Home / ಪ್ರಶ್ನೋತ್ತರ / ಪರ್ದಾವನ್ನು ಕಡ್ಡಾಯಗೊಳಿಸುವ ಮೂಲಕ ಇಸ್ಲಾಮ್ ಮಹಿಳೆಯರನ್ನು ಶೋಷಣೆಗೊಳಪಡಿಸಿದೆಯಲ್ಲವೇ? ಮುಸ್ಲಿಮ್ ಮಹಿಳೆಯರ ಹಿಂದುಳಿಯುವಿಕೆಗೆ ಪರ್ದಾವೂ ಕಾರಣವಲ್ಲವೇ?

ಪರ್ದಾವನ್ನು ಕಡ್ಡಾಯಗೊಳಿಸುವ ಮೂಲಕ ಇಸ್ಲಾಮ್ ಮಹಿಳೆಯರನ್ನು ಶೋಷಣೆಗೊಳಪಡಿಸಿದೆಯಲ್ಲವೇ? ಮುಸ್ಲಿಮ್ ಮಹಿಳೆಯರ ಹಿಂದುಳಿಯುವಿಕೆಗೆ ಪರ್ದಾವೂ ಕಾರಣವಲ್ಲವೇ?

ಮಹಿಳೆಯು ಮುಖ ಮತ್ತು ಮುಂಗೈಯ ಹೊರತುಪಡಿಸಿ ದೇಹದ ಉಳಿದ ಭಾಗಗಳನ್ನು ಮರೆಸಬೇಕೆಂದು ಇಸ್ಲಾಮ್ ಹೇಳುತ್ತದೆ. ಇದು ಮಹಿಳೆಯರ ಏಳಿಗೆಗೆ ಅಡ್ಡಿಯಲ್ಲ. ಸಹಾಯಕವಾಗಿದೆ. ಮಹಿಳೆಗೆ ಪರ್ದಾ ಹಿಂಸೆಯಲ್ಲ, ಆಕೆಯ ರಕ್ಷಾ ಕವಚವಾಗಿದೆ.

ಇಂದು ವಿಶ್ವದ ಹಲವು ಭಾಗಗಳಲ್ಲಿ ಪರ್ದಾಧಾರಿಣಿ ಮಹಿಳೆಯರು ವೈಜ್ಞಾನಿಕ, ವೈಮಾನಿಕ, ಸಾಹಿತ್ಯ, ಮಾಧ್ಯಮ ರಂಗಗಳು ಹಾಗೂ ಪಾರ್ಲಿಮೆಂಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇರಾನಿನ ಐದು ಉಪಾಧ್ಯಕ್ಷರುಗಳಲ್ಲಿ ಓರ್ವರಾದ ಮ‍ಅಸೂಮಾ ಇಬ್ತಿಕಾರ್ ಪರ್ದಾಧಾರಣಿಯಾಗಿದ್ದಾರೆ. ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ನಡೆಸಿ, ಮ‍ಅಸೂಮಾ ತೆಹ್ರಾನ್ ಯೂನಿವರ್ಸಿಟಿಯ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಪ್ರಸಿದ್ಧ ಪತ್ರಕರ್ತೆ ಆಗಿದ್ದಾರೆ. ಸಾಮಾಜಿಕ ಕಾರ್ಯಕರ್ತೆಯಾಗಿರುವ ಇವರು ಹಲವು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.

ಇರಾನ್‌ನ ಪ್ರಸಿದ್ಧ ಮಹಿಳಾ ಪತ್ರಿಕೆಯಾದ ‘ಮಹ್ ಜೂಬಾ’ದ ಸಂಪಾದಕಿಯೂ ಟೆಹ್ರಾನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಟುರಾನ್ ಜಂಶೀದ್‌ ಯಾನ್, ನ್ಯಾಶನಲ್ ಒಲಿಂಪಿಕ್ಸ್ ಉಪಾಧ್ಯಕ್ಷೆಯೂ, ಪಾರ್ಲಿಮೆಂಟಿನ ಉಪಾಧ್ಯಕ್ಷೆಯೂ ಆಗಿದ್ದ ಫಸೀಹ್ ಹಾಶ್ಮಿ, ಮಹಿಳಾ ಕಲ್ಯಾಣ ಇಲಾಖೆಯ ಸಲಹೆಗಾರ್ತಿಯಾಗಿದ್ದ ಶಹ್ಲಾ ಹಬೀಬಿ, ಮಲೇಶಿಯಾ ರಾಜಕೀಯದಲ್ಲಿ ಬೆಳೆದು ನಿಂತಿರುವ ವಾನ್ ಅಝೀಝಾರಂತಹ ಪ್ರಖ್ಯಾತ ಮಹಿಳೆಯರೆಲ್ಲಾ ಪರ್ದಾಧಾರಿಣಿಗಳಾಗಿದ್ದಾರೆ. ಆಧುನಿಕ ಲೋಕದಲ್ಲಿ ರಣಾಂಗಣದಲ್ಲಿ ಧೈರ್ಯದಿಂದ ಹೋರಾಡಿದ ವನಿತೆಯರು ಇರಾನ್ ಹಾಗೂ ಅಫಘಾನಿಸ್ತಾನದ ಮಹಿಳೆಯರು ಎಂಬ ವಾಸ್ತವ ಮರೆಯುವಂತಿಲ್ಲ, ವಾಲಿಬಾಲ್, ಬಾಸ್ಕೆಟ್ ಬಾಲ್, ಶೂಟಿಂಗ್, ಸೈಕ್ಲಿಂಗ್, ಟೆನಿಸ್, ಜಿಮ್ನಾಸ್ಟಿಕ್, ಕುದುರೆ ಸ್ಪರ್ಧೆ, ಜೂಡೋ, ಕರಾಟೆ, ಚೆಸ್ ಮೊದಲಾದ ಕ್ರೀಡೆಗಳಿಂದ, ಮೇಲುಗೈ ಸಾಧಿಸುತ್ತಿರುವ ಇರಾನ್‌ ನಲ್ಲಿ ಮಹಿಳೆಯರ ಉನ್ನತಿಯಲ್ಲಿ ಪರ್ದಾ ಕ್ರೀಡಾರಂಗದಲ್ಲಿ ಯಾವುದೇ ರೀತಿಯಲ್ಲಿ ಅಡ್ಡಿಯಾಗಿಲ್ಲ, ಪರ್ದಾಕ್ಕೆ ಸಮಾನವಾದ ವಸ್ತ್ರಧಾರಣೆಯು ಮದ‌ರ್ ಥೆರೆಸಾರ ಸಮಾಜ ಸೇವಾ ಚಟುವಟಿಕೆಗಳಿಗೆ ಅಡ್ಡಿಯೆನಿಸಲಿಲ್ಲ, ವಿವಿಧ ರಂಗಗಳಲ್ಲಿ ಸೇವಾ ನಿರತರಾಗಿರುವ ಕನ್ಯಾಸ್ತ್ರೀಯರ ವಸ್ತ್ರಧಾರಣೆಯು ಪರ್ದಾಕ್ಕೆ ಸಮಾನವಾಗಿದೆಯಲ್ಲವೇ?

ಶರೀರ ಭಾಗಗಳನ್ನು ಮರೆಸುವುದು ಅಂತರಿಕ್ಷ ಯಾನಗಳಿಗೋ, ಸಂಶೋಧನೆಗಳಿಗೋ ತೊಂದರೆ ಉಂಟು ಮಾಡುವುದಿಲ್ಲವೆಂದು ಬಾಹ್ಯಾಕಾಶಯಾತ್ರಿಕರ ಅನುಭವದಿಂದ ಸ್ಪಷ್ಟವಾಗುತ್ತದೆ, ಪ್ಯಾಂಟ್, ಶರ್ಟು, ಟೈ, ಓವರ್‌ ಕೋಟ್, ಸಾಕ್ಸ್, ಶೂ, ಕ್ಯಾಪ್, ಧರಿಸುವ ಪಾಶ್ಚಾತ್ಯರಾದ ಪುರುಷರು ಇಸ್ಲಾಮ್ ಮಹಿಳೆಯರಿಗೆ ಸೂಚಿಸಿದ ಎಲ್ಲಾ ಶರೀರ ಭಾಗವನ್ನು ಮರೆಸುತ್ತಾರೆ, ಆದರೆ ಸ್ತ್ರೀಯರು ಇದಕ್ಕೆ ವಿರುದ್ಧವಾಗಿದ್ದಾರೆ.

ಸ್ತ್ರೀಯೆಂದರೆ ಅವಳ ಸೌಂದರ್ಯ, ದೇಹ, ರೂಪಲಾವಣ್ಯವಾಗಿದೆ. ಅವಳ ವ್ಯಕ್ತಿತ್ವವು ಅದರ ಮಾದಕತೆಗೆ ಅನುಸಾರವಾಗಿದೆ ಎಂಬ ಭಾವನೆಯನ್ನು ಮೂಡಿಸುವಲ್ಲಿ ಬಂಡವಾಳಶಾಹಿ ಶಕ್ತಿಗಳು ಹಾಗೂ ಅದರ ಕೂಸಾಗಿರುವ ಗ್ರಾಹಕ ಸಂಸ್ಕೃತಿಯು ಯಶಸ್ವಿಯಾಗಿದೆ. ಪರ್ದಾ ಪ್ರಗತಿಗೆ, ನಾಗರಿಕತೆಗೆ ಅಡ್ಡಿಪಡಿಸುತ್ತದೆಂಬ ಭಾವನೆ ಪ್ರಬಲವಾಗಲು ಇದುವೇ ಕಾರಣ. ತಮ್ಮ ದೇಹ ಸೌಂದರ್ಯವನ್ನು ಪ್ರದರ್ಶಿಸುತ್ತಾ ಪೇಟೆ, ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವುದೇ ಪ್ರಗತಿಯೆಂದು ಪ್ರಚಾರ ನಡೆಸುತ್ತಿರುವ ಮಹಿಳೆಯರು, ಪುರುಷರು ತಮ್ಮ ದೇಹ ಸೌಂದರ್ಯವನ್ನು ಆಸ್ವಾದಿಸುವ ಮನೋವಿಕೃತಿಯವರೆಂದು ಭಾವಿಸುತ್ತಾರೆ.

ಸಮಾಜದ ಮಹಿಳೆಯರೆಲ್ಲರ ಸೌಂದರ್ಯವನ್ನು ಆಸ್ವದಿಸಲು, ಕಾಮಾಂಧ ಕಣ್ಣುಗಳೊಂದಿಗೆ ಕಾಯುತ್ತಿರುವವರ ಮುಂದೆ ತಮ್ಮ ದೇಹವನ್ನು ರಕ್ಷಿಸಿಕೊಳ್ಳವುದು ಘನತೆಯಾಗಿದೆ. ಇದು ಮಹಿಳೆಯರ ರಕ್ಷಣೆಗೂ ಸಹಾಯಕ, ಪರ್ದಾದ ಮೂಲಕ ಇಸ್ಲಾಮ್ ಮಹಿಳೆಯಿಂದ ಇದನ್ನೇ ಬಯಸುತ್ತದೆ. ಅದರೊಂದಿಗೆ ಪರ್ದಾ ಪ್ರಗತಿಗೆ ಅಡ್ಡಿಯಲ್ಲ, ಇರಾನ್ ಸಂದರ್ಶನದ ಬಳಿಕ ಎಂ.ಪಿ. ವೀರೇಂದ್ರ ಕುಮಾರ್ ಬರೆದ ಮಾತುಗಳು ಗಮನಾರ್ಹವಾಗಿದೆ: ಇರಾನ್‌ ನಲ್ಲಿ ಮಹಿಳೆಯರು ಪರ್ದಾ ಧರಿಸುತ್ತಾರೆ: ಮುಖ ಮರೆಸುವುದಿಲ್ಲ. ತಲೆಯನ್ನು ಮರೆಸುತ್ತಾರೆ. ಯಾವುದೇ ಪಿಕ್‌ನಿಕ್ ಸ್ಥಳಕ್ಕೆ ಹೋದಾಗ ಅಲ್ಲಿ ನೂರಾರು ಪರ್ಧಾಧಾರಿ ಮಹಿಳೆಯರು ಕಾಣಿಸುತ್ತಾರೆ. ಇರಾನ್‌ನ ವಾರ್ತಾ ಏಜೆನ್ಸಿಯಾದ ‘ಇರ್ನಾ’ದ ಕೇಂದ್ರ ಕಮಿಟಿ ಆಫೀಸ್ ಗೆ ತಲುಪಿದಾಗ, ಅಲ್ಲಿನ ಉದ್ಯೋಗಿಗಳಲ್ಲಿ ಬಹುಸಂಖ್ಯಾತರು ಮಹಿಳೆಯರೇ ಆಗಿದ್ದಾರೆ. ಮಹಿಳೆಯರು ಅಲ್ಲಿ ವಾಹನ ಚಲಾಯಿಸುತ್ತಾರೆ. ಯಾವುದೇ ಅಡ್ಡಿ ಅಂತಕವಿಲ್ಲ. ಆದರೆ ನ್ಯೂಯಾರ್ಕ್‌ನಲ್ಲಿ ಕಂಡು ಬರುವಂತೆ ಮಹಿಳೆಯರನ್ನು ಸೆಕ್ಸ್ ಸಿಂಬಲ್‌ ಗಳಾಗಿ ಬದಲಾಯಿಸಲು ಇರಾನಿಯರು ಒಪ್ಪಿಗೆ ನೀಡುವುದಿಲ್ಲ’ (ಬೋಧನಂ ವಾರಪತ್ರಿಕೆ 1993 ನವೆಂಬರ 6)

ಶ್ರೀಮತಿ ಕಲ್ಪನಾ ಶರ್ಮರ ಪ್ರಶ್ನೆಯು ಪ್ರಸಕ್ತವಾದುದು ‘ಉನ್ನತ ಶಿಕ್ಷಣ ಪಡೆದು ಸಾರ್ವಜನಿಕ ರಂಗಕ್ಕಿಳಿದು ಉದ್ಯೋಗ ನಿರ್ವಹಿಸಲು ದಾಂಪತ್ಯ ಸಂಬಂಧ ಹದಗೆಟ್ಟಾಗ ವಿಚ್ಛೇದನ ಹೊಂದಲು ನ್ಯಾಯಾಲಯಕ್ಕೆ ಹೋಗುವ ಅನುಮತಿ ಇರುವ ಇರಾನ್‌ನ ಮಹಿಳೆಯರಿಗಿಂತ ನಮಗೆ ಯಾವ ಮೇಲ್ಮೆ ಇದೆ. ಅವರಿಗೆ ವಿರುದ್ಧವಾಗಿ ತೀರ್ಪು ನೀಡಲು ನಮಗೆ ಸಾಧ್ಯವಿದೆಯೇ?’ (Kalpana Sharma Behind The Veil- The Hindu 20-7-97)

ಮಹಿಳೆಯರಿಗೆ ಪರ್ದಾವನ್ನು ಕಡ್ಡಾಯಗೊಳಿಸಿ, ಪುರುಷರಿಗೆ ಅದರಿಂದ ವಿನಾಯತಿ ನೀಡಿರುವುದು ದೊಡ್ಡ ಅನ್ಯಾಯವಲ್ಲವೇ? ಅಸಮಾನತೆಯಲ್ಲವೇ?

ಈ ಅಸಮಾನತೆಯು ಪ್ರಕೃತಿದತ್ತವಾಗಿದೆ. ಸ್ತ್ರೀ-ಪುರುಷರ ದೇಹ ರಚನೆ ಒಂದೇ ರೀತಿ ಇಲ್ಲವಲ್ಲ? ಯಾವುದೇ ಶಕ್ತಿವಂತನಾದ ಪುರುಷನಿಗೆ ಮಹಿಳೆಯ ಅನುಮತಿಯಿಲ್ಲದೆ ಅತ್ಯಾಚಾರವೆಸಗಲು ಸಾಧ್ಯವಿದೆ. ಆದರೆ ಮಹಿಳೆ ಎಷ್ಟೇ ಶಕ್ತಿವಂತಳಾಗಿದ್ದರೂ, ಪುರುಷನ ಅನುಮತಿಯಿಲ್ಲದೆ ಅದು ಸಾಧ್ಯವಿಲ್ಲ. ಈ ಅಂತರದ ಅನಿವಾರ್ಯ ಫಲವೇ ಈ ವಸ್ತ್ರಧಾರಣೆಯಲ್ಲಿರುವ ವ್ಯತ್ಯಾಸ, ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ಮಹಿಳಾ ಸಂರಕ್ಷಣೆಗಾಗಿ ವಿಶೇಷ ಕಾನೂನು ರಚಿಸಲಾಗಿದೆ. ಅನಿವಾರ್ಯತೆಯೂ ಇದರಿಂದಾಗಿಯೇ ಬಂದಿದೆ. ಸ್ತ್ರೀ ಹಿಂಸೆಯ ವಿರುದ್ಧ ಕಠಿಣ ಶಿಕ್ಷೆಗಳನ್ನು ನಿಶ್ಚಯಿಸಿದ ದೇಶಗಳಲ್ಲೂ ಪುರುಷ ಪೀಡನೆಯ ವಿರುದ್ಧ ಈ ರೀತಿಯ ಕಾನೂನುಗಳಿಲ್ಲವಲ್ಲಾ. ಶಾರೀರಿಕ ಭಿನ್ನತೆಯು ಪುರುಷನಿಗಿಂತ ಮಹಿಳೆಯರಿಗೆ ಹೆಚ್ಚಿನ ಸುರಕ್ಷತೆಯನ್ನು ಬಯಸುತ್ತದೆಂದು ಇದು ಸ್ಪಷ್ಟಪಡಿಸುತ್ತದೆ. ಮಹಿಳೆ ತನ್ನ ದೇಹ ಸೌಂದರ್ಯವನ್ನು ಅನ್ಯ ಪುರುಷರ ಮುಂದೆ ಪ್ರಕಟಿಸಬಾರದೆಂದು ಇಸ್ಲಾಮ್ ಇದೇ ಕಾರಣಕ್ಕಾಗಿ ಹೇಳಿದೆ. ಆದ್ದರಿಂದ ಪರ್ದಾ ಮಹಿಳೆಯರಿಗೆ ಸಂರಕ್ಷಣೆಯೂ, ಸೌಕರ್ಯವೂ ಆಗಿದೆ. ಅದು ಹಿಂಸೆಯೋ ಶಾಪವೋ ಅಲ್ಲ.

 

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *