Home / ಲೇಖನಗಳು / ಸುಮಧುರ ದಾಂಪತ್ಯ: ಹೆಣ್ಣಿನ ಪಾತ್ರ ಏನು?

ಸುಮಧುರ ದಾಂಪತ್ಯ: ಹೆಣ್ಣಿನ ಪಾತ್ರ ಏನು?

ಇರ್ಷಾದ್, ಬೈರಿಕಟ್ಟೆ

ದಾಂಪತ್ಯದ ಬುನಾದಿ ಗಂಡು ಹೆಣ್ಣಿನ ಕೂಡುವಿಕೆಯಿಂದ; ಸುಖ ದಾಂಪತ್ಯ ಜೀವನವನ್ನು ಬಯಸದವರಾರು? ಮಾತಿನಲ್ಲಿ-  ಲೇಖನದಲ್ಲಿ ದಾಂಪತ್ಯ ಬದುಕಿನ ಬಗೆಗೆ ಮಧುರವಾದ ಅಕ್ಷರಗಳನ್ನು ಪೋಣಿಸುವುದು ಬಲು ಸುಲಭ. ಆದರೆ ನಿಜ ಜೀವನದ ಪ್ರಯೋಗಾಲಯದಲ್ಲಿ ನಡೆಸುವ ಪ್ರಯೋಗಗಳು ಸೂಕ್ಷ್ಮವಾಗಿರಬೇಕು, ಕೆಲವೊಮ್ಮೆ ಸಂಭವಿಸುವ ಕ್ಷುಲ್ಲಕ ತಪ್ಪುಗಳೂ ಮಧುರತೆಯ ಹಾದಿಯಲ್ಲಿ ಮುಳ್ಳಾಗಿ ಕಾಡಬಹುದು. ಪವಿತ್ರ ಕುರ್‌ಆನ್ ದಂಪತಿಗಳನ್ನು ನೀವು ಪರಸ್ಪರ ಉಡುಪಿನಂತಿರಬೇಕು ಎಂದಿದೆ.  (ಸೂರಾ ಬಕರಾ: 187) ಇನ್ನೊಂದು ಕಡೆ “ಹಾಗೆಯೇ ಅವನು ನಿಮಗಾಗಿ ನಿಮ್ಮೊಳಗಿಂದಲೇ, ನೀವು ನೆಮ್ಮದಿ ಪಡೆಯಬಹುದಾದ  ಜೋಡಿಗಳನ್ನು ಸೃಷ್ಟಿಸಿರುವುದು ಮತ್ತು ನಿಮ್ಮ ನಡುವೆ ಪ್ರೀತಿ, ವಾತ್ಸಲ್ಯಗಳನ್ನು ಬೆಳೆಸಿರುವುದು (ಇವೆಲ್ಲಾ) ಅವನ ಸಂಕೇತಗಳ ಸಾಲಿಗೆ ಸೇರಿವೆ” (ಸೂರಾ ರ‍್ರೂಮ್: 21) ಅಂದರೆ ಜೋಡಿಗಳನ್ನು ಸೃಷ್ಟಿಕರ್ತನು ಸೃಷ್ಟಿಸಿರುವುದೇ ಪರಸ್ಪರ ನೆಮ್ಮದಿಯನ್ನು ಪಡೆಯಲು ಮತ್ತು ಈ ಮೂಲಕ ದಾಂಪತ್ಯ ಬದುಕಿನಿಂದ ಮಧುರತೆ ಹೀರಲು ಸಾಧ್ಯವಿದೆ. ಆದರೆ ಇದಕ್ಕೆ ಪರಸ್ಪರ ಸಹಕಾರ ಅತೀ  ಅಗತ್ಯ ಎನ್ನುವುದು ಮಾತ್ರ ಅಡಿಗೆರೆ ಹಾಕಿ ಹೇಳಲೇಬೇಕಾದ ವಿಚಾರ.

ಮದುವೆಯಾದ ಆರಂಭದಲ್ಲಿ ಹಾಲು ಜೇನು ಎಂದು ಸರಸವಾಡುವ ದಂಪತಿಗಳು ಪರಸ್ಪರ ಆಕರ್ಷಣೆಯ ಹಿಡಿತ ಸಡಿಲವಾದಂತೆ ವಿರಸಕ್ಕೆ ತೊಡಗುತ್ತಾರೆ. ಇದರ ಜೊತೆಗೆ ಸೇರುವ ಅತ್ತೆಯ-ನಾದಿನಿಯರ ಪಾತ್ರಗಳು ವಿರಸಕ್ಕೆ ಮತ್ತಷ್ಟು ತೀವ್ರತೆಯನ್ನು ನೀಡುತ್ತದೆ.  ಇದನ್ನೆಲ್ಲಾ ಹೆಣ್ಣು ಹೇಗೆ ಎದುರಿಸುತ್ತಾಳೆ ಎನ್ನುವುದರಲ್ಲೇ ದಾಂಪತ್ಯ ಜೀವನದ ಭಾಗಶಃ ಮಧುರತೆಯು ಅಡಗಿದೆ. ಮಡದಿ ಸಮಸ್ಯೆಗಳನ್ನು ಜಾಣ್ಮೆಯಿಂದ, ಸೂಕ್ಷ್ಮತೆಯಿಂದ ಎದುರಿಸಿದಷ್ಟು ಗಂಡಿನ ಪಾಲಿಗೆ ದಾಂಪತ್ಯ ಬದುಕು ಸುಗಮವಾಗುತ್ತದೆ ಎಂದರೆ  ಅತಿಶಯವಲ್ಲ.

ಹೆಣ್ಣು ಕುಟುಂಬದ ಕಣ್ಣು ಎಂದೆನ್ನುತ್ತಾರೆ. ಹೆಣ್ಣು ತಾಯ್ತನದ ಮೂಲಕ, ಮಕ್ಕಳನ್ನು ಪೋಷಿಸುವ ಮೂಲಕ, ಗಂಡನ ಜೊತೆಗೆ  ಆಯವ್ಯಯದ ತೀರ್ಮಾನಗಳಲ್ಲಿ ಪಾಲ್ಗೊಳ್ಳುವ ಮೂಲಕ ಕುಟುಂಬದ ಅಮೂಲಾಗ್ರ ಔನ್ನತ್ಯದ ಜವಾಬ್ದಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾಳೆ. ಆದರೆ ಈ ಪಾತ್ರಕ್ಕೆ ಗೌರವವನ್ನು ಕಲ್ಪಿಸುವ ಬದಲು ಅನೇಕರ ದಾಂಪತ್ಯ ಬದುಕಿನಲ್ಲಿ ಹೆಣ್ಣನ್ನು ಯಂತ್ರದಂತೆ  ಕಾಣಲಾಗುತ್ತದೆ. ಹಾಗೆ ನೋಡಿದರೆ ಸ್ವಭಾವ ಗಂಡಿನಿಂದ ಗಂಡಿಗೆ, ಹೆಣ್ಣಿನಿಂದ ಹೆಣ್ಣಿಗೆ ವ್ಯತ್ಯಾಸವಾಗಿರುತ್ತದೆ. ಮದುವೆಯಾಗಿ ದಿನ ಕಳೆದಂತೆ ಗಂಡ-ಹೆಂಡತಿಯ ಮಧ್ಯೆ ಸಂಭವಿಸುವ ತರ್ಕಗಳು-ವಾಗ್ವಾದಗಳು ಕೆಲವೊಮ್ಮೆ ಪರಿಸ್ಥಿತಿಯನ್ನು ಮೀರಿ ಹೋಗುವುದಿದೆ.  ಹೀಗೆ ತೊಡಗಿದಾಗ ಇಬ್ಬರೂ ಪರಸ್ಪರ ನಕಾರಾತ್ಮಕ ಅಂಶಗಳನ್ನು ಪಟ್ಟಿ ಮಾಡ ತೊಡಗುತ್ತಾರೆ. ಸಮಸ್ಯೆ ಆರಂಭವಾಗುವುದು ಇಲ್ಲಿಯೇ! ಹೆಂಡತಿಯ ನಾಲಗೆ-ಗಂಡಿನ ಕೈ ಪರಸ್ಪರ ಘರ್ಷಣೆಗೀಡಾಗಿ-ಬೇರ್ಪಡುವ ಸನಿಹಕ್ಕೆ ತಲುಪುವ ಘಟನೆಗಳೂ ಸಾಮಾನ್ಯವಾಗಿರುವುದನ್ನು ನಾವು ಕಾಣಬಹುದಾಗಿದೆ. ಇದು ಕ್ರಮೇಣ ಮಧುರತೆಯ ಬದಲಿಗೆ ಮಧುರಹಿತ ಜೀವನವಾಗಿ ಬದಲಾಗುತ್ತದೆ.

ಹೆಚ್ಚಿನ ಕುಟುಂಬಗಳಲ್ಲಿ ಗಂಡನೇ ದುಡಿದು ತರುವವನಾಗಿದ್ದರೆ, ಮಡದಿ ಮನೆಯ ಜವಾಬ್ದಾರಿಕೆಯನ್ನು ನಿಭಾಯಿಸುತ್ತಾಳೆ. ಹಲವು ಬಾರಿ ಹೆಣ್ಣಿನ ಸ್ವಭದ್ರತೆಯ ಬಗೆಗಿನ ಸ್ವಾರ್ಥ ಗಂಡನ ಬದುಕಿನಲ್ಲಿ ಒತ್ತಡವನ್ನು ತಂದಿಡುತ್ತದೆ. ಗಂಡು ಸಹಜವಾಗಿಯೇ ತೊಳಲಾಟಕ್ಕೆ ಬಿದ್ದು ತನ್ನ ಪಾತ್ರಕ್ಕೆ ನ್ಯಾಯ ನೀಡಲು ಹೆಣಗಾಡುತ್ತಾನೆ. ಅತ್ತ ತನ್ನ ಹೆತ್ತವರನ್ನೂ ಸಂತೃಪ್ತಿಪಡಿಸಲಾಗದೆ, ಇತ್ತ ಮಡದಿಗೂ ನ್ಯಾಯ ನೀಡಲಾಗದೆ ಒತ್ತಡದ ಬದುಕಿನಲ್ಲಿ ಕುಗ್ಗಿ ಹೋಗುತ್ತಾನೆ. ಪರಿಣಾಮ ದಾಂಪತ್ಯ ಬದುಕು ನಿತ್ಯ ಜಗಳದ-ಸಂಘರ್ಷಮಯವಾಗಿ ಬದಲಾಗುತ್ತದೆ. ಹೀಗೆ ಮಧುರಹಿತ ದಾಂಪತ್ಯ ಅನೇಕ ಬಾರಿ ವಿಚ್ಛೇದನದಲ್ಲಿ ಅಂತ್ಯ ಕಂಡರೆ, ಹಲವು ಕಡೆ ಒಂದೇ  ಮನೆಯಲ್ಲಿದ್ದೂ ಕೂಡ ಪರಸ್ಪರರ ಮುಖ ನೋಡದೆ ಯಾಂತ್ರಿಕ ಬದುಕು ಸಾಗಿಸುವ ಅಸಹನೀಯ ಸ್ಥಿತಿಗೂ ಕಾರಣವಾಗುತ್ತದೆ,  ಇನ್ನು ಕೆಲವು ಕಡೆ ಗಂಡು ಕೇವಲ ಹಣ ದುಡಿದು ತರುವ ಯಂತ್ರವಾಗಿರುತ್ತಾನೆ. ಆತನ ತೀರ್ಮಾನಗಳು-ಮಾತುಗಳು ಅವನದೇ  ಮನೆಯಲ್ಲಿ ನಗಣ್ಯವಾಗಿರುತ್ತದೆ. ಮಾತ್ರವಲ್ಲ ಸಮಾಜದ ಕಣ್ಣಿಗೆ ಮಾತ್ರ ದಾಂಪತ್ಯದ ಸೋಗು ಆಗಿ ಕಾಣುತ್ತದೆ.

ದಾಂಪತ್ಯದ ಮಧುರತೆ ಎನ್ನುವುದು ದುಡಿದು ತರುವ ಹಣದ ಮೇಲೆ ಅವಲಂಬಿತವಾಗಿರಬಾರದು. ಹೆಣ್ಣು ಈ ನಿಟ್ಟಿನಲ್ಲಿ ತೆಗೆಯುವ ತೀರ್ಮಾನಗಳು ದಾಂಪತ್ಯ ಬದುಕಿನ ನೆಮ್ಮದಿಯ ಅಳತೆಗೋಲಾಗಬಹುದು. ಹಣದಿಂದ ಅಗತ್ಯ ವಸ್ತುಗಳನ್ನು ಖರೀದಿಸಬಹುದು,  ದೇಹವನ್ನು ಮಿನುಗಿಸುವ ಚಿನ್ನಾಭರಣಗಳನ್ನು ತಮ್ಮದಾಗಿಸಬಹುದು, ಆಡಂಬರದ ಬದುಕನ್ನು ನಡೆಸಬಹುದು. ಆದರೆ ಪ್ರೀತಿಯನ್ನು ಕೊಳ್ಳಲಾಗದು, ಮಧುರತೆಯನ್ನು ತುಂಬಲಾಗದು. ಹೆಣ್ಣಿನ ಪಾತ್ರ ಈ ದಿಶೆಯಲ್ಲಿ ಗಂಡಿನ ಬದುಕಿನಲ್ಲಿ ಸಂತಸ ತರಬಲ್ಲುದು ಎಂಬುದನ್ನು ಅಲ್ಲಗಳೆಯಲಾಗದು. ಪ್ರತೀ ಬಾರಿಯೂ ಗಂಡನನ್ನು ಪ್ರೋತ್ಸಾಹಿಸುತ್ತಾ, ಸಂತೈಸುತ್ತಾ, ತನ್ನ ಪ್ರೀತಿಯನ್ನು ಮುಕ್ತವಾಗಿ  ವ್ಯಕ್ತಪಡಿಸುತ್ತಾ ಸಾಗಿದರೆ ದಾಂಪತ್ಯದ ತಕ್ಕಡಿಯಲ್ಲಿ ಸಂತೋಷ-ನೆಮ್ಮದಿಯ ಭಾರ ಸಹಜವಾಗಿಯೇ ಹೆಚ್ಚಾಗುವುದು.

ಇಸ್ಲಾಂ ದಾಂಪತ್ಯ ಬದುಕಿನ ಮೇರೆಗಳನ್ನು ಕಲಿಸಿಕೊಟ್ಟಿದೆ. “ತಿಳಿಯಿರಿ, ನೀವು ನಿಮಗಿಂತ ಮೇಲೆ ಉಳ್ಳವರನ್ನು ನೋಡಬೇಡಿರಿ.  ಕೆಳಗಿನವರನ್ನು ನೋಡಿರಿ. ಅದಾಗಿದೆ ಅಲ್ಲಾಹನು ನಿಮಗೆ ನೀಡಿದ ಅನುಗ್ರಹಗಳನ್ನು ಕಡೆಗಣಿಸದಿರಲು ನಿಮಗೆ ಅತ್ಯಂತ  ಔಚಿತ್ಯವಾದದ್ದು” (ಸಹೀಹ್ ಮುಸ್ಲಿಂ) ಎಂಬ ಹದೀಸ್‌ನ ತಾತ್ಪರ್ಯದಂತೆ ಬದುಕು ಸಾಗಿಸಿದರೆ ದಾಂಪತ್ಯ ಜೀವನದಲ್ಲಿ ಯಾವ ಅಡೆತಡೆಗಳೂ ಇಲ್ಲದೆ ಸುಮಧುರತೆಯನ್ನು ತಮ್ಮದಾಗಿಸಬಹುದು. ಇಂದು ಹೆಚ್ಚಿನ ಸಂದರ್ಭಗಳಲ್ಲಿ ಹೆಣ್ಣಿನ ತುಲನೆ ಮಾಡುವ ಸ್ವಾರ್ಥತೆ ಹಲವು ಕುಟುಂಬಗಳ ಬಿರುಕಿನಲ್ಲಿ ಪ್ರಧಾನ ಪಾತ್ರ ವಹಿಸುತ್ತಿದೆ. ತಮಗಿಂತ ಉತ್ತಮ ರೀತಿಯಲ್ಲಿ ಬದುಕು ಸಾಗಿಸುವವರ  ಸ್ಟೇಟಸ್‌ಗೆ ತಮಗೂ ತುಲನೆ ಮಾಡುತ್ತಾ-ಗಂಡನ ಮೇಲೆ ನಿರಂತರ ಒತ್ತಡ ಹೇರುತ್ತಾ ದಾಂಪತ್ಯ ಬದುಕನ್ನು ಕಗ್ಗಂಟಾಗಿಸುವವರ ಸಂಖ್ಯೆ ಈಗ್ಗೆ ಹೆಚ್ಚುತ್ತಲಿದೆ. ಆಧುನಿಕತೆಯ ಭರಾಟೆಯಲ್ಲಿ ಸಂಭ್ರಮಗಳ ಮೇರೆಗಳೂ ಮೀರುತ್ತಿದ್ದು, ಅವರಂತೆ ನಾವೂ  ಸಂಭ್ರಮಿಸಬೇಕು ಎನ್ನುವ ಹಪಹಪಿ, ಅವರ ಮುಂದೆ ನಾನು ಕುಗ್ಗಿ ಹೋಗುವೆನೋ-ಅವಮಾನಕ್ಕೀಡಾಗುವೆನೋ ಎಂಬ ಆತಂಕ ಎಲ್ಲವೂ ಮಿಳಿತಗೊಂಡರೆ ಹೆಣ್ಣು ಗಂಡಿನ ಬದುಕಿನ ದುಸ್ವಪ್ನವಾಗಿ ಕಾಡುವುದಲ್ಲದೆ ಮಧುರತೆಯನ್ನು ಪಸರಿಸುವುದು ಹೇಗೆ ಸಾಧ್ಯ.?

ದುಡಿದು ತರುವ ಹೆಣ್ಣಾಗಲೀ ಗಂಡಾಗಲೀ ಮನೆಯಲ್ಲಿ ಆಶಿಸುವುದು-ಬಯಸುವುದು ಒಂದು ಹಿಡಿ ಸಮಾಧಾನ-ಪ್ರೀತಿ-ಆರೈಕೆಯನ್ನು. ಆದರೆ ಇದು ಲಭಿಸದೇ ಹೋದಲ್ಲಿ ಅಸಮಾಧಾನ ಹೊಗೆಯಾಡುತ್ತದೆ, ಸಂಘರ್ಷ ನಿಧಾನಕ್ಕೆ ಕುಟುಂಬದ ಬದುಕನ್ನು  ಬುಡಮೇಲುಗೊಳಿಸುತ್ತಾ ಸಾಗುತ್ತದೆ. ಹೆಣ್ಣು ಗಂಡನ್ನು ಹೇಗೆ ಸಂತೈಸುತ್ತಾ-ದಾಂಪತ್ಯ ಬದುಕನ್ನು ನಡೆಸುತ್ತಾಳೋ, ದಾಂಪತ್ಯದ  ಸುಮಧುರತೆಯೂ ಅಷ್ಟೇ ಎತ್ತರದಲ್ಲಿರುತ್ತದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …