Home / ಲೇಖನಗಳು / ಜಗತ್ತು ಮತ್ತು ಮಾನವ

ಜಗತ್ತು ಮತ್ತು ಮಾನವ

ಈ ಜಗತ್ತಿನಲ್ಲಿ ಮಾನವನಿಗೆ ಹಲವಾರು ವಸ್ತುಗಳು ಗೋಚರಿಸುತ್ತವೆ. ಅವನ ಕಣ್ಣೆದುರಿನಿಂದ ಹಲವಾರು ವಸ್ತುಗಳು ಹಾದು ಹೋಗುತ್ತಿವೆ. ಇವಿಷ್ಟು ಸಾಲದು. ಹೆಚ್ಚು ಹೆಚ್ಚು ಅರಿತುಕೊಳ್ಳಬೇಕೆಂದು ಅವನು ಬಯಸುತ್ತಾನೆ. ಅದು ಪ್ರಕೃತಿ ಸಹಜ ಬೇಡಿಕೆಯೂ ಹೌದು. ಒಂದು ಶಬ್ದ ಕೇಳಿಸಿದರೆ ಇಂಪಾದ ಹಾಡಾಗಲೆಂದು ಬಯಸುವಂತೆ ಜಗತ್ತಿನ ನೈಜ ಮತ್ತು ಪರಿಪೂರ್ಣ ಸೌದರ್ಯದವರೆಗೂ ಅವನು ತಲುಪಬೇಕು. ಆದರ ಪರಿಚಯ ಅವನಿಗಿರಬೇಕು. ಮಾನವನಿಗೆ ಜಗತ್ತನ್ನು ಸರಿಯಾದ ದೃಷ್ಟಿಯಿಂದ ನೋಡಲು ಸಾಧ್ಯ ವಾದಂದು, ಜಗತ್ತಿನ ಅಸ್ತಿತ್ವ ಗೋಚರಿಸುತ್ತದೆ. ಆ ಮೇಲೆ ಅದರ ಪ್ರಭಾವಕ್ಕೊಳಗಾಗುತ್ತಾನೆ. ಜಗತ್ತಿನಲ್ಲಿರುವ ಸಕಲ ವಸ್ತುಗಳಲ್ಲಿ ಅವನಿಗೆ ಹೊಸತನದ ದರ್ಶನವಾಗುವುದು, ಆ ಮೇಲೆ ಅವನೊಳಗಿನ ಸುಪ್ತ ಭಾವನೆಗಳನ್ನು ಅಗೋಚರ ಸ್ಪರ್ಶವೊಂದು ಮೀಟಲಾರಂಭಿಸುವುದು.

ಮಾನವನಿಗೆ ಇವಿಷ್ಟರಿಂದ ಜಗತ್ತಿನ ಅಸ್ತಿತ್ವವನ್ನು ಗುರುತಿಸಲು ಸಾಧ್ಯವಿಲ್ಲ, ಜಗತ್ತು ಕೇವಲ ಒಂದು ಮಂಪರಿನಂತೆ ಅವನಿಗೆ ಕಾಣಬಹುದು. ಜಗತ್ತಿನಲ್ಲಿರುವ ಯಾವ ವಸ್ತುಗಳನ್ನೂ ಖಚಿತವಾಗಿ ತಿಳಿಯಲು ಅವನಿಂದ ಸಾಧ್ಯವಿಲ್ಲ. ಎಲ್ಲವೂ ಅಸ್ಪಷ್ಟ ಅನುಭವದಂತೆ ಇರುವುದು.

ಅಂದ ಮೇಲೆ ಈ ನಿಗೂಢ ಜಗತ್ತನ್ನು ಮಾನವನಿಗೆ ಕೇವಲ ತನ್ನ ಬುದ್ಧಿ ಶಕ್ತಿಯಿಂದ ತಿಳಿದುಕೊಳ್ಳಲು ಹೇಗೆ ಸಾಧ್ಯ? ಆದರೆ ಜಗತ್ತಿನ ಜೀವ ವೈವಿಧ್ಯಗಳು, ಗಿರಿ ಶಿಖರಗಳ ಸಾಲು, ಹಿಮ ಬೆಟ್ಟಗಳು, ಮರ ಗಿಡ, ಬಳ್ಳಿ ಹೂ ಪರಿಮಳಗಳೆಲ್ಲವೂ ವಿವೇಕಿಗಳಲ್ಲಿ ಉಜ್ವಲ ನಿರೀಕ್ಷೆಯನ್ನು ಸೃಷ್ಟಿಸುತ್ತವೆ, ಮಾನವನೊಳಗೆ ಇಂತಹ ತಾಕಲಾಟ ಆರಂಭವಾದಂತೆ ಅವನು ಆಧ್ಯಾತ್ಮದ ಮಾತಿಗೆ ತೊಡಗುತ್ತಾನೆ. ನಾನು ಜೀವನದ ಆಳವನ್ನು ಪ್ರವೇಶಿಸಿದ್ದೇನೆ. ನನಗೆ ಸತ್ಯ ದರ್ಶನವಾಗಿದೆ ಎನ್ನುತ್ತಾನೆ. ನಾನು ಸತ್ಯಕ್ಕೆ ನಿಕಟವಾಗಿದ್ದೇನೆ. ನಾನು ತಪಸ್ವೀ ಸ್ಥಿತಿಯಲ್ಲಿದ್ದೇನೆ ಎಂದು ಭಾವಿಸತೊಡಗುತ್ತಾನೆ.

ಆದರೆ ಅವನು ಅರಿತಿರುವುದು ಏನೇನೂ ಸಾಲದು. ಅವನು ಅರಿಯಲು ಇನ್ನಷ್ಟು ಇವೆ. ಸಾಕಷ್ಟು ವಿಚಾರಗಳು ಬುದ್ಧಿಗೆಟಕುವುದು ನಿಜವಾಗಿದೆ. ಆದರೆ ಈ ವಿಚಾರಗಳನ್ನು ನಿಜ ಅಥವಾ ಇದು ಕೇವಲ ತನ್ನ ಊಹನೆಗಳೇ ಎಂಬುದನ್ನು ತಾಳೆ ಮಾಡಲು, ಒಂದು ನಿರ್ಧಾರಕ್ಕೆ ತಲುಪಲು ಅವನಿಗೆ ಕೊನೆಗೂ ಸಾಧ್ಯವಿಲ್ಲ, ಎಷ್ಟೇ ಬುದ್ಧಿ ಖರ್ಚು ಮಾಡಿದರೂ ಸಂದೇಹ ಬಗೆಹರಿಯುವುದಿಲ್ಲ, ಪ್ರಕೃತಿಯ ಭಾಷೆಯೇ ಹಾಗೆ-ನಿಗೂಢ-ಮೌನ.

ಪ್ರಕೃತಿಯ ಸಂಕೇತ
ಅಧ್ಯಯನ ನಿರತರು ಜಗತ್ತು ಒಂದು ನಿಗೂಢವೆಂಬ ವಿಶ್ವಾಸ ಹೊಂದಿರುವುದು ಅನಿವಾರ್ಯವಾಗಿದೆ. ಜಗತ್ತು ಮತ್ತು ಅದರಲ್ಲಿರುವ ಜೀವರಾಶಿಗಳ ಅಧ್ಯಯನಕ್ಕೆ ಈ ನಂಬಿಕೆಯು ಆವಶ್ಯಕವಾಗಿದೆ. ಪ್ರಕೃತಿ ವ್ಯವಸ್ಥೆಯಲ್ಲಿ ಕಾಣುವ ನಿಸರ್ಗ ನಿಯಮಗಳು (Laws of Nature) ನಮ್ಮನ್ನು ಚಿಂತಿಸುವಂತೆ ಪ್ರೇರೇಪಿಸುವುದು.

ಜಗತ್ತು ಹೇಗೆ ಅಸ್ತಿತ್ವಕ್ಕೆ ಬಂದಿದೆ? ಅದರಲ್ಲಿ ಜೀವಿಗಳು ಹೇಗೆ ಹುಟ್ಟಿಕೊಂಡವು ಎಂಬುದನ್ನು ಅರಿತುಕೊಳ್ಳಲು ಮಾನವರು ಪ್ರಯತ್ನಿಸಬೇಕಾಗಿದೆ. ಈ ಜಗತ್ತು ಮತ್ತು ಸೃಷ್ಟಿ ಜಾಲಗಳಿಗೆ ಯಾವುದಾದರೂ ಉದ್ದೇಶವಿದೆಯೇ ಎಂಬ ಅಧ್ಯಯನಕ್ಕೆ ಹೊರಟಾಗ ನಮ್ಮಲ್ಲಿ ನಿರೀಕ್ಷೆಯ ಚಿಹ್ನೆಗಳು ಖಂಡಿತಾ ಮೂಡುವುದು. ಅಧ್ಯಯನವನ್ನು ಮುಂದುವರಿಸಿದಾಗ ದೇವನೇ ಜಗತ್ತಿನ ಸೃಷ್ಟಿಕರ್ತ ಎಂದು ಸ್ಪಷ್ಟವಾಗಿ ಅರ್ಥವಾಗುವುದು. ಜೊತೆಗೆ ದೇವನಿಂದಲ್ಲದೆ ಈ ಜಗತ್ತಿನ ಪರಿಪಾಲನೆ ಅಸಾಧ್ಯವೆಂಬ ಸತ್ಯ ಮನದಟ್ಟಾಗುವುದು, ಸತ್ಯದ ಹುಡುಕಾಟದಲ್ಲಿರುವವರಿಗೆ ಸತ್ಯದ ನಿದರ್ಶನಗಳು ಜಗತ್ತಿನಾದ್ಯಂತ ಹರಡಿಕೊಂಡಿರುವುದು ಅನುಭವವಾಗುವುದು. ಆದರೆ ನಾವು ಪ್ರಜ್ಞಾಪೂರ್ವಕವಾಗಿ ಪರಿಶ್ರಮಿಸದೆ ಯಾವ ಪ್ರಯೋಜನವೂ ಸಿಗಲಾರದು.

ಸತ್ಯದ ಅಶದ ಸಂಕೇತಗಳು ಭೂಮಿ ಆಕಾಶಗಳಲ್ಲಷ್ಟೇ ಅಲ್ಲ ನಮ್ಮ ಅಸ್ತಿತ್ವದಲ್ಲಿಯೂ ಕಾಣಲು ಸಾಧ್ಯ. ನಾವು ಸೇವಿಸುವ ಆಹಾರದ ಎಷ್ಟೋ ರೀತಿಯ ವಸ್ತುಗಳನ್ನು ಭೂಮಿಯಿಂದ ಪಡೆಯುತ್ತಿದ್ದೇವೆ. ಅನ್ನಾಹಾರ-ಪಾನೀಯಗಳು, ಹಣ್ಣು ಹಂಪಲು ಇತ್ಯಾದಿ ಜೀವನಾಧಾರಗಳು ಜಗತ್ತಿನಲ್ಲಿ ನಮಗೆ ಲಭಿಸುತ್ತಿವೆ. ಇವೆಲ್ಲವೂ ಸತ್ಯದ ಅಸ್ತಿತ್ವದ ಸಂಕೇತಗಳಲ್ಲವೇ?

ಮಾನವರ ಮಾರ್ಗದರ್ಶನಕ್ಕೂ ವಿವಿಧ ರೀತಿಗಳು ಇವೆ. ಮಾರ್ಗದರ್ಶನಕ್ಕಾಗಿ ವಿಭಿನ್ನ ರೀತಿಗಳನ್ನೇ ದೇವನು ಸೃಷ್ಟಿಸಿದ್ದಾನೆ. ಬುದ್ಧಿಶಕ್ತಿ, ವಿವೇಕಗಳಿಂದ ನೋಡಿದರಷ್ಟೇ ನಮಗೆ ಅವುಗಳು ಕಾಣಲು ಸಾಧ್ಯ. ಪವಿತ್ರ ಕುರ್ ಆನಿನ ಪ್ರಕಾರ ನಾವು ಪ್ರಜ್ಞಾಪೂರ್ವಕವಾಗಿ ಮಾಡುವ ಕರ್ಮಗಳು ಮುಖ್ಯವಾಗಿವೆ, ಅಂದರೆ ಬುದ್ಧಿ ಉಪಯೋಗಿಸಿ ಚಿಂತಿಸಿರೆಂದು ಪವಿತ್ರ ಕುರ್ ಆನ್‌ ಕರೆ ನೀಡಿದೆ. ಯೋಚಿಸದೆ ಮಾಡುವ ಕೆಲಸದಲ್ಲಿ ತಪ್ಪುಗಳುಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಯೋಚಿಸದೆ ಏನೂ ನಿರ್ಧರಿಸಬಾರದೆಂದು ಪವಿತ್ರ ಕು‌ರ್ ಆನ್ ಕರೆ ನೀಡುತ್ತದೆ.

ದೇವನ ಏಕತ್ವವನ್ನು ಮತ್ತು ಅವನ ಅಸ್ತಿತ್ವವನ್ನು ಸೂಚಿಸುವ ಅನೇಕ ವಸ್ತುಗಳು ಜಗತ್ತಿನಲ್ಲಿವೆ. ಕೆಲವು ಕಣ್ಣಿಗೆ ಕಾಣುತ್ತವೆ, ಇನ್ನು ಹಲವು ಕಣ್ಣಿಗೆ ಅಗೋಚರವಾಗಿವೆ. ಪವಿತ್ರ ಕುರ್ ಆನಿನ ಕರೆಯಂತೆ ಮಾನವನ ಕಣ್ಣಿಗೆ ಅನುಭವವಾಗುವ ಮತ್ತು ಅವನು ಪ್ರಯೋಜನ ಪಡೆಯುವ ವಸ್ತುಗಳ ಮೂಲಕ ದೇವನೆಡೆಗೆ ತಲುಪಬೇಕಾಗಿದೆ. ನಾವು ಸುದೃಢ ಪ್ರಪಂಚ ರಚನೆ ಮತ್ತು ಅದರಲ್ಲಿರುವ ಸುದೃಢವಾದ ವ್ಯವಸ್ಥೆಯನ್ನು ನೋಡುತ್ತೇವೆಯಲ್ಲವೇ? ಇದರಲ್ಲಿಯೂ ನಾವು ದೇವನ ಅದೃಶ್ಯ ಅಧಿಪತ್ಯವನ್ನು ಗುರುತಿಸಬಹುದಾಗಿದೆ.

ಒಂದು ವೇಳೆ ಭೂಮಿಯ ಗಾತ್ರ ಈಗಿನದಕ್ಕಿಂತ ಸಣ್ಣದಾದರೆ ವಾಯುಮಂಡಲ ಹೋಳಾಗಬಹುದು. ಭೂಮಿಯನ್ನು ರಕ್ಷಿಸಲು ಅದಕ್ಕೆ ಅಸಾಧ್ಯವಾಗುತ್ತಿತ್ತು. ಉಲ್ಕಾಪಾತಗಳು ನಿರಂತರ ಸಂಭವಿಸಿ ಭೂಮಿ ನುಚ್ಚುನೂರಾಗುತ್ತಿತ್ತು. ದಿನಕ್ಕೆ ಶತಕೋಟಿ ಉಲ್ಕೆಗಳು ವಾಯು ಮಂಡಲವನ್ನು ಶರವೇಗದಲ್ಲಿ ಪ್ರವೇಶಿಸುತ್ತದೆ. ಅದನ್ನು ಭೂಮಿಗೆ ಬೀಳದಂತೆ ವಾಯು ಮಂಡಲವೇ ತಡೆಯುತ್ತಿದೆ. ಆದುದರಿಂದ ಭೂಮಿಯು ಅದರ ಭೀಕರ ನಾಶದಿಂದ ರಕ್ಷಿಸಲ್ಪಡುತ್ತದೆಯೆಂದು ಹಾವರ್ಡ್ ಯೂನಿವರ್ಸಿಟಿಯ ಪ್ರೊಫೆಸರ್ ಪ್ಲೆಚರ್ ವ್ಯಾಟ್ಸನ್‌ ನಡೆಸಿದ ಸಂಶೋಧನೆಯಲ್ಲಿ ಬಹಿರಂಗವಾಗಿದೆ.

ಭೂಮಿಯ ಗಾತ್ರ. ಈಗಿರುವುದಕ್ಕಿಂತ ದೊಡ್ಡದಾದರೂ ವಾಯು ಮಂಡಲವು ಭೂಮಿಯ ಆಕರ್ಷಣ ಶಕ್ತಿಯನ್ನೇ ತಾಳಲಾರದೆ ವಾಯು ಮಂಡಲವೇ ಮುದುಡುತ್ತಿತ್ತು. ಅದು ಕೆಲವು ಕಿಲೋ ಮೀಟರ್‌ಗೆ ಸೀಮಿತಗೊಳ್ಳುತ್ತಿತ್ತು. ನಮಗೆ ಗಾಳಿಯ ಒತ್ತಡವನ್ನು ತಡೆಯಲು ಸಾಧ್ಯವಿರಲಿಲ್ಲ. ಮಾನವನೂ ಬದುಕಿ ಉಳಿಯುತ್ತಿರಲಿಲ್ಲ.

ಒಟ್ಟಾರೆ ಭೂಮಿ ಆಕಸ್ಮಿಕ ಸೃಷ್ಟಿಯಲ್ಲವೆಂದು ಸಂಶೋಧನೆಗಳಿಂದ ಸಾಬೀತಾಗಿದೆ. ಯೋಜನೆಯ ಪ್ರಕಾರವೇ ಭೂಮಿಯನ್ನು ಸೃಷ್ಟಿಸಲಾಗಿದೆ. ಹಾಗಿದ್ದರೆ ಭೂಮಿ ಸೃಷ್ಟಿಗೂ ಒಂದು ಉದ್ದೇಶವಿದೆಯೆಂದು ನಮಗೆ ಮನವರಿಕೆಯಾಗುವುದಿಲ್ಲವೇ?

ಭೂಮಿ ಗಂಟೆಗೆ ಸಾವಿರ ಮೈಲು ರಭಸದಿಂದ ತನ್ನ ಕಕ್ಷೆಯಲ್ಲಿ ತಿರುಗುತ್ತಿದೆ. ಅದು ಗಂಟೆಗೆ ನೂರು ಮೈಲು ವೇಗದಲ್ಲಿ ತಿರುಗುತ್ತಿದ್ದರೆ, ಹಗಲು ರಾತ್ರಿಗಳು ಈಗಿರುವುದಕ್ಕಿಂತ 10 ಪಟ್ಟು ದೀರ್ಘವಾಗುತ್ತಿತ್ತು. ಭೂಮಿಯಲ್ಲಿ ಹಸಿರುಗಳು ಹೇಳಹೆಸರಿಲ್ಲದಂತಾಗುತ್ತಿತ್ತು. ಸುದೀರ್ಘ ಹಗಲಿನ ಸೆಕೆಯನ್ನೂ (ಉಷ್ಣ ಹವೆಯನ್ನು ಅದೇ ರೀತಿ ಸುದೀರ್ಘ ರಾತ್ರಿಯ ಮೈ ಕೊರೆಯುವ ಚಳಿಯನ್ನೂ ನಮಗೆ ಸಹಿಸಲು ಸಾಧ್ಯವಿರಲಿಲ್ಲ. ಭೂಮಿಯಲ್ಲಿ ಮರ ಗಿಡಗಳು ಮೊಳಕೆಯೊಡೆಯುತ್ತಿರಲಿಲ್ಲ, ರೈತನ ಕೃಷಿ ಕಾರ್ಯ ಸಾಧ್ಯವಾಗುತ್ತಿರಲಿಲ್ಲ. ಆಹಾರೋತ್ಪಾದನೆಯೇ ಸ್ಥಗಿತವಾಗುತ್ತಿತ್ತು. ಆದರೆ, ಇಂದು ಇವೆಲ್ಲವೂ ಸುಸೂತ್ರದಲ್ಲಿ ಯೋಜನೆಯಂತೆ ನಡೆಯುತ್ತಿದೆಯಲ್ಲವೇ?

ಸೂರ್ಯನು ನಮ್ಮಿಂದ ಅದರ ಉಷ್ಣವನ್ನು ತಾಳಲು ಸಾಧ್ಯವೆನಿಸುವಷ್ಟು ದೂರದಲ್ಲಿ ಉದಿಸುತ್ತಾನೆ. ಸೂರ್ಯನಿಂದ ಹೆಚ್ಚು ಉಷ್ಣ ಬಿಡುಗಡೆಗೊಂಡರೆ ಏನಾಗಬಹುದು? ಭೂಮಿಯಲ್ಲಿರುವ ಜೀವಿಗಳು ಕರಕಲಾಗುತ್ತಿದ್ದವು. ಇನ್ನು ಸೂರ್ಯನ ಉಷ್ಣ ಈಗಿರುವುದಕ್ಕಿಂತ ಅರ್ಧದಷ್ಟು ಕಡಿಮೆಯಾದರೆ ಏನಾಗಬಹುದು? ಜೀವ ಸಂಕುಲಗಳು ಚಳಿಯಿಂದ ಬದುಕಿ ಉಳಿಯಲು ಸಾಧ್ಯವಿರಲಿಲ್ಲ. ಆದರೆ ಇಂದು ಇವೆಲ್ಲವೂ ಸುಸೂತ್ರದಲ್ಲಿ ಯೋಜನೆಯಂತೆ ನಡೆಯುತ್ತಿದೆಯಲ್ಲವೇ?

ಹೌದು, ಜಗತ್ತಿನಲ್ಲಿ ಎಲ್ಲವೂ ಯೋಜನೆಯಂತೆ ಸೃಷ್ಟಿಸಲ್ಪಟ್ಟಿವೆ. ಆದ್ದರಿಂದಲೇ ಪ್ರಪಂಚದ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತಿವೆ. ಇದು ದೇವನ ಅಸ್ತಿತ್ವ ಮತ್ತು ಪ್ರಭುತ್ವದ ಸಂಕೇತಗಳೇ ಆಗಿವೆ.

ಜಗತ್ತಿನ ಸಹಕಾರಿ ನಿಯಮ
ಜಗತ್ತಿನ ನಾಲ್ಕೂ ದಿಕ್ಕುಗಳಲ್ಲಿ ನಾವು ಒಂದಕ್ಕೊಂದು ಪೂರಕವಾದ ನಿಯಮಗಳನ್ನೇ ಕಾಣುತ್ತಿರುವುದೇಕೆ? ಹೌದು, ಭೂಮಿ-ಆಕಾಶಗಳಲ್ಲಿ ಹೊಂದಾಣಿಕೆ(ಸಮನ್ವಯ)ಯಿದೆ. ಅವುಗಳ ಪರಸ್ಪರ ಸಹಕಾರದಿಂದ ಭೂಮಿಯ ವಾತಾವರಣ ಸಮತೋಲನ (Co Ordination)ದಲ್ಲಿದೆ. ಅಲ್ಲಿ ಸೌಹಾರ್ದತೆ(Harmony)ಇವೆ. ಸಹಕಾರ (co-operation)ವಿದೆ. ಇವೆಲ್ಲವೂ ಜಗತ್ತು ಆಕಸ್ಮಿಕ ಸೃಷ್ಟಿಯಲ್ಲವೆಂಬ ಸೂಚನೆಗಳಾಗಿವೆ. ಜಗತ್ತು ಪರಮ ಬುದ್ದಿ ಮತ್ತೆಯಿಂದ (Supreme Mind) ಕಾರ್ಯ ನಿರತವಾಗಿವೆ. ಪಶು ಪಕ್ಷಿ ಸಸ್ಯ ಪ್ರಾಣಿ ಮತ್ತು ಮಾನವರಿಗೆ ಭೂಮಿಯ ವಾತಾವರಣಕ್ಕೆ ತಾಳೆಯಾಗುವಂತಹ ಅಂಗಾಂಗಗಳನ್ನೇ ದಯಪಾಲಿಸಲಾಗಿದೆ. ಎಲ್ಲವೂ ಯೋಜನಾ ಬದ್ಧವಾಗಿದೆ.

ಮಾನವರ ಮೆದುಳನ್ನು ಗಮನಿಸಿದ್ದೀರಾ? ಅದರೊಳಗೆ ಹಕೋಟಿ ಜೀವಕೋಶಗಳಿವೆ(Cells). ಪ್ರತಿಯೊಂದು ಸೆಲ್‌ಗೆ ಅರುವತ್ತು ಸಾವಿರ Points(ಕೇಂದ್ರ)ಗಳವೆ. ನಾಲಿಗೆಗೆ ರುಚಿ ಅನುಭವವಾಗಬೇಕೆಂದು 30 ಸಾವಿರ ರುಚಿಯ ನರಗಳಿವೆ. ಕಿವಿ ಕೇಳಬೇಕಾದರೆ 1 ಲಕ್ಷ ಶ್ರವಣ ನರಗಳು ಕೆಲಸ ಮಾಡುತ್ತವೆ. ನಮ್ಮ ಕಣ್ಣಿನಲ್ಲಿ 130 ಮಿಲಿಯನ್ (13 ಸಾವಿರ ಲಕ್ಷ) ದೃಷ್ಟಿ ಗೋಚರದ ನರಗಳಿವೆ. ಬೆಳಕನ್ನು ಇವು ಹೀರುತ್ತವೆ.

ಈ ರೀತಿ ನಾಲಿಗೆಗೆ ರುಚಿ, ಕಿವಿಗೆ ಸದ್ದು, ಕಣ್ಣಿಗೆ ನೋಟವನ್ನು ನೀಡುವಂತಹ ಯೋಜನೆಯನ್ನು ದೇಹದಲ್ಲಿರಿಸಲಾಗಿದೆ. ಇವೆಲ್ಲ ಹೇಗೆ ಆಕಸ್ಮಿಕವಾಗಿ ಸಂಭವಿಸೀತು? ಮಾನವ ದೇಹದಲ್ಲಿರುವ ಅಸಂಖ್ಯಾತ ಜೀವಕೋಶಗಳು, 36 ಸಾವಿರ ಕಿಲೋ ಮೀಟರ್ ಉದ್ದದ ನರನಾಡಿಗಳು, ಯಾವುದೇ ಅಪಾರ ಬುದ್ಧಿಮತ್ತೆ, ಇಚ್ಛಾಶಕ್ತಿಯಿಂದಲ್ಲದೆ ಮಾನವನ ಇಂತಹ ಕ್ಲಿಷ್ಟಕರ ರಚನೆ ಸಾಧ್ಯವಿಲ್ಲ. ಇದು ಆಕಸ್ಮಿಕವಾಗಿ ಹೇಗೆ ಸಂಭವಿಸಿತು?

ನಾವು ಒಂದು ಟೈಪ್‌ ರೈಟರನ್ನು ಅಡ್ಡಾದಿಡ್ಡಿಯಾಗಿ ಅದುಮಿ ಒಂದು ಕಾವ್ಯವನ್ನು ಮುದ್ರಿಸಲಾರೆವು. ಅದರ ಬಟನ್‌ಗಳನ್ನು ಸೂಕ್ತವಾಗಿ ಅದುಮಿದಾಗ ಮಾತ್ರ ನಾವು ಬಯಸು ವುದನ್ನು ಮುದ್ರಿಸಿ ತೆಗೆಯಬಹುದು. ಇವನ್ನೆಲ್ಲ ಗಮನಿಸಿದಾಗ ಸರಿಯಾದ ಸೂತ್ರದಲ್ಲಿರುವ ನಮ್ಮ ದೇಹ ತನ್ನಷ್ಟಕ್ಕೆ ಸೃಷ್ಟಿಯಾಗಲು ಸಾಧ್ಯವಿಲ್ಲವೆಂದು ಅರ್ಥವಾಗುತ್ತದೆ. ಇದರ ಹಿಂದೆ ಅಪಾರ ಬುದ್ಧಿಮತ್ತೆ, ಇಚ್ಛಾ ಶಕ್ತಿ ಖಂಡಿತವಾಗಿಯೂ ವಿನಿಯೋಗವಾಗಿದೆ.ಎನ್ನಬಹುದು.

ಪ್ರಪಂಚ ಮತ್ತು ಅದರ ರಚನೆಯನ್ನು ಪರಾಮರ್ಶಿಸಿದರೆ ಪ್ರಕೃತಿಗಿಂತ ಮಿಗಿಲಾದ ಯಾವುದೋ ದೊಡ್ಡ ಶಕ್ತಿಯೊಂದಿದೆ ಎಂದು ಒಪ್ಪಬೇಕಾಗುವುದೆಂದು ಪ್ರೊ। ವೈಟ್ ಹೆಡ್, ಸರ್ ಜೇಮ್ಸ್ ಜೀನ್ಸ್, ಲಾರ್ಡ್ ಎಡ್ಡಿಂಗ್ಟನ್‌ರು ಹೇಳುತ್ತಾರೆ. ನೋಡಿ, ನಮ್ಮ ಅವಶ್ಯಕತೆಗಳನ್ನು ಪೂರೈಸುವ ವಿವಿಧ ರೀತಿಯ ವಿಧಾನಗಳನ್ನು ನಾವು ಭೂಮಿಯಲ್ಲಿ ಕಾಣುತ್ತೇವೆಯಲ್ಲವೆ? ನಾವು ಉಸಿರಾಡುವುದಕ್ಕಾಗಿ ವಾಯು ಮಂಡಲದಿಂದ ಆಮ್ಲಜನಕ ಬಿಡುಗಡೆಯಾಗುತ್ತದೆ. ಆರೋಗ್ಯ ಉಳಿಸುವುದಕ್ಕಾಗಿ ವಿವಿಧ ಭಕ್ಷ ಪದಾರ್ಥಗಳಿವೆ. ಜಗತ್ತಿನೊಳಗೆ ನಮ್ಮೆಲ್ಲ ಅವಶ್ಯಕತೆಗಳು ಈಡೇರುತ್ತಿರುವುದನ್ನು ನಾವು ಕಾಣುತ್ತೇವೆ. ಎಲ್ಲ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ. ನಮ್ಮ ಅಗತ್ಯಗಳ ಅರಿವಿರುವ ಯಾವುದೋ ಪರ ಪ್ರಭುತ್ವ ಇದರ ಹಿಂದೆ ಇರಲೇಬೇಕು. ಹೀಗೆ ಕರುಣಾಗ್ರೇಸರನಾದ ಆ ಪ್ರಭುವಿನ ಕೈವಾಡವನ್ನು ನಾವು ಗುರುತಿಸಬಹುದು.

ನಾವು ಜ್ಞಾನವನ್ನು ಸಂಪಾದಿಸಿಕೊಳ್ಳುವುದಿದ್ದರೆ ಜ್ಞಾನಿಯೋರ್ವನು ಇರಲೇಬೇಕಾಗಿದೆ. ಆ ಕರುಣಾಗ್ರೇಸ ಪ್ರಭುವಿನಿಂದಲ್ಲದೇ ಇಂತಹ ಯಾವ ದಯೆಯೂ ಇಲ್ಲ. ಕೇವಲ ಭೌತಿಕ ಪದಾರ್ಥದಿಂದ ನಮ್ಮ ಆವಶ್ಯಕತೆಗಳು ಹೇಗೆ ಈಡೇರಬಹುದು? ಪ್ರಪಂಚದಲ್ಲಿರುವ ಜೀವಿಗಳ ಎಲ್ಲ ಅವಶ್ಯಕತೆಗಳನ್ನು ಪದಾರ್ಥವು ಹೇಗೆ ಪೂರೈಸೀತು? ಹೀಗಾಗಿ ಖಂಡಿತ ವಾಗಿಯೂ ನಮ್ಮ ಅಗತ್ಯಗಳನ್ನು ಈಡೇರಿಸುವ ಓರ್ವ ದೇವನಿದ್ದಾನೆ ಎಂಬುದನ್ನು ನಾವು ಒಪ್ಪಿಕೊಳ್ಳುವುದು ಅನಿವಾರ್ಯ. ದೇವನು ಜ್ಞಾನ, ಬುದ್ದಿ, ದಯೆ, ಕರುಣೆ, ದಾನಶೀಲತೆ ಮುಂತಾದ ಸಕಲ ಗುಣ ಸಂಪನ್ನನು, ಪ್ರಪಂಚದಲ್ಲಿ ಅವನ ಈ ಗುಣಗಳು ಒಂದಲ್ಲ ಒಂದು ವಿಧದಿಂದ ಪ್ರಕಟಗೊಳ್ಳುತ್ತಿರುತ್ತವೆ.

ದಾನಶೀಲ ಗುಣ ಜೀವಿಗಳ ಲಕ್ಷಣವಾಗಿದೆ. ಜೀವವಿರುವವುಗಳಲ್ಲಿ ಮಾತ್ರ ಅದನ್ನು ನಿರೀಕ್ಷಿಸಬಹುದಾಗಿದೆ. ಜೀವಂತ ಮರದಿಂದ ಹಣ್ಣು, ಹಂಪಲು, ನೆರಳು ಇತ್ಯಾದಿಗಳನ್ನು ಪಡೆಯಬಹುದು. ಈ ಮರ ಒಣಗಿದರೆ ನೆರಳು ಕೂಡಾ ಸಿಗುವುದಿಲ್ಲ, ಅಂದರೆ ಅದರಿಂದ ಪ್ರಯೋಜನಕ್ಕೆ ಸಿಗುವ ದಾನಶೀಲ ಗುಣವನ್ನೇ ಅದು ಕಳೆದುಕೊಂಡಿದೆ. ನದಿ ಹರಿಯು ವುದು ಅದರ ಜೀವಂತಿಕೆಯ ಲಕ್ಷಣವಾಗಿದೆ. ಬೆಂಕಿಯಿಂದ ಶಾಖ ಪಡೆಯುತ್ತೇವೆ, ಶಾಖದಿಂದ ಅಡುಗೆಯನ್ನು ತಯಾರಿಸಬಹುದು. ಚಳಿಗಾಲದಲ್ಲಿ ನೀರು ಕಾಯಿಸಬಹುದು. ಶಾಖಕ್ಕಾಗಿ ಬೆಂಕಿಯನ್ನು ಉರಿಸುತ್ತೇನೆಂದು ಇಟ್ಟುಕೊಳ್ಳೋಣ.

ಈಗ ಬೆಂಕಿ ನಂದಿ ಹೋದರೆ ಏನಾದೀತು? ಕೆಂಡ ಬೂದಿಯಾದರೆ ಅಡುಗೆಯನ್ನು ಹೇಗೆ ತಯಾರಿಸಿಯೇವು. ಬೂದಿಯಿಂದ ಶಾಖವನ್ನು ಪಡೆಯಲಾರವಷ್ಟೇ? ಅಂದರೆ ಇಲ್ಲಿ ಬೆಂಕಿಯ ದಾನ ಶೀಲ ಗುಣ ಶಾಖ ಅಥವಾ ಉಷ್ಣವಾಗಿದೆ. ಸೂರ್ಯನ ಪ್ರಕಾಶ ಅದರ ಜೀವಂತಿಕೆಯ ಲಕ್ಷಣವಾಗಿದೆ. ತನ್ನ ಕಿರಣಗಳಿಂದ ಪ್ರಪಂಚವನ್ನೇ ಅದು ಬೆಳಗುತ್ತದೆ. ಸೂರ್ಯನು ನೀಡುವ ಶಾಖ-ಪ್ರಕಾಶಗಳು ಸೂರ್ಯನ ದಾನಶೀಲ ಗುಣವಾಗಿದೆ. ಯೋಚಿಸಿ ನೋಡಿರಿ. ಸೂರ್ಯನಿಂದ ಈ ಗುಣಗಳು ಬತ್ತಿ ಹೋದರೆ? ಶಾಖ ರಹಿತವಾಗಿ ಹೊಲದ ಪೈರುಗಳು ಮಾಗಲಾರವಷ್ಟೇ? ಜೀವಂತ ವಸ್ತುವಿಗೆ ದಾನಶೀಲ ಗುಣಗಳಿವೆಯೆಂದು ಈ ಉದಾಹರಣೆಗಳಿಂದ ನಾವು ಅರಿತೆವು. ದಾನಶೀಲವಲ್ಲದ, ಕೊಡುಗೆ ನೀಡುವ ಶಕ್ತಿಯಿಲ್ಲದ, ವಸ್ತುಗಳು ಮೃತ ಸಮಾನವಾಗಿದೆ. ಜಿಪುಣನಿಂದ ಯಾವುದೇ ಕೊಡುಗೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲವಷ್ಟೇ, ಜಿಪುಣ ಒಣಗಿ ಬರಡಾದುದಕ್ಕೆ ಸಮಾನ. ಅವನು ಏನನ್ನೂ ಕೊಡಲಾರ. ಅವನಿಂದ ಯಾವ ದಾನವನ್ನೂ ನಿರೀಕ್ಷಿಸುವಂತಿಲ್ಲ. ಸತ್ತ ವ್ಯಕ್ತಿಗೆ ಒಂದು ಸಲಾಮ್‌ಗೆ ಉತ್ತರಿಸುವ ತಾಕತ್ತಿದೆಯಾ? ಅವನಿಂದ ಏನನ್ನು ನಿರೀಕ್ಷಿಸಿದರೂ ಅರ್ಥಶೂನ್ಯವಾಗುವುದು.

ನಾವು ಇಂದು ಜಗತ್ತಿನಲ್ಲಿ ಅಪಾರ ದಾನಶೀಲ ಗುಣಗಳನ್ನು ಕಾಣುವೆವಲ್ಲವೇ? ಇವೇನು ಒಂದು ನಿರ್ಜೀವ (ಪದಾರ್ಥ) ವಸ್ತುವಿನಿಂದ ಸಂಭವಿಸಿತೆ? ಜಗತ್ತಿನಲ್ಲಿರುವ ಜೀವ ಜಾಲಗಳು ನಿರ್ಜೀವವಾದ ಪದಾರ್ಥದಿಂದ ಆಗಿವೆ ಎಂದರೆ ಅದು ಬಾಲಿಶತನವಾದೀತು. ಜಗದ ಸೃಷ್ಟಿಯ ಹಿಂದೆ ಜೀವಂತ ಪ್ರಭುತ್ವದ ಕೈವಾಡ ಖಂಡಿತ ಇದೆ. ಅದು ದೇವ ಪ್ರಭುತ್ವವಾಗಿದೆ. ಆ ದೇವನ ದಯೆ-ದಾನಶೀಲತೆಗಳು ಜಗತ್ತನ್ನು ಆವರಿಸಿಕೊಂಡು ಕಾರ್ಯ ನಿರತವಾಗಿದೆ ಎಂದು ನಾವು ಒಪ್ಪಿಕೊಳ್ಳಬೇಕು.

ಸೂಕ್ಷ್ಮ ವ್ಯಕ್ತಿಯ ಕಣ್ಣೆದುರು ದೇವನು ಬರುವ ಅಗತ್ಯವಿಲ್ಲ. ಜಗತ್ತಿನಲ್ಲಿರುವ ದೇವನ ಅಪಾರ ಕೊಡುಗೆಗಳಲ್ಲಿ ಅವನನ್ನು ದೇವನ ಅಸ್ತಿತ್ವವನ್ನು ಗುರುತಿಸುವನು. ಯಾಕೆಂದರೆ ಮಾನವನ ಮನಸ್ಸಿಗೆ ಮಿತಿಯಿದೆ. ಆದರೂ ಅದು ಉನ್ನತವೂ ವಿಶಾಲವೂ ಆಗಿದೆ. ಹೀಗಾಗಿ ದೇವನ ಅಸ್ತಿತ್ವವನ್ನು ಗುರುತಿಸುವುದು ಅವನಿಗೆ ಕಷ್ಟ ಸಾಧ್ಯವಲ್ಲ ಈ ರೀತಿ, ಮಾನವನೊಳಗೆ ದೇವನ ಅಸ್ತಿತ್ವ ಮತ್ತು ಪ್ರಭುತ್ವದ ನಂಬಿಕೆ ಬಲವಾಗಿ ನೆಲೆಯೂರಿದೆ ಎನ್ನಬಹುದು.

ಆದರೂ ಪ್ರಶ್ನೆಯೊಂದು ಉದ್ಭವಿಸುವ ಸಾಧ್ಯತೆಯಿದೆಯೆನ್ನಿ, ಸೀಮಿತ ಅಸ್ತಿತ್ವವಾದ ಮಾನವನಿಗೆ ದೇವಾಸ್ತಿತ್ವದ ಅರಿವು ಹೇಗೆ ಸಾಧ್ಯ?

ಸರಳ ಪ್ರಶ್ನೆಯಿದು. ಎಷ್ಟಾದರೂ ಮಾನವನಿಗೆ ದೇವನ ಅಸೀಮ ಅಸ್ತಿತ್ವ ಮತ್ತು ಪ್ರಭುತ್ವವನ್ನು ನಿಖರವಾಗಿ ತಿಳಿಯಲಾಗದು. ಆದುದರಿಂದ ಅದಕ್ಕಾಗಿ ಪ್ರವಾದಿಗಳ ಮಾರ್ಗದರ್ಶನ ಅಗತ್ಯವಾಗಿದೆ.

ಹೌದು, ಪ್ರಪಂಚದಲ್ಲಿರುವ ವಸ್ತುಗಳಲ್ಲಿ ದೇವನ ಅಸ್ತಿತ್ವದ ಛಾಪು ಗೋಚರಿಸುವುದು. ಜಗತ್ತಿನ ಯಾವ ವಸ್ತುವೂ ಸ್ವಯಂ ತನ್ನನ್ನು ಸೃಷ್ಟಿಸಿಕೊಂಡಿಲ್ಲ, ಇನ್ನೊಬ್ಬನಿಂದ ಸೃಷ್ಟಿಯಾಗಿದೆ. ಪ್ರಪಂಚದಲ್ಲಿ ಕಂಡು ಬರುವ ನಿದರ್ಶನಗಳಲ್ಲಿ ದೇವನ ಅಸ್ತಿತ್ವವು ಎದ್ದು ಕಾಣುವುದು ಇಂತಹ ಮನಸ್ಸಿನಲ್ಲಿ ಉದ್ಭವಿಸುವ ಭಾವನೆಗಳಿಗೆ ಮೆದುಳೋ ಮನಸೋ ಕೇಂದ್ರವಲ್ಲ. ಈ ನಿದರ್ಶನಗಳು ಸರ್ವಶಕ್ತನಾದ ದೇವನ ಅದ್ಭುತದಲ್ಲಿ ಒಂದಾಗಿದೆ. ಇವೆಲ್ಲ, ಯಾರಿಂದಲೂ ನಿರಾಕರಿಸಲು ಸಾಧ್ಯವಿಲ್ಲದ ಅಟೋಲಾಜಿಕಲ್ ತರ್ಕಗಳು. ಇಂತಹ ನಿದರ್ಶನಗಳು ದೇವನ ಅಸ್ತಿತ್ವವನ್ನು ನಮ್ಮ ಮುಂದೆ ಪ್ರಸ್ತುತ ಪಡಿಸುತ್ತಿವೆ.

ಈ ವರೆಗಿನ ಉದಾಹರಣೆಗಳು ದೇವನ ಪ್ರಭುತ್ವ ಮತ್ತು ಅಸ್ತಿತ್ವದ ಕಣ್ಣಿಗೆ ಕಾಣುವ ಬಹಿರಂಗ ಪುರಾವೆಗಳಾಗಿವೆ. ಇವು ದೇವನು ಕರುಣಾಮಯಿ ಎಂದು ಸಾರುತ್ತಿವೆ. ಅವನ ಪರಮ ಪ್ರಭುತ್ವದ ಕೃಪೆ ಸದಾ ನಮ್ಮ ಮೇಲಿರುತ್ತದೆ ಎಂಬುದನ್ನು ಇವು ಸೂಚಿಸುತ್ತಿವೆ. ಆದುದರಿಂದ ದೇವನಿಂದ ನಿರಾಶರಾಗುವ ಪ್ರಶ್ನೆಯೇ ಇಲ್ಲ. ನಾವು ಸಂಪೂರ್ಣ ಭರವಸೆಯಿಂದ ದೇವನೊಂದಿಗೆ ಸಂಬಂಧವನ್ನು ಸ್ಥಾಪಿಸಬೇಕು.

ಒಂದು ವೇಳೆ, ನಮ್ಮ ಕೆಲವು ಆವಶ್ಯಕತೆಗಳು ಈಡೇರದೆ ಉಳಿದಿರಬಹುದು. ಹಾಗೆಂದು ದೇವನಲ್ಲಿ ಭರವಸೆಯನ್ನೇ ಕಳಕೊಳ್ಳುವವರು ಕೃತಘ್ನರು ಮಾತ್ರ. ಇವರ ಮುಂದೆ ನೀವು ದೇವನ ಮಹಿಮೆಯನ್ನು ಹೇಳಿಯೂ ಪ್ರಯೋಜನವಾಗದು. ಅವರು ದೇವನಲ್ಲಿ ವಿಶ್ವಾಸವಿರಿಸುವ ಬದಲು ನಿರಾಕರಿಸುತ್ತಾರೆ. ದೇವನ ಅಪಾರ ಅನುಗ್ರಹಗಳನ್ನೇ ನಿರಾಕರಿಸುತ್ತಿದ್ದೇವೆಂಬ ಜ್ಞಾನವೇ ಆ ಅಜ್ಞಾನಿಗಳಿಗಿರುವುದಿಲ್ಲ.

ಪ್ರಪಂಚದಲ್ಲಿ ಮಾನವರ ಭೌತಿಕ ಆವಶ್ಯಕತೆಗಳು ಈಡೇರುತ್ತಿದೆ. ಆದ ಕಾರಣ ದೇವನಿಗೆ ಕೃತಜ್ಞರಾಗುವುದು ನಮ್ಮ ಕರ್ತವ್ಯ ಆಗಿದೆ. ಪ್ರಪಂಚದಲ್ಲಿ ಲಭ್ಯವಿರುವ ಭೌತಿಕ ವಸ್ತುಗಳು ಮಾನವನಿಗೆ ಅಮೂಲ್ಯವಾದದ್ದು. ನೋಡಿ, ಈ ಪ್ರಪಂಚದಲ್ಲಿ ಪ್ರವಾದಿಗಳ ಮೂಲಕ ದೇವನು ನೇರವಾಗಿ ಸಂಬೋಧಿಸಿರುವ ಶ್ರೇಷ್ಠತೆಯು ಮಾನವನಿಗೆ ಲಭಿಸಿತು.

ಹೌದು, ಮಾನವನಿಗೆ ಯಾಕೆ ಈ ಶ್ರೇಷ್ಠ ಸ್ಥಾನ ಲಭಿಸಿತು? ಆತ್ಮದ ಮಾಧುರ್ಯವನ್ನು ಅನುಭವಿಸುವುದು ಹೇಗೆ? ಜೀವನದ ಸಾರ್ಥಕ್ಯವೇನು ಎಂಬುದನ್ನೆಲ್ಲ ಪ್ರವಾದಿಗಳಿಂದಲೇ ಮಾನವರು ಕಲಿತುಕೊಂಡಿದ್ದಾರೆ. ಈ ಬಗ್ಗೆ ಮುಂದೆ ವಿವರಿಸಲಾಗಿದೆ.

ಹೌದು, ಭೌತಿಕ ಸುಖ ಸೌಕರ್ಯಗಳು ಮಾನವ ಜೀವನದ ಮಹಾಸಾಧನೆಯಲ್ಲ ದೇವ ಭಕ್ತಿ ಸಮರ್ಪಣೆಗಳೇ ಮಾನವನಿಗೆ ಪ್ರಾಮುಖ್ಯವಾಗಿದೆ. ಮಾನವರ ಬಳಿ ಸಕಲ ಸುಖ ಐಶ್ವರ್ಯಗಳಿರಬಹುದು. ಆದರೂ ದೇವರನ್ನು ಪ್ರಾರ್ಥಿಸಲು ತಿಳಿಯದಿದ್ದರೆ ಅವನ ಜೀವನ ಶೂನ್ಯವಾಗಿದೆ. ಅದು ಬರಡು ಮರುಭೂಮಿಯಂತಹ ಬದುಕಾಗಿರುವುದು. ಯಾಕೆಂದರೆ ಮರುಭೂಮಿಯಲ್ಲಿ ಹೂ, ಹಣ್ಣು ಫಲ ವಸ್ತುಗಳಿಲ್ಲ, ಹಸಿರಿಲ್ಲ, ಅಲ್ಲಿ ಹಕ್ಕಿಗಳು ವಾಸಿಸುವುದಿಲ್ಲ. ಅಂದ ಮೇಲೆ ಅಲ್ಲಿ ಹಕ್ಕಿಗಳ ಇಂಚರವನ್ನು ನಿರೀಕ್ಷಿಸುವುದಕ್ಕೆ ಅರ್ಥವಿದೆಯೇ? ಇಂತಹ ಬದುಕು ಅರ್ಥಶೂನ್ಯವಾದ ಬದುಕಲ್ಲವೇ?

ಜೀವನವನ್ನು ಒಂದು ಆಟ ವಿನೋದ ಎಂದು ತಿಳಿದವರಿಗೆ ಜಗತ್ತು ಯಾವ ನಿರೀಕ್ಷೆಯನ್ನೂ ಸೃಷ್ಟಿಸಲಾರದು. ಬದುಕು ಆಟ ವಿನೋದ ಅಲ್ಲ. ಅಮರತ್ವದ ಸಂಬಂಧ ಕಡಿದುಕೊಂಡ ಯಾವುದೂ ಅಮೂಲ್ಯವಲ್ಲ. ದೇವನಲ್ಲಿ ನಿರೀಕ್ಷೆಯಿಟ್ಟವನೇ ಆಶಾವಾದಿ. ಅಮರತ್ವದ ನಿರೀಕ್ಷೆಯಿರುವವನನ್ನೇ ಮಾನವನೆಂದು ಹೇಳಬಹುದು.

ಇಂದು ನಾಳೆಗಳೆಂಬ ಭವಿಷ್ಯದ ಚಿಂತೆಗಳನ್ನು ನಾವು ಮಾನವರಲ್ಲಿ ಕಾಣುತ್ತೇವೆ. ಕೇವಲ ಇಂದಿಗೆ ಸೀಮಿತವಾದ ತೃಪ್ತಿಯು ಅವನಲ್ಲಿಲ್ಲ. ಅವನು ನಾಳೆಗಳೀಚೆಗೂ ಚಿಂತಿಸ ಬೇಕಾಗಿದೆ. ಜಗತ್ತನ್ನು ನೋಡಿ, ಅದರಲ್ಲಿ ನಾಳೆಗಳನ್ನು ತೋರಿಸುವ ಅಸಂಖ್ಯಾತ ಕುರುಹುಗಳಿಲ್ಲವೇ? ಅವು ನಮ್ಮನ್ನು ಸುಖಿಯಾದ ನಾಳೆಗಾಗಿ ನಮ್ಮನ್ನು ಪ್ರೇರೇಪಿಸುತ್ತಿವೆ. ಹೌದು ಇಂದನ್ನು ನಾವು ಸಮೃದ್ಧಗೊಳಿಸಿದರೆ ಸುಖೀ ನಾಳೆಗಳನ್ನು ನಿರೀಕ್ಷಿಸಬಹುದು. ಇಂದು ಸತ್ಯ ಅಪರಿಚಿತವಲ್ಲ. ಸತ್ಯಕ್ಕೆ ಅನುಕೂಲವಾಗಿ ಪ್ರಪಂಚದ ಕಾರ್ಯಕಲಾಪಗಳು ನಡೆಯುತ್ತಿವೆ. ಈ ಸತ್ಯದೆಡೆಗೆ ಮಾನವನು ತಲುಪುವುದು ಅಷ್ಟು ಸುಲಭವಿಲ್ಲ. ಅವನಿಗೆ ಮಾರ್ಗದರ್ಶನದ ಅವಶ್ಯಕತೆಯಿದೆ. ದೇವನು ಅದಕ್ಕೂ ವ್ಯವಸ್ಥೆ ಮಾಡಿದ್ದಾನೆ. ಮುಂದೆ ಈ ದೇವದತ್ತ ಮಾರ್ಗದರ್ಶನಗಳ ವಿಧಾನಗಳನ್ನು ಅರಿಯೋಣ.

‘ದ ಮೆಸೇಜ್’ ಎಂಬ ಕೃತಿಯಿಂದ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …