@ ಜಮಾಲ್ ಇರಿಂಗಲ್
ಪವಿತ್ರ ಕುರ್ಆನ್ನಲ್ಲಿ ಹಲವೆಡೆಗಳಲ್ಲಿ ರಾತ್ರಿಯ ಕುರಿತು ವಿವರಿಸಲಾಗಿದೆ. ರಾತ್ರಿಯನ್ನು ಶಾಂತಿ ಮತ್ತು ವಿಶ್ರಾಂತಿಯ ಸಮಯವೆಂದು ಅದು ಪರಿಚಯ ಮಾಡುತ್ತದೆ. ನಿಮ್ಮ ನಿದ್ರೆ ಯನ್ನು ವಿಶ್ರಾಂತಿಯ ಸಾಧನವಾಗಿ ಮಾಡಿರುವುದು- ರಾತ್ರಿಯನ್ನು ಮರೆಮಾಡುವ ಸಾಧನವಾಗಿ ಮಾಡಿರುವುದು ಹಗಲನ್ನು ಉಪ ಜೀವನವನ್ನರಸುವ ಸಮಯವಾಗಿಯೂ ಮಾಡ ಲಾಗಿದೆ. (ಪವಿತ್ರ ಕುರ್ಆನ್ 78: 9-11)
ರಾತ್ರಿಯಲ್ಲೇ ಹಲವೊಮ್ಮೆ ಮನುಷ್ಯನಿಗೆ ಪೈಶಾಚಿಕ ಚಿಂತೆಗಳು ಮೂಡುತ್ತವೆ. ಕೊಲೆ ದರೋಡೆ ಇನ್ನಿತರ ಅನೈತಿಕ ಕೃತ್ಯಗಳು ಹೆಚ್ಚಾಗಿ ರಾತ್ರಿಯಲ್ಲೇ ಸಂಭವಿಸುತ್ತವೆ. ಅಲ್ಲಾಹ ನನ್ನು ನಿರಂತರವಾಗಿ ಸ್ಮರಿಸುತ್ತಿರುವ ಪರಲೋಕ ಚಿಂತೆಯಲ್ಲಿ ಬದುಕು ಸಾಗಿಸುವವರಿಗೆ ಮಾತ್ರ ರಾತ್ರಿಯ ಅಂಧಕಾರಮಯ ಸಮಯದಲ್ಲಿ ದಾರಿ ತಪ್ಪಿಸುವ ಪೈಶಾಚಿಕ ದುರ್ಬೋಧನೆಗಳಿಂದ ರಕ್ಷಣೆ ಹೊಂದಲು ಸಾಧ್ಯ. ಮಂಜಿನ ಹನಿಯಂತೆ ಶುಭ್ರತೆಯಿರುವ ಮನಸ್ಸಿನಲ್ಲಿ ಕತ್ತಲು ಮತ್ತು ಏಕಾಂತತೆ ಪಾಪದ ಬೀಜಗಳನ್ನು ಬಿತ್ತಲು ಸಹಾಯಕವಾಗುತ್ತದೆ. ಇದರಿಂದ ಪಾರಾಗಲು ಪ್ರಾರ್ಥನೆಗಳ ಮೂಲಕ ಇನ್ನಷ್ಟು ಸೂಕ್ಷ್ಮತೆ ಇರುವವರಾಗಬೇಕೆಂದು ಸತ್ಯವಿಶ್ವಾಸಿಗಳೊಡನೆ ಅಲ್ಲಾಹನು ಹೇಳುತ್ತಾನೆ, “ಇರುಳಿನ ಅಂಧಕಾರವು ಕವಿದಾಗ ಉಂಟಾಗುವ ಕೇಡಿನಿಂದ (ಸೂರಃ ಫಲಕ್ 3)” ಅಕ್ರಮ ಹಾಗೂ ಪಾಪ ಕೃತ್ಯಗಳು ಹೆಚ್ಚಾಗಿ ರಾತ್ರಿಯಲ್ಲಿ ನಡೆಯುವುದರಿಂದ ರಾತ್ರಿಯ ಅಂಧಕಾರದ ಕೇಡಿನಿಂದ ಅಭಯ ಕೇಳಬೇಕೆಂದು ಪ್ರತ್ಯೇಕವಾಗಿ ಉಪದೇಶಿಸಲಾಗಿದೆ. ಉಪದ್ರವಕಾರಿ ಜಂತುಗಳು ಕೂಡಾ ಹೊರಬರುವುದು ರಾತ್ರಿಯಲ್ಲಿಲ್ಲವೇ? (ಸಯ್ಯದ್ ಮೌದೂದಿ, ತಫ್ಹೀಮುಲ್ ಕುರ್ಆನ್)
ಇದರಿಂದ ರಾತ್ರಿಯಲ್ಲಿ ಸಂಪೂರ್ಣವಾಗಿ ನಿದ್ರಿಸದೆ ಸ್ವಲ್ಪ ಸಮಯ ನಮಾಝ್ಗಾಗಿ ಮೀಸಲಿರಿಸಬೇಕೆಂದು ಅಲ್ಲಾಹ್ ಮತ್ತು ರಸೂಲ್ ಕಲಿಸಿದ್ದಾರೆ. ಬೆಳಗು ಬೈಗುಗಳಲ್ಲಿ ದೇವನನ್ನು ಸ್ಮರಿಸಿರಿ. ರಾತ್ರಿಯಲ್ಲೂ ಅವನ ಮುಂದೆ ಸಾಷ್ಟಾಂಗವೆರಗಿರಿ ಮತ್ತು ರಾತ್ರಿಯ ದೀರ್ಘ ಸಮಯದಲ್ಲಿ ಅವನನ್ನು ಸ್ಮರಿಸುತ್ತಲಿರಿ. (76: 25-26) ರಾತ್ರಿ ನಮಾಝ್ನ ಮೂಲಕ ಪ್ರತಿ ಯೊಬ್ಬ ವಿಶ್ವಾಸಿಯೂ ಅನಿರ್ವಚನೀಯವಾದ ಈಮಾನ್ನ ಶಕ್ತಿಯನ್ನು ಪಡೆಯುತ್ತಾನೆ. ಪ್ರಸಕ್ತ ಕಾಲದ ಜಾಹಿಲಿಯತ್ನೊಂದಿಗೆ ಹೋರಾಟ ನಡೆಸುವ ಶಕ್ತಿಯನ್ನು ಪಡೆಯುವನು. ಸಾಮಾಜಿಕ ಕೆಡುಕಿನ ವಿರುದ್ಧ ಹೋರಾಡುವ ಶಕ್ತಿ ದೊರೆಯುವುದು. ವಿಶ್ವವಿಡೀ ಸುಖಲೋಲುಪತೆಯಲ್ಲಿ ಮುಳುಗಿರುವಾಗ ದೇವನ ಮೇಲಿನ ಪ್ರೀತಿಯಿಂದ ಪ್ರಚೋದಿತನಾಗಿ ಹಾಸಿಗೆ ಬಿಟ್ಟು ಏಳುತ್ತಾನೆ. ತನ್ನ ಎಲ್ಲಾ ಭಾರವನ್ನೂ ನಮಾಝ್ನ ಮೂಲಕ ಅಲ್ಲಾಹನ ಮುಂದೆ ಸಮರ್ಪಿಸಿ ಬಿಡುತ್ತಾನೆ. ಅವರೀರ್ವರ ನಡುವೆ ಮೂರನೇಯವನಾಗಿ ಯಾರೂ ಇಲ್ಲ. ವಿಶ್ವಾಸಿಯೂ ಅಲ್ಲಿ ಸರ್ವಶಕ್ತನೊಂದಿಗೆ ಸಂಭಾಷಿಸುತ್ತಾನೆ. ಕ್ಷೇಮ ಸಮಾಚಾರ ತಿಳಿಸುತ್ತಾನೆ. ಸಂಕಟಗಳನ್ನು ಹಂಚಿಕೊಳ್ಳುತ್ತಾನೆ. ತನ್ನ ಪಾಪಗಳ ಮೂಟೆಯನ್ನು ಬಿಚ್ಚಿಡುತ್ತಾನೆ. ನಿರಂತರವಾಗಿ ಕಣ್ಣೀರಿನ ಪ್ರವಾಹದೊಂದಿಗೆ ಸಂಭವಿಸಿರುವ ತಪ್ಪುಗಳ ಕೊಳೆಯನ್ನು ತೊಳೆಯುತ್ತಾನೆ. ಹೀಗೆ ಸತ್ಯವಿಶ್ವಾಸಿಯ ಮನಸ್ಸು ಸ್ಪಟಿಕದಂತೆ ಹೊಳೆಯುತ್ತದೆ.
ಇಸ್ಲಾಮಿನಲ್ಲಿ ಬಹಳ ಪ್ರಾಧಾನ್ಯತೆಯಿರುವ ಒಂದು ಆರಾಧನೆಯಾಗಿದೆ ರಾತ್ರಿ ನಮಾಝ್. ಸೃಷ್ಟಿಕರ್ತನಾದ ಅಲ್ಲಾಹನಿಗೆ ಇನ್ನಷ್ಟು ನಿಕಟರಾಗಲು ಈ ಆರಾಧನೆಯ ಮೂಲಕ ವಿಶ್ವಾಸಿಗಳಿಗೆ ಸಾಧ್ಯವಾಗುತ್ತದೆ. ಈ ನಮಾಝ್ನಿಂದ ವಿಶ್ವಾಸಿಗಳು ಅಪಾರವಾದ ಮನಃ ಶಾಂತಿಯನ್ನು ಪಡೆಯುತ್ತಾರೆ. ಇದು ಕಡ್ಡಾಯ ಕರ್ಮ ಅಲ್ಲದಿದ್ದರೂ ಬಹಳ ಪ್ರತಿಫಲ ದೊರೆಯುವ ಒಂದು ಕರ್ಮವಾಗಿದೆ. ಇದಕ್ಕೆ ನಿಶ್ಚಿತ ಸಮಯವಿಲ್ಲ. ಇಶಾ ನಮಾಝ್ನ ಬಳಿಕ ಸುಬಹ್ ನಮಾಝ್ನ ವರೆಗೆ ಯಾವ ಸಮಯದಲ್ಲೂ ಇದನ್ನು ನಿರ್ವಹಿಸಬಹುದು. ಕಡ್ಡಾಯ ನಮಾಝ್ನ ಬಳಿಕ ಹೆಚ್ಚು ಶ್ರೇಷ್ಠವಾದ ನಮಾಝ್ ಈ ರಾತ್ರಿ ನಮಾಝ್ ಆಗಿದೆ. ಇದನ್ನು ಪ್ರಬಲ ಸುನ್ನತ್ ಎಂದು ಶರೀಅತ್ನಲ್ಲಿ ಪರಿಗಣಿಸಲಾಗಿದೆ.
ರಾತ್ರಿ ನಮಾಝ್ನಲ್ಲಿ ಪ್ರವಾದಿಯವರು(ಸ) ದೀರ್ಘವಾಗಿ ಕುರ್ಆನ್ ಪಾರಾಯಣ ಮಾಡುತ್ತಿದ್ದರು. ತಹ್ಲೀಲ್, ತಸ್ಬೀಹ್, ತಹ್ಮೀದ್ ಗಳನ್ನು ಈ ನಮಾಝ್ನಲ್ಲಿ ಹೆಚ್ಚಿಸಬಹುದು. ರಾತ್ರಿ ನಮಾಝ್ನ ಸುಜೂದ್, ರುಕೂಅïಗಳಲ್ಲಿ ಪ್ರವಾದಿ(ಸ) ಹೆಚ್ಚು ಸಮಯವನ್ನು ವಿನಿಯೋಗಿಸುತ್ತಿದ್ದರೆಂದು ಹದೀಸ್ಗಳಲ್ಲಿ ಕಾಣಬಹುದು.
ಜೀವನದಲ್ಲಿ ದಿನಾಲೂ ಇದನ್ನು ನಿರ್ವಹಿಸಬೇಕೆಂಬ ಮನಸ್ಸಿದ್ದರೂ ಪ್ರಾಯೋಗಿಕಗೊಳಿಸಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ ಎಂಬುದು ಸತ್ಯಸಂಗತಿ. ನಿದ್ದೆಯಿಂದ ಎದ್ದೇಳುವ ಉದಾಸೀನತೆ ಮತ್ತು ನಿದ್ದೆಯಿಂದ ಎಚ್ಚರವಾಗದಿರುವುದೇ ಇದಕ್ಕೆ ಕಾರಣ. ರಾತ್ರಿ ನಿದ್ದೆಯಲ್ಲಿ ಏಳಲು ಅಗತ್ಯವಿರುವ ವ್ಯವಸ್ಥೆಯನ್ನು ಮಾಡಿಕೊಂಡರೆ ಇದು ಸುಲಭವಾಗುತ್ತದೆ. ಕೆಲವು ಪ್ರಯೋಗಗಳನ್ನು ಮಾಡಿ ನೋಡಬಹುದು.
1. ರಾತ್ರಿಯ ಆಹಾರದ ಪ್ರಮಾಣವನ್ನು ಕಡಿಮೆಗೊಳಿಸುವುದು.
2. ಬೆಳಗ್ಗಿನ ಹೊತ್ತು ದೇಹವನ್ನು ಅನಗತ್ಯವಾಗಿ ಆಯಾಸಗೊಳಿಸಬೇಡಿ. ಕಷ್ಟಕರವಾದ ಕೆಲಸಗಳಲ್ಲೂ, ವ್ಯಾಯಾಮಗಳಲ್ಲೂ ನಿರತರಾಗುವವರು ಅಗತ್ಯಕ್ಕೆ ಬೇಕಾದ ವಿಶ್ರಾಂತಿ, ಪೋಷಕಾಹಾರಗಳನ್ನು ಸೇವಿಸಬೇಕು.
3. ಸಾಧ್ಯವಿದ್ದರೆ ಹಗಲಿನ ಸಮಯದಲ್ಲಿ ಸ್ವಲ್ಪ ಹೊತ್ತು ನಿದ್ರಿಸುವುದನ್ನು ರೂಢಿ ಮಾಡಿ ಕೊಂಡರೆ ರಾತ್ರಿ ನಮಾಝ್ನಲ್ಲಿ ಏಕಾಗ್ರತೆ ಸಿಗಲು, ನಿದ್ರೆಯಿಂದ ಬೇಗನೆ ಎದ್ದೇಳಲು ಸಾಧ್ಯವಾಗುತ್ತದೆ.
4. ಯಾವಾಗಲೂ ಒಳಿತನ್ನೇ ಬಯಸಿರಿ. ಪರಲೋಕವನ್ನು ನೆನಪಿಸುತ್ತಾ ನಿದ್ರಿಸಲು ಮಲಗಿ. ನರಕದ ಭಯಾನಕತೆ ಮತ್ತು ಸ್ವರ್ಗದ ಆವೇಶವನ್ನು ಮನದಲ್ಲಿ ತುಂಬಿಸಿಕೊಂಡು ನಿದ್ರಿಸಲು ಮಲಗಿದವನಿಗೆ ಅರ್ಧ ರಾತ್ರಿಯಲ್ಲಿ ಎದ್ದೇಳಲು ಸಾಧ್ಯವಾಗುತ್ತದೆ.
ಅಲ್ಲಾಹನ ಪ್ರೀತಿ ಮಾತ್ರ ಬಯಸಿ ರಾತ್ರಿ ಎದ್ದು ವಿವಿಧ ಆರಾಧನಾ ಕರ್ಮಗಳನ್ನು ನಿರ್ವಹಿಸುವುದಕ್ಕೆ ಸಾಂಕೇತಿಕವಾಗಿ ಕಿಯಾಮುಲ್ಲೈಲ್ ಎನ್ನಲಾಗುತ್ತದೆ. ನಮಾಝ್, ಕುರ್ಆನ್ ಪಠಣ, ದಿಕ್ರ್ ಗಳು, ಪ್ರಾರ್ಥನೆಗಳು ಮೊದಲಾದವು ಕಿಯಾಮುಲ್ಲೈಲ್ನ ಭಾಗವೇ ಆದರೂ ಅತ್ಯಂತ ಮುಖ್ಯವಾದುದು ನಮಾಝ್ ಆಗಿದೆ. ಇಮಾಮ್ ಬೈದಾವಿಯವರಂತಹ ವಿದ್ವಾಂಸರು ನಮಾಝ್ ಮಾತ್ರ ಕಿಯಾಮುಲ್ಲೈಲ್ ನಲ್ಲಿ ಸೇರಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದರ ಪ್ರಾಧಾನ್ಯತೆ ಮತ್ತು ಆದೇಶವನ್ನು ತಿಳಿಸುವ ಧಾರಾಳ ಪವಿತ್ರ ಕುರ್ಆನ್ನ ಆಯತ್ ಗಳು, ಹದೀಸ್ಗಳು ಇವೆ.
“ಅವರು ತಮ್ಮ ಪ್ರಭುವಿನ ಮುಂದೆ ಸಾಷ್ಟಾಂಗವೆರಗುತ್ತಲೂ ನಿಲ್ಲುತ್ತಲೂ ರಾತ್ರಿಗಳನ್ನು ಕಳೆಯುತ್ತಾರೆ.” (ಅಲ್ಫುರ್ಕಾನ್- 64)
“ರಾತ್ರಿ ಸ್ವಲ್ಪವೇ ನಿದ್ರಿಸುತ್ತಿದ್ದರು- ಮತ್ತು ಅವರು ರಾತ್ರಿಯ ಕೊನೆಯ ಜಾವಗಳಲ್ಲಿ ಕ್ಷಮಾಯಾಚನೆ ಮಾಡುತ್ತಿದ್ದರು.” (ಅದ್ದಾರಿಯಾತ್- 17-18)
“ಆಜ್ಞಾಪಾಲಕನಾಗಿರುವ, ರಾತ್ರಿಯ ಜಾವಗಳಲ್ಲಿ ನಮಾಝ್ಗೆ ನಿಲ್ಲುವ, ಸಾಷ್ಟಾಂಗವೆರಗುವ ಪರಲೋಕವನ್ನು ಭಯಪಡುವ ಮತ್ತು ತನ್ನ ಪ್ರಭುವಿನ ಕೃಪೆಯನ್ನು ನಿರೀಕ್ಷಿಸುವವನು ಮತ್ತು ಬಹುದೇವಾರಾದಕರು ಸರಿಸಮಾನರಾಗಬಲ್ಲರೇ?” (ಅಝ್ಝುಮರ್- 9)
ಸಯ್ಯಿದ್ ಮೌದೂದಿ ಹೇಳುತ್ತಾರೆ: “ಅವರು ರಾತ್ರಿಯನ್ನು ದುಂದುಗಾರಿಕೆ, ಹಾಡು, ಸಂಗೀತ ಅಥವಾ ನೃತ್ಯದಲ್ಲಿ ಕಳೆಯುವುದಿಲ್ಲ. ಕೊಳ್ಳೆ ದರೋಡೆಗಳಲ್ಲೂ ಆಗಿರಲಿಲ್ಲ. ಜಾಹಿಲಿಯತ್ನ ಕಾಲಕ್ಕೆ ವಿರುದ್ಧವಾಗಿ ಇವರು ತಮ್ಮ ರಾತ್ರಿ ಗಳನ್ನು ಅಲ್ಲಾಹನ ಸಮಕ್ಷಮದಲ್ಲಿ ನಿಂತು ಕೊಂಡೂ ಕುಳಿತುಕೊಂಡೂ ಸಾಷ್ಟಾಂಗವೆರಗುತ್ತಲೂ, ಆರಾಧಿಸುತ್ತಾ, ಪ್ರಾರ್ಥಿಸುತ್ತಾ ಕಳೆಯುತ್ತಾರೆ.
ಇದು ಪ್ರಾರಂಭ ಕಾಲದಲ್ಲಿ ಕಡ್ಡಾಯವಾಗಿತ್ತೆಂದೂ, ಬಳಿಕ ಪ್ರವಾದಿ(ಸ)ರಿಗೆ ಮಾತ್ರ ಕಡ್ಡಾಯವಾಯಿತೆಂದೂ ಇತರರಿಗೆ ಐಚ್ಛಿಕವಾಗಿ ನಿಶ್ಚಯಿಸಲ್ಪಟ್ಟಿತೆಂದೂ ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಏನಿದ್ದರೂ ಇದರ ಮಹತ್ವವನ್ನು ಅರಿತುಕೊಂಡ ಸಹಾಬಿಗಳು ಇದನ್ನು ನಿರ್ವಹಿಸಲು ಪೈಪೋಟಿ ನಡೆಸುತ್ತಿದ್ದರು. ಈ ನಮಾಝ್ನ್ನು ರೂಢಿಗೊಳಿಸಿದವರು ಅದು ಬಿಟ್ಟು ಬಿಡುವುದು ಕರಾಹತ್ ಎನ್ನುವ ವಿದ್ವಾಂಸರೂ ಇದ್ದಾರೆ.
ಎರಡು ರಕಅತ್ಗಳು ಕಳೆದ ಬಳಿಕ ಸಲಾಮ್ ಹೇಳಿ ಕೊನೆಗೆ ಒಂದು ರಕಅತ್ ನಿರ್ವಹಿಸಿ ಕೊನೆಗೊಳಿಸುವುದು ಕಿಯಾಮುಲ್ಲೈನ ಪ್ರವಾದಿಯವರ(ಸ) ಶೈಲಿ. ಇದರ ರಕಅತ್ಗಳ ವಿಷಯದಲ್ಲಿ ಎರಡರಿಂದ ಹತ್ತರವರೆಗೆ ಎಂಬುದು ಪ್ರಬಲ ಅಭಿಪ್ರಾಯ. ಕೊನೆಗೆ ಒಂದೋ ಮೂರೋ ರಕಅತ್ ನಮಾಝ್ ಮಾಡಿ 11 ಅಥವಾ 13 ಮಾಡಿ ಮುಗಿಸಲಾಗುತ್ತಿತ್ತು.
ಅಲಿ(ರ) ಹೇಳುತ್ತಾರೆ: “ಕಡ್ಡಾಯ ನಮಾಝ್ ನಂತೆ ವಿತ್ರ್ ಕಡ್ಡಾಯವಲ್ಲ. ಹಾಗಿದ್ದರೂ ಅಲ್ಲಾಹನ ಪ್ರವಾದಿ(ಸ) ವಿತ್ರ್ ನಮಾಝ್ ಮಾಡುತ್ತಿದ್ದರು. ಅವರು ಹೇಳಿದರು, ಕುರ್ಆನ್ನ ಅನುಯಾಯಿಗಳೇ, ನೀವು ಒಂಟಿಯಾಗಿ ನಮಾಝ್ ಮಾಡಿ.” ಕಾರಣವೇನೆಂದರೆ ಅಲ್ಲಾಹನು ಒಬ್ಬನಾಗಿದ್ದಾನೆ. ಅವನು ಅದನ್ನೇ ಇಚ್ಛಿಸುತ್ತಾನೆ. (ಅಹ್ಮದ್ ಹಾಕಿಂ)
ಇಮಾಮ್ ಮಾಲಿಕ್, ಇಮಾಮ್ ಶಾಫೀ, ಇಮಾಮ್ ಅಹ್ಮದ್ ಎಂಬವರ ಅಭಿಪ್ರಾಯದಲ್ಲಿ ಈ ಎರಡು ರಕಅತ್ ನಿರ್ವಹಿಸಿದ ಬಳಿಕ ಸಲಾಮ್ ಹೇಳಬೇಕು. “ರಾತ್ರಿ ನಮಾಝ್ ಎರಡಾಗಿ ನಿರ್ವಹಿಸಿರಿ” ಎಂಬ ಮುಸ್ಲಿಮ್ರ ಹದೀಸ್ ಅನ್ನು ಅವರು ಆಧಾರವಾಗಿ ಉದ್ಧರಿಸುತ್ತಾರೆ.
ಇಮಾಮ್ ಅಬೂಹನೀಫಾರ ಅಭಿಪ್ರಾಯದಲ್ಲಿ ಒಂದೇ ಸಲಾಮ್ನಿಂದ ಎರಡೋ ನಾಲ್ಕೋ ಆರು, ಎಂಟು ರಕಅತ್ ನಮಾಝ್ ಮಾಡುವುದರಲ್ಲಿ ತಪ್ಪಿಲ್ಲ. ಆಯಿಶಾರಿಂದ ಅಬೂದಾವೂದ್ ಉದ್ಧರಿಸುವ ಹದೀಸ್ ಇದಕ್ಕೆ ಆಧಾರವಾಗಿದೆ.
ಏನಿದ್ದರೂ ಈ ನಮಾಝ್ ಕೇವಲ ರಮಝಾನ್ಗೆ ಮಾತ್ರ ಸೀಮಿತವಾಗಬೇಕಾದದ್ದಲ್ಲ. ನಮ್ಮ ದಿನಚರಿಯಲ್ಲಿ ನಿರಂತರವಾಗಿ ಸೇರಿ ಕೊಂಡಿರಬೇಕಾದ ಮಹತ್ತರವಾದ ಕರ್ಮವಾಗಿದೆ. ಆದ್ದರಿಂದ ಒಳ್ಳೆಯ ನಿರ್ಧಾರ ತೆಗೆದುಕೊಂಡು ರಾತ್ರಿಯ ಆ ಪುಣ್ಯ ಸಮಯದಲ್ಲಿ ದೇವನಿಗೆ ನಿಕಟರಾಗಲು ಪ್ರಯತ್ನಿಸೋಣ. ನಮ್ಮ ಯಾವ ಕಿವಿಯೂ ಕೇಳದಂತಹ ಯಾವ ಕಣ್ಣೂ ಕಾಣದಂತಹ ಅಲ್ಲಾಹನೇ ಕೈಯಾರೆ ನೆಟ್ಟು ಬೆಳೆಸಿದ ಸ್ವರ್ಗದ ಸವಿಯನ್ನು ಅನುಭವಿಸಲು ಸಾಧ್ಯ.
IslamKannada News Portal
