Home / ಲೇಖನಗಳು / ಕುರ್‌ಆನ್‌ನ ಸಬ್ಜೆಕ್ಟ್ “ನಾನು”

ಕುರ್‌ಆನ್‌ನ ಸಬ್ಜೆಕ್ಟ್ “ನಾನು”

✍️ ರೈಹಾನ್.ವಿ.ಕೆ.
ಸಚೇರಿಪೇಟೆ.

ಇವತ್ತು ನಾನು ಕುರ್‌ಆನ್‌ ಅಧ್ಯಯನಕ್ಕಾಗಿ ಆರಿಸಿ ಕೊಂಡ ಅಧ್ಯಾಯ , ” ಅಲ್ ಇಸ್ರಾ” ಅರ್ಥಾತ್ “ರಾತ್ರಿಯ ಪಯಣ”.

ಕುರ್‌ಆನ್‌ ಅಧ್ಯಯನ ಮಾಡುವಾಗ ನಮ್ಮ ಭಾವನೆ ಹೇಗಿರಬೇಕೆಂದರೆ ಕುರ್‌ಆನ್‌ ನನಗಾಗಿ, ನನ್ನೊಂದಿಗೆ ಮತ್ತು ನನಗೆ ಎಚ್ಚರಿಕೆ ಹಾಗೂ ನನಗೆ ಶುಭವಾರ್ತೆ ನೀಡುತ್ತಾ ನನ್ನೊಂದಿಗೆ ಮಾತಾಡುತ್ತಿದೆ.

ಅಂದರೆ ಕುರ್‌ಆನ್‌ ನ ಸಬ್ಜೆಕ್ಟ್ ಮನುಷ್ಯ; ಹಾಗಾಗಿ  ಕುಕುರ್‌ಆನ್‌ ಸಬ್ಜೆಕ್ಟ್ ನಾನು.

ಅಧ್ಯಾಯ ಅಲ್ ಇಸ್ರಾ ಇದು ಮೊದಲ ಬಾರಿಯ ಅಧ್ಯಯನವೇನೂ ಅಲ್ಲ. ಈ ಮೊದಲು ಹಲವು ಬಾರಿ ಅಧ್ಯಯನ ಮಾಡಿದ್ದೆ.

ಆದರೆ ಇವತ್ತು ಅಧ್ಯಯನ ಮಾಡಿದಾಗ ನನಗೆ ಹೊಸತಾಗಿ ಕಾಣಿಸಿತು. ಕುರ್‌ಆನ್‌ ನ ವಿಶೇಷತೆಯೇ ಹಾಗಿದೆ.

ನೀನು ಪಠಿಸಿದಂತೆ ನಿನಗದು ಹೊಸ ಹೊಸ ವಿಚಾರಗಳನ್ನು ಕಲಿಸುತ್ತದೆ. ಕುರ್‌ಆನ್‌ ನಿನಗೊಂದು ಸ್ವಯಂ ಅದ್ಯಾಪಕನಿದ್ದಂತೆ. ಅದು ನಿನ್ನನ್ನು ತರಬೇತು ಗೊಳಿಸುತ್ತೆ. ದುಖಿತನಾದಾಗ ಸಾಂತ್ವನ ನೀಡುತ್ತದೆ. ಈ ಪ್ರಕೃತಿಯ ಹಾಗೆ.

ಪ್ರಕೃತಿಯಲ್ಲಿ ಕಾಣುವ ಪೂರ್ಣಚಂದ್ರ, ಮಿನುಗುವ ನಕ್ಷತ್ರ, ಅಸ್ತಮಿಸುವ ಸೂರ್ಯ, ಹರಿಯುವ ನದಿ, ಗುಡ್ಡ ಬೆಟ್ಟಗಳು, ಚಿಲಿಪಿಲಿ ಗೂಡುವ ಹಕ್ಕಿಗಳ ಕಲವರ ಇದು ಚಿಕ್ಕಂದಿನಿಂದಲೇ ನಾವು ನೋಡುತ್ತಾ ಬಂದಿದ್ದರೂ ನಮಗೆ ಯಾವತ್ತೂ ಹಳಯದಾಗಿ ತೋಚಲಿಲ್ಲ. ಬದಲಾಗಿ ನೋಡಿದಷ್ಟೂ ಹೊಸತಾಗಿ ಕಾಣಿಸುವಂತೆ ಕುರ್‌ಆನ್‌ ಪ್ರತಿಸಲ ಅಧ್ಯಯನ ಮಾಡಿದಾಗ ಅದರಲ್ಲಿ ಹೊಸತನವನ್ನು ಕಾಣುತ್ತೇವೆ. ಅದರ ಪದ ಬಳಕೆ, ಅದರ ಸ್ಟ್ರಕ್ಚರ್, ಸುಶ್ರಾವ್ಯವಾಗಿ ಪಠಿಸುವಾಗ ಸಿಗುವ ಮಾನಸಿಕ ನೆಮ್ಮದಿ ಎಲ್ಲವೂ ಆಕರ್ಷಣೀಯವಾಗಿದೆ.

ಒಮ್ಮೆ ಒಬ್ಬರು ಓರ್ವ ವಿದ್ವಾಂಸರ ಜೊತೆ ಕೇಳುತ್ತಾರೆ, ಈ ಕುರ್‌ಆನ್‌ ನಲ್ಲಿ ನಮಗೆ ಒಂದು ಪುಸ್ತಕದಲ್ಲಿ ಅಡಕವಾಗಿರುವಂತೆ ಒಂದು ಸಬ್ಜೆಕ್ಟ್’ಗೆ ಒಂದು ಅಧ್ಯಾಯದಂತೆ ಕಾಣ್ತಾ ಇಲ್ವಲ್ಲಾ? ವಿಷಯಗಳು ಅಲ್ಲಲ್ಲಿ ಬಿದ್ದಂತೆ ಕಾಣ್ತಾ ಇದೆಯಲ್ಲಾ ಎಂದು ಕೇಳಿದಾಗ, ಆ ವಿದ್ವಾಂಸರು ಆತನಿಗೆ ನೀಡಿದ ಉತ್ತರ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ‘ನೀವು ಪ್ರಕೃತಿಯ ಕಡೆಗೆ ದೃಷ್ಟಿ ಹಾಯಿಸಿದ್ದೀರಾ ?ಅಲ್ಲಿ ನೋಡಿ, ನದಿಗಳು ಸಮುದ್ರಗಳು, ಗುಡ್ಡ ಬೆಟ್ಟಗಳು, ಹೇಗಿವೆ’. ಗುಡ್ಡಬೆಟ್ಟಗಳೆಲ್ಲವೂ ಒಂದು ಕಡೆ, ನದಿಗಳು ಎಲ್ಲವೂ ಒಂದೇ ಕಡೆ ಈ ರೀತಿಯ ಸೆಟ್ಅಪ್ ಪ್ರಕೃತಿಗೆ ಇದ್ದರೆ ಪ್ರಕೃತಿ ಹೇಗೆ ಕಾಣಿಸಿತು? ಅದೇ ರೀತಿ ಕುರ್‌ಆನ್‌, ಕುರ್‌ಆನ್‌  ನ ಸೌಂದರ್ಯವೇ ಹಾಗೆ.

ಕುರ್‌ಆನ್‌ ಪ್ರಕೃತಿಯ ಹಾಗೆ ವಿಶಾಲವಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಪ್ರಕೃತಿಯೇ ಧರ್ಮ. ಪ್ರಕೃತಿಗೆ ವಿರುದ್ಧವಾದುದೆಲ್ಲವೂ ಅಧರ್ಮ.

ಇನ್ನು ನನ್ನ ವಿಷಯಕ್ಕೆ:
ಈ ಅಧ್ಯಯನದಲ್ಲಿ ಪ್ರವಾದಿವರ್ಯಯರನ್ನು(ಸ) ಅಲ್ಲಾಹನು “ಇಸ್ರಾ” ರಾತ್ರಿ ಪ್ರಯಾಣದ ಮೂಲಕ ದೂರದ ಜೆರೂಸಲಮ್’ಗೆ ಕೊಂಡೊಯ್ದ ವಿವರಣೆ ಹಾಗೂ ಅಲ್ಲಿಂದ ಮಿಅರಾಜ್ ಆಕಾಶಾರೋಹಣ ಮಾಡಿದ ಘಟನೆಯನ್ನು ವಿವರಿಸುತ್ತದೆ.

ಈ ಪ್ರಯಾಣಕ್ಕಿಂತ ಮುಂಚೆ ಪ್ರವಾದಿ ಜೀವನದಲ್ಲಿ ನಡೆದ ಅತ್ಯಂತ ದುಃಖಕರ ಘಟನೆಯೂ ನಡೆದಿರುತ್ತದೆ. ಪ್ರವಾದಿ ಸ್ವತಃ ಆ ವರ್ಷವನ್ನೇ ದುಃಖ ವರ್ಷವೆಂದು ಹೆಸರಿಸಿದ್ದಾರೆ.
ಯಾಕೆಂದರೆ ಅನಾಥನಾಗಿ ಜನಿಸಿದ ಪ್ರವಾದಿ ಆರು ವರ್ಷ ಪ್ರಾಯವಾದಾಗ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಅನಂತರ ಅಜ್ಜನ ಆಶ್ರಯದಲ್ಲಿ ಬೆಳೆಯುತ್ತಾರೆ. ಒಂದೆರಡು ವರ್ಷ ಕಳೆದಾಗ ಅವರನ್ನೂ ಅಗಲುತ್ತಾರೆ. ನಂತರ ಇಪ್ಪತ್ತೈದು ವರ್ಷ ವಯಸ್ಸಿನಲ್ಲಿ ಬಾಳ ಸಂಗಾತಿಯಾಗಿದ್ದ ಖತೀಜಾ(ರ) ಮತ್ತು ಚಿಕ್ಕಪ್ಪ ಅಬೂತಾಲಿಬ್ ಬೆನ್ನೆಲುಬಾಗಿ ಸಹಕರಿಸುತ್ತಾ ಇದ್ದಂತೆ ಅಚಾನಕ್ಕಾಗಿ ಅವರಿಬ್ಬರೂ ಒಂದೇ ವರ್ಷದಲ್ಲಿ ಇಹಲೋಕವನ್ನು ಬಿಟ್ಟಗಲಿದಾಗ, ಅಮ್ಮನ ನೆನಪಾಗಿ ಯಾರಲ್ಲೂ ಹೇಳದೆ ಅಮ್ಮನ ಸಂಭಂಧಿಕರ ಊರಾದ ತಾಯಿಫ್’ಗೆ ಹೋಗುತ್ತಾರೆ. ತಾಳಲಾರದ ದುಃಖ ಭಾರವನ್ನು ಸಂಬಂಧಿಕರೊಂದಿಗೆ ಹಂಚಿಕೊಂಡು ಹೃದಯ ಹಗುರಗೊಳಿಸುವ ಸಲುವಾಗಿ. ಆದರೆ ಅಲ್ಲಿನ ಜನರು ಪ್ರವಾದಿಯವರನ್ನು ಕಲ್ಲೆಸೆದು ಓಡಿಸುತ್ತಾರೆ. ಎಸೆದ ಕಲ್ಲಿನಿಂದಾಗಿ ಕಾಲಿನಲ್ಲಿ ಗಾಯವಾಗಿ ರಕ್ತ ಹರಿಯುತ್ತದೆ.

ಹಾಗೆ ದುಃಖಿತರಾದ ಪ್ರವಾದಿಯವರನ್ನು ಸಾಂತ್ವನ ಗೊಳಿಸುತ್ತಾ ಅಲ್ಲಾಹನು ಅವರನ್ನು (ಅದೇ ವರ್ಷ) ದೂರದ ಬೈತುಲ್ ಮಕದ್ದಿಸ್’ಗೆ ಕೊಂಡು ಹೋದ ಚರಿತ್ರೆಯನ್ನು ಅಧ್ಯಯನ ಮಾಡಿದಾಗ ನಮ್ಮ ಜೀವನದಲ್ಲೂ ಇಂತಹ ಘಟನೆಗಳು ಬರುತ್ತದೆ.

ನನ್ನ ಬಳಿಯಲ್ಲಿ ಕುಳಿತಿದ್ದ ಮಗಳೊಂದಿಗೆ ಕೇಳಿದೆ ಪ್ರವಾದಿ ಚರಿತ್ರೆಯ ಇಸ್ರಾ ಮಿಅರಾಜ್ ಗೊತ್ತಿದೆಯೇ ನಿನಗೆ ? ಅದು ಯಾಕೆ ಗೊತ್ತಾ ? ಅದು ಪ್ರವಾದಿಯವರು ಅತ್ಯಂತ ಪ್ರೀತಿಸುತ್ತಿದ್ದ ಅವರ ಪತ್ನಿ ಮತ್ತು ಚಿಕ್ಕಪ್ಪ ತೀರಿಕೊಂಡ ವರ್ಷವಾಗಿತ್ತು.

ಮಗಳು ಮುಖದಲ್ಲಿ ಸಂತೋಷವನ್ನು ಕಂಡೆ ಏಕೆಂದರೆ ಅಪ್ಪನ ಅಕಾಲಿಕ ಮರಣ ಅವಳ‌ ಮಟ್ಟಿಗೆ ಅದೊಂದು ಆಘಾತಕಾರಿ ಘಟನೆಯಾಗಿತ್ತು. ಪ್ರೀತಿಯಿಂದ ಮಗಳ ಕೈ ಕಿಲುಕಿ ಮುಗುಳ್ನಗೆ ಬೀರಿ “ಉಪವಾಸ ಹಿಡಿದು ಹೆಚ್ಚು ಆಡವಾಡಬೇಡ ದಣಿವಾಗಬಹುದು” ಎಂದು ಅವಳೊಂದಿಗಿನ ಕೊನೆಯ ಮಾತು, ಅವಳದನ್ನು ಬಾರಿ ಬಾರಿ ಕಣ್ಣೇರಿನೊಂದಿಗೆ ನೆನಪಿಸುತ್ತಿದ್ದಳು. ನನ್ನಪ್ಪನಿಗೆ ಏನಾಯಿತು ಎಂದು ಕೇಳುವಷ್ಟು ಶಕ್ತಿ ಅವಳಲ್ಲಿರಲಿಲ್ಲ. ಏಕೆಂದರೆ ಅಪ್ಪ ಮಗಳ ಭಾಂದವ್ಯ ಆ ರೀತಿ ಇತ್ತು. ಅವರ ಪರ‌ಸ್ಪರ ಪ್ರೀತಿಗೆ ನೆರೆಯವರು ಸಂಬಂಧಿಕರು ಸಾಕ್ಷಿ.

ಮಗಳೊಂದಿಗೆ ಹೇಳಿದೆ ಅಪ್ಪನ ಅಗಲುವಿಕೆಯ ಅದೇ ವರ್ಷ ನಾವೂ ದೂರದ ಜೆರೂಸಲಮ್’ನ ಮಸ್ಜಿದುಲ್ ಅಕ್ಸಾಕ್ಕೆ ಹೋಗಿ ಬಂದೆವು ಅಲ್ಲವೇ ಎಂದಾಗ ಅವಳ‌ ಮುಖದಲ್ಲಿ ಮುಗುಳ್ನಗೆಯನ್ನು ಕಂಡೆ.

ಜೀವನದ ಬಗ್ಗೆ ನಮಗೂ ಒಂದು ಅವಲೋಕನ ಇರಬೇಕು. ಪ್ರಜ್ಞಾವಂತಿಕೆ ಬೇಕು. ಜೀವನದಲ್ಲಿ ಬರುವ ಸುಖ ದುಃಖಗಳ ಬಗ್ಗೆ ಸ್ಪಷ್ಟವಾದ ಅವಲೋಕನ. ನಮ್ಮಲ್ಲೂ ಇರಬೇಕು.

ಏಕಾಂತದಲ್ಲಿರುವಾಗ ಸಹಜವಾಗಿ ಚಿಂತೆಗಳು ಕಾಡುತ್ತಲೇ ಇರುತ್ತದೆ. ಅಕ್ಕಂದಿರ ಗೆಳೆತಿಯಂದಿರ ಬದುಕು ನೋಡಿದಾಗ ನನ್ನೊಂದಿಗೆ ಮಾತ್ರ ಹೀಗೆಕಾಯಿತು? ಎಂಬ ಆಲೋಚನೆ ಕಾಡುವಾಗ ಅವರಿಗಿಲ್ಲದ ಕೆಲವು ಅನುಗ್ರಹಗಳನ್ನು ಯೋಚಿಸಿ ಕೃತಜ್ಞತೆ ಸಲ್ಲಿಸುವ ಮನಸ್ಸು ನನಗೆ ಕುರ್‌ಆನ್‌ ನಿಂದ ಲಭ್ಯವಾಯಿತು.

ಆದ್ದರಿಂದ ಕುರ್‌ಆನ್‌ ಅಧ್ಯಯನ ನಿರಂತರವಾಗಿ ನಡೆಯಲಿ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …