ಮುಹಮ್ಮದರು(ಸ) ದೇವನ ಪ್ರವಾದಿಯಾಗಿದ್ದಾರೆ ಮತ್ತು ಅವರು ಪ್ರವಾದಿಗಳ ಸರಣಿಯ ಕೊನೆಯ ಕೊಂಡಿಯಾಗಿದ್ದಾರೆ. ಪ್ರವಾದಿತ್ವವು ಅವರೊಂದಿಗೆ ಕೊನೆಯಾಗಿದೆ. ಮುಹಮ್ಮದರು(ಸ) ಪ್ರವಾದಿಯೆನ್ನುವ ಅಸಂಖ್ಯಾತ ಆಧಾರ ಪ್ರಮಾಣಗಳು ನಮ್ಮ ಮುಂದೆ ಲಭ್ಯವಿದೆ. ಅವರು ಜೀವಿಸಿದ ಪ್ರತಿಯೊಂದು ಕ್ಷಣಗಳೂ ಮುಹಮ್ಮದರು(ಸ) ಸತ್ಯಸಂಧರೆಂಬುದಕ್ಕೆ ಸಾಕ್ಷ್ಯವೊದಗಿಸುತ್ತಿವೆ. ಆದ್ದರಿಂದ ಅವರ ಸತ್ಯ ಸಂಧ ಜೀವನವು ಪ್ರವಾದಿತ್ವದ ಘೋಷಣೆಯಲ್ಲಿಯೂ ಅವರು ಸತ್ಯ ಸಂಧರಾಗಿದ್ದಾರೆ ಎಂಬ ಬಗ್ಗೆ ಸಾಕ್ಷಿಯಾಗಿದೆ.
ಒಂದು ವೇಳೆ ಮುಹಮ್ಮದರಿಗೆ(ಸ) ಪ್ರವಾದಿಯೆಂಬ ಭ್ರಮೆಯಾಗಿದೆ ಎಂದು ಭಾವಿಸುವವರಿಗೆ ಅವರ ಸತ್ಯಸಂಧ ಬದುಕು ಪ್ರವಾದಿತ್ವದ ಸಾಕ್ಷಿಯಾಗಿರುವುದು. ಸಾಮಾನ್ಯವಾಗಿ ಯಾವುದೇ ವಿಷಯದಲ್ಲಿ ಸಂದೇಹಗಳುಂಟಾದರೆ ಆಧಾರ ಪ್ರಮಾಣಗಳನ್ನು ಕೇಳಲಾಗುವುದಷ್ಟೇ. ಆದರೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ನಮಗೆ ಆಧಾರ ಪ್ರಮಾಣಗಳ ಅವಶ್ಯಕತೆಯಿಲ್ಲ. ಅದು ಸ್ವಯಂ ಪ್ರಮಾಣವಾಗಿದೆ. ಪ್ರವಾದಿಗಳಿಗೆ ಅವರ ಜೀವನವೇ ಪ್ರವಾದಿತ್ವದ ಪ್ರಮಾಣವಾಗಿದೆ. ತಮ್ಮ ಎದುರಿನ ಅನುಭವಗಳ ಮೇಲೆ ವಿಶ್ವಾಸವಿರಿಸಲು ಪ್ರವಾದಿಗಳಿಗೆ ಬಾಹ್ಯ ಪ್ರಮಾಣಗಳ ಅವಶ್ಯಕತೆಯಿಲ್ಲ
ದಿವ್ಯವಾಣಿಯು ಅವರಿಗೆ ಕನಸಿನ ರೂಪದಲ್ಲಿ ಅಥವಾ ಜಾಗೃತ ಸ್ಥಿತಿಯಲ್ಲಿ ಅವತೀರ್ಣವಾದರೂ ಅವರು ಅದನ್ನು ನಿಸ್ಸಂದೇಹವಾಗಿ ಗುರುತಿಸಬಲ್ಲರು. ಪ್ರವಾದಿಗಳು ಕೇವಲ ಕನಸುಗಳು ಮತ್ತು ದಿವ್ಯವಾಣಿಯಾಗಿರುವ ಕನಸುಗಳ(ವಹ್ಯ್) ವ್ಯತ್ಯಾಸವನ್ನು ಅರಿಯಲು ಸಮರ್ಥರಾಗಿದ್ದಾರೆ. ಅದೇ ವೇಳೆ ಕನಸಿನ ಮಾಧ್ಯಮದಿಂದ ಪರೋಕ್ಷದ ಸೂಚನೆಗಳು ಪ್ರವಾದಿಯೇತರರಿಗೂ ಲಭಿಸುವುದಿದೆ ಎಂಬ ವಿಚಾರ ಇಲ್ಲಿ ಗಮನಾರ್ಹವಾಗಿದೆ. ಯಾಕೆಂದರೆ ಸಾಮಾನ್ಯರಿಗೆ ಮಾರ್ಗದರ್ಶನದ ವಿವಿಧ ವಿಧಾನಗಳಿವೆ ಎಂದು ಅನುಭವವಾಗಲೆಂದು ಇಂತಹ ಕನಸುಗಳು ತೋರಿಸಲ್ಪಡುತ್ತವೆ. ಹೀಗೆಲ್ಲ ಇರುವುದರಿಂದ ಪ್ರವಾದಿಗಳ ವಹ್ಯನ್ನು (Revelation) ನಿರಾಕರಿಸುವುದು ಸರಿಯಲ್ಲ.
ಪ್ರವಾದಿವರ್ಯರ(ಸ) ಜೀವನ
ಪ್ರವಾದಿಗಳು ನಿಷ್ಕಳಂಕ ಚಾರಿತ್ರ್ಯವಂತರು. ಜೀವನದಲ್ಲಿ ಅವರೆಂದೂ ಸುಳ್ಳು-ಮೋಸ, ಕಪಟತನ ತೋರಲಾರರು. ಅಂತಹ ವಿಚಾರಗಳನ್ನು ಅವರ ಬದುಕಿನಲ್ಲಿ ಕಾಣಲು ಸಾಧ್ಯವಿಲ್ಲ.
ಪ್ರವಾದಿ ಮುಹಮ್ಮದ್ರಿಗೆ(ಸ) 40ನೆಯ ವಯಸ್ಸಿನಲ್ಲಿ ಪ್ರವಾದಿತ್ವವು ಲಭಿಸಿತು. ಆ ನಲ್ವತ್ತು ವರ್ಷಗಳವರೆಗೂ ಅವರ ಜೀವನವು ತೆರೆದ ಗ್ರಂಥದಂತೆ ಜನರ ಮುಂದಿತ್ತು. ಅವರು ಪ್ರಾಮಾಣಿಕ ವ್ಯಕ್ತಿಯೆಂದು ಜನರು ವಿಶ್ವಾಸವಿರಿಸಿದ್ದರು. ಸಣ್ಣ ದೊಡ್ಡ ಯಾವ ವಿಷಯವಿದ್ದರೂ ಅವರಲ್ಲಿ ಕಪಟತನವಿರಲಿಲ್ಲ. ಯಾರನ್ನೂ ಅವರೆಂದೂ ವಂಚಿಸಲಿಲ್ಲ. ಯಾವುದೇ ಷಡ್ಯಂತ್ರಗಳಲ್ಲಿ ಮುಹಮ್ಮದರು(ಸ) ಭಾಗಿಯಾಗಿಲ್ಲವೆಂದು ಜನರಲ್ಲಿ ಸ್ಪಷ್ಟ ಅರಿವಿತ್ತು.
ಎಂದೂ ತಮ್ಮ ನಾಲಗೆಯಿಂದ ಯಾವುದೇ ತಪ್ಪು ನುಡಿಯದ ವ್ಯಕ್ತಿ ದಿಢೀರನೆ ಒಂದು ಸುಳ್ಳಿನೊಂದಿಗೆ ಎದ್ದು ನಿಲ್ಲಲು ಹೇಗೆ ಸಾಧ್ಯ? ಅವರು ಸುಳ್ಳು ಹೇಳುತ್ತಾರೆ ಎನ್ನುವುದೇ ಮಹಾ ಸುಳ್ಳಾಗುವುದು. ಯಾಕೆಂದರೆ ಎಂದೂ ಸುಳ್ಳೇ ಹೇಳದ ಮನುಷ್ಯ ತನ್ನನ್ನು ದೇವನ ಪ್ರವಾದಿ, ತಾನು ದೇವನಿಂದ ನಿಯುಕ್ತನಾಗಿದ್ದೇನೆ ಎಂದು ಯಾಕೆ ಸುಳ್ಳು ಹೇಳುತ್ತಾರೆ? ದೇವನ ವತಿಯಿಂದ ಜ್ಞಾನ, ನಾಗರಿಕತೆ ಮುಂತಾದ ಶಿಕ್ಷಣವು ಅವತೀರ್ಣವಾಗದೆ ದೇವನಿಂದ ಅವತೀರ್ಣವಾದುದನ್ನು ಜನರಿಗೆ ಹೇಳಿದ್ದೇನೆಂದು ಪ್ರವಾದಿಗಳು ಹೇಳುವುದಾದರೂ ಹೇಗೆ?
ಆ ವರೆಗೂ (ಅರ್ಥಾತ್ 40 ವಯಸ್ಸಿನವರೆಗೂ) ಎಲ್ಲಿಯೂ ಸ್ವಲವೂ ಪ್ರವಾದಿ ಮುಹಮ್ಮದರು(ಸ) ಶಿಕ್ಷಣವನ್ನು ಪಡೆದಿರಲಿಲ್ಲ. ಅವರು ಯಾರಿಂದಲೂ ಎಲ್ಲಿಂದಲೂ ಐತಿಹಾಸಿಕ ಮಾಹಿತಿಗಳನ್ನು ತಿಳಿದುಕೊಂಡಿರಲಿಲ್ಲ. ಇಂತಹ ವ್ಯಕ್ತಿಯು ಜ್ಞಾನದ ಯಾವುದಾದರೊಂದು ಮೂಲವಿಲ್ಲದೆ ಜನರಿಗೆ ತತ್ವಾದರ್ಶ ಹೇಳಿಕೊಡಲಾರರು. ಪ್ರವಾದಿ ಮುಹಮ್ಮದರಿಗೆ(ಸ) ಈ ಜ್ಞಾನ ತತ್ವಾದರ್ಶಗಳು ಎಲ್ಲಿಂದ ದೊರೆಯುತ್ತಿತ್ತು? ಒಬ್ಬ ಅಶಿಕ್ಷಿತ ವ್ಯಕ್ತಿ ಮಾನವ ಜೀವನದ ಜಟಿಲಾತಿ ಜಟಿಲ ಸಮಸ್ಯೆಗಳ ಸಮೂಹವನ್ನೇ ಬಗೆಹರಿಸಲು ಹೇಗೆ ಸಾಧ್ಯ? ಈ ಎಲ್ಲ ಜ್ಞಾನವೂ ಅವರಿಗೆ ದೇವನಿಂದ ಲಭ್ಯವಾಗಿತ್ತು. ನನಗೆ ದೇವನ ದಿವ್ಯವಾಣಿ ಅವತೀರ್ಣಗೊಳ್ಳುತ್ತಿದೆಯೆಂದು ಅವರು ಹೇಳುತ್ತಿದ್ದರು. ಆದರೆ ಆ ವರೆಗೂ ಸತ್ಯಸಂಧನಾಗಿದ್ದ ವ್ಯಕ್ತಿ ಈಗಲೂ ಸತ್ಯವನ್ನೇ ಹೇಳುತ್ತಿದ್ದಾರೆಂದು ಮಾತ್ರ ಅವರ ವಿರೋಧಿಗಳಿಗೆ ಜ್ಞಾನೋದಯವಾಗಿರಲಿಲ್ಲ.
ಆದುದರಿಂದ ಈ ವ್ಯಕ್ತಿ ಯಾರಿಂದಲೋ ಕಲಿತು ಹೀಗೆಲ್ಲ ಹೇಳುತ್ತಿರುವನೆಂದು ಪ್ರವಾದಿವರ್ಯರ(ಸ) ವಿರೋಧಿಗಳು ಹೇಳತೊಡಗಿದರು. ಪ್ರವಾದಿತ್ವ ಘೋಷಣೆಯವರೆಗೂ ಸತ್ಯರೆಂದಿದ್ದ ಅದೇ ಜನರು ಆನಂತರ ಅವರನ್ನು ಸುಳ್ಳುಗಾರರೆಂದರೆ ಹೇಗೆ? ನಂತರ ಹಾಗೆ ಹೇಳುವವರೇ ಸುಳ್ಳುಗಾರರೆಂಬ ಬಗ್ಗೆ ಯಾರೂ ಸಂದೇಹಪಡಲಾರರು. ಪ್ರವಾದಿ ಮುಹಮ್ಮದರು(ಸ) ಪ್ರಸ್ತುತಪಡಿಸುವಂತಹ ದೈವಿಕ ವಾಣಿಯನ್ನು ತರುವ ಸಾಮರ್ಥ್ಯವಿದ್ದವರು ಅರೇಬಿಯಾದಲ್ಲಿರಲಿಲ್ಲ. ಪ್ರವಾದಿವರ್ಯರು(ಸ) ಮಂಡಿಸಿದ ಪವಿತ್ರ ಕುರ್ಆನ್ ವಚನಗಳು ಅವರ ಸ್ವರಚಿತ ಕೃತಿಯೆಂದು ಸಾಬೀತು ಪಡಿಸುವ ಯೋಗ್ಯತೆಯಿದ್ದವರು ಅಂದು ಯಾರೂ ಇರಲಿಲ್ಲ. ಆ ನಂತರ ಸುದೀರ್ಘ ಕಾಲ ಸಂದು ಹೋದರೂ ಪ್ರವಾದಿವರ್ಯರು(ಸ) ಮಂಡಿಸಿದ ದೇವನ ವಚನಗಳಿಗೆ (ಪವಿತ್ರ ಕುರ್ಆನ್ಗೆ) ಸರಿಸಾಟಿಯಾದ ಕೃತಿಯನ್ನು ರಚಿಸಲು ಯಾರಿಗೂ ಈ ವರೆಗೆ ಸಾಧ್ಯವಾಗಿಲ್ಲ. ಅಂತಹ ವ್ಯಕ್ತಿ ಈ ವರೆಗೆ ಯಾರೂ ಹುಟ್ಟಿಲ್ಲ ಮತ್ತು ಹುಟ್ಟುವುದೂ ಇಲ್ಲ.
ನಿಸ್ವಾರ್ಥ ಪ್ರವಾದಿ
ಕಪಟ ವ್ಯಕ್ತಿಗಳು ಯಾವುದೋ ಪ್ರಾಪಂಚಿಕ ಲಾಭಕ್ಕಾಗಿ ಸುಳ್ಳು ಹೇಳುವವರೆಂದು ನಮಗೆ ತಿಳಿದಿದೆ. ಇಂತಹವರು ತಮ್ಮ ಲಾಭಕ್ಕಾಗಿ ಸುಳ್ಳುವಾದ ಹೂಡುತ್ತಾರೆ. ಆದರೆ ಪ್ರವಾದಿ ಮುಹಮ್ಮದರ(ಸ) ಸಂಪೂರ್ಣ ಜೀವನದಲ್ಲಿ ಅಂತಹ ಯಾವುದೇ ಸುಳಿವು ಕೂಡಾ ಲಭಿಸದು. ಅವರು ತಮ್ಮ ವಾರೀಸುದಾರರ ಹಿತಕ್ಕಾಗಿ ಯಾವುದೇ ಭೌತಿಕ ಸಾಧನಗಳನ್ನು ಶೇಖರಿಸಿಲ್ಲ. ಕೇವಲ ದೇವನಿಂದ ನಿಯುಕ್ತಿಯಾದ (ಸಂದೇಶ ಪ್ರಚಾರ ಕಾರ್ಯದಲ್ಲಿ) ಕೆಲಸದಲ್ಲಿ ತನ್ನನ್ನು ಸಂಪೂರ್ಣವಾಗಿ ನಿಸ್ವಾರ್ಥದಿಂದ ತೊಡಗಿಸಿಕೊಂಡರೇ ಹೊರತು ಇನ್ನೇನೂ ಅವರ ಮುಂದಿರಲಿಲ್ಲ. ಅವರು ಹೇಳಿದರು- “ಪ್ರವಾದಿಗೆ ಯಾವುದೇ ವಾರೀಸುದಾರರಿಲ್ಲ ಅವರು ಬಿಟ್ಟು ಹೋಗುವುದನ್ನು ಮುಸ್ಲಿಮರು, ಬಡವರು, ಆಶ್ರಿತರಿಗೆ ವಿತರಿಸಬೇಕು.” (ಮುಸ್ನದ್ ಅಹ್ಮದ್) ಅವರ ನಿಸ್ವಾರ್ಥತೆ ಈ ಘೋಷಣೆಯಲ್ಲಿ ಅನಾವರಣೆಗೊಂಡಿದೆಯಲ್ಲವೇ?
ಪ್ರತಿಯೋರ್ವ ಪ್ರವಾದಿಯೂ ತಮ್ಮ ಕೆಲಸವನ್ನು ಸ್ಪಷ್ಟವಾಗಿ ಘೋಷಿಸಿದ್ದಾರೆಂದು ಪವಿತ್ರ ಕುರ್ಆನ್ ತಿಳಿಸಿದೆ. ”ಈ ಕಾರ್ಯಕ್ಕಾಗಿ ನಾನು ನಿಮ್ಮಿಂದ ಯಾವ ಪ್ರತಿಫಲವನ್ನೂ ಬಯಸುವುದಿಲ್ಲ. ನನ್ನ ಪ್ರತಿಫಲವು ಸರ್ವಲೋಕಗಳ ಪಾಲಕ ಪ್ರಭುವಿನ ಬಳಿ ಇದೆ. ಆದುದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು (ನಿಸ್ಸಂಕೋಚವಾಗಿ) ನನ್ನನ್ನು ಅನುಸರಿಸಿರಿ.” (ಪವಿತ್ರ ಕುರ್ಆನ್, 26:109-110)
ಪ್ರವಾದಿಗಳನ್ನು ನಿಸ್ವಾರ್ಥಿಗಳೆಂದು ಪವಿತ್ರ ಕುರ್ಆನಿನ ಈ ವಚನವು ಸ್ಪಷ್ಟಪಡಿಸುತ್ತಿದೆ. ಹೌದು, ಪ್ರವಾದಿಗಳ ಪರಿಶ್ರಮದಲ್ಲಿ ಎಂದೂ ಸ್ವಾರ್ಥವನ್ನು ಕಾಣಲು ಯಾರಿಂದಲೂ ಸಾಧ್ಯವಿಲ್ಲ. ಪ್ರವಾದಿಗಳ ಪರಿಶ್ರಮದಲ್ಲಿ ವೈಯಕ್ತಿಕ ಉದ್ದೇಶಗಳಿವೆಯೆಂದು ಯಾರಿಗೂ ಆರೋಪಿಸಲು ಸಾಧ್ಯವಿಲ್ಲ.
ಪ್ರವಾದಿ ಮುಹಮ್ಮದರನ್ನು(ಸ) ಅವರ ಜನಾಂಗ ಪ್ರವಾದಿತ್ವ ಲಭಿಸುವುದಕ್ಕಿಂತ ಮೊದಲು ಅತ್ಯಾದರದಿಂದ ಗೌರವಿಸುತ್ತಿತ್ತು. ಅವರು ಪತ್ನಿ ಮಕ್ಕಳೊಂದಿಗೆ ಸಂತೋಷಪೂರ್ವಕವಾಗಿಯೇ ಈ ಜನರ ನಡುವೆ ವಾಸಿಸುತ್ತಾ ಬಂದಿದ್ದರು. ಆದರೆ ತನ್ನನ್ನು ಪ್ರವಾದಿಯಾಗಿ ನಿಯುಕ್ತಿಗೊಳಿಸಲಾಗಿದೆ ಎಂದು ಮುಹಮ್ಮದರು(ಸ) ಹೇಳಿದೊಡನೆ ಇಡೀ ಅರೇಬಿಯಾವೇ ಅವರ ವಿರುದ್ಧ ತಿರುಗಿ ಬೀಳಬೇಕೆ? ಅವರನ್ನು ವಿರೋಧಿಸಬೇಕೆ? ಸ್ವಂತ ಸಂಬಂಧಿಕರೇ ಅವರ ರಕ್ತದಾಹಿಗಳಾಗಬೇಕೆ?
ಯಾವತ್ತು ಭೌತಿಕವಾದಿ ವ್ಯಕ್ತಿ ಎಲ್ಲರನ್ನು ಎದುರು ಹಾಕಿಕೊಳ್ಳಲು ಬಯಸುವುದಿಲ್ಲ. ಎಲ್ಲರೂ ಶತ್ರುವಾಗುವಂತಹ ತಪ್ಪನ್ನು ಮಾಡಲಾರ. ವಿನಾಕಾರಣ ತನ್ನ ಸುಖ ನೆಮ್ಮದಿ ಕಳೆದುಕೊಳ್ಳಲು ಎಂದೂ ಸಿದ್ದನಾಗಲಾರ. ಆದರೆ ಪ್ರವಾದಿ ಮುಹಮ್ಮದ ರನ್ನು(ಸ) ಪ್ರವಾದಿತ್ವ ಘೋಷಣೆಯೊಂದಿಗೆ ಎಲ್ಲರೂ ವಿರೋಧಿಸ ತೊಡಗಿದರು. ಯಾವನೇ, ಸುಳ್ಳುಗಾರ-ಸ್ವಾರ್ಥಿಗೆ, ಸತ್ಯ- ಅಸತ್ಯಗಳಿಂದ ಏನೂ ಲಾಭವಿಲ್ಲ. ಸುಳ್ಳಾದರೇನು ಸತ್ಯವಾದರೇನು ಅವನಿಗೆ ತನ್ನ ಹಿತವೇ ಮುಖ್ಯವಾಗಿರುತ್ತದೆ. ಅವನಿಗೆ ಜನರ ನಂಬಿಕೆಯಿಂದ ಲಾಭವೇನಿದೆ? ಅವರ ನಂಬಿಕೆ ತಪ್ಪಾಗಿರಲಿ, ಸರಿಯಾಗಿರಲಿ ಯಾವತ್ತೂ ಅದಕ್ಕೆ ಆಘಾತ ಉಂಟು ಮಾಡುವ ಗೋಜಿಗೆ ಅಪ್ಪಿ ತಪ್ಪಿಯೂ ಹೋಗಲಾರನು. ಅವನಿಗೆ ತನ್ನ ಕೆಲಸ ಆದರೆ ಮುಗಿಯಿತು. ಅದಕ್ಕಾಗಿ ತನ್ನೆಲ್ಲ ಶಕ್ತಿಯಿಂದ ಶ್ರಮಿಸುವನು. ಅವನಿಗೆ ಪ್ರಾಪಂಚಿಕ ಲಾಭ, ಸುಖಗಳೇ ಮುಖ್ಯವೆಂದಿರುವಾಗ ಸಂಕಷ್ಟದ ದಾರಿಯನ್ನೇಕೆ ಆಯ್ದುಕೊಳ್ಳುತ್ತಾನೆ? ಹಾಗೆ ಮಾಡುವುದರಿಂದ ಭೌತಿಕ ಲಾಭವನ್ನು ಕಳೆದುಕೊಳ್ಳುವುದಲ್ಲದೆ ಅವನ ಪ್ರಾಣಕ್ಕೂ ಅಪಾಯವಿದೆ. ಆದ್ದರಿಂದ ಓರ್ವ ಕಪಟಿ ಎಂದಿಗೂ ಇಂತಹ ಅಪಾಯಕ್ಕೆ ಕೈ ಹಾಕಲಾರ. ಆದುದರಿಂದ ಪ್ರವಾದಿವರ್ಯರ(ಸ) ಪರಿಶ್ರಮದಲ್ಲಿ ಸ್ವಾರ್ಥವನ್ನು ಆರೋಪಿಸಲು ಯಾರಿಗೂ ಸಾಧ್ಯವಾಗಿಲ್ಲ.
ಜಗತ್ತಿನಲ್ಲಿ ಕಂಡು ಬರುವ ದೊಡ್ಡ ದೊಡ್ಡ ಮಹಾನುಭಾವರು ಸಾಮಾನ್ಯವಾಗಿ ಪರಿಸರದ ಕೊಡುಗೆಯಾಗಿರುತ್ತಾರೆ. ಅವರ ವ್ಯಕ್ತಿತ್ವ ನಿರ್ಮಾಣ ಮತ್ತು ನಿರ್ನಾಮಗಳಲ್ಲಿ ಅವರಿರುವ ವಾತಾವರಣದ ಪಾತ್ರವಿರುವುದು. ಯಾವನೇ ಐತಿಹಾಸಿಕ ವ್ಯಕ್ತಿಯ ಕುರಿತು ನಾವು ಅಧ್ಯಯನಕ್ಕಿಳಿದಾಗ ಅವನ ವ್ಯಕ್ತಿತ್ವ ನಿರ್ಮಾಣದಲ್ಲಿ ಯಾರಿಗೆ ಏನೆಲ್ಲ ಪಾತ್ರವಿತ್ತು ಎಂಬುದನ್ನು ವಿವರಿಸಬಹುದಾಗಿದೆ.
ಪ್ರವಾದಿ ಮುಹಮ್ಮದರು(ಸ) ತಾನು ಜನಿಸಿದ ವಾತಾವರಣದ ಪ್ರಭಾವಕ್ಕೊಳಗಾದವರಲ್ಲ ಎಂಬುದನ್ನು ನಾವು ಕಾಣುತ್ತೇವೆ. ಇದು ಅವರ ವ್ಯಕ್ತಿತ್ವದ ವಿಶೇಷವಾಗಿದೆ. ಅಂದಿನ ಉದ್ವಿಗ್ನ ವಾತಾವರಣಕ್ಕೆ ಉತ್ತಮ ಮೌಲ್ಯಗಳನ್ನು ಅವರು ಕಲಿಸಿಕೊಡಬೇಕಾಗಿತ್ತು. ಆದುದರಿಂದ ಅವರು ಜನಿಸಿರುವ ಪರಿಸರದಲ್ಲಿ ಅವರ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದ್ದ ಯಾವುದೇ ಅಂಶಗಳನ್ನು ನಾವು ಕಾಣಲಾರೆವು.
ಪ್ರವಾದಿಯವರ(ಸ) ವ್ಯಕ್ತಿತ್ವವು ಪಾರದರ್ಶಕವಾಗಿತ್ತು. ಆದರೆ ಅವರ ಈ ವ್ಯಕ್ತಿತ್ವದ ನಿರ್ಮಾಣದ ಮೂಲವನ್ನು ಅರೇಬಿಯಾದಲ್ಲಿ ಕಂಡು ಹುಡುಕಲಾರೆವು. ನೆರೆಯ ರಾಷ್ಟ್ರಗಳು ಮತ್ತು ಸಮಾಜವು ಅವರ ಮೇಲೆ ಪ್ರಭಾವ ಬೀರಿರುವುದನ್ನು ಕಾಣಲಾರೆವು. ಯಾಕೆಂದರೆ ಅವರದ್ದು ದೇವದತ್ತ ವ್ಯಕ್ತಿತ್ವವಾಗಿದೆ. ಪ್ರವಾದಿ ನೂಹ್ ರ(ಅ) ಚರಿತ್ರೆಯನ್ನು ವಿವರಿಸಿದ ತರುವಾಯ ಪವಿತ್ರ ಕುರ್ಆನ್ ಹೀಗೆ ವಿವರಿಸಿದೆ- “ಓ ಪೈಗಂಬರರೇ, ನಿಮಗೆ ‘ದಿವ್ಯವಾಣಿಯ’ ಮೂಲಕ ಕೊಡುತ್ತಿರುವ ಅದೃಶ್ಯದ ವರ್ತಮಾನಗಳಿವು. ಇದಕ್ಕೆ ಮುಂಚೆ ಇವುಗಳನ್ನು ನೀವಾಗಲಿ ನಿಮ್ಮ ಜನಾಂಗವಾಗಲಿ ಅರಿತಿರಲಿಲ್ಲ.” (ಪವಿತ್ರ ಕುರ್ಆನ್, 11:49)
ಅಂದರೆ ಈ ವಚನದಿಂದ ಪ್ರವಾದಿಗಳ ವ್ಯಕ್ತಿತ್ವವನ್ನು ಪರಿಸರ ಪೋಷಿಸಿಲ್ಲ, ಬದಲಾಗಿ ದೇವನೇ ಪೋಷಿಸುತ್ತಾನೆ ಎಂದು ತಿಳಿಯಬಹುದಾಗಿದೆ.
ಈ ರೀತಿ ಹಲವು ಪ್ರವಾದಿಗಳ ಚರಿತ್ರೆ ಪವಿತ್ರ ಕುರ್ಆನ್ನಲ್ಲಿದೆ. ಬನೀ ಇಸ್ರಾಈಲ್ ಸಮುದಾಯದ ವಿದ್ವಾಂಸರೊಳಗಿನ ಭಿನ್ನಾಭಿಪ್ರಾಯವನ್ನು ಪವಿತ್ರ ಕುರ್ಆನ್ ತಿದ್ದಿ ಸರಿಪಡಿಸಿತ್ತು.(ನೋಡಿರಿ, ಪವಿತ್ರ ಕುರ್ ಆನ್ನ 27ನೇ ಅಧ್ಯಾಯದ ಪ್ರಾರಂಭದ ಭಾಗವನ್ನು) ಅದು ದೇವನಿಂದ ಅವತೀರ್ಣವಾಗಿರುವ ಕಾರಣ ಸಾಧ್ಯವಾಗಿದೆ. ಇನ್ನೂ ಅನೇಕ ಜನಾಂಗಗಳನ್ನು ಅವರ ಚರಿತ್ರೆಯನ್ನು ಪವಿತ್ರ ಕುರ್ಆನ್ ಉದ್ಧರಿಸಿದೆ. ಆದರೆ ಇವೆಲ್ಲವೂ ಪ್ರವಾದಿವರ್ಯರ(ಸ) ಮೂಲಕ ತಿಳಿಸಿದ ವಿಚಾರಗಳಷ್ಟೇ. ಪ್ರವಾದಿವರ್ಯರಿಗೆ(ಸ) ದೇವನಿಂದ ಈ ಜ್ಞಾನ ಅವತೀರ್ಣವಾಗದಿದ್ದರೆ ಸಾವಿರಾರು ವರ್ಷಗಳ ಹಿಂದಿನ ಘಟನೆಯನ್ನು ಅವರು ವಿವರಿಸುವುದು ಅಸಾಧ್ಯವಾಗಿತ್ತು. ಅವರು ಓದು ಬರಹವನ್ನು ಅರಿತಿರಲಿಲ್ಲ. ಅಂದರೆ ದಿವ್ಯವಾಣಿಯು ಪ್ರವಾದಿವರ್ಯರ(ಸ) ವ್ಯಕ್ತಿತ್ವವನ್ನು ರೂಪಿಸಿತ್ತು.
ಹಝ್ರತ್ ಮರ್ಯಮ್ಗೆ(ಅ) ಈಸಾ(ಅ) ಜನಿಸಿರುವ ಘಟನೆಯನ್ನು ಉಲ್ಲೇಖಿಸುತ್ತಾ ಪ್ರವಾದಿ ಮುಹಮ್ಮದರನ್ನು ಉದ್ದೇಶಿಸಿ ಪವಿತ್ರ ಕುರ್ಆನ್ ಹೀಗೆಂದಿದೆ: ”ಓ ಪೈಗಂಬರರೇ, ಇವು ನಿಮಗೆ ದಿವ್ಯವಾಣಿಯ ಮೂಲಕ ನಾವು ನೀಡುತ್ತಿರುವ ಅಗೋಚರ ವೃತ್ತಾಂತಗಳು. ಅನ್ಯಥಾ ಹೈಕಲ್ನ (ಮಹಾ ಆರಾಧನಾಲಯದ) ಸೇವಕರು ಮರ್ಯಮರ ಪಾಲಕ ಯಾರಾಗಬೇಕೆಂಬ ಬಗ್ಗೆ ಲೇಖನಿಗಳನ್ನೆಸೆಯುತ್ತಿದ್ದಾಗ ನೀವು ಅಲ್ಲಿ ಉಪಸ್ಥಿತರಿದ್ದಿಲ್ಲ ಮತ್ತು ಅವರೊಳಗೆ ಜಗಳವಾಗುತ್ತಿದ್ದಾಗಲೂ ನೀವು ಅಲ್ಲಿರಲಿಲ್ಲ.” (ಪವಿತ್ರ ಕುರ್ಆನ್, 3:44)
ಪ್ರವಾದಿ ಮುಹಮ್ಮದರ(ಸ) ವ್ಯಕ್ತಿತ್ವದ (ಮೂಲವು ಪವಿತ್ರ ಕುರ್ಆನೆಂದೂ, ಸ್ವಯಂ ದೇವನೇ ನೇರ ಮಾರ್ಗದರ್ಶನಗಳಿಂದ ಅವರ ವ್ಯಕ್ತಿತ್ವವನ್ನು ರೂಪಿಸಿದನೆಂದೂ ಅದರ ರೂಪಣೆಯಲ್ಲಿ ಪರಿಸರ, ವಾತಾವರಣಗಳ ಪ್ರಭಾವವಿಲ್ಲವೆಂದು ನಮಗೆ ಮೇಲಿನ ಪವಿತ್ರ ಕುರ್ಆನ್ ವಚನದಿಂದ ತಿಳಿದು ಬರುತ್ತದೆ.)
ಪ್ರವಾದಿ ಯೂಸುಫ್ ರ(ಅ) ಚರಿತ್ರೆಯನ್ನು ವಿವರಿಸುತ್ತಾ ಪವಿತ್ರ ಪವಿತ್ರ ಕುರ್ಆನ್ ಈ ರೀತಿ ಉದ್ದರಿಸಿದೆ. “ಓ ಪೈಗಂಬರರೇ, ನಿಮ್ಮ ಮೇಲೆ ಅವತೀರ್ಣಗೊಳಿಸುತ್ತಿರುವ ಈ ಚರಿತ್ರೆಯು ಅದೃಶ್ಯ ವೃತ್ತಾಂತಗಳಲ್ಲಾಗಿದೆ. ಅನ್ಯಥಾ ಯೂಸುಫರ ಸಹೋದರರು ಪರಸ್ಪರ ಒಮ್ಮತದೊಂದಿಗೆ ಕುತಂತ್ರ ಹೂಡಿದಾಗ ನೀವು ಅಲ್ಲಿರಲಿಲ್ಲ.” (ಪವಿತ್ರ ಕುರ್ಆನ್, 12:102)
ಅಂದರೆ ದೇವ ಜ್ಞಾನವೇ ಪ್ರವಾದಿ ಮುಹಮ್ಮದರ(ಸ) ವ್ಯಕ್ತಿತ್ವದ ಮೂಲವಾಗಿದೆ.
ಇದು ಹೇಗೆ ಸಂಭವಿಸಿತು?
ಪವಿತ್ರ ಕುರ್ಆನಿನಲ್ಲಿ ಪೂರ್ವ ದೈವಿಕ ಗ್ರಂಥಗಳ ಶಿಕ್ಷಣಗಳಿವೆ. ಪೂರ್ವ ಪ್ರವಾದಿಗಳ ಚರಿತ್ರೆಗಳಿವೆ. ಪೂರ್ವ ಜನಾಂಗಗಳ ಧರ್ಮ ಮತ್ತು ವಿಚಾರಗಳು ಅದರಲ್ಲಿದೆ. ಪವಿತ್ರ ಕುರ್ ಆನಿನಲ್ಲಿಯೇ ನಮಗೆ ಪ್ರಾಚೀನ ಇತಿಹಾಸವೂ ದೊರೆಯುವುದು. ಇವೆಲ್ಲವೂ ಹೇಗೆ ಪ್ರವಾದಿ ಮುಹಮ್ಮದರಿಗೆ(ಸ) ತಿಳಿಯಿತು? ಇಷ್ಟೇ ಅಲ್ಲ, ಪವಿತ್ರ ಕುರ್ಆನಿನಲ್ಲಿ ನೈತಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಇತ್ಯಾದಿಗಳ ಆಳ ವ್ಯಾಪಿ ಜ್ಞಾನಭಂಡಾರವೇ ಇದೆ. ಪ್ರವಾದಿವರ್ಯರ(ಸ) ಜ್ಞಾನ ಮತ್ತು ಪವಿತ್ರ ಕುರ್ಆನಿನ ಮೂಲವು ದೇವನ ದಿವ್ಯವಾಣಿ ಆಗಿದೆಯೆಂಬ ವಿಚಾರಕ್ಕೆ ಇವೆಲ್ಲವೂ ಕನ್ನಡಿಯಾಗಿದೆ. ಪವಿತ್ರ ಕುರ್ಆನ್ ಉಲ್ಲೇಖಿಸಿದ ಪೂರ್ವ ಜನಾಂಗಗಳ ಚರಿತ್ರೆಗಳು, ಪ್ರಾಚ್ಯ ವಸ್ತು ಸಂಶೋಧಕರು ಬೇರೆ ಪುರಾತನ ಗ್ರಂಥಗಳಲ್ಲಿ ಸಂಶೋಧನೆ ನಡೆಸಿದ್ದಾರೆ. ಹಿಬ್ರೂ (Hebrow), ಸಿರಿಯನ್ (Syric) ಹಾಗೂ ಗ್ರೀಕ್ ಗ್ರಂಥಗಳಲ್ಲಿ ಅವು ಲಭ್ಯವೆಂದು ಸಂಶೋಧಕರು ಹೇಳಿಕೊಂಡಿದ್ದಾರೆ. ಆದರೆ ಸಂಶೋಧಕರು ಪರಿಶೀಲಿಸಿದ ಯಾವ ಗ್ರಂಥವನ್ನೂ ಅರಬರು ಅರಿತಿರಲಿಲ್ಲ.
ಮುಹಮ್ಮದರು(ಸ) ಓರ್ವ ಓದು ಬರಹವನ್ನು ಅರಿಯದ ವ್ಯಕ್ತಿಯಾಗಿದ್ದಾರೆ. ಆದುದರಿಂದ ಅರಬರಿಗೆ ಅಪರಿಚಿತವಾದ ಗ್ರಂಥಗಳ ಅಧ್ಯಯನ ನಡೆಸಲು ಅವರಿಗೆ ಸಾಧ್ಯವಿರಲಿಲ್ಲ. ಅಲ್ಲದೆ ಯಾವ ಅನುವಾದಕರ ತಂಡವೂ ಅವರ ಬಳಿ ಇರಲಿಲ್ಲ. ಆದ್ದರಿಂದ ಗ್ರಂಥಗಳಿದ್ದ ಐತಿಹಾಸಿಕ ವಿಚಾರಗಳನ್ನು ಅರಿಯುವ ಪ್ರಶ್ನೆ ಉದ್ಭವವಾಗದು. ಅದಲ್ಲದೆ ಅಂದು ಮಕ್ಕಾದಲ್ಲಿ ಯಾವುದೇ ಗ್ರಂಥಾಲಯವೂ ಇರಲಿಲ್ಲ.
ಆದರೆ ವ್ಯಾಪಾರಾರ್ಥ ಪ್ರವಾದಿವರ್ಯರು(ಸ) ಮಕ್ಕಾದಿಂದ ಹೊರಗೆ ಸಂಚರಿಸಿದ್ದಾರೆ. ಆಗ ಯಾವುದೇ ಗ್ರಂಥಾಲಯಗಳಿಗೆ ಭೇಟಿಯಿತ್ತು, ಧಾರ್ಮಿಕ, ಐತಿಹಾಸಿಕ ಜ್ಞಾನವನ್ನು ಸಂಪಾದಿಸಿರುವರೆಂಬುದಕ್ಕೆ ಆಧಾರಗಳಿಲ್ಲ, ಆ ಜ್ಞಾನದ ಮೂಲದಿಂದ ಪ್ರವಾದಿತ್ಯವನ್ನು ನಿರ್ವಹಿಸಿದ್ದಾರೆಂಬುದಕ್ಕೂ ಪುರಾವೆಯಿಲ್ಲ. ಅದಲ್ಲದೆ ಪ್ರವಾದಿತ್ವಕ್ಕಿಂತ ಮುಂಚೆ ಕೂಡಾ ಪೂರ್ವ ಜನಾಂಗಗಳು ಮತ್ತು ಅವರ ಚರಿತ್ರೆಗಳನ್ನು ಪ್ರವಾದಿವರ್ಯರು(ಸ) ಎಂದೂ ಉಲ್ಲೇಖಿಸಿರಲಿಲ್ಲ.
ಒಂದು ವೇಳೆ, ವ್ಯಾಪಾರಕ್ಕೆ ಹೋಗಿದ್ದ ವೇಳೆ ಕ್ರೈಸ್ತ ಅಥವಾ ಯಹೂದಿ ಪುರೋಹಿತರಿಂದ ಜ್ಞಾನ ಸಂಪಾದಿಸಿ ಪ್ರವಾದಿತ್ವವನ್ನು ನಿರ್ವಹಿಸಿದ್ದರೆ, ಯಹೂದಿ ಮತ್ತು ಕ್ರೈಸ್ತ ಜಗತ್ತು ಪ್ರವಾದಿ ಎಂದು ಹೇಳುವ ಮುಹಮ್ಮದ್(ಸ) ಸಕಲ ಜ್ಞಾನವನ್ನು ನಮ್ಮಿಂದಲೇ ದೋಚಿಕೊಂಡಿದ್ದಾನೆ ಎಂದು ತೀಕ್ಷ್ಮವಾಗಿ ಪ್ರತಿಕ್ರಿಯಿಸುತ್ತಿತ್ತು!
ಪ್ರವಾದಿ ಮುಹಮ್ಮದರು(ಸ) ಓರ್ವ ನಿರಕ್ಷರಿ ವ್ಯಕ್ತಿಯಾಗಿದ್ದರು. ಆದರೂ ಅವರು ಪೂರ್ವಿಕ ದೈವಿಕ ಗ್ರಂಥಗಳ ಅಂಶಗಳನ್ನು ಜನರ ಮುಂದಿರಿಸಿದರು. ಅವರ ಪ್ರವಾದಿತ್ವಕ್ಷೆ ಇದು ಒಂದು ಬಹಿರಂಗ ಪುರಾವೆಯಾಗಿದೆ. ಮಾನವರ ಮಾರ್ಗದರ್ಶನಕ್ಕೆ ಅಗತ್ಯವಾದ ಎಲ್ಲ ಸಾಮಗ್ರಿಗಳು ಅವರಲ್ಲಿತ್ತು. ಪೂರ್ವ ದೈವಿಕ ಗ್ರಂಥದಲ್ಲಿ ನಡೆದಿರುವ ಮಾನವ ಹಸ್ತಕ್ಷೇಪಗಳನ್ನು ಎತ್ತಿ ತೋರಿಸಿದರು. ಅವುಗಳ ಬಗ್ಗೆ ವಿವರಣೆ ನೀಡಿದರು. ಅವುಗಳಲ್ಲಿ ಎಂತಹ ಪರಿವರ್ತನೆಗಳಾಗಿವೆ ಮತ್ತು ದೇವ ಗ್ರಂಥದ ವಾಸ್ತವಿಕತೆಗಳೇನು ಎಂದು ತಿಳಿಸಿದರು. ನಿಜಾಂಶಗಳನ್ನು ಜನರಿಗೆ ಸ್ಪಷ್ಟಪಡಿಸಿದರು.
ಮುಹಮ್ಮದರು(ಸ) ಮಾಡಿರುವುದು ಮರುಭೂಮಿಯ ಯಾವುದೇ ಧರ್ಮ ದರ್ಶನಗಳೊಂದಿಗೂ ಸಂಬಂಧವಿಲ್ಲದ ಓರ್ವ ವ್ಯಕ್ತಿ ಮಾಡಿರುವ ಕೆಲಸವಾಗಿದೆ.
ಪ್ರವಾದಿವರ್ಯರ(ಸ) ಮೇಲೆ ವಿರೋಧಿಗಳು ಹೊರಿಸುತ್ತಿದ್ದ ಆರೋಪಗಳನ್ನು ಪವಿತ್ರ ಕುರ್ಆನ್ ಈ ರೀತಿ ವಿವರಿಸಿದೆ. ‘ಈ ವ್ಯಕ್ತಿ ತನ್ನ ಪ್ರಭುವಿನ ಕಡೆಯಿಂದ ನಿದರ್ಶನ(ಪವಾಡ)ವನ್ನೇನೂ ತರುವುದಿಲ್ಲವೇಕೆ ಎಂದು ಅವರು ಕೇಳುತ್ತಾರೆ. ಅವರ ಬಳಿಗೆ ಹಿಂದಿನ ಗ್ರಂಥಗಳ ಸಕಲ ಶಿಕ್ಷಣಗಳ ಸುಸ್ಪಷ್ಟ ವಿವರಣೆ ಬರಲಿಲ್ಲವೇ?” (ಪವಿತ್ರ ಕುರ್ ಆನ್, 20:133)
ಹೀಗೆ ಪೂರ್ವ ಗ್ರಂಥಗಳ ಸಕಲ ಶಿಕ್ಷಣಗಳು ನಿದರ್ಶನ(ಪವಾಡ)ವಾಗಿದೆ ಎಂದು ಪವಿತ್ರ ಕುರ್ಆನ್ ವಿಶ್ಲೇಷಿಸುತ್ತಿದೆ. ಯಾಕೆಂದರೆ ದೇವಗ್ರಂಥಗಳ ಕುರಿತು (Scripture) ಕಿಂಚಿತ್ತೂ ಜ್ಞಾನವಿಲ್ಲದ ಓರ್ವ ವ್ಯಕ್ತಿ ಅವರಾಗಿದ್ದರು. ಧಾರ್ಮಿಕ ಗುರುಗಳ ಸಹವಾಸ ಅರಿಯದಿರುವ ವ್ಯಕ್ತಿಯಾಗಿದ್ದರು. ಅವರು ಪೂರ್ವಗ್ರಂಥಗಳ ಶಿಕ್ಷಣವನ್ನು ಹೇಳುವುದು ಪವಾಡವಲ್ಲದೆ ಮತ್ತೇನು?
ಜಗತ್ತಿಗೆ ಮುಹಮ್ಮದರು(ಸ) ಧಾರ್ಮಿಕ ಶಿಕ್ಷಣ ನೀಡತೊಡಗಿದ್ದು ಒಂದು ಅನಿರೀಕ್ಷಿತವಾಗಿದೆ. ಅವರು ಪೂರ್ವ ಗ್ರಂಥಗಳು ಮತ್ತು ಪ್ರವಾದಿಗಳ ನಿಜವೂ ಹೃದ್ಯವೂ ಆದ ಶಿಕ್ಷಣ ನೀಡತೊಡಗಿರುವುದು ಆಕಸ್ಮಿಕವಾಗಿತ್ತು. ಈ ಅನಿರೀಕ್ಷಿತ ಸಾಧನೆ ಮತ್ತು ಮಹಾನ್ ಕಾರ್ಯಗಳೆಲ್ಲವೂ ಮುಹಮ್ಮದರ(ಸ) ಪ್ರವಾದಿತಕ್ಕೆ ಬಹಿರಂಗ ಪ್ರಮಾಣಗಳಾಗಿವೆ.
ಮುಹಮ್ಮದರ(ಸ) ಪರೀಕ್ಷೆ
ಇದಾದ ಮೇಲೆ ಮಕ್ಕಾದ ವಿರೋಧಿಗಳು ಯಹೂದಿಗಳ ಸಲಹೆಯಂತೆ ಮುಹಮ್ಮದರನ್ನು(ಸ) ಪರೀಕ್ಷಿಸಲು ಮುಂದಾದರು. ಅವರು ಪ್ರವಾದಿವರ್ಯರ(ಸ) ಮುಂದೆ ಕಗ್ಗಂಟಾದ ಪ್ರಶ್ನೆಗಳನ್ನಿರಿಸಿದರು. ಬನೀ ಇಸ್ರಾಈಲ್ ಸಮುದಾಯ ಈಜಿಪ್ಟ್ ಗೆ ಯಾಕೆ ವಲಸೆ ಹೋಯಿತೆಂದು ಪ್ರವಾದಿವರ್ಯರು(ಸ) ಹೇಳಬೇಕಾಗಿತ್ತು. ಫೆಲೆಸ್ತೀನ್ ಇತಿಹಾಸವು ಅರಬ್ ಜನತೆಗೆ ಸಂಪೂರ್ಣ ಅಪರಿಚಿತವಾದುದು. ಮಾತ್ರವಲ್ಲ, ಈ ವೃತ್ತಾಂತವನ್ನು ಯಾರೂ ಪ್ರವಾದಿವರ್ಯರಿಂದ(ಸ) ಆ ಮೊದಲು ಕೇಳಿರಲಿಲ್ಲ. ಪ್ರವಾದಿವರ್ಯರು(ಸ) ಈ ಪ್ರಶ್ನೆಗೆ ಉತ್ತರಿಸುವುದು ಸಾಧ್ಯವಿಲ್ಲವೆಂಬ ಭರವಸೆ ವಿರೋಧಿಗಳದ್ದಾಗಿತ್ತು. ಆದುದರಿಂದ ಪ್ರವಾದಿ(ಸ) ತನ್ನ ಅಸಹಾಯಕತೆ ತೋಡಿಕೊಳ್ಳುತ್ತಾರೆ, ಆನಂತರ ಮುಹಮ್ಮದ್ರನ್ನು(ಸ) ದೇವನ ಪ್ರವಾದಿಯಲ್ಲವೆಂದು ಸಾರಬಹುದೆಂದು ಅವರು ಯೋಚಿಸಿದ್ದರು.
ಆದರೆ ಈ ಪ್ರಶ್ನೆಗೆ ಉತ್ತರವಾಗಿ ದೇವನಿಂದ ಪವಿತ್ರ ಕುರ್ ಆನಿನ ಸೂರಃ ಯೂಸುಫ್ ಎಂಬ ಅಧ್ಯಾಯವೇ ಅವತೀರ್ಣಗೊಂಡಿತು. ಅದರಲ್ಲಿ ಮಕ್ಕಾ ನಿವಾಸಿಗಳು. ಇಂದು ಪ್ರವಾದಿವರ್ಯರೊಡನೆ(ಸ) ತೋರಿಸುವ ದುರ್ವತನೆ ಪ್ರವಾದಿ ಯೂಸುಫ್ರ(ಅ) ಮೇಲೂ ತೋರಿಸಲಾಗಿತ್ತು ಆದರೆ ಅಲ್ಲಾಹನು ಪ್ರವಾದಿ ಯೂಸುಫ್ರಿಗೆ(ಅ) ಔನ್ನತ್ಯವನ್ನು ನೀಡಿದನು. ಅವರಿಗೆ ಕಿರುಕುಳ ಕೊಟ್ಟ ಸಹೋದರರು ಲಜ್ಜೆ ಅನುಭವಿಸಬೇಕಾಯಿತು ಎಂಬ ಎಚ್ಚರಿಕೆಗಳೊಂದಿಗೆ ಪವಿತ್ರ ಕುರ್ಆನ್ ಅವತೀರ್ಣವಾಯಿತು.
ಇದೇ ರೀತಿ ಮಕ್ಕಾದ ಬಹುದೇವ ವಿಶ್ವಾಸಿಗಳು ಕೇಳಿದ ಮೂರು ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಪವಿತ್ರ ಕುರ್ಆನಿನ ಸೂರಃ ಅಲ್ ಕಹ್ಫ್ ಅಧ್ಯಾಯ ಅವತೀರ್ಣವಾಗಿತ್ತು. ಮಕ್ಕಾದ ಬಹುದೇವ ವಿಶ್ವಾಸಿಗಳು, ಯಹೂದಿಗಳು ಮತ್ತು ಕೈಸ್ತರೊಡನೆ ಸಮಾಲೋಚಿಸಿ ಪ್ರವಾದಿವರ್ಯರನ್ನು(ಸ) ಪರೀಕ್ಷಿಸಲು ಸಿದ್ಧರಾಗಿ ಈ ಮೂರು ಪ್ರಶ್ನೆಗಳನ್ನು ಕೇಳಿದ್ದರು.
1.ಕಹ್ಫ್ ನವರೆಂದರೆ (ಗುಹಾವಾಸಿಗಳು) ಯಾರು?
2.ದುರ್ಲ್ಕನೈನ್ ಎಂದರೆ ಯಾರು? ಅವರ ಚರಿತ್ರೆಯೇನು?
3.ಖಿಝ್ರ್ ರ ವೃತ್ತಾಂತವೇನು?
ಮುಹಮ್ಮದರು ತಮ್ಮ ಈ ಮೂರೂ ಪ್ರಶ್ನೆಗಳನ್ನು ಉತ್ತರಿಸಲಾರರು ಎಂದೇ ವಿರೋಧಿಗಳು ಮತ್ತು ಯಹೂದಿಯರು ಭಾವಿಸಿದ್ದರು. ಆ ಮೂಲಕ ಪ್ರವಾದಿಗೆ ಅಲೌಕಿಕ ಜ್ಞಾನ ಮೂಲವಿಲ್ಲವೆಂದು ಅವರು ಸಾಬೀತುಪಡಿಸಬೇಕಾಗಿತ್ತು. ಮುಹಮ್ಮದರನ್ನು (ಸ) ಪ್ರವಾದಿಯಲ್ಲವೆಂದು ಸಿದ್ಧಪಡಿಸಬೇಕಾಗಿತ್ತು. ಆದರೆ ವಿರೋಧಿಗಳ ಇಚ್ಛೆ ಈಡೇರಿತೇ? ವಿರೋಧಿಗಳ ಪ್ರಶ್ನೆಗೆ ಉತ್ತರವಾಗಿ ಅಲ್ಲಾಹನು ಒಂದು ದೀರ್ಘ ಅಧ್ಯಾಯವನ್ನೇ ಅವತೀರ್ಣಗೊಳಿಸಿದನು. ಪವಿತ್ರ ಕುರ್ಆನಿನ ಸೂರಃ ಅಲ್ ಕಹ್ಫ್ ನ ಮೂಲಕ ಅವರಿಗೆ ಉತ್ತರ ನೀಡಲಾಯಿತು. ಮುಹಮ್ಮದರ(ಸ) ವಿರೋಧಿಗಳ ಪ್ರಶ್ನೆಯು ಕೂಡಾ ಪ್ರವಾದಿಷ್ಟ ಪುರಾವೆಯಾಗಿ ಪರಿಣಮಿಸಿದೆ.
ಪವಿತ್ರ ಕುರ್ಆನ್ನಲ್ಲಿರುವ ಭವಿಷ್ಯವಾಣಿಗಳು ಪ್ರವಾದಿವರ್ಯರು(ಸ) ಜ್ಞಾನದ ಅಲೌಕಿಕ ಮೂಲವನ್ನು ಹೊಂದಿದ್ದಾರೆ ಎಂಬುದಕ್ಕೆ ಒಂದು ಪ್ರಮಾಣವಾಗಿದೆ. ಭವಿಷ್ಯವೆಂದರ ಸಂಭಾವ್ಯ ಸತ್ಯವನ್ನು ಹೇಳುವುದಾಗಿದೆ. ಪವಿತ್ರ ಕುರ್ ಆನಿನಲ್ಲಿ ಇಂತಹ ಭವಿಷ್ಯ ನುಡಿಗಳಿವೆ. ದೇವ ಮೂಲದಿಂದಲ್ಲದೇ ಇಂತಹ ವಾಣಿಗಳನ್ನು ಕಲ್ಪಿಸಿ ಊಹಿಸಿ ಯಾರಾದರೂ ಹೇಳುವುದು ಸಾಧ್ಯವೇ? ಒಂದು ವೇಳೆ ಹೇಳಿದರೂ ಅದು ನಿಜವಾದೀತೆ?
ಕೇವಲ ಊಹೆಯ ಆಧಾರದಲ್ಲಿ ಒಬ್ಬನು ಮುಂದೆ ಆಗಲಿರುವ ಘಟನೆಗಳನ್ನು ಹೇಳಹೋದರೆ ಅಪಾಯವನ್ನು ಮೈಮೇಲೆ ಎಳೆದುಕೊಂಡಂತಾಗುವುದು. ಯಾಕೆಂದರ ಅವನ ಅಂದಾಜು ಒಂದು ವೇಳೆ ತನ್ನ ಊಹೆಗಳಂತೆ ಘಟನೆ ನಡೆಯದೆ, ವಿರುದ್ಧವಾದರ ಅವನ ವಾದ ತಪ್ಪಾಗುವುದು. ತನ್ನನ್ನು ಪ್ರವಾದಿಯೆಂದು ಹೇಳುವುದು. ದೇವನ ವತಿಯ ಜ್ಞಾನದಿಂದ ಸಂಭವನೀಯ ಘಟನೆಗಳನ್ನು ತಿಳಿಸುತ್ತಿದ್ದೇನೆ ಎನ್ನುವುದು. ಆನಂತರ ಆ ಘಟನೆಯು ಸಂಭವಿಸದಿದ್ದರೆ ಅವನ ಪ್ರವಾದಿತ್ವವು ಕಪಟವೆಂದು ಸಾಬೀತಾಗುತ್ತದೆ.
ಪ್ರವಾದಿ ಮುಹಮ್ಮದರ(ಸ) ಮೂಲಕ ಪವಿತ್ರ ಕುರ್ ಆನ್ ತಿಳಿಸಿರುವ ಎಲ್ಲ ಭವಿಷ್ಯವಾಣಿಗಳು ಸತ್ಯವೆಂದು ಸಾಬೀತಾಗಿವೆ. ಒಮ್ಮೆ ರೋಮನ್ನರು ಇರಾನಿಯರ ವಿರುದ್ಧ ಸೋಲನುಭವಿಸಿದರು. ಪವಿತ್ರ ಕುರ್ ಆನ್ ಮತ್ತೆ ರೋಮನ್ನರು ಗೆಲ್ಲುತ್ತಾರೆಂದು ಭವಿಷ್ಯ ನುಡಿಯಿತು. ಅದರ ಭವಿಷ್ಯವಾಣಿಯು ಕೆಲವು ವರ್ಷಗಳ ನಂತರ ನಿಜವಾಯಿತು. ರೋಮನ್ನರು ಪರ್ಶಿಯನ್ನರನ್ನು (ಇರಾನಿಯನ್ನರನ್ನು ಸೋಲಿಸಿದರು.
ರೋಮನ್ನರು ಮರಳಿ ಗೆಲ್ಲುವ ಬಗ್ಗೆ ಪವಿತ್ರ ಕುರ್ಆನ್ ಸೂಚನೆ ನೀಡಿದಾಗ ಮತ್ತೆ ರೋಮ್ ಗೆಲ್ಲುವ ಯಾವ ಲಕ್ಷಣಗಳೂ ಗೋಚರಿಸುತ್ತಿರಲಿಲ್ಲ. ಅಂದಿನ ಆತಂತ್ರ ಸ್ಥಿತಿಯನ್ನು ಎಡ್ವರ್ಡ್ ಗಿಬ್ಬನ್ (Edward Gibbon)ರಂತಹ ಪ್ರಸಿದ್ಧ ಇತಿಹಾಸಕಾರರೇ ಒಪ್ಪಿಕೊಂಡಿದ್ದಾರೆ. “The History of the Decline and fall of the Roman Empire” ಎಂಬ ಕೃತಿಯಲ್ಲಿ ನಮೂದಿಸಿದ್ದಾರೆ.
ಒಂದು ಪಾರ್ಶ್ವ (ನೋಟ)
ಪ್ರವಾದಿವರ್ಯರನ್ನು(ಸ) ಇನ್ನೊಂದು ಪಾರ್ಶ್ವದಿಂದಲೂ ನಾವು ವೀಕ್ಷಿಸಬಹುದಾಗಿದೆ. ಪ್ರವಾದಿವರ್ಯರು(ಸ) ವಿಭಿನ್ನ ಪರಿಸ್ಥಿತಿಗಳನ್ನು ಅತೀ ಕಠಿಣ ಸ್ಥಿತಿಯಲ್ಲಿ ಎದುರಿಸಿ ದಾಟಬೇಕಾಗಿತ್ತು. ಇಂತಹ ಸಂದರ್ಭಗಳಲ್ಲಿ ಎಂತಹ ಉನ್ನತ ವ್ಯಕ್ತಿಗೂ ಯಾವುದಾದರೊಂದು ಕೆಟ್ಟ ವಿಚಾರದ ಪ್ರಭಾವಕ್ಕೊಳಗಾಗದಿರಲು ಸಾಧ್ಯವಿಲ್ಲ, ಅದು ಸಹಜವಾಗಿದೆ.
ಅದರಲ್ಲೂ ತನ್ನ ಮಾನ ಮರ್ಯಾದೆಗಳ ಮೇಲೆ ದಾಳಿಯಾದಾಗ ಯಾವ ವ್ಯಕ್ತಿಯೂ ಸುಮ್ಮನಿರುವುದಿಲ್ಲ, ತತ್ತರಿಸಿ ಹೋಗುತ್ತಾರೆ. ಆದರೆ ಪ್ರವಾದಿ ಮುಹಮ್ಮದರಿಗೆ(ಸ) ಇಂತಹ ಎಡವಟ್ಟಿನ ಪರಿಸ್ಥಿತಿ ಎದುರಾಗಿರಲಿಲ್ಲ, ಅವರು ಹೇಳುತ್ತಿದ್ದ ದೇವ ವಚನಗಳಲ್ಲಿ ಯಾವುದೇ ಲೋಪಗಳಿರಲಿಲ್ಲ ಮತ್ತು ಪ್ರತಿಕೂಲ ಪ್ರತಿಕ್ರಿಯೆಯಿಂದ ಅದು ಮುಕ್ತವಾಗಿತ್ತು. ಆದುದರಿಂದ ಜನರನ್ನು ಅಭಿಸಂಬೋಧಿಸಿದಾಗ ಪ್ರವಾದಿವರ್ಯರು(ಸ) ಎಲ್ಲಿಯೂ ತಡವರಿಸಿರಲಿಲ್ಲ. ಮಾನಸಿಕ ದೌರ್ಬಲ್ಯವನ್ನೂ ಎದುರಿಸಲಿಲ್ಲ. ಇದು ಪವಿತ್ರ ಕುರ್ ಆನ್ ಮಾನವ ರಚನೆಯಲ್ಲ ಎಂಬುದಕ್ಕೆ ಪುರಾವೆಯಾಗಿದೆ. ಅದು ಸಕಲರ ಪ್ರಭುವಾದ ಅಲ್ಲಾಹನ ವಚನಗಳಾಗಿದೆ. ಈ ರೀತಿ ಪವಿತ್ರ ಕುರ್ಆನ್, ಮುಹಮ್ಮದರು(ಸ) ನೈಜ ಪ್ರವಾದಿಯೆಂಬುದಕ್ಕೂ ಸ್ಪಷ್ಟ ಪುರಾವೆಯಾಗಿದೆ. ಯಾಕೆಂದರೆ ಎಂದೂ ದೈವಿಕ ವಚನಗಳು ಕೇವಲ ಪ್ರವಾದಿಗಳ ಮೇಲೆ ಮಾತ್ರ ಅವತೀರ್ಣವಾಗುವುದು.
ಪ್ರವಾದಿಗಳ ಎಚ್ಚರಿಕೆಗಳು
ಪ್ರವಾದಿಗಳೊಡನೆ ಯಾಕೆ ದೈವಿಕ ಯಾತನೆಗಳನ್ನು ಇಳಿಸುವುದಿಲ್ಲ ಎಂದು ಕೇಳುವವರೆಗೂ ಜನಾಂಗಗಳ ವಿದ್ರೋಹ ಅಂದು ಹದಮೀರುತ್ತಿತ್ತು. ಆ ಸಂದರ್ಭದಲ್ಲಿ ಪ್ರವಾದಿಗಳು ಶೀಘ್ರವೇ ದೈವಿಕ ಯಾತನೆ ಎರಗಲಿದೆ. ಆವರೆಗೂ ನೀವು ಸುಖಭೋಗವನ್ನು ಅನುಭವಿಸುತ್ತಿರಿ. ಆದರೆ ದೇವನ ಪ್ರಕೋಪದಿಂದ ನೀವೆಂದೂ ಪಾರಾಗಲಾರಿರಿ ಎಂದು ಜನರಿಗೆ ಹೇಳುತ್ತಿದ್ದರು. ಇದು ಅವರ ಪ್ರವಾದಿತಕ್ಕೆ ಮಹತ್ವಪೂರ್ಣ ಸಾಕ್ಷ್ಯವಾಗಿದೆ. ಯಾಕೆಂದರೆ ಪ್ರವಾದಿಗಳು ಹೇಳಿದಂತೆ ಆ ಜನಾಂಗಗಳು ನಾಶಗೊಂಡವು. ಪ್ರವಾದಿಗಳು ಅವುಗಳ ನಾಶವನ್ನು ಸೂಚಿಸಿದ್ದಾಗ ದೈವಿಕ ಯಾತನೆಯೆರಗುವ ಯಾವ ಕುರುಹುಗಳೂ ಗೋಚರಿಸುತ್ತಿರಲಿಲ್ಲ ಎಂಬಂಶ ಇಲ್ಲಿ ಗಮನಾರ್ಹವಾಗಿದೆ. ಇಂತಹ ಅನೇಕ ಉದಾಹರಣೆಗಳನ್ನು ಪವಿತ್ರ ಕುರ್ ಆನಿನಲ್ಲಿ ಕಾಣಬಹುದಾಗಿದೆ.
ಇಂದಿನ ಜನರು ದೇವನ ಆಜ್ಞೆಯನ್ನು ಉಲ್ಲಂಘಿಸುವುದಿಲ್ಲವೇ? ದೇವನ ವಿರುದ್ಧ ಬಂಡೆದ್ದಿಲ್ಲವೇ? ಹೀಗಿದ್ದೂ ದೇವನ ಯಾತನೆ ಯಾಕೆ ಎರಗಿಲ್ಲ ಎಂದು ಪ್ರಶ್ನಿಸಬಹುದಾಗಿದೆ. ಪ್ರವಾದಿಗಳಿರುವಾಗಲೆಲ್ಲ ಅವರ ವಿರುದ್ಧ ಸಂಚು ತಾರಕಕ್ಕೇರಿತ್ತು. ಅವರ ಸಂದೇಶಗಳನ್ನು ನೇರವಾಗಿ ವಿರೋಧಿಸಲಾಗುತ್ತಿತ್ತು. ಮಾತ್ರವಲ್ಲ ದೈವಿಕ ಯಾತನೆಯನ್ನೇ ತನ್ನಿ ಎನ್ನಲು ಜನರು ಹೇಸಿರಲಿಲ್ಲ. ಅಂದಿನ ಜನಾಂಗ ಪ್ರವಾದಿಯನ್ನು ಮತ್ತು ಪ್ರವಾದಿಯ ಸಂದೇಶ ಪ್ರಚಾರ ಕಾರ್ಯಗಳನ್ನು ಪ್ರತ್ಯಕ್ಷ ತಡೆಯುತ್ತಿದ್ದರು. ಈ ಜನಾಂಗಗಳ ಅಪರಾಧಗಳು ಮತ್ತು ಪ್ರವಾದಿಗಳು ಉಪಸ್ಥಿತರಿಲ್ಲದ ಇಂದಿನ ಸಮಾಜದ ಅಪರಾಧಗಳು ಸಮಾನವಲ್ಲ, ಹಾಗಾಗಿ ಇಂದಿನ ಜನರ ದೇವಾಜ್ಞೆ ಉಲ್ಲಂಘನೆಯನ್ನು ಹಿಂದಿನ ಜನಾಂಗಗಳ ಆಜ್ಯೋಲ್ಲಂಘನೆಗೆ ಸಮಾನವಾಗಿ ಹೋಲಿಸುವಂತಿಲ್ಲ. ಆದುದರಿಂದ ಇಂದು ಇಂತಹ ಯಾತನೆಗಳೇಕೆ ಎರಗುವುದಿಲ್ಲ ಎಂಬ ಪ್ರಶ್ನೆಯೇ ಉದ್ಭವಿಸದು. ಯಾಕೆಂದರೆ ಪ್ರವಾದಿಗಳಿದ್ದ ಜನಾಂಗಗಳಿಗಿಂತ ಪ್ರವಾದಿಗಳು ಉಪಸ್ಥಿತರಿಲ್ಲದ ಜನರಿಗೆ ಹೆಚ್ಚು ಸುಧಾರಣೆಯ ಅವಕಾಶವನ್ನು ದೇವನು ನೀಡುತ್ತಾನೆ.
ಆದರೆ ಅವರು ಶಿಕ್ಷೆಯಿಂದ ಪಾರಾಗುವರೆಂದು ಇದರ ಅರ್ಥವಲ್ಲ, ಅವರು ಶಿಕ್ಷೆಯಿಂದ ತಾತ್ಕಾಲಿಕವಾಗಿ ದೂರವಿದ್ದಾರೆ. ಅವರನ್ನು ಎಂದೂ ಶಿಕ್ಷಿಸಲಾಗದು ಎಂದು ಇದರ ಅರ್ಥವಲ್ಲ, ನಿಜಕ್ಕಾದರೆ ಯಾವುದೇ ಜನಾಂಗಕ್ಕೆ ಪರಲೋಕದ ಶಿಕ್ಷೆಯೊಂದೇ ಸಾಕಾಗುವುದು. ಅದೂ ಅಲ್ಲದೆ ಭೌತಿಕವಾಗಿಯೂ ದೈವಿಕ ಶಿಕ್ಷೆ ಮತ್ತು ಯಾತನೆಗಳ ವಿಭಿನ್ನ ರೂಪಗಳು ಕೂಡಾ ಅಸ್ತಿತ್ವದಲ್ಲಿವೆ. ಅಪರಾಧಿ ಜನಾಂಗಗಳನ್ನು ನಿಂದಕ ಸ್ಥಿತಿಯಲ್ಲಿ ಇನ್ನಷ್ಟು ಕಾಲ ಉಳಿಸಿಕೊಳ್ಳುವುದು ಶಿಕ್ಷೆಯಾಗಿದೆ. ಅದರ ಪಾಲಿಗೆ ಅವರು ಎದುರಿಸುತ್ತಿರುವ ನಿಂದ್ಯತೆಯೇ ಶಿಕ್ಷೆಯಾಗಿದೆ. ಯಾವುದಾದರೂ ಜನಾಂಗ ಸತ್ಯ ಪ್ರಕಾಶದಿಂದ ವಂಚಿತರಾಗಿ, ಪ್ರಾಣಿಗಳಂತೆ ಬದುಕುವುದು ಮತ್ತು ಉನ್ನತ ಜೀವನ ಮೌಲ್ಯವನ್ನೇ ಅವರು ಅರಿಯದಿರುವುದು ಕೂಡಾ ಶಿಕ್ಷೆಯೇ ಅಲ್ಲವೇ? ಇದಲ್ಲದೆ ಪ್ರಪಂಚದಲ್ಲಿ ಶಿಕ್ಷಾ ರೂಪದಲ್ಲಿ ಸಣ್ಣ ಮತ್ತು ದೊಡ್ಡ ಯಾತನೆಗಳು ಎರಗುತ್ತಿರುವುದು. ಆದರೆ ಜನರು ಅದನ್ನು ಗಮನಿಸುವುದಿಲ್ಲ. ಪ್ರಪಂಚದಲ್ಲಿ ಸಂಭವಿಸುವ ಸಣ್ಣಪುಟ್ಟ ಯಾತನೆಗಳು ಎಚ್ಚರಿಕೆಯಾದರೆ ದೊಡ್ಡ ರೂಪದ ಯಾತನೆಗಳು ವಿನಾಶಕಾರಿಯಾಗಿರುತ್ತದೆ.
ಪ್ರಪಂಚದೊಳಗೆ ಕೇವಲ ಪ್ರಕೃತಿ ನಿಯಮ(Law of Nature)ಗಳೇ ಅಲ್ಲ, ನೈತಿಕ ಕಾನೂನು ಕೂಡಾ ಅಸ್ತಿತ್ವದಲ್ಲಿದೆ. ಆದರೆ ಜನರಿಗೆ ಅದನ್ನು ಗುರುತಿಸುವ ಸಾಮರ್ಥ್ಯವಿಲ್ಲ. ಸ್ವಲ್ಪ ಯೋಚಿಸಿದರೆ ಪ್ರಪಂಚದಲ್ಲಿ ಸಂಭವಿಸುವ ದುರ್ಘಟನೆಗಳು ಯಾತನಾಕಾರಿಯೆಂದು ನಮಗೆ ಅರಿವಾಗುವುದು. ದುರ್ಘಟನೆಗಳು ಮತ್ತು ಪ್ರಕೃತಿ ವಿಕೋಪಗಳ ಸಮೀಕ್ಷೆ ನಡೆಸುವವರು ಅವುಗಳಲ್ಲಿ ನೈಸರ್ಗಿಕ ನಿಯಮಗಳ ಕಾರಣವನ್ನು ಹುಡುಕುತ್ತಾರೆ. ಅದನ್ನು ಅವರು ದೇವನೆಡೆಯಿಂದ ಬರುತ್ತಿರುವ ಅಪಾಯಗಳೆಂದೋ ಯಾತನೆಗಳೆಂದೋ ಗುರುತಿಸುವುದಿಲ್ಲ. ಮತ್ತು ಇವೆಲ್ಲವೂ ದೌರ್ಜನ್ಯಕೋರರಿಗೆ ಮತ್ತು ಅಂಥ ಜನ ವಿಭಾಗಗಳಿಗೆ ದೇವನಿಂದ ಬಂದಿರುವ ಎಚ್ಚರಿಕೆಯೆಂದೂ ಚಿಂತಿಸುವುದಿಲ್ಲ. ಆದರೆ ಇವೆಲ್ಲವೂ ಭೂಮುಖಕ್ಕೆ ಎರಗುವ ದೈವಿಕ ಎಚ್ಚರಿಕೆಗಳು, ಯಾತನೆಗಳಾಗಿವೆ.
ಕೆಲವೊಮ್ಮೆ ಎಚ್ಚರಿಕೆಯ ಸ್ವರೂಪವನ್ನು ಮೀರಿ ಯಾತನೆಯೇ ಆದ ಘಟನೆಗಳು ವರದಿಯಾಗಿವೆ. ಸಂಪೂರ್ಣ ನಗರಗಳೇ ನಾಶವಾದ ಘಟನೆಗಳು ಕೂಡಾ ಇತಿಹಾಸದಲ್ಲಿ ಸಂಭವಿಸಿದೆ. ಸರ್ವನಾಶದ ನಂತರವೂ ಅಲ್ಲಿ ಜನರು ಪಾಠ ಕಲಿಯಲೆಂದೇ ಏನಾದರೂ ಕುರುಹುಗಳು ಉಳಿದಿರುತ್ತವೆ. ಹಿಂದೊಮ್ಮೆ ರೋಮ್ ನ ಪೊಂಪೇ (Pompai) ನಗರದಲ್ಲಿ ಲೈಂಗಿಕ ದುರಾಚಾರ ತುಂಬಿ ತುಳುಕುತ್ತಿತ್ತು. ತತ್ಪರಿಣಾಮವಾಗಿ ಆ ನಗರವು ಪ್ರವಾದಿ ಲೂತ್ರ(ಅ) ಜನಾಂಗದ ಮೇಲೆರಗಿದ್ದ ದುರಂತವನ್ನೇ ಅನುಭವಿಸಿತು. ಅಲ್ಲಿನ ಜ್ವಾಲಾಮುಖಿ ಪರ್ವತಗಳು ಸ್ಫೋಟಗೊಂಡವು. ಲಾವಾರಸವು ಇಡೀ ನಗರವನ್ನು ಸುಟ್ಟು ಕರಕಲುಗೊಳಿಸಿತು. ಜನರು ತಮ್ಮ ದಿನಚರಿಯಲ್ಲಿ ಮುಳುಗಿದ್ದರು. ಜನರು ಮೋಜಿನಲ್ಲಿ ಮೈಮರೆತಿದ್ದರು. ಆದುದರಿಂದ ಜ್ವಾಲಾಮುಖಿ ಸ್ಫೋಟವನ್ನು ಅವರು ಗಮನಿಸಲಿಲ್ಲ. ಸದ್ದು ಕೇಳಿದರೂ ಓಡಿ ಹೋಗಿ ಜೀವ ಉಳಿಸಬೇಕೆಂದು ಅವರಿಗೆ ಅನಿಸಲಿಲ್ಲ. ಅಲ್ಲಿನ ಒಂದು ಕುಟುಂಬವಂತೂ ಊಟ ಮಾಡುವ ಸ್ಥಿತಿಯಲ್ಲಿ ಕಲ್ಲಾಗಿ ಮಾರ್ಪಟ್ಟಿತ್ತು. ಸಂಭೋಗ ನಿರತ ಜೋಡಿಗಳು ಲಾವರಸದಿಂದಾಗಿ ಅದೇ ಸ್ಥಿತಿಯಲ್ಲಿ ಕಲ್ಲಾಗಿ (Fossil) ಹೋಗಿದ್ದರು. ಇವರಲ್ಲಿ ಹೆಚ್ಚಿನವರು ಸಲಿಂಗ ಕಾಮಿಗಳಾಗಿದ್ದರು. ಈ ಶ್ವೇಚ್ಚಾಚಾರಿಗಳ ಮುಖದಲ್ಲಿ ದಿಗ್ಭ್ರಮೆ ಗೋಚರಿಸುತ್ತಿತ್ತು. ಭಯ ವ್ಯಾಕುಲತೆಗಳು ಹೊರಸೂಸುತ್ತಿದ್ದವು. ಈ ದೃಶ್ಯಗಳು ಅಲ್ಲಿನ ಜನರು ಕೆಟ್ಟ ಕಾರ್ಯಗಳಲ್ಲಿ ನಿರಂತರವಾಗಿ ವ್ಯಸ್ತರಾಗುತ್ತಿದ್ದರೆಂದು ಸೂಚಿಸುವಂತಿದೆ. ಇಂತಹ ದುರಂತಗಳನ್ನು (ಸರ್ವನಾಶವನ್ನು) ಪವಿತ್ರ ಕುರ್ಆನ್ ಅನಿರೀಕ್ಷಿತ ವಿಪತ್ತೆಂದು ವಿಶ್ಲೇಷಿಸಿದೆ.
“ಆನಂತರ ನಾವು ಅವನ ಜನಾಂಗದ ಮೇಲೆ ಆಕಾಶದಿಂದ ಸೈನ್ಯವನ್ನೇನೂ ಇಳಿಸಲಿಲ್ಲ. ನಮಗೆ ಸೇನೆಯನ್ನು ಕಳುಹಿಸುವ ಅಗತ್ಯವೂ ಇರಲಿಲ್ಲ. ಕೇವಲ ಒಂದು ಫನಸ್ಫೋಟವಾಯಿತು ಮತ್ತು ಅವರೆಲ್ಲರೂ ಹಠಾತ್ತನೆ ನಂದಿ ಹೋದರು.” (ಪವಿತ್ರ ಕುರ್ಆನ್, 36:28-29)
‘ದ ಮೆಸೇಜ್‘ ಎಂಬ ಕೃತಿಯಿಂದ
IslamKannada News Portal
