✍️ ಶಮೀಮ ಝಕೀರ್
ಕುಟುಂಬ ಜೀವನದಲ್ಲಿ ಪ್ರವಾದಿ ಪತ್ನಿಯರು ಅತ್ಯುನ್ನತ ಮಾದರಿಯಾಗಿದ್ದಾರೆ. ಪವಿತ್ರ ಕುರ್ಆನ್ನ ನೆರಳಿನಲ್ಲಿ ಪ್ರವಾದಿಯವರು(ಸ) ಬೆಳೆಸಿದ ಆ ಪತ್ನಿಯರು ಇಸ್ಲಾಮೀ ಲೋಕಕ್ಕೆ ಮತ್ತು ಮುಸ್ಲಿಂ ಮಹಿಳೆಯರಿಗೆ ಜೀವನದ ಪಾಠವಾಗಿದ್ದಾರೆ. ಪ್ರವಾದಿಯ(ಸ) ಜೀವನವು ಬದುಕಿನಲ್ಲಿ ಒಬ್ಬ ವ್ಯಕ್ತಿಯು ತನ್ನ ಸಂಗಾತಿಯೊಂದಿಗೆ ಹೊಂದಿರಬೇಕಾದ ಮೌಲ್ಯಗಳು ಹಾಗೂ ಮಾದರಿ ಯಾವುದೆಂದು ಕಲಿಸಿಕೊಡುತ್ತದೆ. ಪ್ರವಾದಿ(ಸ) ಅವರಿಂದ ದೇವ ಸಂದೇಶವನ್ನು ಆಲಿಸಿ, ಯಾವುದೇ ಒತ್ತಡ ಅಥವಾ ಬಲವಂತವಿಲ್ಲದೆ ಇಸ್ಲಾಂ ಸ್ವೀಕರಿಸಿದ ಪ್ರಥಮ ವ್ಯಕ್ತಿ ಖತೀಜತುಲ್ ಕುಬ್ರಾ(ರ)ರು ಸಮಾಜದಲ್ಲಿ ಪ್ರಥಮವಾಗಿ ಅಲ್ಲಾಹನ ಮುಂದೆ ಸಾಷ್ಟಾಂಗ ವೆರಗಿದ ಮಹಿಳೆಯಾಗಿದ್ದರು.
ಪ್ರವಾದಿ(ಸ) ಹೇಳಿರುವರು, ಸೋಮವಾರ ನನಗೆ ಪ್ರವಾದಿತ್ವ ಲಭಿಸಿತು. ಅಂದು ಸೂರ್ಯಾಸ್ತಮಾನಕ್ಕೆ ಮೊದಲು ಖದೀಜಾ(ರ) ದೇವನ ಮುಂದೆ ನಮಾಝ್ ನಿರ್ವಹಿಸಿದ್ದರು. ಆ ದಿವ್ಯ ಬೆಳಕನ್ನು ಮೊಟ್ಟಮೊದಲ ಬಾರಿಗೆ ಅಪ್ಪಿಕೊಳ್ಳುವ ಅಪರಿಮಿತ ಸೌಭಾಗ್ಯವನ್ನು ಪಡೆದ ಮಹಿಳಾಮಣಿ. ಇಸ್ಲಾಮ್ನ ಆರಂಭ ಕಾಲದಲ್ಲಿ ಇಸ್ಲಾಮ್ ಸ್ವೀಕರಿಸುವುದಕ್ಕಿಂತ ಅದರ ಚಿಹ್ನೆಗಳನ್ನು ಪ್ರಕಟಪಡಿಸುವುದು ಹೆಚ್ಚು ಸಮಸ್ಯೆಯಾಗಿತ್ತು. ಇದಕ್ಕೆ ಮನೋಧಾರ್ಡ್ಯ ಹಾಗೂ ಧೈರ್ಯ ಅತ್ಯಗತ್ಯವಾಗಿತ್ತು. ಈ ಸವಾಲುಗಳನ್ನು ಧೃತಿಗೆಡದೆ ನಿಭಾಯಿಸಲು ಖದೀಜಾರಿಗೆ ಸಾಧ್ಯವಾಯಿತು.
ವ್ಯಾಪಾರ ಮಾಡುತ್ತಿದ್ದ, ಹಣ ಸಂಪಾದಿಸುತ್ತಿದ್ದ ಖದೀಜಾರ ಅಪಾರ ಸಾಮರ್ಥ್ಯದ ಕುರಿತು ಜರ್ಮನ್ ಗ್ರಂಥಕರ್ತ ಡಿಗ್ರಿಕ್ ಹೋನಿಕ್ ಬರೆಯುತ್ತಾರೆ,
ಪ್ರವಾದಿವರ್ಯರು(ಸ) ಧ್ಯಾನ ಮಾಡುತ್ತಿದ್ದ ಹಿರಾ ಗುಹೆಯು ನೂರ್ ಪರ್ವತದಲ್ಲಿತ್ತು. ಆ ದೊಡ್ಡ ಪರ್ವತವನ್ನು ಏರಿ ಅಲ್ಲಿಗೆ ತಲುಪುತ್ತಿದ್ದ ಮರೆಯಲಾಗದ ವ್ಯಕ್ತಿತ್ವ ಖದೀಜಾ(ರ) ರದ್ದು. ಇಂದಿನ ಕಾಲದಲ್ಲೂ ಏರಲು ಕಷ್ಟವಾಗುತ್ತಿರುವ ಆ ಪರ್ವತವನ್ನು 14 ಶತಮಾನಗಳ ಹಿಂದೆ ಐವತ್ತಕ್ಕಿಂತಲೂ ಹೆಚ್ಚು ಪ್ರಾಯದ ಖದೀಜಾ ತನ್ನ ಪ್ರಿಯತಮನಿಗೆ ಆಹಾರದ ಪೊಟ್ಟಣವನ್ನು ತೆಗೆದುಕೊಂಡು ಹತ್ತಿ ಇಳಿಯುತ್ತಿದ್ದರು. ಈ ರೀತಿ ಪ್ರೀತಿಸಲು ಖದೀಜಾರಿಗೆ ಹೇಗೆ ಸಾಧ್ಯವಾಯಿತು? ಇಸ್ಲಾಮಿನ ವೈವಾಹಿಕ ಜೀವನದ ತಾಯಿಬೇರು ಆಗಿರುವ ಸ್ನೇಹ ಮತ್ತು ಕರುಣೆಯೇ ಅದಕ್ಕೆ ಕಾರಣ. ಅಂತಹ ಮವದ್ದತ್ ಮತ್ತು ರಹ್ಮತ್ ಇದ್ದರೆ ಮಾತ್ರ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಗುರಿಯನ್ನು ಪರಸ್ಪರ ಸಹಕಾರದೊಂದಿಗೆ ಪೂರ್ತಿಗೊಳಿಸಲು ಸಾಧ್ಯ. ಆಗ ಮಾತ್ರ ಕುಟುಂಬದಲ್ಲಿ ಸಂತೃಪ್ತಿ ಹಾಗೂ ಶಾಂತಿ ನೆಮ್ಮದಿ ಸಾಧ್ಯವಾಗುವುದು, ಇದನ್ನು ಕುರ್ಆನ್ ವಿವರಿಸಿದ ಶೈಲಿಯಲ್ಲಿ ನೋಡುವಾಗ, ಇಸ್ಲಾಮಿನ ಕೌಟುಂಬಿಕ ಕಲ್ಪನೆಯೇ ಸ್ನೇಹ ಮತ್ತು ಕರುಣೆಯೆಂದೂ, ಸ್ತ್ರೀ -ಪುರುಷರ ನಡುವಿನ ದಾಂಪತ್ಯ ಸಂಬಂಧ ಸ್ಥಾಪಿಸಿದ ಉದ್ದೇಶ ಪರಸ್ಪರ ಪ್ರೀತಿ, ನೆಮ್ಮದಿಯನ್ನು ಅನುಭವಿಸಲಿಕ್ಕೆಂದೂ ಅರ್ಥವಾಗುತ್ತದೆ. ಪ್ರವಾದಿ(ಸ) ಮತ್ತು ಖದೀಜಾ(ರ)ರ ದಾಂಪತ್ಯ ಜೀವನವು ಅತೀ ಮನೋಹರವಾದ ಪ್ರೀತಿಯ ನೊಗದಿಂದ ಬಂಧಿತವಾಗಿತ್ತು.
ತನ್ನ ಸಂಪತ್ತನ್ನು ಸಂಪೂರ್ಣವಾಗಿ ಧರ್ಮಕ್ಕಾಗಿ ಸಮರ್ಪಿಸಿ, ಜೀವನದ ಅಂತಿಮ ಗಳಿಗೆಯವರೆಗೆ ಪ್ರವಾದಿಯವರಿಗೆ ನೆರಳಾಗಿ ನಿಂತ ಮಹಾನ್ ವ್ಯಕ್ತಿತ್ವ ಖದೀಜಾ(ರ)ರದ್ದು. ಜನರು ನನ್ನನ್ನು ತಿರಸ್ಕರಿಸಿದಾಗ ಖದೀಜ ನನ್ನ ಮೇಲೆ ವಿಶ್ವಾಸವಿರಿಸಿದರು. ಜನರು ನನ್ನನ್ನು ಸುಳ್ಳಾಗಿಸಿದಾಗ ನನ್ನ ಮಾತು ಸತ್ಯವೆಂದು ಖದೀಜಾ(ರ) ಹೇಳಿದರು. ಜನರು ನನ್ನ ಕೈ ಬಿಟ್ಟಾಗ ಸಂಪತ್ತನ್ನು ನೀಡಿ ಆಕೆ ಸಾಂತ್ವನಗೊಳಿಸಿದರು ಎಂದು ಪ್ರವಾದಿ(ಸ) ಹೇಳಿರುವರು. ತನ್ನ ಪ್ರಿಯತಮೆಯ ವಿಯೋಗವನ್ನು ತಾಳಲಾರದೆ ಬಿಕ್ಕಿ ಬಿಕ್ಕಿ ಅತ್ತ ಪ್ರವಾದಿವರ್ಯರ(ಸ) ಚರಿತ್ರೆ ಇತಿಹಾಸದಲ್ಲಿ ದಾಖಲಾಗಿದೆ. ಖದೀಜಾರ ಬಗ್ಗೆ ಮಾತನಾಡುವಾಗಲೆಲ್ಲಾ ಕಣ್ಣಂಚಿನಲ್ಲಿ ನೀರು ನಿಲ್ಲುತ್ತಿದ್ದ, ಮಾತುಗಳು ಅರ್ಧದಲ್ಲೇ ಕತ್ತರಿಸಲ್ಪಡುತ್ತಿದ್ದ, ಹೃದಯ ಕಲಕುವಂತಾಗುವ, ಶಬ್ದವು ನಡುಗುತ್ತಿದ್ದ ಪ್ರವಾದಿಯನ್ನು ಚರಿತ್ರೆಯಲ್ಲಿ ಕಾಣಬಹುದು.
ಒಂದು ಅನಂತ ಪ್ರಣಯ ಕಾವ್ಯದಂತೆ. ಆಯಿಶಾ(ರ)! ಪ್ರವಾದಿವರ್ಯರ(ಸ) ನೆರಳಿನಲ್ಲಿ ಶಿಕ್ಷಣವನ್ನು ಗಳಿಸಿದ ಮಹಾ ಪ್ರತಿಭಾವಂತೆ. ಧಾರ್ಮಿಕ ನಿಯಮಗಳಲ್ಲಿ ನಾಲ್ಕರಲ್ಲಿ ಒಂದು ಭಾಗ ನಾವು ಆಯಿಶಾರಿಂದ ಕಲಿತಿದ್ದೇವೆ.
ಇಸ್ಲಾಮಿನ ಸಂದೇಶವನ್ನು ಅವರು ಮುಂದಿನ ಪೀಳಿಗೆಗೆ ವರ್ಗಾಯಿಸಿದರು. ಸಾರ್ವಜನಿಕ ಹಾಗೂ ಖಾಸಗಿ ಮತ್ತು ಶೈಕ್ಷಣಿಕ ಸಂಶೋಧನೆಗಳಲ್ಲೂ ಆ ವ್ಯಕ್ತಿತ್ವದ ಶ್ರೇಷ್ಠತೆಯನ್ನು ಕಾಣಬಹುದು. ಇಂದು ಕೋಮುವಾದಿಗಳು ಆಯಿಶಾರೊಂದಿಗಿನ ಪ್ರವಾದಿವರ್ಯರ(ಸ) ದಾಂಪತ್ಯ ಜೀವನವನ್ನು ಮುಂದಿಟ್ಟುಕೊಮಡು ಕಟ್ಟುಕಥೆಗಳು, ಅಪಹಾಸ್ಯದ ಕಥೆಗಳನ್ನು ಇಸ್ಲಾಮ್ ಮತ್ತು ಪ್ರವಾದಿವರ್ಯರಿಗೆ(ಸ) ವಿರುದ್ಧವಾಗಿ ಸೃಷ್ಟಿಸುತ್ತಿದ್ದಾರೆ. ಜ್ಞಾನ, ಪಾಂಡಿತ್ಯ, ವಿವೇಕ, ಜಿಜ್ಞಾಸೆ ಹಾಗೂ ನಿರೂಪಣಾ ಶೈಲಿಯನ್ನು ಮೈಗೂಡಿಸಿಕೊಂಡು, ಮಹಾನ್ ಶಿಕ್ಷಕಿ, ವಿದ್ವಾಂಸೆ ಮತ್ತು ನ್ಯಾಯಶಾಸ್ತ್ರಜ್ಞೆಯಾಗಿ ಅವರ ಬೆಳವಣಿಗೆಯನ್ನು ಕಾಣಲು ಆ ಕುರುಡು ಕಣ್ಣುಗಳಿಗೆ ಸಾಧ್ಯವಾಗುತ್ತಿಲ್ಲ.
ಪ್ರವಾದಿಯೊಂದಿಗಿನ ಜೀವನ ಕಾಲದಲ್ಲೇ ಆಯಿಶಾರ ಸ್ವಾಭಿಮಾನ, ಧೈರ್ಯ, ರಾಜಕೀಯ ದೃಷ್ಟಿಕೋನವನ್ನು ಹೊರತೆಗೆದ ಅನೇಕ ಸಂದರ್ಭಗಳಿವೆ. ಅವರ ವಿರುದ್ಧ ಅಪಪ್ರಚಾರ ಮಾಡಿದ್ದನ್ನು ವಿಮರ್ಶಿಸಿ ಆಯಿಶಾರಿಗೆ ಅನುಕೂಲಕರವಾಗಿದ್ದ ಸೂಕ್ತ ಕುರ್ಆನ್ನಲ್ಲಿ ಅವತೀರ್ಣವಾಯಿತು. ಪ್ರವಾದಿ(ಸ)ರ ವಿಯೋಗದ ನಂತರ ಆಯಿಶಾ ಅರ್ಧ ಶತಮಾನದಷ್ಟು ಕಾಲ ಇಸ್ಲಾಮಿಕ್ ಸಮುದಾಯದ ವಿಶ್ವಕೋಶವಾಗಿ ಕಾರ್ಯನಿರ್ವಹಿಸಿದರು.
ಕರ್ಮಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದ ಅವರು ಎರಡು ಸಾವಿರಕ್ಕಿಂತಲೂ ಅಧಿಕ ಹದೀಸ್ಗಳನ್ನು ತನ್ನ ಇಪ್ಪತ್ತನೇ ವಯಸ್ಸಿಗೆ ಮೊದಲೇ ವರದಿ ಮಾಡಿದ್ದರು. ಆಯಿಶಾ(ರ)ರಂತೆ ಭಾಷಾ ನೈಪುಣ್ಯತೆಯನ್ನು ಗಳಿಸಿದ ವ್ಯಕ್ತಿಯನ್ನು ನಾವು ಕಂಡಿಲ್ಲವೆಂದು ಸಹಾಬಿಗಳು ಹೇಳುತ್ತಿದ್ದರು. ಕಾನೂನು, ಆಡಳಿತ, ಯುದ್ಧ ಮುಂತಾದ ರಾಷ್ಟ್ರ ನಿರ್ಮಾಣದ ಪ್ರಮುಖ ವಿಷಯಗಳಲ್ಲಿ ಸಹಾಬಿಗಳು ಆಯಿಶಾರ(ರ) ಸಲಹೆ ಪಡೆಯುತ್ತಿದ್ದರು. ಪ್ರವಾದಿ(ಸ)ರು ಆಯಿಶಾ(ರ) ರನ್ನು ಬಹಳವಾಗಿ ಪ್ರೀತಿಸುತ್ತಿದ್ದರು. ಒಮ್ಮೆ ಪ್ರವಾದಿ(ಸ)ರೊಂದಿಗೆ ನಿಮಗೆ ಯಾರು ಅತ್ಯಂತ ಇಷ್ಟ ಎಂದು ಕೇಳಿದಾಗ ಅವರು ‘ಆಯಿಶಾ’ ಎಂದಿದ್ದರು. ಪುರುಷರಲ್ಲಿ ಯಾರೆಂದು ಕೇಳಿದಾಗ ಆಯಿಶಾರ(ರ) ತಂದೆ ಅಬೂಬಕರ್ ಎಂದು ಹೇಳಿದ್ದರು.
ಪ್ರವಾದಿ(ಸ)ರು ಆಯಿಶಾ(ರ)ರನ್ನು ಪ್ರೀತಿಯಿಂದ ಹುಮೈರಾ ಎಂದು ಕರೆಯುತ್ತಿದ್ದರು. ಇನ್ನೊಂದು ಹದೀಸ್ ಹೀಗಿದೆ, “ಆಯಿಶಾ, ನಿನಗೆ ಜಿಬ್ರೀಲ್(ಅ) ಸಲಾಂ ತಿಳಿಸಿದ್ದಾರೆ.” ಆಗ ಆಯಿಶಾ ಹೇಳಿದರು, “ನಾನು ಜಿಬ್ರೀಲ್ಗೂ ಸಲಾಂ ಹೇಳಿದ್ದೇನೆಂದು ನೀವು ತಿಳಿಸಿ.”
ಪ್ರವಾದಿ(ಸ)ರು ಆಯಿಶಾರ ಯೌವನವನ್ನೂ ತುಂಟತವನ್ನೂ ಗೌರವಿಸಿಕೊಂಡು ಪ್ರೀತಿಸಿದರು. ನಾವು ಚರಿತ್ರೆಯಲ್ಲಿ ಪ್ರವಾದಿಯೊಂದಿಗೆ ಜಗಳ ಮಾಡುವ ಆಯಿಶಾರನ್ನು ಕಾಣುತ್ತೇವೆ. ಪ್ರವಾದಿ ಆಯಿಶಾರೊಂದಿಗೆ ಓಟ ಸ್ಪರ್ಧೆಯನ್ನು ನಡೆಸಿದ್ದರು. ಒಮ್ಮೆ ಪ್ರವಾದಿಯವರು ಮನೆಗೆ ಬಂದಾಗ ಆಹಾರಕ್ಕಾಗಿ ಹಿಟ್ಟು ಕಲಸಿದ ಕೈಯೊಂದಿಗೆ ಆಯಿಶಾ ನಿದ್ರೆ ಹೋದದ್ದು ಕಂಡಿತು. ಶಬ್ದ ಮಾಡದೇ ಪ್ರವಾದಿವರ್ಯರು(ಸ) ಅದನ್ನು ಪಾಕ ಮಾಡಿದರು.
ಒಮ್ಮೆ ಸಹಪತ್ನಿಯರಲ್ಲಿ ಓರ್ವರು ಕೊಟ್ಟ ಆಹಾರದ ಕಟ್ಟನ್ನು ಆಯಿಶಾ ಎಸೆಯುತ್ತಾರೆ. ನಂತರ ಪಶ್ಚಾತ್ತಾಪ ಪಟ್ಟ ಆಯಿಶಾ ಅದಕ್ಕೆ ಪರಿಹಾರವೇನೆಂದು ಕೇಳಿದಾಗ, ಪುನಃ ಅಂಥದ್ದೇ ಆಹಾರ ತಯಾರಿಸಿ ಅವರಿಗೆ ಕಳುಹಿಸಿಕೊಡಲು ತಿಳಿಸಿದರು. ಇನ್ನೊಮ್ಮೆ ಕೋಪದಿಂದ ಆಹಾರದ ತಟ್ಟೆಯನ್ನು ಕೆಳಗೆ ಹಾಕಿದಾಗ ಪ್ರವಾದಿ(ಸ)ರು ಅದನ್ನು ಹೆಕ್ಕಿ ಪಾತ್ರೆಗೆ ಹಾಕಿದ್ದನ್ನೂ ನಾವು ತಿಳಿದಿದ್ದೇವೆ.
ಹೀಗೆ ಆತ್ಮಾಭಿಮಾನ, ಜ್ಞಾನ, ದಾರ್ಶನಿಕತೆಯನ್ನು ಗಳಿಸಿದ ವಿದ್ವಾಂಸೆಯಾದ ಆಯಿಶಾ(ರ)ರನ್ನು ಪ್ರವಾದಿಯವರು(ಸ) ತಾಳ್ಮೆ ಹಾಗೂ ಅಷ್ಟೇ ಪ್ರೇಮವನ್ನು ಧಾರೆಯೆರೆದು ರೂಪಿಸಿದರು.
ಪ್ರವಾದಿವರ್ಯರ(ಸ) ಪತ್ನಿಯಂದಿರು ವಿಭಿನ ದೃಷ್ಟಿಕೋನಗಳನ್ನು ಹೊಂದಿದ್ದು, ವಿಭಿನ್ನ ವಾತಾವರಣಗಳಲ್ಲಿ ಬೆಳೆದು ಬಂದಿದ್ದರು. ಅವರಲ್ಲಿ ಸೌಂದರ್ಯವಂತರೂ ಇಲ್ಲದವರೂ ಸಾಮಾನ್ಯರೂ ವಿಧವೆಯರೂ ಅನಾಥೆಯರೂ ಇದ್ದರು. ತನ್ನ ಬದುಕನ್ನು ಹಂಚಿಕೊಂಡ ಸಂಗಾತಿಗಳ ಮೂಲಕ ಪ್ರವಾದಿ(ಸ)ರು ಸ್ತ್ರೀ ಸಮೂಹಕ್ಕೆ ಮಾದರಿಯಾಗಿದ್ದಾರೆ. ಪ್ರವಾದಿ(ಸ)ರ ಕೌಟುಂಬಿಕ ಜೀವನವನ್ನು ತಿರುಗಿ ನೋಡುವಾಗ ಯಾವುದೇ ಸಮಸ್ಯೆಗಳಿಗೂ ಪರಿಹಾರವಿರುವ ಮಹಿಳೆಯರ ಜೀವನವನ್ನು ಓದಲು ಸಾಧ್ಯವಿದೆ.
ಹೆಣ್ಣನ್ನು ಅಪಮಾನವೆಂದು ಭಾವಿಸುತ್ತಿದ್ದ ಸಮಾಜದಲ್ಲಿ ಹುಟ್ಟಿದ ಮಗು ಹೆಣ್ಣೆಂದರಿತ ಕೂಡಲೇ ಜೀವಂತ ಹೂಳುತ್ತಿದ್ದ ಸಮಯದಲ್ಲಿ ಓರ್ವ ಮನುಷ್ಯ ತನ್ನ ಕರುಳಿನ ಕುಡಿಯಾದ ಪ್ರಿಯ ಪುತ್ರಿ ಫಾತಿಮಾರನ್ನು ಮಡಿಲಲ್ಲಿ ಕುಳ್ಳಿರಿಸಿ ಲಾಲಿಸುತ್ತಾರೆ. ಜನರು ಪ್ರವಾದಿಯವರ(ಸ) ಸುತ್ತಲೂ ಕುಳಿತು ಗಂಭೀರವಾದ ಚರ್ಚೆಗಳನ್ನು ನಡೆಸುತ್ತಿದ್ದಾಗ ಪುಟ್ಟ ಫಾತಿಮಾ ತಂದೆಯ ಮಡಿಲಲ್ಲಿ ಕುಳಿತು ಅವರ ಗಡ್ಡದೊಂದಿಗೆ ಆಡುತ್ತಿದ್ದರು. ಹೀಗೆ ಬಹಳ ಧೈರ್ಯ ಹಾಗೂ ಆತ್ಮ ವಿಶ್ವಾಸ ನೀಡಿ ಫಾತಿಮಾರನ್ನು(ರ) ಬೆಳೆಸಿದರು.
ತಾನು ಸಭೆಗೆ ಬಂದಾಗ ಎದ್ದು ನಿಲ್ಲಬಾರದೆಂದು ಹೇಳಿದ ಪ್ರವಾದಿ ಮಗಳು ಫಾತಿಮಾ ಬಂದರೆ ಎದ್ದು ನಿಂತು ಅವರ ಕೈ ಹಿಡಿದು ಸಲಾಂ ಹೇಳುತ್ತಿದ್ದರು.
ತನ್ನ ಜೀವನದಲ್ಲಿ ಸಂದಿಗ್ಧ ಪರಿಸ್ಥಿತಿಗಳು, ನೋವುಗಳು ಉಂಟಾದಾಗ ಫಾತಿಮಾ(ಸ)ರ ಮನೆಗೆ ಹೋಗುತ್ತಿದ್ದ ಪ್ರವಾದಿ(ಸ)ರನ್ನು ನಾವು ಕಾಣಬಹುದು. ಫಾತಿಮಾರೊಂದಿಗೆ ಬಹಳ ಹೊತ್ತು ಮಾತನಾಡುವ, ಫಾತಿಮಾರ(ರ) ಮಡಿಲಲ್ಲಿ ತಲೆಯಿಟ್ಟು ಮಲಗುವ ಪ್ರವಾದಿ, ಪುತ್ರಿ ಮತ್ತು ತಂದೆಯು ನಡುವೆ ಎಂತಹ ಸಂಬಂಧವಿರಬೇಕೆಂಬುದನ್ನು ಇದು ತೋರಿಸಿಕೊಡುತ್ತದೆ.
ಫಾತಿಮಾ(ರ) ಉತ್ತಮ ನಡತೆ ಮತ್ತು ವಿನಯದ ಮಾತು ಅವರ ವ್ಯಕ್ತಿತ್ವದ ಭಾಗವಾಗಿತ್ತು. ತಾನು ಸ್ವತಃ ಹಸಿದಿದ್ದರೂ ತನ್ನಲ್ಲಿದ್ದ ಆಹಾರವನ್ನು ಅಗತ್ಯ ಉಳ್ಳವರಿಗೆ ನೀಡುತ್ತಿದ್ದ ಫಾತಿಮಾ(ರ) ಬಡ ಹಾಗೂ ದಾರಿದ್ರ್ಯವಿದ್ದ ವ್ಯಕ್ತಿಗಳೊಂದಿಗೆ ಅತೀ ದಯಾಳುವಾಗಿದ್ದರು. ಈ ಲೋಕದ ಬದುಕಿನ ಆಡಂಬರ ಹಾಗೂ ಸುಖ ಸೌಕರ್ಯಗಳೊಂದಿಗೆ ಅವರಿಗೆ ಸ್ವಲ್ಪವೂ ವ್ಯಾಮೋಹವಿರಲಿಲ್ಲ.
ಮದೀನದಲ್ಲಿ ಅವರು ತನ್ನ ತಂದೆಯೊಂದಿಗೆ ಮಸೀದಿಗೆ ಸೇರಿಸಿ ನಿರ್ಮಿಸಿದ ಸರಳ ಮನೆಯಲ್ಲಿ ವಾಸಿಸಿದರು. ಹಿಜರಿ ಕಳೆದು ಎರಡು ವರ್ಷದಲ್ಲಿ ಅವರಿಗೆ ವಿವಾಹ ಪ್ರಸ್ತಾಪ ಬರುತ್ತಿದ್ದ ಸಂದರ್ಭದಲ್ಲಿ ಅಬೂತಾಲಿಬ್ರ ಮಗ ಅಲಿ(ರ)ರು ಧೈರ್ಯ ತಂದುಕೊಂಡು ಪ್ರವಾದಿ(ಸ)ರ ಬಳಿಗೆ ಹೋದರು. ಹೇಗೆ ವಿಷಯ ಹೇಳುವುದೆಂದು ತಿಳಿಯದೆ ನೆಲವನ್ನೇ ದಿಟ್ಟಿಸುತ್ತಿದ್ದ ಅಲೀ(ರ)ರೊಂದಿಗೆ ಪ್ರವಾದಿ(ಸ)ರು ಕೇಳಿದರು, “ನೀವು ಯಾಕೆ ಬಂದಿದ್ದೀರಿ? ಏನಾದರೂ ಅವಶ್ಯಕತೆ ಇದೆಯೇ” ಎಂದು ಕೇಳಿದಾಗ ಅಲಿಯವರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ಆಗ ಪ್ರವಾದಿ(ಸ) ಕೇಳಿದರು, “ನೀವು ಫಾತಿಮಾರ ವಿವಾಹದ ಬಗ್ಗೆ ಮಾತನಾಡಲು ಬಂದಿರಬೇಕು.”
‘ಹೌದು’ ಎಂದು ಅಲೀ ಉತ್ತರಿಸುತ್ತಾರೆ. ಇನ್ನೊಂದು ಹದೀಸ್ನಲ್ಲಿ ಪ್ರವಾದಿ(ಸ), ‘ಮರ್ಹಬನ್ ವಅಹ್ಲನ್- ಕುಟುಂಬಕ್ಕೆ ಸ್ವಾಗತ’, ಇನ್ನೊಂದು ವರದಿಯಲ್ಲಿ, ‘ಮಹ್ರ್ ಆಗಿ ನೀಡಲು ಏನಾದರೂ ಇದೆಯೇ ಎಂದು ಅಲೀ(ರ) ರೊಂದಿಗೆ ಕೇಳಿದರು. ಫಾತಿಮಾರ(ರ) ದಾಂಪತ್ಯ ಜೀವನ ಸರಳವಾಗಿತ್ತು. ಭೌತಿಕ ಸೌಕರ್ಯಗಳಿಗೆ ಸಂಬಂಧಿಸಿದಂತೆ ಅದು ಕಷ್ಟ ಮತ್ತು ಅಭಾವದ ಜೀವನವಾಗಿತ್ತು. ಅಲೀ(ರ)ರು ತಮ್ಮ ಜೀವನದುದ್ದಕ್ಕೂ ಬಡವರಾಗಿದ್ದರು. ಸಹೋದರಿಯರಲ್ಲಿ ಧನಿಕನನ್ನು ವಿವಾಹವಾಗದವರು ಫಾತಿಮಾ(ರ) ಮಾತ್ರವಾಗಿದ್ದರು. ಅಲೀ(ರ)ರೊಂದಿಗಿನ ಜೀವನವು ತಂದೆಯ ಮನೆಯ ಬದುಕಿಗಿಂತ ಕಠಿಣವಾಗಿತ್ತೆಂದು ಹೇಳಬಹುದು.
ತೀವ್ರ ಬಡತನ, ಹಸಿವಿನಿಂದ ಮುಕ್ತರಾಗಲು ಅಲೀ(ರ)ರು ನೀರು ಹೊತ್ತು ಸಾಗಿಸುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿದರು. ಫಾತಿಮಾ(ರ) ಮನೆ ಕೆಲಸವನ್ನು ಮಾಡಿದರು. ಒಂದು ದಿನ ಫಾತಿಮಾ ಹೇಳಿದರು, ‘ನನ್ನ ಕೈಗಳು ಬಿರುಕು ಬಿಡುತ್ತಿದೆ.’ ಆಗ ಅಲಿ(ರ)ರು ‘ನಾನು ಎದೆ ನೋಯುವ ತನಕ ನೀರು ಸೇದಿದ್ದೇನೆ’ ಎಂದು ಹೇಳಿದರು.
ತನಗೆ ಸಹಾಯ ಮಾಡಲು ಯಾರನ್ನಾದರೂ ನೀಡುವಿರಾ ಎಂದು ಅಲೀ(ರ)ರು ಪ್ರವಾದಿ(ಸ)ರ ಬಳಿಗೆ ಫಾತಿಮಾರನ್ನು (ರ) ಕಳಿಸಿದಾಗ, ಫಾತಿಮಾ ಮನಸ್ಸಿಲ್ಲದ ಮನಸ್ಸಿನೊಂದಿಗೆ ಅಲ್ಲಿಗೆ ಹೋದರು. ಹೇಗೂ ಧೈರ್ಯ ತಂದುಕೊಂಡು ವಿಷಯ ಪ್ರವಾದಿಯವರಿಗೆ ತಿಳಿಸಿದಾಗ ಅವರು ಅದಕ್ಕೆ ಒಪ್ಪಲಿಲ್ಲ. ಬದಲಿಗೆ ಅದಕ್ಕಿಂತಲೂ ಕಷ್ಟದಲ್ಲಿರುವವರ ಕುರಿತು ಪ್ರಸ್ತಾಪಿಸಿ ದಿಕ್ರ್ ಗಳನ್ನು ಅಧಿಕವಾಗಿಸಲು ಹೇಳಿದರು.
ಫಾತಿಮಾರ ಮನೆಯಲ್ಲಿ ಯಾವಾಗಲೂ ಆಹಾರವಿರುತ್ತಿರಲಿಲ್ಲ. ಒಮ್ಮೆ ಪ್ರವಾದಿಯವರು(ಸ) ಹಸಿದಿದ್ದಾಗ ಫಾತಿಮಾರ(ರ) ಬಳಿಗೆ ಬಂದರು. ಫಾತಿಮಾರ ಬಳಿಯೂ ಆಹಾರವಿರಲಿಲ್ಲ. ನಂತರ ಪ್ರವಾದಿವರ್ಯ(ಸ)ರಿಗೆ ಆಹಾರ ಲಭಿಸಿದಾಗ ಎರಡು ರೊಟ್ಟಿ ಒಂದು ತುಂಡು ಮಾಂಸವನ್ನು ಫಾತಿಮಾರಿಗೆ ಕಳಿಸಿಕೊಟ್ಟರು. ಇನ್ನೊಮ್ಮೆ ಅಬೂ ಅಯ್ಯೂಬ್ ಅಲ್ ಅನ್ಸಾರಿಯವರ ಮನೆಗೆ ಹೋಗಿ ಅವರು ನೀಡಿದ ಆಹಾರದಿಂದ ಸ್ವಲ್ಪಂಶ ಫಾತಿಮಾರಿಗಾಗಿ ತೆಗೆದಿರಿಸಿದರು. ಪ್ರವಾದಿವರ್ಯರು(ಸ) ಹಲವು ದಿನದಿಂದ ಆಹಾರವಿಲ್ಲದೆ ಕಳೆಯುತ್ತಿದ್ದಾರೆಂದೂ ತಮಗೆ ಲಭಿಸುವಾಗ ಅದರಲ್ಲೊಂದು ಪಾಲು ತನಗೆ ನೀಡುತ್ತಿದ್ದರೆಂದೂ ಫಾತಿಮಾರಿಗೆ ತಿಳಿದಿತ್ತು.
ಈ ಮೇರೆಯಿಲ್ಲದ ಪ್ರೀತಿಯ ಕುರಿತು ಫಾತಿಮಾ ತಿಳಿದಿದ್ದರು. ತಾನು ಆಹಾರ ಸೇವಿಸುವ, ಪ್ರತಿ ಸಮಯದಲ್ಲೂ ತಂದೆ ಏನು ತಿಂದಿರಬಹುದು ಎಂದು ಆತಂಕಪಡುತ್ತಿದ್ದ ಫಾತಿಮಾರನ್ನು ಇತಿಹಾಸದಲ್ಲಿ ಕಾಣಬಹುದು. ಪ್ರವಾದಿಯವರು(ಸ) ಎಲ್ಲೇ ಯಾತ್ರೆ ಹೋಗಲಿ, ಮದೀನಾಕ್ಕೆ ಮರಳಿದ ಬಳಿಕ ಪ್ರಥಮವಾಗಿ ಫಾತಿಮಾರ ಬಳಿಗೆ ಹೋಗುತ್ತಿದ್ದರು. ಒಮ್ಮೆ ಪ್ರವಾದಿವರ್ಯರು(ಸ) ಪ್ರಯಾಣ ಮಾಡಿ ಮರಳಿ ಪುತ್ರಿಯ ಬಳಿಗೆ ಬಂದಾಗ ಫಾತಿಮಾ ಓಡೋಡಿ ಬಂದು, ಅವರನ್ನು ಆಲಂಗಿಸಿ, ಮುಖಕ್ಕೆ, ಗಲ್ಲಕ್ಕೆ ಪ್ರೀತಿಯಿಂದ ಚುಂಬಿಸಿ ಅತ್ತರು. ತನ್ನ ಪ್ರಿಯ ಮಗಳು ಏಕೆ ಅಳುತ್ತಿದ್ದಾರೆಂದು ವಿಚಾರಿಸಿದಾಗ ತಮ್ಮ ಧೂಳು ತುಂಬಿದ ಬಟ್ಟೆ, ದಣಿದ ಕಣ್ಣುಗಳು, ದೇಹವನ್ನು ನೋಡಿ ಕಣ್ಣೀರು ನಿಯಂತ್ರಿಸಲು ಸಾಧ್ಯವಾಗಲಿಲ್ಲವೆಂದು ಅವರು ಹೇಳಿದರು.
ಹಿಜಿರಾ ಕಳೆದು ಎರಡನೇ ವರ್ಷದಲ್ಲಿ ಸಹೋದರಿ ರುಖಿಯಾರಿಗೆ ತೀವ್ರ ಜ್ವರ ಬಂತು. ರುಖಿಯಾರ ಪತಿ ಉಸ್ಮಾನ್ ತನ್ನ ಪ್ರಿಯತಮೆಯ ಬಳಿಯಲ್ಲಿದ್ದರು. ಅನಿವಾರ್ಯವಾದ ಯುದ್ಧವು ಸನ್ನಿಹಿತವಾದಾಗಲೂ ಹಾಸಿಗೆ ಹಿಡಿದಿರುವ ಸಂಗಾತಿಯನ್ನು ನೋಡಿಕೊಳ್ಳುವುದು ಮೊದಲನೆಯದು ಎಂಬ ಪ್ರವಾದಿ ಬೋಧನೆಯನ್ನು ಅವರು ನೆರವೇರಿಸಿದರು. ರುಖಿಯಾ ನಿಧನರಾದರು. ಬದ್ರ್ ಯುದ್ಧದ ಬಳಿಕ ಮರಳಿದ ಪ್ರವಾದಿವರ್ಯರು(ಸ) ಮೊದಲು ರುಖಿಯಾರ ಸಮಾಧಿಯ ಬಳಿ ಹೋದಾಗ ಫಾತಿಮಾರೂ ಹಿಂಬಾಲಿಸಿದರು. ಅಳು ನಿಯಂತ್ರಿಸಲು ಸಾಧ್ಯವಾಗದ ಫಾತಿಮಾರನ್ನು ಪ್ರವಾದಿ(ಸ)ರು ಸಾಂತ್ವನಗೊಳಿಸಿದರು.
ಪ್ರವಾದಿವರ್ಯರು(ಸ) ಅನಾರೋಗ್ಯದಿಂದಿದ್ದಾಗ ಫಾತಿಮರು ನಿರಂತರ ಬರುತ್ತಿದ್ದರು. ಆಗೆಲ್ಲಾ ಆಯಿಶಾ ತಂದೆ ಮಗಳ ಖಾಸಗಿತನಕ್ಕಾಗಿ ಅವರಿಂದ ದೂರವುಳಿಯುತ್ತಿದ್ದರು. ದೀರ್ಘ ಹೊತ್ತು ತಂದೆ ಮತ್ತು ಮಗಳು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಅವರ ಸಂಭಾಷಣೆಗೆ ಅಡ್ಡಿಪಡಿಸಲು ಆಯಿಶಾ ಸಿದ್ಧರಾಗಲಿಲ್ಲ.
ಒಂದು ದಿನ ಪ್ರವಾದಿ(ಸ)ರು ಫಾತಿಮಾರನ್ನು ಕರೆಸಿದರು. ಅವರು ಬಂದಾಗ ಅವರನ್ನು ಚುಂಬಿಸಿ ಕಿವಿಯಲ್ಲಿ ಏನೋ ಹೇಳಿದರು. ಅವರು ಅತ್ತರು. ಪ್ರವಾದಿವರ್ಯರು(ಸ) ಪುನಃ ಏನೋ ಕಿವಿಯಲ್ಲಿ ಹೇಳಿದರು. ಆಗ ಫಾತಿಮಾ ಮುಗುಳ್ನಕ್ಕರು. ಇದನ್ನು ಕಂಡು ಆಯಿಶಾ ಕೇಳಿದರು, “ನೀವು ಒಂದೇ ಸಮಯದಲ್ಲಿ ಅಳುತ್ತೀರಿ ಮತ್ತು ನಗುತ್ತಿದ್ದೀರಿ. ದೇವ ಸಂದೇಶವಾಹಕರು ನಿಮ್ಮೊಡನೆ ಹೇಳಿದ್ದೇನು?”
ಫಾತಿಮ ಹೇಳಿದರು: “ಸ್ವಲ್ಪ ಮುಂಚೆ ಅವರು ತಾನು ದೇವನನ್ನು ಭೇಟಿಯಾಗುತ್ತೇನೆಂದು ಹೇಳಿದರು. ಅದನ್ನು ಕೇಳಿ ನನಗೆ ಅಳು ಬಂತು. ಪುನಃ ಅವರು “ಅಳಬೇಡ, ನನ್ನ ಮನೆಯಿಂದ ಮೊದಲು ನನ್ನೊಂದಿಗೆ ಬಂದು ಸೇರಿಕೊಳ್ಳುವುದು ನೀನು ಎಂದು ಹೇಳಿದಾಗ ನಾನು ನಕ್ಕೆ.”
ಮಾತಿನಲ್ಲಿ ವರ್ಣಿಸಲಸಾಧ್ಯವಾದಂತಹ ಸಂಬಂಧ ಪ್ರವಾದಿ ಮತ್ತು ಫಾತಿಮಾರದ್ದಾಗಿತ್ತು. ಅವರ ಎಲ್ಲಾ ಯೋಚನೆಗಳಲ್ಲೂ ಫಾತಿಮಾ ಜೊತೆಗಿದ್ದರು. ಫಾತಿಮಾರ ಜೀವನದ ಪ್ರತಿಯೊಂದು ನಿಮಿಷದಲ್ಲೂ, ಪ್ರತಿಯೊಂದು ಕ್ಷಣ ಕ್ಷಣದಲ್ಲೂ ಪ್ರವಾದಿಯವರಿದ್ದರು. ಅವರ ಜೊತೆಗಿನ ಸಮಯದಲ್ಲಿ ಪರಸ್ಪರ ಹೃದಯ ಬೆಸೆದುಕೊಂಡು, ಸಾಂತ್ವನಗಳು, ಪ್ರಾರ್ಥಿಸಿ, ಉಪದೇಶಗಳನ್ನು ಹಂಚಿಕೊಂಡು ಬಹಳ ಪ್ರೀತಿ ಗೌರವದಿಂದ ಬದುಕಿದರು.
ಪ್ರವಾದಿವರ್ಯರ(ಸ) ವಿದಾಯದ ಬಳಿಕ ಫಾತಿಮಾರನ್ನು ಫಾತಿಮಾರ ಮುಗುಳ್ನಗುವನ್ನು ಯಾರೂ ಕಂಡಿರಲಿಲ್ಲವೆಂದು ಇತಿಹಾಸ ತಿಳಿಸುತ್ತದೆ. ಪ್ರವಾದಿವರ್ಯರು(ಸ) ನಿಧನ ಹೊಂದಿ ಐದು ತಿಂಗಳು ಪೂರ್ತಿಯಾದ ಒಂದು ಪ್ರಭಾತದಲ್ಲಿ ರಮಝಾನ್ ತಿಂಗಳ ಆರಂಭದಲ್ಲಿ ಫಾತಿಮಾರು ತನ್ನ ಪ್ರಭುವಿನೆಡೆಗೆ ಮರಳಿದರು. ಮರಣಾಸನ್ನರಾಗಿರುವಾಗ ಪತಿ ಅಲಿ(ರ)ರೊಂದಿಗೆ ಮಗುಳ್ನಗುತ್ತಾ ಫಾತಿಮಾ ಹೇಳಿದರು: “ನನಗೆ ಇಂದು ದೇವಸಂದೇಶವಾಹಕರೊಂದಿಗೆ ಒಂದು ಭೇಟಿಯಿದೆ!”
ಉತ್ತಮ ಕುಟುಂಬವನ್ನು ಹೇಗೆ ನಿರ್ಮಿಸಬಹುದೆಂದು ತಿಳಿಯಲು ಪ್ರವಾದಿವರ್ಯರ(ಸ) ಜೀವನ ಮಾತ್ರ ಸಾಕು. ಓರ್ವ ಉತ್ತಮ ಸಂಗಾತಿಯಲ್ಲಿರಬೇಕಾದ ಎಲ್ಲಾ ಗುಣಗಳೂ ಆ ಜೀವನದಲ್ಲಿತ್ತು. ತನ್ನ ಪತ್ನಿಯರಿಗೆ ಅವರು ಅಭಯವಾಗಿದ್ದರು. ಅವರನ್ನು ಅತ್ಯಂತ ಗೌರವಿಸುವ, ಅಂಗೀಕರಿಸುವ, ಅವರ ಭಾವನೆಗಳನ್ನು ಗೌರವಿಸುವ ಅವರ ವಿಷಯವನ್ನು ಆಲಿಸುವ, ಅವರಿಗೆ ಪರಿಹಾರ ಸೂಚಿಸುವ, ಅವರೊಂದಿಗೆ ಯಾತ್ರೆ ಹೊರಡುವ, ಅವರೊಂದಿಗೆ ಓಟ ಸ್ಪರ್ಧೆ ನಡೆಸುವ, ಗಂಭೀರ ವಿಷಯಗಳಲ್ಲಿ ಅವರೊಂದಗೆ ಚರ್ಚೆ ನಡೆಸುವ, ಅವರೊಂದಿಗಿನ ಪ್ರೀತಿ, ಪ್ರೇಮವನ್ನು ತೆರೆದು ಹೇಳುವ, ಅವರ ಸ್ನೇಹದ ಕಡಲಲ್ಲಿ ತೃಪ್ತಿಯಿಂದ ಕಳೆಯುವ ಓರ್ವ ಉತ್ತಮ ಸಂಗಾತಿ.
IslamKannada News Portal
