ನಾನೇ ಸಾರ್ವಭೌಮ, ಪೂರ್ವ ಪಶ್ಚಿಮಗಳು ನನ್ನ ಅಂಕೆಯಲ್ಲಿದೆ ಎನ್ನುತ್ತಿದ್ದ ಇರಾಕ್ ನ ರಾಜ ನಮ್ರೂದ್. ರಾಜನ ಆಸ್ಥಾನದಲ್ಲಿ ಅರ್ಚಕರಿಗೆ ವಿಶೇಷ ಸ್ಥಾನಮಾನವಿತ್ತು. ಅರ್ಚಕರ ಮಗನಾಗಿ ಇಬ್ರಾಹೀಮರು ಹುಟ್ಟಿದರು. ಯುವಕರಾದಾಗ ನಮ್ರೂದ್ ರಾಜನನ್ನೂ ತಂದೆಯನ್ನೂ ವಿರೋಧಿಸಿ ಇರಾಕ್ ನಿಂದ ವಲಸೆ ಹೋಗುತ್ತಾರೆ. ಭೂಮ್ಯಾಕಾಶಗಳ ಸೃಷ್ಟಿಕರ್ತನೇ ನನ್ನ ಪ್ರಭು ಎಂಬುದು ಇಬ್ರಾಹೀಮರ ಪ್ರಬಲ ಪ್ರತಿಪಾದನೆಯಾಗಿತ್ತು. ಮನುಷ್ಯರಲ್ಲಿ ಮೇಲು ಕೀಳು ಎಂಬುದು ಇಲ್ಲವೇ ಇಲ್ಲ. ಸೃಷ್ಟಿಕರ್ತನು ಮಾಡಿಲ್ಲ ಮನುಷ್ಯರೇ ಮಾಡಿದರು. ಆ ಕಾರಣಕ್ಕಾಗಿಯೇ ಧರ್ಮ ದೇವರನ್ನು ವ್ಯಾಪಾರದ ಸರಕಾಗಿ ಮಾಡಲಾಗಿದೆ ಎಂಬ ಸತ್ಯವನ್ನು ಸ್ವಂತ ಬುದ್ಧಿಯಿಂದ ಇಬ್ರಾಹೀಮರು ಕಂಡುಕೊಂಡರು. ಇಬ್ರಾಹೀಮರು ತನ್ನ ಉದ್ದೇಶ ಸಾಧನೆಗಾಗಿ ಕರಿಯ ಗುಲಾಮ ಸ್ತ್ರೀಯನ್ನು ಮದುವೆಯಾದರು. ಆ ಸ್ತ್ರೀಯಿಂದ ಹುಟ್ಟಿದ ಮಗ ಇಸ್ಮಾಯೀಲ್. ತಂದೆ ಮಗ ಸೇರಿ ಸ್ವಂತ ಕೈಗಳಿಂದ ಆರಾದನಾಲಯ ಕಟ್ಟಿದರು. ಅದರ ಹೆಸರೇ ಕಾಬಾ. ಆಗ ಅದು ನಾಲ್ಕು ಗೋಡೆಯ ಕಟ್ಟಡ.
ಮರುಭೂಮಿ ಪ್ರದೇಶವಾದುದರಿಂದ ಝಮ್ ಝಮ್ ನೀರಿನ ಒರತೆಯಿಂದ ವಿವಿದ ಗೋತ್ರಗಳು ಆ ಪ್ರದೇಶದಲ್ಲಿ ಬೀಡುಬಿಟ್ಟವು. ಜನವಾಸವಿರುವ ಪ್ರದೇಶವಾಗಿ ಶಾಂತಿ,ಸಮಾನತೆ, ಸಮೃದ್ಧಿಯ ಕೇಂದ್ರವಾಯಿತು. ಇಬ್ರಾಹೀಮರನ್ನು ಸರ್ವಜನರ ನಾಯಕನಾಗಿ(ಜನಪ್ರತಿನಿಧಿ) ಮಾಡಲಾಯಿತು.
ಇಬ್ರಾಹೀಮರು ದೇವಸಂದೇಶವಾಹಕರಾಗಿದ್ದರು ಮಾತ್ರವಲ್ಲ ಅವರಿಗೆ ವೇದಗಳನ್ನು ನೀಡಲಾಗಿತ್ತು. ದೇವನ ಮಾರ್ಗದರ್ಶನದಂತೆ ನೀರಿಗಾಗಿ ಸಫಾ ಮರ್ವ ಬೆಟ್ಟದಲ್ಲಿ ಓಡಾಡಿದ ಕರಿಯ ಗುಲಾಮ ಸ್ತ್ರೀಯ ಹೆಜ್ಜೆ ಗುರುತುಗಳಲ್ಲಿ ನಡೆಯುವುದನ್ನು ಆರಾಧನೆಯಾಗಿ ಆಯ್ಕೆ ಮಾಡಲಾಯಿತು. ಆಕೆ ನಡೆದಾಡಿದ ಸ್ಥಳದಲ್ಲಿ ಪ್ರತಿಯೊಬ್ಬ ದೇವಾರಾಧಕ ಸ್ತ್ರೀ ಪುರುಷರು ನಡೆಯುವುದು ಖಡ್ಡಾಯವಾಯಿತು. ಇಲ್ಲದಿದ್ದರೆ ಹಜ್ ಎಂಬ ಆರಾಧನೆ ಪರಿಪೂರ್ಣ ಆಗುವುದಿಲ್ಲ. ಹಜ್ ಕರ್ಮದಲ್ಲಿ ಹಾಜಿರಾ ಎಂಬ ಹೆಸರಿನ ಕರಿಯ ಗುಲಾಮ ಹೆಣ್ಣು ಲೋಕಾಂತ್ಯದವರೆಗೂ ಗೌರವಿಸಲ್ಪಡುತ್ತಾಳೆ. ಅವಳ ಪಾದ ಸ್ಪರ್ಶವಾದ ಸ್ಥಳ ಪವಿತ್ರವೆಂದು ಜಗದೊಡೆಯನಾದ ಅಲ್ಲಾಹನಿಂದ ಘೋಷಿಸಲ್ಪಟ್ಟಿತು.
ದೇವಸಂದೇಶವಾಹಕರಾಗಿದ್ದ ಇಬ್ರಾಹೀಮ್(ಅ) ಮತ್ತು ಇಸ್ಮಾಯೀಲ(ಅ) ನಿಧನದ ಬಳಿಕ ಕಾಬಾದ ಚಿತ್ರಣವೇ ಬದಲಾಯಿತು. ಆದರೂ ಕಾಬಾದ ಉಸ್ತುವಾರಿ ಇಬ್ರಾಹೀಮರ ವಂಶಕ್ಕೆ ಸಿಕ್ಕಿತ್ತು. ಮುಹಮ್ಮದರ ಜನನವಾಗುವಾಗ ಅಬ್ದುಲ್ ಮುತ್ತಲಿಬ್ ಕಾಬಾದ ಮೇಲ್ವಿಚಾರಕರಾಗಿದ್ದರು. ಆ ಕಾಲದಲ್ಲಿ ಉನ್ನತವಾದ ಹುದ್ದೆ. ಗೌರವಾರ್ಹ ಸ್ಥಾನವಾಗಿತ್ತು.
ಅಬ್ದುಲ್ ಮುತ್ತಲಿಬರ ಹತ್ತು ಮಕ್ಕಳಲ್ಲಿ ಒಬ್ಬರಾದ ಅಬ್ದುಲ್ಲರಿಗೆ ಹುಟ್ಟಿದ ಮಗನೇ ಮುಹಮ್ಮದ್.
ಶಾಂತಿ ಇರಲಿ
- ಶಮೀರ ಜಹಾನ್
IslamKannada News Portal
