Home / ಲೇಖನಗಳು / ಉಪವಾಸ ವ್ರತ: ಸೃಷ್ಟಿಕರ್ತನ ಸಾಮಿಪ್ಯ ಗಳಿಸುವ ಉಪಾಧಿ!

ಉಪವಾಸ ವ್ರತ: ಸೃಷ್ಟಿಕರ್ತನ ಸಾಮಿಪ್ಯ ಗಳಿಸುವ ಉಪಾಧಿ!

✍️ ಮುಹಮ್ಮದ್ ಅಶ್ರಫ್

ನಮ್ಮ ಜೀವನವು ಮಂಜುಗಡ್ಡೆಯಂತೆ ಕರಗುತ್ತಿದೆ. ಈ ಕ್ಷಣಗಳು ನಿಮಿಷಗಳಾಗಿ, ನಿಮಿಷಗಳು ಗಂಟೆಗಳಾಗಿ, ಗಂಟೆಗಳು ದಿನಗಳಾಗಿ, ದಿನಗಳು-ವಾರಗಳು-ತಿಂಗಳು ಹೀಗೆ ವರ್ಷಗಳು ಉರುಳಿದಂತೆಲ್ಲ ಕರಗುವ ಈ ಜೀವನದ ಅಂತ್ಯವು ಯಾವಾಗ ಆಗುವುದೆಂದು ಹೇಳಲಿಕ್ಕಾಗದು. ನಮ್ಮ ಜೀವನದ ಬಗ್ಗೆ ಯಾವುದೇ ಭರವಸೆ ಇಲ್ಲ. ನಿನ್ನೆ-ಮೊನ್ನೆ ತಾನೇ ರಮಝಾನ್ ಕಳೆದು ಹೋಗಿತ್ತು ಎಂದು ನಮಗೆ ಭಾಸವಾಗುತ್ತಿದೆ.

ಹೌದು, ರಮಝಾನ್ ತನ್ನ ಎಲ್ಲ ಸಮೃದ್ಧಿ, ಶ್ರೇಷ್ಠ ಪುಣ್ಯ ಫಲಗಳನ್ನು ಹೊತ್ತು ಮತ್ತೊಮ್ಮೆ ಆಗತವಾಗಿದೆ. ಈ ಸಮೃದ್ಧ ತಿಂಗಳಿಂದ ಯಾರಿಗೆ ಹೆಚ್ಚು ಪುಣ್ಯ ಗಳಿಸಲು ಸಾಧ್ಯವಾಯಿತೋ ಆತನೇ ಧನ್ಯ. ತದ್ವಿರುದ್ಧವಾಗಿ ರಮಝಾನ್ ತಿಂಗಳನ್ನು ಹೊಂದಿಯೂ ಅದರಿಂದ ಪ್ರಯೋಜನ ಪಡೆಯಲು ಸೋಲುವವನಿಗಿಂತ ಹೆಚ್ಚಿನ ದುರದೃಷ್ಟಶಾಲಿ ಬೇರೆ ಯಾರೂ ಇರಲಾರರು. ಆದ್ದರಿಂದ ರಮಝಾನಿನ ದಿನ ರಾತ್ರಿಗಳಲ್ಲಿ ಹೆಚ್ಚು ಪ್ರಯೋಜನ ಪಡೆಯಲು ಅದರ ಚಂದ್ರದರ್ಶನಕ್ಕೆ ಮುಂಚೆಯೇ ನಾವು ಸಿದ್ಧತೆಯನ್ನು ಮಾಡಿಕೊಳ್ಳಬೇಕು.

ಪ್ರವಾದಿವರ್ಯರು(ಸ) ರಬಜ್‌ನ ಚಂದ್ರ ದರ್ಶನವನ್ನು ನಿರೀಕ್ಷಿಸುತ್ತಿದ್ದರು ಮತ್ತು ಶಅಬಾನ್ ಆಗತವಾಗುತ್ತಲೇ ರಮಝಾನಿಗೆ ತಯಾರಿ ನಡೆಸುತ್ತಿದ್ದರು ಎಂಬುದು ಹದೀಸ್‌ಗಳ ಅಧ್ಯಯನದಿಂದ ತಿಳಿದು ಬರುತ್ತದೆ.

ಉಪವಾಸ ವ್ರತದ ಮಹತ್ವ:
ಉಪವಾಸ ವ್ರತವು ಆತ್ಮಸಂಸ್ಕರಣೆಗೆ ಸಂಜೀವಿನಿಯಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಾಹನ ಸಂದೇಶವಾಹಕರು(ಸ) ತಿಳಿಸಿದ್ದಾರೆ,
“ಮಾನವನ ಪ್ರತಿಯೊಂದು ಕರ್ಮವೂ ಅವನಿಗಾಗಿರುತ್ತದೆ- ಉಪವಾಸ ವ್ರತದ ಹೊರತು; ಉಪವಾಸ ವ್ರತವು ನನಗಾಗಿದೆ ಮತ್ತು ನಾನೇ ಅದಕ್ಕೆ ಪ್ರತಿಫಲವನ್ನು ನೀಡುವೆನು ಎಂದು ಅಲ್ಲಾಹನು ಹೇಳಿದ್ದಾನೆ. ಅಲ್ಲದೆ ಉಪವಾಸ ವ್ರತವು ಒಂದು ಗುರಾಣಿಯಾಗಿದೆ. ಹಾಗಾಗಿ ನಿಮ್ಮ ಪೈಕಿ ಯಾರೂ ಉಪವಾಸದ ಸ್ಥಿತಿಯಲ್ಲಿ ಅಶ್ಲೀಲ ಮಾತುಗಳನ್ನಾಡದಿರಲಿ ಮತ್ತು ಗುಲ್ಲು-ಗದ್ದಲವನ್ನುಂಟು ಮಾಡದಿರಲಿ. ಎಲ್ಲಿಯವರೆಗೆಂದರೆ ಯಾರಾದರೂ ನಿಮ್ಮನ್ನು ಬೈದರೆ ಅಥವಾ ನಿಮ್ಮೊಂದಿಗೆ ಜಗಳಕ್ಕಿಳಿದರೆ, ನಾನು ಉಪವಾಸದಿಂದಿದ್ದೇನೆ ಎಂದು ಹೇಳಿಬಿಡಲಿ.” (ಮುತ್ತಫಕ್ ಅಲೈಹಿ)

ಉಪವಾಸ ವ್ರತವು ಮಾನವನ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ: ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಉಪವಾಸವಿರಿಸಿರಿ ಮತ್ತು ಆರೋಗ್ಯವಂತರಾಗಿರಿ.” (ತಬ್ರಾನಿ)

ಉಪವಾಸ ವ್ರತದ ಇನ್ನೊಂದು ಪ್ರಯೋಜನವು ಮಾನವ ಜೀವನದಲ್ಲಿ ಈ ರೀತಿ ವ್ಯಕ್ತವಾಗುತ್ತದೆ- ಉಪವಾಸಿಗನಲ್ಲಿ ಅಪಾರವಾದ ಸದ್ಗುಣಗಳು ಬೆಳೆದು ಬರುತ್ತವೆ: ಉದಾಹರಣೆಗೆ, ಅವನು ಸಹನೆಯ ಸಾಕಾರ ಮೂರ್ತಿಯಾಗುತ್ತಾನೆ, ಧರ್ಮನಿಷ್ಠೆ, ದೇವಭಯ, ಸಾವಧಾನತೆ ಮತ್ತು ಆತ್ಮ ನಿಯಂತ್ರಣವನ್ನು ಅಭ್ಯಾಸ ಮಾಡಿಕೊಳ್ಳುತ್ತಾನೆ. ದೈಹಿಕ ವಾಂಛೆಯನ್ನು ನಿಯಂತ್ರಿಸುತ್ತಾನೆ, ದೇಹೇಚ್ಛೆಗಳ ಗುಲಾಮತನದಿಂದ ಮುಕ್ತನಾಗುತ್ತಾನೆ.

ಉಪವಾಸ ವ್ರತದ ಉದ್ದೇಶ
ಅಲ್ಲಾಹ್ ಹೇಳುತ್ತಾನೆ, “ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ.” (ಪವಿತ್ರ ಕುರ್‌ಆನ್: 2: 183)

ವಾಸ್ತವದಲ್ಲಿ ಮಾನವನ ಚಿತ್ತದ ತರಬೇತಿಯಲ್ಲಿ ವಿಶೇಷವಾದ ಪ್ರಭಾವ ಬೀರುವಂತಹ ಕರ್ಮವೇ ಉಪವಾಸ ವ್ರತ. ಇದಕ್ಕೆ ಕುರ್‌ಆನ್‌ನಲ್ಲಿ ‘ಸೌಮ್’ ಎನ್ನಲಾಗಿದೆ. ಅರಬಿ ನಿಘಂಟುವಿನಲ್ಲಿ ಈ ಪದಕ್ಕೆ ‘ತಡೆಯುವುದು’ ಎಂಬ ಅರ್ಥವಿದೆ ಮತ್ತು ಶರಈ ಪಾರಿಭಾಷಿಕದಲ್ಲಿ ಅದಕ್ಕೆ ಅಲ್ಲಾಹನ ಆರಾಧನೆಯ ಸಂಕಲ್ಪದೊಂದಿಗೆ ಆಹಾರ-ಪಾನೀಯ ಮತ್ತು ಸಹಶಯನ ನಡೆಸುವುದರಿಂದ ತಡೆಯುವುದಾಗಿದೆ. ಈ ತಡೆದಿರಿಸುವಿಕೆಯು ಪ್ರಭಾತದಿಂದ ಪರದೋಷದ ತನಕ ಇರುವುದು.
ಪ್ರಸ್ತುತ ವಚನದಲ್ಲಿ ತಿಳಿಸಲಾದಂತೆ ಉಪವಾಸ ವ್ರತದ ಗಳಿಕೆಯೇ ತಕ್ವಾ (ಧರ್ಮನಿಷ್ಠೆ) ಆಗಿದೆ. ಅಂದರೆ ನೇರ ಮಾರ್ಗದಲ್ಲಿ ನಡೆಯಲಿಕ್ಕಿರುವ ದಾರಿವೆಚ್ಚ. ಈ ಧರ್ಮನಿಷ್ಠೆಯ ಬಂಧನದಲ್ಲಿ ತನ್ನನ್ನು ಬಿಗಿಸಿಕೊಂಡು ಚಿತ್ತಾಕಾಂಕ್ಷೆಯ ಅನುಸರಣೆಯಿಂದ ದೂರವಿರಿಸಿಕೊಂಡವನಿಗೆ ಯಶಸ್ಸು ಲಭಿಸುವುದು.

ಅಲ್ಲಾಹ್ ಹೇಳುತ್ತಾನೆ, “ತನ್ನ ಪ್ರಭುವಿನ ಮುಂದೆ ಹಾಜರಾಗಲಿಕ್ಕಿದೆಯೆಂದು ಭಯಪಡುತ್ತಿದ್ದವನಿಗೆ ಮತ್ತು ತನ್ನ ಚಿತ್ತದ ದುಷ್ಟ ಅಪೇಕ್ಷೆಗಳಿಂದ ತನ್ನನ್ನು ತಡೆದಿಟ್ಟುಕೊಂಡಿದ್ದವನಿಗೆ ಸ್ವರ್ಗವೇ ನಿವಾಸವಾಗುವುದು.” (ಪವಿತ್ರ ಕುರ್‌ಆನ್: 79: 40-41)

ಕೊಂಚ ಗಮನಿಸಿ ನೋಡಿ. ಮಾನವ ಜೀವನದಲ್ಲಿ ಇವೇ ಮೂರು ಆಗ್ರಹಾಕಾಂಕ್ಷೆಗಳು ಮೂಲಭೂತ ಸ್ಥಾನವನ್ನು ಹೊಂದಿವೆ. ಇವುಗಳಿಂದಲೇ ತನ್ನನ್ನು ತಡೆದಿರಿಸಿಕೊಳ್ಳುವುದರ ಹೆಸರು ಉಪವಾಸ ವ್ರತ. ಇವು ಆಕಾಂಕ್ಷೆಗಳಾಗಿರುವಂತೆಯೇ ಮೂಲಭೂತ ಅಗತ್ಯಗಳೂ ಆಗಿವೆ. ಮಾನವ ಜೀವ ಸಂಕುಲವು ಇವುಗಳನ್ನೇ ಆಧರಿಸಿಕೊಂಡಿದೆ.

ಆಹಾರ-ಪಾನೀಯವು ಜೀವನದ ಅಗತ್ಯಗಳಾದರೆ, ಲೈಂಗಿಕ ಸಂಪರ್ಕವು ಮಾನವಕುಲದ ಉಳಿಕೆಗೆ ಅನಿವಾರ್ಯವಾಗಿದೆ. ಆದ್ದರಿಂದಲೇ ಅಲ್ಲಾಹನು ಇವುಗಳಲ್ಲಿ ಅತ್ಯಧಿಕ ಶಕ್ತಿಯನ್ನು ಇರಿಸಿದ್ದಾನೆ. ಅಂತೆಯೇ ಈ ಮೂಲಭೂತ ಆಗ್ರಹಗಳನ್ನು ನಿಯಂತ್ರಿಸಲು ಮತ್ತು ಇವುಗಳಲ್ಲಿ ಸಮತೋಲನವನ್ನು ಉಂಟು ಮಾಡಲು ಅಲ್ಲಾಹನು ಉಪವಾಸ ವ್ರತವನ್ನು ಕಡ್ಡಾಯಗೊಳಿಸಿರುವನು.

ಆದರೆ ಈ ಉಪವಾಸ ವ್ರತವು ಎಣಿಕೆಯ ಕೆಲವೇ ದಿನಗಳ ಉಪವಾಸ ವ್ರತವಾಗಿರುವುದು (ಪವಿತ್ರ ಕುರ್‌ಆನ್: 2: 184) ಎಂದು ಅಲ್ಲಾಹನು ಹೇಳಿದ್ದಾನೆ. ಅಂದರೆ ರಮಝಾನ್ ತಿಂಗಳ 29 ಅಥವಾ 30 ದಿನಗಳ ಹಗಲಿನಲ್ಲಿ ಉಪವಾಸವಿರುವುದು. ಅದಕ್ಕೆ ಅಲ್ಲಾಹನು ಕೊಟ್ಟಿರುವ ಕಾರಣ ಈ ತಿಂಗಳಲ್ಲಿ ಪವಿತ್ರ ಕುರ್‌ಆನ್‌ನ ಅವತೀರ್ಣ ಆರಂಭವಾಗಿರುವುದಾಗಿದೆ.

“ಮಾನವರಿಗೆ ಸಾದ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಳಗೊಂಡಿರುವ `ಕುರ್‌ಆನ್’ ಅವತೀರ್ಣಗೊಂಡ ತಿಂಗಳು `ರಮಝಾನ್’ ಆಗಿರುತ್ತದೆ. ಆದುದರಿಂದ ಯಾವನಾದರೂ ಈ ತಿಂಗಳನ್ನು ಹೊಂದಿದಾಗ ಅವನು ಆ ಸಂಪೂರ್ಣ ತಿಂಗಳ ಉಪವಾಸ ವ್ರತವನ್ನಾಚರಿಸಬೇಕು.” (ಕುರ್‌ಆನ್: 2: 185)

ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಯಾರಾದರೂ ವಿಶ್ವಾಸದ ಸ್ಥಿತಿಯಲ್ಲಿ ಅಲ್ಲಾಹನಿಂದ ಪ್ರತಿಫಲ ಬಯಸಿ ರಮಝಾನಿನಲ್ಲಿ ಉಪವಾಸ ವ್ರತಾಚರಿಸಿದರೆ ಅವನ ಗತ ಪಾಪಗಳನ್ನು ಕ್ಷಮಿಸಲಾಗುವುದು.” (ಮುತ್ತಫಕ್ ಅಲೈಹಿ)

ಇನ್ನು ಉಪವಾಸವನ್ನು ಯಾವಾಗ ಆರಂಭಿಸುವುದು?
ರಮಝಾನಿನ ಬಾಲಚಂದ್ರನನ್ನು ನೋಡಿ ಉಪವಾಸವನ್ನು ಪ್ರಾರಂಭಿಸಬೇಕು. ಒಂದು ವೇಳೆ ರಮಝಾನಿನ ಚಂದ್ರ ದರ್ಶನವಾಗದಿದ್ದರೆ, ಶಅಬಾನಿನ ಮುವ್ವತ್ತು ದಿನಗಳನ್ನು ಪೂರ್ತೀಕರಿಸಬೇಕು; ಆ ಮೇಲೆ ಉಪವಾಸ ವ್ರತವನ್ನು ಆರಂಭಿಸಬೇಕು. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ರಮಝಾನ್‌ನ ಚಂದ್ರ ನೋಡದೆ ಉಪವಾಸವನ್ನು ಆರಂಭಿಸಬೇಡಿ ಮತ್ತು ಅದೇ ರೀತಿ ಚಂದ್ರದರ್ಶನವಾಗದೆ ಉಪವಾಸವನ್ನು ಕೊನೆಗೊಳಿಸಲೂ ಬೇಡಿರಿ. ಒಂದು ವೇಳೆ ಮೋಡವು ಆಚ್ಛಾದಿಸಿದ್ದರೆ ಮುವ್ವತ್ತು ದಿನಗಳನ್ನು ಪೂರ್ತಿಗೊಳಿಸಬೇಕು.” (ಮುತ್ತಫಕ್ ಅಲೈಹಿ)

ಪ್ರೌಢರಾಗಿರುವ, ಬುದ್ಧಿ ಇರುವ ಮತ್ತು ಉಪವಾಸ ವ್ರತಾಚರಿಸುವ ಶಕ್ತಿಯನ್ನು ಹೊಂದಿರುವ ಪ್ರತಿಯೊಬ್ಬ ಮುಸ್ಲಿಮ್ ಸ್ತ್ರೀ-ಪುರುಷರ ಮೇಲೆ ಉಪವಾಸ ವ್ರತವು ಕಡ್ಡಾಯವಾಗಿದೆ. ಅದೇ ವೇಳೆ ಸ್ತ್ರೀಯರು ಉಪವಾಸ ವ್ರತಾಚರಿಸಬೇಕಾದರೆ ಮುಟ್ಟು ಹಾಗೂ ಹೆರಿಗೆ ಸ್ರಾವದಿಂದ ಶುದ್ಧರಾಗಿರಬೇಕು. ಇನ್ನು ಮಕ್ಕಳ ಮೇಲೆ ಉಪವಾಸವು ಕಡ್ಡಾಯವಿಲ್ಲದಿದ್ದರೂ ಅವರು ಧೈರ್ಯ ವಹಿಸಿ ಉಪವಾಸವಿರಿಸಿದರೆ ಅವರಿಗೆ ಅದರ ಪ್ರತಿಫಲ ಖಂಡಿತ ದೊರೆಯುವುದು.

ಉಪವಾಸದ ವಿಧಿಗಳು
ಪ್ರಭಾತದಿಂದ ಸೂರ್ಯಾಸ್ತಮಾನದ ವರೆಗೆ ಆಹಾರ-ಪಾನೀಯ ಸೇವನೆ ಮತ್ತು ಉಪವಾಸ ಮುರಿಯುವಂತಹ ಇತರ ಎಲ್ಲ ವಸ್ತುಗಳಿಂದ ದೂರವಿರುವುದು.

ನಿಯ್ಯತ್. ಇತರ ಆರಾಧನೆಗಳಲ್ಲಿ ನಿಯ್ಯತ್ ಶರ್ತವಾಗಿರು ವಂತೆಯೇ ಉಪವಾಸ ವ್ರತಕ್ಕೂ ನಿಯ್ಯತ್ ಶರ್ತವಾಗಿದೆ. ನಿಯ್ಯತ್ ಎಂದರೆ ವ್ಯಕ್ತಿಯು ಅಲ್ಲಾಹನ ಆದೇಶದ ಪಾಲನೆ ಮತ್ತು ಅವನ ಸಂಪ್ರೀತಿಗಾಗಿ ಉಪವಾಸ ವ್ರತಾಚರಿಸುವ ಸಂಕಲ್ಪವನ್ನಿರಿಸುವುದು. ಸೂರ್ಯೋದಯಕ್ಕಿಂತ ಮುಂಚೆ ಪ್ರತಿ ದಿನವೂ ಇದರ ಸಂಕಲ್ಪ ಮಾಡುವುದು ಅಥವಾ ಮೊದಲ ದಿನದಿಂದಲೇ ಇಡೀ ತಿಂಗಳ ಸಂಕಲ್ಪ ಮಾಡುವುದು.

ಇನ್ನು ಉಪವಾಸ ವ್ರತದಲ್ಲಿ ಮೆಚ್ಚುಗೆಯ ಕಾರ್ಯಗಳು ಅಂದರೆ ಪ್ರವಾದಿವರ್ಯರು(ಸ) ಮೆಚ್ಚಿದ ಕಾರ್ಯಗಳು ಏನೆಂದು ಅರಿಯೋಣ.

ಇವುಗಳನ್ನು ಇಸ್ಲಾಮೀ ಪಾರಿಭಾಷಿಕದಲ್ಲಿ ‘ಮುಸ್ತಹಬ್’ ಎಂದು ಹೇಳಲಾಗುತ್ತದೆ.
1.ಸಹ್ರಿ ಉಣ್ಣುವುದು. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಸಹ್ರಿ ಉಣ್ಣಿರಿ. ಏಕೆಂದರೆ ಅದರಲ್ಲಿ ಸಮೃದ್ಧಿ ಇದೆ.” (ಮುತ್ತಫಕ್ ಅಲೈಹಿ)
ಸಹ್ರಿಯಲ್ಲಿ ಕೊನೆಯ ಸಮಯದ ತನಕ ವಿಳಂಬಿಸುವುದು ಮುಸ್ತಹಬ್ ಆಗಿದೆ. ಆದರೆ ಸಮಯವಾಯಿತೋ ಎಂದು ಸಂಶಯವಾಗುವಷ್ಟರ ಮಟ್ಟಿಗೆ ವಿಳಂಬ ಮಾಡುವುದು ತರವಲ್ಲ. ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು, “ಸಂಶಯವುಂಟಾಗುವುದಿದ್ದರೆ, ಆ ಸಮಯವನ್ನು ಬಿಟ್ಟು ಸಂಶಯವಾಗದ ಸಮಯವನ್ನು ಆಯ್ದುಕೊಳ್ಳಿರಿ.” (ಬುಖಾರಿ)

ಸಹ್ರಿ ಉಣ್ಣುವುದು ಅಗತ್ಯವಾಗಿದೆ. ಅದು ಸಣ್ಣ ಪ್ರಮಾಣದಲ್ಲಿದ್ದರೂ ಸರಿಯೇ. ಎಲ್ಲಿಯವರೆಗೆಂದರೆ, ಒಂದು ಗುಟುಕು ನೀರಾದರೂ ಸರಿ.
ಸೂರ್ಯಾಸ್ತವಾದ ಮೇಲೆ ಪಾರಣೆಗೆ ತ್ವರೆ ಮಾಡುವುದು. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಜನರು ಇಫ್ತಾರ್ ನಲ್ಲಿ ತ್ವರೆ ಮಾಡುತ್ತಿರುವಷ್ಟು ಕಾಲ ಅವರು ಕ್ಷೇಮದಿಂದಿರುತ್ತಾರೆ.”
(ಮುತ್ತಫಕ್ ಅಲೈಹಿ)

ತಾಜಾ ಖರ್ಜೂರ, ಉತ್ತುತ್ತೆ, ಹಾಲು, ನೀರು ಅಥವಾ ಲಭ್ಯವಿರುವ ಯಾವುದೇ ಆಹಾರದಿಂದಲೂ ಪಾರಣೆ ಮಾಡಬಹುದು. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ನಿಮ್ಮ ಪೈಕಿ ಯಾರಾದರೂ ಉಪವಾಸ ವ್ರತಾಚರಿಸಿದರೆ, ಅವನು ಖರ್ಜೂರದಿಂದ ಪಾರಣೆ ಮಾಡಲಿ. ಅದು ದೊರೆಯದಿದ್ದರೆ, ನೀರಿನಿಂದ ಪಾರಣೆ ಮಾಡಲಿ. ಏಕೆಂದರೆ ನೀರು ಪರಿಶುದ್ಧ ವಸ್ತುವಾಗಿದೆ.” (ಅಬೂದಾವೂದ್, ತಿರ್ಮಿದಿ, ಇಬ್ನು ಮಾಜಃ)

ಪಾರಣೆಯ ವೇಳೆ ಪ್ರಾರ್ಥಿಸುವುದು.                             ಅಲ್ಲಾಹನ ಸಂದೇಶವಾಹಕರು(ಸ) ಹೇಳಿದರು, “ಪಾರಣೆಯ ವೇಳೆ ಉಪವಾಸಿಗನ ಪ್ರಾರ್ಥನೆಯನ್ನು ರದ್ದುಗೊಳಿಸಲಾಗುವುದಿಲ್ಲ.” (ಇಬ್ನು ಮಾಜಃ)

ಈ ಸಂದರ್ಭದಲ್ಲಿ ಪಠಿಸಬೇಕಾದ ಪ್ರಾರ್ಥನೆಯು ಈ ರೀತಿ ಇದೆ, “ಓ ಅಲ್ಲಾಹ್! ನಾನು ನಿನಗಾಗಿ ಉಪವಾಸ ವ್ರತಾಚರಿಸಿದೆ ಮತ್ತು ನಿನ್ನ ಆಹಾರದಿಂದ ಪಾರಣೆ ಮಾಡಿದೆ.” (ಅಬೂದಾವೂದ್)
ಅದಾದ ಮೇಲೆ ಈ ರೀತಿಯೂ ಹೇಳಬೇಕು, “ದಾಹ ಇಂಗಿತು. ನರಗಳು ತೇವಗೊಂಡುವು. ಅಲ್ಲಾಹನಿಚ್ಛಿಸಿದರೆ ಪ್ರತಿ ಫಲವೂ ದೊರೆತೀತು.” (ಅಬೂದಾವೂದ್)

ತರಾವೀಹ್ / ತಹಜ್ಜುದ್ ಅನುಷ್ಠಾನಿಸುವುದು. ಅಲ್ಲಾಹನ ಸಂದೇಶವಾಹಕರು(ಸ) ಹೇಳುತ್ತಾರೆ, “ಯಾರಾದರೂ ಸತ್ಯವಿಶ್ವಾಸದ ಸ್ಥಿತಿಯಲ್ಲಿ ಮತ್ತು ಅಲ್ಲಾಹನಿಂದ ಪ್ರತಿಫಲದ ಸಂಕಲ್ಪದೊಂದಿಗೆ ರಮಝಾನಿನ ರಾತ್ರಿಗಳಲ್ಲಿ (ನಮಾಝ್‌ಗಾಗಿ) ನಿಂತರೆ ಅವನ ಗತ ಪಾಪಗಳು ಕ್ಷಮಿಸಲ್ಪಡುವುದು.” (ಮುತ್ತಫಕ್ ಅಲೈಹಿ)

ನೋಡಿ, ರಮಝಾನ್ ತಿಂಗಳಾರಂಭದಿಂದ ಮಸೀದಿಗಳು ನಮಾಝಿಗಳಿಂದ ತುಂಬಿಕೊಳ್ಳುತ್ತದೆ. ದಿನದ ಐದು ಹೊತ್ತಿನ ನಮಾಝ್‌ನ ಜೊತೆಗೆ ತರಾವೀಹ್‌ಗೂ ಬಹಳ ಮುತುವರ್ಜಿ ವಹಿಸಿ ಜನರು ಹಾಜರಾಗುತ್ತಾರೆ. ದಿನದ ಐದು ಹೊತ್ತು ನಮಾಝ್ ನಿರ್ವಹಿಸಬೇಕಾದುದು ಪ್ರತಿಯೋರ್ವ ಮುಸ್ಲಿಮನ ಮೇಲೆ ಕಡ್ಡಾಯವಾಗಿದೆ. ಅದಕ್ಕೆ ರಮಝಾನ್ ಮತ್ತು ಇತರ ತಿಂಗಳು ಎಂಬ ಬೇಧವಿಲ್ಲ. ಜೀವನ ಪೂರ್ತಿ ಅದು ಕಡ್ಡಾಯವೇ. ಅಷ್ಟೇ ಅಲ್ಲ, ನಮಾಝನ್ನು ತೊರೆಯುವವನು ಸತ್ಯವಿಶ್ವಾಸಿಯಲ್ಲ ವೆಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ. ಹೀಗೆ ನಮಾಝ್ ಒಂದನ್ನು ನಾವು ಸಂಸ್ಥಾಪಿಸಿದರೆ, ಉಳಿದೆಲ್ಲ ಸತ್ಕರ್ಮಗಳು ತನ್ನಿಂತಾನೇ ನಮ್ಮಿಂದ ನಡೆದು ಹೋಗುತ್ತದೆ.

ಹಾಗೆಯೇ ಅನುಗ್ರಹ, ಸಮೃದ್ಧಿಯ ತಿಂಗಳಾದ ರಮಝಾನಿನಲ್ಲಿ ಪ್ರಾರ್ಥನೆಯಲ್ಲಿ ಹೆಚ್ಚೆಚ್ಚು ಆಸ್ಥೆ ವಹಿಸಿದರೆ ಪ್ರಾರ್ಥಿಸಿದವರಿಗೇ ಉತ್ತಮವೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಷ್ಟೇ. ಆದ್ದರಿಂದ ರಮಝಾನ್ ತಿಂಗಳಲ್ಲಿ ನಾವು ನಮಾಝ್ ಮತ್ತು ಪ್ರಾರ್ಥನೆಗಳಲ್ಲಿ ಹೆಚ್ಚೆಚ್ಚು ತೊಡಗಿಕೊಳ್ಳಬೇಕಾಗಿದೆ. ಜೀವನಾಧಾರ ಗಳಿಸಲು ಪರಿಶ್ರಮ ಪಡುತ್ತಿರುವುದರ ನಡುವೆ ನಮಾಝ್ ಮತ್ತು ಪ್ರಾರ್ಥನೆಗೆ ಹೆಚ್ಚು ಸಮಯವನ್ನು ನೀಡಲು ಕಷ್ಟವೆನಿಸುವುದಾದರೆ ನಮ್ಮ ಉದ್ಯೋಗ, ವ್ಯಾಪಾರ ವಹಿವಾಟುಗಳ ವೇಳಾಪಟ್ಟಿಯಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಮಾಡಬೇಕಾಗಿದೆ. ಆ ಮೂಲಕ ರಮಝಾನ್ ತಿಂಗಳಲ್ಲಿ ಕಡ್ಡಾಯ ಕರ್ಮಗಳಷ್ಟು ಪುಣ್ಯ ಫಲ ದೊರೆಯಬಹುದಾದಂತಹ ಐಚ್ಛಿಕ ಕರ್ಮಗಳನ್ನೆಸಗಲು ಹೆಚ್ಚಿನ ಸಮಯ ವಿನಿಯೋಗಿಸಲು ಸಾಧ್ಯವಾಗುತ್ತದೆ.

ನೆನಪಿಡಿ, ಐಚ್ಛಿಕ ಕರ್ಮಗಳ ಪೈಕಿ ನಮಾಝ್ ಮತ್ತು ಪ್ರಾರ್ಥನೆಗಳಷ್ಟು ಸುಲಭವಾದ ಕರ್ಮ ಬಹುಶಃ ಬೇರೆ ಇಲ್ಲ.

ಸಾಧ್ಯವಾದರೆ ರಮಝಾನ್ ತಿಂಗಳಲ್ಲಿ ಇಅï‌ತಿಕಾಫ್ (ತಪಶ್ಚರ್ಯೆಗೆ) ಕುಳಿತು ಕೊಳ್ಳುವುದು ಬಹಳ ಉತ್ತಮ. ವಿಶೇಷತಃ ರಮಝಾನಿನ ಕೊನೆಯ ಹತ್ತರಲ್ಲಿ. “ಅಲ್ಲಾಹನ ಸಂದೇಶವಾಹಕರು(ಸ) ರಮಝಾನಿನ ಕೊನೆಯ ಹತ್ತರಲ್ಲಿ ಟೊಂಕ ಕಟ್ಟಿಕೊಳ್ಳುತ್ತಿದ್ದರು ಮತ್ತು ರಾತ್ರಿ ಜಾಗರಣೆಯ ವ್ಯವಸ್ಥೆಯನ್ನೂ ಮಾಡುತ್ತಿದ್ದರು ಹಾಗೂ ತಮ್ಮ ಮನೆಯವರನ್ನೂ ಎಬ್ಬಿಸುತ್ತಿದ್ದರು.” (ಮುತ್ತಫಕ್ ಅಲೈಹಿ)

ಇಷ್ಟಾಗಿಯೂ ಅಲ್ಲಾಹ್ ಮಾನವರ ಮೇಲೆ ಕಷ್ಟವನ್ನು ಹೇರಲು ಇಷ್ಟಪಡುವುದಿಲ್ಲ. ಬದಲಾಗಿ ಸೌಲಭ್ಯವನ್ನು ನೀಡಲು ಇಚ್ಛಿಸುತ್ತಾನೆ.
“ಯಾವನಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣಿಕನಾಗಿದ್ದರೆ ಆತನು ಇತರ ದಿನಗಳಲ್ಲಿ ಉಪವಾಸ ದಿನಗಳ ಸಂಖ್ಯೆಯನ್ನು ಪೂರ್ತಿಗೊಳಿಸಬೇಕು. ಅಲ್ಲಾಹನು ನಿಮಗೆ ಸೌಲಭ್ಯವನ್ನೀಯಲು ಬಯಸುತ್ತಾನೆ; ನಿಮ್ಮನ್ನು ಕಷ್ಟಕ್ಕೀಡು ಮಾಡಲು ಇಚ್ಛಿಸುವುದಿಲ್ಲ. ನೀವು ಉಪವಾಸದ ಸಂಖ್ಯೆಯನ್ನು ಪೂರ್ತಿಗೊಳಿಸಲು ಅನುಕೂಲವಾಗುವಂತೆಯೂ, ಸನ್ಮಾರ್ಗದರ್ಶನದ ಮೂಲಕ ನಿಮ್ಮನ್ನು ಪ್ರತಿಷ್ಠಿತಗೊಳಿಸಿದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾ ಅವನಿಗೆ ಕೃತಜ್ಞರಾಗಿರಲಿಕ್ಕಾಗಿಯೂ ಈ ವಿಧಾನವನ್ನು ತೋರಿಸಿ ಕೊಡಲಾಗಿದೆ.” (ಪವಿತ್ರ ಕುರ್‌ಆನ್: 2: 185)

ಒಟ್ಟಿನಲ್ಲಿ ಉಪವಾಸ ವ್ರತದ ಮೂಲಕ ನಮ್ಮಲ್ಲಿ ಅಲ್ಲಾಹನ ಬಗ್ಗೆ ಕೃತಜ್ಞತಾ ಭಾವ ಮೂಡುತ್ತದೆ. ಹಗಲಿನ ಹಸಿವು, ದಾಹವು ಸಹನಾ ಶಕ್ತಿಯನ್ನು ಬೆಳೆಸುತ್ತದೆ. ಇತರ ತಿಂಗಳಿಗೆ ಹೋಲಿಸಿದರೆ ರಮಝಾನ್ ತಿಂಗಳಲ್ಲಿ ಪುಣ್ಯ ಕರ್ಮಗಳಿಗೆ ಹೆಚ್ಚು ಪ್ರತಿಫಲ ಸಿಗುವ ಭರವಸೆಯು ಹೆಚ್ಚೆಚ್ಚು ಪುಣ್ಯ ಕರ್ಮಗಳನ್ನು ಎಸಗಲು ಪ್ರೇರೇಪಿಸುತ್ತದೆ. ಉಪವಾಸ ವ್ರತವು ಇಡೀ ದಿನದ ಆರಾಧನೆಯಾಗಿರುವ ಕಾರಣ ಕೆಡುಕುಗಳನ್ನೆಸಗುವುದರಿಂದ ನಮ್ಮನ್ನು ತಡೆಯುತ್ತದೆ ಮತ್ತು ಒಳಿತಿನ ಕಾರ್ಯಗಳಲ್ಲಿ ಹೆಚ್ಚೆಚ್ಚು ಆಸಕ್ತಿಯನ್ನು ಬೆಳೆಸುತ್ತದೆ. ಅಲ್ಲಾಹ್ ನಮ್ಮೆಲ್ಲರನ್ನೂ ಅನುಗ್ರಹಿಸಲಿ.

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *