Home / ಪ್ರಶ್ನೋತ್ತರ / ಜಗತ್ತಿನಾದ್ಯಂತವಿರುವ ಮುಸ್ಲಿಮರು ಭಯೋತ್ಪಾದಕರು ಮತ್ತು ತೀವ್ರವಾದಿಗಳಾಗಲು ಇಸ್ಲಾಮ್ ಕಾರಣವಲ್ಲವೇ?

ಜಗತ್ತಿನಾದ್ಯಂತವಿರುವ ಮುಸ್ಲಿಮರು ಭಯೋತ್ಪಾದಕರು ಮತ್ತು ತೀವ್ರವಾದಿಗಳಾಗಲು ಇಸ್ಲಾಮ್ ಕಾರಣವಲ್ಲವೇ?

ಪ್ರಶ್ನೆ: ಜಗತ್ತಿನಾದ್ಯಂತವಿರುವ ಮುಸ್ಲಿಮರು ಭಯೋತ್ಪಾದಕರು ಮತ್ತು ತೀವ್ರವಾದಿಗಳಾಗಲು ಇಸ್ಲಾಮ್ ಕಾರಣವಲ್ಲವೇ?

ಉತ್ತರ: ಇದು ಹೆಚ್ಚು ವಿವರಣೆಯನ್ನು ಬಯಸುವ ಪ್ರಶ್ನೆಯಾಗಿದೆ. 1492 ಮಾನವೇತಿಹಾಸದ ಅತಿ ದೊಡ್ಡ ದುರಂತದ ವರ್ಷವಾಗಿತ್ತು. ಸುದೀರ್ಘ ಶತಮಾನಗಳಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ, ಕಲೆ, ಸಾಹಿತ್ಯ, ಸಾಂಸ್ಕ್ರಂತಿಕ, ನಾಗರಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿಯೂ ಜಗತ್ತಿಗೆ ನಾಯಕತ್ವವನ್ನು ನೀಡುತ್ತಿದ್ದ ಮುಸ್ಲಿಮ್ ಸ್ಪೈನಿನ ಕೊನೆಯ ಆಡಳಿತಗಾರ ಅಬೂ ಅಬ್ದುಲ್ಲಾ ಆಗಿದ್ದರು. ಕೇವಲ ಗ್ರೆನಡಾ ನಗರವೊಂದೇ ಅವರ ಅಧೀನದಲ್ಲಿತ್ತು. ಆದರೆ 1492ರ ಜನವರಿಯಲ್ಲಿ ಅವರನ್ನು ಅಲ್ಲಿಂದ ಹೊರತಳ್ಳಿ ಸ್ಪೈನಿಯರು ಅಧಿಕಾರವನ್ನು ವಶಪಡಿಸಿಕೊಂಡಿದ್ದರು. ಸ್ಪೈನಿನ ಪತನ ಪೂರ್ಣಗೊಂಡ ಅದೇ ವರ್ಷ ಸಾಮ್ರಾಜ್ಯಶಾಹಿ ಶಕ್ತಿಗಳು ಅತಿಕ್ರಮಣವನ್ನು ಆರಂಬಿಸಿದರೆಂಬುದು ಗಮನಾರ್ಹವಾಗಿದೆ. ಕೊಲಂಬಸನು ತನ್ನ ಕಂಡು ಹಿಡಿಯುವ ಕಾರ್ಯವನ್ನು 1492ರಲ್ಲಿ ಪ್ರಾರಂಭಿಸಿದ್ದ. ಅದೇ ವರ್ಷ ಅಕ್ಟೋಬರ್ 12ಕ್ಕೆ ಆತ ಗಾನಹಾನಿ ದೀಪಕ್ಕೆ ತಲುಪಿದ.ಶಸ್ತ್ರಾಸ್ತ್ರಗಳೊಂದಿಗೆ ಹಡಗನ್ನು ಇಳಿದ ಕೊಲಂಬಸ್ ಮತ್ತು ಸಂಗಡಿಗರು ಅದಕ್ಕೂ ಮೊದಲು ಆ ನಾಡು ಸ್ಫಾನಿಶ್ ರಾಜನದ್ದಾಗಿರಬೇಕೆಂದು ಘೋಷಿಸಿದರು. ಅಲ್ಲಿನ ನಿವಾಸಿಗಳಿಗೆ ಅವರು ತಿಳಿದಿರದ ಭಾಷೆಯ ಆದೇಶವನ್ನು ಓದಿ ಹೇಳಿದರು. ಈ ಆದೇಶವನ್ನು ಅನುಸರಿಸದಿದ್ದರೆ ಅದರ ಪರಣಾಮವೇನಾಗಿರುತ್ತದೆಯೆಂದು ಕೊಲಂಬಸ್ ವಿವರಿಸಿದನು. “ನಾನು ಖಚಿತವಾಗಿ ಹೇಳುತ್ತೇನೆ. ದೇವನ ಸಹಾಯದಿಂದ ನಿಮ್ಮ ನಾಡಿಗೆ ಬಲವಂತದಿಂದ ಪ್ರವೇಶಿಸುವೆವು. ನಿಮ್ಮೊಂದಿಗೆ ಸಾಧ್ಯವಿದ್ದಂತೆ ಯುದ್ಧ ಮಾಡುತ್ತೇವೆ. ನಿಮ್ಮನ್ನು ಕ್ರೈಸ್ತ ಇಗರ್ಜಿಗೂ ರಾಜಂದಿರಿಗೂ ಹಂಚುತ್ತೇವೆ. ನಿಮ್ಮ ಮಕ್ಕಳು ಮತ್ತು ಪತ್ನಿಯರನ್ನು ಹಿಡಿದು ಗುಲಾಮರನ್ನಾಗಿ ಮಾಡುತ್ತೇವೆ. ನಿಮ್ಮ ವಸ್ತುಗಳನ್ನು ಕಿತ್ತುಕೊಳ್ಳುತ್ತೇವೆ. ನಮ್ಮಿಂದ ಸಾಧ್ಯವಿರುವ ಎಲ್ಲಾ ರೀತಿಯ ದ್ರೋಹವನ್ನು ವಿನಾಶವನ್ನು ಮಾಡುವೆವು” (ಪಾಶ್ಚಾತ್ಯೀಕರಣದ 500 ವರ್ಷಗಳು, ಐ.ಪಿ.ಎಚ್-ಪುಟ 17)

ಇದರೊಂದಿಗೆ ಯುರೋಪಿನ ಅತಿಕ್ರಮಣವು ಪ್ರಾರಂಭವಾಗಿತ್ತು. ಮುಸ್ಲಿಮ್ ಸ್ಫೈನ್ ಪತನಗೊಂಡ 6 ವರ್ಷದ ಬಳಿಕ 1498ರಲ್ಲಿ ವಾಸ್ಕೋಡಗಾಮ ಹಡಗಿನಲ್ಲಿ ಕಲ್ಲಿಕೋಟೆ ಎಂಬಲ್ಲಿ ಬಂದಿಳಿದನು. ಅಮೇರಿಕಾದಲ್ಲಿ 1492ರಲ್ಲಿ ಏಳೂವರೆಯಿಂದ ಹತ್ತು ಕೋಟಿಯವರೆಗೆ ಆದಿವಾಸಿಗಳು ವಾಸಿಸುತ್ತಿದ್ದರು. ಯುರೋಪಿನ ಅತಿಕ್ರಮಣದಿಂದಾಗಿ ಅವರಲ್ಲಿ ಶೇ 90 ರಷ್ಟು ಆದಿವಾಸಿಗಳನ್ನು ಒಂದೂವರೆ ಶತಮಾನದಲ್ಲಿ ಸ್ವಂತ ಮಣ್ಣಿಂದಲೇ ಯುರೋಪಿಯನ್ನರು ನಾಮಾವಶೇಷಗೊಳಿಸಿದರು. ಬರ್ಬರವಾದ ಸಾಮೂಹಿಕ ಕಗ್ಗೊಲೆಗಳಿಂದ ನಾಶಮಾಡಿದ ಬಳಿಕ 1776ರ ಸ್ವಾತಂತ್ರ್ಯ ಘೋಷಣೆಯೊಂದಿಗೆ ಯುರೋಪಿಯನ್ನರು ಅಮೇರಿಕವನ್ನು ವಶಪಡಿಸಿಬಿಟ್ಟಿದ್ದರು. ಸಂಪೂರ್ಣ ಅನ್ಯಾಯದ ಮತ್ತು ಅತಿಕ್ರಮಣದ ಆಧಾರದಲ್ಲಿದ್ದ ಈ ಸ್ವಾತಂತ್ರ್ಯ ಘೋಷಣೆಯ ಮೂಲಕ ಇಂದಿನ ಅಮೇರಿಕ ನೆಲೆನಿಂತಿದೆ.

1527ರಲ್ಲಿ ಪೋರ್ಚುಗೀಸರು ಬಹ್ರೈನನ್ನು ಅತಿಕ್ರಮಿಸಿ ವಶಪಡಿಸಿಕೊಂಡರು. ಆನಂತರ ಓಮನನ್ನು ಕೂಡಾ ಅಧೀನಗೊಳಿಸಿದರು. ಆದರೂ ಉಸ್ಮಾನಿಗಳು ಆ ನಾಡನ್ನು ಮರಳಿ ವಶಪಡಿಸಿಕೊಂಡರು. ಆನಂತರ ಕ್ರಿ.ಶ 1798-1801ರ ಅವಧಿಗೆ ನೆಪೋಲಿಯನ್ನನ ಫ್ರೆಂಚ್‍ಸೇನೆ ಈಜಿಪ್ಟ್ ನ ಅಲಕ್ಸಾಂಡ್ರಿಯಾ, ಅಕ್ಕಾ ನಗರಗಳನ್ನು ವಶಪಡಿಸಿಕೊಂಡಿತು. ಆ ಬಳಿಕ ಶತಮಾನಗಳ ಕಾಲ ಅರೇಬಿಯಾದ ಮುಸ್ಲಿಮ್ ನಾಡುಗಳು ಅತಿಕ್ರಮಿತ ಪಾಶ್ಚಾತ್ಯರ ನಾಡುಗಳಾಗಿದ್ದವು. ಫ್ರಾನ್ಸ್ ದೇಶವು 1830ರಲ್ಲಿ ಆಲ್ಜೀರಿಯಾವನ್ನೂ, 1881ರಲ್ಲಿ ಟುನೀಷ್ಯಾವನ್ನೂ 1859ರಲ್ಲಿ ಜಿಬೂಟಿಯನ್ನು, 1991ರಲ್ಲಿ ಮೌರಿತಾನಿಯಾವನ್ನೂ ಅಧೀನಗೊಳಿಸಿತು. ಇಟಲಿ 1859ರಲ್ಲಿ ಸೋಮಾಲಿಯಾವನ್ನೂ 1911ರಲ್ಲಿ ಲಿಬಿಯಾವನ್ನೂ, 1880ರಲ್ಲಿ ಎರಿತ್ರಿಯಾವನ್ನೂ ವಶಪಡಿಸಿತು. ಬ್ರಿಟನ್ 1800ರಲ್ಲಿ ಮಸ್ಕತ್, 1820ರಲ್ಲಿ ಓಮನ್‍ನ ಉಳಿದ ಭಾಗವನ್ನು, 1839ರಲ್ಲಿ ಏಡನನ್ನು, 1863ರಲ್ಲಿ ಬಹ್ರೈನನ್ನೂ 1878ರಲ್ಲಿ ಸೈಪ್ರಸ್ಸನ್ನೂ, 1882ರಲ್ಲಿ ಈಜಿಪ್ಟನ್ನೂ 1898ರಲ್ಲಿ ಸುಡಾನನ್ನೂ, 1899ರಲ್ಲಿ ಕುವೈಟನ್ನೂ ಅಧೀನಕ್ಕೊಳಪಡಿಸಿತು. 1916ರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ಜೊತೆಗೂಡಿ ಮಾಡಿಕೊಂಡ ಗುಪ್ತ ಸೆಕ್ಸಿಪಿಕೋಟ್ ಕರಾರು ಪ್ರಕಾರ ಉಸ್ಮಾನಿಯಾ ಖಿಲಾಫತ್‍ನ ಅದೀನದಲ್ಲಿದ್ದ ಅರಬ್ ಪಾಂತ್ಯಗಳನ್ನು ಬ್ರಿಟನ್ ಮತ್ತು ಫ್ರಾನ್ಸ್ ಹಂಚಿಕೊಡವು. ಈ ರೀತಿ ಇರಾಕ್ ಮತ್ತು ಜೋರ್ಡಾನ್, ಫೆಲೆಸ್ತೀನ್ ಮತ್ತು ಕತಾರ್, ಬ್ರಿಟನ್‍ಗೂ, ಸಿರಿಯಾ ಮತ್ತು ಲೆಬನಾನ್ ಫ್ರಾನ್ಸ್ ನ ಕಪಿ ಮುಷ್ಟಿಯ ಅಧೀನಗೊಂಡವು. ಮೊರೊಕ್ಕೋ ಸ್ಫೈನಿನ ಮತ್ತು ಇಂಡೋನೇಷಿಯಾ ಡಚ್ಚರ ಕಾಲನಿಗಳಾದವು. ಭಾರತ ಅಫಘಾನಿಸ್ತಾನಗಳೆಲ್ಲವೂ ಸಾಮ್ರಾಜ್ಯ ಶಕ್ತಿಗಳ ಕಪಿಮುಷ್ಟಿಗೊಳಗಿದ್ದಂತೆ.

ಕಳೆದ ಶತಮಾನ ಆದ್ಯ ಭಾಗವು ಕಳೆದು ಹೋಗುತ್ತಿದ್ದಂತೆ ಎಲ್ಲ ಪಾಶ್ಚಾತ್ಯ ಕಾಲನಿಗಳಲ್ಲಿ ಸ್ವಾತಂತ್ರ್ಯದ ಹೋರಾಟವು ಬಲವರ್ಧಿಸಿತು. ತತ್ಪರಿಣಾಮವಾಗಿ 1932ರಲ್ಲಿ ಇರಾಕ್ ಮತ್ತು 1946ರಲ್ಲಿ ಸಿರಿಯಾ, ಲೆಬನಾನ್‍ಗಳು, 51ರಲ್ಲಿ ಲಿಬಿಯಾ ಮತ್ತು ಓಮನ್, 52ರಲ್ಲಿ ಈಜಿಪ್ಟ್, 56ರಲ್ಲಿ ಮೊರೋಕ್ಕೋ ಸುಡಾನ್ ಮತ್ತು ಟುನೀಷ್ಯಾ, 58ರಲ್ಲಿ ಜೋರ್ಡಾನ್, 59ರಲ್ಲಿ ಮೊರಿಟಾನಿಯಾ, 60ರಲ್ಲಿ ಸೋಮಾಲಿಯಾ, 61ರಲ್ಲಿ ಕುವೈಟ್, 62ರಲ್ಲಿ ಆಲ್ಜೀರಿಯಾ, 68ರಲ್ಲಿ ಯಮನ್, 71ರಲ್ಲಿ ಕತಾರ್, ಬಹ್ರೈನ್ ಮತ್ತು ಅರಬ್ ಎಮಿರೇಟ್ಸ್ 77ರಲ್ಲಿ ಜಿಬೂಟಿಯೂ ಸ್ವಾತಂತ್ರ್ಯವನ್ನು ಗಳಿಸಿಕೊಂಡಿತು. ಆದರೂ ಈ ನಾಡುಗಳಿಂದ ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡುವ ನಿರಂಕುಶಾಧಿಪತಿಗಳು ಮತ್ತು ಸ್ವೇಚ್ಛಾಧಿಪತಿಗಳಾದ ರಾಜಂದಿರು ಮತ್ತು ಚಕ್ರವರ್ತಿಗಳನ್ನು ಅಧಿಕಾರಕ್ಕೇರಿಸಿದ ನಂತರವೇ ಆ ನಾಡನ್ನು ತೊರೆದು ಹೋದರು. ಜೊತೆಯಲ್ಲಿ ಈ ನಾಡುಗಳಲ್ಲಿ ಪರಿಹರಿಸಲಾಗದ ಗಡಿ ವಿವಾದಗಳನ್ನು ಹುಟ್ಟು ಹಾಕಿದ್ದರು. ಯಮನ್ ಮತ್ತು ಸೌದಿ ಅರೇಬಿಯಾಗಳ ನಡುವೆ, ಇರಾನ್ ಮತ್ತು ಇರಾಕ್‍ಗಳ ನಡುವೆ, ಇರಾಕ್ ಮತ್ತು ಕುವೈಟ್‍ಗಳ ನಡುವೆ, ಇರಾನ್ ಮತ್ತು ಯುಎಇಗಳ ನಡುವೆ ಪರಿಹಾರವಾಗದ ವಿವಾದಗಳು ಬಾಕಿಯಾಗಿರುವುದಕ್ಕೆ ಸಾಮ್ರಾಜ್ಯಶಾಹಿ ಶಕ್ತಿಗಳು ಮಾಡಿಟ್ಟ ಕುತಂತ್ರಗಳು ಕಾರಣವಾಗಿದೆ.

ಅರೇಬಿಯನ್ ಮುಸ್ಲಿಮರು ಒಗ್ಗೂಡದಂತೆ ಇದು ತಡೆಯನ್ನು ಸೃಷ್ಟಿಸುವುದರೊಂದಿಗೆ ಪರಸ್ಪರ ಪೈಪೋಟಿ ನಡೆಸಲು ಆಸ್ಪದವಾಗುತ್ತಿವೆ. ಅಮೇರಿಕ ಮತ್ತು ಇತರ ಬಂಡವಾಳಶಾಹಿ ದೇಶಗಳಿಗೆ ಆ ನಾಡಿನ ಪೆಟ್ರೋಲ್, ಅನಿಲ ಮತ್ತು ಇತರ ಅಸಂಸ್ಕರಿತ ವಸ್ತುಗಳನ್ನು ದೋಚಲು ಅವಕಾಶ ಲಭಿಸುತ್ತಿದೆ. ಸಾಮ್ರಾಜ್ಯಶಾಹಿ ಶಕ್ತಿಗಳು ಹುಟ್ಟು ಹಾಕಿದ ವಿವಾದದ ಆಧಾರದಲ್ಲಿ ಇರಾಕ್ ಮತ್ತು ಇರಾನ್‍ಗಳ ನಡುವೆ ಯುದ್ಧ ನಡೆದಿತ್ತಲ್ಲವೇ. ಇದು ಅಮೇರಿಕಕ್ಕೆ ಈ ವಲಯದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶವನ್ನು ಒದಗಿಸಿತು. ಅದು ಅವರ ಉದ್ದೇಶವಾಗಿತ್ತು ಅಷ್ಟೆ. ಅರೇಬಿಯನ್ ಮುಸ್ಲಿಮ್ ದೇಶಗಳು ಸ್ವಾತಂತ್ರ್ಯವನ್ನು ಗಳಿಸಿಕೊಂಡ ನಂತರವೂ ಅಲ್ಲಿ ಪಾಶ್ಚಾತ್ಯರ ಅದೃಶ್ಯ ಸಾಮ್ರಾಜ್ಯಶಾಹಿತ್ವ, ಶೋಷಣೆ ಮತ್ತು ನಿಯಂತ್ರಣಗಳು ಇಂದಿಗೂ ನೆಲೆನಿಂತಿವೆ. ಆ ದೇಶಗಳಿಗೆ ತಮ್ಮ ನಾಡಿನ ಸಂಪನ್ಮೂಲಗಳನ್ನೇ ತಮ್ಮಿಚ್ಛೆಯಂತೆ ಉಪಯೋಗಿಸಲು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲಿನ ಆಡಳಿತಗಾರರು ಅರಿತೋ ಅರಿಯದೆಯೋ ನಿರ್ಬಂಧಕ್ಕೊಳಗಾಗಿಯೂ ಒಳಗಾಗದೆಯೂ ಪಾಶ್ಚಾತ್ಯ ಹಿತಾಸಕ್ತಿಗಳನ್ನು ಸಂರಕ್ಷಿಸಿಕೊಂಡು ಬಂದರು. ಇರಾಕ್‍ನ ಮೇಲೆ ಹಸ್ತಕ್ಷೇಪಿಸಲು ಅವಕಾಶ ಸಿಗುತ್ತಿದ್ದಂತೆ ಅರಬ್ ರಾಷ್ಟ್ರಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸಿತಲ್ಲದೆ ತಮ್ಮ ಸೈನಿಕರನ್ನು ಸಾಕುವ ಹೊಣೆ ಮತ್ತು ಆರ್ಥಿಕ ಹೊಣೆಯನ್ನೂ ಅವುಗಳ ಮೇಲೆಯೇ ಹೊರಿಸಿತು. ಇಂದು ಎಲ್ಲ ಅರಬ್ ನಾಡುಗಳಲ್ಲಿ ಅಮೇರಿಕ ಶಸ್ತ್ರ್ರಾಸ್ತ್ರ ದಾಸ್ತಾನು ಮತ್ತು ಸೇನಾ ನೆಲೆಗಳನ್ನು ಹೊಂದಿದೆ. ಅದನ್ನು ಕೊನೆಗೊಳಿಸಬೇಕೆನ್ನುವುದೂ ಈ ಸಾಮ್ರಾಜ್ಯಶಾಹಿ ಶೋಷಣೆಯನ್ನು ನಿಲ್ಲಿಸಬೇಕೆನ್ನುವುದನ್ನು ಪಾಶ್ಚಾತ್ಯ ನಾಡುಗಳು ಕ್ರೂರ ಪಾತಕವೆಂದು ಪರಿಗಣಿಸುತ್ತದೆ.

ಕಳೆದ ಶತಮಾನದಲ್ಲಿ ಕೊನೆ ದಶಕದ ವರೆಗೂ ಜಗತ್ತಿನಲ್ಲಿ ಬಲ ಪ್ರಯೋಗದ ಸಮತೋಲನವು ನೆಲೆಯೂರಿತ್ತು. ಆದರೆ ಸಮಾಜವಾದದ ವಿಭಾಗವು ದುರ್ಬಲಗೊಂಡು ಇತಿಹಾಸಕ್ಕೆ ಸೇರವುದರೊಂದಿಗೆ ಶೀತಲ ಯುದ್ಧ ಕೊನೆಗೊಂಡಿತು. ಜಗತ್ತು ಅಮೇರಿಕದ ನೇತೃತ್ವದಲ್ಲಿ ಏಕ ಧ್ರುವವಾಗಿ ಪರಿವರ್ತನೆಗೊಂಡಿತು. ಗಲ್ಫ್ ಯುದ್ಧದಲ್ಲಿ ಅಮೇರಿಕ ಕೂಟವು ಗೆಲ್ಲುವುದರೊಂದಿಗೆ ಅದು ಜಾಗತಿಕ ಪೋಲಿಸ್‍ಗಿರಿಗಿಳಿಯಿತು. ತಮ್ಮ ಹಿತಾಸಕ್ತಿಗಳಿಗೆ ಎದುರು ನಿಲ್ಲುವವರನ್ನು ಉಗ್ರವಾದಿಗಳೆಂದೂ ಭಯೋತ್ಪಾದಕರೆಂದೂ ಮುದ್ರೆಯೊತ್ತಿತು. ಅವರ ಧ್ವಂಸಕ್ಕೆ ಹೊರಟಿತು. ಆಷ್ಚತ್‍ರ ಕೂಟ ಕಮ್ಯುನಿಸ್ಟರ ಪತನಾನಂತರ ಇಸ್ಲಾಮನ್ನು ತಮ್ಮ ಪ್ರಥಮ ಶತ್ರುವಾಗಿ ಪರಿಗಣಿಸಿತು. ಅಮೇರಿಕಾ ಮತ್ತು ಅದರ ನೇತೃತ್ವದಲ್ಲಿರುವ ನ್ಯಾಟೋ ಈ ವಿಷಯವನ್ನು ಶಂಕಾತೀತವಾಗಿ ತಿಳಿಸಿದೆ.

ಆದುದರಿಂದ ಜಗತ್ತಿನುದ್ದಕ್ಕೂ ಇರುವ ಇಸ್ಲಾಮೀ ನವೋತ್ಥಾನ ಮತ್ತು ಮುನ್ನಡೆಯನ್ನು ದಮನಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ಇಸ್ಲಾಮ್ ಮತ್ತು ಮುಸ್ಲಿಮರ ಮೇಲೆ ಧಾರ್ಮಿಕ ಮೂಲಭೂತವಾದ, ಧರ್ಮಭ್ರಾಂತಿ, ಭಯೋತ್ಪಾದನೆ, ಉಗ್ರವಾದ ಮುಂತಾದ ಪದಗಳನ್ನು ಅಡೆ ತಡೆಯಿಲ್ಲದೆ ನಿರಂತರ ಅವರು ಪ್ರಯೋಗಿಸುತ್ತಿದ್ದಾರೆ. 1993ರಲ್ಲಿ ಅಮೇರಿಕನ್ ಕಾಂಗ್ರೆಸ್ ಅಂಗೀಕರಿಸಿ ಬಿಡುಗಡೆ ಮಾಡಿ ಹೊರತಂದ ಕೇವಲ 93 ಪುಟಗಳ ‘ಹೊಸ ಜಾಗತಿಕ ಇಸ್ಲಾಮಿಸ್ಟ್ ಗಳು’ ಎಂಬ ಅಧಿಕೃತ ದಾಖಲೆಯಲ್ಲಿ 288 ಸಲ ಭಯೋತ್ಪಾದನೆ, ಭಯೋತ್ಪಾದಕರು ಎಂಬ ಪದಗಳನ್ನು ಪ್ರಯೋಗಿಸಿದ್ದಾರೆ. ಝಿಯೋನಿಸ್ಟ್ ಆಂದೋಲನದೊಂದಿಗೆ ಸಂಬಂಧವನ್ನು ಬೆಳೆಸುವ ಫಾನ್‍ಫೋರೆಯೆಂಟ್ಚ ಯಾಸುಫ್ ಝೋದಾನಿಸ್ಕಿ ಮುಂತಾದವರು ಪ್ರಸ್ತುತ ದಾಖಲೆಯನ್ನು ತಯಾರಿಸಿದ್ದಾರೆ.

ವಾಸ್ತವದಲ್ಲಿ ಜಗತ್ತಿನಲ್ಲಿ ಸಾಮೂಹಿಕ ಕಗ್ಗೊಲೆ ಮತ್ತು ಭಯೋತ್ಪಾದನೆಯನ್ನು ನಡೆಸುವವರು ಒಂದನೇ ಜಾಗತಿಕ ಯುದ್ಧದಲ್ಲಿ 80 ಲಕ್ಷ ಮತ್ತು ಎರಡನೇ ಜಾಗತಿಕ ಯುದ್ಧದಲ್ಲಿ 5 ಕೋಟಿ ಮತ್ತು ವಿಯೆಟ್ನಾಮ್ ಯುದ್ಧದಲ್ಲಿ ಮೂವತ್ತು ಲಕ್ಷ ಜನರು ಸತ್ತರು. ಪನಾಮ ಮತ್ತು ಗ್ವಾಟಮಾಲದಲ್ಲಿ ನಿಕರಾಗುವಾ, ಕೆಂಬೋಡಿಯಾ, ಕೊರಿಯಾ ಮತ್ತು ದಕ್ಷಿಣಾಫ್ರಿಕದಲ್ಲಿ ಲಕ್ಷಾಂತರ ಜನರ ಕಗ್ಗೊಲೆ ನಡೆಯಿತು. ಇವುಗಳಲ್ಲಿ ಇಸ್ಲಾಮಿನದ್ದಾಗಲಿ ಮುಸ್ಲಿಮರದ್ದಾಗಲಿ ಯಾವುದೇ ಪಾತ್ರವಿರಲಿಲ್ಲ. ಜಪಾನ್ ಯುದ್ಧದಿಂದ ಹಿಂದೆ ಸರಿಯಲು ಸಿದ್ಧವಾಗಿದ್ದರೂ ಹಿರೋಷಿಮ ನಾಗಸಾಕಿಗಳಲ್ಲಿ ಅಣುಬಾಂಬ್ ಹಾಕಿರುವುದು ಕ್ರೂರ ಭಯೋತ್ಪಾದಕನಾದ ಅಮೇರಿಕಾವೇ ಆಗಿದೆ. ಆ ಹೆಸರಿಗೆ ಅದು ಇಂದು ಕೂಡಾ ಅರ್ಹವಾಗಿಯೇ ಇದೆ. ತಮ್ಮ ಹಿತಾಸಕ್ತಿಗಳನ್ನು ಸ್ವೀಕರಿಸದಿರುವ ಎಲ್ಲ ದೇಶಗಳನ್ನು ಮತ್ತು ಸಮುದಾಯಗಳನ್ನು ಅದು ವಿರೋಧಿಸುತ್ತಿದೆ. ತನ್ನ ನಿಯಂತ್ರಣಕ್ಕೆ ಬಾರದ ಎಲ್ಲ ನಾಡುಗಳಲ್ಲಿ ಅದು ಭಯೋತ್ಪಾದನೆಯ ಕೃತ್ಯವನ್ನು ಮಾಡಿಸುತ್ತಿದೆ. ಅದಕ್ಕೆಂದೇ ಗುಪ್ತ ದಳವಾದ ಸಿಐಎ ಮತ್ತು ಭಯೋತ್ಪಾದನೆಯ ಚಟುವಟಿಕೆಯಲ್ಲಿ ನಿರತವಾದ ಝಿಯೋನಿಸ್ಟರನ್ನು ಅದು ಬಳಸಿಕೊಳ್ಳುತ್ತಿದೆ. ಆಂತರಿಕ ಸಮಸ್ಯೆಗಳನ್ನು ದೂರವಿರಿಸುವುದಕ್ಕೂ ಅದು ಜಗತ್ತಿನಲ್ಲಿ ಯುದ್ಧಗಳನ್ನು ಮಾಡಿಸುತ್ತಿದೆ. ಅಮೇರಿಕಾದ ರಾಜಕೀಯ ವೃತ್ತಗಳಲ್ಲಿ ನೆರೆದು ನಿಂತ ಮಿಸ್ಟರ್ ರೋಸ್ಪೊರರ್ ಹೇಳುತ್ತಾರೆ- ಆಂತರಿಕ ಪರಿಸ್ಥಿತಿ ಕೆಟ್ಟು ಹೋದಾಗ ಗಮನವನ್ನು ಬೇರೆಡೆಗೆ ಸೆಳೆಯಲು ನಾವು ಜಗತ್ತಿನಲ್ಲಿ ಸಣ್ಣ ಯುದ್ಧಗಳನ್ನು ಮಾಡಿಸುತ್ತೇವೆ. ಈ ರೀತಿ ಕಳೆದ ಒಂದು ಶತಮಾನದಲ್ಲಿ ಅಮೇರಿಕ ಜಗತ್ತಿನ 50ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಹಸ್ತಕ್ಷೇಪ ನಡೆಸಿ ಕ್ಷೋಭೆ ಮತ್ತು ಸಾಮೂಹಿಕ ಕಗ್ಗೊಲೆಗಳನ್ನು ಮಾಡಿಸಿದೆ. ಇಂತಹ ಒಂದು ಭಯೋತ್ಪಾದಕ ರಾಷ್ಟ್ರದ ಸುಳ್ಳು ಪ್ರಚಾರವು ಇಸ್ಲಾಮ್ ಮತ್ತು ಮುಸ್ಲಿಮರ ಕುರಿತು ತಪ್ಪು ಅಭಿಪ್ರಾಯಗಳು ಬೆಳೆಯುವುದಕ್ಕ್ಕೆಕಾರಣವಾಗಿದೆ.

ಎಲ್ಲ ವಿಧದ ಪ್ರಚಾರದ ಸರಕುಗಳನ್ನು ಹಸ್ತದಲ್ಲಿಟ್ಟು ಕೊಂಡಿರುವ ಅಮೇರಿಕದ ಕುಟಿಲ ತಂತ್ರಗಳು ಜಾಗತಿಕ ಜನ ಸಮುದಾಯವನ್ನು ತಪ್ಪು ದಾರಿಗೆಳೆಯುವುದರಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ವಾಸ್ತವದಲ್ಲಿ ಇಂದು ಅತಿ ಕ್ರೂರ ಭಯೋತ್ಪಾದಕ ಕೃತ್ಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೇ ನಡೆಸುತ್ತಿದೆ. ಯಾವುದಾದರೊಂದು ದೇಶದ ಪ್ರಯಾಣಿಕ ವಿಮಾನವನ್ನು ಅಪಹರಿಸಿ ಅದರಲ್ಲಿದ್ದ ಪ್ರಯಾಣಿಕರನ್ನು ಸೆರೆಯಾಳುಗಳನ್ನಾಗಿರಿಸಿದರೆ ಅಂತಹವರನ್ನು ನಾವು ಉಗ್ರವಾದಿಗಳು ಮತ್ತು ಭಯೋತ್ಪಾದಕರೆಂದು ಕರೆಯುವೆವು. ಅದು ಖಂಡಿತವಾಗಿಯೂ ಸರಿಯೇ ಆಗಿದೆ. ನಿರಪರಾಧಿಗಳಾದ ಪ್ರಯಾಣಿಕರನ್ನು ಶಾರೀರಿಕವಾಗಿಯೂ ಮಾನಸಿಕವಾಗಿಯೂ ಪೀಡಿಸುವುದು ಕ್ರೂರವೂ ಮಾನವ ವಿರೋಧಿಯೂ ಆಗಿದೆ. ಆದ್ದರಿಂದ ಅದು ಧರ್ಮ ವಿರೋಧಿಯೂ ಆಗಿದೆ. ಆದರೆ ಸದ್ದಾಮ್ ಹುಸೈನ್ ಎಂಬ ಓರ್ವ ಆಡಳಿತಗಾರನಲ್ಲಿದ್ದ ವೈರಕ್ಕಾಗಿ ಇರಾಕ್‍ನ ಒಂದೂ ಕಾಲು ಕೋಟಿ ಜನರನ್ನು ಕಳೆದ 11 ವರ್ಷಗಳಲ್ಲಿ ಆಹಾರ ಔಷಧಗಳನ್ನು ನೀಡದೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಬಂದಿಗಳಾಗಿಸಿರುವುದಲ್ಲದೆ, 6 ಲಕ್ಷ ಮಕ್ಕಳು ಸಹಿತ 11 ಲಕ್ಷ ಮಂದಿಯನ್ನು ಕೊಂದು ಹಾಕಿತು. ಈ ರೀತಿ ಜಗತ್ತಿನಲ್ಲಿ ಅತಿ ಕ್ರೂರಿ ಕೊಲೆಗಡುಕನಾಗಿ ಪರಿವರ್ತನೆಗೊಂಡ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈಗ ಶಾಂತಿಯ ಕಾವಲು ಭಟನೆಂದು ಕರೆಯಲ್ಪಡುತ್ತಿರುವುದು ಎಷ್ಟೊಂದು ವಿಚಿತ್ರವೂ ವಿರೋಧಭಾಸವೂ ಆಗಿದೆ. ಅಮೇರಿಕದಲ್ಲದ ಯಾವುದೇ ಮಾನದಂಡ ಇಂದು ಲೋಕದಲ್ಲಿಲ್ಲ ಎಂಬುದೇ ಅದಕ್ಕೆ ಕಾರಣವಾಗಿದೆ.

ಮುಸ್ಲಿಮರಲ್ಲಿ ಉಗ್ರವಾದಿಗಳೋ ಅಥವಾ ಭಯೋತ್ಪಾದಕರೋ ಇಲ್ಲವೆಂದು ಇದರ ಅರ್ಥವಲ್ಲ. ಇಸ್ಲಾಮನ್ನು ಕಳಂಕಿತಗೊಳಿಸುವ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಕೆಲವರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಸ್ಲಿಮ್ ದೇಶಗಳಲ್ಲಿ ಅಂತಹ ಕೃತ್ಯಗಳು ಕಾಣಿಸಿಕೊಳ್ಳಲು ಇಲ್ಲಿನ ಸ್ವೇಚ್ಛಾಧಿಪತಿ ಆಡಳಿತಗಾರರು ಮತ್ತು ಅವರ ದೌರ್ಜನ್ಯಗಳು ಕಾರಣವಾಗಿವೆ. ಪ್ರಜಾಪ್ರಭುತ್ವದ ಶಾಂತಿಯ ಮಾರ್ಗಗಳಿಂದ ಜನರ ಅಭಿಲಾಷೆಗಳಿಗೆ ಪ್ರಾತಿನಿಧ್ಯ ನೀಡುವ ಸರಕಾರಗಳನ್ನು ಸ್ಥಾಪಿಸಲು ಮತ್ತು ಕಳೆದ ಕೆಲವು ದಶಕಗಳಿಂದ ನಡೆಸುತ್ತಾ ಬರುವ ಪ್ರಯತ್ನಗಳು ಸಾಮ್ರಾಜ್ಯಶಾಹಿ ಶಕ್ತಿಗಳ ಹಸ್ತಕ್ಷೇಪದ ಕಾರಣದಿಂದ ಸೋಲನುಭವಿಸಿದ್ದು ಜಿಗುಪ್ಸೆ ತಾಳಿದ ಯುವಕರು ಉಗ್ರವಾದಿ ನಿಲುವನ್ನು ಸ್ವೀಕರಿಸುತ್ತಿದ್ದಾರೆ. ಮುಸ್ಲಿಮ್ ಅಲ್ಪಸಂಖ್ಯಾತರಾದ ಕೆಲವು ನಾಡಿನಲ್ಲಿ ಸರಕಾರಿ ಭಯೋತ್ಪಾದನೆಗೆ ಬೇಸತ್ತು ಯುವಕರನ್ನು ಅದೇ ಮಟ್ಟದ ಪ್ರತಿ ಹೊಡೆತಕ್ಕೆ ಪ್ರೇರೇಪಿಸುತ್ತಿದೆ. ಬೆರೆಳೆಣಿಕೆಯ ಇಂತಹ ಘಟನೆಗಳನ್ನು ದೊಡ್ಡದಾಗಿ ಮಾಡಿ ತೋರಿಸಿ ಇಸ್ಲಾಮ್‍ನ ವಿರುದ್ಧ ಭಯೋತ್ಪಾದನೆ ಮತ್ತು ಉಗ್ರವಾದವನ್ನು ಆರೋಪಿಸಲಾಗುತ್ತಿದೆ.

ಇಸ್ಲಾಮ್ ಎಲ್ಲ ರೀತಿಯ ಭಯೋತ್ಪಾದನೆಗಳನ್ನು ವಿರೋಧಿಸುತ್ತಿದೆ. ವ್ಯಕ್ತಿ, ಸಂಘಟನೆ, ಸರಕಾರ ಮತ್ತು ವಿಶ್ವಸಂಸ್ಥೆಯ ಭಯೋತ್ಪಾನೆಯನ್ನು ಕೂಡಾ ಅದು ಎದುರಿಸುತ್ತಿದೆ. ಭಯೋತ್ಪಾದನೆ ಮತ್ತು ಉಗ್ರವಾದವನ್ನು ಅದು ನಿರಾಕರಿಸುತ್ತಿದೆ. ಅಮಾಯಕರ ಮರಣ, ಸೊತ್ತು ವಿತ್ತ ನಾಶಗಳಿಗೆ ಅವಕಾಶ ನೀಡುತ್ತಿರುವ ಭಯೋತ್ಪಾದನಾ ಚಟುವಟಿಕೆಗಳು ಧರ್ಮ ವಿರೋಧಿಯಾಗಿದೆ. ಆ ಕಾರಣವಾಗಿ ಓರ್ವನನ್ನು ವಧಿಸುವುದು ಸಕಲ ಮಾನವರನ್ನು ವಧಿಸುವುದಕ್ಕೆ ಸಮ. ಓರ್ವರಿಗೆ ಜೀವನ ನೀಡುವುದು ಸಕಲ ಮಾನವರಿಗೆ ಜೀವನ ನೀಡುವುದಕ್ಕೆ ಸಮ ಎಂದು ಪವಿತ್ರ ಕುರ್‍ಆನ್ ಅಸಂದಿಗ್ಧವಾಗಿ ಘೋಷಿಸಿದೆ. (5.32)

ಆದುದರಿಂದ ವಿಶ್ವಾಸಿಗಳು ಉಗ್ರವಾದಿಗಳಾಗುವುದು, ಭಯೋತ್ಪಾದನಾ ಚಟುವಟಿಕೆ ನಡೆಸುವುದು ಎಂದೂ ಸಾಧ್ಯವಿಲ್ಲ. ಜಗತ್ತಿನಾದ್ಯಂತ ಮುಸ್ಲಿಮರು ಭಯೋತ್ಪಾದನೆ ನಡೆಸುವವರು ಎಂಬುದು ಅಮೇರಿಕಾ ಮತ್ತು ಸಂಗಡಿಗರ ಅಪಪ್ರಚಾರವಾಗಿದೆ.( ಹೆಚ್ಚಿನ ವಿವರಗಳಿಗೆ ಶಾಂತಿ ಪ್ರಕಾಶನದ ಭಯೋತ್ಪಾದನೆ ಮತ್ತು ಇಸ್ಲಾಮ್ ಹಾಗೂ ಜಿಹಾದ್ ಮತ್ತು ಭಯೋತ್ಪಾದನೆ ಎಂಬ ಕೃತಿಗಳ ಅಧ್ಯಯನವನ್ನು ನಡೆಸಿರಿ)

SHARE THIS POST VIA

About admin

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *