Home / ಲೇಖನಗಳು / ನೀವು ಹಜ್ಜ್ ನಿರ್ವಹಿಸಿದ್ದೀರಾ?

ನೀವು ಹಜ್ಜ್ ನಿರ್ವಹಿಸಿದ್ದೀರಾ?

✍️ ಏ. ಕೆ. ಕುಕ್ಕಿಲ

ಹಜ್ಜನ್ನು ಇಸ್ಲಾಮ್ ಕಡ್ಡಾಯಗೊಳಿಸಿರುವುದೇಕೆ? ಮುಸ್ಲಿಮರು ಜಗತ್ತಿನಾದ್ಯಂತ ಇದ್ದಾರೆ. ಆದರೆ ಕಅಬಾ ಇರುವುದು ಸೌದಿ ಅರೇಬಿಯಾದ ಮಕ್ಕಾದಲ್ಲಿ. ಹಜ್ಜ್ ನಿರ್ವಹಿಸಬೇಕಾದರೆ ಮಕ್ಕಾಕ್ಕೆ ಬರಲೇಬೇಕು. ಹಾಗಂತ, ಇದು ಸುಲಭ ಸಾಧ್ಯವಲ್ಲ. ಕೋಟ್ಯಂತರ ಮುಸ್ಲಿಮರ ಪಾಲಿಗೆ ಸಾವಿರಾರು ಕಿಲೋ ಮೀಟರ್ ಪ್ರಯಾಣದ ಸವಾಲನ್ನು ಈ ಮಕ್ಕಾ ಒಡ್ಡುತ್ತದೆ. ತೀರಾ ಪ್ರವಾಸಕ್ಕೆ ಹೋಗುವಂತೆ ಈ ಪ್ರಯಾಣ ಮಾಡುವಂತೆಯೂ ಇಲ್ಲ. ಈ ಇಡೀ ಕರ್ಮಕ್ಕೆ ನಿರ್ದಿಷ್ಟ ರೀತಿ-ನೀತಿಗಳಿವೆ. ಉಡುವ ಎರಡು ತುಂಡು ಬಟ್ಟೆಯಿಂದ ಹಿಡಿದು ಜಮರಾತ್‌ನಲ್ಲಿ ಎತ್ತಿಕೊಳ್ಳುವ ಮೂರು ಕಲ್ಲಿನ ವರೆಗೆ ಎಲ್ಲವೂ ನಿಯಮಾನುಸಾರವೇ ನಡೆಯಬೇಕು.

ಇವಿಷ್ಟೇ ಅಲ್ಲ, ಭಾರತದ ವಾತಾವರಣಕ್ಕೂ ಸೌದಿ ಅರೇಬಿಯಾದ ವಾತಾವರಣಕ್ಕೂ ವ್ಯತ್ಯಾಸ ಇದೆ. ವಿಪರೀತ ಚಳಿ, ವಿಪರೀತ ಬಿಸಿಲು ಮತ್ತು ವಿಪರೀತ ಮಳೆಯಿರುವ ಈ ಜಗತ್ತಿನ ವಿವಿಧ ಪ್ರದೇಶಗಳ ಜನರು ಮಕ್ಕಾ ಎಂಬ ಪ್ರದೇಶದ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗುತ್ತದೆ. ಅಲ್ಲಿನ ಆಹಾರದ ಜೊತೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಆರೋಗ್ಯ ಸಮಸ್ಯೆ ಇದ್ದರೆ, ಅದಕ್ಕೆ ಬೇಕಾದ ಪೂರ್ವ ತಯಾರಿ ನಡೆಸಬೇಕಾಗುತ್ತದೆ. ಮಹಿಳೆಯರಿಗೂ ಹಜ್ಜ್ ಕಡ್ಡಾಯವಾಗಿರುವುದರಿಂದ ಅವರಿಗೂ ಈ ಯಾವುದರಲ್ಲೂ ರಿಯಾಯಿತಿ ಇಲ್ಲ. ಮುಟ್ಟಿನ ಕಾರಣಕ್ಕಾಗಿ ನಮಾಝ್ ಗೂ  ಉಪವಾಸಕ್ಕೂ ಮಹಿಳೆಗೆ ರಿಯಾಯಿತಿ ಕೊಟ್ಟಿರುವ ಇಸ್ಲಾಮ್, ಅವರ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿಯನ್ನು ಪರಿಗಣಿಸಿ ಹಜ್ಜ್ ನಿಂದ ಪೂರ್ಣ ರಿಯಾಯಿತಿಯನ್ನು ಕೊಡಬಹುದಿತ್ತು. ಆದರೂ ಕೊಟ್ಟಿಲ್ಲ. ಹಜ್ಜ್ ನ ಸಂದರ್ಭದಲ್ಲಿ ಪುರುಷ ಏನೆಲ್ಲಾ ಕರ್ಮಗಳನ್ನು ಮಾಡಬೇಕೋ ಆ ಎಲ್ಲವನ್ನೂ ಮಹಿಳೆಯರೂ ಮಾಡಬೇಕು. ಆದ್ದರಿಂದಲೇ ಈ ಪ್ರಶ್ನೆ ಮುಖ್ಯವಾಗುತ್ತದೆ.

ಹಜ್ಜನ್ನು ಇಸ್ಲಾಮ್ ಕಡ್ಡಾಯಗೊಳಿಸಿರುವುದೇಕೆ?

ನಿಜವಾಗಿ, ದೇಶ, ಕಾಲ, ವಾತಾವರಣ, ಆಹಾರ, ಅಂತಸ್ತು ಇತ್ಯಾದಿ ಸರ್ವ ಭಿನ್ನತೆಗಳ ಹೊರತಾಗಿಯೂ ಮಾನವರೆಲ್ಲರೂ ಸಮಾನರು ಮತ್ತು ಯಾವ ತಾರತಮ್ಯವೂ ಇಲ್ಲದೇ ಒಂದೇ ಕಡೆ ಸೇರಬಲ್ಲವರು ಎಂಬುದನ್ನು ಹಜ್ಜ್ ಘಂಟಾಘೋಷವಾಗಿ ಸಾರುತ್ತದೆ. ಇಂಥ ಸಮಾನತೆಯನ್ನು ಸಾರುವ ವೇಳೆ ಗಂಡು ಮಾತ್ರ ಇರುತ್ತಿದ್ದರೆ ಅದು ಲಿಂಗಬೇಧವಾಗುತ್ತಿತ್ತು. ಹೆಣ್ಣು ಸವಾಲನ್ನು ಎದುರಿಸಲು ಅಸಮರ್ಥಳು ಎಂಬ ಸಂದೇಶ ಸಾರಿದಂತಾಗುತ್ತಿತ್ತು. ಹಾಗೆಯೇ, ಆಧುನಿಕ ಕಾಲದಲ್ಲೂ ಪುರಾತನ ಕಾಲದಲ್ಲೂ ಹೆಣ್ಣು ವಿವಿಧ ರೀತಿಯಲ್ಲಿ ಶೋಷಿತಳೇ ಆಗಿರುವಾಗ ಇಡೀ ಹಜ್ಜನ್ನು ಹಾಜಿರಾ ಎಂಬ ಹೆಣ್ಣಿನ ಸುತ್ತಲೇ ಕಟ್ಟಿಕೊಟ್ಟಿರುವುದನ್ನು ನೋಡಿದರೆ, ‘ಹೆಣ್ಣು ಎಂಥ ಸವಾಲನ್ನೂ ಮೀರಬಲ್ಲಳು ಮತ್ತು ಸವಾಲಿಗೆ ಬೆನ್ನು ಹಾಕದೇ ಎದುರಿಸಿ ಗೆಲ್ಲಬಲ್ಲಳು’ ಎಂಬುದನ್ನು ಗಟ್ಟಿಯಾಗಿ ಸಾರುವ ಉದ್ದೇಶ ಇದರ ಹಿಂದಿರುವಂತಿದೆ. ಆ ಕಾರಣದಿಂದಲೇ, ಹನಿ ನೀರಿಗಾಗಿ ಸಫಾ ಮತ್ತು ಮರ್ವಾ ಎಂಬ ದಿಬ್ಬಗಳ ನಡುವೆ ಹಾಜಿರಾ ಓಡಾಡಿದಂತೆ ನೀವೂ ಓಡಾಡಬೇಕು ಎಂದು ಹಜ್ಜ್ ನಿರ್ವಹಿಸುವ ಪ್ರತಿ ಪುರುಷರಿಗೂ ಆದೇಶಿಸಲಾಗಿದೆ. ಈ ಮೂಲಕ ಪುರುಷ ಮೇಲ್ಮೆಯ ಭಾವ ಗಂಡು ಸಮಾಜದಿಂದ ಶಾಶ್ವತವಾಗಿ ಹೊರಟು ಹೋಗುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಇದರ ಜೊತೆಗೇ ಲಬ್ಬೈಕ್ ಎಂಬ ಏಕ ಘೋಷಣೆಯ ಹೊರತಾಗಿ ಇನ್ನು ಬೇರೆ ಘೋಷಣೆಯಿಲ್ಲ. ಹಜ್ಜ್ ನಲ್ಲಿ ಸೇರಿದವರ ದೇಶ-ಭಾಷೆ ಯಾವುದೇ ಇರಲಿ, ಎಲ್ಲರೂ ಏಕಧ್ವನಿಯಲ್ಲಿ ಏಕಭಾಷೆಯಲ್ಲಿ ಏಕಘೋಷಣೆಯನ್ನೇ ಹೊರಡಿಸುತ್ತಾರೆ. ಹಿಂದಿ, ಇಂಗ್ಲಿಷ್, ಚೈನೀಸ್, ಜಪಾನೀಸ್… ಹೀಗೆ ಲಬ್ಬೈಕನ್ನು ಯಾರೂ ತಂತಮ್ಮ ಭಾಷೆಗೆ ಭಾಷಾಂತರಿಸಿ ಕೂಗುವುದಿಲ್ಲ. ಇದು ಮಾನವ ಸಮಾನತೆಯ ಜೊತೆಜೊತೆಗೇ ಏಕದೇವನನ್ನು ಮತ್ತು ಏಕರೀತಿಯ ಆರಾಧನಾ ಕ್ರಮವನ್ನು ಪರಿಚಯಿಸುತ್ತದೆ.

ಇದರ ಜೊತೆಗೇ ಇಲ್ಲಿನ ಇನ್ನೊಂದು ಪ್ರಮುಖ ಸಂಗತಿಯೇನೆಂದರೆ, ಇಡೀ ಹಜ್ಜ್ ಕರ್ಮ ಪ್ರವಾದಿ ಇಬ್ರಾಹೀಮ್(ಅ) ಮತ್ತು ಅವರ ಕುಟುಂಬವನ್ನು ಕೇಂದ್ರೀಕರಿಸಿದೆಯೇ ಹೊರತು ಪ್ರವಾದಿ ಮುಹಮ್ಮದ್‌ರಿಗೆ(ಸ) ಇದರಲ್ಲಿ ಯಾವ ಪಾತ್ರವೂ ಇಲ್ಲ. ಈ ಮೂಲಕ ಪ್ರವಾದಿ ಮುಹಮ್ಮದ್(ಸ) ಇಸ್ಲಾಮ್ ಧರ್ಮದ ಸ್ಥಾಪಕ ಅಲ್ಲ ಅನ್ನುವುದನ್ನು ಸಾರಲಾಗುತ್ತದೆ. ಹಾಗೆಯೇ ಕ್ರೈಸ್ತ, ಯಹೂದಿ ಮತ್ತು ಇಸ್ಲಾಮ್ ಈ ಮೂರೂ ಧರ್ಮಗಳು ಗೌರವಿಸುವ ಪ್ರವಾದಿ ಇಬ್ರಾಹೀಮ್(ಅ) ಏನಾಗಿದ್ದರು ಮತ್ತು ಅವರನ್ನು ಪಿತಾಮಹ ಎಂದು ಅಂದುಕೊಳ್ಳುವವರು ಏನಾಗಬೇಕಾಗಿದೆ ಎಂಬುದನ್ನೂ ಇದು ಸೂಕ್ಷ್ಮವಾಗಿ ಸಾರುತ್ತದೆ. ಅಂದಹಾಗೆ,

ಜಗತ್ತಿನ ಎಲ್ಲಾ ಆಧ್ಯಾತ್ಮಿಕ ಒಟ್ಟು ಸೇರುವಿಕೆಗಳಿಗಿಂತಲೂ ಹಜ್ಜ್ ಭಿನ್ನವಾಗುವುದೇ ಈ ಕಾರಣಕ್ಕೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …