Home / ಲೇಖನಗಳು / ಬದುಕಿನ ಎಲ್ಲ ರಂಗಗಳ ಮಾದರಿ ಶಿಕ್ಷಕ ಪ್ರವಾದಿ ಮುಹಮ್ಮದ್ (ಸ)

ಬದುಕಿನ ಎಲ್ಲ ರಂಗಗಳ ಮಾದರಿ ಶಿಕ್ಷಕ ಪ್ರವಾದಿ ಮುಹಮ್ಮದ್ (ಸ)

✍️ ಸಲೀಮ್ ಬೋಳಂಗಡಿ

ಪ್ರವಾದಿ ಮುಹಮ್ಮದರು(ಸ )ಬದುಕಿನ ಎಲ್ಲ ರಂಗಗಳಲ್ಲಿ ಮಾದರಿಯಾಗಿದ್ದರು. ಸತ್ಯ ನ್ಯಾಯ ಸಮಾನತೆ ಅವರ ಸಂದೇಶದ ಸಾರವಾಗಿತ್ತು. ಅವರು ಯಾವುದನ್ನು ಜನರಿಗೆ ಸಾರುತ್ತಿದ್ದರು ಅದನ್ನು ಸ್ವತಹ ಅನುಸರಿಸಿ ತೋರುತ್ತಿದ್ದರು ಅದು ಜನರ ಮೇಲೆ ಅವರ ಸಂದೇಶ ಪ್ರಭಾವ ಬೀರಲು ಕಾರಣವಾಗಿದೆ.

ಅಜ್ಞಾನ ಕಾಲದ ಅಂದಿನ ಅರಬ್ ಸಮಾಜವು ಮೂಡನಂಬಿಕೆ ಕಂದಾಚಾರ ಮುಂತಾದ ಎಲ್ಲ ರೀತಿಯ ಅನಾಚಾರ ಅಂಧಕಾರಗಳಿಂದ ತುಂಬಿತ್ತು.

ಆ ಸಮಾಜದಲ್ಲಿ ಹೆಣ್ಣನ್ನು ತುಂಬಾ ಕೀಳಾಗಿ ಕಾಣಲಾಗುತ್ತಿತ್ತು. ಅಲ್ಲಿ ಹೆಣ್ಣಿಗೆ ಗೌರವವಿರಲಿಲ್ಲ. ಹುಟ್ಟಿದ ಮಗು ಹೆಣ್ಣೆಂದಾದರೆ ಜೀವಂತವಾಗಿ ಹೂಳುತ್ತಿದ್ದಂತಹ ಒಂದು ಸಮಾಜವಾಗಿತ್ತು. ಇಂತಹ ಒಂದು ಸಮಾಜದಲ್ಲಿ ಪ್ರವಾದಿ ಮುಹಮ್ಮದರು (ಸ) ಹುಟ್ಟಿದರು. ಸಮಾಜದಲ್ಲಿ ಮೂರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿ ಅವರಿಗೆ ಶಿಕ್ಷಣ ನೀಡಿ ವಿವಾಹ ಮಾಡಿ ಕೊಟ್ಟ ಆ ಮಾತಾಪಿತರು ಸ್ವರ್ಗಕ್ಕೆ ಅರ್ಹರು ಎಂದು ಸಾರಿದರು.

ಪ್ರವಾದಿ ಮುಹಮ್ಮದರು (ಸ)ಸಮಾಜದಲ್ಲಿ ಸಮಾನತೆಯ ಪ್ರತಿಪಾದಕರಾಗಿದ್ದರು. ನ್ಯಾಯ ಅಸಮಾನತೆ ತುಂಬಿದ್ದ ಆ ಸಮಾಜವನ್ನು ಸಂಪೂರ್ಣವಾಗಿ ತನ್ನ 23 ವರ್ಷಗಳ ದೌತ್ಯದಿಂದ ಬದಲಾಯಿಸಿದರು. ನ್ಯಾಯ ಪಾಲನೆಯಲ್ಲಿ ಅವರ ತೀರ್ಪು ವರ್ಣನಾತೀತವಾದದ್ದು. ಇದಕ್ಕೆ ಇತಿಹಾಸದಲ್ಲಿ ಧಾರಾಳ ಉದಾಹರಣೆಗಳಿವೆ.

ಉದಾಹರಣೆಗೆ ಒಮ್ಮೆ ಶ್ರೀಮಂತ ಪ್ರತಿಷ್ಠಿತ ವರ್ಗದ ಖುರೈಷಿ ಮಹಿಳೆಯೊಬ್ಬಳು ಕಳ್ಳತನದಲ್ಲಿ ಸಿಕ್ಕಿಬಿದ್ದಳು. ಕುರೈಶರು ಇದನ್ನು ಅವಮಾನ ಎಂದು ಬಗೆದು ಆ ಮಹಿಳೆಯನ್ನು ಶಿಕ್ಷೆಯಿಂದ ಪಾರು ಮಾಡಲು ಪ್ರಯತ್ನಿಸಿದರು. ಅವರು ಪ್ರವಾದಿ ಮುಹಮ್ಮದರ (ಸ) ಆಪ್ತರಾಗಿದ್ದ ಉಸಾಮ ಬಿನ್ ಝೈದ್ ಎಂಬವರನ್ನು ನೇಮಿಸಿದರು. ಅದರಂತೆ ಅವರು ಪ್ರವಾದಿಯವರ ಬಳಿಗೆ ಹೋದರು. ಪ್ರವಾದಿಯವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿದಾಗ ಪ್ರವಾದಿಯವರ ಮುಖವು ವಿವರ್ಣವಾಯಿತು. ಕೋಪದಿಂದ ಅವರ ಮುಖವು ಬದಲಾಯಿತು. ಅವರು ಹೇಳಿದರು “ನೋಡಿ ನನ್ನ ಮಗಳು ಫಾತಿಮಾ ಕದ್ದರೂ ಸರಿ. ನಾನು ಆಕೆಯ ಕೈಯನ್ನು ಕಡಿಯಲು ಹಿಂಜರಿಯಲಾರೆ” ಎಂದು ಬಹಿರಂಗವಾಗಿ ಘೋಷಿಸಿದರು.

ಹಾಗೆ ಒಮ್ಮೆ ಯುದ್ದ ಕವಚವನ್ನು ಕದ್ದು ಓರ್ವನು ಅದನ್ನು ಓರ್ವ ಯಹೂದಿ ಮೇಲೆ ಹೊರಿಸಲು ಯೋಚಿಸಿದನು. ಸಾಕ್ಷಿಯು ಕೂಡ ಯಹೂದಿಗೆ ಪ್ರತಿಕೂಲವಾಗಿತ್ತು. ಕದ್ದವನು ಅಲ್ಲಿ ಗೆಲುವು ಸಾಧಿಸುವ ಎಲ್ಲ ಸಾಧ್ಯತೆಗಳಿತ್ತು. ಆದರೆ ಕೂಡಲೇ ಪ್ರವಾದಿಯವರಿಗೆ ದೇವ ವಚನ ಅವತೀರ್ಣವಾಯಿತು. ಅವರು ಯಹೂದಿಯ ಪರ ತೀರ್ಪು ನೀಡಿದರು.

ಅವರು ಕೌಟುಂಬಿಕವಾಗಿ ಮಾದರಿ ಪತಿಯಾಗಿದ್ದರು. ಒಮ್ಮೆ ತನಗೆ ಉಡುಗೊರೆಯಾಗಿ ದೊರೆತ ಹಣ್ಣು ಹಂಪಲುಗಳನ್ನು ಒಂದು ಪಾತ್ರೆಯಲ್ಲಿರಿಸಿ ತನ್ನ ಪತ್ನಿ ಆಯಿಶಾರಿಗೆ ನೀಡಿದರು. ಆಗ ಯಾವುದೋ ವಿಷಯದಲ್ಲಿ ಆಯಿಷಾ ಕೋಪಗೊಂಡಿದ್ದರು. ಅವರು ಆ ಪಾತ್ರೆಯನ್ನು ನೆಲಕ್ಕೆ ಹಾಕಿದರು. ಆದರೆ ಪ್ರವಾದಿ ಮುಹಮ್ಮದರು (ಸ)ಕೋಪಗೊಳ್ಳಲಿಲ್ಲ. ಅದನ್ನ ಮೆಲ್ಲಗೆ ಹೆಕ್ಕತೊಡಗಿದರು. ಇದನ್ನು ನೋಡಿದ ಆಯಿಶಾರಲ್ಲಿ ತೀವ್ರ ಪಶ್ಚಾತಾಪ ಭಾವನೆ ಮೂಡಿ ಆ ಪಾತ್ರೆಯನ್ನು ಪಡೆದು ತಾನೇ ಹೆಕ್ಕತೊಡಗಿದರು. ತನ್ನಿಂದಾದ ಪ್ರಮಾದದ ಬಗ್ಗೆ ವ್ಯಥೆ ಪಟ್ಟರು.

ಮಾತಾಪಿತರ ಬಗ್ಗೆ ಪ್ರವಾದಿ ಮುಹಮ್ಮದರಿಗೆ(ಸ)ತುಂಬಾ ಗೌರವವಿತ್ತು‌. ಮಾತಾಪಿತರನ್ನು ಗೌರವಿಸಲು ಅವರು ಉಪದೇಶಿಸಿದರು ತಾಯಿಯ ಪಾದದಲ್ಲಿ ಸ್ವರ್ಗವಿದೆ ಎಂದು ಕರೆ ನೀಡಿದರು. ಹೀಗೆ ಪ್ರವಾದಿಯವರು ಎಲ್ಲ ರಂಗದಲ್ಲಿಯೂ ಮಾದರಿಯಾಗಿದ್ದಾರೆ. ಆದ್ದರಿಂದಲೇ ಅವರಿಗೆ ಇಂದಿಗೂ ಜಗತ್ತಿನ ಹೆಚ್ಚಿನ ಅನುಯಾಯಿಗಳಿದ್ದಾರೆ.

ನಿಜವಾಗಿ ಪ್ರವಾದಿಯವರ(ಸ) ಮೇಲೆ ತೋರಿಸುವಂತಹ ನೈಜ ಪ್ರೀತಿ ಅವರು ತೋರಿದ ಮಾದರಿಯನ್ನು ಬದುಕಲ್ಲಿ ಅಳವಡಿಸುವುದಾಗಿದೆ ತಂದೆ ತಾಯಿಯೊಂದಿಗೆ ಸದ್ವರ್ತನೆ, ಕುಟುಂಬ ಸಂಬಂಧದಲ್ಲಿ ಉತ್ತಮವಾಗಿ ಬೆರೆತು ಬಾಳುವುದು ಹೀಗೆ ಎಲ್ಲ ರೀತಿಯಲ್ಲಿಯೂ ಅವರನ್ನು ಬದುಕಲ್ಲಿ ಅಳವಡಿಸುವುದು ನಿಜವಾದ ಪ್ರವಾದಿ ಪ್ರೇಮವಾಗಿದೆ. ಅಜ್ಞಾನದಿಂದ ತುಂಬಿದ್ದ ಅರಬ್ ಸಮಾಜವು ಸಂಪೂರ್ಣ ಬದಲಾವಣೆ ಕಂಡಿತು. ಅದಕ್ಕೆ ಉದಾಹರಣೆಯಾಗಿದ್ದಾರೆ ತನ್ನ ಆಚಾರ ವಿಚಾರಗಳಿಗೆ ಕಂಟಕವಾಗಿದ್ದ ಪ್ರವಾದಿಯವರನ್ನು ಕೊಲ್ಲುವ ಶಪಥ ಹಾಕಿ ಬಂದಂತಹ ಉಮರ್ ರವರು ನಂತರ ಅವರ ಅನುಯಾಯಿಯಾಗಿ ಮಾರ್ಪಟ್ಟು ವಿಶ್ವಕ್ಕೆ ಮಾದರಿಯಾದ ಆಡಳಿತಗಾರರಾಗಿ ಪ್ರಸಿದ್ಧರಾದರು. ಮಹಾತ್ಮ ಗಾಂಧೀಜಿ ಅವರು ಕೂಡ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಈ ದೇಶಕ್ಕೆ ಆಡಳಿತ ಬರುವುದಾದರೆ ಉಮರ್ ರವರ ಆಡಳಿತವನ್ನು ನಾನು ಬಯಸುತ್ತೇನೆ ಎಂದು ಹೇಳಿರುವುದು ಇಲ್ಲಿ ಸ್ಮರಣೀಯ.

ಒಮ್ಮೆ ಪ್ರವಾದಿವರಿಯರ ಬೆನ್ನಿನಲ್ಲಿ ಚಾಪೆಯ ಗೆರೆಯನ್ನು ಕಂಡು ಅವರ ಆಪ್ತ ಅನುಯಾಯಿ ಉಮರ್ ಅವರಿಗೆ ಸಹಿಸಲಾಗಲಿಲ್ಲ. ಪ್ರವಾದಿಯವರು ಆಗ ಮದೀನಾ ರಾಜಧಾನಿಯಾಗಿದ್ದ ಸಾಮ್ರಾಜ್ಯದ ಅಂದರೆ ಅರೇಬಿಯಾದ ಅರ್ಧಭಾಗದ ಆಡಳಿತಗಾರರಾಗಿದ್ದರು. ಆದರೂ ಅವರು ಎಲೆಯಿಂದ ತಯಾರಿಸಿದ ಚಾಪೆಯಲ್ಲಿ ನಿದ್ರಿಸುತ್ತಿದ್ದರು. ಅವರ ಮನೆಯ ವಸ್ತು ಸಾಮಗ್ರಿಗಳಿಗೆ ಮಿತಿಯಿತ್ತು. ಆಗ ಪ್ರವಾದಿಯವರಿಗೆ ಸಮೀಪದ ನಾಡುಗಳಿಂದ ಸಂಪತ್ತುಗಳು ಹರಿದು ಬರುತ್ತಿತ್ತು. ಆದರೆ ಅದರಿಂದ ಚಿಕ್ಕಾಸನ್ನು ಕೂಡಾ ತನಗಾಗಿ ಉಪಯೋಗಿಸದೆ ಎಲ್ಲವನ್ನು ಸಾರ್ವಜನಿಕರಿಗೇ ಬಳಸುತ್ತಿದ್ದರು. ಹೀಗೆ ಅವರು ಸರಳತೆಯ ಜೀವನ ನಡೆಸುತ್ತಿದ್ದರು. ಹೀಗೆ ಅವರು ಮಾದರಿ ಆಡಳಿತಗಾರನಾಗಿ ಇತಿಹಾಸದಲ್ಲಿ ಗುರುತಿಸುತ್ತಾರೆ. ಆ ಕಾರಣದಿಂದಲೇ ಅವರನ್ನು ಎಲ್ಲರೂ ವಿಶ್ವದಾದ್ಯಂತ ಗೌರವಿಸುತ್ತಾರೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …