Home / ಲೇಖನಗಳು / ಪರ್ದಾದಿಂದ ಸಾಕ್ಷಿಯವರೆಗೆ

ಪರ್ದಾದಿಂದ ಸಾಕ್ಷಿಯವರೆಗೆ

ಪರ್ದಾವನ್ನು ಕಡ್ಡಾಯಗೊಳಿಸುವ ಮೂಲಕ ಇಸ್ಲಾಮ್ ಮಹಿಳೆಯರನ್ನು ಶೋಷಣೆಗೊಳಪಡಿಸಿದೆಯಲ್ಲವೇ? ಮುಸ್ಲಿಮ್ ಮಹಿಳೆಯರ ಹಿಂದುಳಿಯುವಿಕೆಗೆ ಪರ್ದಾವೂ ಕಾರಣವಲ್ಲವೇ?

ಮಹಿಳೆಯು ಮುಖ ಮತ್ತು ಮುಂಗೈಯ ಹೊರತುಪಡಿಸಿ ದೇಹದ ಉಳಿದ ಭಾಗಗಳನ್ನು ಮರೆಸಬೇಕೆಂದು ಇಸ್ಲಾಮ್ ಹೇಳುತ್ತದೆ. ಇದು ಮಹಿಳೆಯರ ಏಳಿಗೆಗೆ ಅಡ್ಡಿಯಲ್ಲ. ಸಹಾಯಕವಾಗಿದೆ. ಮಹಿಳೆಗೆ ಪರ್ದಾ ಹಿಂಸೆಯಲ್ಲ, ಆಕೆಯ ರಕ್ಷಾ ಕವಚವಾಗಿದೆ.

ಇಂದು ವಿಶ್ವದ ಹಲವು ಭಾಗಗಳಲ್ಲಿ ಪರ್ದಾಧಾರಿಣಿ ಮಹಿಳೆಯರು ವೈಜ್ಞಾನಿಕ, ವೈಮಾನಿಕ, ಸಾಹಿತ್ಯ, ಮಾಧ್ಯಮ ರಂಗಗಳು ಹಾಗೂ ಪಾರ್ಲಿಮೆಂಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇರಾನಿನ ಐದು ಉಪಾಧ್ಯಕ್ಷರುಗಳಲ್ಲಿ ಓರ್ವರಾದ ಮ‍ಅಸೂಮಾ ಇಬ್ತಿಕಾರ್ ಪರ್ದಾಧಾರಣಿಯಾಗಿದ್ದಾರೆ. ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ನಡೆಸಿ, ಮ‍ಅಸೂಮಾ ತೆಹ್ರಾನ್ ಯೂನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಪ್ರಸಿದ್ಧ ಪತ್ರಕರ್ತೆ ಆಗಿದ್ದಾರೆ. ಸಾಮಾಜಿಕ ಕಾರ್ಯಕರ್ತೆಯಾಗಿರುವ ಇವರು ಹಲವು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.

ಇರಾನ್‌ನ ಪ್ರಸಿದ್ಧ ಮಹಿಳಾ ಪತ್ರಿಕೆಯಾದ ‘ಮಹ್ ಜೂಬಾ’ದ ಸಂಪಾದಕಿಯೂ ಟೆಹ್ರಾನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಟುರಾನ್ ಜಂಶೀದ್‌ ಯಾನ್, ನ್ಯಾಶನಲ್ ಒಲಿಂಪಿಕ್ಸ್ ಉಪಾಧ್ಯಕ್ಷೆಯೂ, ಪಾರ್ಲಿಮೆಂಟಿನ ಉಪಾಧ್ಯಕ್ಷೆಯೂ ಆಗಿದ್ದ ಫಸೀಹ್ ಹಾಶ್ಮಿ, ಮಹಿಳಾ ಕಲ್ಯಾಣ ಇಲಾಖೆಯ ಸಲಹೆಗಾರ್ತಿಯಾಗಿದ್ದ ಶಹ್ಲಾ ಹಬೀಬಿ, ಮಲೇಶಿಯಾ ರಾಜಕೀಯದಲ್ಲಿ ಬೆಳೆದು ನಿಂತಿರುವ ವಾನ್ ಅಝೀಝಾರಂತಹ ಪ್ರಖ್ಯಾತ ಮಹಿಳೆಯರೆಲ್ಲಾ ಪರ್ದಾಧಾರಿಣಿಗಳಾಗಿದ್ದಾರೆ. ಆಧುನಿಕ ಲೋಕದಲ್ಲಿ ರಣಾಂಗಣದಲ್ಲಿ ಧೈರ್ಯದಿಂದ ಹೋರಾಡಿದ ವನಿತೆಯರು ಇರಾನ್ ಹಾಗೂ ಅಫಘಾನಿಸ್ತಾನದ ಮಹಿಳೆಯರು ಎಂಬ ವಾಸ್ತವ ಮರೆಯುವಂತಿಲ್ಲ, ವಾಲಿಬಾಲ್, ಬಾಸ್ಕೆಟ್ ಬಾಲ್, ಶೂಟಿಂಗ್, ಸೈಕ್ಲಿಂಗ್, ಟೆನಿಸ್, ಜಿಮ್ನಾಸ್ಟಿಕ್, ಕುದುರೆ ಸ್ಪರ್ಧೆ, ಜೂಡೋ, ಕರಾಟೆ, ಚೆಸ್ ಮೊದಲಾದ ಕ್ರೀಡೆಗಳಿಂದ, ಮೇಲುಗೈ ಸಾಧಿಸುತ್ತಿರುವ ಇರಾನ್‌ ನಲ್ಲಿ ಮಹಿಳೆಯರ ಉನ್ನತಿಯಲ್ಲಿ ಪರ್ದಾ ಕ್ರೀಡಾರಂಗದಲ್ಲಿ ಯಾವುದೇ ರೀತಿಯಲ್ಲಿ ಅಡ್ಡಿಯಾಗಿಲ್ಲ, ಪರ್ದಾಕ್ಕೆ ಸಮಾನವಾದ ವಸ್ತ್ರಧಾರಣೆಯು ಮದ‌ರ್ ಥೆರೆಸಾರ ಸಮಾಜ ಸೇವಾ ಚಟುವಟಿಕೆಗಳಿಗೆ ಅಡ್ಡಿಯೆನಿಸಲಿಲ್ಲ, ವಿವಿಧ ರಂಗಗಳಲ್ಲಿ ಸೇವಾ ನಿರತರಾಗಿರುವ ಕನ್ಯಾಸ್ತ್ರೀಯರ ವಸ್ತ್ರಧಾರಣೆಯು ಪರ್ದಾಕ್ಕೆ ಸಮಾನವಾಗಿದೆಯಲ್ಲವೇ?

ಶರೀರ ಭಾಗಗಳನ್ನು ಮರೆಸುವುದು ಅಂತರಿಕ್ಷ ಯಾನಗಳಿಗೋ, ಸಂಶೋಧನೆಗಳಿಗೋ ತೊಂದರೆ ಉಂಟು ಮಾಡುವುದಿಲ್ಲವೆಂದು ಬಾಹ್ಯಾಕಾಶಯಾತ್ರಿಕರ ಅನುಭವದಿಂದ ಸ್ಪಷ್ಟವಾಗುತ್ತದೆ, ಪ್ಯಾಂಟ್, ಶರ್ಟು, ಟೈ, ಓವರ್‌ ಕೋಟ್, ಸಾಕ್ಸ್, ಶೂ, ಕ್ಯಾಪ್, ಧರಿಸುವ ಪಾಶ್ಚಾತ್ಯರಾದ ಪುರುಷರು ಇಸ್ಲಾಮ್ ಮಹಿಳೆಯರಿಗೆ ಸೂಚಿಸಿದ ಎಲ್ಲಾ ಶರೀರ ಭಾಗವನ್ನು ಮರೆಸುತ್ತಾರೆ, ಆದರೆ ಸ್ತ್ರೀಯರು ಇದಕ್ಕೆ ವಿರುದ್ಧವಾಗಿದ್ದಾರೆ.

ಸ್ತ್ರೀಯೆಂದರೆ ಅವಳ ಸೌಂದರ್ಯ, ದೇಹ, ರೂಪಲಾವಣ್ಯವಾಗಿದೆ. ಅವಳ ವ್ಯಕ್ತಿತ್ವವು ಅದರ ಮಾದಕತೆಗೆ ಅನುಸಾರವಾಗಿದೆ ಎಂಬ ಭಾವನೆಯನ್ನು ಮೂಡಿಸುವಲ್ಲಿ ಬಂಡವಾಳಶಾಹಿ ಶಕ್ತಿಗಳು ಹಾಗೂ ಅದರ ಕೂಸಾಗಿರುವ ಗ್ರಾಹಕ ಸಂಸ್ಕೃತಿಯು ಯಶಸ್ವಿಯಾಗಿದೆ. ಪರ್ದಾ ಪ್ರಗತಿಗೆ, ನಾಗರಿಕತೆಗೆ ಅಡ್ಡಿಪಡಿಸುತ್ತದೆಂಬ ಭಾವನೆ ಪ್ರಬಲವಾಗಲು ಇದುವೇ ಕಾರಣ. ತಮ್ಮ ದೇಹ ಸೌಂದರ್ಯವನ್ನು ಪ್ರದರ್ಶಿಸುತ್ತಾ ಪೇಟೆ, ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವುದೇ ಪ್ರಗತಿಯೆಂದು ಪ್ರಚಾರ ನಡೆಸುತ್ತಿರುವ ಮಹಿಳೆಯರು, ಪುರುಷರು ತಮ್ಮ ದೇಹ ಸೌಂದರ್ಯವನ್ನು ಆಸ್ವಾದಿಸುವ ಮನೋವಿಕೃತಿಯವರೆಂದು ಭಾವಿಸುತ್ತಾರೆ.

ಸಮಾಜದ ಮಹಿಳೆಯರೆಲ್ಲರ ಸೌಂದರ್ಯವನ್ನು ಆಸ್ವದಿಸಲು, ಕಾಮಾಂಧ ಕಣ್ಣುಗಳೊಂದಿಗೆ ಕಾಯುತ್ತಿರುವವರ ಮುಂದೆ ತಮ್ಮ ದೇಹವನ್ನು ರಕ್ಷಿಸಿಕೊಳ್ಳವುದು ಘನತೆಯಾಗಿದೆ. ಇದು ಮಹಿಳೆಯರ ರಕ್ಷಣೆಗೂ ಸಹಾಯಕ, ಪರ್ದಾದ ಮೂಲಕ ಇಸ್ಲಾಮ್ ಮಹಿಳೆಯಿಂದ ಇದನ್ನೇ ಬಯಸುತ್ತದೆ. ಅದರೊಂದಿಗೆ ಪರ್ದಾ ಪ್ರಗತಿಗೆ ಅಡ್ಡಿಯಲ್ಲ, ಇರಾನ್ ಸಂದರ್ಶನದ ಬಳಿಕ ಎಂ.ಪಿ. ವೀರೇಂದ್ರ ಕುಮಾರ್ ಬರೆದ ಮಾತುಗಳು ಗಮನಾರ್ಹವಾಗಿದೆ: ಇರಾನ್‌ ನಲ್ಲಿ ಮಹಿಳೆಯರು ಪರ್ದಾ ಧರಿಸುತ್ತಾರೆ: ಮುಖ ಮರೆಸುವುದಿಲ್ಲ. ತಲೆಯನ್ನು ಮರೆಸುತ್ತಾರೆ. ಯಾವುದೇ ಪಿಕ್‌ನಿಕ್ ಸ್ಥಳಕ್ಕೆ ಹೋದಾಗ ಅಲ್ಲಿ ನೂರಾರು ಪರ್ಧಾಧಾರಿ ಮಹಿಳೆಯರು ಕಾಣಿಸುತ್ತಾರೆ. ಇರಾನ್‌ನ ವಾರ್ತಾ ಏಜೆನ್ಸಿಯಾದ ‘ಇರ್ನಾ’ದ ಕೇಂದ್ರ ಕಮಿಟಿ ಆಫೀಸ್ ಗೆ ತಲುಪಿದಾಗ, ಅಲ್ಲಿನ ಉದ್ಯೋಗಿಗಳಲ್ಲಿ ಬಹುಸಂಖ್ಯಾತರು ಮಹಿಳೆಯರೇ ಆಗಿದ್ದಾರೆ. ಮಹಿಳೆಯರು ಅಲ್ಲಿ ವಾಹನ ಚಲಾಯಿಸುತ್ತಾರೆ. ಯಾವುದೇ ಅಡ್ಡಿ ಅಂತಕವಿಲ್ಲ. ಆದರೆ ನ್ಯೂಯಾರ್ಕ್‌ನಲ್ಲಿ ಕಂಡು ಬರುವಂತೆ ಮಹಿಳೆಯರನ್ನು ಸೆಕ್ಸ್ ಸಿಂಬಲ್‌ ಗಳಾಗಿ ಬದಲಾಯಿಸಲು ಇರಾನಿಯರು ಒಪ್ಪಿಗೆ ನೀಡುವುದಿಲ್ಲ’ (ಬೋಧನಂ ವಾರಪತ್ರಿಕೆ 1993 ನವೆಂಬರ 6)

ಶ್ರೀಮತಿ ಕಲ್ಪನಾ ಶರ್ಮರ ಪ್ರಶ್ನೆಯು ಪ್ರಸಕ್ತವಾದುದು ‘ಉನ್ನತ ಶಿಕ್ಷಣ ಪಡೆದು ಸಾರ್ವಜನಿಕ ರಂಗಕ್ಕಿಳಿದು ಉದ್ಯೋಗ ನಿರ್ವಹಿಸಲು ದಾಂಪತ್ಯ ಸಂಬಂಧ ಹದಗೆಟ್ಟಾಗ ವಿಚ್ಛೇದನ ಹೊಂದಲು ನ್ಯಾಯಾಲಯಕ್ಕೆ ಹೋಗುವ ಅನುಮತಿ ಇರುವ ಇರಾನ್‌ನ ಮಹಿಳೆಯರಿಗಿಂತ ನಮಗೆ ಯಾವ ಮೇಲ್ಮೆ ಇದೆ. ಅವರಿಗೆ ವಿರುದ್ಧವಾಗಿ ತೀರ್ಪು ನೀಡಲು ನಮಗೆ ಸಾಧ್ಯವಿದೆಯೇ?’ (Kalpana Sharma Behind The Veil- The Hindu 20-7-97)

ಮಹಿಳೆಯರಿಗೆ ಪರ್ದಾವನ್ನು ಕಡ್ಡಾಯಗೊಳಿಸಿ, ಪುರುಷರಿಗೆ ಅದರಿಂದ ವಿನಾಯತಿ ನೀಡಿರುವುದು ದೊಡ್ಡ ಅನ್ಯಾಯವಲ್ಲವೇ? ಅಸಮಾನತೆಯಲ್ಲವೇ?
ಈ ಅಸಮಾನತೆಯು ಪ್ರಕೃತಿದತ್ತವಾಗಿದೆ. ಸ್ತ್ರೀ-ಪುರುಷರ ದೇಹ ರಚನೆ ಒಂದೇ ರೀತಿ ಇಲ್ಲವಲ್ಲ? ಯಾವುದೇ ಶಕ್ತಿವಂತನಾದ ಪುರುಷನಿಗೆ ಮಹಿಳೆಯ ಅನುಮತಿಯಿಲ್ಲದೆ ಅತ್ಯಾಚಾರವೆಸಗಲು ಸಾಧ್ಯವಿದೆ. ಆದರೆ ಮಹಿಳೆ ಎಷ್ಟೇ ಶಕ್ತಿವಂತಳಾಗಿದ್ದರೂ, ಪುರುಷನ ಅನುಮತಿಯಿಲ್ಲದೆ ಅದು ಸಾಧ್ಯವಿಲ್ಲ. ಈ ಅಂತರದ ಅನಿವಾರ್ಯ ಫಲವೇ ಈ ವಸ್ತ್ರಧಾರಣೆಯಲ್ಲಿರುವ ವ್ಯತ್ಯಾಸ, ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಮಹಿಳಾ ಸಂರಕ್ಷಣೆಗಾಗಿ ವಿಶೇಷ ಕಾನೂನು ರಚಿಸಲಾಗಿದೆ. ಅನಿವಾರ್ಯತೆಯೂ ಇದರಿಂದಾಗಿಯೇ ಬಂದಿದೆ. ಸ್ತ್ರೀ ಹಿಂಸೆಯ ವಿರುದ್ಧ ಕಠಿಣ ಶಿಕ್ಷೆಗಳನ್ನು ನಿಶ್ಚಯಿಸಿದ ದೇಶಗಳಲ್ಲೂ ಪುರುಷ ಪೀಡನೆಯ ವಿರುದ್ಧ ಈ ರೀತಿಯ ಕಾನೂನುಗಳಿಲ್ಲವಲ್ಲಾ. ಶಾರೀರಿಕ ಭಿನ್ನತೆಯು ಪುರುಷನಿಗಿಂತ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆಯನ್ನು ಬಯಸುತ್ತದೆಂದು ಇದು ಸ್ಪಷ್ಟಪಡಿಸುತ್ತದೆ. ಮಹಿಳೆ ತನ್ನ ದೇಹ ಸೌಂದರ್ಯವನ್ನು ಅನ್ಯ ಪುರುಷರ ಮುಂದೆ ಪ್ರಕಟಿಸಬಾರದೆಂದು ಇಸ್ಲಾಮ್ ಇದೇ ಕಾರಣಕ್ಕಾಗಿ ಹೇಳಿದೆ. ಆದ್ದರಿಂದ ಪರ್ದಾ ಮಹಿಳೆಯರಿಗೆ ಸಂರಕ್ಷಣೆಯೂ, ಸೌಕರ್ಯವೂ ಆಗಿದೆ. ಅದು ಹಿಂಸೆಯೋ ಶಾಪವೋ ಅಲ್ಲ.

ಸ್ತ್ರೀಯರಿಗೆ ಪುರುಷರಿಗಿಂತ ಅರ್ಧಪಾಲು

ಮಹಿಳೆಯರಿಗೆ ವಾರೀಸು ಹಕ್ಕಿನಲ್ಲಿ ಪುರುಷರಿಗಿಂತ ಅರ್ಧಪಾಲು ದೊರೆಯುತ್ತದೆ. ಇದು ಅನ್ಯಾಯವೂ ಅಸಮಾನತೆಯೂ ಅಲ್ಲವೇ?

ಇಸ್ಲಾಮೀ ಕಾನೂನಿನಂತೆ ಮಹಿಳೆಗೆ ಯಾವುದೇ ಸಂದರ್ಭದಲ್ಲಿ ಆರ್ಥಿಕ ಹೊಣೆಗಾರಿಕೆಯಿಲ್ಲ, ಹಕ್ಕುಗಳು ಮಾತ್ರ ಇದೆ. ಎಲ್ಲಾ ಹೊಣೆಗಾರಿಕೆಗಳು ಯಾವುದೇ ಪರಿಸ್ಥಿತಿಯಲ್ಲೂ ಪುರುಷರಿಗೆ ಮಾತ್ರ ಇದೆ. ವಿವಾಹದ ವೇಳೆಯಲ್ಲಿ ವರ ಮತ್ತು ವಧುವಿನ ವಸ್ತ್ರಗಳೂ ಸೇರಿದಂತೆ ಎಲ್ಲವುಗಳ ಖರ್ಚುನ್ನು ಪುರುಷನೇ ಭರಿಸಬೇಕು. ಅದರೊಂದಿಗೆ ವಧುವಿಗೆ ಕಡ್ಡಾಯವಾಗಿ ವಧು ದಕ್ಷಿಣೆ(ಮಹ್ರ್) ನೀಡಬೇಕು. ಬಳಿಕ ಪತ್ನಿ ಮತ್ತು ಮಕ್ಕಳನ್ನು ಪೋಷಿಸುವ ಜವಾಬ್ದಾರಿ ಸಂಪೂರ್ಣವಾಗಿ ಪುರುಷನಿಗಿದೆ. ಪತಿ-ಪತ್ನಿಯರೀರ್ವರೂ ಒಂದೇ ವರಮಾನವಿರುವ ವೈದ್ಯರೋ, ಶಿಕ್ಷಕರೋ ಆಗಿದ್ದರೂ ಪರವಾಗಿಲ್ಲ, ಮಹಿಳೆ ತನ್ನನ್ನೂ ಸೇರಿದಂತೆ ಯಾರ ಆರ್ಥಿಕ ಹೊಣೆಯನ್ನೂ ವಹಿಸಬೇಕಾಗಿಲ್ಲ. ಉದ್ಯೋಗಸ್ಥೆಯಾದ ಪತ್ನಿಯ ಆಹಾರ, ವಸ್ತ್ರ, ಚಿಕಿತ್ಸೆಯೂ ಸೇರಿದಂತೆ ಎಲ್ಲವನ್ನೂ ಪುರುಷನೇ ನೋಡಿಕೊಳ್ಳಬೇಕಾಗುತ್ತದೆ. ಅಥವಾ ಪತಿ ಮರಣ ಹೊಂದಿದರೆ ಆತನಿಗೆ ಆಸ್ತಿ ಇಲ್ಲದಿದ್ದರೆ ಆತನ ಅನಾಥ ಮಕ್ಕಳ ಸಂರಕ್ಷಣೆಯನ್ನು ತಂದೆ, ಸಹೋದರರರು, ಸಹೋದರರ ಮಕ್ಕಳು, ಪಿತೃ ಸಹೋದರರು ವಹಿಸಬೇಕು. ಮರಣ ಹೊಂದಿದ ವ್ಯಕ್ತಿಗೆ ಮಕ್ಕಳಿಲ್ಲದಿದ್ದರೆ ಆತನ ಆಸ್ತಿಯಲ್ಲಿ ಪತ್ನಿಗೂ ಪಾಲು ಇದೆ. ಮಹಿಳೆ ವಿವಾಹಿತೆಯಾದರೆ ಪತಿ, ಅವಿವಾಹಿತೆಯಾಗಿದ್ದರೆ ತಂದೆ, ತಂದೆಯಿಲ್ಲದಿದ್ದರೆ ಸಹೋದರರು ಆಕೆಯ ಪೋಷಣೆ ಮಾಡಬೇಕು. ತಾಯಿಯನ್ನು ನೋಡಿಕೊಳ್ಳಬೇಕಾದುದು ಮಕ್ಕಳ ಕರ್ತವ್ಯವಾಗಿದೆ. ಆದ್ದರಿಂದ ಯಾವುದೇ ಪರಿಸ್ಥಿತಿಯ ಆರ್ಥಿಕ ಜವಾಬ್ದಾರಿಯನ್ನು ಇಸ್ಲಾಮೀ ಕಾನೂನು ಮಹಿಳೆಯರಿಗೆ ನೀಡಿಲ್ಲ. ಪರಸ್ಪರ ಸಂಬಂಧ, ಪ್ರೀತಿ, ಸ್ನೇಹದ ಕಾರಣದಿಂದ ಆಕೆ ತನ್ನ ಹಣವನ್ನು ವ್ಯಯಿಸುವುದಾದರೆ ಅದು ಬೇರೆ ವಿಷಯ. ಹೀಗಿದ್ದರೂ ಇಸ್ಲಾಮ್ ಮಹಿಳೆಗೆ ವಾರೀಸು ಹಕ್ಕು, ವಧುದಕ್ಷಿಣೆಯನ್ನು ಆಕೆಯ ಸ್ಥಾನಮಾನ ಹಾಗೂ ಸುರಕ್ಷತೆಯನ್ನು ಖಾತ್ರಿಪಡಿಸಲು ಕಡ್ಡಾಯಗೊಳಿಸಿದೆ. ತನ್ನ ಆಸ್ತಿಯನ್ನು ಕಾಪಾಡಲು, ನೋಡಿಕೊಳ್ಳಲು, ಹೆಚ್ಚಿಸಲು ಮಹಿಳೆಗೆ ಸ್ವಾತಂತ್ರ್ಯವಿದೆ. ತಾಯಿ, ಮಗಳು, ಪತ್ನಿ, ಸಹೋದರಿ… ಹೀಗೆ ಎಲ್ಲಾ ಹಂತದಲ್ಲೂ ಸಂಪೂರ್ಣ ಸುರಕ್ಷಿತತೆಯನ್ನು ಖಾತ್ರಿಪಡಿಸಿದ ಬಳಿಕವೂ, ಲೌಕಿಕ ಬೇಡಿಕೆಯಂತೆ ಆಸ್ತಿಯ ಅಗತ್ಯವಿಲ್ಲದಿದ್ದರೂ ಇಸ್ಲಾಮ್ ಮಹಿಳೆಯರಿಗೆ ಅದನ್ನು ನೀಡಿದ್ದು ಮಹಿಳೆಯ ಸ್ಥಾನಮಾನ, ಹಾಗೂ ಗೌರವಕ್ಕೆ ಯಾವುದೇ ರೀತಿಯ ಚ್ಯುತಿ ಬರಬಾರದೆಂಬ ಕಾರಣದಿಂದ ಮಾತ್ರ.

ಹೆಣ್ಣಿನ ಅನುಮತಿ ಅಥವಾ ಸಮತಿಯಿಲ್ಲದೆ ಅವಳನ್ನು ವಿವಾಹ ಮಾಡಿಕೊಡಲು ಪೋಷಕರಿಗೆ ಇಸ್ಲಾಮ್ ಅನುಮತಿ ನೀಡುತ್ತದೆ ಎಂಬ ವಿಷಯ ನಿಜವೇ?

ನಿಜವಲ್ಲ. ಸ್ತ್ರೀಯ ಒಪ್ಪಿಗೆಯಿಲ್ಲದೆ ವಿವಾಹ ಮಾಡಿಕೊಡಲು ಇಸ್ಲಾಮ್ ಅನುಮತಿ ನೀಡುವುದಿಲ್ಲ: ಅಥವಾ ಅಂತಹ ವಿವಾಹ ನಡೆದರೆ ಅದನ್ನು ಒಪ್ಪಿಕೊಳ್ಳದೇ ನಿರಾಕರಿಸುವ ಹಕ್ಕು ಆಕೆಗೆ ಇದೆ.

ಪ್ರವಾದಿವರ್ಯರು ಹೇಳುತ್ತಾರೆ: ‘ಕನ್ಯೆಯಲ್ಲದ ಸ್ತ್ರೀಗೆ ತನ್ನ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳಲು, ಪೋಷಕರಿಗಿಂತ ಹೆಚ್ಚಿನ ಹಕ್ಕು ಇದೆ. ಕನ್ಯೆಯನ್ನು ವಿವಾಹ ಮಾಡಿ ಕೊಡಲು ಅವಳ ಅನುಮತಿಯನ್ನು ಕೇಳಬೇಕು. ಅವಳು ಮೌನಿಯಾಗಿದ್ದರೆ ಅದನ್ನು ಒಪ್ಪಿಗೆಯೆಂದು ಪರಿಗಣಿಸಬೇಕು.’ (ಮುಸ್ಲಿಮ್, ತಿರ್ಮಿದಿ, ಅಬೂದಾವೂದ್, ನಸಾಈ)

ಒಮ್ಮೆ ಓರ್ವ ಹುಡುಗಿ ಪ್ರವಾದಿಯವರ ಬಳಿಗೆ ಬಂದು, ನನ್ನ ತಂದೆ ನನ್ನ ಒಪ್ಪಿಗೆಯಿಲ್ಲದ ಓರ್ವನೊಂದಿಗೆ ವಿವಾಹ ಮಾಡಲು ಒತ್ತಾಯಿಸುತ್ತಿದ್ದಾರೆಂದು ದೂರಿದಳು. ಆಗ ಆಕೆಯ ಇಷ್ಟದಂತೆ ಮಾಡಲು ಪ್ರವಾದಿಯವರು ಅನುಮತಿ ನೀಡಿದರು.

ಓರ್ವ ಯುವತಿ ಪ್ರವಾದಿ(ಸ)ರ ಬಳಿಗೆ ಬಂದು ಹೇಳಿದಳು: “”ನನ್ನ ತಂದೆಯು ತಮ್ಮ ಸಹೋದರ ಪುತ್ರನೊಂದಿಗೆ, ನನ್ನ ಮೂಲಕ ಆತನ ಕುಂದುಕೊರತೆಗಳ ಪರಿಹಾರಕ್ಕಾಗಿ ನನ್ನ ವಿವಾಹವನ್ನು ಮಾಡಿದ್ದಾರೆ. ಆಗ ಪ್ರವಾದಿವರ್ಯರು ವಿಷಯವನ್ನು ತೀರ್ಮಾನಿಸುವ ಅಧಿಕಾರವನ್ನು ಆಕೆಗೆ ನೀಡಿದರು. ಆಗ ಆ ಯುವತಿ ಹೇಳಿದಳು: ತಂದೆಯ ಕೃತ್ಯವನ್ನು ನಾನು ಒಪ್ಪಿಕೊಂಡಿದ್ದೇನೆ. ಆದರೆ ಈ ವಿಷಯದಲ್ಲಿ ತಂದೆಯಂದಿರಿಗೆ ಯಾವುದೇ ಅಧಿಕಾರವಿಲ್ಲವೆಂದು ಇತರ ಮಹಿಳೆಯರಿಗೆ ತಿಳಿಯಪಡಿಸುವುದೇ ನನ್ನ ಉದ್ದೇಶವಾಗಿತ್ತು.” ವಿವಾಹದ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವ ಹಕ್ಕು ಮತ್ತು ಸ್ವಾತಂತ್ರ್ಯ ಮಹಿಳೆಯರದ್ದೆಂದು ಇದರಿಂದ ಸ್ಪಷ್ಟವಾಗುತ್ತದೆ.

