Home / ವಾರ್ತೆಗಳು / ಇದು ಬರೇ ಮದ್ರಸ ಅಲ್ಲ… ಆಸ್ಪತ್ರೆ ನಡೆಸುತ್ತಿರುವ ಮದ್ರಸದ ಕತೆ

ಇದು ಬರೇ ಮದ್ರಸ ಅಲ್ಲ… ಆಸ್ಪತ್ರೆ ನಡೆಸುತ್ತಿರುವ ಮದ್ರಸದ ಕತೆ

ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಊಂಟ್ರ ಎಂಬ ಗ್ರಾಮದಲ್ಲಿ ಒಂದು ಮದ್ರಸ ಇದೆ. ಇದು ಬರೇ ಮದ್ರಸ ಅಲ್ಲ. ಈ ಮದ್ರಸದ ಆವರಣದಲ್ಲಿ 40 ಹಾಸಿಗೆಗಳುಳ್ಳ ಆಸ್ಪತ್ರೆಯೊಂದನ್ನು ಕಟ್ಟಲಾಗಿದೆ. ಝಕಾತ್ ಮತ್ತಿತರ ಹಣದ ನೆರವಿನಿಂದ ನಡೆಯುತ್ತಿರುವ ಈ ಆಸ್ಪತ್ರೆಯಲ್ಲಿ ಈಗಾಗಲೇ 200 ಕ್ಕಿಂತಲೂ ಅಧಿಕ ಪ್ರಸವಗಳನ್ನು ನಡೆಸಲಾಗಿದೆ. ಸಿಜೇರಿಯನ್ ಪ್ರಸವವನ್ನು ನಡೆಸುವಷ್ಟು ಸೌಲಭ್ಯಗಳಿರುವ ಈ ಆಸ್ಪತ್ರೆಯನ್ನು 2021 ಡಿಸೆಂಬರ್‌ನಲ್ಲಿ ಸ್ಥಾಪಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತಲೆಯೆತ್ತಿರುವ ಈ ಆಸ್ಪತ್ರೆ ಸಮಾಜದ ಎಲ್ಲರೂ ಲಾಭ ಪಡೆಯುತ್ತಿದ್ದಾರೆ.

1998ರಲ್ಲಿ ಇದಾರೆ ದಾವತುಲ್ ಹಕ್ ಎಂಬ ಸಂಸ್ಥೆಯ ಅಡಿಯಲ್ಲಿ ಈ ಮದ್ರಸವನ್ನು ಕಟ್ಟಲಾಗಿದೆ. ಹಾಗಂತ, ಇದು ಬರೇ ಅರಬಿ ಕಲಿಸುವ ಮದರಸ ಅಲ್ಲ..
ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯಲ್ಲಿ ನೋಂದಣಿಗೊಂಡಿರುವ ಈ ಮದ್ರಸ ಪಿಯುಸಿ ವರೆಗೆ ಶಿಕ್ಷಣವನ್ನೂ ಕೊಡುವ ಸಂಸ್ಥೆಯಾಗಿಯೂ ಬೆಳೆದಿದೆ. ರಾಜಸ್ಥಾನದಲ್ಲಿ ಮೆಡಿಕಲ್ ಸೌಲಭ್ಯವನ್ನು ಕೊಟ್ಟ ಮೊದಲ ಸಂಸ್ಥೆಯಾಗಿ ಈ ಆಸ್ಪತ್ರೆ ಗುರುತಿಸಿಕೊಂಡಿದೆ.

ಈ ಆಸ್ಪತ್ರೆಗೆ ಆಂಬುಲೆನ್ಸ್ ಇದೆ. ಮೆಡಿಕಲ್ ಸ್ಟೋರ್ ಕೂಡ ಇದೆ. ಈ ಭಾಗದ ಎಲ್ಲಾ ಧರ್ಮದ ಮಹಿಳೆಯರ ಪಾಲಿಗೆ ಈ ಆಸ್ಪತ್ರೆ ಆಪದ್ಬಾಂಧವವಾಗಿ ಪರಿಣಮಿಸಿದೆ. ವಿಶೇಷ ವಾಗಿ ಈ ಪ್ರದೇಶದ ಗರ್ಭಿಣಿ ಮಹಿಳೆಯರು ಸಂಕಟಪಡುತ್ತಿರುವುದನ್ನು ನೋಡಿ ಈ ಆಸ್ಪತ್ರೆಯನ್ನು ನಾವು ಆರಂಭಿಸಿದೆವು ಎಂದು ಸಂಸ್ಥೆಯ ಮುಖ್ಯಸ್ಥರಾದ ಮೌಲಾನ ಮುಹಮ್ಮದ್ ಕಾಸ್ಮಿ ಹೇಳುತ್ತಾರೆ..

ಈ ಆಸ್ಪತ್ರೆಯಲ್ಲಿ ಪೂರ್ಣಕಾಲಿಕವಾಗಿ ನಾಲ್ಕು ವೈದ್ಯರು ದುಡಿಯುತ್ತಿದ್ದು, ಓರ್ವ ಗೈನಕಾಲಜಿಸ್ಟ್ ಇದ್ದಾರೆ ಮತ್ತು 28 ದಾದಿಯರು ಇದ್ದಾರೆ. ಈಗ ಈ ಶಿಕ್ಷಣ ಸಂಸ್ಥೆ ಬೃಹತ್ ಆಗಿ ಬೆಳೆದಿದ್ದು ಬೇರೆ ಬೇರೆ ಕಡೆ 4,600 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಈ ಆಸ್ಪತ್ರೆಯನ್ನು ಇನ್ನಷ್ಟು ವಿಸ್ತಾರವಾಗಿ ಕಟ್ಟುವ ಪ್ರಯತ್ನ ನಡೆಯುತ್ತಿದ್ದು, 100 ಹಾಸಿಗೆಗಳ ಮತ್ತು ಇಂಟೆನ್ಸಿವ್ ಕೇರ್ ವಿಭಾಗ ಸಹಿತ ಆಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆಯಾಗಿ ಇದನ್ನು ಬೆಳೆಸುವುದು ನಮ್ಮ ಯೋಜನೆ ಎಂದು ಮೌಲಾನರವರು ಹೇಳುತ್ತಾರೆ.

ಅಜ್ಮೀರ್‌ನ ಜವಾಹರಲಾಲ್ ನೆಹರು ಸರಕಾರಿ ಆಸ್ಪತ್ರೆಯ ಮುಖ್ಯಸ್ಥ ರಾದ ಕೀರ್ತಿ ಮೆಹತಾ ಮಾತಾಡುತ್ತಾ, ಈ ಆಸ್ಪತ್ರೆಯು ಗ್ರಾಮೀಣ ಪ್ರದೇಶದಲ್ಲಿ ಶಿಶು ಮರಣವನ್ನು ತಡೆ ಯುವಲ್ಲಿ ದೊಡ್ಡ ಪಾತ್ರ ನಿರ್ವಹಿಸಿದೆ ಎಂದು ಹೇಳಿದ್ದಾರೆ. ಉಂಟ್ರಾ ಗ್ರಾಮವು ಅಜ್ಮೀರ್‌ನಿಂದ 20 ಕಿಲೋ ಮೀಟರ್ ದೂರದಲ್ಲಿದೆ.

ಮದರಸಗಳ ಕುರಿತಂತೆ ಬೇರೆ ಬೇರೆ ರೀತಿಯ ವದಂತಿ ಮತ್ತು ಆರೋಪಗಳಿರುವುದರ ನಡುವೆ ರಾಜಸ್ಥಾನದ ಮದರಸವೊಂದು ಅಭೂತಪೂರ್ವವಾಗಿ ಕಾರ್ಯಾಚರಿಸುತ್ತಿರುವುದು ಸರ್ವರ ಕಣ್ಣು ತೆರೆಸಬೇಕಾಗಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …