ಬಿಹಾರದ ನವಾಡ ಜಿಲ್ಲೆಯಲ್ಲಿ ಬೆರಗುಗೊಳಿಸುವ ಅಂಶವೊಂದು ವರದಿಯಾಗಿದೆ. ದಶಕಗಳಿಂದ ಅಣೆಕಟ್ಟಿನ ನೀರಿನಲ್ಲಿ ಮುಳುಗಿದ್ದ ಹಳೆಯ ಐತಿಹಾಸಿಕ ಮಸೀದಿಯೊಂದು ನೀರು ಖಾಲಿಯಾದ ಬಳಿಕ ಪ್ರತ್ಯಕ್ಷವಾಗಿದೆ.
ರಾಜೌಲಿ ಬ್ಲಾಕ್ನಲ್ಲಿರುವ ಪುಲ್ವಾರಿಯಾ ಅಣೆಕಟ್ಟಿನಲ್ಲಿ ದಶಕಗಳಿಂದ ನೀರಿನಲ್ಲಿ ಮುಳುಗಿದ್ದ ಹಳೆಯ ಮಸೀದಿಯೊಂದು ಈಗ ಸಂಪೂರ್ಣವಾಗಿ ಗೋಚರಿಸಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮದ ಮುಸ್ಲಿಮರು ಸೇರಿ ಆಸಕ್ತರು ತಂಡೋಪತಂಡಗಳಾಗಿ ಭೇಟಿ ನೀಡುತ್ತಿದ್ದಾರೆ.
ದಶಕಗಳ ಕಾಲ ನೀರಿನಲ್ಲಿ ಮುಳುಗಿದ್ದರೂ ಮಸೀದಿ ಕಟ್ಟಡ ಸಂಪೂರ್ಣ ಸುರಕ್ಷಿತವಾಗಿದೆ. ನೆಲದಿಂದ ಮೇಲಿನ ಗುಮ್ಮಟದವರೆಗೆ ಮಸೀದಿಯ ಎತ್ತರ ಸುಮಾರು 30 ಅಡಿಯಿದ್ದು, ರಾಜೌಲಿ ಬ್ಲಾಕ್ನ ಫುಲ್ವಾರಿಯಾ ಅಣೆಕಟ್ಟಿನ ದಕ್ಷಿಣ ತುದಿಯಲ್ಲಿರುವ ಚಂದೌಲಿ ಗ್ರಾಮದ ಬಳಿ ಇದು ಗೋಚರಿಸಿದೆ. ಈ ಮಸೀದಿಗೆ ಸುಮಾರು 120 ವರ್ಷಗಳಷ್ಟು ಹಳೆಯದಾದ ಇತಿಹಾಸವಿದ್ದು, ಇದಕ್ಕೆ ನೂರಿ ಮಸೀದಿ ಎಂದು ಹೆಸರಿದ್ದುದಾಗಿ ಆ ಮಸೀದಿಯ ಬಗ್ಗೆ ತಿಳಿದಿದ್ದ ಹಿರಿಯರೋರ್ವರು ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ವರ್ಷಗಟ್ಟಲೆ ಮುಳುಗಿದ ನೀರಿನಿಂದ ಹೊರ ಬಂದ ಈ ಮಸೀದಿಯನ್ನು ನೋಡಲು ನಾವಡ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಜನರು ಕುಟುಂಬ ಸಮೇತ ಆಗಮಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ನೆರೆಯ ಗಯಾ ಜಿಲ್ಲೆಯ ವಝೀರ್ಗಂಜ್ನಿಂದ ಹಲವಾರು ಮುಸ್ಲಿಂ ಕುಟುಂಬಗಳು ತಮ್ಮ ಸಂಬಂಧಿಕರೊಂದಿಗೆ ಇಲ್ಲಿಗೆ ತಲುಪಿ ಮಸೀದಿಯನ್ನು ನೋಡುತ್ತಿದ್ದಾರೆ. ಪುಲ್ವಾರಿಯಾ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕಡಿಮೆಯಾದ ಕಾರಣ ಮಸೀದಿ ಸಂಪೂರ್ಣವಾಗಿ ಗೋಚರಿಸಿದೆ. ಮೊದಲು ನೀರಿನ ಮಟ್ಟ ಕಡಿಮೆಯಾಗುತ್ತಿದ್ದಾಗ ಮಸೀದಿಯ ಮೇಲಿರುವ ಗುಮ್ಮಟದ ಭಾಗ ಮಾತ್ರ ಗೋಚರಿಸುತ್ತಿತ್ತು. ಆದರೆ ಈ ಬಾರಿ ಇಡೀ ಮಸೀದಿಯೇ ಕಾಣುತ್ತಿದೆ. ಸದ್ಯ ಈ ಮಸೀದಿಯು ಜನರ ಆಕರ್ಷಣೆಯ ಕೇಂದ್ರವಾಗಿದೆ. ಸ್ಥಳೀಯ ನಿವಾಸಿಯೋರ್ವರ ಪ್ರಕಾರ, ಫುಲ್ವಾರಿಯಾ ಅಣೆಕಟ್ಟನ್ನು 1984ರಲ್ಲಿ ನಿರ್ಮಿಸಲಾಯಿತು. ಹಿಂದೆ ಇಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಅಣೆಕಟ್ಟನ್ನು ನಿರ್ಮಿಸಿದಾಗ ಅಲ್ಲಿ ನೆಲೆಸಿದ್ದವರನ್ನು ಸ್ಥಳಾಂತರಿಸಿ, ಹರ್ಡಿಯಾ ಅಣೆಕಟ್ಟಿನ ಪಕ್ಕದ ಹಳ್ಳಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿತ್ತು. ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಈ ಮಸೀದಿಯನ್ನು ಹೀಗೆ ಬಿಡಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಅಣೆಕಟ್ಟಿನ ನೀರು ಶೇಖರಿಸಿದ್ದ ಪರಿಣಾಮ ಈ ಮಸೀದಿಯ ಸುತ್ತಲೂ ಸಾಕಷ್ಟು ಕೆಸರು ಇದೆ. ಅದರ ಹತ್ತಿರ ಹೋಗುವುದು ತುಂಬಾ ಕಷ್ಟಕರವಾಗಿದ್ದರೂ, ಹಲವರು ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಒಳಗೆ ಹೋಗಿ ನೋಡಲು ಪ್ರಯತ್ನಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಲ್ಲದೇ, ಹಲವು ಯೂಟ್ಯೂಬರ್ಗಳು ಈ ಮಸೀದಿ ಇರುವ ಸ್ಥಳಕ್ಕೆ ಭೇಟಿ ನೀಡಿ, ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದು, ಅವು ವೈರಲ್ ಆಗುತ್ತಿದೆ.
IslamKannada News Portal