ಮಹಿಳೆಯ ಸಾಕ್ಷ್ಯ

ಸಾಕ್ಷಿಗೆ ಒಬ್ಬಪುರುಷನ ಬದಲು ಇಬ್ಬರು ಸ್ತ್ರೀಯರಿರಬೇಕೆಂಬುದು ಇಸ್ಲಾಮಿನ ನಿಯಮ, ಇದು ಸ್ತ್ರೀಯೊಂದಿಗಿನ ಅನ್ಯಾಯ ಹಾಗೂ ಪುರುಷ ಪ್ರಧಾನವಾದ ದೃಷ್ಟಿಕೋನವಲ್ಲವೇ?

ಓರ್ವ ಪುರುಷನ ಬದಲಿಗೆ ಇಬ್ಬರು ಸ್ತ್ರೀಯರು ಸಾಕ್ಷಿಗಳಾಗಬೇಕೆಂಬುದು ಇಸ್ಲಾಮಿನ ಸಾಮಾನ್ಯ ನಿಯಮವಲ್ಲ. ಇದು ಆರ್ಥಿಕ ವ್ಯವಹಾರಗಳಿಗೆ ಮಾತ್ರ ಅನ್ವಯವಾಗುತ್ತದೆ. ಮಹಿಳೆಯರು ಸಾಮಾನ್ಯವಾಗಿ ಆರ್ಥಿಕ ವ್ಯವಹಾರ ಹಾಗೂ ಕೊಡುಕೊಳ್ಳುವಿಕೆಯಂತಹ ಕೆಲಸಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳದಿರುವುದರಿಂದ, ಸಾಕ್ಷ್ಯದಲ್ಲಿ ಏನಾದರೂ ಗೊಂದಲ ಉಂಟಾಗದಿರಲು ಹಾಗೂ ಸೂಕ್ಷ್ಮತೆಯನ್ನು ಪಾಲಿಸಲು ನಿಶ್ಚಯಿಸಲಾದ ನಿಬಂಧನೆಯಾಗಿದೆ. ಸ್ತ್ರೀಯ ಮೇಲೆ ಸದಾಚಾರ ಉಲ್ಲಂಘನೆಯ ಆರೋಪ ಹೊರಿಸಲ್ಪಟ್ಟರೆ ಆಗ ಮಾಡಬೇಕಾದ ವಿಧಿನಿಯಮಗಳಂತೆ, ಸಾಕ್ಷ್ಯ ಹೇಳಲು ಮತ್ತು ಆಣೆ ಹಾಕಲು ಸ್ತ್ರೀ-ಪುರುಷರ ನಡುವೆ ವ್ಯತ್ಯಾಸವಿಲ್ಲವೆಂದು ಕುರ್ ಆನ್ ಸಂಶಯಾತೀತವಾಗಿ ಸ್ಪಷ್ಟಪಡಿಸಿದೆ. (24:6-9)

ಇತರ ಸಾಕ್ಷ್ಯಗಳ ಸ್ಥಿತಿಯೂ ಇದೇ ರೀತಿ ಇವೆ. ವಿವಾಹ ವಿಚ್ಛೇದನದ ಕುರಿತು ಕುರ್ ಆನ್ ಹೇಳುತ್ತದೆ: ‘ಅವರು ತಮ್ಮ(ಇದ್ದತ್‌ನ) ಕಾಲಾವಧಿಯ ಕೊನೆಯನ್ನು ತಲುಪಿದಾಗ ಅವರನ್ನು ಉತ್ತಮ ರೀತಿಯಿಂದ ನಿಮ್ಮ ವಿವಾಹದಲ್ಲಿ ಉಳಿಸಿಕೊಳ್ಳಿರಿ. ಇಲ್ಲವೇ ಉತ್ತಮ ರೀತಿಯಿಂದ ಅವರಿಂದ ಬೇರ್ಪಡಿರಿ. ನಿಮ್ಮ ಪೈಕಿ ನ್ಯಾಯಶೀಲರಾದ ಇಬ್ಬರನ್ನು ಸಾಕ್ಷಿಗಳಾಗಿ ಮಾಡಿಕೊಳ್ಳಿರಿ. ಸಾಕ್ಷ್ಯವನ್ನು ಸರಿಯಾದ ರೀತಿಯಲ್ಲಿ ಅಲ್ಲಾಹನಿಗಾಗಿಯೇ ನೀಡಿರಿ.’ (65:2)

ವಸಿಯ್ಯತ್‌ ಕುರಿತು ಪವಿತ್ರ ಕುರ್‌ ಆನ್ ಹೇಳುತ್ತದೆ. ‘ಓ ಸತ್ಯವಿಶ್ವಾಸಿಗಳೇ, ನಿಮಗಾರಿಗಾದರೂ ಮರಣದ ಕಾಲ ಬಂದಾಗ ಮತ್ತು ಅವನು ‘ಉಯಿಲು’ ಮಾಡುತ್ತಿರುವಾಗ ನಿಮ್ಮ ಕೂಟದಿಂದ ಇಬ್ಬರು ನ್ಯಾಯಶೀಲರನ್ನು ಸಾಕ್ಷಿಗಳನ್ನಾಗಿರಿಸಿಕೊಳ್ಳಬೇಕು. ಅಥವಾ ನೀವು ಪ್ರಯಾಣದಲ್ಲಿದ್ದಾಗ ಮರಣದ ಯಾತನೆ ಉಂಟಾದರೆ ಪರಧರ್ಮೀಯರರಿಂದಲಾದರೂ ಇಬ್ಬರನ್ನು ಸಾಕ್ಷಿಗಳಾಗಿರಿಸಿಕೊಳ್ಳಿರಿ.” (5:106)

ಆರ್ತವ, ಹೆರಿಗೆ ಮೊದಲಾದವುಗಳಲ್ಲಿ ಪುರುಷರಿಗೆ ಸಾಕ್ಷಿಗಳಾಗಲು ಸಾಧ್ಯವಿಲ್ಲ ದಿರುವುದರಿಂದ ಸ್ತ್ರೀಯರ ಸಾಕ್ಷ್ಯವೇ ಸ್ವೀಕಾರಾರ್ಹವೆಂಬುದರಲ್ಲಿ ಇಸ್ಲಾಮೀ ವಿದ್ವಾಂಸರಿಗೆ ಒಮ್ಮತಾಭಿಪ್ರಾಯವಿದೆ.

ಇಸ್ಲಾಮಿನ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಆಡಳಿತಾತ್ಮಕವಾದ ಎಲ್ಲಾ ನಿಯಮಗಳ ಮೂಲ ಆಧಾರ ಪ್ರಮಾಣಗಳಲ್ಲಿ ಪ್ರವಾದಿ ಚರ್ಯೆಯೂ ಒಂದು. ಪ್ರವಾದಿ ಚರ್ಯೆಯ ವರದಿಗಳ ಸ್ವೀಕಾರಾರ್ಹತೆಯಲ್ಲಿ ಪುರುಷರಂತೆಯೇ ಸ್ತ್ರೀಯರದ್ದು ಪ್ರಾಮಾಣಿಕವೂ ಪ್ರಬಲವೂ ಆಗಿದೆ. ಇದರಲ್ಲಿ ಲಿಂಗ ತಾರತಮ್ಯವಿಲ್ಲ, ಆದ್ದರಿಂದ ಪ್ರಸಿದ್ಧ ಹದೀಸ್ ಗ್ರಂಥಗಳಲ್ಲಿ ಪುರುಷರಂತೆಯೇ ಮಹಿಳೆಯರು ವರದಿ ಮಾಡಿದ ಹದೀಸ್ ವಚನಗಳನ್ನು ಧಾರಾಳವಾಗಿ ಕಾಣಬಹುದು. ಎಲ್ಲಾ ಸಾಕ್ಷಿಗಳ ಸಾಕ್ಷ್ಯವಾದ ಆಧಾರ ಪ್ರಮಾಣಗಳ ವಿಷಯದಲ್ಲಿ ಸ್ತ್ರೀ ಪುರುಷರಿಗೆ ಸಮಾನ ಸ್ಥಾನಮಾನ ನೀಡಿದ ಇಸ್ಲಾಮ್ ವ್ಯವಹಾರಗಳ ವಿಷಯದಲ್ಲಿ ವಿಭಿನ್ನ ನಿಲುವು ಸ್ವೀಕರಿಸಿರುವುದು ಅಸಮಾನತೆಯೋ ಅನ್ಯಾಯವೋ ಖಂಡಿತ ಅಲ್ಲವೆಂದೂ, ಗೊಂದಲ ಉಂಟಾಗದಿರಲು ಸೂಕ್ಷ್ಮತೆ ಪಾಲಿಸಲು ಮಾತ್ರವೆಂದೂ ಸ್ಪಷ್ಟವಾಗುತ್ತದೆ.

ಇಮಾಮ್ ಅಬೂಹನೀಫ, ತಬರಿಯವರಂತಹ ವಿದ್ವಾಂಸರು ಮಹಿಳೆಯರಿಗೆ ನ್ಯಾಯಾಧೀಶೆಯ ಸ್ಥಾನವನ್ನು ಅಲಂಕರಿಸಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ಕಾನೂನು ಅಥವಾ ನ್ಯಾಯ ವ್ಯವಸ್ಥೆಯಲ್ಲಿ ಅಸಮಾನತೆಯಿದ್ದರೆ ನ್ಯಾಯ ತೀರ್ಮಾನ ಮಾಡುವಂತಹ ಉನ್ನತ ಪದವಿಯಾದ ನ್ಯಾಯಾಧೀಶೆಯ ಸ್ಥಾನವನ್ನು ಮಹಿಳೆಗೆ ನೀಡಬಹುದೆಂದು ಪ್ರಾಮಾಣಿಕ ವಿದ್ವಾಂಸರು ಖಂಡಿತ ಹೇಳುತ್ತಿರಲಿಲ್ಲ.

ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …