Home / ಪ್ರಶ್ನೋತ್ತರ / ದೇವನು ಕಅಬಾದಲ್ಲಿದ್ದಾನೆಯೇ?

ದೇವನು ಕಅಬಾದಲ್ಲಿದ್ದಾನೆಯೇ?

ಮುಸ್ಲಿಮ್‌ರು, ನಮಾಝ್ ನಿರ್ವಹಿಸುವಾಗ ಕಅಬಾದ ಕಡೆಗೆ ಮುಖ ಮಾಡಲು ಕಾರಣವೇನು? ದೇವನು ಕಅಬಾದಲ್ಲಿರುವನೇ? ಅಥವಾ ಕಅಬಾವು ದೇವನ ಪ್ರತೀಕವೇ? ಪ್ರತಿಷ್ಠಾಪನೆಯೇ ?

ಇಸ್ಲಾಮಿ ದೃಷ್ಟಿಕೋನದಂತೆ ದೇವನು ಯಾವುದೋ ಒಂದು ಸ್ಥಳಕ್ಕೆ ಸೀಮಿತವಾಗಿಲ್ಲ. ದೇವನಿಗೆ ಪ್ರತಿಮೆಗಳೂ ಪ್ರತಿಷ್ಠಾಪನೆಯೋ ಇಲ್ಲ. ”ಪೂರ್ವ ಪಶ್ಚಿಮಗಳೆಲ್ಲವೂ ಅಲ್ಲಾಹನವು. ನೀವೆತ್ತ ಮುಖ ಮಾಡಿದರೂ ಅಲ್ಲಿ ಅಲ್ಲಾಹನ ಮುಖವಿದೆ. ನಿಶ್ಚಯವಾಗಿಯೂ ಅಲ್ಲಾಹನು ಬಹುವಿಶಾಲನೂ ಅಭಿಜ್ಞನೂ ಆಗಿರುತ್ತಾನೆ.” (ಪವಿತ್ರ ಕುರ್ ಆನ್ 2:115)

‘ಭೂಮಿ-ಆಕಾಶಗಳ ಪ್ರತಿಯೊಂದು ವಸ್ತುವಿನ ಜ್ಞಾನವು ಅಲ್ಲಾಹನಿಗೆ ಇದೆ ಎಂಬುದು ನಿಮಗೆ ತಿಳಿದಿಲ್ಲವೇ? ಮೂರು ಮಂದಿಯ ನಡುವೆ ರಹಸ್ಯ ಮಾತುಕತೆ ನಡೆಯುತ್ತಿರುವಾಗ ಅವರೊಂದಿಗೆ ನಾಲ್ಕನೆಯವನಾಗಿ ಅಲ್ಲಾಹನು ಎಂದೂ ಇಲ್ಲದೆ ಇರುವುದಿಲ್ಲ ಅಥವಾ ಐವರೊಳಗೆ ರಹಸ್ಯ ಮಾತುಕತೆ ನಡೆಯುತ್ತಿರುವಾಗ ಆರನೇಯವನಾಗಿ ಅಲ್ಲಾಹನಿಲ್ಲದೆ ಇರುವುದಿಲ್ಲ. ರಹಸ್ಯ ಮಾತುಕತೆ ನಡೆಸುತ್ತಿರುವವರು ಇದಕ್ಕಿಂತ ಕಡಿಮೆ ಇರಲಿ ಅಥವಾ ಹೆಚ್ಚಿರಲಿ, ಅವರು ಎಲ್ಲೇ ಇರಲಿ, ಅಲ್ಲಾಹನು ಅವರ ಜೊತೆಗಿರುತ್ತಾನೆ ಮತ್ತು ಪುನರುತ್ತಾನ ದಿನ ಅವನು ಅವರಿಗೆ, ಅವರು ಏನೆಲ್ಲ ಮಾಡಿದ್ದರೆಂಬುದನ್ನು ತಿಳಿಸುವನು. ಅಲ್ಲಾಹನು ಸಕಲ ವಸ್ತುಗಳ ಜ್ಞಾನವುಳ್ಳವನು.’ (ಪವಿತ್ರ ಕುರ್‌ಆನ್ 58:7)

‘ನಾವು ಮಾನವನನ್ನು ಸೃಷ್ಟಿಸಿದೆವು ಮತ್ತು ನಾವು ಅವನ ಮನಸ್ಸಿನಲ್ಲಿ ಉದ್ಭವಿಸುವ ದುರ್ಭಾವನೆಗಳನ್ನು ಬಲ್ಲೆವು. ನಾವು ಅವನ ಕಂಠನಾಡಿಗಿಂತಲೂ ಹೆಚ್ಚು ಅವನಿಗೆ ಸಮೀಪವಿದ್ದೇವೆ.’ (ಪವಿತ್ರ ಕುರ್ ಆನ್ 50:16)

ವಿಶ್ವದ ಸರ್ವ ಮನುಷ್ಯರನ್ನು ಜೀವನದ ಎಲ್ಲಾ ರಂಗಗಳಲ್ಲೂ ಏಕೀಕರಿಸುವ ಸಮಗ್ರ ಜೀವನ ಪದ್ಧತಿ ಇಸ್ಲಾಮ್ ಆಗಿದೆ. ಅದರ ಆರಾಧನಾ ಕ್ರಮಗಳಲ್ಲೂ ವಿಶ್ವಾಸಿಗಳನ್ನು ಏಕಧ್ರುವೀಕರಿಸುವಲ್ಲಿ ಮಹತ್ವದ ಪಾತ್ರವಿದೆ. ಇದು ಸಾಧ್ಯವಾಗಬೇಕಾದರೆ ಎಲ್ಲರ ಆರಾಧನಾ ರೀತಿಗಳು ಒಂದೇ ರೀತಿ ಇರಲೇಬೇಕಲ್ಲವೇ. ಆದ್ದರಿಂದ ವಿಶ್ವದ ಎಲ್ಲ ಮುಸಲ್ಮಾನರಿಗೂ ನಮಾಝ್ ಮಾಡಲು ಒಂದು ದಿಕ್ಕು ಅನಿವಾರ್ಯವಲ್ಲವೇ? ಅದಕ್ಕಾಗಿ ಏಕದೇವಾರಾಧನೆಗಾಗಿ ಲೋಕದಲ್ಲಿ ಪ್ರಪ್ರಥಮವಾಗಿ ನಿರ್ಮಿಸಲ್ಪಟ್ಟ ಕಅಬಾವನ್ನು ನಿರ್ಧರಿಸಲಾಯಿತು. ಆದ್ದರಿಂದ ಆ ಪವಿತ್ರ ದೇವಭವನವು ವಿಶ್ವ ಜನತೆಯನ್ನು ಏಕೀಕರಿಸುವ ಕೇಂದ್ರ ಬಿಂದುವಾಗಿದೆ. ದೇವನು ಪ್ರತ್ಯೇಕವಾಗಿ ಕೂಡಿಹಾಕಲ್ಪಟ್ಟ ದೇವನ ಪ್ರತೀಕವೋ, ಪ್ರತಿಷ್ಟಾಪನೆಯೋ ಅಲ್ಲ, ಅದು ಏಕದೇವಾರಾಧನೆಯ ಪ್ರತೀಕವಾಗಿದೆ.

”ನಿಶ್ಚಯವಾಗಿಯೂ ಮಾನವರಿಗಾಗಿ ನಿರ್ಮಿಸಲ್ಪಟ್ಟ ಪ್ರಥಮ ಆರಾಧನಾಲಯವು ಮಕ್ಕಾದಲ್ಲಿರುವುದೇ ಆಗಿರುತ್ತದೆ. ಅದಕ್ಕೆ ಶುಭ ಸಮೃದ್ಧಿಗಳನ್ನು ನೀಡಲಾಗಿತ್ತು ಮತ್ತು ಅದು ಸಮಗ್ರ ಲೋಕದವರಿಗೆ ಸನ್ಮಾರ್ಗದರ್ಶನದ ಕೇಂದ್ರವನ್ನಾಗಿ ಮಾಡಲ್ಪಟ್ಟಿತ್ತು.’ (ಪವಿತ್ರ ಕುರ್ ಆನ್ 3:96)

”ನಾವು ಆ ಭವನ (ಕಅಬಾವನ್ನು ಜನರಿಗೆ ಕೇಂದ್ರ ಹಾಗು ಶಾಂತಿ ಸ್ಥಾನವನ್ನಾಗಿ ನಿಶ್ಚಯಿಸಿದ ಸಂದರ್ಭವನ್ನು ಸ್ಮರಿಸಿರಿ.” (ಪವಿತ್ರ ಕು‌ರ್ ಆನ್ 2:125)

ಅಲ್ಲಾಹನು ಪ್ರತಿಷ್ಠಿತ ಭವನವಾದ ‘ಕಅಬಾ’ವನ್ನು ಜನರ ಪಾಲಿಗೆ (ಸಾಮೂಹಿಕ ಜೀವನವನ್ನು) ನೆಲೆ ನಿಲ್ಲಿಸುವ ಸಾಧನವಾಗಿ ಮಾಡಿದನು. (ಪವಿತ್ರ ಕುರ್ ಆನ್ 5:97)

ಆದ್ದರಿಂದ ನೀವು ಪವಿತ್ರ ಭವನವನ್ನು ಆರಾಧಿಸುವುದಲ್ಲ ಅದರ ಒಡೆಯನನ್ನು ಆರಾಧಿಸಬೇಕು. ಅವರು ಈ ಭವನದ ಪ್ರಭುವಿನ ದಾಸ್ಯ-ಆರಾಧನೆ ಮಾಡಲಿ.’ (ಪವಿತ್ರ ಕುರ್ ಆನ್ 106:3)

ಕೆಲವು ಪ್ರಸಿದ್ಧ ಇತಿಹಾಸಕಾರರು ತಪ್ಪಾಗಿ ಚಿತ್ರಿಸಿದಂತೆ ಕಅಬಾ ಒಂದು ಕಲ್ಲಲ್ಲ. ಕಲ್ಲಿನಿಂದ ನಿರ್ಮಿಸಲಾದ ಹನ್ನೆರಡು ಮೀಟರ್ ಉದ್ದ ಹತ್ತು ಮೀಟರ್ ಅಗಲ, ಹದಿನೈದು ಮೀಟರ್ ಎತ್ತರದ ಒಂದು ಕಟ್ಟಡವಾಗಿದೆ. ಕಅಬಾ ಎಂಬ ಪದವು ಘನಾಕೃತಿ(ಕ್ಯೂಬ್) ಯನ್ನು ಸೂಚಿಸುತ್ತದೆ. ಕಲಾನೈಪುಣ್ಯತೆಯಿಲ್ಲದ ಕೆತ್ತನೆ ಕೆಲಸವಿಲ್ಲದೆ ಶಿಲ್ಪ ಸೌಂದರ್ಯವಿಲ್ಲದ ಸರಳತೆಯ ಪ್ರತೀಕವಾಗಿದೆ.

ಆದರೆ ವಿಶ್ವದ ಅತ್ಯುತ್ಕೃಷ್ಟ ಭವನ, ಜಗತ್ತಿನ ಸುಮಾರು 100 ಕೋಟಿ ಮುಸ್ಲಿಮರು ದಿನಂಪ್ರತಿ ಐದು ಬಾರಿ ಅದರತ್ತ ಮುಖ ತಿರುಗಿಸುತ್ತಾರೆ. ಗತ ಶತಮಾನಗಳಲ್ಲಿ ನಿಧನರಾದ ಕೋಟಿಗಟ್ಟಲೆ ಸತ್ಯವಿಶ್ವಾಸಿಗಳ ಮುಖವನ್ನು ಅಂತ್ಯ ವಿಶ್ರಾಂತಿಗಾಗಿ ಕಅಬಾದ ಕಡೆಗೆ ಇರಿಸಿಯೇ ದಫನ ಮಾಡಲಾಗಿದೆ. ಜಗತ್ತಿನಾದ್ಯಂತವಿರುವ ಕೋಟ್ಯಂತರ ಜನರ ಹೃದಯದೊಂದಿಗೆ ಬೆಸೆದ ಇಂತಹ ಭವನ ಜಗತ್ತಿನಲ್ಲಿ ಬೇರೊಂದಿಲ್ಲ. ಅದು ದೇವನ ಭವನವಾಗಿದೆ. ಆದ್ದರಿಂದ ಅದು ಎಲ್ಲಾ ಮನುಷ್ಯರದ್ದೂ ಹೌದು, ಏಕದೇವಾರಾಧನೆಯ ಪ್ರತೀಕವೂ, ಏಕದೇವಾರಾಧಕರ ಪ್ರಾರ್ಥನೆಯ ದಿಕ್ಕೂ ಆಗಿದೆ.

ಮುಸ್ಲಿಮರು ಕಅಬಾದ ಸುತ್ತಲು ಪ್ರದಕ್ಷಿಣೆ ಹಾಕಲು ಕಾರಣವೇನು? ಆದರಿಂದ ಪ್ರಯೋಜನವೇನು? ಅರ್ಥಹೀನವಾದ ಆಚಾರವಲ್ಲವೇ ಅದು.?

ಮನುಷ್ಯನು ಪ್ರಪಂಚ ವ್ಯವಸ್ಥೆಯೊಂದಿಗೆ ಲೀನವಾಗುತ್ತಾನೆ. ಅದರ ಅದ್ಭುತವಾದ ರಚನೆಯೊಂದಿಗೆ ಐಕ್ಯಗೊಳ್ಳುವಂತಹ ವಿಶಿಷ್ಟ ಆರಾಧಾನಾ ಕ್ರಮವಿದು. ಪವಿತ್ರ ಕಅಬಾ ಅದರ ಕೇಂದ್ರ ಬಿಂದು. ಜನರು ಅದರ ಸುತ್ತಲೂ ತಿರುಗುತ್ತಾರೆ. ಸೌರ ಮಂಡಲದ ಗ್ರಹಗಳು ಸೂರ್ಯನ ಸುತ್ತಲೂ ಸುತ್ತುವಂತೆ ತಿರುಗುತ್ತಾರೆ. ಪರಮಾಣುವಿನ ಎಲೆಕ್ಟ್ರಾನುಗಳು ನ್ಯೂಕ್ಲಿಯಸ್‌ನ ಸುತ್ತಲೂ ಸುತ್ತುವಂತೆ ಸುತ್ತುತ್ತಾರೆ. ಏಳು ಬಾರಿ ಪ್ರದಕ್ಷಿಣೆ ಹಾಕಿದರೆ ಒಂದು ಎನಿಸಿಕೊಳ್ಳುತ್ತದೆ ಅಥವಾ ಏಳು ಭಾರಿ ತಿರುಗಿದರೆ ಒಂದು ತವಾಫ್ ಆಗುತ್ತದೆ. ಇಲ್ಲಿ ಏಳು ಎಂಬುದು ಪ್ರಪಂಚ ರಚನೆಯನ್ನು ಪ್ರತಿನಿಧಿಸುತ್ತದೆ. ಭೂಖಂಡಗಳು ಏಳಲ್ಲವೇ? ಸಮುದ್ರಗಳು ಏಳು ಮತ್ತು ಆಕಾಶವೂ ಏಳೆಂದು ಕುರ್‌ ಆನ್ ಹೇಳುತ್ತದೆ.

ಬಲಭಾಗಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡುವ ಇಸ್ಲಾಮ್ ತವಾಫ್ ತೀರ್ಥಯಾತ್ರಿಕನ ಎಡಭಾಗದಿಂದ ಆಗಬೇಕೆಂದು ಆದೇಶಿಸಿದೆ. ಇದು ಬಹಳ ಗಮಾನಾರ್ಹ ವಿಚಾರವಾಗಿದೆ. ಇದರಿಂದ ಕಅಬಾ ಪ್ರದಕ್ಷಿಣೆಯು ಪ್ರಪಂಚ ವ್ಯವಸ್ಥೆಗೆ ಸಂಪೂರ್ಣ ವಿಧೇಯವಾಗಿದೆ. ಸೌರಮಂಡಲದ ಗೋಳಗಳು ಸೂರ್ಯನನ್ನು ಎಡಭಾಗದಿಂದ ಬರುವಂತೆ ಸುತ್ತುತ್ತದೆ. ಅಥವಾ ತವಾಫ್ ನಂತೆಯೇ ಗಡಿಯಾರದ ಮುಳ್ಳು ಹಿಂದಕ್ಕೆ ಚಲಿಸುವ ರೀತಿಯಲ್ಲಿದೆ. ಗ್ರಹಗಳು ತನ್ನ ಕಕ್ಷೆಯಲ್ಲಿ ಅದೇ ರೀತಿ ತೇಲುತ್ತದೆ. ಧೂಮಕೇತುಗಳು ಸೂರ್ಯನ ಸುತ್ತಲೂ ಅದೇ ದಿಕ್ಕಿಗೆ ತಿರುಗುತ್ತದೆ. ಅಂಡ-ಬೀಜಾಣು ಸಂಕಲವಾಗುವ ಮೊದಲು ಪುರುಷ ಬೀಜಗಳು ಅಂಡಾಣುವಿನ ಸುತ್ತಲೂ ಸುತ್ತುವುದು ಆ್ಯಂಟಿಕ್ಲೋಕ್ ರೀತಿಯಲ್ಲಾಗಿದೆ. ಹೀಗೆ ವಿಶಿಷ್ಟವಾದ ಈ ಆರಾಧನಾ ಕ್ರಮವು ಪ್ರಪಂಚ ವ್ಯವಸ್ಥೆಯೊಂದಿಗೆ ವಿಸ್ಮಯಕರ ರೀತಿಯಲ್ಲಿ ಬೆರೆಯುತ್ತದೆ. ತಾನು ಪರಮಾಣುವಿನಿಂದ ಗೆಲಾಕ್ಸಿವರೆಗಿನ ವಿಶಾಲವಾದ ಪ್ರಪಂಚದ ಭಾಗವೆಂದೂ, ಅವೆಲ್ಲವೂ ಸೃಷ್ಟಿಕರ್ತನಿಗೆ ವಿಧೇಯವಾಗಿ ವರ್ತಿಸುವಂತೆ ತಾನು ಕೂಡಾ ಆತನನ್ನೇ ಆರಾಧಿಸಿ, ಜೀವಿಸುವವನೆಂಬ ಪ್ರಜ್ಞೆಯನ್ನು ಬೆಳೆಸುವ ಈ ಕರ್ಮವನ್ನು ತಾನು ಯಾವ ರೀತಿ ಮಾಡುತ್ತೇನೆಂಬ ಕುರಿತು ಒಂದು ಘೋಷಣೆಯೂ ಆಗಿದೆ.

ಕಅಬಾದ ಪ್ರದಕ್ಷಿಣೆಯ ಕುರಿತು ಅತ್ಯಂತ ಮಹತ್ವಪೂರ್ಣವೂ ವಿಸ್ಮಯಕರವೂ ಆದ ಈ ವಿಷಯಗಳನ್ನು ಇತ್ತೀಚೆಗಷ್ಟೆ ಅರಿಯಲು ಸಾಧ್ಯವಾಯಿತು. ಇನ್ನೂ ಮನವರಿಕೆಯಾಗದ ಹಲವು ಕಾರಣಗಳು ಇದಕ್ಕಿರಬಹುದು. ದೇವನು ನಿಶ್ಚಯಿಸಿದ ಆರಾಧನಾ ಕರ್ಮಗಳನ್ನು ಆತನ ಸೃಷ್ಟಿಗಳಾದ ಮನುಷ್ಯರು ಅದರ ಯುಕ್ತಿ ಹಾಗೂ ನ್ಯಾಯ ಅರ್ಥವಾದರೂ ಇಲ್ಲದಿದ್ದರೂ ನಿಶ್ಚಿತ ರೂಪದಲ್ಲಿ ನಿರ್ವಹಿಸಲು ಬಾಧ್ಯಸ್ಥರಾಗಿದ್ದಾರೆ.

ದೇವಾಲಯ ಪ್ರದಕ್ಷಿಣೆ ಮತ್ತು ಕಅಬಾ ತವಾಫ್

ಹಿಂದೂಗಳು ತಮ್ಮ ಕ್ಷೇತ್ರಗಳ ಸುತ್ತು ಪ್ರದಕ್ಷಿಣೆ ಹಾಕುವ ರೀತಿಯಲ್ಲಿ ಮುಸ್ಲಿಮರು ಕಅಬಾದ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾರಲ್ಲಾ?

ಪ್ರವಾದಿ ಇಬ್ರಾಹೀಮ್ (ಅ)ರು ಪವಿತ್ರ ಕಅಬಾದ ಪುನರ್ನಿರ್ಮಾಣ ಮಾಡಿದರು. ಅವರೇ ಹಜ್ಜ್ ಗೂ ಆಹ್ವಾನ ನೀಡಿದರು. ಅವರು ನಿರ್ಮಿಸಿದ ಕಅಬಾದಲ್ಲಿ ವಿಗ್ರಹಗಳೋ, ಮೂರ್ತಿಗಳೋ ಇರಲಿಲ್ಲ. ಮಾತ್ರವಲ್ಲ ಏಕದೇವಾರಾಧನೆಗಾಗಿ ಪ್ರವಾದಿ ಇಬ್ರಾಹೀಮ್ (ಅ) ಮತ್ತು ಅವರ ಪುತ್ರ ಇಸ್ಮಾಯೀಲ್‌ರು ಸೇರಿಕೊಂಡು ಇದನ್ನು ನಿರ್ಮಿಸಿದರು. ಹಜ್ಜ್ ನ ಭಾಗವಾಗಿ ಅದರ ಸುತ್ತಲೂ ಪ್ರದಕ್ಷಿಣೆ ಹಾಕುವ ಸಂಪ್ರದಾಯ ಅಂದೇ ಇತ್ತು. ಆದರೆ ನಂತರದ ದಿನಗಳಲ್ಲಿ ಜನರು ಮೂಢನಂಬಿಕೆ ಹಾಗೂ ಅನಾಚಾರಗಳ ಗುಲಾಮರಾಗಿ, ಆ ಪ್ರವಾದಿಗಳ ಚಿತ್ರಗಳನ್ನು ರಚಿಸಿ, ಕಅಬಾಲಯದಲ್ಲಿಟ್ಟು ಆರಾಧಿಸತೊಡಗಿದರು- ಬೇರೆಯೂ ನೂರಾರು ವಿಗ್ರಹಗಳು ಅಲ್ಲಿ ಸ್ಥಾನ ಪಡೆದವು. ಹೀಗೆ ಏಕದೇವಾರಾಧನೆ ನಡೆಯುತ್ತಿದ್ದ ಮಂದಿರದಲ್ಲಿ ವಿಗ್ರಹಗಳಿಗೆ ಪ್ರದಕ್ಷಿಣೆ ಹಾಕುವ ಪರಿಸ್ಥಿತಿ ಬಂತು. ಇಂತಹ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದ್ (ಸ)ರು ನಿಯೋಜಿತರಾಗಿ ಜನರ ಮನಸ್ಸನ್ನು ಆಮೂಲಾಗ್ರವಾಗಿ ಬದಲಾಯಿಸಿ, ಅವರಿಂದಲೇ ವಿಗ್ರಹಗಳನ್ನು ನಿರ್ಮೂಲನೆಗೊಳಿಸಿದರು. ಹೀಗೆ ಕಅಬಾದ ಪ್ರದಕ್ಷಿಣೆಯನ್ನು ಇಸ್ಲಾಮ್ ಮುಂದುವರಿಸಿತು. ಆದರೆ ಅದು ವಿಗ್ರಹಾರಾಧನೆಯ ಬದಲು ಏಕದೇವಾರಾಧನೆಯಾಗಿ ಬದಲಾಯಿತು. ನಗ್ನರಾಗಿ ಪ್ರದಕ್ಷಿಣೆ ಮಾಡುತ್ತಿದ್ದ ಸಂಪ್ರದಾಯವನ್ನು ಕೊನೆಗೊಳಿಸಿ, ಗೌರವಾರ್ಹ ಉಡುಪಿನೊಂದಿಗೆ ಪ್ರದಕ್ಷಿಣೆ ನಡೆಸಬೇಕೆಂದು ಆದೇಶಿಸಿತು. ಅದರಲ್ಲಿದ್ದ ಎಲ್ಲಾ ಅನಾಚಾರ, ಮೂಢಸಂಪ್ರದಾಯಗಳನ್ನು ಕೊನೆಗೊಳಿಸಿ ಅದನ್ನು ಶುದ್ದೀಕರಿಸಲಾಯಿತು.

ಧರ್ಮಗಳ ಮೂಲ ಆಕರ ಒಂದೇ ಆಗಿರುವುದರಿಂದ ಆರಾಧನೆಗಳಲ್ಲೂ ಸಮಾನತೆ ಕಂಡು ಬರುವುದು ಸಹಜವಾಗಿದೆ. ಭಾರತಕ್ಕೆ ವಲಸೆ ಬಂದ ಆರ್ಯರು ಪ್ರವಾದಿ ಇಬ್ರಾಹೀಮ್‌ರ ಅನುಯಾಯಿಗಳು ಹಾಗೂ ಉತ್ತರಾಧಿಕಾರಿಗಳೆಂಬ ಕೆಲವು ಸಂಶೋಧಕರ ನಿಲುವುಗಳು ಗಮನಾರ್ಹವಾಗಿದೆ. ಆದ್ದರಿಂದಲೇ ಪ್ರವಾದಿ ಇಬ್ರಾಹೀಮ್ (ಅ)ರಿಂದ ಆರಂಭಗೊಂಡ ಆರಾಧನಾ ಕರ್ಮವು ಇಲ್ಲಿಯೂ ಪ್ರದಕ್ಷಿಣೆಯ ರೂಪದಲ್ಲಿ ಉಳಿದುಕೊಂಡಿದೆ. ಏನಿದ್ದರೂ ದೇವನನ್ನು ಪ್ರತಿನಿಧೀಕರಿಸಲು ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ಅದನ್ನು ಆರಾಧಿಸುವುದು ಹಾಗೂ ಅಂತಹ ಕ್ಷೇತ್ರಗಳಿಗೆ ಪ್ರದಕ್ಷಿಣೆ ಹಾಕುವುದನ್ನು ಇಸ್ಲಾಮ್ ಬಹಳ ಪ್ರಬಲವಾಗಿ ವಿರೋಧಿಸುತ್ತದೆ.

ಆರಾಧನಾ ಕ್ರಮಗಳಲ್ಲಿರುವ ಸಾಮ್ಯತೆಯು, ಧರ್ಮಗಳ ಮೂಲ ಆಕರಕ್ಕೆ ಸಂಬಂಧಿಸಿದ ವಸ್ತುನಿಷ್ಠವಾದ ಸಂಶೋಧನೆಗೆ ಹಾಗೂ ಧಾರ್ಮಿಕ ಏಕತೆಯನ್ನು ಕಂಡು ಹಿಡಿಯಲು ಸಾಧ್ಯವಾದರೆ ಅದೊಂದು ದೊಡ್ಡ ವಿಜಯವಾಗಿರುವುದು, ಅಂತಹ ಸಂಶೋಧನೆಗೂ ಅಧ್ಯಯನಕ್ಕೂ ಈ ಸಂವಾದವು ಪ್ರೇರಕವಾಗಲಿ.

“ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ”

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *