Home / ಲೇಖನಗಳು / ಹಜ್ಜ್ ನಿರ್ವಹಿಸಲು ವಿಳಂಬಗೊಳಿಸದಿರಿ

ಹಜ್ಜ್ ನಿರ್ವಹಿಸಲು ವಿಳಂಬಗೊಳಿಸದಿರಿ

ಸಂಗ್ರಹ: ಎನ್.ಎಂ. ಪಡೀಲ್

ಇಬ್ನು ಅಬ್ಬಾಸ್(ರ)ರಿಂದ ವರದಿಯಾಗಿದೆ. ಅಲ್ಲಾಹನ ಪ್ರವಾದಿ(ಸ) ಹೇಳಿದರು: “ಯಾರಾದರೂ ಹಜ್ಜ್ ಕರ್ಮ ನಿರ್ವಹಿಸಲು ಬಯಸಿದರೆ ಅವನು ತಡಮಾಡದೆ ಅದನ್ನು ನಿರ್ವಹಿಸಲಿ! ಕೆಲವೊಮ್ಮೆ ಅವನು ರೋಗಿಯಾಗಬಹುದು ಅಥವಾ ಹಜ್ ಗೆ ಹೋಗುವ ದಾರಿಗಳು ಮುಚ್ಚಿಬಿಡಬಹುದು. ಇಲ್ಲದಿದ್ದರೆ ಅದರ ನಡುವೆ ಏನಾದರೂ ಅಗತ್ಯ ಬರಬಹುದು.”
(ಅಬೂದಾವೂದ್, ಇಬ್ನು ಮಾಜಃ)

ಇಮಾಮ್ ಅಹ್ಮದ್(ರ)ರಿಂದ ವರದಿಯಾದ ಇನ್ನೊಂದು ಹದೀಸ್‌ನಲ್ಲಿ ಹೀಗೆ ಕಾಣಬಹುದು: “ಕಡ್ಡಾಯ ಹಜ್ ನ್ನು ಆದಷ್ಟು ಬೇಗನೆ ನಿರ್ವಹಿಸಿ. ಅದಕ್ಕೆ ಏನೆಲ್ಲ ಅಡ್ಡಿಗಳು ಬರಲಿರಬಹುದೆಂದು ನಿಮ್ಮಲ್ಲಿ ಓರ್ವರಿಗೂ ತಿಳಿದಿಲ್ಲ.”

ಹಜ್ಜ್ ಕಡ್ಡಾಯವಾಗುವವರು ಕೂಡಲೇ ನಿರ್ವಹಿಸಬೇಕೆಂದು ಈ ಹದೀಸ್ ಸ್ಪಷ್ಟಪಡಿಸುತ್ತದೆ. ಇನ್ನೂ ಹೆಚ್ಚು ಅನುಕೂಲಕ್ಕಾಗಿ ಅಥವಾ ಸೌಕರ್ಯಕ್ಕಾಗಿ ಅದನ್ನು ಮುಂದೂಡುವುದು ಒಳ್ಳೆಯದಲ್ಲ. ಭವಿಷ್ಯದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು. ಇನ್ನು ರೋಗವು ಕೂಡ ಹಜ್ಜ್ ಯಾತ್ರೆಗೆ ತಡೆಯಾಗುತ್ತದೆ.

ಯಾವುದೇ ಪುಣ್ಯ ಕರ್ಮಗಳನ್ನು ಸಾಧ್ಯವಾಗುವ ಪ್ರಥಮ ಸಂದರ್ಭದಲ್ಲಿ ನಿರ್ವಹಿಸಬೇಕೆಂದು ಪವಿತ್ರ ಕುರ್‌ಆನ್ ಕೂಡ ಹೇಳುತ್ತದೆ. ಅವಕಾಶ ದೊರೆತವರು ಸಮಯವನ್ನು ಮುಂದೂಡಬಾರದೆಂದು ಪ್ರವಾದಿ(ಸ)ರು ಹೇಳಿರುವರು.

ಅಬ್ದುಲ್ಲಾಹಿಬ್ನು ಮಸ್‌ವೂದ್(ರ) ಹೇಳಿದರು: “ನಿಶ್ಚಯವಾಗಿಯೂ ಹೃದಯಗಳಿಗೆ ಮುನ್ನಡೆಯೂ ಹಿಂಜರಿಕೆಯೂ ಸಂಭವಿಸುತ್ತದೆ. ಆವೇಶ ಮತ್ತು ಉತ್ಸಾಹವಿರುವಾಗ ಅದರ ಪ್ರಯೋಜನ ಪಡೆಯಿರಿ. ಉದಾಸೀನತೆ ಮತ್ತು ಆಲಸ್ಯ ಉಂಟಾಗುವ ಅದನ್ನು ಬಿಟ್ಟು ಬಿಡಿರಿ.

ಎಲ್ಲಾ ಒಳಿತುಗಳನ್ನು ಅತೀ ಬೇಗನೆ ನಿರ್ವಹಿಸಬೇಕೆಂದು ಇಮಾಮ್ ಅಹ್ಮದುಬ್ನು ಹಂಬಲ್(ರ) ಉಪದೇಶಿಸಿರುವರು.
ಅಲಿ(ರ)ರು ಹಾಡಿದರು: ನಿನಗೆ ಉತ್ಸಾಹ ಇರುವಾಗ ನೀನು ಅದನ್ನು ಪ್ರಯೋಜನ ಪಡಿಸು. ಎಲ್ಲಾ ಚಲನೆಗಳಿಗೂ ಒಂದು ನಿಶ್ಚಲತೆಯಿದೆ. ಆವೇಶವಿರುವಾಗ ಒಳಿತು ಮಾಡಲು ನೀನು ಉದಾಸಿನ ತೋರಬೇಡ. ನಿಶ್ಚಲತೆ ಯಾವಾಗ ಎಂದು ನಿನಗೆ ತಿಳಿದಿಲ್ಲ.

ಜನರು ಹಿಂದಡಿ ಇಡುವಾಗ ಅಲ್ಲಾಹನು ಅವರನ್ನು ಹಿಂದೆ ಸರಿಸುತ್ತಾನೆ ಎಂದು ಪ್ರವಾದಿ(ಸ)ರು ಮುನ್ನಚ್ಚರಿಕೆ ನೀಡಿದ್ದಾರೆ.
ಕೆಲವು ವಿಶೇಷ ಕಾರಣಗಳಿಂದ ಪ್ರವಾದಿ(ಸ) ಹಜ್ಜ್ ವಿಳಂಬವಾಯಿತು. ಅದನ್ನು ಹಿಜಿರಾ 9ಕ್ಕೆ ಕಡ್ಡಾಯ ಗೊಳಿಸಲಾಗಿದ್ದರೂ ಒಂದು ವರ್ಷ ಕಳೆದು ಹಿಜಿರಾ 10ಕ್ಕೆ ಪ್ರವಾದಿ(ಸ)ರು ಹಜ್ಜ್ ನಿರ್ವಹಿಸಿದ್ದರು. ನಗ್ನರಾಗಿ ಹಜ್ಜ್ ನಿರ್ವಹಿಸುವ ಬಹುದೇವ ವಿಶ್ವಾಸಿಗಳು ಕಅಬಾದ ಪರಿಸರದಿಂದ ಸಂಪೂರ್ಣವಾಗಿ ಮುಕ್ತರಾಗಲು ಒಂದು ವರ್ಷ ಕಾಯಲಾಗಿತ್ತು. ಅದೇ ರೀತಿ ಮದೀನಾಕ್ಕೆ ಇಸ್ಲಾಮ್ ಸ್ವೀಕರಿಸಲು ಧಾರಾಳ ಯಾತ್ರಾ ತಂಡಗಳು ಹರಿದು ಬರುತ್ತಿದ್ದ ವರ್ಷವಾಗಿತ್ತು ಹಿಜಿರಾ 9. ಆದ್ದರಿಂದ ಅವರಿಗೆಲ್ಲಾ ಇಸ್ಲಾಮನ್ನು ಭೋದಿಸುವ ನಿಬಿಡತೆಯಿಂದಾಗಿ ಪ್ರವಾದಿ(ಸ)ರು ಹಜ್ಜ್ ನಿರ್ವಹಣೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿದ್ದರು. ಈ ವಿಷಯದಲ್ಲಿ ಪ್ರವಾದಿ(ಸ)ರ ನಿರ್ವಹಣೆಗಿಂತ ಅವರ ಮಾತನ್ನು ವಿಶ್ವಾಸಿಗಳು ಅನುಸರಿಸಬೇಕು. ತಮ್ಮ ಜೀವನದ ಎಲ್ಲಾ ಕೆಲಸ ಕಾರ್ಯಗಳು ಮುಗಿಯುವವರೆಗೆ ಹಜ್ಜ್ ಕರ್ಮವನ್ನು ಮುಂದೂಡವವರಿದ್ದಾರೆ. ವ್ಯಾಪಾರ, ಮಕ್ಕಳ ಮದುವೆ, ಮನೆ ಕಟ್ಟುವುದು… ಹೀಗೆ ಎಲ್ಲವನ್ನೂ ಮುಗಿಸುವಾಗ ಆರೋಗ್ಯ ಕೈ ಕೊಟ್ಟಿರುತ್ತದೆ. ಆದ್ದರಿಂದ ಹಜ್ಜ್ ನಿರ್ವಹಿಸುವವರಲ್ಲಿ ವಯಸ್ಸಾದವರು ಹೆಚ್ಚಿರುತ್ತಾರೆ. ಅಲ್ಲಿನ ಕರ್ಮಗಳನ್ನು ನಿರ್ವಹಿಸಲು ಯೌವನದ ಉತ್ಸಾಹ, ಶಕ್ತಿ ಅವರಲ್ಲಿರುವುದಿಲ್ಲ. ಆದ್ದರಿಂದ ಪ್ರವಾದಿ(ಸ)ಯವರ ಈ ಹದೀಸ್‌ನಂತೆ ಹಜ್ಜ್ ಕಡ್ಡಾಯವಾದ ಸಂದರ್ಭದಲ್ಲೇ ವಿಳಂಬ ಮಾಡದೆ ನಿರ್ವಹಿಸಬೇಕು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …