ ಒಬ್ಬನಿಗೆ ಓರ್ವ ಸತ್ಯವಿಶ್ವಾಸಿ ಗುಲಾಮನನ್ನು ವಿಮೋಚಿಸುವ ತಾಕತ್ತಿದ್ದರೆ, ಅವನು ಉಪವಾಸವಿರಿಸುವುದು ಪರ್ಯಾಪ್ತವಾಗಲಾರದು. ಅದೇ ರೀತಿ ಯಾರಾದರೂ ಉಪವಾಸವಿರಿಸಲು ಶಕ್ತರಾಗಿರುವಾಗ ಕೇವಲ ಮಿಸ್ಕೀನರಿಗೆ ಆಹಾರ ನೀಡುವುದು ಸಾಕಾಗದು. ಇನ್ನು ಯಾರಾದರೂ ಈ ಮೂರನ್ನೂ ಮಾಡಲು ಶಕ್ತರಲ್ಲದಿದ್ದರೆ, ಅವರ ಮೇಲೆ ಕಫ್ಫಾರ ವಾಜಿಬ್ ಆಗುವುದಿಲ್ಲ. ಆದರೆ ಅವರು ಹೆಚ್ಚೆಚ್ಚು ಪಶ್ಚಾತ್ತಾಪ ಪಡುತ್ತಿರಬೇಕಾದುದು ಅಗತ್ಯ. ಬಳಿಕ ಅವನಿಗೆ ಸುಸ್ಥಿತಿಯುಂಟಾದರೆ ಅರುವತ್ತು ಮಿಸ್ಕೀನರಿಗೆ ಆಹಾರ ನೀಡಬೇಕು. ಇಂದಿನ ಕಾಲದಲ್ಲಿ ಗುಲಾಮಗಿರಿ ಇಲ್ಲದಿರುವುದರಿಂದ ಈ ಸ್ಥಿತಿಯು ಕಾರ್ಯತಃ ಅನೂರ್ಜಿತಗೊಳ್ಳುತ್ತದೆ. ಆದರೆ ಈ ಆದೇಶವು ಕಿಯಾಮತ್‌ನ ತನಕವೂ ಉಳಿದಿರುವುದು. ಈ ಕಫ್ಫಾರವು ಒಂದು ಉಪವಾಸಕ್ಕಾಗಿದೆ. ಒಂದು ವೇಳೆ ಒಂದಕ್ಕಿಂತ ಹೆಚ್ಚು ಉಪವಾಸಗಳು ವ್ಯರ್ಥವಾಗಿ ಹೋಗಿದ್ದರೆ ಪ್ರತಿಯೊಂದಕ್ಕೂ ಪ್ರತ್ಯೇಕವಾಗಿ ಕಫ್ಫಾರ ಅನಿವಾರ್ಯವಾಗುತ್ತದೆ.

ಫಿದಿಯಾ
ಮಿಸ್ಕೀನರಿಗೆ ಆಹಾರ ನೀಡುವುದು ಫಿದಿಯಾ ಆಗಿದೆ. ಇದು ಈ ಕೆಳಗಿನ ಸ್ಥಿತಿಯಲ್ಲಿ ಅನುವದನೀಯವಾಗಿದೆ:
1. ಉಪವಾಸವಿರಿಸಲಾಗದಷ್ಟು ದುರ್ಬಲನಾಗಿರುವವನು.
2. ಗುಣವಾಗುವ ನಿರೀಕ್ಷೆ ಇಲ್ಲದ ರೋಗಿ.
3. ಗರ್ಭಿಣಿ ಅಥವಾ ಹಾಲೂಡಿಸುವ ಸ್ತ್ರೀ. ಆಕೆಗೆ ತನ್ನ ಮಗುವಿನ ಜೀವ ಅಥವಾ ಆರೋಗ್ಯದ ಬಗ್ಗೆ ಆಶಂಕೆ ಇದ್ದರೆ.

ಮರಣ ಹೊಂದಿದವರ ಕಝಾ ಉಪವಾಸ
ಉಪವಾಸದ ಕಝಾದಲ್ಲಿ ತ್ವರೆ ಮಾಡಬೇಕು. ವಿಳಂಬ ಮಾಡುವುದು ಉಚಿತವಲ್ಲ. ಏಕೆಂದರೆ ಜೀವನಕ್ಕೆ ಯಾವುದೇ ಭರವಸೆ ಇರುವುದಿಲ್ಲ. ಅದು ಯಾವಾಗ ಮುಗಿದು ಹೋಗು ವುದು ಮತ್ತು ಕಡ್ಡಾಯ ಕರ್ಮಗಳು ಉಳಿದು ಬಿಡುವುದು ಎಂದು ಹೇಳುವಂತಿಲ್ಲ.
ನಿಶ್ಚಯವಾಗಿಯೂ ಅಲ್ಲಾಹ್ ಕಠಿಣವಾಗಿ ಲೆಕ್ಕ ಪಡೆಯುವವನಾಗಿದ್ದಾನೆ. ಯಾರದಾದರೂ ರಮಝಾನ್ ಅಥವಾ ಹರಕೆ ಅಥವಾ ಪ್ರಾಯಶ್ಚಿತ್ತದ ಉಪವಾಸ ಬಾಕಿ ಉಳಿದಿದ್ದು, ಅವನು ಮರಣ ಹೊಂದಿದರೆ ಮತ್ತು ಅದಕ್ಕೆ ಕಝಾ ಮಾಡಲು ಅವನಿಗೆ ಸಮಯಾವಕಾಶ ಇದ್ದರೂ ಕಾರಣಾಂತರದಿಂದ ಕಝಾ ವ್ರತಾಚರಿಸಿರದಿದ್ದರೆ, ಅವನ ನಿಕಟ ಬಂಧುಗಳ ಮೇಲೆ ಅವುಗಳನ್ನು ಆಚರಿಸುವ ಹೊಣೆ ಇರುತ್ತದೆ. ಒಂದೋ ಬಂಧುಗಳೆಲ್ಲರೂ ಅದನ್ನು ತೀರಿಸಬೇಕು; ಇಲ್ಲವೇ ಕೆಲವು ಮಂದಿ ತೀರಿಸಬೇಕು. ಮರಣ ಹೊಂದಿದವನಿಗೆ ನಿಕಟ ಬಂಧುಗಳಿಲ್ಲದಿದ್ದರೆ, ಅವನು ಬಿಟ್ಟು ಹೋದ ಸಂಪತ್ತಿನಿಂದ ವ್ಯಯಿಸಿ ಯಾರಿಂದಾದರೂ ಕಝಾ ಮಾಡಿಸಬೇಕು. ಏಕೆಂದರೆ ಅದು ಒಂದು ರೀತಿಯಲ್ಲಿ ಅಲ್ಲಾಹನ ಸಾಲವಾಗಿದೆ ಮತ್ತು ಇತರ ಎಲ್ಲ ಸಾಲಗಳಿಗಿಂತ ಅಲ್ಲಾಹನ ಸಾಲವು ಹೆಚ್ಚು ಪ್ರಮುಖವಾಗಿದೆ. ಅದನ್ನು ಮೊದಲು ಸಂದಾಯ ಮಾಡಬೇಕು. ಒಂದು ವೇಳೆ ಮರಣ ಹೊಂದಿದವನ ನಿಕಟ ಬಂಧುಗಳು ಕಝಾ ಉಪವಾಸವಿರಿಸಲು ನಿರಾಕರಿಸಿದರೆ ಎಲ್ಲರೂ ಪಾಪಿಗಳೆನಿಸುವರು ಮತ್ತು ಮರಣ ಹೊಂದಿದವನು ಆ ಉಪವಾಸಗಳಿಂದ ಮುಕ್ತನಾಗುವನು. ಏಕೆಂದರೆ ಅವನ ಮರಣದಿಂದ ಅವನ ಸಾಲಗಳೆಲ್ಲವೂ ಅವನ ಬಂಧುಗಳಿಗೆ ವರ್ಗಾಯಿಸಲ್ಪಡುವುದು. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಒಬ್ಬನು ಉಪವಾಸ ಕಝಾ ಇರುವ ಸ್ಥಿತಿಯಲ್ಲಿ ಮರಣ ಹೊಂದಿದರೆ, ಅದನ್ನು ಕಝಾ ಮಾಡುವುದು ಅವನ ನಿಕಟ ಬಂಧುಗಳ ಹೊಣೆಯಾಗಿದೆ.” (ಬುಖಾರಿ, ಮುಸ್ಲಿಮ್, ಅಬೂದಾವೂದ್, ಇಬ್ನುಮಾಜಃ)

ಕೆಲವು ಕರ್ಮಶಾಸ್ತ್ರಜ್ಞರ ಪ್ರಕಾರ, ಮಯ್ಯಿತ್‌ನ ಕಝಾ ಉಪವಾಸಗಳನ್ನು ಅವನ ಬಂಧುಗಳು ಇರಿಸಬೇಕೆಂದಿಲ್ಲ. ಒಂದು ವೇಳೆ ಯಾವುದಾದರೂ ರಮಝಾನಿನ ಉಪವಾಸವು ಏನಾದರೂ ಕಾರಣದಿಂದ (ರೋಗ, ಪ್ರಯಾಣ) ಉಳಿದಿದ್ದರೆ ಮತ್ತು ಅವನು ಮರಣ ಹೊಂದಿದರೆ ಅವನ ಮೇಲೆ ಕಝಾ ಇರುವುದಿಲ್ಲ ಮತ್ತು ಅವನ ಮೇಲೆ ಅದರ ಪಾಪವೂ ಇರುವುದಿಲ್ಲ. ಏಕೆಂದರೆ ಅವನಿಗೆ ಕಝಾ ಮಾಡುವ ಸಮಯಾವಕಾಶವೇ ದೊರೆತಿರುವುದಿಲ್ಲ.

ಪ್ರಾಯಶ್ಚಿತ್ತದ ಉಪವಾಸ
ಕಫ್ಫಾರ(ಪ್ರಾಯಶ್ಚಿತ್ತ)ದ ಉಪವಾಸವು ಯಾವುದಾದರೂ ಪ್ರಮಾದ ಮತ್ತು ಅಪರಾಧದ ಕಾರಣವಾಗಿ ಇರಿಸಲಾಗುವ ಉಪವಾಸವಾಗಿದೆ. ಉದಾಹರಣೆಗೆ: ಯಾರಿಂದಲಾದರೂ ಪ್ರಮಾದವಶಾತ್ ಕೊಲೆ ನಡೆದರೆ, ಅವನು ಒಬ್ಬ ಗುಲಾಮನನ್ನು ಸ್ವತಂತ್ರಗೊಳಿಸುವಷ್ಟು ಶಕ್ತನಲ್ಲದಿದ್ದರೆ ನಿರಂತರ ಎರಡು ತಿಂಗಳ ಕಾಲ ನಿರಂತರ ಉಪವಾಸ ವ್ರತಾಚರಿಸಬೇಕು. ಅಲ್ಲಾಹ್ ಹೇಳುತ್ತಾನೆ, “ಗುಲಾಮನನ್ನು ಪಡೆಯಲಾಗದವನು ನಿರಂತರ ಎರಡು ತಿಂಗಳು ಉಪವಾಸ ವ್ರತವನ್ನಾಚರಿಸಬೇಕು. ಈ ಪಾಪಕ್ಕಾಗಿ ಅಲ್ಲಾಹನೊಡನೆ ಪಶ್ಚಾತ್ತಾಪ ಪಡುವ ಕ್ರಮವಿದು.”(ಪವಿತ್ರ ಕುರ್‌ಆನ್: 4: 92)
ಅಥವಾ ಝಿಹಾರ್‌ನ ಉಪವಾಸ ವ್ರತ. (ಝಿಹಾರ್ ಎಂದರೆ ಪತಿಯು ತನ್ನ ಪತ್ನಿಯೊಡನೆ ‘ನೀನು ನನ್ನ ತಾಯಿಯ ಬೆನ್ನಿನಂತೆ’ ಎಂದು ಹೇಳುವುದು. ಅಜ್ಞಾನ ಕಾಲದಲ್ಲಿ ಇದು ಪತ್ನಿಗೆ ತಲಾಕ್ ನೀಡುವ ವಿಧಾನವಾಗಿತ್ತು.) ಇಸ್ಲಾಮ್ ಈ ವಿಧಾನವನ್ನು ನಿಷೇಧಿಸಿತು ಮತ್ತು ಈ ರೀತಿ ಹೇಳುವವನ ಮೇಲೆ ಕಫ್ಫಾರ(ಪ್ರಾಯಶ್ಚಿತ್ತ)ವನ್ನು ವಾಜಿಬ್‌ಗೊಳಿಸಿತು. ಅದರ ಪ್ರಾಯಶ್ಚಿತ್ತವು ಓರ್ವ ಗುಲಾಮನನ್ನು ವಿಮೋಚಿಸುವುದು ಅಥವಾ ಎರಡು ತಿಂಗಳು ನಿರಂತರ ಉಪವಾಸವಿಡುವುದು ಅಥವಾ ಅರುವತ್ತು ಮಂದಿ ದರಿದ್ರರಿಗೆ ಊಟ
ನೀಡುವುದಾಗಿದೆ. ಅಲ್ಲಾಹ್ ಹೇಳುತ್ತಾನೆ,“ನಿಮ್ಮ ಪೈಕಿ ತಮ್ಮ ಪತ್ನಿಯರನ್ನು ಝಿಹಾರ್ ಮಾಡುವವರ ಪತ್ನಿಯರು ಅವರ ತಾಯಂದಿರಲ್ಲ. ಅವರನ್ನು ಹೆತ್ತವರೇ ಅವರ ತಾಯಂದಿರು. ಇವರು ಅತ್ಯಂತ ಅಪ್ರಿಯ ಹಾಗೂ ಸುಳ್ಳಾದ ಒಂದು ಮಾತನ್ನು ಹೇಳುತ್ತಾರೆ. ವಾಸ್ತವದಲ್ಲಿ ಅಲ್ಲಾಹನು ಬಹಳ ಮನ್ನಿಸುವವನೂ ಮಹಾ ಕ್ಷಮಾಶೀಲನೂ ಆಗಿರುತ್ತಾನೆ. ತಮ್ಮ ಪತ್ನಿಯರನ್ನು ಝಿಹಾರ್ ಮಾಡಿದವರು ಅನಂತರ ತಾವು ಹೇಳಿದ ಮಾತಿನಿಂದ ಮರಳಿದರೆ ಅವರು ಪರಸ್ಪರರನ್ನು ಸ್ಪರ್ಶಿಸುವುದಕ್ಕೆ ಮುಂಚೆ ಒಬ್ಬ ಗುಲಾಮನನ್ನು ವಿಮೋಚಿಸಬೇಕಾಗುವುದು. ಹೀಗೆ ನಿಮಗೆ ಉಪದೇಶ ನೀಡಲಾಗುತ್ತದೆ ಮತ್ತು ನೀವು ಮಾಡುವುದೆಲ್ಲವನ್ನೂ ಅಲ್ಲಾಹನು ಅರಿತಿರುವನು. ಯಾರಿಗಾದರೂ ಗುಲಾಮನು ಸಿಗದಿದ್ದರೆ, ಅವರಿಬ್ಬರು ಪರಸ್ಪರರನ್ನು ಸ್ಪರ್ಶಿಸುವುದಕ್ಕೆ ಮುಂಚೆ ಅವನು ನಿರಂತರವಾಗಿ ಎರಡು ತಿಂಗಳ ಉಪವಾಸ ವ್ರತವನ್ನು ಆಚರಿಸಬೇಕು. ಇದಕ್ಕೂ ಅಶಕ್ತನಾಗಿರುವವನು ಅರುವತ್ತು ಮಂದಿ ದರಿದ್ರರಿಗೆ ಊಟ ಕೊಡಬೇಕು.”(ಪವಿತ್ರ ಕುರ್‌ಆನ್: 58: 2-4)

ಪ್ರಾಯಶ್ಚಿತ್ತದ ಉಪವಾಸಗಳಲ್ಲಿ ಶಪಥದ ಉಪವಾಸವೂ ಒಂದಾಗಿದೆ. ಯಾರಾದರೂ ಒಂದು ಶಪಥವನ್ನು ಮಾಡಿದ್ದು, ಅದನ್ನು ಪೂರ್ತಿಗೊಳಿಸಲು ಅವನಿಂದ ಆಗಿರದಿದ್ದರೆ, ಅದಕ್ಕೆ ಪ್ರಾಯಶ್ಚಿತ್ತವಾಗಿ ಮೂರು ದಿನಗಳವರೆಗೆ ಉಪವಾಸವಿಡಬೇಕಾದುದು ಅಗತ್ಯವಾಗಿದೆ. ವಸ್ತುತಃ ಪ್ರಾಯಶ್ಚಿತ್ತವಾಗಿ ಹತ್ತು ಮಂದಿ ದರಿದ್ರರಿಗೆ ಊಟ ಉಣಿಸಲು ಅಥವಾ ಅವರಿಗೆ ವಸ್ತ್ರ ನೀಡಲು ಅಥವಾ ಒಬ್ಬನನ್ನು ಸ್ವತಂತ್ರಗೊಳಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಈ ಉಪವಾಸವನ್ನಿಡಲಾಗುತ್ತದೆ. ಅಲ್ಲಾಹ್ ಹೇಳುತ್ತಾನೆ, “ನೀವು ಮಾಡುವ ಅರ್ಥವಿಲ್ಲದ ಶಪಥಗಳಿಗಾಗಿ ಅಲ್ಲಾಹನು ನಿಮ್ಮನ್ನು ಹಿಡಿಯುವುದಿಲ್ಲ. ಆದರೆ ನೀವು ಉದ್ದೇಶ ಪೂರ್ವಕವಾಗಿ ಮಾಡುವ ಶಪಥಗಳ ಕುರಿತು ಅವನು ಅಗತ್ಯವಾಗಿ ವಿಚಾರಣೆ ನಡೆಸುವನು. (ಇಂತಹ ಶಪಥಗಳನ್ನು ಮುರಿದುದಕ್ಕೆ) ಪ್ರಾಯಶ್ಚಿತ್ತವಾಗಿ ಹತ್ತು ಮಂದಿ ದರಿದ್ರರಿಗೆ, ನೀವು ನಿಮ್ಮ ಮಕ್ಕಳು ಮರಿಗಳಿಗೆ ಕೊಡುವಂತಹ ಮಧ್ಯಮ ತರಗತಿಯ ಊಟ ಕೊಡಿರಿ ಅಥವಾ ಅವರಿಗೆ ಬಟ್ಟೆಯುಡಿಸಿರಿ ಅಥವಾ ಒಬ್ಬ ಗುಲಾಮನನ್ನು ವಿಮೋಚನೆಗೊಳಿಸಿರಿ. ಇದಕ್ಕೆ ಸಾಮರ್ಥ್ಯ ಇಲ್ಲದವನು ಮೂರು ದಿನಗಳ ಉಪವಾಸ ವ್ರತವನ್ನಾಚರಿಸಬೇಕು. ನೀವು ಶಪಥ ಮಾಡಿಕೊಂಡು ಅದನ್ನು ಮುರಿದುದಕ್ಕಾಗಿ ನಿಮ್ಮ ಶಪಥಗಳಿಗೆ ಪ್ರಾಯಶ್ಚಿತ್ತವಿದು. ನಿಮ್ಮ ಶಪಥಗಳನ್ನು ಪಾಲಿಸಿರಿ. ಈ ರೀತಿ ನೀವು ಕೃತಜ್ಞತೆ ಸಲ್ಲಿಸುವವರಾಗ ಬಹುದೆಂದು ಅಲ್ಲಾಹನು ತನ್ನ ಆದೇಶಗಳನ್ನು ನಿಮಗೆ ವಿವರಿಸುತ್ತಾನೆ.” (ಪವಿತ್ರ ಕುರ್‌ಆನ್: 5: 89)

ಲೈಲತುಲ್ ಕದ್ರ್
“ನಾವು ಇದನ್ನು (ಕುರ್‌ಆನನ್ನು) ಪ್ರತಿಷ್ಠಿತ ರಾತ್ರಿಯಲ್ಲಿ ಅವತೀರ್ಣಗೊಳಿಸಿದೆವು. ಪ್ರತಿಷ್ಠಿತ ರಾತ್ರಿ ಏನೆಂದು ನಿಮಗೇನು ಗೊತ್ತು? ಪ್ರತಿಷ್ಠಿತ ರಾತ್ರಿಯು ಸಾವಿರ ಮಾಸಗಳಿಗಿಂತಲೂ ಹೆಚ್ಚು ಶ್ರೇಷ್ಠವಾಗಿದೆ. ದೇವಚರರು ಮತ್ತು ‘ರೂಹ್’ ಆ ರಾತ್ರಿ ತಮ್ಮ ಪ್ರಭುವಿನ ಅನುಜ್ಞೆಯಿಂದ ಪ್ರತಿಯೊಂದು ಆದೇಶದೊಂದಿಗೆ ಇಳಿಯುತ್ತಾರೆ. ಆ ರಾತ್ರಿಯು ಅರುಣೋದಯದ ವರೆಗೂ ಸಾದ್ಯಂತ ಮಂಗಲಮಯವಾಗಿದೆ.”(ಪವಿತ್ರ ಕುರ್‌ಆನ್: 97: 1-5)

ಇದೊಂದು ಸಮೃದ್ಧ ರಾತ್ರಿಯಾಗಿದೆ. ಈ ರಾತ್ರಿಯಲ್ಲಿ ಅಲ್ಲಾಹನಿಗೆ ಸಾದ್ಯಂತ ಆರಾಧನೆಗಳನ್ನು ಸಲ್ಲಿಸುವುದು ಮುಸ್ತಹಬ್ ಆಗಿದೆ. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಈ ರಾತ್ರಿಯಲ್ಲಿ ಯಾರು ವಿಶ್ವಾಸದ ಸ್ಥಿತಿಯಲ್ಲಿ, ಅಲ್ಲಾಹನಿಂದ ಪ್ರತಿಫಲವನ್ನು ಬಯಸಿ ಆರಾಧನೆಗಳಲ್ಲಿ ತಲ್ಲೀನನಾಗುತ್ತಾನೋ ಅವನ ಗತ ಪಾಪಗಳನ್ನು ಕ್ಷಮಿಸಲಾಗುವುದು.” (ಬುಖಾರಿ)

ಈ ರಾತ್ರಿ ರಮಝಾನಿನ ಕೊನೆಯ ಹತ್ತರ ಬೆಸ ಸಂಖ್ಯೆಯ ರಾತ್ರಿಗಳಲ್ಲಿ ಒಂದಾಗಿದೆ. (ಅಂದರೆ 21, 23, 25, 27 ಅಥವಾ 29ನೇ ರಾತ್ರಿ). ಉಬೈ ಬಿನ್ ಕಅಬ್(ರ) ಹೇಳುತ್ತಾರೆ, “ಅಲ್ಲಾಹನಾಣೆ! ನಾನು ಅದನ್ನು ಬಲ್ಲೆ.” ಶುಅï‌ಬ(ರ) ಹೇಳುತ್ತಾರೆ, “ಲೈಲತುಲ್ ಕದ್ರ್ ಕುರಿತು ನನಗೆ ತಿಳಿದಿರುವ ಮಟ್ಟಿಗೆ, ಅಂದು ಅಲ್ಲಾಹನ ಸಂದೇಶವಾಹಕರು(ಸ) ನಮಗೆ ಆರಾಧನೆಗೆ ಆದೇಶಿಸಿದ್ದರು ಮತ್ತು ಅದು 27ನೇ ರಾತ್ರಿಯಾಗಿತ್ತು.” (ಮುಸ್ಲಿಮ್)

ಮಾನವನು ಈ ರಾತ್ರಿಯನ್ನು ಗಳಿಸಲಿಕ್ಕಾಗಿ ಹೆಚ್ಚೆಚ್ಚು ಪರಿಶ್ರಮ ಪಡಬೇಕು ಮತ್ತು ಹೆಚ್ಚೆಚ್ಚು ಆರಾಧನೆಗಳನ್ನು ಸಲ್ಲಿಸುತ್ತಿರಬೇಕು ಎಂಬುದೇ ಈ ರಾತ್ರಿಯು ಯಾವುದೆಂದು ಸ್ಪಷ್ಟವಾಗಿ ತಿಳಿಸದಿರುವುದರ ಯುಕ್ತಿಯಾಗಿದೆ. ಈ ರಾತ್ರಿಯಲ್ಲಿ ಪಠಿಸುವ ಪ್ರಾರ್ಥನೆಗೆ ಸಂಬಂಧಿಸಿ ಆಯಿಶಾರವರು(ರ) ಪ್ರವಾದಿವರ್ಯರಲ್ಲಿ(ಸ) ಕೇಳಿದರು, “ಯಾ ರಸೂಲಲ್ಲಾಹ್(ಸ)! ನಾವು ಯಾವ ರೀತಿಯಲ್ಲಿ ಪ್ರಾರ್ಥಿಸಬೇಕು?” ಪ್ರವಾದಿವರ್ಯರು(ಸ) ಹೇಳಿದರು, “ಈ ರೀತಿ ಪ್ರಾರ್ಥಿಸು- ಓ ಅಲ್ಲಾಹ್! ನೀನು ಸಾದ್ಯಂತ ಕ್ಷಮೆಯಾಗಿರುವೆ ಮತ್ತು ಕ್ಷಮಿಸುವುದನ್ನು ಇಷ್ಟಪಡುವವನಾಗಿರುವೆ. ಹಾಗಾಗಿ ನಮ್ಮನ್ನು ಕ್ಷಮಿಸು.”(ತಿರ್ಮಿದಿ, ಇಬ್ನು ಮಾಜಃ)

ಇಅï‌ತಿಕಾಫ್
ಅಲ್ಲಾಹನೊಂದಿಗೆ ಗಾಢವಾದ ಸಂಬಂಧವು ಓರ್ವ ವಿಶ್ವಾಸಿಯ ಮಟ್ಟಿಗೆ ಮನಃಶಾಂತಿ ಮತ್ತು ಜೀವನದ ಸೋಪಾನವಾಗಿದೆ. ಐಹಿಕ ಜೀವನದಲ್ಲಿ ಅನೇಕ ರೀತಿಯ ಅಪ್ರಿಯ ವಸ್ತು/ವಿಷಯಗಳು ಎದುರಾಗುತ್ತವೆ. ಅದರಿಂದಾಗಿ ಹೃದಯದ ಕನ್ನಡಿಯು ಮಾಸುತ್ತಿರುತ್ತದೆ. ಆದ್ದರಿಂದ ಅದನ್ನು ಆಗಾಗ ಸ್ವಚ್ಛಗೊಳಿಸುವ ಕಾರ್ಯವು ನಡೆಯುತ್ತಿರಬೇಕಾದುದು ಮತ್ತು ಅದರ ಸಂಸ್ಕರಣೆಯಾಗಬೇಕಾದುದು ಅಗತ್ಯವಾಗಿದೆ. ಅದರ ಅತ್ಯುತ್ತಮ ವಿಧಾನವು ಹೆಚ್ಚೆಚ್ಚಾಗಿ ಅಲ್ಲಾಹನನ್ನು ಸ್ಮರಿಸುವುದು ಮತ್ತು ಹೆಚ್ಚೆಚ್ಚು ಆರಾಧಿಸುವುದಾಗಿದೆ. ಈ ಮೂಲಕ ಅಲ್ಲಾಹನಿಗೆ ಇನ್ನಷ್ಟು ನಿಕಟನಾಗಬೇಕಾಗಿದೆ ಮತ್ತು ಅವನಿಗೇ ಅರ್ಪಿತವಾಗಬೇಕಾಗಿದೆ. ಇದೆಲ್ಲವೂ ಇಅï‌ತಿಕಾಫ್‌ನಿಂದ ಅತ್ಯುತ್ತಮವಾಗಿ ಸಾಧಿಸಬಹುದಾಗಿದೆ.
ಇಅï‌ತಿಕಾಫ್‌ನ ಅರ್ಥ: ಅಲ್ಲಾಹನ ಸಾಮಿಪ್ಯ ಗಳಿಸಲು ಅವನಿಗೆ ಹೆಚ್ಚೆಚ್ಚು ಆರಾಧನೆ ಸಲ್ಲಿಸುವ ಸಂಕಲ್ಪದೊಂದಿಗೆ ಮಸೀದಿಯಲ್ಲಿ ತಂಗುವುದಾಗಿದೆ.

ಇಅï‌ತಿಕಾಫ್‌ನ ವಿಧಗಳು
1. ವಾಜಿಬ್ ಇಅï‌ತಿಕಾಫ್: ಇದು ಹರಕೆಯ ಇಅï‌ತಿಕಾಫ್ ಆಗಿದೆ. ಇದನ್ನು ಈಡೇರಿಸಬೇಕಾದುದು ಅನಿವಾರ್ಯವಾಗಿದೆ. ಒಮ್ಮೆ ಉಮರ್‌ರವರು(ರ) ಅಲ್ಲಾಹನ ಸಂದೇಶವಾಹಕ ರೊಡನೆ(ಸ) ಕೇಳಿದರು, “ಯಾ ರಸೂಲಲ್ಲಾಹ್(ಸ)! ನಾನು ಕಅಬಾ ಭವನದಲ್ಲಿ ಇಅï‌ತಿಕಾಫ್‌ನ ಹರಕೆ ಹೊತ್ತಿದ್ದೆ.” ಪ್ರವಾದಿವರ್ಯರು(ಸ) ಹೀಗೆಂದರು, “ಹಾಗಿದ್ದರೆ ಅದನ್ನು ಅಗತ್ಯವಾಗಿ ಈಡೇರಿಸಿರಿ.” (ಮುತ್ತಫಕ್ ಅಲೈಹಿ)
ವ್ಯಕ್ತಿಯು ಇಅï‌ತಿಕಾಫ್‌ನ ಹರಕೆಯನ್ನು ಹೊತ್ತಿದ್ದು, ಅದನ್ನು ಈಡೇರಿಸದೆ ಮರಣ ಹೊಂದಿದರೆ ಅವನ ಮೇಲೇನೂ ದೋಷವಿಲ್ಲ.

2. ಮುಸ್ತಹಬ್ ಇಅï‌ತಿಕಾಫ್: ಇದು ವಿಶೇಷವಾಗಿ ರಮಝಾನಿನ ಕೊನೆಯ ಹತ್ತರಲ್ಲಿ ಆಚರಿಸುವ ಇಅï‌ತಿಕಾಫ್ ಆಗಿದೆ. ಇದರ ಶರ್ತಗಳು ಈ ಕೆಳಗಿನಂತಿವೆ:
(ಅ) ಮುಅï‌ತಕಿಫ್ ಮುಸ್ಲಿಮನಾಗಿರಬೇಕು.
(ಆ) ಬುದ್ಧಿ ಇರುವವನಾಗಿರಬೇಕು. ಅಂದರೆ ಹುಚ್ಚ ಅಥವಾ ಮತಿಭ್ರಾಂತನಾಗಿರಬಾರದು. ಅದೇ ರೀತಿ ಅರಿವಿಲ್ಲದ ಮಗುವೂ ಆಗಿರಬಾರದು. ಆದರೆ ಪ್ರೌಢನಲ್ಲದಿದ್ದರೂ ತಿಳುವಳಿಕೆಯುಳ್ಳ ಬಾಲಕನು ಇಅï‌ತಿಕಾಫ್ ಕುಳಿತುಕೊಳ್ಳಬಹುದಾಗಿದೆ.
(ಇ) ಇಅï‌ತಿಕಾಫ್ ಮಸೀದಿಯಲ್ಲಾಗಿರಬೇಕು. ಮನೆ ಅಥವಾ ಇತರ ಸ್ಥಳದಲ್ಲಿ ಅನುವದನೀಯ ಅಲ್ಲ. ಕೇವಲ ಸ್ತ್ರೀಯರು ತಮ್ಮ ಮನೆಯಲ್ಲಿ ನಮಾಝ್‌ನ ಸ್ಥಳದಲ್ಲಿ ಇಅï‌ತಿಕಾಫ್ ಕುಳಿತುಕೊಳ್ಳಬಹುದಾಗಿದೆ.
(ಈ) ಸಂಕಲ್ಪ ಅಗತ್ಯ.
(ಉ) ಜನಾಬತ್, ಮುಟ್ಟು, ಹೆರಿಗೆ ಸ್ರಾವ ಮತ್ತಿತರ ಸ್ರಾವದಿಂದ ಮುಕ್ತರಾಗಿರಬೇಕು.
ಮುಅï‌ತಕಿಫ್ ಹೆಚ್ಚೆಚ್ಚಾಗಿ ಅಲ್ಲಾಹನ ಸ್ತುತಿ, ಕೀರ್ತನೆ, ಪ್ರವಾದಿವರ್ಯರಿಗೆ(ಸ) ಸ್ವಸ್ತಿವಚನ ಮತ್ತು ಆದಷ್ಟು ಹೆಚ್ಚು ಆರಾಧನೆಗಳಲ್ಲಿ ತಲ್ಲೀನನಾಗಿರಬೇಕು. ಹೆಚ್ಚೆಚ್ಚು ಕುರ್‌ಆನ್ ಪಠಣ ಮತ್ತು ನಫಿಲ್ ನಮಾಝ್ ಹಾಗೂ ಉಪವಾಸವನ್ನು ಅನುಷ್ಠಾನಿಸುತ್ತಿರಬೇಕು.

ಇಅï‌ತಿಕಾಫ್‌ನ ಸ್ಥಿತಿಯಲ್ಲಿ ಅಪ್ರಿಯವಾದ ಕಾರ್ಯಗಳು
1. ಅನಗತ್ಯವಾದ ಕಾರ್ಯ ಮತ್ತು ಮಾತುಕತೆಯಲ್ಲಿ ತಲ್ಲೀನರಾಗುವುದು.
2. ಚಿಂತನೆಯ ಹೊರತಾದ ಸಮಯದಲ್ಲಿ ಮೌನವಾಗಿರುವುದು.

ಅನುವದನೀಯ ಕಾರ್ಯಗಳು
1. ಅನಿವಾರ್ಯವಾಗಿರುವ ಕಾರ್ಯಗಳಿಗೆ ಹೊರಗೆ ಹೋಗುವುದು. ಉದಾಹರಣೆಗೆ: ಮಲ-ಮೂತ್ರ ವಿಸರ್ಜನೆ ಇತ್ಯಾದಿ.
2. ಕೂದಲು ಕತ್ತರಿಸುವುದು, ಉಗುರು ಕತ್ತರಿಸುವುದು, ಸ್ನಾನ ಮಾಡುವುದು, ಬಟ್ಟೆ ಒಗೆಯುವುದು ಮತ್ತು ಅತ್ತರು ಪೂಸುವುದರಲ್ಲಿ ತೊಂದರೆಯಿಲ್ಲ.
3. ಮಸೀದಿಯಲ್ಲಿ ಆಹಾರ-ಪಾನೀಯ ಸೇವಿಸುವುದು ಮತ್ತು ಮಲಗುವುದು.

