ಭಟ್ಕಳ: ನಗರದ ಜಾಮೀಯಾ ಸ್ಟ್ರೀಟ್ ನಲ್ಲಿರುವ ಐತಿಹಾಸಿಕ ಮಸೀದಿ ಚಿನ್ನದ ಪಳ್ಳಿ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಯಿತು. ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಜಾಮಿಯಾ ಮಸೀದಿ ಚಿನ್ನದ ಪಳ್ಳಿಯಲ್ಲಿ ನಡೆದ ಮಸೀದಿ ದರ್ಶನ ಅಕ್ಷರಶಃ ಹಿಂದೂ ಮುಸ್ಲಿಮ್ ಹೃದಯಗಳನ್ನು ಬೆಸೆಯುವಂತಹ ಕೇಂದ್ರವಾಗಿ ಮಾರ್ಪಟ್ಟಿತ್ತು. ನೂರಾರು ಮಂದಿ ಹಿಂದೂ, ಮುಸ್ಲಿಮ್ ಕ್ರೈಸ್ತ ಬಾಂಧವರು ಮಸೀದಿ ದರ್ಶನದ ಮೂಲಕ ಒಂದು ಮಾದರಿ ಸಮಾಜ ಹೇಗಿರಬೇಕು ಎಂಬುದನ್ನು ಸಾಬೀತು ಮಾಡಿ ತೋರಿಸಿದರು.
ಈ ಸಂದರ್ಭದಲ್ಲಿ ದಿಕ್ಸೂಚಿ ಭಾಷಣಗೈದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಹಾಗೂ ಮಾಧ್ಯಮ ಕೇಂದ್ರದ ನಿರ್ದೇಶಕ ಮುಹಮ್ಮದ್ ಯಾಸೀನ್ ಮಲ್ಪೆ, ಪ್ರವಾದಿ ಮುಹಮ್ಮದ್ ಪೈಗಂಬರರ ಕಾಲದಲ್ಲಿದ್ದ ಮಸೀದಿಯ ಸ್ವರೂಪ ಹಾಗೂ ಅವುಗಳ ಕಾರ್ಯಗಳನ್ನು ವಿವರಿಸುತ್ತ ಮಸೀದಿಗಳಿಂದ ಸಮಾಜಕ್ಕೆ ಭಾವೈಕ್ಯತೆಯ ಸಂದೇಶ ರವಾನೆಯಾಗಬೇಕು, ಅಂತಹ ಮಾದರಿ ಮಸೀದಿಯಾಗಿ ಚಿನ್ನದ ಪಳ್ಳಿ ಇಂದು ರೂಪುಗೊಂಡಿದೆ ಎಂದರು.
ಇದಕ್ಕೂ ಪೂರ್ವ ಮಸೀದಿಯ ಕರೆ ಬಾಂಗ್ ಹಾಗೂ ಮಸೀದಿಯೊಳಗೆ ನಿರ್ವಹಿಸುವ ನಮಾಝ್ ಕುರಿತಂತೆ ಪತ್ರಕರ್ತ ಎಂ.ಆರ್. ಮಾನ್ವಿ ಮಾತನಾಡಿ, ಮಸೀದಿಗಳ ಕುರಿತಂತೆ ಇಂದು ಬಹುತೇಕ ಜನರಲ್ಲಿ ತಪ್ಪು ಕಲ್ಪನೆಗಳಿದ್ದು ಅದನ್ನು ದೂರೀಕರಿಸುವ ಪ್ರಯತ್ನ ಹಾಗೂ ಸಮಾಜದಲ್ಲಿ ಪರಸ್ಪರನ್ನು ಅರಿಯುವಂತಹ ಕಾರ್ಯವಾಗುತ್ತಿದೆ. ದೇವನು ಮಹಾನನು, ಬನ್ನಿ ನಮಾಝ್ ನೆಡೆಗೆ, ಬನ್ನಿ ವಿಜಯದೆಡೆಗೆ ಎಂಬ ಕರೆಯನ್ನು ನೀಡುವುದರ ಮೂಲಕ ಮಸೀದಿಗೆ ಜನರನ್ನು ಆಹ್ವಾನಿಸಲಾಗುತ್ತದೆ ಎಂದರು.
ಉದ್ಘಾಟನಾ ಭಾಷಣ ಮಾಡಿದ ಅಲಿಮಿಯಾ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಲ್ಯಾಸ್ ನದ್ವಿ, ಹಿಂದುಗಳು ಮಸೀದಿಗೆ ಮುಸ್ಲಿಮರು ಮಂದಿರಗಳಿಗೆ ಭೇಟಿ ನೀಡಬೇಕು. ಇದರಿಂದಾಗಿ ಪರಸ್ಪರರಲ್ಲಿ ಅಪನಂಬಿಕೆಗಳು ದೂರವಾಗುತ್ತದೆ. ಅಡಗಿಸುವಂತಹ ಒಂದು ವಸ್ತುವೂ ಇರುವುದಿಲ್ಲ. ಭಟ್ಕಳದಲ್ಲಿನ ಎಲ್ಲ ಮಸೀದಿಗಳ ನಿರ್ಮಾಣ ಕಾಮಾಗಾರಿಯಲ್ಲಿ ಹಿಂದೂಗಳೇ ಹೆಚ್ಚಾಗಿ ತೊಡಗಿಕೊಳ್ಳುತ್ತಾರೆ. ಆದ್ದರಿಂದ ಭಟ್ಕಳದಲ್ಲಿನ ಮಸೀದಿಗಳ ಕುರಿತಂತೆ ತಪ್ಪುಕಲ್ಪನೆಗಳನ್ನು, ಸುಳ್ಳು ಸುದ್ದಿಗಳನ್ನು ಹರಡುವುದರಲ್ಲಿ ಯಾವುದೇ ತಥ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕ ಜೆ.ಡಿ. ನಾಯ್ಕ, ನಮ್ಮಲ್ಲಿ ಒಬ್ಬರಿಗೆ ಮತ್ತೊಬ್ಬರಲ್ಲಿ ವಿಶ್ವಾಸವಿಲ್ಲ. ನಮಗೆ ಮಸೀದಿಯ ಬಗ್ಗೆ, ನಿಮಗೆ ಮಂದಿರಗಳ ಬಗ್ಗೆ, ಆದರೆ ಇಂತಹ ಕಾರ್ಯಕ್ರಮಗಳು ಆಗಾಗ ನಡೆದರೆ ನಮ್ಮಲ್ಲಿನ ಅಪನಂಬಿಕೆಗಳು ದೂರವಾಗುತ್ತವೆ. ಭಟ್ಕಳದಲ್ಲಿ ಹಿಂದೂ-ಮುಸ್ಲಿಮರು ಆಗಾಗ ಬೆರೆಯುವಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು ಎಂದರು.
ಉ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ ಮಾತನಾಡಿ, ನಾವು ಮಸೀದಿಗಳನ್ನು ನೋಡಿದ್ದೇವೆ. ಆದರೆ ಇಂದು ನಡೆದ ಕಾರ್ಯಕ್ರಮದಲ್ಲಿ ಮಸೀದಿಯ ಒಳಗೆ ಏನೆಲ್ಲ ನಡೆಯುತ್ತವೆ ಎನ್ನುವ ಅರಿವು ನಮಗೆ ಮೂಡಿದಂತಾಗಿದೆ ಎಂದ ಅವರು, ನಮ್ಮ ಯುವ ಪೀಳಿಗೆ ಇದನ್ನು ಅರಿತುಕೊಳ್ಳಬೇಕು. ನಮ್ಮ ಹಿರಿಯರು
ಸಾಮರಸ್ಯದಿಂದಲೇ ಬದುಕಿ ಬಂದವರು. ಅವರ ಕುರಿತಂತೆ ನಮ್ಮ ಯುವಪೀಳೀಗೆ ಮನವರಿಕೆ ಮಾಡಿಕೊಡಬೇಕು ಎಂದರು. ಮನೆಯಲ್ಲಿ ಹಿರಿಯರು ಉತ್ತಮ ವಾತಾವರಣ ನಿರ್ಮಿಸಿದರೆ ಯುವಕರೂ ಕೂಡ ಅದನ್ನು ಪಾಲಿಸುತ್ತಾರೆ ಎಂದ ಅವರು ನಾವು ಪರಸ್ಪರ ಕೂಡಿ ಬಾಳಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಹಾಫಿಝ್ ಅಶ್ಫಾಖ್ ಚೆನ್ನಾ ರವರ ಕುರ್ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಕಾರ್ಯದರ್ಶಿ ಮೌಲಾನ ತಲ್ಹಾ ರುಕ್ನುದ್ದೀನ್ ನದ್ವಿ ಸ್ವಾಗತಿಸಿದರು. ಅಬ್ದುಸ್ಸಮೀ ಕಾರ್ಯಕ್ರಮ ನಿರೂಪಿಸಿದರು. ಶಾಬಂದ್ರಿ ಶಫಿ ಪಟೇಲ್ ಧನ್ಯವಾದ ಅರ್ಪಿಸಿದರು.
ಜಮಾಅತುಲ್ ಮುಸ್ಲಿಮೀನ್ ಉಪಾಧ್ಯಕ್ಷ ಎಸ್.ಜೆ. ಹಾಶೀಂ, ಚೀಫ್ ಖಾಝಿ ಮೌಲಾನ ಮುಹಮ್ಮದ್ ಮುಲ್ಲಾ ಇಕ್ಬಾಲ್ ನದ್ವಿ, ಮೌಲಾನ ಅಬ್ದುಲ್ ಅಝೀಮ್ ಕಾಝೀಯಾ, ಮೊಗೇರ್ ಸಮಾಜದ ಕೆ.ಎಂ. ಕರ್ಕಿ ಮುಂತಾದವರು ಉಪಸ್ಥಿತರಿದ್ದರು.
IslamKannada News Portal


