Home / ಪ್ರಶ್ನೋತ್ತರ / ಆಹಾರ ಸೇವನೆ: ಕುರ್‌ಆನ್, ಹದೀಸ್ ಏನು ಹೇಳುತ್ತದೆ?

ಆಹಾರ ಸೇವನೆ: ಕುರ್‌ಆನ್, ಹದೀಸ್ ಏನು ಹೇಳುತ್ತದೆ?

✍️ಇಬ್ರಾಹೀಮ್ ಶಮ್ನಾಡ್

ನಮ್ಮ ಆರೋಗ್ಯದ ಸ್ಥಿರತೆಯನ್ನು ಕಾಪಾಡಲು ಆಹಾರದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂಬ ಬಗ್ಗೆ ಎಲ್ಲರಿಗೂ ತಿಳಿದಿದ್ದರೂ ಅದನ್ನು ಹೇಗೆ ಪಾಲಿಸಬೇಕೆಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಎಲ್ಲಾ ವಿಚಾರಗಳ ಬಗ್ಗೆಯೂ ಬಹಳ ಸ್ಪಷ್ಟವಾದ ಮಾರ್ಗದರ್ಶನ ನೀಡುವ ಇಸ್ಲಾಮ್ ಆಹಾರದ ಸೇವಿಸುವ ವಿಚಾರದ ಬಗ್ಗೆಯೂ ಕುರ್‌ಆನ್ ನಿಂದ ಮತ್ತು ಬುಖಾರಿ, ತಿರ್ಮಿದಿ, ಇಬ್ನು ಮಾಜಾ ಮುಂತಾದವರ ಆಧಾರ ಪ್ರಮಾಣಗಳಿರುವ ಹದೀಸ್ ಗ್ರಂಥಗಳಿಂದ ಆಯ್ದ ಹತ್ತು ಮಾರ್ಗದರ್ಶನಗಳನ್ನು ಇಲ್ಲಿ ನೀಡುತ್ತೇನೆ.

1. ಆಹಾರ ಸೇವಿಸುವುದಕ್ಕಿಂತ ಮುಂಚೆ ಮತ್ತು ನಂತರ ಕೈ ತೊಳೆಯಬೇಕೆಂದು ಪ್ರವಾದಿವರ್ಯರು(ಸ) ತನ್ನ ಸಂಗಾತಿಗಳಿಗೆ ಕಲಿಸಿಕೊಟ್ಟಿರುತ್ತಾರೆ. ಕೈ ತೊಳೆಯದೆ ಆಹಾರ ಸೇವಿಸಬಾರದು. ಇದು ಸಾಂಕ್ರಾಮಿಕ ರೋಗಗಳ ಹಬ್ಬುವಿಕೆಗೆ ಕಾರಣವಾಗ ಬಹುದು. ಮಾರಕವಾದ ಬ್ಯಾಕ್ಟೀರಿಯಾಗಳು ಉದರದಲ್ಲಿ ಪ್ರವೇಶಿಸದಂತೆ ಸಾಕಷ್ಟು ಹೈಜಿನ್ ಬೇಕೆಂದು ಆರೋಗ್ಯ ರಂಗದಲ್ಲಿ ಸಕ್ರಿಯರಾದವರು ಉಪದೇಶಿಸುತ್ತಾರೆ.

2. ಅಲ್ಲಾಹನ ನಾಮ ಉಚ್ಚರಿಸಿ ಆಹಾರ ಸೇವಿಸಬೇಕು ಮತ್ತು ಪೂರ್ತಿಗೊಳಿಸಿದ ಬಳಿಕ ಆತನನ್ನು ಸ್ತುತಿಸಿ ಸ್ಮರಿಸಬೇಕೆಂದು ಪ್ರವಾದಿವರ್ಯರು(ಸ) ಕಲಿಸಿರುತ್ತಾರೆ. ಎಲ್ಲಾ ಸತ್ಕರ್ಮಗಳನ್ನು ನಿರ್ವಹಿಸುವಾಗ ಬಿಸ್ಮಿಲ್ಲಾಹ್ ಹೇಳಿಕೊಂಡೇ ಪ್ರಾರಂಭಿಸುವುದು ಇಸ್ಲಾಮಿನಲ್ಲಿ ಶ್ರೇಷ್ಠ ಪುಣ್ಯ ಕರ್ಮವಾಗಿದೆ. ಇದರಿಂದ ಪ್ರವಾದಿ ಪ್ರೇಮದ ಜೊತೆಗೆ ಅವರ ಅನುಸರಣೆಯ ಜೊತೆಗೆ ಅಲ್ಲಾಹನ ಆದೇಶದ ಪಾಲನೆಯೂ ಆಗುತ್ತದೆ.

3. ದುಂದುವೆಚ್ಚ ಮತ್ತು ಆಡಂಬರವನ್ನು ಇಸ್ಲಾಮ್ ಬಹಳ ತೀಕ್ಷ್ಣವಾಗಿ ವಿರೋಧಿಸುತ್ತದೆ. ಕುರ್‌ಆನಿನಲ್ಲಿ ಹೇಳಲಾಗಿದೆ, ‘ಅಲ್ಲಾಹನು ಕರುಣಿಸಿದ ಆಹಾರವನ್ನು ತಿನ್ನಿರಿ ಕುಡಿಯಿರಿ ಮತ್ತು ಭೂಮಿಯ ಮೇಲೆ ಅಶಾಂತಿಯನ್ನುಂಟು ಮಾಡದಿರಿ.’ (ಅಲ್‌ಬಕರ: 60) ನಮ್ಮ ರುಚಿಗನುಗುಣವಾಗಿ ಆಹಾರ ಸೇವಿಸಬಹುದು ಎಂಬ ಸದುದ್ದೇಶದಿಂದ ಮಾಡಿದ ಬಫೆ ಸಿಸ್ಟಮ್ ಕೂಡಾ ದುಂದು ವೆಚ್ಚದ ಪ್ರತಿರೂಪವಾಗಿ ಮಾರ್ಪಡಬಾರದು.

4. ಆಹಾರವನ್ನು ಯಾವತ್ತೂ ವಿಮರ್ಶಿಸಬಾರದು. ಅಲ್ಲಾಹನ ಅಪಾರ ಅನುಗ್ರಹದಿಂದ ನಮಗೆ ಲಭಿಸಿದ ಆಹಾರವನ್ನು ವಿಮರ್ಶಿಸಬಾರದು. ಹಾಗೆ ವಿಮರ್ಶಿಸದಿರುವುದನ್ನು ಉತ್ತಮ ಗುಣಸ್ವಭಾವವಾಗಿ ಇಸ್ಲಾಮ್ ಕಲಿಸಿದೆ. ಪ್ರವಾದಿವರ್ಯರಿಗೆ(ಸ) ಲಭಿಸಿದ ಯಾವುದೇ ಔತಣ ಕೂಟದ ಆಹಾರದ ಬಗ್ಗೆ ವಿಮರ್ಶಿಸಿರಲಿಲ್ಲ. ಅವರಿಗೆ ಬೇಕೆಂದೆನಿಸಿದರೆ ತಿನ್ನುತ್ತಿದ್ದರು. ಇಷ್ಟವಿಲ್ಲದಿದ್ದರೆ ತೊರೆಯುತ್ತಿದ್ದರು. ಇದು ಪ್ರವಾದಿ ಚರ್ಯೆಯಾಗಿದೆ.

5. ಸಂತುಲಿತವಾಗಿ ಆಹಾರ ಸೇವಿಸುವುದು ಪ್ರಮುಖ ವಿಚಾರವಾಗಿದೆ. ಮೂರು ಬೆರಳುಗಳನ್ನು ಉಪಯೋಗಿಸಿಕೊಂಡು ಮಿತವಾಗಿ ಆಹಾರ ಸೇವಿಸುತ್ತಿದ್ದರು. ಪ್ರವಾದಿ(ಸ) ಹೇಳಿರುತ್ತಾರೆ, “ಹಸಿವು ನೀಗಿಸಲು ಆದಮನ ಪುತ್ರನಿಗೆ ಸ್ವಲ್ಪ ಆಹಾರ ಸಾಕು. ಓರ್ವನು ಹೆಚ್ಚಿನದ್ದನ್ನು ಬಯಸುವನೆಂದಾದರೆ ಹೊಟ್ಟೆಯ ಭಾಗದಲ್ಲಿ ಮೂರರಲ್ಲಿ ಒಂದಂಶ ಅಂದರೆ ಆ ವ್ಯಕ್ತಿಯ ಒಂದು ಭಾಗ ಆಹಾರಕ್ಕೆ ಒಂದು ಭಾಗ ನೀರಿಗೆ ಒಂದು ಭಾಗವನ್ನು ಗಾಳಿಗಾಗಿ ಮೀಸಲಿಡಲಿ.

6. ನೆರೆಮನೆವಾಸಿಗಳು, ಕುಟುಂಬದ ಸದಸ್ಯರು, ಮಿತ್ರರು, ಆಪ್ತರು, ದುಃಖಿತರು ಮುಂತಾದವರ ಜೊತೆ ಆಹಾರ ಸೇವಿಸುವುದರಿಂದ ಸಹೋದರ ಸಂಬಂಧಗಳು ಬಲಿಷ್ಟವಾಗುತ್ತದೆ. ಪ್ರವಾದಿವರ್ಯರು(ಸ) ಹೇಳುತ್ತಾರೆ; ಪ್ರತ್ಯೇಕವಾಗಿಯಲ್ಲ, ಎಲ್ಲರೂ ಜೊತೆಯಾಗಿ ಸೇರಿಕೊಂಡು ಆಹಾರ ಸೇವಿಸಿರಿ. ಸಾಮೂಹಿಕ ರೀತಿಯಲ್ಲಿ ಆಹಾರ ಸೇವಿಸಿದರೆ ಅಲ್ಲಾಹನ ಅನುಗ್ರಹವು ಲಭಿಸುತ್ತದೆ. ಜೊತೆಯಾಗಿದ್ದುಕೊಂಡು ಸೇರಿ ಆಹಾರ ಸೇವಿಸುವುದರಿಂದ ಸಂತೋಷವು ವೃದ್ಧಿಯಾಗುತ್ತದೆ.

7. ನಿಧಾನವಾಗಿ ಆಹಾರ ಸೇವಿಸುವುದು ಆರೋಗ್ಯಕ್ಕೆ ಉತ್ತಮ ಎಂದು ಪ್ರವಾದಿವರ್ಯರು(ಸ) ಹೇಳಿರುತ್ತಾರೆ. ನಿಧಾನವಾಗಿ
ಆಹಾರ ಸೇವಿಸುವುದರಿಂದ ಚೆನ್ನಾಗಿ ಅಗಿದು ತಿನ್ನಲು ಸಹಾಯಕವಾಗುತ್ತದೆ. ಅದು ಗಲ್ಲದ ಎಲುಬಿನ ವ್ಯಾಯಾಮವಾಗುತ್ತದೆ. ಜೊತೆಗೆ ಜೊಲ್ಲು ರಸವು ಆಹಾರದೊಂದಿಗೆ ಬೆರೆತುಕೊಂಡರೆ ದಹನ ಕ್ರಿಯೆಗೆ ಪ್ರಯೋಜನಕಾರಿಯಾಗಿದೆ. ಪ್ರವಾದಿವರ್ಯರು(ಸ) ಹೇಳುತ್ತಾರೆ: “ಒರಗಿಕೊಂಡು ನಾನು ಆಹಾರ ಸೇವಿಸಲಾರೆ.”

8. ಪ್ರವಾದಿವರ್ಯರು(ಸ) ಹೇಳಿರುತ್ತಾರೆ: ನಿಂತು ನೀರು ಕುಡಿಯುವವನು ನಮ್ಮವನಲ್ಲ. ನಿಂತು ನೀರು ಕುಡಿಯುವುದರಿಂದ ಕಿಡ್ನಿ ರೋಗಕ್ಕೆ ಕಾರಣವಾಗುತ್ತದೆ ಎಂದು ವೈದ್ಯ ಜಗತ್ತು ಹೇಳುತ್ತದೆ.

9. ಬಲಕೈಯಿಂದಲೇ ಆಹಾರ ಸೇವಿಸಿರಿ. ಇಬ್ನು ಉಮರ್(ರ)ರವರು ಉದ್ಧರಿಸಿದ ಹದೀಸ್‌ನಲ್ಲಿ ಹೀಗೆ ಹೇಳಲಾಗಿದೆ, ನಿಮ್ಮಲ್ಲಿ ಯಾರೂ ಎಡ ಕೈಯಿಂದ ತಿನ್ನುವುದಾಗಲೀ ಕುಡಿಯುವುದಾಗಲೀ ಸಲ್ಲದು. ಯಾಕೆಂದರೆ ಪಿಶಾಚಿಯು ಎಡಕೈಯಿಂದ ತಿನ್ನುತ್ತದೆ, ಕುಡಿಯುತ್ತದೆ. ಪ್ರವಾದಿವರ್ಯರು(ಸ) ನೀರು ಕುಡಿಯುವಾಗ ಮೂರು ಬಾರಿ ಗುಟುಕಾಗಿ ಕುಡಿಯುತ್ತಿದ್ದರು.

10. ಆಹಾರ ಸಹಿತ ಎಲ್ಲಾ ವಿಚಾರಗಳಲ್ಲಿಯೂ ಮಿತತ್ವ ಪಾಲಿಸಬೇಕೆಂದು ಕುರ್‌ಆನ್ ಎಚ್ಚರಿಸುತ್ತದೆ. ಜೀವನದಲ್ಲಿ ಪಾಲಿಸಬೇಕಾದ ಆರ್ಥಿಕ ಭದ್ರತೆ ಹಲವು ಬಾರಿ ಅಸ್ತವ್ಯಸ್ತವಾಗುವುದು ದುಂದು ವೆಚ್ಚದ ಕಾರಣದಿಂದಾಗಿರುತ್ತದೆ. ಕುರ್‌ಆನ್ ಹೇಳುತ್ತದೆ- ಸಂಬಂಧಿಕನಿಗೆ ಅವನ ಹಕ್ಕನ್ನೂ ದರಿದ್ರನಿಗೂ, ಪ್ರಯಾಣಿಕನಿಗೂ ಅವನವನ ಹಕ್ಕನ್ನೂ ಕೊಡಿರಿ. ದುಂದು ವೆಚ್ಚ ಮಾಡಬೇಡಿರಿ. ದುಂದುಗಾರರು ಶೈತಾ ನನ ಸೋದರರಾಗಿರುತ್ತಾರೆ ಮತ್ತು ಶೈತಾನನು ತನ್ನ ಪ್ರಭುವಿಗೆ ಕೃತಘ್ನನು. (ಬನೀ ಇಸ್ರಾಈಲ್: 26-27)

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *