ಇಸ್ಲಾಮಿನ ಪ್ರವಾದಿಯೆಂದು ಕರೆಯಲಾಗುವ ಮುಹಮ್ಮದ್ರು ಮಕ್ಕಾದ ಕುರೈಷ್ ಗೋತ್ರದಲ್ಲಿ ಜನಿಸಿದರು. ವ್ಯಾಪಾರವು ಅವರ ಗೋತ್ರದ ಕಸುಬಾಗಿತ್ತು. ಇಸ್ಲಾಮಿನ ಪ್ರವಾದಿಯವರು ಸರಳ ಮತ್ತು ದಾರಿದ್ರ್ಯದ ಜೀವನ ಸಾಗಿಸಿದರು. ದೀಪದೆಣ್ಣೆಯಿಲ್ಲದ ಮಣ್ಣಿನ ಹೆಂಟೆಯ ಗೋಡೆ ಮತ್ತು ಖರ್ಜೂರದ ಸೋಗೆ ಹಾಸಿದ ಅವರ ನಿವಾಸವು ಕೆಲವೊಮ್ಮೆ ಕತ್ತಲೆಯಲ್ಲಿರುತ್ತಿತ್ತು. ಹಲವೊಮ್ಮೆ ಮನೆಯಲ್ಲಿ ರೊಟ್ಟಿ ತಯಾರಿಸುವ ಧಾನ್ಯದ ಹುಡಿಯಿರುತ್ತಿರಲಿಲ್ಲ.
ಮುಹಮ್ಮದ್ರ ತಂದೆಯ ಹೆಸರು ಅಬ್ದುಲ್ಲ. ಒಂದು ಪ್ರಯಾಣದಲ್ಲಿ ಅವರು ಮರಣ ಹೊಂದಿದ್ದರು. ಮುಹಮ್ಮದ್ರು ಹುಟ್ಟಿ ಆರು ವರ್ಷ ಕಳೆದಾಗ ತಾಯಿಯೂ ನಿಧನರಾದರು. ಅನಂತರ ಚಿಕ್ಕಪ್ಪ ಅಬೂತಾಲಿಬ್ರ ಪೋಷಣೆಯಲ್ಲಿ ಬೆಳೆದರು.
ಮುಹಮ್ಮದ್ರು ನಿರಕ್ಷರಿಯಾಗಿದ್ದರೂ ಚಿಕ್ಕಂದಿನಲ್ಲಿಯೇ ಆ ಮನಸ್ಸು ಏಕಾಗ್ರವಾಗಿತ್ತು. ಮುಹಮ್ಮದ್ರು ಬಹಳ ಗಂಭೀರ ಸ್ವಭಾವದ ಬಾಲಕರಾಗಿದ್ದರು. ಅನಾವಶ್ಯಕ ಆಟ ವಿನೋದಗಳಲ್ಲಿ ಭಾಗಿಯಾಗುತ್ತಿರಲಿಲ್ಲ. ಬೆಳೆದು ದೊಡ್ಡವರಾದಂತೆ ಮುಹಮ್ಮದ್ರ ಸತ್ಯ ಸಂಧತೆ ಮತ್ತು ಸಚ್ಚಾರಿತ್ರ್ಯವು ನಾಡಿನಾದ್ಯಂತ ಪ್ರಸಿದ್ಧವಾಯಿತು. ವಾಗ್ದಾನಗಳನ್ನು ಅವರು ಉಲ್ಲಂಘಿಸುತ್ತಿರಲಿಲ್ಲ. ಬಹಳ ಪ್ರಾಮಾಣಿಕರಾಗಿ ‘ಅಲ್ ಅವಿೂನ್’ ಎಂಬ ಬಿರುದಿಗೂ ಭಾಜನರಾದರು.
ಅದೊಂದು ದಿನ ಮುಹಮ್ಮದ್ ತಮ್ಮ ಮಾವನ ಜತೆ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋದರು. ದಾರಿ ನಡುವೆ ಬುಹೈರ ಎಂಬ ಕೈಸ್ತ ಪಾದ್ರಿಗಳ ಭೇಟಿಯಾಯಿತು. ಪಾದ್ರಿಯು ಈ ಬಾಲಕನಲ್ಲಿ ಭವಿಷ್ಯದ ಪ್ರವಾದಿಯನ್ನು ಥಟ್ಟನೆ ಗುರುತಿಸಿದರು.
ಮಕ್ಕಾದಿಂದ ಮೂರು ಮೈಲು ದೂರದ ಬೆಟ್ಟ ಪ್ರದೇಶದಲ್ಲಿರುವ ಒಂದು ಗುಹೆಗೆ ಮುಹಮ್ಮದ್ರು ಆಗಾಗ್ಗೆ ಹೋಗುತ್ತಿದ್ದರು. ಅಲ್ಲಿ ಹೋಗಿ ತಿಂಗಳುಗಟ್ಟಲೆ ಪ್ರಾರ್ಥನೆ ಮತ್ತು ಧ್ಯಾನಗಳಲ್ಲಿ ನಿರತರಾಗುತ್ತಿದ್ದರು. ಒಂದು ದಿನ ಗೇಬ್ರಿಯೆಲ್ ಪ್ರತ್ಯಕ್ಷರಾಗಿ ದೇವ ವಚನವನ್ನು ಘೋಷಿಸುವಂತೆ ಆದೇಶಿಸಿತು. ಅದು ದೇವ ಸಂದೇಶವಾಗಿತ್ತು. ಈ ದಿವ್ಯ ವಚನಗಳ ಸಮಾಹಾರವೇ ಕುರ್ಆನ್. ಪವಿತ್ರ ಕುರ್ಆನ್ ಮುಹಮ್ಮದ್ರ ಕೃತಿಯಲ್ಲ. ದೇವನಿಂದ ನೇರವಾಗಿ ಅವತೀರ್ಣವಾದ ದಿವ್ಯವಾಣಿಯಾಗಿದೆ.
ಗುಹೆಯಿಂದ ಮರಳುವಾಗ ಮುಹಮ್ಮದ್ರಲ್ಲಿ ದಿವ್ಯ ತೇಜಸ್ಸು ತುಂಬಿತ್ತು. ತನಗಾದ ಅನುಭವಗಳನ್ನು ವಿವರಿಸಿದಾಗ ಪತ್ನಿ ಖದೀಜ ಹೀಗೆ ಹೇಳಿದರು: ‘ನೀವು ಸತ್ಯ ಸಂಧರಾಗಿರುವಿರಿ. ಒಮ್ಮೆಯೂ ಸುಳ್ಳು ಹೇಳಿಲ್ಲ. ಆದ್ದರಿಂದ ಆ ಕರೆಯನ್ನು ಅನುಗಮಿಸಿರಿ.’ ಅವರು ಪ್ರವಾದಿಯವರಲ್ಲಿ ಪ್ರಥಮವಾಗಿ ವಿಶ್ವಾಸವಿರಿಸಿದ ಮೊದಲ ಅನುಯಾಯಿಯಾಗಿದ್ದರು.
ಸಾರ್ವಜನಿಕ ಪ್ರಭಾಷಣಗಳ ಮೂಲಕ ಮುಹಮ್ಮದ್ರು ಅನೇಕ ಮಂದಿಯನ್ನು ತನ್ನ ಸಂದೇಶದೆಡೆಗೆ ಆಹ್ವಾನಿಸಿದರು. ದೇವನ ಏಕತೆಯನ್ನು ಸಾರಿದ ಆ ಪ್ರಭಾಷಣಗಳು ಕೆಡುಕಿನ ವಿರುದ್ಧ ಅಪ್ಪಳಿಸಿತು. ಕೆಲವರು ಗೇಲಿ ಮಾಡಿ ಹಿಂದೆ ಸರಿದರೂ, ಇತರ ಕೆಲವರಿಗೆ ಆ ಮಾತುಗಳ ಪ್ರಭಾವದಿಂದ ಮನಪರಿವರ್ತನೆಯಾಯಿತು. ಒಮ್ಮೆ ಕಅಬಾಲಯಕ್ಕೆ ಹೋಗಿ ಅಲ್ಲಾಹನ ವಿನಾ ದೇವನಿಲ್ಲವೆಂದು ಸಾರಿದರು. ವಿಗ್ರಹಾರಾಧಕರಿಗೆ ಇದು ಅವಹೇಳನವೆನಿಸಿತು. ಅವರು ಮುಹಮ್ಮದ್ರ ಮೇಲೆ ಮುಗಿಬಿದ್ದರು. ಆದರೆ ಅನುಯಾಯಿಗಳು ಅವರ ರಕ್ಷಣೆಗೆ ಬಂದರು. ಅನಂತರ ವಿರೋಧಿಗಳು ಅವರನ್ನು ಆಗಾಗ್ಗೆ ಜನರ ಮಧ್ಯೆ ತೆಗಳಿ ಹಿಂಸಿಸಿ ಅಪಮಾನಿಸುತ್ತಿದ್ದರು.
ಪ್ರವಾದಿಯವರು ಬಹಿರಂಗ ಸಂವಾದ ಅಥವಾ ಚರ್ಚೆಗಳನ್ನು ನಡೆಸಿರಲಿಲ್ಲ. ಯಾರಿಗೂ ಸವಾಲೊಡ್ಡಲಿಲ್ಲ. ತನ್ನ ಘನ ವ್ಯಕ್ತಿತ್ವ, ಅತ್ಯಾಕರ್ಷಕವಾದ ಗುಣ ಮಹಾತ್ಮೆ, ಮತ್ತು ದಿವ್ಯ ಮೌಲ್ಯಗಳ ಪ್ರಭಾವದಿಂದ ಗದ್ದಲವಿಲ್ಲದೆ ಜನರ ಪರಿವರ್ತನೆಗೆ ರಂಗ ಸಜ್ಜುಗೊಳಿಸಿದರು. ವಿರೋಧಿಗಳ ಹಿಂಸೆಗಳನ್ನು ಅವರು ತಾಳ್ಮೆಯಿಂದ ಎದುರಿಸಿದರು. ಅವರ ಗುಣ ವೈಶಿಷ್ಠ್ಯ ಮತ್ತು ಕುರ್ಆನ್ ವಚನಗಳ ಪ್ರಭಾವವೇ ಜನಮನಗಳನ್ನು ಸೂರೆ ಮಾಡಿತ್ತು. ಕುರೈಶರು ತನ್ನ ಕೊಲೆಯ ಸಂಚು ನಡೆಸಿರುವರೆಂದು ತಿಳಿದ ಪ್ರವಾದಿಯವರು ಮಕ್ಕಾದಿಂದ ಮದೀನಕ್ಕೆ ಹೋದರು. ಹಿಜ್ರತ್ ಎಂಬ ಈ ವಲಸೆಯ ದಿನದಿಂದಲೇ ಮುಸ್ಲಿಮ್ ಕ್ಯಾಲೆಂಡರ್ ನ ಆರಂಭವಾಗಿದೆ.
ಮದೀನದ ಜನರು ಕ್ಷಿಪ್ರವಾಗಿ ಮುಹಮ್ಮದ್ರ ಸಂದೇಶವನ್ನು ಸ್ವೀಕರಿಸಿದರು. ಆ ಸಂದೇಶ ಅಷ್ಟೊಂದು ಸ್ಪಷ್ಟ, ಸರಳ ಮತ್ತು ಪಾರದರ್ಶಕವಾಗಿತ್ತು. ಅನುಯಾಯಿಗಳ ಜತೆಯಲ್ಲಿ ಅವರು ಮಕ್ಕಾಕ್ಕೆ ಮರಳಿ ಬಂದು ಅಲ್ಲಿ ತನ್ನ ಸಂಬಂಧಿಕರ ಮತ್ತು ಊರಿನವರ ಮನ ಪರಿವರ್ತನೆಯಲ್ಲಿ ಯಶಸ್ವಿಯಾದರು. ಅನಂತರ ತನ್ನ ಹೊಸ ವಿಶ್ವಾಸದೆಡೆಗೆ ಇಡೀ ಅರೇಬಿಯನ್ ಉಪ ದ್ವೀಪವನ್ನು ಪರಿವರ್ತಿಸಲಿಕ್ಕಾಗಿ ಅರೇಬಿಯದ ಇತರ ಕಡೆಗಳಿಗೆ ಸಂದೇಶ ಪ್ರಚಾರಕ ತಂಡಗಳನ್ನು ನೇಮಿಸಿದರು.
ಮುಹಮ್ಮದ್ರ ಶಿಕ್ಷಣಗಳು ಅಸಂಖ್ಯಾತ ಅನುಯಾಯಿಗಳನ್ನು ಸಂಪಾದಿಸಿತು. ಸರಳತೆ ಮತ್ತು ಪ್ರಾಮಾಣಿಕತೆ ಮೇಳೈಸಿದ, ಒಮ್ಮೆಯೂ ಓರ್ವ ಜಗದ್ಗುರುವಿನಂತೆ ನಟಿಸದ ಅವರ ಸ್ವಭಾವವೇ ಅದಕ್ಕೆ ಕಾರಣವಾಗಿತ್ತು. ನಾನು ನಿಮ್ಮಂಥ ಓರ್ವ ಸಾಮಾನ್ಯ ಮಾನವ, ದೇವ ವಿಶ್ವಾಸ ಮತ್ತು ದಿವ್ಯ ಬೋಧನೆಗಳನ್ನು ಕಲಿಸುವುದೇ ನನ್ನ ಧರ್ಮವೆಂದು ಅವರು ಪದೇ ಪದೇ ಅನುಯಾಯಿಗಳಿಗೆ ನೆನಪಿಸುತ್ತಿದ್ದರು.
ಮುಹಮ್ಮದ್ರಿಗೆ ಬಹಳ ಕನಿಕರ ಮತ್ತು ಪ್ರೀತಿಯಿತ್ತು. ಅನಾಥರು, ವಿಧವೆಯರು, ಬಡವರು, ರೋಗಿಗಳು ವೃದ್ಧರು ಮತ್ತ ನಿರಾಶ್ರಿತರ ಸೇವೆ ಮಾಡಿದರು. ಒಮ್ಮೆ ಅವರು ಓರ್ವ ವಯೋವೃದ್ಧೆಯಾಗಿದ್ದ ವಿಧವೆಯನ್ನು ಕಂಡರು. ಪ್ರವಾದಿಯವರು ತನ್ನ ಪತ್ನಿಯೊಡನೆ ಹೀಗೆ ಹೇಳಿದರು: “ಪ್ರಿಯೆ! ಮೊದಲು ಈಕೆಗೆ ಏನಾದರೂ ಕೊಡು. ಅನಂತರ ನೀನು ತಿನ್ನಬಹುದು.”
ಒಮ್ಮೆ ಮಕ್ಕಾದ ಬೀದಿಯಲ್ಲಿ ತಡಕಾಡುತ್ತಿದ್ದ ಓರ್ವ ಅಂಧ ಮಹಿಳೆಯನ್ನು ಕಂಡ ಪ್ರವಾದಿಯವರು ಅವರನ್ನು ಬಹಳ ವಿನಯದಿಂದ ಮನೆಗೆ ತಲುಪಿಸಿ, ಅನಂತರ ಆಹಾರದ ವ್ಯವಸ್ಥೆ ಮಾಡಿದರು.
ಒಮ್ಮೆ ತಲೆಯಲ್ಲಿ ಭಾರವಾದ ಹೊರೆಯನ್ನು ಹೊತ್ತು ಸಾಗುತ್ತಿದ್ದ ಓರ್ವ ಮಹಿಳೆಯನ್ನು ನೋಡಿದರು. ಕೂಡಲೇ ಆ ಹೊರೆಯನ್ನು ಆಕೆಯ ತಲೆಯಿಂದ ಕೆಳಗಿಳಿಸಿ, ಸ್ವತಃ ಹೊತ್ತು ಆಕೆಯ ಮನೆಗೆ ತಲುಪಿಸಿದರು.
ಅವರು ಅತ್ಯಂತ ವಿನಯಶೀಲರಾಗಿದ್ದರು. ಅಪಾರ ಶಿಷ್ಯ ವೃಂದವಿರುವ ಓರ್ವ ಪ್ರವಾದಿಯಾಗಿದ್ದರೂ ಮದೀನದ ಪ್ರಥಮ ಮಸೀದಿ ನಿರ್ಮಾಣ ವೇಳೆಯಲ್ಲಿ ಓರ್ವ ಸಾಮಾನ್ಯ ಕೂಲಿಯಂತೆ ಇತರರ ಜತೆಯಲ್ಲಿ ಕೆಲಸ ಮಾಡುವುದನ್ನು ನಾವು ಕಾಣುತ್ತೇವೆ. ಅವರು ತಮ್ಮ ಚಪ್ಪಲಿಯನ್ನು ಸ್ವತಃ ಹೊಲಿದು, ಹಾಲು ಕರೆದು, ಮನೆ ಗುಡಿಸಿ, ಸಾಮಾನುಗಳನ್ನು ಖರೀದಿಸಿ ತಂದು ಒಂಟೆಗಳಿಗೆ ಮೇವು ನೀಡುತ್ತಿದ್ದರು. ಅವರು ಗಹಗಹಿಸಿ ನಕ್ಕಿಲ್ಲ. ಆ ಮುಖ ಮತ್ತು ಮುಗುಳ್ನಗೆ ಅತ್ಯಾಕರ್ಷಕವಾಗಿತ್ತು. ಅವರು ಬಡವರನ್ನು ಗೌರವಿಸಿದರು, ಅನೇಕ ಗುಲಾಮರನ್ನು ಸ್ವತಂತ್ರಗೊಳಿಸಿದರು.
ಇಸ್ಲಾಮ್ ಎಂದರೆ ದೇವನಿಗೆ ಶರಣಾಗುವುದೆಂದರ್ಥ. ಇದಕ್ಕೆ ಸೆಮಿಟಿಕ್ ಧರ್ಮವಾಗಿರುವ ಜುದಾಯಿಝಮ್ನೊಂದಿಗೆ ಸ್ಪಷ್ಟ ಸಾಮ್ಯತೆಯಿದೆ. ಸಹೋದರತೆ ಮತ್ತು ಸಮಾನತೆಗಳನ್ನು ಇಸ್ಲಾಮ್ ಒತ್ತಿ ಹೇಳುತ್ತದೆ. ಸರಳ ಜೀವನವೇ ಅದರ ಆಧಾರ.
ಪ್ರಾರ್ಥನೆ ವ್ರತ, ದಾನ, ಪುಣ್ಯ ಯಾತ್ರೆ, ಅದರೊಂದಿಗೆ ದೇವನ ಏಕತೆ ಮತ್ತು ಆತನ ಪ್ರವಾದಿಗಳಲ್ಲಿರುವ ಸುದೃಢ ವಿಶ್ವಾಸ- ಇವು ಇಸ್ಲಾಮಿನ ಮೂಲ ಸಿದ್ಧಾಂತಗಳಾಗಿವೆ. ಕುರ್ಆನ್ ನೂರಕ್ಕೂ ಅಧಿಕ ಅಧ್ಯಾಯಗಳಲ್ಲಿ ವಿಭಜಿಸಲ್ಪಟ್ಟಿದೆ. ಕುರ್ಆನ್ನ ಆರಂಭ ಮತ್ತು ಮುಕ್ತಾಯವು ದೇವನ ಏಕತೆಯ ಘೋಷಣೆಯಿಂದಲೇ ಆಗಿದೆ. ಇಸ್ಲಾಮ್ ಶಾಂತಿಯ ಧರ್ಮವಾಗಿದೆ. ಮುಹಮ್ಮದ್ ಶಾಂತಿ ಮತ್ತು ಅಹಿಂಸಾ ಪ್ರೇಮಿಯಾಗಿದ್ದರಷ್ಟೆ. ನಿಸ್ವಾರ್ಥತೆ ಮತ್ತು ಸಂಕಷ್ಟದಲ್ಲಿರುವವರ ಸೇವೆ ಮಾಡುವುದೇ ಇಸ್ಲಾಮಿನ ಘೋಷ ವಾಕ್ಯವಾಗಿದೆ.
IslamKannada News Portal



