Home / ಪ್ರಶ್ನೋತ್ತರ / ಮಂತ್ರ: ಸರಿ-ತಪ್ಪು ?

ಮಂತ್ರ: ಸರಿ-ತಪ್ಪು ?

ಪ್ರಶ್ನೆ: ಇತ್ತೀಚೆಗೆ ನಾನು ಒಂದು ಪುಸ್ತಕದಲ್ಲಿ ಈ ರೀತಿ ಬರೆದದ್ದನ್ನು ನೋಡಿದ್ದೇನೆ, “ರೋಗಗಳಿಗೆ ಮದ್ದು ಎರಡು ರೂ ಪಗಳಲ್ಲಿವೆ. ಒಂದು ಔಷಧ ಹಾಗೂ ಇನ್ನೊಂದು ಮಂತ್ರ. ಪ್ರವಾದಿ(ಸ) ಇವೆರಡನ್ನೂ ಉಪಯೋಗಿಸಿದ್ದಾರೆ ಮತ್ತು ನಮಗೂ ಅದನ್ನು ಮಾಡಲು ಹೇಳಿದ್ದಾರೆ.” ಇದು ಸರಿಯೇ? ರೋಗ ಶಮನಕ್ಕೆ ಮಂತ್ರ ಉಪಯೋಗಿಸಲು ಕಲಿಸಿರುವ ಹದೀಸ್‌ಗಳಿವೆಯೇ?

ಉತ್ತರ: ಮಂತ್ರಗಳು ಹಲವು ವಿಧಗಳಲ್ಲಿವೆ. ಕೆಲವರು ಮಂತ್ರದ ಹೆಸರಿನಲ್ಲಿ ದೇವನ ಶಕ್ತಿಯ ಸೇವೆಯನ್ನು ಸ್ವತಃ ಕಲ್ಪಿಸುತ್ತಾ ಕೆಲವು ಕರ್ಮಗಳನ್ನು ಮಾಡುತ್ತಾರೆ. ಇನ್ನು ಕೆಲವರು ಕೆಲ ಕಾಗದದಲ್ಲೂ ಕೋಳಿ ಮೊಟ್ಟೆಯಲ್ಲೂ ತಗಡಿನಲ್ಲೂ ಏನೆಲ್ಲಾ ಬರೆದು ಅದನ್ನು ಮಣ್ಣಿನಲ್ಲಿ ಹೂತು ಹಾಕುತ್ತಾರೆ ಅಥವಾ ಮನೆಯ ಯಾವುದಾದರೂ ಕಡೆಗಳಲ್ಲಿ ಕಟ್ಟಿ ತೂಗು ಹಾಕುತ್ತಾರೆ. ಇವೆಲ್ಲವೂ ಅನಾಚಾರಗಳಾಗಿವೆ. ಕುರ್‌ಆನ್ ಸೂಕ್ತಗಳು ಹಾಗೂ ಇಸ್ಲಾಮೀ ಪ್ರಾರ್ಥನೆಗಳನ್ನು ಪಠಿಸುತ್ತಾ ರೋಗಿಯ ಮೇಲೆ ಊದುವುದನ್ನು ಮಂತ್ರ ಎಂದು ಹೇಳಲಾಗುತ್ತದೆ.

ಕೊನೆಯಲ್ಲಿ ಹೇಳಲಾದ ಮಂತ್ರವನ್ನು ಇಸ್ಲಾಮ್ ಅನುಮತಿಸಿದೆ ಮತ್ತು ಪ್ರವಾದಿ(ಸ) ಮಾಡಿದ್ದೂ ಆಗಿದೆ. ವಾಸ್ತವದಲ್ಲಿ ಇದು ಪ್ರಾರ್ಥನೆಯಾಗಿದೆ. ಓರ್ವ ರೋಗಿಯ ಬಳಿ ನಿಂತು ಇವರಿಗೆ ರೋಗದಿಂದ ಮುಕ್ತಿ ನೀಡು ಎಂದು ಪ್ರಾರ್ಥಿಸುವುದಾಗಿದೆ. ಅದರೊಂದಿಗೆ ರೋಗಿಯ ಶರೀರಕ್ಕೆ ಊದುವುದಾಗಿದೆ. ಈ ರೀತಿ ಮಾಡುವುದು ಊದುವಿಕೆ ಹಾಗೂ ಪ್ರಾರ್ಥನೆಗೆ ಔಷಧದ ಗುಣ ಇರುವುದರಿಂದಲ್ಲ. ಹಾಗೆ ಔಷಧದ ಗುಣ ಇದೆಯೆಂದು ಪ್ರವಾದಿ(ಸ) ಕಲಿಸಿಯೂ ಇಲ್ಲ, ಆದರೆ ಪ್ರಾರ್ಥನೆಗೆ ಅದರದ್ದೇ ಆದ ಫಲ ಹಾಗೂ ಸ್ವಾಧೀನವಿದೆ. ರೋಗ ಶಮನದ ವಿಷಯದಲ್ಲಿ ಮಾತ್ರವಲ್ಲ, ಎಲ್ಲದಕ್ಕೂ ರೋಗಿಯ ಶರೀರಕ್ಕೆ ಊದುವುದು ಸುಖ ಹಾಗೂ ನೆಮ್ಮದಿಯ ಪ್ರತೀಕವಾಗಿದೆ.

ಒಟ್ಟಿನಲ್ಲಿ ಇಸ್ಲಾಮ್ ಅನುಮತಿಸಿರುವ ಮಂತ್ರವು ರೋಗ ಶಮನಕ್ಕಿರುವ ಪ್ರಾರ್ಥನೆಯ ಇಸ್ಲಾಮೀ ಶೈಲಿಯಾಗಿದೆ. ಪ್ರವಾದಿ(ಸ) ಮಂತ್ರಿಸಿರುವುದಾಗಿ ಉದ್ಧರಿಸಲ್ಪಟ್ಟ ಹದೀಸ್‌ಗಳನ್ನು ಪರಿಶೀಲಿಸಿದರೆ ಇದು ಸ್ಪಷ್ಟವಾಗಬಹುದು. ಬುಖಾರಿ ವರದಿ ಮಾಡಿರುವ ಬಅï‌ಸಿ ಇಶ್ಪಿ ಅಂತಶ್ಶಾಫಿ ಲಾ ಶಾಫಿಯ ಇಲ್ಲಾ ಅಂತ ಶಿಫಾಅನ್ ಲಾ ಯುಗಾದಿರು ಸಕಮ” (ಜನರ ಪ್ರಭುವಾದ ಅಲ್ಲಾಹನೇ, ತೊಂದರೆಗಳನ್ನು ನೀಗಿಸುವವನೇ, ನೀನು ರೋಗವನ್ನೂ ಶಮನಗೊಳಿಸು, ಒಂದು ರೋಗವನ್ನು ಬಾಕಿಯಿರಿಸದಂತಹ ಶಮನ, ರೋಗ ಶಮನ ಮಾಡುವವನಾಗಿ ನೀನಲ್ಲದೆ ಇನ್ನಾರೂ ಇಲ್ಲ.) ಬುಖಾರಿ ವರದಿ ಮಾಡಿರುವ ಇನ್ನೊಂದು ಹದೀಸ್‌ನಲ್ಲಿ ಪ್ರವಾದಿ(ಸ) ಈ ರೀತಿ ಮಂತ್ರಿಸಿರುವುದಾಗಿ ಕಾಣಬಹುದು. “ಇಂಸಹಿಲ್ ಬಅï‌ಸ ರಬ್ಬನ್ನಾ ಬಿಯದಿಕಶ್ಶಿಫಾಉ ಲಾ ಕಾಶಿಫಲಹು ಇಲ್ಲಾ ಅಂತ.” (ಮಾನವರ ಪ್ರಭುವೇ, ನೀನು ತೊಂದರೆಗಳನ್ನು ನೀಗಿಸು. ರೋಗ ಶಮನವು ನಿನ್ನ ಕೈಯಲ್ಲಿದೆ. ನೀನಲ್ಲದೆ ತೊಂದರೆಗಳನ್ನು ನೀಗಿಸುವವನು ಇನ್ನಾರೂ ಇಲ್ಲ.)

ಮಂತ್ರವನ್ನು ಅನುಮತಿಸಿರುವ ಹದೀಸ್‌ಗಳನ್ನು ವಿವರಿಸುತ್ತಾ ಸ್ವಹೀಹುಲ್ ಬುಖಾರಿಯ ವಾಖ್ಯಾನಕಾರರಾದ ಇಬ್ನುಲ್ ಹಜರ್ ತನ್ನ ಫತುಹುಲ್ ಬಾರಿಯಲ್ಲಿ ಹೀಗೆ ಬರೆದಿದ್ದಾರೆ, “ಯಾವುದೇ ವಿಷಯದಲ್ಲಿ ಅಲ್ಲಾಹನ ಕಡೆಗೆ ಭಯದಿಂದ ಮರಳುವುದು ಹಾಗೂ ಅವನೊಂದಿಗೆ ಅಭಯ ಯಾಚಿಸುವುದಕ್ಕೆ ಶರೀಅತ್ ಅನುಮತಿಸಿದೆ ಎಂಬ ವಿಚಾರದಲ್ಲಿ ತರ್ಕವಿಲ್ಲ.”

ಇಬ್ನುತ್ತೀನ್ ಹೇಳುತ್ತಾರೆ, “ಮಅವ್ವದಾತ್ (ಅಲ್ಲಾಹನೊಂದಿಗೆ ಅಭಯ ಯಾಚಿಸುವ ವಚನಗಳು) ಹಾಗೂ ಇತರ ದೇವನಾಮಗಳ ಮಂತ್ರಗಳು ಆಧ್ಯಾತ್ಮಿಕ ಚಿಕಿತ್ಸೆಗಳಾಗಿವೆ. ಅದು ಸಜ್ಜನರ ನಾಲಗೆಯಿಂದ ಹೊರಡುವುದಾದರೆ ದೇವ ಸಹಾಯದಿಂದ ರೋಗ ಶಮನ ಉಂಟಾಗುತ್ತದೆ. ಇಂತಹ ವ್ಯಕ್ತಿಗಳ ಕೊರತೆ ಉಂಟಾದಾಗ ಜನರು ಶಾರೀರಿಕ ಚಿಕಿತ್ಸೆ ಹಾಗೂ ಜಿನ್ನ್ ಸೇವೆ ಎಂಬ ಸ್ವತಃ ಕಲ್ಪಿಸಿಕೊಳ್ಳುವ ವ್ಯಕ್ತಿಗಳು ಹಾಗೂ ಅವರ ಮಂತ್ರಗಳಿಗೆ ಮೊರೆ ಹೋಗ ತೊಡಗಿದರು. ಹಾಗೆ ಅವರು ಸತ್ಯ, ಮಿಥ್ಯ, ದೇವ ನಾಮಗಳು, ಪಿಶಾಚಿಗಳ ನಾಮ ಹಾಗೂ ಅವುಗಳೊಂದಿಗಿನ ಸಹಾಯ ಯಾಚನೆಗಳೆಲ್ಲಾ ಮಿಶ್ರಗೊಳಿಸಿ ಮಂತ್ರ ನಡೆಸುತ್ತಾರೆ. (ಫತುಹುಲ್ ಬಾರಿ ಭಾಗ-12, ಪುಟ-305)

ಮೂರು ನಿಬಂಧನೆಗಳೊಂದಿಗೆ ಮಂತ್ರವು ಅನುವದನೀಯವಾಗುತ್ತದೆ ಎಂಬ ವಿಚಾರದಲ್ಲಿ ವಿದ್ವಾಂಸರು ಒಮ್ಮತಾಭಿಪ್ರಾಯ ಹೊಂದಿದ್ದಾರೆ ಎಂದು ಇಬ್ನು ಹಜರ್ ಬರೆದಿದ್ದಾರೆ.
(1) ಅಲ್ಲಾಹನ ವಚನಗಳು ಅಥವಾ ಗುಣ ನಾಮಗಳಿಂದ ಕೂಡಿದ್ದಾಗಿರಬೇಕು.
(2) ಅರಬಿ ಭಾಷೆಯಲ್ಲಿ ಅಥವಾ ಅರ್ಥ ತಿಳಿದಿರುವ ಇನ್ನಾವುದೇ ಭಾಷೆಯಲ್ಲಾಗಿರಬೇಕು.
(3) ಮಂತ್ರಕ್ಕೆ ಯಾವುದೇ ಶಕ್ತಿಯಿಲ್ಲ, ಅದನ್ನು ಫಲಕಾರಿಯಾಗಿಸುವುದು ಅಲ್ಲಾಹನಾಗಿದ್ದಾನೆ ಎಂಬ ವಿಶ್ವಾಸವಿರಬೇಕು.

ಮುಸ್ಲಿಮ್ ವರದಿ ಮಾಡಿರುವ ಹದೀಸ್‌ನಲ್ಲಿ ಈ ರೀತಿ ಇದೆ. “ಅಜ್ಞಾನ ಕಾಲದಲ್ಲಿ ಮಂತ್ರ ನಡೆಸುತ್ತಿದ್ದ ಔಫ್ ಬಿನ್ ಮಾಲಕ್‌ರವರು ಪ್ರವಾದಿಯವರೊಂದಿಗೆ(ಸ) ಅದರ ಬಗ್ಗೆ ವಿಚಾರಿಸಿದರು. ಪ್ರವಾದಿಯವರು(ಸ) ಆ ಮಂತ್ರವನ್ನು ಆಲಿಸಲು ಮನವಿ ಮಾಡುತ್ತ ಹೇಳಿದರು. “ಶಿರ್ಕ್ ಇಲ್ಲದ ಮಂತ್ರದಿಂದ ಯಾವುದೇ ತೊಂದರೆಯಿಲ್ಲ.” ಇಂತಹ ಹದೀಸ್‌ಗಳು ಬೇರೆಯೂ ಇವೆ. ಇದರಿಂದೆಲ್ಲಾ ತಿಳಿದುಕೊಳ್ಳಲು ಸಾಧ್ಯವಾಗುವುದೇನೆಂದರೆ ರೋಗ ಶಮನಕ್ಕಿರುವ ಒಂದು ಪಾರ್ಥನೆ ಎಂಬ ನೆಲೆಯಲ್ಲಿ ಮಂತ್ರವು ಅನುವದನೀಯವಾಗಿದೆ. ಮಂತ್ರದಲ್ಲಿ ಅಲ್ಲಾಹೇತರರೊಂದಿಗಿರುವ ಆರಾಧನೆ, ಅವರೊಂದಿಗಿರುವ ಸಹಾಯ ಯಾಚನೆ ಇರಬಾರದು. ಅದು ಶಿರ್ಕಾಗಿದೆ. ಮಂತ್ರ ಹಾಗೂ ಮಂತ್ರಿಸುವವರಿಗೆ ದಿವ್ಯ ಶಕ್ತಿ ಇದೆ ಎಂಬ ವಿಶ್ವಾಸ ಇರಬಾರದು. ಮಂತ್ರವನ್ನು ಫಲಕಾರಿಯಾಗಿಸುವುದು ಅಲ್ಲಾಹನಾಗಿದ್ದಾನೆ.

ಇಸ್ಲಾಮ್ ಬರುವುದಕ್ಕಿಂತ ಮುಂಚೆಯೇ ಮಂತ್ರವನ್ನು ಒಂದು ಚಿಕಿತ್ಸಾ ರೂಪವಾಗಿ ಸ್ವೀಕರಿಸಲಾಗಿತ್ತು. ಮಂತ್ರದಲ್ಲಿ ಶಿರ್ಕ್ ನ ಅಂಶವಿರುವ ಪ್ರಾರ್ಥನೆಗಳು, ವಚನಗಳು, ಅಂತಹ ನಂಬಿಕೆಗಳು ಬೆರೆಯಬಾರದು. ಪ್ರಾರ್ಥನೆಗೆ ಉತ್ತರ ನೀಡುವುದು ಅಲ್ಲಾಹನ ತೀರ್ಮಾನ. ಮಂತ್ರದಿಂದ ಮನಸ್ಸಿಗೆ ಸ್ವಲ್ಪ ನೆಮ್ಮದಿ ದೊರೆಯಬಹುದೇ ಹೊರತು ಅದಕ್ಕೆ ರೋಗ ಶಮನದ ಶಕ್ತಿಯಿಲ್ಲ ಎಂಬುದಾಗಿ ಪ್ರವಾದಿಯವರು(ಸ) ಕಲಿಸಿರುವರು. ಮಂತ್ರವು ಔಷಧ ಚಿಕಿತ್ಸೆಗೆ ಪರ್ಯಾಯವಾಗಿ ನೀಡುವ ಮದ್ದು ಎಂದು ಪ್ರವಾದಿ(ಸ) ಕಲಿಸಿಲ್ಲ. ರೋಗಗಳನ್ನೆಲ್ಲಾ ಸೃಷ್ಟಿಸಿದ್ದು ಅಲ್ಲಾಹ್. ಅವನೇ ಅದಕ್ಕಿರುವ ಮದ್ದನ್ನು ಸೃಷ್ಟಿಸಿದ್ದಾನೆ. ಆ ಮದ್ದನ್ನು ಕಂಡು ಹಿಡಿದು ರೋಗಕ್ಕೆ ಚಿಕಿತ್ಸೆ ನೀಡಲು ಪ್ರವಾದಿ(ಸ) ಕಲಿಸಿದ್ದಾರೆ.

ಪ್ರವಾದಿ(ಸ) ಅನುಮತಿ ನೀಡಿರುವ ಮಂತ್ರವು ಇಸ್ಲಾಮೀ ತತ್ವಗಳಿಗೆ ವಿರುದ್ಧವಾದದ್ದೋ ವಿಜ್ಞಾನಕ್ಕೆ ಸವಾಲಾದದ್ದೋ ಅಲ್ಲ. ಇಸ್ಲಾಮ್ ಅನುಮತಿಸಿರುವ ಮಂತ್ರವನ್ನು ಪ್ರಚಾರ ಮಾಡುವುದು ಇಸ್ಲಾಮಿಗೆ ವಿರುದ್ಧ ಎಂದು ಹೇಳುವಂತಿಲ್ಲ. ಆದರೆ, ಮಂತ್ರವು ರೋಗ ಶಮನಕ್ಕೆ ಔಷಧದಂತೆಯೇ ಇರುವ ಒಂದು ವಸ್ತುವಾಗಿದೆ. ಅದನ್ನು ಬಳಸಲು ಪ್ರವಾದಿ(ಸ) ಆಜ್ಞಾಪಿಸಿದ್ದಾರೆ ಎಂದು ಪ್ರಚಾರ ಪಡಿಸುವುದು ಇಸ್ಲಾಮಿಗೆ ವಿರುದ್ಧವಾಗಿದೆ. ಶಿರ್ಕ್ ಬೆರೆತಿರುವ ಮಂತ್ರಗಳು, ಮಂತ್ರದ ಹೆಸರಿನಲ್ಲಿ ಮಾಡುವ ಕಸರತ್ತುಗಳು, ಆಚಾರಗಳು ಖಂಡಿತವಾಗಿಯೂ ನಿಷಿದ್ಧವಾಗಿದೆ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *