Home / ಪ್ರಶ್ನೋತ್ತರ / ಇಸ್ಲಾಮಿನಲ್ಲಿ ಸ್ತ್ರೀ-ಪುರುಷ ಸಮಾನತೆಯಿದೆಯೇ? ಸ್ತ್ರೀಯರ ಸ್ಥಾನ ಪುರುಷರಿಗಿಂತ ಬಹಳ ಕೆಳಗಿದೆಯಲ್ಲವೇ?

ಇಸ್ಲಾಮಿನಲ್ಲಿ ಸ್ತ್ರೀ-ಪುರುಷ ಸಮಾನತೆಯಿದೆಯೇ? ಸ್ತ್ರೀಯರ ಸ್ಥಾನ ಪುರುಷರಿಗಿಂತ ಬಹಳ ಕೆಳಗಿದೆಯಲ್ಲವೇ?

ಮನುಷ್ಯರು ಹಲವು ರೀತಿಯಲ್ಲಿದ್ದಾರೆ. ಮಾನವನ ಗತಿಗನುಗುಣವಾಗಿ ಅವರ ಸ್ಥಾನಮಾನಗಳಲ್ಲೂ, ಹಕ್ಕುಬಾಧ್ಯತೆಯಲ್ಲೂ ವ್ಯತ್ಯಾಸವಿರಿಸುವುದು ಸ್ವಾಭಾವಿಕ ಮಾತ್ರವಲ್ಲ ಅನಿವಾರ್ಯವೂ ಹೌದು. ಅದೇ ರೀತಿ ಸ್ತ್ರೀ-ಪುರುಷರ ನಡುವೆ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಬಹಳ ಅಂತರವಿದೆ. ಪುರುಷರು ಎಷ್ಟೇ ಶ್ರಮಿಸಿದರೂ ಗರ್ಭಧರಿಸಲು, ಹೆರಲು, ಎದೆ ಹಾಲುಣಿಸಲು ಸಾಧ್ಯವಿಲ್ಲವಲ್ಲಾ? ಮಹಿಳೆ ಪುರುಷರಿಗಿಂತ ಭಿನ್ನವಾಗಿ ತಿಂಗಳ ನಿಶ್ಚಿತ ದಿನಗಳಲ್ಲಿ ಆರ್ತವ ಹಾಗೂ ಅದರ ದೈಹಿಕ ಮಾನಸಿಕ ಸಮಸ್ಯೆಗಳನ್ನು ಅನುಭವಿಸುತ್ತಾಳೆ. ಪುರುಷನು ಸ್ತ್ರೀಗಿಂತ ಬಲಶಾಲಿಯೂ, ಶಕ್ತಿ ಸಾಮರ್ಥ್ಯವುಳ್ಳವನೂ ಆಗಿದ್ದು ಕಷ್ಟಕರ ಕೆಲಸಗಳನ್ನು ಮಾಡಲು ಸಮರ್ಥನಾಗಿದ್ದಾನೆ.

ಪುರುಷನ ಎಲ್ಲ ಶಾರೀರಿಕ ಅವಯವಗಳು ಸ್ತ್ರೀಗಿಂತ ಸಂಪೂರ್ಣ ಭಿನ್ನವಾಗಿದೆ. ಪ್ರಸಿದ್ಧ ಶರೀರ ಶಾಸ್ತ್ರಜ್ಞರಾದ ಹಾವಿಲೋಕ್ ಎಲ್ಲಿಸ್ ಹೇಳುತ್ತಾರೆ: ‘ಪುರುಷನು ಅವನ ಕೈಬೆರಳ ತುದಿಯವರೆಗೆ ಪುರುಷನಾಗಿದ್ದಾನೆ. ಮಹಿಳೆ ಆಕೆಯ ಕಾಲುಬೆರಳಿನ ತುದಿಯವರೆಗೆ ಸ್ತ್ರೀಯೇ ಆಗಿದ್ದಾಳೆ.’

ಶಾರೀರಿಕ ಘಟಕಗಳ ಅಂತರವು ಮಾನಸಿಕ ಹಾಗೂ ವೈಚಾರಿಕತೆಯಲ್ಲೂ ಗೋಚರಿಸುತ್ತದೆ. ಆದ್ದರಿಂದ ಸ್ತ್ರೀ-ಪುರುಷರ ನಡುವೆ ದೈಹಿಕ, ಮಾನಸಿಕವೂ ಆದ ಸಮಾನತೆ ಖಂಡಿತ ಇಲ್ಲ, ಆದ್ದರಿಂದ ಸ್ತ್ರೀ-ಪರುಷ ಸಮಾನತೆ ಎಂಬುದು ಅಪ್ರಾಯೋಗಿಕ ಮತ್ತು ಪ್ರಕೃತಿ ವಿರುದ್ಧವಾಗಿದೆ.

ಇಸ್ಲಾಮ್ ಎಂಬುದು ಮಾನವ ಸಮೂಹದ ಸೃಷ್ಟಿಕರ್ತನೂ, ಸಂರಕ್ಷಕನೂ ಆದ ದೇವನು ನೀಡಿದ ಜೀವನ ವ್ಯವಸ್ಥೆಯಾಗಿದೆ. ಆದ್ದರಿಂದ ಅದು ಮಾನವ ಪ್ರಕೃತಿಗೆ ಯೋಗ್ಯವೂ, ಹೊಂದಿಕೊಳ್ಳುವಂತಹದ್ದೂ ಆಗಿದೆ. ಇಸ್ಲಾಮ್ ಧರ್ಮ ಸ್ತ್ರೀ-ಪುರುಷರನ್ನು ಹಕ್ಕು ಬಾಧ್ಯತೆಗಳಿಗಾಗಿ ಹೋರಾಡುವ ಶತ್ರುಗಳಂತೆ ನೋಡುವುದಿಲ್ಲ. ಒಂದೇ ವರ್ಗದ ಅನ್ನೋನ್ಯವಾಗಿ ಪರಸ್ಪರ ಸಹಕರಿಸುತ್ತಾ ಜೀವನ ಸಾಗಿಸಬೇಕಾದ ಎರಡು ಸದಸ್ಯರೆಂದು ತಿಳಿಸಿದೆ.

ಅಲ್ಲಾಹನು ಹೇಳುತ್ತಾನೆ: “ನೀವೆಲ್ಲರೂ ಒಂದೇ ವರ್ಗಕ್ಕೆ ಸೇರಿದವರಾಗಿದ್ದೀರಿ.’ (ಪವಿತ್ರ ಕುರ್‌ಆನ್ 4: 25)

ಪ್ರವಾದಿಯವರು ಹೇಳಿದರು. ‘ಸ್ತ್ರೀಯರು ಪುರುಷರ ಭಾಗವಾಗಿದ್ದಾರೆ.'(ಅಬೂದಾವೂದ್)

ಆದ್ದರಿಂದ ಸ್ತ್ರೀ-ಪುರುಷರ ಸ್ಥಾನಮಾನಗಳನ್ನು ಗಣಿತ ಶಾಸ್ತ್ರದ ರೀತಿಯಲ್ಲಿ ಅರ್ಥೈಸಲು ಸಾಧ್ಯವಿಲ್ಲ. ಕೆಲವು ವಿಷಯಗಳಲ್ಲಿ ಪುರುಷರಿಗೆ ಪ್ರಾಧಾನ್ಯತೆಯಿದ್ದರೆ, ಇನ್ನು ಕೆಲವು ವಿಷಯಗಳಲ್ಲಿ ಮಹಿಳೆ ಮೇಲುಗೈ ಪಡೆಯುತ್ತಾಳೆ. ಇದಕ್ಕೆ ಸಂಬಂಧಿಸಿದ ಇಸ್ಲಾಮಿನ ಕೆಲವು ದೃಷ್ಟಿಕೋನಗಳು ಹೀಗಿವೆ:

1. ಅಲ್ಲಾಹನ ಬಳಿ ಸ್ತ್ರೀ-ಪುರುಷರ ನಡುವೆ ಯಾವುದೇ ಅಂತರವೋ, ತಾರತಮ್ಯವೋ ಇಲ್ಲ. ಅವರಿಗೆ ಸಂಪೂರ್ಣ ಸಮಾನತೆಯನ್ನು ನೀಡಲಾಗಿದೆ.
‘ಪುರುಷನಾಗಿರಲಿ ಸ್ತ್ರೀ ಆಗಿರಲಿ ಯಾರು ಸತ್ಕರ್ಮವೆಸಗುವನೋ ಅವನು ಸತ್ಯವಿಶ್ವಾಸಿಯಾಗಿದ್ದರೆ ಅವನಿಗೆ ನಾವು ಇಹಲೋಕದಲ್ಲಿ ಪರಿಶುದ್ಧ ಜೀವನವನ್ನು ದಯಪಾಲಿಸುವೆವು. ಮತ್ತು ಇಂತಹವರಿಗೆ ಪರಲೋಕದಲ್ಲಿ ಅವರ ಕರ್ಮಗಳಿಗನುಸಾರ ಪ್ರತಿಫಲ ನೀಡುತ್ತೇವೆ.’ (ಪವಿತ್ರ ಕುರ್ ಆನ್ 16: 97)

‘ಪುರುಷನಿರಲಿ, ಸ್ತ್ರೀ ಇರಲಿ ಸತ್ಕರ್ಮವೆಸಗಿದವನು ಸತ್ಯವಿಶ್ವಾಸಿಯಾಗಿದ್ದರೆ ಇಂತಹವರೆಲ್ಲರೂ ಸ್ವರ್ಗ ಪ್ರವೇಶಿಸುವರು.’ (ಪವಿತ್ರ ಕುರ್ ಆನ್ 40: 40)

‘ಅವರ ಪ್ರಭು ಹೇಳಿದನು: ಪುರುಷರಾಗಲಿ ಸ್ತ್ರೀಯರಾಗಲಿ, ನಿಮ್ಮಲ್ಲಿ ಯಾರೊಬ್ಬನ ಕರ್ಮವನ್ನೂ ಅವನು ನಿಪ್ಪಲಗೊಳಿಸುವವನಲ್ಲ, ನೀವೆಲ್ಲ ಒಂದೇ ವರ್ಗದವರು.’ (ಪವಿತ್ರ ಕುರ್‌ ಆನ್ 3:195)

2. ಭೂಮಿಯಲ್ಲಿ ಅತ್ಯಧಿಕ ಗೌರವಿಸಲ್ಪಡಲು ಅರ್ಹಳಾದವಳು ಸ್ತ್ರೀಯಾಗಿದ್ದಾಳೆ. ಮಾತೃತ್ವದಂತೆ ಮಹತ್ವವಿರುವ ಸ್ಥಾನ ಭೂಮಿಯಲ್ಲಿ ಇಲ್ಲ. ಆಕೆ ತಲೆಮಾರುಗಳಿಗೆ ಜನ್ಮ ನೀಡುತ್ತಾಳೆ. ಆಕೆಯೇ ಮಾದಲ ಗುರುವೂ ಆಗಿದ್ದಾಳೆ. ಮನುಷ್ಯರ ಜನನದಲ್ಲೂ ಅವರನ್ನು ಬೆಳೆಸುವಲ್ಲೂ ಹೆಚ್ಚು ಪ್ರಯಾಸವನ್ನು ಅನುಭವಿಸುವವಳು ತಾಯಿಯೇ ಆಗಿದ್ದಾಳೆ. ಆದ್ದರಿಂದ ಮಾನವರು ಹೆಚ್ಚು ಗೌರವಿಸಬೇಕಾದುದು ಆಕೆಯನ್ನೇ ಆಗಿದೆ.

ಓರ್ವರು ಪ್ರವಾದಿ(ಸ)ಯವರೊಡನೆ ಕೇಳಿದರು: ‘ಪ್ರವಾದಿಗಳೇ, ನನ್ನ ಅತ್ಯಧಿಕ ಸದ್ವರ್ತನೆಗೆ ಅರ್ಹರು ಯಾರು? ಪ್ರವಾದಿ(ಸ) ಹೇಳಿದರು: ನಿನ್ನ ತಾಯಿ, ಆ ವ್ಯಕ್ತಿ ಪುನಃ ಕೇಳಿದರು- ನಂತರ ಯಾರು? ಪ್ರವಾದಿಯವರು ಹೇಳಿದರು: ನಿನ್ನ ತಾಯಿ. ಆತ ಪುನಃ ಪ್ರಶ್ನಿಸಿದರು: ‘ಆ ಬಳಿಕ ಯಾರು? ಪ್ರವಾದಿಯವರು ಹೇಳಿದರು: ನಿನ್ನ ತಾಯಿಯೇ. ಆತ ‘ನಂತರ ಯಾರು?’ ಎಂದು ಕೇಳಿದಾಗ ಪ್ರವಾದಿಯವರು ಹೇಳಿದರು: ನಿನ್ನ ತಂದೆ’ ( ಬುಖಾರಿ, ಮುಸ್ಲಿಮ್)

ಪವಿತ್ರ ಕುರ್‌ಆನ್‌ ಹೆತ್ತವರ ಕುರಿತು ಪರಾಮರ್ಶಿಸಿದ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ತಾಯಿಗೆ ಹೆಚ್ಚು ಒತ್ತು ನೀಡಿದೆ ‘ಮಾನವನಿಗೆ ತನ್ನ ಮಾತಾಪಿತರ ಹಕ್ಕನ್ನು ತಿಳಿದುಕೊಳ್ಳಲು ನಾವೇ ತಾಕೀತು ಮಾಡಿರುತ್ತೇವೆ, ಅವನ ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ಅವನನ್ನು ತನ್ನ ಗರ್ಭದಲ್ಲಿರಿಸಿದಳು ಮತ್ತು ಅವನ ಸ್ತನಪಾನ ಬಿಡುವುದರಲ್ಲಿ ಎರಡು ವರ್ಷಗಳು ತಗಲಿದವು.” (31:14)

‘ತನ್ನ ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ನಾವು ಮಾನವನಿಗೆ ಆದೇಶಿಸಿದೆವು. ತಾಯಿಯು ಬಹಳ ಕಷ್ಟಪಟ್ಟು ಗರ್ಭದಲ್ಲಿರಿಸಿದಳು ಮತ್ತು ಕಷ್ಟಪಟ್ಟೇ ಹೆತ್ತಳು, ಅವನ ಗರ್ಭಾವಧಿಯಲ್ಲಿ ಮತ್ತು ಮೊಲೆ ಹಾಲು ಬಿಡಿಸುವುದರಲ್ಲಿ ಮೂವತ್ತು ತಿಂಗಳುಗಳು ತಗಲಿದವು.’ (46:19)
ಇದರಿಂದ ಇಸ್ಲಾಮೀ ದೃಷ್ಟಿಕೋನದಲ್ಲಿ ಪ್ರಥಮ ಸ್ಥಾನವೂ ಪರಿಗಣನೆಯೂ ಮಾತೆಯಂಬ ಸ್ತ್ರೀಗೆ ಲಭಿಸುತ್ತದೆ.

3. ಪುರುಷರಿಗಿಂತಲೂ ವಿವೇಕಯುತ ಹಾಗೂ ಯುಕ್ತಿಪೂರ್ಣವಾದ ತೀರ್ಮಾನವನ್ನು ತೆಗೆದುಕೊಳ್ಳಲು ಸಾಮರ್ಥ್ಯವಿರುವ ಮಹಿಳೆಯರಿರುತ್ತಾರೆಂದು ಕುರ್‌ ಆನ್ ಉಲ್ಲೇಖಿಸಿದ ಸಬಾದ ರಾಣಿಯ ಚರಿತ್ರೆಯಿಂದ ನಿಸ್ಸಂಶಯವಾಗಿ ತಿಳಿದುಕೊಳ್ಳಬಹುದು. ಪ್ರವಾದಿ ಸುಲೈಮಾನ್(ರ)ರ ಸಂದೇಶ ದೊರೆತಾಗ ಸಬಾದ ರಾಣಿ ಆಸ್ಥಾನದವರೊಂದಿಗೆ ಸಮಾಲೋಚಿಸಿದರು. ಆದರೆ ಸ್ಪಷ್ಟ ಹಾಗೂ ಸೂಕ್ತವಾದ ತೀರ್ಮಾನವನ್ನು ಕೈಗೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಪಕ್ವವಾದ ತೀರ್ಮಾನ ಸಬಾದ ರಾಣಿಯಿಂದ ಸಾಧ್ಯವಾಯಿತೆಂದು ಕುರ್‌ಆನ್‌ ಸ್ಪಷ್ಟಪಡಿಸಿದೆ. (27: 29, 44)

4. ಮೊದಲ ಪಾಪ ಕರ್ಮಕ್ಕೆ ಮಹಿಳೆ ಕಾರಣ ಎಂದು ಯಹೂದಿ-ಕ್ರೈಸ್ತರ ವಾದವನ್ನು ಇಸ್ಲಾಮ್ ಸ್ಪಷ್ಟವಾಗಿ ನಿರಾಕರಿಸುತ್ತದೆ. ದೇವಾದೇಶವನ್ನು ಉಲ್ಲಂಘಿಸಿ ನಿಷೇಧಿತ ಹಣ್ಣನ್ನು ತಿಂದ ಆರೋಪವನ್ನು ಕು‌ರ್ ಆನ್ ಮುಖ್ಯವಾಗಿ ಆದಮ್ (ಅ) ರ ಮೇಲೆ ಹೊರಿಸಿದೆ. ಹವ್ವಾರ ಮೇಲಲ್ಲ. ‘ಹೀಗೆ ಆದಮ್ ಮತ್ತು ಪತ್ನಿಯೂ ಆ ವೃಕ್ಷದ ಫಲವನ್ನು ತಿಂದುಬಿಟ್ಟರು. ಪರಿಣಾಮವಾಗಿ ತಕ್ಷಣವೇ ಅವರ ಗುಪ್ತಾಂಗಗಳು ಪರಸ್ಪರರಿಗೆ ಗೋಚರವಾದವು. ಇಬ್ಬರೂ ತಮ್ಮನ್ನು ಸ್ವರ್ಗದ ಎಲೆಗಳಿಂದ ಮರೆಸತೊಡಗಿದರು. ಆದಮ್ ತಮ್ಮ ಪ್ರಭುವಿನ ಆಜ್ಞೋಲಂಘನೆ ಮಾಡಿದರು ಮತ್ತು ಸನಾರ್ಗ ಭ್ರಷ್ಟರಾದರು. ಅನಂತರ ಅವರ ಪ್ರಭು ಅವರನ್ನು ಪುನೀತಗೊಳಿಸಿದನು. ಅವರ ಪಶ್ಚಾತಾಪವನ್ನು ಸ್ವೀಕರಿಸಿದನು. ಅವರಿಗೆ ಸನ್ಮಾರ್ಗ ದರ್ಶನ ಮಾಡಿದನು.’ (20:121-122)

‘ನಾವು ಇದಕ್ಕೆ ಮುಂಚೆ ಆದಮರಿಗೊಂದು ಅಪ್ಪಣೆ ಕೊಟ್ಟಿದ್ದೆವು. ಆದರೆ ಅವರು ಮರೆತು ಬಿಟ್ಟರು. ಮತ್ತು ನಾವು ಅವರಲ್ಲಿ ಸ್ಥಿರಚಿತ್ತತೆಯನ್ನು ಕಾಣಲಿಲ್ಲ.’ (20:115) ಆದಿ ಪಾಪಕ್ಕೆ ಮಹಿಳೆಯೇ ಕಾರಣವೆಂಬ ಪರಂಪರಾಗತ ಆರೋಪವನ್ನು ಕುರ್ ಆನ್ ತಿದ್ದುತ್ತದೆ.

5. ಮಹಿಳೆಯನ್ನು ಭೋಗದ ವಸ್ತುವಾಗಿ ಪರಿಗಣಿಸುವ ಸಮಾಜವು ಆಕೆಯನ್ನು ತೀವ್ರವಾಗಿ ಶೋಷಣೆಗೊಳಪಡಿಸುತ್ತದೆ. ಮಾತ್ರವಲ್ಲ ಹೆಣ್ಣು ಶಿಶುಗಳನ್ನು ಕ್ರೂರವಾಗಿ ಕೊಲ್ಲುವುದೂ ಇದೆ. ಆಧುನಿಕ ಸಮಾಜದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ವಿಷಯದಲ್ಲಿ ತಮಿತಮಿಳ್ನಾಡು ದೇಶದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಅಲ್ಲಿನ ಸೇಲಂ ಜಿಲ್ಲೆಯ ಉಶಿಲಾಂಪೆಟ್ಟಿ ಶಿಶು ಹತ್ಯೆಗೆ ಪ್ರಸಿದ್ಧವಾಗಿದೆ. ಜನಸಿದ ಮಗು ಹೆಣ್ಣೆಂದು ಅರಿತರೆ ಗಂಡನು ನೋಡಲು ಬರುವುದಿಲ್ಲ, ಕೊಂದ ಬಳಿಕವೇ ಬಾ ಎಂಬ ಉತ್ತರ ಬರುತ್ತದೆ. ಆದ್ದರಿಂದ ಆಕೆಯ ಮನೆಯವರು ಮಗುವಿನ ಕಥೆ ಮುಗಿಸಿದ ಬಳಿಕವೇ ಆಕೆಯನ್ನು ಪತಿ ಗೃಹಕ್ಕೆ ಕರೆದೊಯ್ಯುತ್ತಾರೆ. ಹೆಣ್ಣು ಮಗುವನ್ನು ಭ್ರೂಣದಲ್ಲೇ ಚಿವುಟಿ ಹಾಕುವ ಕೃತ್ಯ ಇತರ ದೇಶಗಳಂತೆ ಭಾರತದಲ್ಲೂ ವ್ಯಾಪಕವಾಗಿದೆ. ಭಾರತದಲ್ಲಿ ಒಂದು ವರ್ಷದಲ್ಲಿ 50 ಲಕ್ಷ ಹೆಣ್ಣು ಭ್ರೂಣಗಳನ್ನು ಕೊಲ್ಲಲಾಗುತ್ತಿದೆಯೆಂದು ಭಾರತೀಯ ಮೆಡಿಕಲ್ ಅಸೋಸಿಯೇಶನ್‌ನ ಪದಾಧಿಕಾರಿಗಳು ಸ್ಪಷ್ಟಪಡಿಸುತ್ತಾರೆ. 20 ಲಕ್ಷವೆಂದು ಅಧಿಕೃತ ದಾಖಲೆಗಳು ಸೂಚಿಸುತ್ತವೆ.

ಈ ಕ್ರೂರ ಹತ್ಯೆಯು ಪ್ರವಾದಿ ಮುಹಮ್ಮದ್(ಸ)ರ ಆಗಮನದ ಕಾಲದಲ್ಲಿ ಅರೇಬಿಯಾದ ಹಲವು ಗೋತ್ರಗಳಲ್ಲಿ ವ್ಯಾಪಕವಾಗಿತ್ತು. ಪವಿತ್ರ ಕುರ್ ಆನ್ ಹೇಳುತ್ತದೆ : ‘ಇವರ ಪೈಕಿ ಯಾರಿಗಾದರೂ ಮಗಳು ಹುಟ್ಟಿದ ಸುವಾರ್ತೆಕೊಟ್ಟಾಗ ಅವನ ಮುಖ ಕಳೆಗುಂದಿ ಹೋಗುತ್ತದೆ ಮತ್ತು ಅವನು ಸಿಡಿಮಿಡಿಗೊಳ್ಳುತ್ತಾನೆ. ಈ ಅಶುಭ ವಾರ್ತೆಯ ಬಳಿಕ ಯಾರಿಗೂ ಮುಖ ತೋರಿಸಲಾಗದೆ ಜನರಿಂದ ತಲೆಮರೆಸಿಕೊಳ್ಳುತ್ತಾನೆ. ಈ ಅಪಮಾನದೊಂದಿಗೆ ಮಗುವನ್ನಿರಿಸಿಕೊಳ್ಳಲೇ ಅಥವಾ ಮಣ್ಣಿನಲ್ಲಿ ಹುಗಿದು ಬಿಡಲೇ ಎಂದು ಯೋಚಿಸುತ್ತಾನೆ.’ (ಪವಿತ್ರ ಕುರ್‌ಆನ್ 16:58-59)

ಇಸ್ಲಾಮ್ ಇದನ್ನು ನಿಷೇಧಿಸಿ ಮಹಾ ಪಾಪವೆಂದು ಸಾರಿತು. ‘ಜೀವಂತ ಹೂಳಲ್ಪಟ್ಟ ಹೆಣ್ಣು ಮಗುವಿನೊಡನೆ ಕೇಳಲಾಗುವಾಗ, ಯಾವ ತಪ್ಪಿಗಾಗಿ ಅವಳನ್ನು ಕೊಲ್ಲಲಾಯಯಿತೆಂದು’ ವಿಚಾರಣೆಗೊಳಗಾಗುವ ದಿನದ ಎಚ್ಚರಿಕೆ ನೀಡಿತು. (ಪವಿತ್ರ ಕುರ್ ಆನ್ 81: 8-9)
ಹೀಗೆ ಇಸ್ಲಾಮ್ ಮಹಿಳೆಯ ಬದುಕುವ ಹಕ್ಕನ್ನು ಉಳಿಸಿಕೊಟ್ಟಿತು. ಹೆಣ್ಣು ಮಗುವನ್ನು ಕೊಲ್ಲುವ ಹೀನ ಕೃತ್ಯವನ್ನು ನಿಷೇಧಿಸಿತು.

6. ಎಲ್ಲಾ ಕಾಲಗಳಲ್ಲಿಯೂ ಮಹಿಳೆಯು ಶೋಷಣೆಗೊಳಗಾಗುವ ವಿಭಾಗವಾದುದರಿಂದ ಇಸ್ಲಾಮ್ ಆಕೆಗೆ ವಿಶೇಷ ಪರಿಗಣನೆಯನ್ನು ನೀಡಿತು.
ಪೈಗಂಬರರು ಹೇಳಿದರು: ‘ಒಬ್ಬರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅವರನ್ನು ಉತ್ತಮ ರೀತಿಯಲ್ಲಿ ಬೆಳೆಸಿದ ಕಾರಣಕ್ಕಾಗಿ ಆತ ಸ್ವರ್ಗದ ಹಕ್ಕುದಾರನಾಗುತ್ತಾನೆ.’ (ಬುಖಾರಿ)

‘ಮೂವರು ಹೆಣ್ಣುಮಕ್ಕಳು ಅಥವಾ ಸಹೋದರಿಯರ ಕಾರಣದಿಂದ ಕಷ್ಟವನ್ನು ಅನುಭವಿಸುವವನಿಗೆ ಸ್ವರ್ಗ ಲಭಿಸದಿರದು’ ( ತಹಾವಿ)

‘ನೀವು ನಿಮ್ಮ ಮಕ್ಕಳ ಮಧ್ಯೆ ದಾನದಲ್ಲಿ ಸಮಾನತೆಯನ್ನು ಪಾಲಿಸಿ, ನಾನು ಯಾರಿಗಾದರೂ ವಿಶೇಷತೆ ನೀಡುವವನಾಗಿದ್ದರೆ ಮಹಿಳೆಗೆ ಮೊದಲು ಪ್ರಾಶಸ್ಯ ನೀಡುತ್ತಿದ್ದೆ.’

ಹೀಗೆ ಪ್ರಕೃತಿ ಸಹಜವಾದ ಪ್ರತ್ಯೇಕತೆಗಳನ್ನು ಪರಿಗಣಿಸಿ, ಇಸ್ಲಾಮ್ ಸ್ತ್ರೀಯರಿಗೆ ಸ್ಥಾನಮಾನ, ಹಾಗೂ ಹಕ್ಕು-ಬಾಧ್ಯತೆಗಳನ್ನು ನೀಡಿದೆ. ಆದ್ದರಿಂದಲೇ ತಾಯಿಗೆ ಹೆಚ್ಚಿನ ಮಹತ್ವವನ್ನು ನೀಡಿ, ಆಕೆಯನ್ನು ಬಹಳವಾಗಿ ಗೌರವಿಸಿತು. ಮಾತೃತ್ವವೇ ಸ್ತ್ರೀಯ ಬಹುದೊಡ್ಡ ವಿಶೇಷತೆಯಾಗಿದೆ. ಅಮೇರಿಕಾದ ಮನಶಾಸ್ತ್ರಜ್ಞರಾದ ತಿಯೋಡರ್ ರೈಕ್ ‘ಸ್ತ್ರೀ-ಪುರುಷರಲ್ಲಿರುವ ವೈವಿಧ್ಯತೆಗಳು’ ಎಂಬ ಗ್ರಂಥದಲ್ಲಿ ಮಾತೃತ್ವದ ಕುರಿತ ಹೆಮ್ಮೆ ಪಡುವ ಸ್ತ್ರೀಯ ಮಾತುಗಳನ್ನು ಹೀಗೆ ಉಲ್ಲೇಖಿಸಿದ್ದಾರೆ: ‘ಜೀವನದ ಎಲ್ಲಾ ರಂಗಗಳಲ್ಲೂ ಪುರುಷರ ವಿಶೇಷತೆಯನ್ನು ನಾವು ಸಂಕೋಚವಿಲ್ಲದೆ ಒಪ್ಪಿಕೊಳ್ಳುತ್ತೇವೆ. ಆದರೆ, ಸ್ತ್ರೀಯರಾದ ನಾವು ಅದಕ್ಕಿಂತಲೂ ಎಷ್ಟೋ ಮಹತ್ವವಿರುವ ಒಂದರಿಂದ ಅನುಗ್ರಹೀತರಾಗಿದ್ದೇವೆ. ನಾವಿಲ್ಲದಿದ್ದರೆ ಮಾನವರಾಶಿಯ ಬೇರು ಕಿತ್ತೆಸೆಯಲ್ಪಡುವುದು. ಮಕ್ಕಳಿಗೆ ಜನ್ಮ ನೀಡುವವರು ನಾವು, ಈ ಮೂಲಕ ಭಾವಿ ತಲೆಮಾರುಗಳ ಉದಯಕ್ಕೆ ಕಾರಣಕರ್ತರಾಗಿದ್ದೇವೆ.’

ಆದರೆ ಇಂದಿನ ಸ್ತ್ರೀಯರು ಮಾತೃತ್ವದ ಮಹತ್ವದ ಬಗ್ಗೆ ಆಜ್ಞರಾಗಿದ್ದಾರೆ. ತಾನು ಇಷ್ಟು ಮಕ್ಕಳಿಗೆ ಗರ್ಭಧರಿಸಿ, ಹೆತ್ತು ಸಾಕಿ ಸಲಹಿದೆಯೆಂದು ಅಭಿಮಾನದಿಂದ ಹೇಳುವವರ ಸಂಖ್ಯೆ ವಿರಳವಾಗಿದೆ. ಏಕೆಂದರೆ ಇಂದು ಮಾನವನ ಬೆಲೆ ಕುಗ್ಗಿದೆ. ಮನುಷ್ಯನ ಬೆಲೆ ಕುಸಿದಿರುವಾಗ, ಆತನಿಗೆ ಜನ್ಮ ನೀಡುವುದು ಹೋಟೆಲ್‌ನ ಸ್ವಾಗತಕಾರಿಣಿಯ ಕೆಲಸಕ್ಕಿಂತಲೂ ಕಡಿಮೆಯೆಂದು ಭಾಸವಾಯಿತು. ಆದ್ದರಿಂದ ಇಂದು ಗರ್ಭಧರಿಸಲು, ಜನ್ಮ ನೀಡಲು ಮಹಿಳೆಯರು ಉದಾಸೀನತೆ ತೋರುತ್ತಿದ್ದಾರೆ. ಅಥವಾ ಒಂದೋ ಎರಡೋ ಮಕ್ಕಳನ್ನು ಹೆತ್ತರೂ ಅದರ ಪಾಲನೆ-ಪೋಷಣೆ ಭಾರವನ್ನು ವಹಿಸಿಕೊಳ್ಳಲು ಸಿದ್ಧರಿಲ್ಲ. ಆ ಪುಟ್ಟ ಮಕ್ಕಳನ್ನು ಆಯಾಗಳ ಕೈಗೊಪ್ಪಿಸಲಾಗುತ್ತದೆ. ಆಯಾಗಳು ತಮಗೆ ತಿಂಗಳಿಗೆ ಬರುವ ಸಂಬಳದ ನಿರೀಕ್ಷೆಯಲ್ಲಿ ಮಕ್ಕಳ ಲಾಲನೆ-ಪಾಲನೆ ಮಾಡುತ್ತಾರೆ. ಅಲೀಜಾ ಅಲೀ ಇಜ್ಜತ್ ಬೆಗೋವಿಚ್‌ ಹೇಳಿದಂತೆ ‘ಹೆತ್ತವರಿಗೆ ಮಕ್ಕಳು ವ್ಯಕ್ತಿತ್ವವಿರುವ ಒಂದು ಅಸ್ತಿತ್ವವಾಗಿದ್ದಾರೆ. ಆದರೆ ಆಯಾಗಳಿಗೆ ವಸ್ತುಗಳಲ್ಲಿ ಒಂದು ವಸ್ತು ಮಾತ್ರ. ಆದ್ದರಿಂದ ಆಯಾಗಳು ಅವರನ್ನು ಯಂತ್ರಗಳ ಚಕ್ರಗಳನ್ನು ತಿರುಗಿಸುವ ರೀತಿಯಲ್ಲಿ ಆಟವಾಡಿಸುತ್ತಾರೆ. ಮತ್ತು ಯಂತ್ರಗಳನ್ನು ಒರೆಸಿ ಸ್ವಚ್ಛಗೊಳಿಸುವಂತೆ ಅತ್ಯಂತ ನಿರ್ವಿಕಾರ ಭಾವದಿಂದಲೇ ಸ್ನಾನ ಮಾಡಿಸುತ್ತಾರೆ.’

ಮಾತೃತ್ವಕ್ಕೆ ತೋರಿದ ನಿರ್ಲಕ್ಷ್ಯದ ಅನಿವಾರ್ಯ ದುರಂತ ಫಲವನ್ನು ಲೋಕವಿಂದು ಅನುಭವಿಸುತ್ತಿದೆ. ಸೋವಿಯತ್ ರಷ್ಯಾದ ಆಡಳಿತಾಧಿಕಾರಿಯಾಗಿದ್ದ ಮಿಖಾಯಿಲ್ ಗೋರ್ಬಚೇವ್ ತನ್ನ ವಿಶ್ವಪ್ರಸಿದ್ಧ ಪೆರಿಸ್ತ್ರೋಯಿಕದಲ್ಲಿ ಬರೆಯುತ್ತಾರೆ: ‘ನಮ್ಮ ದುಃಖದಾಯಕವೂ, ವೀರೋಚಿತವೂ ಆದ ಚರಿತ್ರೆಯ ವರ್ಷಗಳಲ್ಲಿ ನಾವು ಮಹಿಳೆಯರಿಗೆ ತಾಯಿ, ಗೃಹ ನಾಯಕಿ, ಸ್ವಂತ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಜವಾಬ್ದಾರಿ ಹಾಗೂ ಮಹಿಳೆಯರಿಗಿರುವ ವಿಶೇಷ ಹಕ್ಕುಗಳಿಗೂ ಗಮನ ನೀಡದೆ ಪರಾಜಯಗೊಂಡವು. ವೈಜ್ಞಾನಿಕ ಸಂಶೋಧನೆ, ನಿರ್ಮಾಣ ಸ್ಥಳ, ಉತ್ಪಾದನಾ ರಂಗ ಹಾಗೂ ಸಾರ್ವಜನಿಕ ಸೇವಾರಂಗಗಳಲ್ಲಿ ದುಡಿಯಬೇಕಾಗಿ ಬಂದದ್ದರಿಂದ, ಮಹಿಳೆಯರಿಗೆ ಮನೆಯಲ್ಲಿ ತಮ್ಮ ದೈನಂದಿನ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ. ಮನೆಗೆಲಸ, ಮಕ್ಕಳ ಪಾಲನೆ ಪೋಷಣೆ, ಉತ್ತಮ ಕೌಟುಂಬಿಕ ವಾತಾವರಣ ಸೃಷ್ಟಿಸಲು ಸಮಯ ಸಾಲದಾಯಿತು. ದೇಶದಲ್ಲಿರುವ ಹಲವು ಸಮಸ್ಯೆಗಳಿಗೆ, ಮಕ್ಕಳ ಹಾಗೂ ಯುವ ಜನಾಂಗದ ನೈತಿಕ ಮೌಲ್ಯಗಳ, ಸಂಸ್ಕಾರಗಳ ಅಧಃಪತನಕ್ಕೆ ಮುಖ್ಯವಾಗಿ ದುರ್ಬಲವಾಗುತ್ತಿರುವ ಕುಟುಂಬ ಸಂಬಂಧಗಳು, ಕೌಟುಂಬಿಕ ಹೊಣೆಗಾರಿಕೆಯ ಕುರಿತು ನಿರ್ಲಕ್ಷ್ಯವೇ ಕಾರಣವೆಂದು ತಿಳಿದು ಬಂದಿದೆ. ಎಲ್ಲಾ ರಂಗಗಳಲ್ಲೂ ಸ್ತ್ರೀಯನ್ನು ಪುರುಷರೊಂದಿಗೆ ಸಮಾನವಾಗಿಸಬೇಕೆಂಬ ನಮ್ಮ ಮಾನಸಿಕ ಹಾಗೂ ರಾಜಕೀಯ ಸಮರ್ಥನೆಯ ಆಗ್ರಹದ ಫಲವಾಗಿ ಈ ವಿರೋಧಾಭಾಸ ಗೋಚರಿಸಿದೆ. ಈಗ ಪೆರಿಸ್ತ್ರೋಯಿಕಾದ ಪ್ರಕ್ರಿಯೆಯಲ್ಲಿ ಈ ದೌರ್ಬಲ್ಯವನ್ನು ಇಲ್ಲವಾಗಿಸಲು ಆರಂಭಿಸಿದ್ದೇವೆ. ಆದ್ದರಿಂದ ಮಹಿಳೆಯರಿಗೆ ಸ್ತ್ರೀಯೆಂಬ ನೆಲೆಯಲ್ಲಿ ತನ್ನ ಮಹತ್ವದ ಹೊಣೆಗಾರಿಕೆಯೆಡೆಗೆ ಮರಳಲು ಹೇಗೆ ಸಾಧ್ಯವಾಗಬಹುದೆಂಬ ಕುರಿತು, ಮಾಧ್ಯಮಗಳಲ್ಲೂ ಉದ್ಯೋಗ ಸ್ಥಳಗಳಲ್ಲೂ ಸಾರ್ವಜನಿಕ ವೇದಿಕೆಗಳಲ್ಲೂ ಮನೆಗಳಲ್ಲೂ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಸ್ತ್ರೀ ಸಹಜ ವೈಷಿಷ್ಟ್ಯತೆಗಳನ್ನು ಪರಿಗಣಿಸದ, ಮಾತೃತ್ವದ ಮಹತ್ವವನ್ನು ಅರ್ಥಮಾಡಿಕೊಳ್ಳದ, ಪ್ರಕೃತಿ ವಿರುದ್ಧವಾದ ಯಾವುದೇ ವ್ಯವಸ್ಥೆಯಲ್ಲೂ ಮಾನವನ ಬೆಲೆ ಕುಸಿದು, ಮಾನಸಿಕ ಸ್ವಾಸ್ಥ್ಯವೂ ನಷ್ಟವಾಗಿ, ಕುಟುಂಬ ವ್ಯವಸ್ಥೆ ಶಿಥಿಲವಾಗಿ, ಸಮಾಜದಿಂದ ಶಾಂತಿ ಸಮಾಧಾನ ಮಾಯವಾಗಿ, ವ್ಯಕ್ತಿಗಳು ಜನಸಮೂಹದಿಂದ ಒಂಟಿಯಾಗಿ, ಏಕಾಂತತೆಯ ವ್ಯಥೆಗೆ ವಿಧೇಯರಾಗಬೇಕಾದುದು ಅನಿವಾರ್ಯವಾಗಿದೆ. ಪ್ರಕೃತಿ ಸಹಜವಾದ ವಿಶೇಷತೆಗಳನ್ನು ಸಂಪೂರ್ಣವಾಗಿ ಪರಿಗಣಿಸುವ ಇಸ್ಲಾಮೀ ವ್ಯವಸ್ಥೆಯು ಇಂತಹ ಎಲ್ಲಾ ದೌರ್ಬಲ್ಯಗಳಿಂದ ಮುಕ್ತವಾಗಿದ್ದು ಯಾವುದೇ ಗೊಂದಲಗಳಿಗೆ ಆಸ್ಪದ ಕೊಡುವುದಿಲ್ಲ.

SHARE THIS POST VIA

About editor

Check Also

ಆತ್ಮಹತ್ಯೆ ಇಸ್ಲಾಮಿನ ದೃಷ್ಟಿಕೋನವೇನು?

ಪ್ರಶ್ನೆ: ಇಂದು ಹಲವಾರು ಆತ್ಮಹತ್ಯಾ ಪ್ರಕರಣಗಳು ನಡೆಯುತ್ತಿವೆ. ಈಗ ಮುಸ್ಲಿಮರೂ ಆ ಕೃತ್ಯವನ್ನೆಸಗುತ್ತಿದ್ದಾರೆ. ನಮ್ಮ ಊರಿನಲ್ಲಿ ಇತ್ತೀಚೆಗೆ ಮುಸ್ಲಿಮ್ ಮಹಿಳೆಯೋರ್ವರು …

Leave a Reply

Your email address will not be published. Required fields are marked *