Home / ಲೇಖನಗಳು / ಅವರು ದೀಪ ಕೈಯಲ್ಲಿ ಹಿಡಿದು ಮದುವೆಗೆ ಹೊರಟರು

ಅವರು ದೀಪ ಕೈಯಲ್ಲಿ ಹಿಡಿದು ಮದುವೆಗೆ ಹೊರಟರು

@ ಅಬೂ ಝೀಶಾನ್

ಜಗತ್ಪ್ರಸಿದ್ಧ ವಿದ್ವಾಂಸ ಇಮಾಮ್ ಗಝ್ಝಾಲಿಯವರ ಪತ್ನಿ ಒಂದು ಮದುವೆಗೆ ಹೋಗಲು ಇಮಾಮರೊಂದಿಗೆ ಬಂದು ಅನುಮತಿ ಕೇಳುತ್ತಾರೆ.

ಇಮಾಮರು ಉತ್ತರಿಸುತ್ತಾ,
“ನನ್ನ ಪ್ರಿಯ ಪತ್ನಿ, ನಿನಗೆ ಮದುವೆಗೆ ಹೋಗಲು ಅನುಮತಿ ನೀಡಬೇಕಾದರೆ ನನ್ನದೊಂದು ಶರ್ತವಿದೆ.”

ಪತ್ನಿ ಕುತೂಹಲದಿಂದ ಏನದು ಶರ್ತ ಎಂದು ಕೇಳುತ್ತಾರೆ.

ಆಗ ಇಮಾಮರು ಒಂದು ದೀಪವನ್ನು ಅವರ ಪತ್ನಿಯ ಕೈಯಲ್ಲಿ ಕೊಡುತ್ತಾ,
“ನೀನು ಮದುವೆಗೆ ಹೋಗಿ ಬರುವವರೆಗೂ ಈ ದೀಪ ನಿನ್ನೊಂದಿಗೆ ಇರಬೇಕು. ಆದರೆ ಯಾವುದೇ ಕಾರಣಕ್ಕೂ ಇದರ ಬೆಳಕು ನಂದಬಾರದು.”

ಪತ್ನಿ ನಿಟ್ಟುಸಿರು ಬಿಡುತ್ತಾ ಅಷ್ಟೇ ತಾನೇ, ಅದಕ್ಕೇನಂತೆ ನಾನಿದನ್ನು ಪಾಲಿಸುವೆ.

ಆಗ ಇಮಾಮರು ಎಂದರು. ಜಾಗ್ರತೆ! ಒಂದು ವೇಳೆ ಈ ದೀಪದ ಬೆಳಕು ನಂದಿದರೆ ನಮ್ಮಿಬ್ಬರ ಸಂಬಂಧ ಮುರಿಯುವ ಸಾಧ್ಯತೆಯೂ ಇದೆ.

ಪತ್ನಿ ಆ ದೀಪವನ್ನು ಹಿಡಿದು ಮದುವೆಗೆ ಹೋಗುತ್ತಾರೆ.

ಸಂಜೆ ಮದುವೆಯಿಂದ ಹಿಂದಿರುಗಿ ಬಂದಾಗ ಇಮಾಮರು ಪತ್ನಿಯನ್ನು ಸ್ವಾಗತಿಸುತ್ತಾ ಕೇಳುತ್ತಾರೆ, ಪ್ರಿಯ ಪತ್ನಿ! ಹೇಗಿತ್ತು ಮದುವೆ?

ಪತ್ನಿ ಮುಖ ಸಿಂಡರಿಸುತ್ತಾ ಉತ್ತರಿಸುತ್ತಾರೆ,
ಛೇ ಮನಃಶಾಂತಿಯಿಂದ ಊಟ ಮಾಡಲೂ ಸಾಧ್ಯವಾಗಲಿಲ್ಲ, ಒಂದು ತುತ್ತು ಬಾಯಿಗೆ ಹಾಕುವಾಗ ಮುಂದಿನ ನೋಟ ಈ ದೀಪದ ಮೇಲೆ, ಎಲ್ಲಿಯಾದರೂ ಇದು ನಂದಿ ಹೋಗಬಹುದೋ ಎಂಬ ಭಯ. ಈ ದೀಪದ ಕಾರಣದಿಂದ ಮದುಮಗಳನ್ನು ಸರಿಯಾಗಿ ನೋಡಲೂ ಆಗಲಿಲ್ಲ. ಸಂತೋಷದಿಂದ ಮದುವೆಗೆ ಹೋಗಬೇಕಾದರೆ ಈ ರೀತಿ ದೀಪ ಕೊಟ್ಟು ಮನಃಶಾಂತಿಯನ್ನು ಕೆಡಿಸುವುದೇ?

ಆಗ ಇಮಾಮರು ಉತ್ತರಿಸಿದರು,
“ನನ್ನ ಪ್ರಿಯ ಪತ್ನಿ, ಇದುವೇ ತಕ್ವಾ (ದೇವಭಯ). ನೀನು ಮದುವೆಗೆ ಹೋಗು, ವ್ಯಾಪಾರ ಮಾಡು, ಮಾರ್ಕೆಟಿಗೆ ಹೋಗು ಅಥವಾ ಬೇರೆ ಯಾವ ಕೆಲಸವನ್ನು ಬೇಕಾದರೂ ಮಾಡು, ಆದರೆ ಈ ತಕ್ವಾ ಎಂಬ ದೀಪದ ಬೆಳಕು ಯಾವಾಗಲೂ ಉರಿಯುತ್ತಿರಬೇಕು. ಅದನ್ನು ನಂದಲು ಬಿಡಬಾರದು. ಈ ತಕ್ವಾದ ಬೆಳಕು ನಂದಿ ಹೋದರೆ ಮತ್ತೆ ಜೀವನಕ್ಕೆ ಏನು ಅರ್ಥವಿದೆ?

ತಕ್ವಾ(ದೇವಭಯ) ಎಂಬುದು ಕೇವಲ ಮಸೀದಿ, ಹಾಗೂ ಇಸ್ಲಾಮೀ ತರಗತಿಗಳಿಗೆ ಮಾತ್ರ ಸೀಮಿತವಾಗಿರಬಾರದು. ದಿನದ 24 ಗಂಟೆಯೂ ಸದಾ ಈ ತಕ್ವಾ ಎಂಬ ದೀಪದ ಬೆಳಕು ಉರಿಯುತ್ತಾ ಇರಬೇಕು. ನಾವು ಬಿಸಿನೆಸ್ ಮಾಡುವಾಗ, ಸಮಾರಂಭಗಳಲ್ಲಿರುವಾಗ, ಮೈದಾನದಲ್ಲಿ ಆಟವಾಡುವಾಗ, ಈ ಬೆಳಕಿನ ಬಗ್ಗೆ ಹೆಚ್ಚು ಆಲೋಚಿಸುವುದಿಲ್ಲ. ಅಲ್ಲೆಲ್ಲ ಇರುವಾಗ ಈ ತಕ್ವಾ ಎಂಬ ದೀಪದ ಬೆಳಕು ನಂದಿದರೆ ಈ ಬಗ್ಗೆ ನಮಗೆ ಯಾವ ಪರಿವೆಯೂ ಇರುವುದಿಲ್ಲ. ನಿಜವಾದ ಸತ್ಯ ವಿಶ್ವಾಸಿ ಆತನ ಸಂಪೂರ್ಣ ಜೀವನವನ್ನು ತಕ್ವಾದೊಂದಿಗೆ ಕಳೆಯುತ್ತಾನೆ.

ಹ. ಅಲೀ(ರ) ತಕ್ವಾದ ಬಗ್ಗೆ ವ್ಯಾಖ್ಯಾನ ಮಾಡುತ್ತಾ 4 ಅಂಶಗಳನ್ನು ತಿಳಿಸುತ್ತಾರೆ.
ಒಂದನೆಯದು, ತಕ್ವಾ ಎಂದರೆ “ಅಲ್ಲಾಹನನ್ನು ಭಯಪಟ್ಟು, ಅವನ ಸಂಪ್ರೀತಿಯಂತೆ ಜೀವನ ನಡೆಸುವುದು.”
ಎರಡನೆಯದು, ಅಲ್ಲಾಹನಿಂದ ಅವತೀರ್ಣವಾದ ಗ್ರಂಥ(ಕುರ್‌ಆನ್)ದ ಆದೇಶದ ಪ್ರಕಾರ ಕಾರ್ಯವೆಸಗುವುದು.
ಮೂರನೆಯ ಅಂಶ, ಅಲ್ಲಾಹನು ನಮಗೆ ಏನು ನೀಡಿದ್ದಾನೋ ಅದರಲ್ಲಿ ಸಂತೃಪ್ತಿ ಪಟ್ಟು ಜೀವನ ನಡೆಸುವುದು. ಹಾಗೂ
ನಾಲ್ಕನೆಯ ಅಂಶ, ಅಂತಿಮ ಯಾತ್ರೆಗಾಗಿ ಸದಾ ಸಿದ್ಧತೆ ನಡೆಸುವುದು.

ಈ ನಾಲ್ಕು ಅಂಶಗಳು ನಮ್ಮ ಜೀವನದಲ್ಲಿ ಇದೆಯೇ ಎಂದು ಅವಲೋಕನ ನಡೆಸುತ್ತಿರಬೇಕು, ಹಾಗೂ ಈ ನಾಲ್ಕೂ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿದರೆ ಇಹಲೋಕದಲ್ಲೂ ಪರಲೋಕದಲ್ಲೂ ಯಶಸ್ವಿಯಾಗಬಹುದು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …