@ ಸುಹೈಲ್, ಉಪ್ಪಿನಂಗಡಿ
ಈ ಲೋಕದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಸಿದ್ಧಾಂತ ಹಾಗೂ ಒಂದು ಆದರ್ಶವನ್ನು ಪ್ರತಿನಿಧಿಸುತ್ತಾನೆ. ಅವನು ಪ್ರತಿನಿಧಿಸುವ ಆದರ್ಶವನ್ನು ಅವನು ಸತ್ಯವೆಂದು ನಂಬುತ್ತಾನೆ. ಈ ಜಗತ್ತಿನಲ್ಲಿ ಎಲ್ಲರಿಗೂ ಒಮ್ಮತವಿರುವ ಆದರ್ಶ ಯಾವುದೂ ಇಲ್ಲ. ಎಲ್ಲರಿಗೂ ಅವರದೇ ಆದಂತಹ ವಿಭಿನ್ನ ವಿಚಾರಧಾರೆಗಳಿವೆ.
ಅದರ ಬಗ್ಗೆ ಕುರ್ಆನ್ ಹೀಗೆ ಹೇಳುತ್ತದೆ, “`ಕುಲ್ಲು ಹಿಝ್ಬಿನ್ ಬಿಮಾ ಲದೈಹಿಮ್ ಫರಿಹೂನ್’ (ಪ್ರತಿಯೊಂದು ಪಂಗಡವೂ ತನ್ನ ಬಳಿ ಏನಿದೆಯೋ ಅದರಲ್ಲೇ ಸಂತುಷ್ಟವಾಗಿದೆ)” (ಅರ್ರೂಮ್: 32).
ಅವರು ಸರಿಯಾದ ಮಾರ್ಗದಲ್ಲಿದ್ದಾರೆಂದು ನಂಬುವಾಗ ಇತರರು ಸರಿಯಲ್ಲದ ಮಾರ್ಗದಲ್ಲಿರುವರು ಎಂದೇ ಅದರ ಅರ್ಥ. ಅದನ್ನು ಅವರು ಹೇಳದಿದ್ದರೂ ಅದರ ಅರ್ಥ ಹಾಗೆಯೇ ಆಗಿರುವುದು. ಅದರಲ್ಲಿ ಯಾರಿಗೂ ಬೇಸರಿಸುವ ಅಗತ್ಯವಿಲ್ಲ. ಏಕೆಂದರೆ ಅವರವರ ಆದರ್ಶ ಹಾಗೂ ನಂಬಿಕೆಯ ಪ್ರಕಾರ ಬದುಕುವ ಸ್ವಾತಂತ್ರ್ಯ ಎಲ್ಲ ಧರ್ಮಗಳೂ ಬೋಧಿಸುತ್ತವೆ. ಒಂದು ಪಂಗಡವು ನಂಬಿಕೆಯಿಟ್ಟ ವಿಚಾರಧಾರೆಗಳನ್ನು ಎಷ್ಟೇ ವರ್ಣರಂಜಿತಗೊಳಿಸಿ ಪ್ರಸ್ತುತಪಡಿಸಿದರೂ ಇನ್ನೊಂದು ಪಂಗಡವು ಅದನ್ನು ನಂಬಬೇಕೆಂದಿಲ್ಲ. ಆದ್ದರಿಂದ ಅವರವರ ಆದರ್ಶವನ್ನು ಯಥಾವತ್ತಾಗಿ ಅತಿಶಯೋಕ್ತಿಯಿಲ್ಲದೆ ಪ್ರಸ್ತುತ ಪಡಿಸುವುದೇ ಸರಿಯಾದ ಕ್ರಮ. ಆ ಆದರ್ಶವನ್ನು ಪುರಾವೆ ಹಾಗೂ ಆಧಾರಗಳ ಬೆಳಕಿನಲ್ಲಿ ಹೇಳಿದರೆ ಸಾಕಾಗುವುದು.
ಇಸ್ಲಾಮಿನ ಆದರ್ಶ
ಲಾ ಇಲಾಹ ಇಲ್ಲಲ್ಲಾಹ್ ಎಂಬುದು ಇಸ್ಲಾಮಿನ ಆದರ್ಶವಾಗಿದೆ. ಅಂದರೆ ಅಲ್ಲಾಹನ ಹೊರತು ಬೇರೆ ಯಾವ ಇಲಾಹ್ ಇಲ್ಲ. ಇಲಾಹ್ ಎಂದರೆ ಸಾಮಾನ್ಯವಾಗಿ ಆರಾಧ್ಯ ಎಂದು ಭಾಷಾಂತರಿಸಲಾಗುತ್ತದೆ. ಆ ಪ್ರಕಾರ ಅಲ್ಲಾಹನ ಹೊರತು ಬೇರೆ ಯಾವ ಆರಾಧ್ಯನೂ ಇಲ್ಲ ಎಂಬ ಅರ್ಥ ಅದಕ್ಕೆ ಸಿಗುತ್ತದೆ.
ನಿಜವಾಗಿ ಇಲಾಹ್ಗೆ ಆರಾಧ್ಯ ಎನ್ನುವ ಅರ್ಥವೇ ಇಲ್ಲ. ಆರಾಧನೆ ಎಂದರೆ ಗೌರವಿಸುವುದು, ಇಷ್ಟ ಪಡುವುದು ಎಂದಾಗಿದೆ. ಸೆಲೆಬ್ರಿಟಿಯ ಆರಾಧಕ ಎಂದರೆ ಅದರ ಅರ್ಥ ಆ ವ್ಯಕ್ತಿಯನ್ನು ಇಷ್ಟಪಡುವವನೆಂದರ್ಥವೇ ಹೊರತು ಆತನನ್ನು ಪೂಜಿಸುವವನೆಂದಲ್ಲ. ಲಾ ಇಲಾಹ ಎಂಬುದರಲ್ಲಿರುವ ಇಲಾಹ್ ಈ ಅರ್ಥದಲ್ಲಿರುವುದು ಅಲ್ಲವೇ ಅಲ್ಲ. ಇಲಾಹ್ ಎಂದರೆ ಆಶ್ರಯದಾತ ಅಥವಾ ಪೂಜ್ಯ ಎಂದಾಗಿದೆ.
ಹಾಲನ್ನು ಕರೆಯುವ ಸಂದರ್ಭದಲ್ಲಿ ಕರುವನ್ನು ಆಕಳಿನ ಕೆಚ್ಚಲಿನ ಬಳಿಗೆ ತರಲಾಗುತ್ತದೆ. ಆಗ ಆಕಳು ತನ್ನ ಕೆಚ್ಚಲಿನಿಂದ ಹಾಲನ್ನು ಹೊರಬಿಡುತ್ತದೆ. ತಕ್ಷಣವೇ ಮನೆಯ ಯಜಮಾನ ಕರುವನ್ನು ಸ್ವಲ್ಪ ದೂರದಲ್ಲಿರುವ ಗೂಟದ ಬಳಿಗೆ ಎಳೆದುಕೊಂಡು ಹೋಗಿ ಆ ಕರುವನ್ನು ಕಟ್ಟಿ ಹಾಕುತ್ತಾನೆ. ಆಕಳಿನ ಕೆಚ್ಚಲಿನಿಂದ ಹಾಲು ಕರೆದಾದ ಬಳಿಕ ಆತ ಕರುವಿನ ಹಗ್ಗವನ್ನು ಬಿಚ್ಚುತ್ತಾನೆ. ಆ ಕರು ತನ್ನ ತಾಯಿ ಆಕಳಿನ ಬಳಿಗೆ ಧಾವಂತ ಮಾಡುವುದಕ್ಕೆ ಅರಬಿ ಭಾಷೆಯಲ್ಲಿ ಅಲಿಹ-ಇಲೈಹಿ ಎಂದು ಹೇಳುತ್ತಾರೆ. ಅಂದರೆ ಕರುವು ತನ್ನ ಆಶ್ರಯಕ್ಕಾಗಿ ತಾಯಿ ದನದ ಬಳಿಗೆ ಧಾವಂತ ಮಾಡಿತು ಎಂದರ್ಥ. ಇದರಿಂದ ಇಲಾಹ್ಗೆ ಆಶ್ರಯದಾತ ಎಂಬ ಅರ್ಥ ಸಿಕ್ಕಿತು.
ಲಾ ಇಲಾಹ ಎನ್ನುವಾಗ ಮುಸ್ಲಿಮರಿಗೆ ಈ ಅರ್ಥದ ಪ್ರಕಾರ ಆಶ್ರಯದಾತನಾಗಿ ಅಲ್ಲಾಹನ ಹೊರತು ಬೇರೆ ಯಾವ ಇಲಾಹ್ ಇಲ್ಲವೆಂದಾಗುತ್ತದೆ. ಈ ಘೋಷವಾಕ್ಯವು ಈ ಕಾರಣದಿಂದಾಗಿಯೇ ಧಾರ್ಮಿಕವೂ ರಾಜಕೀಯವೂ ಆಗಿ ಪರಿಣಮಿಸುತ್ತದೆ. ಓರ್ವ ಮುಸ್ಲಿಮನ ಮಟ್ಟಿಗೆ ಯಾವುದೇ ರಾಜಕೀಯ ಪಕ್ಷ, ಯಾವುದೇ ವ್ಯವಸ್ಥೆ, ಯಾವುದೇ ಸಂಘಟನೆ, ಅವನ ಚಿತ್ತ ಇಲಾಹ್ ಆಗಿರಲಾರದು. ಅಲ್ಲಾಹನು ಮಾತ್ರ ಅವನ ಇಲಾಹ್ ಆಗಿರುವನು. ಇದುವೇ ಆ ಲಾ ಇಲಾಹ ಇಲ್ಲಲ್ಲಾಹ್ ಎಂಬ ಘೋಷ ವಾಕ್ಯದ ಸಾರ.
ಈ ಕಾರಣದಿಂದಾಗಿಯೇ ಲಾ ಇಲಾಹ ಇಲ್ಲಲ್ಲಾಹ್ ಎಂದು ಹೇಳುವಾಗ ಇದರ ವಿರುದ್ಧ ಅಂದಿನ ಪ್ರಥಮ ಅಭಿಸಂಬೋಧಿತರು ಎದ್ದು ನಿಂತರು. ಇಸ್ಲಾಮ್ ಅಲ್ಲಾಹನನ್ನು ಕೇವಲ ಪೂಜನೀಯ ಎಂಬರ್ಥದಲ್ಲಿ ಪರಿಚಯಿಸದೆ ಸಾರ್ವಭೌಮ ಶಕ್ತಿಯಾಗಿ ಪರಿಚಯಿಸಿತು. ಈ ಕಾರಣದಿಂದಲೇ ಅವರಿಗೆ ಅದು ಅಪಥ್ಯವೆನಿಸಿತು. ಇಂದು ನಾವು ಅರ್ಥೈಸುವ ಆರಾಧ್ಯ ಎಂಬ ಅಲ್ಲಾಹನನ್ನು ಅವರು ನಂಬದ ಕಾರಣಕ್ಕಾಗಿ ಇಸ್ಲಾಮ್ ಅವರೊಡನೆ ಯುದ್ಧ ಮಾಡಿರಿ ಎಂದು ಹೇಳಿಲ್ಲ. ಬದಲಾಗಿ ರಾಜಕೀಯವಾಗಿ ಇಸ್ಲಾಮನ್ನು ನಾಮಾವಶೇಷ ಮಾಡಲು ಹೊರಟಿದ್ದಕ್ಕಾಗಿ ಹಾಗೂ ತನ್ನ ಕೈಕೆಳಗಿರುವ ಪ್ರಜೆಗಳೊಂದಿಗೆ ಅವರು ಅನ್ಯಾಯ ಮತ್ತು ಅಕ್ರಮವೆಸಗಿದರು ಎಂಬ ಕಾರಣಕ್ಕಾಗಿ ಅವರ ವಿರುದ್ಧ ಸೆಟೆದು ನಿಲ್ಲಿ ಎಂದು ಕರೆಕೊಟ್ಟಿತು. ಇದನ್ನು ಲಾ ಇಕ್ರಾಹ ಫಿದ್ದೀನ್ ಎಂಬ ಸೂಕ್ತದಲ್ಲಿ ನಮಗೆ ಅರ್ಥೈಸಬಹುದು.
ಲಾ ಇಕ್ರಾಹ ಫಿದ್ದೀನ್ (ಧರ್ಮದಲ್ಲಿ ಬಲವಂತವಿಲ್ಲ)
ಇದು ಅಲ್ ಬಕರಃ ಅಧ್ಯಾಯದ ಒಂದು ಸೂಕ್ತದ ತುಣುಕು. ಇದರ ಅರ್ಥ ಧರ್ಮದಲ್ಲಿ ಯಾವುದೇ ಬಲವಂತವಿಲ್ಲ ಎಂದಾಗಿದೆ. ಈ ಸೂಕ್ತ ಅವತರಿಸಲು ಒಂದು ಹಿನ್ನೆಲೆಯಿತ್ತು. ಅದೆಂದರೆ ಮದೀನಾದಲ್ಲಿದ್ದ ಬಹುದೇವಾರಾಧಕರ ಪೈಕಿ ಕೆಲವರು ಇಸ್ಲಾಮ್ ಸ್ವೀಕರಿಸುವ ಮುಂಚೆ ಒಂದು ಹರಕೆಯನ್ನು ಸಲ್ಲಿಸಿದ್ದರು. ನಮಗೆ ಮಕ್ಕಳಾದರೆ ಅವರನ್ನು ಒಂದೋ ಯಹೂದಿಗಳನ್ನಾಗಿಯೋ ಕ್ರೈಸ್ತರನ್ನಾಗಿಯೋ ಬೆಳೆಸುವೆವು. ಏಕೆಂದರೆ ಅಂದು ಯಹೂದಿ ಧರ್ಮ ಹಾಗೂ ಕ್ರೈಸ್ತ ಧರ್ಮ ಮದೀನಾದ ಬಹುದೇವಾರಾಧಕರಿಗೆ ಹೆಮ್ಮೆಯ ಧರ್ಮವಾಗಿತ್ತು. ಅವರಿಗೆ ಮಕ್ಕಳಾದಾಗ ಅವರು ತಮ್ಮ ಹರಕೆಯನ್ನು ಪೂರ್ತಿಗೊಳಿಸಿದರು. ಮಕ್ಕಳು ಯಹೂದಿ ಹಾಗೂ ಕ್ರೈಸ್ತರಾಗಿ ಬದಲಾದರು. ಕಾಲಾಂತರದಲ್ಲಿ ಈ ಮಕ್ಕಳ ಹೆತ್ತವರು ಇಸ್ಲಾಮ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಯಹೂದಿಯರು ಇಸ್ಲಾಮ್ನ ವಿರುದ್ಧ ಷಡ್ಯಂತ್ರ ಹೂಡಿದರೆಂಬ ಕಾರಣಕ್ಕಾಗಿ ಅವರನ್ನು ಮದೀನಾದಿಂದ ಗಡೀಪಾರು ಗೊಳಿಸಬೇಕೆಂಬ ಆದೇಶವನ್ನು ಪ್ರವಾದಿಯವರು(ಸ) ಹೊರಡಿಸಿದ್ದರು. ಆದರೆ ಯಹೂದಿಗಳಾಗಿ ಬೆಳೆದ ತಮ್ಮ ಮಕ್ಕಳು ಮದೀನದಿಂದ ಹೊರಹೋಗುವುದು ಅವರ ಹೆತ್ತವರಿಗೆ ಇಷ್ಟವಿರಲಿಲ್ಲ.
ಅವರು ಪ್ರವಾದಿಯವರ(ಸ) ಬಳಿ ಬಂದು ಹೀಗೆ ಅರಿಕೆ ಮಾಡಿಕೊಂಡರು:
ಪ್ರವಾದಿಯವರೇ(ಸ), ಇಸ್ಲಾಮ್ ಬರುವ ಮುಂಚೆ ನಮಗೆ ಮಾರ್ಗದರ್ಶನ ಸಿಕ್ಕಿರಲಿಲ್ಲ. ಈ ಕಾರಣದಿಂದಾಗಿ ನಾವು ಮಕ್ಕಳನ್ನು ಯಹೂದಿ ಹಾಗೂ ಕ್ರೈಸ್ತ ಧರ್ಮದ ಪ್ರಕಾರ ಬೆಳೆಸುತ್ತಿದ್ದೆವು. ಈಗ ನಮಗೆ ಸನ್ಮಾರ್ಗ ಲಭಿಸಿದೆ. ಸತ್ಯವೇನೆಂದು ಗೊತ್ತಾಗಿದೆ. ನಾವು ನಮ್ಮ ಮಕ್ಕಳನ್ನು ಇಸ್ಲಾಮ್ಗೆ ಮರಳಿಸಲು ಇಷ್ಟ ಪಡುತ್ತೇವೆ. ಈ ಸಂದರ್ಭದಲ್ಲಿ ಲಾ ಇಕ್ರಾಹ ಫಿದ್ದೀನ್ ಕತ್ತಬಯ್ಯರ್ರುಶ್ದು ಮಿನಲ್ ಗಯ್ಯ್ (ಧರ್ಮದಲ್ಲಿ ಬಲವಂತಿಕೆಯಿಲ್ಲ. ಸನ್ಮಾರ್ಗದಿಂದ ದುರ್ಮಾರ್ಗವು ಬೇರ್ಪಟ್ಟಿದೆ) ಎಂಬ ದೇವವಾಣಿ ಇಳಿಯಿತು. ಸತ್ಯ ಮತ್ತು ಮಿಥ್ಯದ ಆದರ್ಶವನ್ನು ತನ್ನ ಅಂತಃಕರಣದಿಂದ ಆರಿಸಬೇಕೆಂದು ಕುರ್ಆನ್ ಕಲಿಸಿತು.
ಆದ್ದರಿಂದಲೇ ಇಸ್ಲಾಮ್ ಎಂದೂ ಕೂಡ ಆದರ್ಶದ ಹೆಸರಿನಲ್ಲಿ ಯಾರನ್ನೂ ವಿರೋಧಿಸಲಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ನಂಬಿಕೆಯ ಪ್ರಕಾರ ಬದುಕುವ ಹಕ್ಕು ಕೊಟ್ಟಿದೆ. ಮಕ್ಕಾದಿಂದ ಮದೀನಕ್ಕೆ ಪ್ರವಾದಿಯವರು(ಸ) ವಲಸೆ ಕೈಗೊಂಡಾಗ ಪ್ರವಾದಿಯವರಿಗೆ ದಾರಿ ತೋರಿಸುತ್ತಿದ್ದ ವ್ಯಕ್ತಿ ಅಬ್ದುಲ್ಲಾ ಬಿನ್ ಉರೈಕಃ ಎಂಬ ಬಹುದೇವಾರಾಧಕರಾಗಿದ್ದರು.
ಬಹುದೇವಾರಾಧಕರನ್ನು ಕಂಡಲ್ಲಿ ವಧಿಸಿರಿ
ಧರ್ಮದಲ್ಲಿ ಬಲವಂತವಿಲ್ಲ ಎಂದು ಹೇಳುವ ಅದೇ ಕುರ್ಆನ್ ಯಾಕೆ ಬಹುದೇವಾರಾಧಕರನ್ನು ಕಂಡಲ್ಲಿ ವಧಿಸಿರಿ ಎಂದು ಹೇಳುತ್ತದೆ? ಇದು ವಿರೋಧಾಭಾಸವಲ್ಲವೇ ಎಂದು ಕೇಳುವವರಿದ್ದಾರೆ. ನಿಜವಾಗಿ ನಾವು ಆ ಸೂಕ್ತ ಗಳ ಹಿನ್ನೆಲೆಯನ್ನು ಹೊರಗಿಟ್ಟುಕೊಂಡು ಓದುವಾಗ ಮಾತ್ರ ಈ ತೆರನಾದ ಪ್ರಶ್ನೆ ಗಳು ಉದ್ಭವಿಸುತ್ತವೆ.
ಮೊಟ್ಟ ಮೊದಲು ತಿಳಿಯಬೇಕಾದ ಅಂಶವೇನೆಂದರೆ, ಬಹುದೇವಾರಾಧಕರನ್ನು ಕಂಡಲ್ಲಿ ವಧಿಸಿರಿ ಎನ್ನುವುದು ಸಾಮಾನ್ಯ ಆದೇಶವಲ್ಲ. ಅದು ಯುದ್ಧದ ವಾತಾವರಣಕ್ಕೆ ಅನ್ವಯವಾಗುವ ಸೂಕ್ತವಾಗಿದೆ. ಆದ್ದ ರಿಂದ ಈ ವಧಿಸುವ ಕೆಲಸ ಒಬ್ಬ ವ್ಯಕ್ತಿ ತನಗೆ ತೋಚಿದ ಹಾಗೆ ಮಾಡಬೇಕಾದದ್ದಲ್ಲ. ಬದಲಾಗಿ ಒಂದು ಸರಕಾರ ಹೊರಡಿಸಿದ ಕಾನೂನಿನ ಪ್ರಕಾರ ಮಾಡುವಂತದ್ದು. ಅದೂ ಕೂಡ ಯುದ್ಧವನ್ನು ಕಾನೂನು ಬದ್ಧಗೊಳಿಸುವ ಮೂಲಕ ಮಾಡಬೇಕು. ಈ ಯುದ್ಧವು ಯಾವಾಗ ಕಾನೂನುಬದ್ಧಗೊಳ್ಳುತ್ತದೆ?
ಇದರ ಉತ್ತರ ಸರಳವಾಗಿ ಹೀಗೆ ತಿಳಿದುಕೊಳ್ಳಬಹುದು: ಅಶಾಂತಿ ಹರಡುವ ಕೆಲಸ ವ್ಯಕ್ತಿಯಿಂದ ಹೇಗೆ ಉಂಟಾಗುತ್ತದೋ ಅದೇ ತೆರನಾಗಿ ಒಂದು ಜನತೆಯಿಂದಲೂ ಅದು ಉಂಟಾಗುತ್ತದೆ. ವ್ಯಕ್ತಿಯಿಂದ ಸಂಭವಿಸುವ ಅಶಾಂತಿ ಹರಡುವ ಕೆಲಸವನ್ನು ಕಾನೂನಿನ ಮೂಲಕ ನಿಯಂತ್ರಿಸಲಾಗುತ್ತದೆ. ಇಸ್ಲಾಮ್ ಇದಕ್ಕೆ ಪ್ರತೀಕಾರ ಎಂಬ ಕಾನೂನನ್ನು ಜಾರಿಗೊಳಿಸಿದೆ. ಆದರೆ ನೈತಿಕವಾಗಿ ಅಧಃಪತನದ ಪಾತಾಳಕ್ಕಿಳಿದ ಜನತೆಯನ್ನು ಹೇಗೆ ನಿಯಂತ್ರಿಸುವುದು? ಆ ಕೆಲಸವನ್ನು ಹೋರಾಟ ಅಥವಾ ಯುದ್ಧದ ಮೂಲಕ ಮಾಡಲಾಗುತ್ತದೆ. ಅಶಾಂತಿ ಹರಡುವ ಕೆಲಸ ವ್ಯಕ್ತಿಯಿಂದ ಉಂಟಾಗಲಿ ಅಥವಾ ಒಂದು ಜನತೆಯಿಂದ ಉಂಟಾಗಲಿ ಅದರಲ್ಲೇನೂ ವ್ಯತ್ಯಾಸವಿಲ್ಲ. ಆದರೆ ವ್ಯಕ್ತಿ ಮಾಡುವ ಅಶಾಂತಿಯ ಕೆಲಸಕ್ಕೆ ಒಂದು ಸೀಮಿತವಾದ ವ್ಯಾಪ್ತಿಯಿದೆ. ಆದರೆ ಒಂದು ಜನತೆಯು ಈ ಕೆಲಸ ಮಾಡುವಾಗ ಅದರ ದುಷ್ಪರಿಣಾಮ ವ್ಯಾಪಕವಾಗಿರುತ್ತದೆ. ಅದನ್ನು ಮೂಲೋತ್ಪಾಟನೆ ಮಾಡಬೇಕಾದ ಕೆಲಸ ಅನಿವಾರ್ಯವಾಗಿ ಬಿಡುತ್ತದೆ. ಇದಕ್ಕಾಗಿ ಅವರ ವಿರುದ್ಧ ಹೋರಾಡಬೇಕಾಗುತ್ತದೆ. ಕೆಲವೊಂದು ಸಂದರ್ಭದಲ್ಲಿ ಅವರ ವಿರುದ್ಧ ಯುದ್ಧ ಮಾಡಬೇಕಾಗಿ ಬರುತ್ತದೆ. ಇಂತಹ ಯುದ್ಧವನ್ನು ಇಸ್ಲಾಮ್ ರಾಷ್ಟ್ರವು ಒಬ್ಬ ಪ್ರಜೆಯ ವೈಯಕ್ತಿಕ ಜವಾಬ್ದಾರಿ ಎಂದು ಪರಿಗಣಿಸುತ್ತದೆ. ಒಂದು ವೇಳೆ ಯುದ್ಧವು ಅವನ ಮೇಲೆ ಕಡ್ಡಾಯಗೊಂಡಿದ್ದು ಆತನು ಹೊಣೆಗೇಡಿತವನ್ನು ಪ್ರದರ್ಶಿಸಿದರೆ ಅದನ್ನು ನೈತಿಕತೆಯ ಅಧಃಪತನವೆಂದು ಪರಿಗಣಿಸುತ್ತದೆ ಅಥವಾ ನೈತಿಕವಾಗಿ ಆತ ದರಿದ್ರನೆಂದು ತಿಳಿಯುತ್ತದೆ.
ಇಸ್ಲಾಮ್ ಈ ಯುದ್ಧ ಹಾಗೂ ಹೋರಾಟದ ಶಿಷ್ಟಾಚಾರ ಹೇಗಿರಬೇಕೆನ್ನುವುದನ್ನೂ ಕೂಡ ಕಲಿಸಿದೆ. ಯುದ್ಧ ಸಂಭವಿಸುವಾಗ ಅದರ ಅಂತ್ಯ ಪರಿಣಾಮ ಒಂದೋ ಸಂಧಾನ ಅಥವಾ ಶರಣಾಗತಿಯಾಗಿರುತ್ತದೆ. ಹೀಗೆ ಮಕ್ಕಾದ ಕಡೆಯಿಂದ ಮದೀನಾದ ಮೇಲೆ ನಿರಂತರವಾಗಿ ಯುದ್ಧ ನಡೆಯುತ್ತಲೇ ಇತ್ತು. ಹಿಜ್ರಾ(ವಲಸೆಯ) ಆರನೇ ವರ್ಷದಲ್ಲಿ ಸಂಭವಿಸಿದ ಹುದೈಬಿಯಾ ಒಪ್ಪಂದದಿಂದಾಗಿ ಈ ಯುದ್ಧ ತಾತ್ಕಾಲಿಕವಾಗಿ ತನ್ನ ಅಂತ್ಯ ಕಂಡಿತ್ತು. ಈ ಒಪ್ಪಂದದಲ್ಲಿ ಏರ್ಪಟ್ಟ ಪ್ರವಾದಿ ಯವರ(ಸ) ಜೊತೆಗೆ ಬಹುದೇವಾರಾಧಕ ಗೋತ್ರಗಳೂ ಇತ್ತು. ಅದೇರೀತಿಯಾಗಿ ಪ್ರವಾದಿಯವರ(ಸ) ಶತ್ರುಗಳ ಜೊತೆಗೂ ಬಹು ದೇವಾರಾಧಕ ಗೋತ್ರಗಳೂ ಒಪ್ಪಂದದಲ್ಲಿದ್ದವು. ಒಂದು ವೇಳೆ ಮುಸ್ಲಿ ಮೇತರರ ಅಸ್ಮಿತೆಯನ್ನೇ ಇಸ್ಲಾಮ್ ವಿರೋಧಿಸುತ್ತಿದ್ದರೆ ಪ್ರವಾದಿಯವರು(ಸ) ಇಂತಹ ಒಪ್ಪಂದವನ್ನು ಏಕೆ ಮಾಡುತ್ತಿದ್ದರು? ಹುದೈಬಿಯಾ ಒಪ್ಪಂದದಲ್ಲಿದ್ದ ಸಂದರ್ಭದಲ್ಲಿ ಇಸ್ಲಾಮ್ನ ಸಂದೇಶ ಎಲ್ಲೆಡೆಯೂ ಪಸರಿಸಿತು. ಯುದ್ಧದಿಂದ ಅವರ ಗಮನ ಸಂದೇಶ ಪ್ರಚಾರದ ಕಡೆಗೆ ಕೇಂದ್ರೀಕೃತವಾಗಿತ್ತು. ಆದರೆ ಪ್ರವಾದಿಯವ(ಸ)ರೊಡನೆ ಒಪ್ಪಂದ ಮಾಡಿದವರು ಇದ್ದಕ್ಕಿದ್ದಂತೆ ಅದನ್ನು ಮುರಿದಾಗ ಪ್ರವಾದಿಯವರು(ಸ) ಅದನ್ನು ನವೀಕರಿಸಲು ಹೋಗಲಿಲ್ಲ. ಆಗ ಹಿಜ್ರಾ ವರ್ಷ ಎಂಟಾಗಿತ್ತು. ಒಪ್ಪಂದ ಮಾಡಿ ಸುಮಾರು ಎರಡು ವರ್ಷಗಳಾಗುತ್ತಾ ಬಂದಿತ್ತು. ಒಪ್ಪಂದವನ್ನು ಉಲ್ಲಂಘಿಸಿದ ಅದೇ ವರ್ಷದಲ್ಲಿ ಪ್ರವಾದಿಯವರು(ಸ) ಮಕ್ಕಾವನ್ನು ಯುದ್ಧವಿಲ್ಲದೆ ವಿಮೋಚಿಸಿದ್ದರು. ಇದರೊಂದಿಗೆ ಹುದೈಬಿಯಾ ಒಪ್ಪಂದ ಮುಗಿದು ಹೋಗಿತ್ತು. ಇಷ್ಟೇ ಅಲ್ಲದೆ ಬೇರೆ ಗೋತ್ರಗಳು ಕೂಡ ಪ್ರವಾದಿಯವರೊಡನೆ(ಸ) ಬೇರೆ ಬೇರೆ ತೆರನಾದ ಒಪ್ಪಂದಗಳನ್ನು ಮಾಡಿದ್ದವು. ಮಕ್ಕಾ ವಿಜಯದ ಬಳಿಕ ಇಸ್ಲಾಮ್ನ ವರ್ಚಸ್ಸನ್ನು ಗುರುತಿಸಿದ ಹಲವು ನಿಯೋಗಗಳು ಬಂದು ಪ್ರವಾದಿಯವರೊಡನೆ ಒಪ್ಪಂದ ಮಾಡಿಕೊಳ್ಳುತ್ತಲಿತ್ತು. ಆದರೆ ಮಕ್ಕಾ ವಿಜಯದ ಬಳಿಕವೂ ಅಲ್ಲೇ ಇದ್ದ ಕೆಲವು ಗೋತ್ರಗಳು ಶರಣಾಗಲು ಸಿದ್ಧರಿರಲಿಲ್ಲ. ಅವರು ಪ್ರವಾದಿ ಯವರ(ಸ) ವಿರುದ್ಧ ಖಡ್ಗವನ್ನು ಎತ್ತಿದರು.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ಯುದ್ಧ ಮಕ್ಕಾ ವಿಜಯದ ಬಳಿಕ ನಡೆದಿತ್ತು. ಇಸ್ಲಾಮ್ ರಾಷ್ಟ್ರದೊಳಗೆ ಮಕ್ಕಾ ಸೇರಿದ ಬಳಿಕ. ತಮ್ಮ ದೇಶದ ಚುಕ್ಕಾಣಿ ಹಿಡಿದ ನೇತೃತ್ವದ ವಿರುದ್ಧ ಅವರು ಬಂಡಾಯವೆದ್ದರೆ ಒಂದು ಸರಕಾರ ಏನು ಮಾಡುತ್ತದೆ? ಅದನ್ನೇ ಇಸ್ಲಾಮೀ ಸರಕಾರ ಅಲ್ಲಿ ಮಾಡಿತು. ಅವರು ತಮ್ಮ ಖಡ್ಗವನ್ನು ಎತ್ತಲು ಮುಖ್ಯ ಕಾರಣ ಇದಾಗಿತ್ತು: ಸುತ್ತಮುತ್ತಲಿರುವ ಹೆಚ್ಚಿನ ಗೋತ್ರಗಳು ಇಸ್ಲಾಮ್ ಸ್ವೀಕರಿಸುತ್ತಿದ್ದಾರೆ, ಮಸ್ಚಿದುಲ್ ಹರಾಮ್ನ ನಿಯಂತ್ರಣ ಸಂಪೂರ್ಣವಾಗಿ ಮುಸ್ಲಿಮರಿಗೆ ಲಭಿಸುತ್ತದೆ. ಇದು ಸಂಭವಿಸಿದರೆ ನಾವು ಪ್ರವಾದಿಯವರಿಗೆ ಶರಣಾಗಬೇಕಾದೀತು. ಮಕ್ಕಾದಲ್ಲಿ ಅಂದು ಪ್ರವಾದಿಯವ(ಸ)ರೊಡನೆ ಒಪ್ಪಂದದಲ್ಲಿ ಏರ್ಪಟ್ಟವರೂ ಏರ್ಪಡದಿದ್ದವರೂ ಇದ್ದರು. ಅವರಿಬ್ಬರನ್ನೂ ಈ ಸೂಕ್ತಗಳಲ್ಲಿ ಅಬಿಸಂಬೋಧಿಸಲಾಗಿದೆ. ಈ ಸೂಕ್ತಗಳು ಹಿಜ್ರಾ ಒಂಭತ್ತನೇ ವರ್ಷದಲ್ಲಿ ಇಳಿಯಿತು. ಈ ಸೂಕ್ತಗಳು ಸೂರಃ ಅತ್ತೌಬದಲ್ಲಿದೆ. ಮೊದಲ 1 ರಿಂದ 38 ರ ವರೆಗಿನ ಸೂಕ್ತಗಳನ್ನು ಜನರ ಮಧ್ಯೆ ಘೋಷಿಸಲು ಅದೇ ವರ್ಷ ಅಂದರೆ ಹಿಜ್ರಾ ಒಂಭತ್ತನೇ ವರ್ಷದ ಹಜ್ ದಿನಗಳನ್ನು ಆರಿಸಲಾಯಿತು. ಯಾರು ಘೋಷಿಸಬೇಕೆನ್ನುವುದನ್ನು ಪ್ರವಾದಿಯವರು(ಸ) ಮೊದಲೇ ತೀರ್ಮಾನಿಸಿದ್ದರು. ಉದ್ಘೋಷಕರು ಹ. ಅಲಿ(ರ)ರವರಾಗಿದ್ದರು. ಅಬೂಬಕರ್(ರ) ರವರ ನೇತೃತ್ವದಲ್ಲಿ ಹಜ್ ಯಾತ್ರಿಕರ ಸಂಘವು ಅದಾಗಲೇ ಮಕ್ಕಾದ ಕಡೆಗೆ ಪ್ರಯಾಣಿಸಿಯಾಗಿತ್ತು. ಈ ಸಂದರ್ಭದಲ್ಲಿ ಮೇಲಿನ ಸೂಕ್ತಗಳು ಅವತರಿಸಿದವು. ಈ ಸೂಕ್ತಗಳನ್ನು ಪ್ರವಾದಿಯವರ(ಸ) ಕುಟುಂಬಕ್ಕೆ ಸೇರಿದವರೇ ಘೋಷಿಸಬೇಕೆನ್ನುವುದು ಪ್ರವಾದಿಯವರ(ಸ) ಬಯಕೆಯಾಗಿತ್ತು.
ಈ ಘೋಷಣೆಯಲ್ಲಿ ಕೆಳಗಿನ ಅಂಶಗಳಿದ್ದವು:
1. ಪ್ರವಾದಿಯವ(ಸ)ರೊಡನೆ ರಾಜಕೀಯ ಒಪ್ಪಂದದಲ್ಲಿ ಏರ್ಪಟ್ಟವರೊಡನೆ ಒಪ್ಪಂದ ಕೊನೆಗೊಂಡಿದೆ.
2. ಈ ರಾಜಕೀಯ ಒಪ್ಪಂದದಲ್ಲಿ ಏರ್ಪಟ್ಟವರಿಗೆ ನಾಲ್ಕು ತಿಂಗಳ ಕಾಲ ಸಮಯಾವಕಾಶವಿದೆ. ಆ ಕಾಲಾವಧಿಯಲ್ಲಿ ಅವರಿಗೆ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬಹುದು. ಒಂದೋ ಇಸ್ಲಾಮ್ ಕಲಿಯುವ ಉದ್ದೇಶಕ್ಕಾಗಿ ಅಲ್ಲಿ ತಂಗಬಹುದು, ಬೇಕಾದರೆ ಇಸ್ಲಾಮ್ ಸ್ವೀಕರಿಸಿ ಅಲ್ಲೇ ನೆಲೆಸಬಹುದು ಅಥವಾ ತಮಗೆ ಸುರಕ್ಷಿತವೆಂದೆನಿಸುವ ಸ್ಥಳಕ್ಕೆ ತೆರಳಬಹುದು ಅಥವಾ ಅವರನ್ನು ಸುರಕ್ಷಿತ ಸ್ಥಾನಕ್ಕೆ ಮುಸ್ಲಿಮರೇ ತಲುಪಿಸತಕ್ಕದ್ದು.
3. ನಾಲ್ಕು ತಿಂಗಳು ಕಳೆದ ಬಳಿಕವೂ ಅವರನ್ನು ಹರಮ್ ಪರಿಸರದಲ್ಲಿ ಕಂಡರೆ ಅವರನ್ನು ಬಂಧಿಸಬೇಕು. ಅಗತ್ಯ ಬಂದಲ್ಲಿ ಯುದ್ಧದ ಸಂದರ್ಭದಲ್ಲಿ ವಧಿಸಬೇಕು.
4. ಇನ್ನು ಮುಂದೆ ಜಾಹಿಲಿಯ್ಯಾ ಕ್ರಮದಲ್ಲಿ ಹಜ್-ಉಮ್ರಾ ಮಾಡಲು ಅವಕಾಶವಿಲ್ಲ.
ಈ ಘೋಷಣೆಗೆ ಕಾರಣವೇನಾಗಿತ್ತೆಂದರೆ ಪ್ರವಾದಿಯವರ ತಮ್ಮ ಜೀವನದ ಕೊನೆಯ ಘಟ್ಟದಲ್ಲಿದ್ದರು. ಇಸ್ಲಾಮಿನ ಪಂಚಸ್ತಂಭಗಳಲ್ಲೊಂದಾದ ಹಜ್ನ ಇಸ್ಲಾಮೀ ಸ್ವರೂಪವನ್ನು ಜನರಿಗೆ ಯಥಾವತ್ತಾಗಿ ಕಲಿಸಿಕೊಡಬೇಕೆಂಬ ಆದೇಶ ಅವರಿಗಿತ್ತು. ಆದರೆ ಮಕ್ಕಾದಲ್ಲಿ ಹಜ್ನ ಇಸ್ಲಾಮೀ ಸ್ವರೂಪವನ್ನು ಕಲಿಸಿಕೊಡಲು ಪೂರಕವಾದ ವಾತಾವರಣವಿರಲಿಲ್ಲ. ಆಗಲೂ ಬಹುದೇವಾರಾಧನೆಯ ಕುರುಹುಗಳಿದ್ದವು. ಅದು ನಿರ್ಮೂಲನೆಗೊಂಡರೆ ಮಾತ್ರ ಅವರಿಗೆ ಹಜ್ ಮಾಡಬಹುದಿತ್ತು. ಇದಕ್ಕಾಗಿ ತಮ್ಮ ಕೊನೆಯ ಹಜ್ ನಿರ್ವಹಿಸುವ ಹಿಂದಿನ ವರ್ಷ ಈ ಕ್ರಮವನ್ನು ತೆಗೆದು ಕೊಂಡಿದ್ದರು. ಈ ಕ್ರಮವನ್ನು ಕೈಗೊಳ್ಳಬೇಕಾದರೆ ಮಕ್ಕಾ ನಗರವು ಇಸ್ಲಾಮ್ನ ಅಧೀನಕ್ಕೆ ಬಂದಾಗಿತ್ತು. ಕೇವಲ ಕೆಲವು ಗೋತ್ರಗಳು ಮಾತ್ರ ಬಂಡಾಯವೆದ್ದಿತ್ತು. ಒಂದು ಸರಕಾರವೆಂಬ ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಅಲ್ಲಿತ್ತು ಮತ್ತು ಆ ಕ್ರಮವನ್ನು ಕೈಗೊಳ್ಳಲಾಯಿತು.
ಈ ಘೋಷಣೆಯ ಬೆನ್ನಲ್ಲೇ ಅರೇಬಿಯಾದ ಹೆಚ್ಚಿನ ಗೋತ್ರಗಳು ಪ್ರವಾದಿಯವ(ಸ)ರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಂದೆ ಬಂದವು. ದೂರವುಳಿದವರಿಗೆ ನಾಲ್ಕು ತಿಂಗಳ ಸಮಯಾವಕಾಶವನ್ನು ಕೊಡಲಾಯಿತು. ಈ ಸನ್ನಿವೇಶವನ್ನು ನಮಗೆ ಯಾವುದಕ್ಕೆ ಹೋಲಿಸಬಹುದೆಂದರೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದಾಗ ದೇಶದೊಳಗೆ ಸೇರದೆ ದೂರ ನಿಂತ ಕೆಲವು ರಾಜರು ಹಾಗೂ ಕೆಲವು ಕಾಲನಿಗಳನ್ನು ಬಲವಂತವಾಗಿ ಭಾರತದೊಳಗೆ ಸೇರಿಸಿದ್ದನ್ನು ಇದೇ ರೀತಿಯಾಗಿ ಕಾಣಬಹುದು. ಭಾರತ ಸರಕಾರ ಅಂದು ಹಾಗೆ ಮಾಡದಿರುತ್ತಿದ್ದರೆ ದೇಶದೊಳಗೆ ಅನೇಕ ಕಾಶ್ಮೀರಗಳು ಮತ್ತು ಅನೇಕ ಭೂತಾನ್ಗಳು ಇಂದು ಭಾರತದೊಳಗೆಯೇ ಇದ್ದುಬಿಡುತ್ತಿತ್ತು. ಅದರ ಪರಿಣಾಮ ಏನಾಗಿರಬಹುದೆಂದು ಆಲೋಚಿಸಿದರೆ ಸಾಕಾಗುವುದು. ಇದನ್ನು ತಡೆಗಟ್ಟುವ ಉದ್ದೇಶಕ್ಕಾಗಿ ಅಂದು ಮಕ್ಕಾದಲ್ಲಿ ಹಾಗೆ ಮಾಡಲಾಯಿತು.
ಬಂಡಾಯವೆದ್ದವರೊಡನೆ ಯುದ್ಧ ಮಾಡಲು ಕುರ್’ಆನ್ ಆದೇಶಿಸಿತು. ಎಷ್ಟರವರೆಗೆ ಯುದ್ಧ ಮಾಡಬೇಕೆಂದರೆ ಅವರು ಕಪ್ಪಕಾಣಿಕೆಯನ್ನು (ಜಿಝ್ಯ) ಕೊಡುವ ತನಕ. ಅವರು ಶರಣಾಗುವ ತನಕ ಯುದ್ಧ ಮಾಡಿರಿ ಎಂದು ಕುರ್ಆನ್ ಹೇಳಲಿಲ್ಲ. ಒಂದು ವೇಳೆ ಶರಣಾದ ಮಾತ್ರಕ್ಕೆ ಕಥೆ ಮುಗಿದು ಬಿಡುತ್ತಿದ್ದರೆ ಇಸ್ಲಾಮ್ ಖಡ್ಗದ ನೆರಳಲ್ಲಿ ಬೆಳೆದು ಬಂದ ಧರ್ಮ ಎಂದು ತಿಳಿಯುವಂತಾಗಿ ಬಿಡುತ್ತಿತ್ತು. ಕಪ್ಪಕಾಣಿಕೆಯನ್ನು ಕೊಟ್ಟು ಅವರ ಜೀವ, ಸೊತ್ತು-ವಿತ್ತಗಳಿಗೆ ಗ್ಯಾರಂಟಿ ಕೊಡುವ ಧರ್ಮವದಾಯಿತು. ಅವರು ಮುಸ್ಲಿಮರಾಗಲಿ ಅವರು ಮುಸ್ಲಿಮರಾಗದಿರಲಿ ಅವರ ಜೀವ, ಸೊತ್ತುಗಳ ಮೇಲೆ ಯಾರೂ ಕೈ ಹಾಕುವಂತಿಲ್ಲ. ಅವರು ಇಸ್ಲಾಮೀ ರಾಷ್ಟ್ರದ ಪ್ರಜೆಗಳಾಗಿರುವರು. ಆದರೆ ಮಕ್ಕಾ ಎಂಬ ನಗರದ ಹೊರಗೆ ನೆಲೆಸಬೇಕು. ಏಕೆಂದರೆ ಮಕ್ಕಾ ನಗರದಲ್ಲಿ ಏಕದೇವೋಪಾಸನೆಗಾಗಿ ಕಟ್ಟಲಾದ ಅಲ್ಲಾಹನ ಭವನವಿದೆ. ಅದರೊಳಗೆ ವಿಭಿನ್ನ ಆದರ್ಶ ಹೊಂದಿದವರು ನೆಲೆಸುವುದು ತಾರ್ಕಿಕವಲ್ಲ ತಾನೇ? ಅದು ದೇವಸ್ಥಾನದ ಗರ್ಭಗುಡಿಯಾದರೂ ಹಾಗೆಯೇ ತಾನೇ? ಇದು ದೇಶದ ಭದ್ರತೆಗೆ ಕುರ್ಆನ್ ಇಟ್ಟ ಅಡಿಪಾಯವಾಗಿದೆ. ಅದನ್ನು ಭಯೋತ್ಪಾದನೆಯಾಗಿ ಕಾಣುವುದು ಎಳ್ಳಷ್ಟೂ ಸರಿಯಲ್ಲ.
ಮಕ್ಕಾ ನಗರದ ಹೊರಗೆ ಯುದ್ಧ ಮಾಡಿ ಕಪ್ಪಕಾಣಿಕೆ (ಜಿಝ್ಯಾ) ಕೊಡಲು ಒಪ್ಪಿದವರಿಗೆ ಇಸ್ಲಾಮೀ ರಾಷ್ಟ್ರದ ಪ್ರಜೆಯಾಗಿ ನೆಮ್ಮದಿಯಿಂದ ಬದುಕಬಹುದು.
ಏನಿದು ಈ `ಜಿಝ್ಯಾ’?
ಅರಬಿ ಭಾಷೆಯಲ್ಲಿರುವ ಜಿಝ್ಯಾ ಎಂಬ ನಿಯಮವನ್ನು ಮೊದಲು ಚಾಲ್ತಿಗೆ ತಂದ ಗ್ರಂಥ ಕುರ್ಆನ್ ಅಲ್ಲವೇ ಅಲ್ಲ. ಆ ಕಾಲದಲ್ಲಿ ರೂಢಿಯಲ್ಲಿದ್ದ ನಿಯಮವನ್ನು ಕುರ್ಆನ್ ಅಂಗೀಕರಿಸಿತಷ್ಟೇ. ಪರ್ಷಿಯಾದಲ್ಲಿ ನೌಶಿರ್ವಾನ್ ಎಂಬ ಚಕ್ರವರ್ತಿ `ಕಿಸ್ಯಾ’ ಎಂಬ ಹೆಸರಿನಲ್ಲಿ ಅದನ್ನು ವಿಧಿಸಿದ್ದನು. ಅದನ್ನು ಸೈನಿಕರಲ್ಲದ ಪ್ರಜೆಗಳಿಗೆ ವಿಧಿಸಿದ್ದನು. ಕೃಷಿಕರು, ವ್ಯಾಪಾರಿಗಳು, ಉದ್ಯಮಿಗಳಿಗೆ ಸೈನಿ ಕರ ಸಂರಕ್ಷಣೆ ಅತ್ಯಗತ್ಯ. ಆದ್ದರಿಂದ ಸೈನಿಕರ ಖರ್ಚು ವೆಚ್ಚಗಳಿಗೆ ಹಣವನ್ನು ಅವರಿಂದ ಸಂಗ್ರಹಿಸಬೇಕೆAಬುದು ಆತನ ತತ್ವವಾಗಿತ್ತು. ಇಸ್ಲಾಮಿನ ಪ್ರಕಾರ ಜಿಝ್ಯಾ ಕೊಡ ಬೇಕಾದವರು ಮುಸ್ಲಿಮೇತರ ಪ್ರಜೆಗಳು ಮಾತ್ರ. ಏಕೆಂದರೆ ಅವರನ್ನು ಹೇಗೆ ಏಕದೇವೋಪಾಸನೆಗೆ ಒತ್ತಾಯಿಸಲು ಸಾಧ್ಯ ವಿಲ್ಲವೋ ಅದೇ ರೀತಿಯಾಗಿ ಇಸ್ಲಾಮೀ ರಾಷ್ಟçದ ಸೈನಿಕ ಸೇವೆಗೆ ಒತ್ತಾಯಿಸಲೂ ಸಾಧ್ಯವಿಲ್ಲ. ಒಂದು ವೇಳೆ ಅವರು ಅದಕ್ಕೆ ಸಿದ್ಧರಾದರೆ ಅವರಿಗೆ ಜಿಝ್ಯಾ ಕೊಡುವುದಕ್ಕೆ ವಿನಾಯಿತಿ ಇದೆ.
ಅತ್ತೌಬ ಅಧ್ಯಾಯದಲ್ಲಿ ಮೇಲೆ ಹೇಳಲಾದ ಮೂರು ಅಂಶಗಳಿಗೆ ಸೇರದ ಇನ್ನೊಂದು ವಿಭಾಗ ಇವರೇ ಅಗಿರುವರು. ಅವರು ಇಸ್ಲಾಮಿನ ರಾಜಕೀಯ ವಿರೋಧಿಗಳಲ್ಲ. ಅವರು ಇಸ್ಲಾಮೀ ರಾಷ್ಟ್ರದ ಸಾಮಾನ್ಯ ಪ್ರಜೆಗಳು. ಅವರು ಅವರ ಧಾರ್ಮಿಕ ನಂಬಿಕೆಯ ಪ್ರಕಾರ ಬದುಕುತ್ತಿದ್ದಾರೆ. ಅಂತವರೊAದಿಗೆ ಹೇಗೆ ವ್ಯವಹರಿಸಬೇಕು? ಇದನ್ನು ಸೂರಃ ಅಲ್ ಮುಮ್ತಹಿನಃದಲ್ಲಿ ಹೀಗೆ ಹೇಳಲಾಗಿದೆ:
ಧರ್ಮದ ವಿಷಯದಲ್ಲಿ ನಿಮ್ಮೊಡನೆ ಯುದ್ಧ ಮಾಡಿರದ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರಹಾಕಿರದವರೊಂದಿಗೆ ಸೌಜನ್ಯ ಹಾಗೂ ನ್ಯಾಯದೊಂದಿಗೆ ವರ್ತಿಸುವುದರಿಂದ ಅಲ್ಲಾಹನು ನಿಮ್ಮನ್ನು ತಡೆಯವುದಿಲ್ಲ. ಅಲ್ಲಾಹನು ನ್ಯಾಯಪಾಲನೆ ಮಾಡುವವರನ್ನು ಪ್ರೀತಿಸುತ್ತಾನೆ. ನೀವು ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡಿರುವ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರಹಾಕಿರುವ ಮತ್ತು ನಿಮ್ಮನ್ನು ಹೊರಹಾಕುವ ವಿಷಯದಲ್ಲಿ ಪರಸ್ಪರ ಸಹಕರಿಸಿರುವ ಜನರೊಂದಿಗೆ ಸ್ನೇಹ ಬೆಳೆಸುವುದರಿಂದ ಮಾತ್ರ ಅಲ್ಲಾಹನು ನಿಮ್ಮನ್ನು ತಡೆಯುತ್ತಾನೆ. ಅವರೊಂದಿಗೆ ಸ್ನೇಹ ಬೆಳೆಸುವವರೇ ಅಕ್ರಮಿಗಳು (ಅಲ್ ಮುಮ್ತಹಿನ: 8-9)
ಕುರ್ಆನ್ನ ಸೂಕ್ತದ ಹಿನ್ನೆಲೆಯನ್ನು ನೋಡದೆ ದುರ್ವ್ಯಾಖ್ಯಾನಿಸುವ ಇನ್ನೊಂದು ಸೂಕ್ತ ಯಾವುದೆಂದರೆ ಅಲ್ ಬಕರಃ ಅಧ್ಯಾಯದಲ್ಲಿರುವ ಸೂಕ್ತವಾಗಿದೆ. ಅದು ಹೀಗಿದೆ: “ಅವರೊಡನೆ ಹೋರಾಟ ನಡೆಸಬೇಕಾದ ಸಂದರ್ಭ ಬಂದಾಗಲೆಲ್ಲ ಹೋರಾಟ ನಡೆಸಿರಿ ಮತ್ತು ಅವರು ನಿಮ್ಮನ್ನು ಹೊರಕ್ಕಟ್ಟಿದಲ್ಲಿಂದ ನೀವೂ ಅವರನ್ನು ಹೊರಕ್ಕಟ್ಟಿರಿ. ಏಕೆಂದರೆ ಹತ್ಯೆಯು ಕೆಟ್ಟದ್ದಾಗಿದ್ದರೂ ಅಶಾಂತಿಯು ಅದಕ್ಕಿಂತಲೂ ಕೆಟ್ಟದ್ದಾಗಿದೆ. ಅವರು ಮಸ್ಜಿದುಲ್ ಹರಾಮ್ ನ ಬಳಿ ನಿಮ್ಮೊಡನೆ ಹೋರಾಡದಿದ್ದರೆ ನೀವು ಹೋರಾಡಬೇಡಿರಿ. ಆದರೆ ಅಲ್ಲಿಯೂ ಅವರು ನಿಮ್ಮೊಡನೆ ಹೋರಾಡಿದರೆ ನೀವೂ ಅವರನ್ನು ನಿರ್ದಾಕ್ಷಿಣ್ಯವಾಗಿ ವಧಿಸಿರಿ. ಇಂತಹ ಸತ್ಯನಿಷೇಧಿಗಳಿಗೆ ಇದೇ ಪ್ರತಿಫಲ.” (ಅಲ್ ಬಕರಃ: 191)
ಇದರ ಹಿನ್ನೆಲೆ ಬೇರೆಯೇ ಇದೆ. ಪ್ರವಾದಿಯವರು(ಸ) ಹಿಜ್ರಾ ಆರನೇ ವರ್ಷದಲ್ಲಿ ಉಮ್ರಾ ನಿರ್ವಹಿಸಲು ಮಕ್ಕಾದ ಕಡೆಗೆ ಹೋಗಿದ್ದರು. ಅವರನ್ನು ಹುದೈಬಿಯಾ ಎನ್ನುವ ಸ್ಥಳದಲ್ಲಿ ತಡೆಯಲಾಯಿತು. ಕೊನೆಗೆ ಅದು ಹುದೈಬಿಯಾ ಎಂಬ ಒಪ್ಪಂದದಲ್ಲಿ ಕೊನೆಗೊಂಡಿತು. ಈ ಒಪ್ಪಂದದ ಪ್ರಕಾರ ಮುಸ್ಲಿಮರು ಈ ವರ್ಷ ಮದೀನಕ್ಕೆ ಹಿಂತಿರುಗಿ ಮುಂದಿನ ವರ್ಷ ಬಂದು ಉಮ್ರಾ ಮಾಡಬೇಕಾಗಿತ್ತು. ಆ ಪ್ರಕಾರ ಅವರು ಮುಂದಿನ ವರ್ಷ ತಮ್ಮ ಉಮ್ರವನ್ನು ಸಂದಾಯ ಮಾಡಲು ಹೊರಟರು. ಈ ಸಂದರ್ಭದಲ್ಲೇನಾದರೂ ಮಕ್ಕಾದ ಬಹುದೇವಾರಾಧಕರು ತಮ್ಮ ಮಾತಿಗೆ ತಪ್ಪಿ ನಡೆದರೆ ಏನು ಮಾಡಬೇಕೆಂದು ಮೇಲಿನ ಸೂಕ್ತದಲ್ಲಿ ಹೇಳಲಾಗಿದೆ. ಅಂದರೆ ಎರಡು ರಾಷ್ಟ್ರಗಳ ನಡುವೆ ನಡೆದ ರಾಜತಾಂತ್ರಿಕ ಸಂಬಂಧದಲ್ಲಿ ಬಿರುಕು ಸಂಭವಿಸಿದರೆ ಮುಂದಿನ ನಡೆ ನಿಮ್ಮದು ಯುದ್ಧವಾಗಿರಬೇಕು ಎಂದಾಗಿದೆ. ಈ ಹಿನ್ನೆಲೆಯನ್ನು ಬದಿಗಿಟ್ಟು ಕುರ್’ಆನ್ ಮುಸ್ಲಿಮೇತರರನ್ನು ಅಥವಾ ಬಹುದೇವಾರಾಧಕರನ್ನು ಕೊಲ್ಲಲು ಹೇಳುತ್ತದೆ ಎಂದು ಮೇಲ್ನೋಟಕ್ಕೆ ಕಾಣುವ ರೀತಿಯಲ್ಲಿ ಅರ್ಥೈಸುವುದು ತಪ್ಪಾಗಿ ಬಿಡುತ್ತದೆ.
ಇನ್ನೊಂದು ಸೂಕ್ತ ಹೀಗಿದೆ: “ಬಹುದೇವ ವಿಶ್ವಾಸಿಗಳೆಲ್ಲರೂ ಒಟ್ಟಾಗಿ ನಿಮ್ಮೊಡನೆ ಹೋರಾಟ ನಡೆಸುವಂತೆ ನೀವೂ ಒಟ್ಟಾಗಿ ಅವರೊಡನೆ ಹೋರಾಟ ನಡೆಸಿರಿ. ಅಲ್ಲಾಹ್ ಧರ್ಮನಿಷ್ಠರೊಂದಿಗೇ ಇದ್ದಾನೆಂಬುದನ್ನು ಅರಿಯಿರಿ.” (ಅತ್ತೌಬಃ: 36).
ವರ್ಷದ ಹನ್ನೆರಡು ತಿಂಗಳಲ್ಲಿ ಯುದ್ಧ ನಿಷಿದ್ಧವಾದ ಒಟ್ಟು ನಾಲ್ಕು ಪವಿತ್ರ ತಿಂಗಳುಗಳಿದ್ದವು. ಆ ನಿಯಮದಂತೆ ಮುಸ್ಲಿಮರು ಯುದ್ಧದಿಂದ ಆ ತಿಂಗಳುಗಳಲ್ಲಿ ದೂರನಿಲ್ಲಬೇಕಿತ್ತು. ಆದರೆ ಸತ್ಯವಿಶ್ವಾಸಿಗಳಿಗೆ ಆ ತಿಂಗಳೊಂದಿಗಿರುವ ನಿಷ್ಠೆಯನ್ನು ಮುಂದಿಟ್ಟುಕ್ಕೊಂಡು ಅದನ್ನು ದುರುಪಯೋಗ ಪಡಿಸಲು ಶತ್ರುಗಳನ್ನು ಅನುಮತಿಸಬಾರದು. ಪವಿತ್ರ ತಿಂಗಳಿನಲ್ಲಿ ಅವರು ಈಚೆಗೆ ದಾಳಿ ಮಾಡಿದರೆ ನೀವೂ ಕೂಡ ಆಚೆಗೆ ದಾಳಿ ಮಾಡಬೇಕೆಂದಷ್ಟೇ ಈ ಮೇಲಿನ ಸೂಕ್ತದಲ್ಲಿ ಹೇಳಲಾಗಿದೆ. ಅಂದರೆ ಇದೂ ಕೂಡ ಒಂದು ದೇಶದ ರಕ್ಷಣಾ ನೀತಿಗೆ ಸಂಬಂಧಿಸಿದ್ದೇ ಹೊರತು ಒಂದು ದೇಶದ ಸಾಮಾನ್ಯ ಪ್ರಜೆ ಅಂತಹ ಕೃತ್ಯಕ್ಕೆ ಇಳಿಯಬೇಕೆಂದಲ್ಲ.
(ಲೇಖಕರು, ಆಲಿಯಾ ಶಿಕ್ಷಣ ಸಂಸ್ಥೆಯಿಂದ ಧಾರ್ಮಿಕ ಪದವಿ ಪಡೆದವರು ಮತ್ತು ಉತ್ತಮ ವಿಶ್ಲೇಷಕರು)
IslamKannada News Portal