ಇಅï‌ತಿಕಾಫ್‌ನ ಆರಂಭ ಮತ್ತು ಅಂತ್ಯ
ಇಅï‌ತಿಕಾಫ್‌ನ ವಿಧವನ್ನು ಅನುಸರಿಸಿ ಅದರ ಆರಂಭ ಮತ್ತು ಅಂತ್ಯವು ಈ ಪ್ರಕಾರ ಇರುತ್ತದೆ:
1. ರಮಝಾನಿನ ಕೊನೆಯ ಹತ್ತರಲ್ಲಿ ಇಅï‌ತಿಕಾಫ್ ಇರುವುದಾಗಿದ್ದರೆ, ಮುಅï‌ತಕಿಫ್ ರಮಝಾನ್ 19ರಂದು ಸೂರ್ಯಾಸ್ತಕ್ಕೆ ಮುಂಚೆ ಮಸೀದಿ ಪ್ರವೇಶಿಸಬೇಕು. ಅಂತೆಯೇ ರಮಝಾನಿನ ಕೊನೆಯ ದಿನದಂದು ಸೂರ್ಯಾಸ್ತವಾದ ಬಳಿಕವೇ ಇಅï‌ತಿಕಾಫ್ ಕೊನೆಗೊಳಿಸಿ ಮಸೀದಿಯಿಂದ ಹೊರ ಬರಬೇಕು.
2. ನಿರ್ದಿಷ್ಟ ಸಮಯಕ್ಕೆ ಇಅï‌ತಿ ಕಾಫ್‌ನ ಹರಕೆಯನ್ನು ಹೊತ್ತಿದ್ದರೆ, ಅದೇ ದಿನದಲ್ಲಿ ಇಅï‌ತಿಕಾಫ್ ಪ್ರಾರಂಭಿಸಬೇಕು. ಯಾವ ದಿನವನ್ನು ನಿರ್ಧರಿಸಲಾಗಿರುವುದೋ ಅದರ ಹಿಂದಿನ ರಾತ್ರಿ ಮಗ್ರಿಬ್ ಅದಾನ್‌ನ ಬಳಿಕದಿಂದ ಫಜ್ರ್ ನ ಅದಾನ್‌ಗೆ ಮುಂಚಿನ ಸಮಯದೊಳಗೆ ಮಸೀದಿ ಪ್ರವೇಶಿಸಬೇಕು. ಅದೇ ರೀತಿ ಯಾವ ದಿನ ಇಅï‌ತಿಕಾಫ್ ಕೊನೆಗೊಳಿಸ ಲಾಗುವುದೋ ಅಂದು ಸೂರ್ಯಾಸ್ತವಾದ ಬಳಿಕ ಮಸೀದಿಯಿಂದ ಹೊರಡಬೇಕು.
3. ಒಂದು ವೇಳೆ ನಫಿಲ್ ಇಅï‌ತಿ ಕಾಫ್ ಆಗಿದ್ದರೆ, ಯಾವಾಗ ಬೇಕಾದರೂ ಆರಂಭಿಸಬಹುದು ಮತ್ತು ಯಾವಾಗ ಬೇಕಾದರೂ ಮಸೀದಿಯಿಂದ ಹೊರ ಹೋಗಬಹುದು. ವಿದ್ವಾಂಸರು ಹಗಲು ಮತ್ತು ರಾತ್ರಿಯ ಇಅï‌ತಿಕಾಫ್‌ನಲ್ಲಿ ವ್ಯತ್ಯಾಸವನ್ನು ಕಲ್ಪಿಸುತ್ತಾರೆ. ಹಗಲಲ್ಲಿ ಇಅï‌ತಿಕಾಫ್‌ನ ಸಂಕಲ್ಪ ಮಾಡಿದ್ದರೆ, ಫಜ್ರ್ ಗಿಂತ ಮುಂಚೆ ಇಅï‌ತಿಕಾಫ್‌ನ ಸ್ಥಳಕ್ಕೆ ತಲುಪಬೇಕು ಮತ್ತು ಸೂರ್ಯಾಸ್ತವಾದ ಬಳಿಕ ಅಲ್ಲಿಂದ ಹೊರಡಬೇಕು. ರಾತ್ರಿಯ ಇಅï‌ತಿಕಾಫ್‌ನ ಸಂಕಲ್ಪ ಮಾಡಿದ್ದರೆ, ಸೂರ್ಯಾಸ್ತವಾದಾಗ ಅಲ್ಲಿಗೆ ತಲುಪಬೇಕು ಮತ್ತು ಫಜ್ರ್ ನ ಬಳಿಕ ಅಲ್ಲಿಂದ ಹೊರಡಬೇಕು. ಇನ್ನು ಯಾರಾದರೂ ಇಡೀ ತಿಂಗಳು ಇಅï‌ತಿಕಾಫ್‌ನ ಸಂಕಲ್ಪ ಮಾಡಿದ್ದರೆ, ಅವನು ತಿಂಗಳು ಆರಂಭವಾಗುವುದಕ್ಕಿಂತ ಮುಂಚಿನ ರಾತ್ರಿ ಇಅï‌ತಿಕಾಫ್‌ಗೆ ಕುಳಿತುಕೊಳ್ಳಬೇಕು ಮತ್ತು ತಿಂಗಳ ಕೊನೆಯ ದಿನ ಸೂರ್ಯಾಸ್ತವಾದ ಮೇಲೆ ಅಲ್ಲಿಂದ ಹೊರಡಬೇಕು.

ಇಅï‌ತಿಕಾಫನ್ನು ಅಸಿಂಧುಗೊಳಿಸುವ ಕರ್ಮಗಳು
1. ಸೂಕ್ತ ಕಾರಣವಿಲ್ಲದೆ ಮಸೀದಿಯಿಂದ ಹೊರ ನಡೆಯುವುದು.
2. ಸಂಸರ್ಗ. ಅಲ್ಲಾಹ್ ಹೇಳುತ್ತಾನೆ, “ನೀವು ಮಸೀದಿಗಳಲ್ಲಿ ಇಅï‌ತಿಕಾಫ್‌ಗೆ (ಧ್ಯಾನಾಸಕ್ತರಾಗಿ) ಕುಳಿತಿರುಗ ಸ್ತ್ರೀ ಸಂಭೋಗ ಮಾಡಬೇಡಿರಿ. ಇವು ಅಲ್ಲಾಹನ ನಿರ್ಣಯಿಸಿದ ಮೇರೆಗಳು. ಇವುಗಳನ್ನು ಸಮೀಪಿಸಬಾರದು. ಹೀಗೆ ಜನರು ಅಪರಾಧಗಳಿಂದ ಪಾರಾಗುವರೆಂದು ನಿರೀಕ್ಷಿಸಿ, ಅಲ್ಲಾಹನು ತನ್ನ ಆದೇಶಗಳನ್ನು ಸುಸ್ಪಷ್ಟವಾಗಿ ವಿವರಿಸುತ್ತಾನೆ.”
(ಪವಿತ್ರ ಕುರ್‌ಆನ್: 2: 187)
3. ಯಾವುದಾದರೂ ಕಾರಣದಿಂದ ನಶೆಯೇರುವುದು.
4. ಬುದ್ಧಿಭ್ರಮಣೆಯಾಗುವುದು ಅಥವಾ ದೀರ್ಘ ಸಮಯ ಮೂರ್ಛೆ ಹೋಗುವುದು.
5. ಮುಟ್ಟು, ಹೆರಿಗೆ ಸ್ರಾವ ಮತ್ತಿತರ ಸ್ರಾವ ಆಗುವುದು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …