Home / ಲೇಖನಗಳು / ಸ್ವಾತಂತ್ರ್ಯ ಚಳವಳಿ, ಉಲೆಮಾಗಳು ವರ್ತಮಾನ ಭಾರತ

ಸ್ವಾತಂತ್ರ್ಯ ಚಳವಳಿ, ಉಲೆಮಾಗಳು ವರ್ತಮಾನ ಭಾರತ

✍️ ಏ.ಕೆ. ಕುಕ್ಕಿಲ

ವರ್ತಮಾನ ಭಾರತವು ಭಾರತೀಯ ಮುಸ್ಲಿಮರ ವಿಷಯದಲ್ಲಿ ಅತ್ಯಂತ ನಿಷ್ಕರುಣಿಯಾಗಿ ವರ್ತಿಸುತ್ತಿದೆ. ಮುಸ್ಲಿಮರು ಈ ದೇಶಕ್ಕೆ ಕೊಟ್ಟಿರುವ ಕೊಡುಗೆ, ಮಾಡಿರುವ ಬಲಿದಾನ, ತ್ಯಾಗ, ಹೋರಾಟ ಮತ್ತು ಸೇವೆಯನ್ನು ಸ್ಮರಿಸದಷ್ಟು ಕಲ್ಲು ಹೃದಯಕ್ಕೆ ಹತ್ತಿರವಾಗುತ್ತಿದೆ. ಮುಸ್ಲಿಮರೆಂದರೆ, ಪಾಕಿಸ್ತಾನಕ್ಕೆ ಹೋಗಬೇಕಾದವರು, ದೇಶದ್ರೋಹಿಗಳು, ಉಗ್ರವಾದಿಗಳು, ಹಿಂದೂ ವಿರೋಧಿಗಳು ಇತ್ಯಾದಿ ಇತ್ಯಾದಿ ಹಣೆಪಟ್ಟಿಯನ್ನು ಹಚ್ಚಿ ಅವುಗಳ ಸುತ್ತಲೇ ಚರ್ಚಿಸುವ ಪ್ರವೃತ್ತಿಯನ್ನು ಅಭ್ಯಾಸ ಮಾಡಿಕೊಂಡಂತಿದೆ.

ವರ್ತಮಾನ ಭಾರತವು ರೇಶ್ಮೆ ರುಮಾಲ್ ಚಳವಳಿಯನ್ನು ಚರ್ಚಿಸುವುದಿಲ್ಲ. ಮಾಲ್ಟಾ ಗಡೀಪಾರು ಘಟನೆಯನ್ನು ಸ್ಮರಿಸುವುದಿಲ್ಲ. ಕಾಕೋರಿ ಪ್ರಕರಣವನ್ನು ನೆನಪಿಸುವುದಿಲ್ಲ. ಅಲ್ ಹಿಲಾಲ್, ಅಲ್ ಬಲಾಗ್, ದಿ ಇಸ್ಲಾಮಿಕ್ ಫ್ರಟರ್ನಿಟಿ, ಅಲ್ ಇಸ್ಲಾಮ್ ಇತ್ಯಾದಿ ಪತ್ರಿಕೆಗಳು ಮತ್ತು ಇವುಗಳು ಪ್ರಕಟಿಸುತ್ತಿದ್ದ ಸ್ವಾತಂತ್ರ‍್ಯದ ಹಸಿವಿನ ಬರಹಗಳನ್ನೂ ಚರ್ಚಿಸುತ್ತಿಲ್ಲ. ಈ ದೇಶದ ಮೊಟ್ಟಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಝಾದ್‌ರು ಅಲ್ ಹಿಲಾಲ್ ಎಂಬ ಉರ್ದು ವಾರಪತ್ರಿಕೆಯನ್ನು ಪ್ರಾರಂಭಿಸಿ ದರು. 50 ಸಾವಿರಕ್ಕಿಂತಲೂ ಅಧಿಕ ಪ್ರತಿಗಳ ಮಾರಾಟದೊಂದಿಗೆ ಜನಪ್ರಿಯವಾಗಿದ್ದ ಈ ಪತ್ರಿಕೆಯ ಮೇಲೆ ಬ್ರಿಟಿಷರ ಕಣ್ಣು ಬಿತ್ತು. ಜನರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಬ್ಬಿಸುತ್ತಿದೆ ಎಂದು ಆರೋಪಿಸಿ 1914ರಲ್ಲಿ ಈ ಪತ್ರಿಕೆಯನ್ನು ಬ್ರಿಟಿಷರು ನಿಷೇಧಿಸಿದರು. ಇದಕ್ಕೆ ಬಗ್ಗದ ಮೌಲಾನಾರು 1915ರಲ್ಲಿ ಅಲ್ ಬಲಾಗ್ ಎಂಬ ಹೆಸರಲ್ಲಿ ಮತ್ತೆ ಉರ್ದು ಪತ್ರಿಕೆಯನ್ನು ಪ್ರಾರಂಭಿಸಿದರು. ಅದನ್ನೂ ಬ್ರಿಟಿಷರು 1916ರಲ್ಲಿ ನಿಷೇಧಿಸಿದರು.

35ರ ಪ್ರಾಯದಲ್ಲೇ ಕಾಂಗ್ರೆಸ್‌ನ ಅಧ್ಯಕ್ಷರಾದ ಇವರು ಧಾರ್ಮಿಕ ಮತ್ತು ಲೌಕಿಕ- ಎರಡೂ ಶಿಕ್ಷಣಗಳನ್ನು ಕರಗತ ಮಾಡಿಕೊಂಡಿದ್ದರು. ಆ ಕಾರಣದಿಂದಲೇ ಅರಬಿ ಭಾಷೆಯಲ್ಲಿರುವ ಪವಿತ್ರ ಕುರ್‌ಆನನ್ನು ಉರ್ದುವಿಗೆ ಅನುವಾದಿಸಿದರು ಮತ್ತು ವ್ಯಾಖ್ಯಾನವನ್ನೂ ಬರೆದರು. 1916ರಿಂದ 1945ರ ವರೆಗೆ 10 ವರ್ಷ 7 ತಿಂಗಳ ಕಾಲ ವಿವಿಧ ಜೈಲುಗಳಲ್ಲಿ ಶಿಕ್ಷೆ ಅನುಭವಿಸಿದರು. ಅಲ್ ಹಿಲಾಲ್ ಮತ್ತು ಅಲ್ ಬಲಾಗ್ ಪತ್ರಿಕೆಯ ಬರಹಕ್ಕಾಗಿ 1916ರಿಂದ 20ರ ವರೆಗೆ ಜೈಲುವಾಸ ಅನುಭವಿಸಿದ್ದು ಮತ್ತು ಕ್ವಿಟ್ ಇಂಡಿಯಾ ಚಳವಳಿ ಯಲ್ಲಿ ಭಾಗಿಯಾದುದಕ್ಕಾಗಿ 1942ರಿಂದ 45ರ ವರೆಗೆ ಅಹ್ಮದ್ ನಗರ ಕೋಟೆಯಲ್ಲಿ ಜೈಲಲ್ಲಿದ್ದದ್ದೂ ಇದರಲ್ಲಿ ಸೇರಿದೆ. ಅಹ್ಮದ್ ನಗರ ಕೋಟೆಯಲ್ಲಿ ಜೈಲಲ್ಲಿದ್ದಾಗಲೇ ಪತ್ನಿ ಝುಬೇದಾ ಬೇಗಂ ನಿಧನರಾದರು. ಸ್ವಾತಂತ್ರ‍್ಯಾ ನಂತರ ಶಿಕ್ಷಣ ಸಚಿವರಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT)ಯನ್ನು 1950ರಲ್ಲಿ ಖರಗ್‌ಪುರದಲ್ಲಿ ಸ್ಥಾಪಿಸುವ ಮೂಲಕ ಮಹತ್ವದ ಸಾಧನೆ ಮಾಡಿದರು. 1953ರಲ್ಲಿ ಯುನಿವರ್ಸಿಟಿ ಗ್ರಾಂಟ್ಸ್ ಕಮಿಷನ್ (UGC) ಆರಂಭಿಸಿದರು. ಆದರೆ ವರ್ತಮಾನದ ಭಾರತ ಇವರ ಬಗ್ಗೆ ಅಜ್ಞವಾಗಿದೆ. ಇವರಂತೆಯೇ,

ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಇನ್ನೋರ್ವ ವ್ಯಕ್ತಿ ಮಧ್ಯಪ್ರದೇಶದ ಮೌಲಾನ ಬರ್ಕತುಲ್ಲಾ ಭೋಪಾಲಿ.

ಜಪಾನಿನ ಟೋಕಿಯೋದಲ್ಲಿ ಶಿಕ್ಷಕರಾಗಿದ್ದ ಇವರು ‘ದಿ ಇಸ್ಲಾಮಿಕ್ ಫ್ರಟರ್ನಿಟಿ’ ಎಂಬ ಪತ್ರಿಕೆ ಪ್ರಾರಂಭಿಸಿದರು. ಭಾರತದಲ್ಲಿ ನಡೆಯುವ ದಬ್ಬಾ ಳಿಕೆಯನ್ನು ವಿದೇಶಕ್ಕೆ ತಿಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದು ಅರಿವಾದೊಡನೆಯೇ ಬ್ರಿಟಿಷ್ ಸರಕಾರ ಸಕ್ರಿಯವಾಯಿತು. ಜಪಾನ್ ಮೇಲೆ ಒತ್ತಡ ಹಾಕಿ ಪತ್ರಿಕೆಯನ್ನು ಮುಚ್ಚಿಸಿತು. ಇದರ ಬೆನ್ನಿಗೇ ‘ಅಲ್ ಇಸ್ಲಾಮ್’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಅದನ್ನೂ ನಿಷೇಧಿಸಲಾಯಿತು. ಆದರೂ ಅವರು ಬಗ್ಗಲಿಲ್ಲ. 1915ರಲ್ಲಿ ಜಪಾನ್ ತ್ಯಜಿಸಿ ವಿದ್ಯಾರ್ಥಿಗಳ ಜೊತೆ ಅಫಘಾನಿಸ್ತಾನಕ್ಕೆ ಹೋದ ಅವರು ಮೊಟ್ಟಮೊದಲ ದೇಶಭ್ರಷ್ಟ ಅಥವಾ ಪ್ರವಾಸಿ ಸರಕಾರ ರಚಿಸಿದರು. ರಾಜ ಮಹೇಂದ್ರ ಅಧ್ಯಕ್ಷರಾದರು. ಬರ್ಕತುಲ್ಲಾ ಪ್ರಧಾನಿಯಾದರು. ಮೌಲಾನಾ ಉಬೈದುಲ್ಲಾ ಸಿಂಧಿ ಗೃಹಸಚಿವರಾದರು. ಇಂಗ್ಲೆಂಡ್, ರಶ್ಯಾ, ಜರ್ಮನಿ, ಜಪಾನ್, ಅಫಘಾನಿಸ್ತಾನ ಸಹಿತ ಜಗತ್ತಿನ ವಿವಿಧ ರಾಷ್ಟ್ರಗಳಿಗೆ ಪ್ರಯಾಣಿಸಿ ವಲಸಿಗ ಭಾರತೀಯರನ್ನು ಒಟ್ಟುಗೂಡಿಸಿದರು. ಸ್ವಾತಂತ್ರö್ಯದ ಕೆಚ್ಚನ್ನು ಮೂಡಿಸಿದರು. 1926ರಲ್ಲಿ ಜರ್ಮನಿಯಲ್ಲಿ ನೆಹರೂರನ್ನು ಭೇಟಿಯಾದರು. 1927ರಲ್ಲಿ ದೇಶಭ್ರಷ್ಟರಾಗಿಯೇ ಸಾವಿಗೀಡಾದರು. ದುರಂತ ಏನೆಂದರೆ, ಇವರ ಹೆಸರಿನಲ್ಲಿರುವ ವಿಶ್ವವಿದ್ಯಾಲಯವನ್ನು ವಾಗ್ದೇವಿ ಭೋಜಪಾಲ್ ವಿಶ್ವವಿದ್ಯಾಲಯ ಎಂದು ಬದಲಿಸಲು ಮಧ್ಯಪ್ರದೇಶ ಸರಕಾರ ಇತ್ತೀಚೆಗೆ ಪ್ರಯತ್ನಿಸಿ ಸುದ್ದಿಗೀಡಾಗಿತ್ತು.

1913ರಿಂದ 20ರ ವರೆಗೆ ನಡೆದ ರೇಶ್ಮೆ ರುಮಾಲ್ ಚಳವಳಿಯು ಭಾರತೀಯ ಸ್ವಾತಂತ್ರ್ಯ ಇತಿಹಾಸದ ಪ್ರಮುಖ ಮೈಲಿಗಲ್ಲಾಗಿ ಗುರುತಿಗೀಡಾಗಿದೆ. ದಾರುಲ್ ಉಲೂಮ್ ದೇವ್‌ಬಂದ್‌ನ ಮುಖ್ಯಸ್ಥರಾಗಿದ್ದ ಶೇಖುಲ್ ಹಿಂದ್ ಮೌಲಾನಾ ಮಹ್ಮೂದ್ ಹಸನ್, ಕಾಬೂಲ್‌ನ ದೇಶಭ್ರಷ್ಟ ಸರಕಾರದ ಗೃಹಸಚಿವ ಮೌಲಾನಾ ಉಬೈದುಲ್ಲಾ ಸಿಂಧಿ, ಮೌಲಾನಾ ಮುಹಮ್ಮದ್ ಮಿಯಾನ್ ಮನ್ಸೂರ್ ಅನ್ಸಾರಿ, ಮೌಲಾನಾ ಹುಸೇನ್ ಅಹ್ಮದ್ ಮದನಿ ಮುಂತಾದವರು ಈ ಚಳವಳಿಯ ನೇತೃತ್ವ ಸ್ಥಾನದಲ್ಲಿದ್ದರು. ಇದು ಬ್ರಿಟಿಷ್ ವಿರೋಧಿ ಸಶಸ್ತ್ರ ಬಂಡಾಯ ಯೋಜನೆಯಾಗಿತ್ತು. 1915ರಲ್ಲಿ ಮೌಲಾನಾ ಮಹ್ಮೂದ್ ಹಸನ್‌ರು ಮದೀನಾಕ್ಕೆ ಹೋಗಿ ಟರ್ಕಿ ಅಧಿಕಾರಿಗಳ ಸಹಾಯ ಕೋರಿದರು. ಮೌಲಾನಾ ಉಬೈದುಲ್ಲಾ ಸಿಂಧಿಯವರು ಅಫಘಾನ್ ಸರಕಾರದೊಂದಿಗೆ ಸಂಪರ್ಕ ಸಾಧಿಸಿದರು. 1916ರಲ್ಲಿ ಮೌಲಾನಾ ಸಿಂಧಿ ಮತ್ತು ಇತರರು ರೇಶ್ಮೆ ಬಟ್ಟೆಯ ಮೇಲೆ ತಮ್ಮ ಕಾರ್ಯ ಯೋಜನೆಯ ವಿವರವನ್ನು ಬರೆದು ಮೌಲಾನಾ ಮಹ್ಮೂದ್ ಹಸನ್‌ಗೆ ಕಳುಹಿಸಿದರು. ಅದರಲ್ಲಿ ಸೈನ್ಯ ರಚನೆ, ನಾಯಕರುಗಳ ಹೆಸರುಗಳು, ಕಾರ್ಯತಂತ್ರ ಇತ್ಯಾದಿಗಳ ವಿವರಗಳಿದ್ದುವು. ಕಾಗದದಲ್ಲಿ ಬರೆದು ಕಳುಹಿಸಿದರೆ ಬ್ರಿಟಿಷ್ ಗುಪ್ತಚರರು ಪತ್ತೆ ಹಚ್ಚುವರೆಂಬ ಕಾರಣಕ್ಕಾಗಿ ರೇಶ್ಮೆ ಬಟ್ಟೆಯಲ್ಲಿ ಬರೆದು ಕಳುಹಿಸುವ ಈ ತಂತ್ರವನ್ನು ಮಾಡಲಾಗಿತ್ತು. ಆದರೆ 1916 ರಲ್ಲಿ ಬ್ರಿಟಿಷರ ಕೈಗೆ ಈ ರೇಶ್ಮೆ ಬಟ್ಟೆಗಳು ಸಿಕ್ಕವು. ಮೌಲಾನಾ ಮಹ್ಮೂದ್ ಹಸನ್ ಮತ್ತು ಮೌಲಾನಾ ಹುಸೇನ್ ಅಹ್ಮದ್ ಮದನಿಯವರನ್ನು ಮಕ್ಕಾದಲ್ಲಿ ಬಂಧಿಸಿ ಮಾಲ್ಟಾ ದ್ವೀಪಕ್ಕೆ ಗಡೀಪಾರು ಮಾಡಲಾಯಿತು. ಮೌಲಾನಾ ಉಬೈದುಲ್ಲಾ ಸಿಂಧಿ ಅಫಘಾನಿಸ್ತಾನಕ್ಕೆ ಗಡೀಪಾರುಗೊಂಡರು. ಇವರಲ್ಲದೇ,

ಮೌಲಾನಾ ಉಝೈರ್ ಗುಲ್, ಮೌಲಾನಾ ವಹೀದ್ ಅಹ್ಮದ್‌ರನ್ನು 1917ರಲ್ಲಿ ಮಾಲ್ಟಾ ದ್ವೀಪಕ್ಕೆ ಗಡೀಪಾರು ಮಾಡ ಲಾಯಿತು. ಮೂರು ವರ್ಷಗಳ ಬಳಿಕ 1920ರಲ್ಲಿ ಮೌಲಾನಾ ಮಹ್ಮೂದ್ ಹಸನ್ ಬಿಡುಗಡೆಗೊಂಡರು. ಇವರನ್ನು ಮುಂಬಯಿ ಬಂದರ್‌ನಲ್ಲಿ ಮಹಾತ್ಮಾ ಗಾಂಧಿ, ಮೌಲಾನಾ ಶೌಕತ್ ಅಲಿ, ಮೌಲಾನಾ ಅಬ್ದುಲ್ ಬಾರಿ ಫರಂಗಿಮಹಲ್ ಮುಂತಾದವರು ಸ್ವಾಗತಿಸಿದರು. ಆದರೆ, ಮೌಲಾನಾ ಸುಮ್ಮನಾಗಲಿಲ್ಲ. ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗಿಯಾಗಬಾರದು ಎಂಬ ಬ್ರಿಟಿಷ್ ಷರತ್ತನ್ನೂ ಮೀರಿ ಅವರು ಖಿಲಾಫತ್ ಚಳವಳಿ ಮತ್ತು ಅಸಹಕಾರ ಚಳವಳಿಯನ್ನು ಬೆಂಬಲಿಸಿ ಫತ್ವಾ ಹೊರಡಿಸಿದರು. ರೇಶ್ಮೆ ರುಮಾಲ್ ಚಳವಳಿಯ ಸ್ಮರಣಾರ್ಥ ಭಾರತ ಸರಕಾರವು 2013ರಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಆದರೆ ವರ್ತಮಾನ ಭಾರತಕ್ಕೆ ಇವರ ಪರಿಚಯವೇ ಇಲ್ಲ.

1857ರ ಪ್ರಥಮ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗಿಯಾಗುವಂತೆ ಮೌಲಾನಾ ಫಝಲ್ ಹಕ್ ಖೈರಾಬಾದಿಯವರು ಫತ್ವಾ ಹೊರಡಿಸಿದರು. ಈ ಹೋರಾಟವನ್ನು ಜಿಹಾದ್ ಎಂದು ಸಾರಿದರು. ಬ್ರಿಟಿಷ್ ಸರಕಾರ ಇವರನ್ನು ಅಂಡಮಾನ್‌ಗೆ ಗಡೀಪಾರು ಮಾಡಿತು. ಅಲ್ಲಿಯೇ ಇವರು ನಿಧನರಾದರು. 1858-59ರಲ್ಲಿ ವಿಲಾಯತ್ ಹುಸೇನ್, ಸರ್ದಾರ್ ಮುಹಮ್ಮದ್, ಹಿಕ್ಮತುಲ್ಲಾ ಖಾನ್, ವೀರ್ ಫರ್‌ಹತ್ ಅಲಿ, ನವಾಬ್ ಮಜ್ಜು ಖಾನ್ ಸಹಿತ ಅನೇಕರನ್ನು ಬ್ರಿಟಿಷ್ ಸರಕಾರ ಗಲ್ಲಿಗೇರಿಸಿತು. 1857ರಿಂದ 60ರ ನಡುವೆ ಕೇವಲ ದೆಹಲಿಯೊಂದರಲ್ಲಿ 500ರಷ್ಟು ಉಲೆಮಾಗಳನ್ನು ಗಲ್ಲಿಗೇರಿಸಲಾಗಿದೆ ಎಂದು ವರದಿಯಿದೆ. ‘ಹಿಂದೂಸ್ತಾನ್ ರಿಪಬ್ಲಿಕ್ ಅಸೋಸಿಯೇಶನ್’ನ ಸದಸ್ಯರಾಗಿದ್ದ ಅಶ್ಫಾಕುಲ್ಲಾ ಖಾನ್‌ರನ್ನು 1927 ಡಿಸೆಂಬರ್ 19ರಂದು ಮದ್ರಾಸ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ಸರಕಾರಿ ಹಣವನ್ನು ಲೂಟಿ ಮಾಡಿ ಆ ಹಣದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಸಶಸ್ತ್ರ ಕ್ರಾಂತಿಗೆ ಬಳಸುವುದು ‘ಹಿಂದೂಸ್ತಾನ್ ರಿಪಬ್ಲಿಕ್ ಅಸೋಸಿಯೇಶನ್’ನ ಗುರಿಯಾಗಿತ್ತು. ಹೀಗೆ ಷಹಜಹಾನ್‌ಪುರದಿಂದ ಲಕ್ನೋಗೆ ಹೋಗುತ್ತಿದ್ದ ರೈಲಿನಿಂದ ಅಶ್ಫಾಕ್ ಮತ್ತು ಇತರರು 4600 ರೂಪಾಯಿಯನ್ನು ದೋಚಿದರು. ಇದೇ ಕಾರಣಕ್ಕಾಗಿ, ಬ್ರಿಟಿಷ್ ಸರಕಾರ ರಾಮ್‌ಪ್ರಸಾದ್ ಬಿಸ್ಮಿಲ್‌ರನ್ನು 1925 ಅಕ್ಟೋಬರ್ 26ರಂದು ಬಂಧಿಸಿತು. ನೇಪಾಳಕ್ಕೆ ಓಡಿ ಹೋಗಿದ್ದ ಅಶ್ಫಾಕುಲ್ಲಾರನ್ನು 1926ರಲ್ಲಿ ಬಂಧಿಸಲಾಯಿತು. ಬಿಸ್ಮಿಲ್ ಮತ್ತು ಅಶ್ಫಾಕ್ ಜೀವದ ಗೆಳೆಯರಾಗಿದ್ದರು. ಬಿಸ್ಮಿಲ್ ವಿರುದ್ಧ ಸಾಕ್ಷಿ ಹೇಳಿದರೆ ಶಿಕ್ಷೆ ರದ್ದುಗೊಳಿಸುವುದಾಗಿ ಬ್ರಿಟಿಷರು ಆಮಿಷ ಒಡ್ಡಿದಾಗ ಅಶ್ಫಾಕ್ ಅದನ್ನು ಖಡಾಖಂಡಿತವಾಗಿ ನಿರಾಕರಿಸಿದರು. ನೇಣಿಗೆ ಹೋಗುವ ಮೊದಲು ಕುರ್‌ಆನ್ ಓದಿದರು. ಲಬ್ಬೈಕ್‌ ಹೇಳುತ್ತಾ ನೇಣುಗಂಭಕ್ಕೆ ತಲೆಯೊಡ್ಡಿದರು. ಆದರೆ, ಇವತ್ತಿನ ಭಾರತದ ಯುವಪೀಳಿಗೆಗೆ ಇವರ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ನಿಜವಾಗಿ,

ಬ್ರಿಟಿಷ್ ಆಳ್ವಿಕೆಗೆ ಆರಂಭಿಕ ಹಂತದಲ್ಲಿ ಭಾರತದ ಉಲೆಮಾಗಳು ವಿರೋಧ ವ್ಯಕ್ತಪಡಿಸಿದರು. 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೌಲಾನಾ ಫಝಲ್ ಹಕ್ ಖೈರಾಬಾದಿ, ಮೌಲಾನಾ ಅಹ್ಮದುಲ್ಲಾ ಶಾ ಮದ್ರಾಸಿ ಮುಂತಾದವರು ಸಕ್ರಿಯರಾಗಿದ್ದರು. ಅನೇಕ ಉಲೆಮಾಗಳು ಜಿಹಾದ್ ಫತ್ವಾಗಳನ್ನು ನೀಡಿ ಬ್ರಿಟಿಷ್ ವಿರೋಧಿ ಬಂಡಾಯಕ್ಕೆ ಕರೆ ನೀಡಿದರು. ಈ ಬಂಡಾಯ ವಿಫಲಗೊಂಡ ಬಳಿಕ ಬ್ರಿಟಿಷರು ಅನೇಕ ಉಲೆಮಾಗಳನ್ನು ಕಠಿಣವಾಗಿ ದಂಡಿಸಿದರು. ದಾರುಲ್ ಉಲೂಂ ದೇವ್‌ಬಂದ್‌ನ ಸ್ಥಾಪಕ ಮೌಲಾನಾ ಮುಹಮ್ಮದ್ ಕಾಸಿಮ್ ಅವರು ಕಾಂಗ್ರೆಸ್ ಸೇರುವಂತೆ ಮುಸ್ಲಿಮರಿಗೆ ಫತ್ವಾ ನೀಡಿದರು. ಇದು ಹಿಂದೂ-ಮುಸ್ಲಿಮ್ ಏಕತೆಗೆ ಬಹಳ ದೊಡ್ಡ ಅಡಿಪಾಯವನ್ನು ಹಾಕಿಕೊಟ್ಟಿತು. 1919ರಿಂದ 24ರ ನಡುವೆ ನಡೆದ ಖಿಲಾಫತ್ ಚಳವಳಿ ಮತ್ತು ಅಸಹಕಾರಿ ಚಳವಳಿಯಲ್ಲಿ ಉಲಮಾಗಳು ಭಾರೀ ಸಂಖ್ಯೆಯಲ್ಲಿ ಭಾಗಿಯಾದರು. ಮೌಲಾನಾ ಮುಹಮ್ಮದ್ ಅಲಿ ಜೌಹರ್, ಮೌಲಾನಾ ಶೌಕತ್ ಅಲಿ ಈ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು. ಅಸಹಕಾರ ಚಳವಳಿಯನ್ನು ಸುಮಾರು 500ರಷ್ಟು ಉಲೆಮಾಗಳು ಬೆಂಬಲಿಸಿದ್ದರು. ಮುಸ್ಲಿಮರು ಶಾಲೆ, ನ್ಯಾಯಾಲಯ ಮತ್ತು ಸರಕಾರಿ ಉದ್ಯೋಗಗಳನ್ನು ಬಹಿಷ್ಕರಿಸಿದರು. ಈ ಹಿನ್ನೆಲೆಯಲ್ಲಿ ಹಿಂದೂ-ಮುಸ್ಲಿಮ್ ಸಹಕಾರಕ್ಕೆ ಉನ್ನತ ಉದಾಹರಣೆಯಾಗಿ ಈ ಅಸಹಕಾರ ಚಳವಳಿ ಗುರುತಿಸಿ ಕೊಂಡಿದೆ. ಹಾಗೆಯೇ, ಜಮೀಯತೆ ಉಲಮಾಯೆ ಹಿಂದ್ ಸಂಘಟನೆಯು ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು. ದುರಂತ ಏನೆಂದರೆ,

ವರ್ತಮಾನ ಭಾರತವು ಮುಸ್ಲಿಮ್ ದ್ವೇಷದಿಂದ ಕುರುಡಾಗುತ್ತಿದೆ. ಬ್ರಿಟಿಷರಿಂದ ದೇಶವನ್ನು ವಿಮೋಚನೆಗೊಳಿಸುವಲ್ಲಿ ಸಮುದಾಯದ ಕೊಡುಗೆಯನ್ನು ಅಳಿಸುವ ತುರ್ತಿನಲ್ಲಿದೆ. ಯುವ ಪೀಳಿಗೆಗೆ ಈ ಸ್ವಾತಂತ್ರ‍್ಯ ಹೋರಾಟಗಾರರ ಪರಿಚಯವೇ ಆಗದಂತೆ ನೋಡಿಕೊಳ್ಳುತ್ತಿದೆ. ಮಧ್ಯ ಪ್ರದೇಶದ ಮೌಲಾನಾ ಬರ್ಕತುಲ್ಲಾ ಭೋಪಾಲಿ ವಿವಿ ಮತ್ತು ಉತ್ತರ ಪ್ರದೇಶದ ಮೌಲಾನಾ ಮುಹಮ್ಮದ್ ಅಲಿ ಜೌಹರ್ ವಿವಿಗಳು ಇದಕ್ಕೆ ತಾಜಾ ಉದಾಹರಣೆಗಳು ಮಾತ್ರ.

 

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …